Friday, April 20, 2012

"ಸಾಮಾನ್ಯರಲ್ಲೊಬ್ಬ ಅಸಾಮಾನ್ಯ !!!"

ಸುಮಾರು ಎಂಟು  ತಿಂಗಳಿಂದ ಅವನನ್ನು ನೋಡುತ್ತಿದ್ದೆ .ವಯಸ್ಸು ಸುಮಾರು ನಲವತ್ತರ ಆಸುಪಾಸು ಇರಬಹುದು.ಪ್ರತಿದಿನವೂ  ಸಂಜೆ ವಾಕಿಂಗ್ ಹೋಗುವಾಗ  ರಸ್ತೆಯಲ್ಲಿ ಸಿಗುತ್ತಿದ್ದ.ಒಂದು ದಿನವೂ ತಪ್ಪಿಸುತ್ತಿರಲಿಲ್ಲ.ಛಳಿಯಿರಲಿ ,ಮಳೆ ಇರಲಿ ,ಬೇಸಿಗೆ ಇರಲಿ ಅವನು ರಸ್ತೆಯಲ್ಲಿ ಕಾಣಿಸುತ್ತಿದ್ದ.ಕೆಲವೊಮ್ಮೆ ಬೆಳಗಿನ ಜಾವ ನಾನು ಕಾರಿನಲ್ಲಿ ಹೋಗುವಾಗ ಅವನು ನಿಧಾನವಾಗಿ ನಡೆಯುತ್ತಾ ಹೋಗುವುದು ಕಾಣಿಸುತ್ತಿತ್ತು.ಅವನು ತನ್ನ ಎಡ ಕೈಯನ್ನು  ಬಲ ಕೈಯಿಂದ ಹಿಡಿದು ಕೊಂಡು ,ಎಡಗಾಲನ್ನು ಎಳೆಯುತ್ತಾ ನಿಧಾನವಾಗಿ  ಸಾಗುವುದನ್ನು ಕಂಡರೆ ಅವನ ದೇಹದ ಎಡ ಭಾಗ ಪಾರ್ಶ್ವ ವಾಯುವಿನಿಂದ ಪೀಡಿತವಾಗಿರುವುದು ಮೇಲ್ನೋಟಕ್ಕೇ ಕಾಣುತ್ತಿತ್ತು.ಅವನ ದೃಢ ನಿರ್ಧಾರ ,ಛಲ,ದೇಹವನ್ನು ಕಷ್ಟಪಟ್ಟು ಎಳೆದಾಡಿಕೊಂಡು ಸಾಗುವ ರೀತಿ ,ಮನ ಕಲಕುವಂತಿತ್ತು.ವಾಕಿಂಗ್ ಮಾಡಲು ಆಲಸ್ಯವಾದಾಗಲೆಲ್ಲಾ ಅವನನ್ನು ನೆನಸಿಕೊಂಡರೆ,ಆಲಸ್ಯವೆಲ್ಲಾ ಓಡಿ  ಹೋಗುತ್ತಿತ್ತು.ಸ್ಟ್ರೋಕ್ ಆಗಿರುವ ಅವನೇ ಒಂದು ದಿನವೂ ತಪ್ಪಿಸದಿರುವಾಗ ನನಗೇನು ಧಾಡಿ ಎಂದು ಕೊಂಡು ವಾಕಿಂಗ್ ಹೊರಡುತ್ತಿದ್ದೆ.
ಅವನು ಯಾರೋ ,ಏನೋ ,ಪರಿಚಯವಿರಲಿಲ್ಲ.ನೆನ್ನೆ ನಾನೂ ನನ್ನ ಜೊತೆ ವಾಕಿಂಗ್ ಬರುವ ಸ್ನೇಹಿತರೂ ಅವನನ್ನು ಮಾತನಾಡಿಸಿದಾಗ ಅವನ ವಿಷಯ ಕೇಳಿ ಮಾತೇ ಹೊರಡಲಿಲ್ಲ!!ಅವನೊಬ್ಬ ಗಾರೆ ಕೆಲಸ ಮಾಡುವ ಮೇಸನ್ ಆಗಿದ್ದ.ಸುಮಾರು ಒಂದು ವರ್ಷಗಳ ಕೆಳಗೆ ದೇಹದ ಎಡ ಭಾಗಕ್ಕೆ'ಸ್ಟ್ರೋಕ್'(ಪಾರ್ಶ್ವ ವಾಯು)ಆಗಿ ದೇಹದ ಎಡ ಭಾಗ ಸಂಪೂರ್ಣ ನಿಷ್ಕ್ರಿಯವಾಗಿತ್ತು.ಎರಡು ತಿಂಗಳು ಮನೆಯಲ್ಲಿ ಮಲಗಿದ್ದಲ್ಲೇ ಮಲಗಿದ್ದ.ನಂತರ ವೈದ್ಯರ ಸಲಹೆಯಂತೆ ಮನೆಯಲ್ಲಿಯೇ ಕಷ್ಟಪಟ್ಟು ನಡೆಯಲು ಶುರು ಮಾಡಿದ.ಈಗ ದಿನಾ ಬೆಳಿಗ್ಗೆ ನಾಲಕ್ಕು ಗಂಟೆಗೆ ಮನೆ ಬಿಡುತ್ತಾನೆ.ಸುಮಾರು ಆರು ಕಿ.ಮಿ.ನಡೆಯುತ್ತಾನೆ!ಸಂಜೆ ಸುಮಾರು ಎರಡರಿಂದ ಮೂರು ಕಿ.ಮಿ.ನಡೆಯುತ್ತಾನೆ!ಸಾಕಷ್ಟು ಸುಧಾರಿಸಿದ್ದೇನೆ ಎನ್ನುತ್ತಾನೆ.ಇನ್ನಾರು ತಿಂಗಳಿಗೆ ಸಂಪೂರ್ಣ ಗುಣವಾಗಿ ಕೆಲಸಕ್ಕೆ ಹಿಂದಿರುಗುವ ಭರವಸೆ ಅವನಿಗಿದೆ.ಹಠಾತ್ತಾಗಿ ಎರಗಿ ಬಂದ ದೌರ್ಭಾಗ್ಯಕ್ಕೆ ಅಳುತ್ತಾ,ಕೊರಗುತ್ತಾ ಕೂರದೇ,ಛಲದಿಂದ ಹೋರಾಡುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕೇ?ಇಂತಹ ಸಾಮಾನ್ಯರಿಂದಲೂ ನಾವು ಕಲಿಯ ಬೇಕಾದ ಅಸಾಮಾನ್ಯ ಗುಣಗಳು ಸಾಕಷ್ಟಿವೆ ಎನಿಸುವುದಿಲ್ಲವೇ? ನಿಮ್ಮ ಅನಿಸಿಕೆ ತಿಳಿಸಿ

