ನನ್ನ ನೆಚ್ಚಿನ ಕವಿ ಬಿ.ಆರ್.ಲಕ್ಷ್ಮಣ ರಾವ್ ಅವರ ಸಮಗ್ರ ಕವನ ಸಂಕಲನ "ಕ್ಯಾಮರಾ ಕಣ್ಣು"ಓದುತ್ತಿದೇನೆ.
ಒಂದೊಂದು ಕವನವೂ ಅದ್ಭುತ.ಅವರ ಕೆಲವು ಕವನಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳ ಬೇಕೆನಿಸುತ್ತಿದೆ.
ಇಲ್ಲಿದೆ ಅವರ ಒಂದು ಕವನ "ಕಿವಿ ಮಾತು":
ಮೊದಲೇ ಚೆಲುವೆ,ಜೊತೆಗೆ ಯೌವನ ,
ನೆಲ ಕಾಣುವುದಿಲ್ಲ,ನಿಜ.
ಈ ಒನಪು ವೈಯಾರ ,ಬಿಂಕ ಬಿಗುಮಾನ ,
ಇವೂ ನಿನಗೆ ಸಹಜ.
ನಿನ್ನ ಹೆತ್ತವರ ನೋಡಿ ಉತ್ತರಿಸು :
ನಿನ್ನ ಚೆಲುವು ಸ್ವಂತವೇ?
ಇನ್ನು ನಿನ್ನ ಈ ಏರು ಯೌವನ ,
ಇದಾದರೂ ಅನಂತವೇ?
ಬೇರಿನಿಂದ ಪ್ರತಿ ರೆಂಬೆಯ ತುದಿಗೂ
ಕಾಣದ ಅಂತಃ ಸೂತ್ರ;
ಹೊರಗೆ ಮೆರೆಯುವುದು ಗಮ್ಮನೆ ಅರಳಿದ
ಬಣ್ಣದ ಹೂಗಳು ಮಾತ್ರ .
ಸಂಜೆಗೆ ಮರದಡಿ ಉದುರಿ ಬಿದ್ದಿವೆ
ರಾಶಿ ರಾಶಿ ಹೂ ಹೆಣ ;
ದುಂಬಿ ಚಿಟ್ಟೆಗಳ ಪಾಳಿ ಮುಗಿದಿದೆ ,
ಇನ್ನು ಕೇವಲ ಇರುವೆ ,ನೊಣ.
ನಿನ್ನ ಸ್ವಯಾರ್ಜಿತ ವೆಂದರೆ ಇಷ್ಟೇ:
ಹಾರ್ದಿಕ ಪ್ರೀತಿ,ವಿನಯ.
ಚೆಲುವೆ ,ಒಮ್ಮೆ ನಿನ್ನೊಳಗೆ ನೋಡಿಕೋ ,
ಅವು ನಿನ್ನಲಿ ಇವೆಯ?