11 comments:

 1. ಇದಕ್ಕೇನನ್ನುವುದು .. ಕಲಿಯಲೇಬೇಕಾದ ಗುಣಗಳು ಹೆಚ್ಚಾಗಿ ನೋಡುವಲ್ಲಿ ಖುಷಿ ಕೊಡುತ್ತದೆ. ನಮ್ಮದೇ ಲೋಕದಲ್ಲಿ ನಾವು.
  ಚಿಕಿತ್ಸಕ ಲೇಖನ/ಕಥನಕ್ಕೆ ಧನ್ಯವಾದಗಳು ಸರ್ ..

  ReplyDelete
 2. ಆತನ ಧೀ ಶಕ್ತಿಗೆ ಸಲಾಂ. ಕೊರಗುತ್ತಾ ಕೂರುವ ಜಾಯಮಾನದವರಿಗೆಲ್ಲ ಪ್ರೇರಣೆಯಾಗುವ ಆತನ ನಿರಂತರತೆಯು ಶ್ಲಾಂಘನೀಯ.

  ReplyDelete
 3. ಚೆನ್ನಾಗಿದೆ ಲೇಖನ. ಸಮಾಜ ಚಿಕಿತ್ಸಕ ಲೇಖನ. ಆದರೂ ಸಮಾಜ ಉದ್ಧಾರವಾಗುವ ಲಕ್ಷಣ ಕಡಿಮೆ. ಮೇಲೇಳುವವರ ತುಳಿವವರು, ಸಮಾಜದ ಕೊಳಕಿನ ಬಗ್ಗೆ ಬರೆಯುವವರು, ಮಾತಾಡುವವರು ತಮ್ಮೊಳಗಿನ ಕೊಳಕನ್ನು ತೊಳೆಯುವವರೆಗೆ ಈ ಸಮಾಜಕ್ಕೆ ಇಂತಹ ಸಂದೇಶದ ಲೇಖನ ನಗಣ್ಯವೆನಿಸುವುದು. ಪ್ಹೆಸ್ಬುಕ್ಕಿನಲ್ಲಿ ಇಂತಹ ಜಗಜ್ಜಾಹಿರು ಅನುಭವಗಳು ನಮ್ಮ ತೆಕ್ಕೆಯಲ್ಲಿದೆ.

  ReplyDelete
 4. ಇನ್ನೊಬ್ಬರ ಹಂಗಿಲ್ಲದೆ ,ತಾನು ತನ್ನ ಕಾಲ ಮೇಲೆಯೇ ನಿಲ್ಲಬೇಕೆಂಬ ಹಠವಿರುವ ವ್ಯಕ್ತಿಗೆ ,ಬದುಕು ಕಷ್ಟವೆಂಬ ಎಷ್ಟೇ ಏಟು ಕೊಟ್ಟರೂ,ಇಂದಲ್ಲ ನಾಳೆ ಅವ ಸುಖವಾದ ಜೀವನವನ್ನು ಸಾಧಿಸಿಯೇ ಬಿಡುತ್ತಾನೆ .
  ನಮ್ಮ ಸಮಾಜದಲ್ಲೂ ಎಷ್ಟೋ ಅಂಗವಿಕಲ ಜನರು ತಮ್ಮಿಂದಾಗುವ ಕೆಲಸ ಮಾಡುತ್ತಾ ತನ್ನ ಕುಟುಂಬವನ್ನು ಸಾಕುತ್ತಿರುತ್ತಾರೆ ,ಇನ್ನೂ ಕೆಲವರು ಇದ್ದಾರೆ ,ನೋಡೋಕೆ ಗಟ್ಟಿ ಮುಟ್ಟಾದ ಜೀವಿಗಳು ,ತಮಗೆ ಮನೆಯಿಲ್ಲ ,ಅದಿಲ್ಲ ,ಇದಿಲ್ಲಾ ಎನ್ನುತಾ ಇನ್ನೊಬ್ಬರ ಬಳಿ ಕೈಚಾಚುತ್ತಿರುತ್ತಾರೆ .ಇಂತಹ ವ್ಯಕ್ತಿಗಳು ನೀವು ನೋಡಿರೋ ವ್ಯಕ್ತಿಗಳನ್ನು ನೋಡಿ ಪಾಠ ಕಲಿಯಬೇಕು

  ReplyDelete
 5. ಆರೋಗ್ಯದಲ್ಲಿ ಸಣ್ಣ ಪುಟ್ಟ ವ್ಯತ್ಯಗಳಿಗೆ ಕೊರಗೊವ ನಮ್ಮಂತಹ ಜನ ಕಲಿಯಬೇಕಾದ ಛಲ ಮತ್ತು ದೃಢ ನಿರ್ಧಾರಗಳಿಗೆ ಕನ್ನಡಿಯಂತಿದೆ ನಿಮ್ಮ ಲೇಖನ. ಇಂತಹವರು ಅನ್ಯರಿಗೆ ಮಾದರಿಯಾಗುತ್ತಾರೆ ಎಂದರೆ ಬಹಳ ಹೆಮ್ಮೆ ಪಡುವ ವಿಷಯ. ನಿಮ್ಮ ಲೇಖನಕ್ಕೆ ಧನ್ಯವಾದಗಳು.

  ReplyDelete
 6. ಸ್ಪೂರ್ತಿದಾಯಕವಾದ ಲೇಖನಕ್ಕೆ ಧನ್ಯವಾದಗಳು ಸರ್.

  ReplyDelete
 7. ಅದ್ಭುತ ಮನೋಸ್ಥೈರ್ಯ ಹೋದಿದ್ದಾನೆ ಆತ... ಲೇಖನಕ್ಕೆ ಧನ್ಯವಾದಗಳು.

  ReplyDelete
 8. ಮನೋಸ್ಥೈರ್ಯವನ್ನು ತು೦ಬುವ೦ತಹ ಇ೦ತಹ ವೈದ್ಯಕೀಯ ಲೇಖನವನ್ನು ಪ್ರಸ್ತುತಿಸಿದ ಡಾ. ಅವರಿಗೆ ಅಭಿನ೦ದನೆಗಳು.

  ಅನ೦ತ್

  ReplyDelete
  Replies
  1. ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಅನಂತ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

   Delete
 9. ಕೊರಗುತ್ತಾ ಕೂರುವ ಜಾಯಮಾನದವರಿಗೆಲ್ಲ ಪ್ರೇರಣೆಯಾಗುವ ಆತನ ನಿರಂತರತೆಯು ಇಂತಹವರು ಅನ್ಯರಿಗೆ ಮಾದರಿಯಾಗುತ್ತಾರೆ

  ReplyDelete