Saturday, June 16, 2012

"ಮೂಗಿನಲ್ಲಿ ಕಾದಿತ್ತು ವಿಸ್ಮಯ !!!"

ಮಧ್ಯಾಹ್ನ ಸುಮಾರು ಮೂರು ಗಂಟೆಯ ಸಮಯ.ಊಟಕ್ಕೆ ಅವರೇ ಕಾಳಿನ ಸಾಂಬಾರ್ ಬೇರೆ ತಿಂದಿದ್ದರಿಂದ ಜೋರು ನಿದ್ರೆ.ಸ್ವತಹ ವೈದ್ಯರಾಗಿದ್ದ ಕನ್ನಡದ ಹಾಸ್ಯ ಸಾಹಿತಿ ರಾ.ಶಿ.(ಡಾ.ಶಿವರಾಂ ) ಹೇಳುತ್ತಿದ್ದ ಹಾಗೆ ಅದು ಡಾಕ್ಟರ್ ಗಳು ಮತ್ತು ದೆವ್ವಗಳು ಸ್ವಲ್ಪ ರೆಸ್ಟ್ ತೆಗೆದುಕೊಳ್ಳುವ ಸಮಯ !ಆದರೆ ಆ ಸಮಯದಲ್ಲೂ ನಮ್ಮನ್ನು ಪರೀಕ್ಷೆ ಮಾಡುವ ಸಲುವಾಗಿಯೇ,ಹಪ್ಪಳ ಮಾರುವವರು,ಉಪ್ಪಿನ ಕಾಯಿ ಮಾರುವವರು,ಬಿ.ಬಿ.ಎಮ್.ವಿದ್ಯಾರ್ಥಿಗಳೆಂದು ಹೇಳಿಕೊಂಡು ಬಂದು, ನಮಗೆ ಬೇಡದ ವಸ್ತು ಗಳನ್ನು ಮಾರಲೇ ಬೇಕೆಂದು ಬೇತಾಳಗಳ ಹಾಗೆ ಬೆನ್ನು ಬೀಳುವವರು ,ನಮ್ಮ ನಿದ್ರೆಯ ಶತ್ರುಗಳಂತೆ ಕಾಡುತ್ತಾರೆ!'ಕಿರ್ರೋ'ಎಂದು ಅರಚಿ ಕೊಳ್ಳುತ್ತಿದ್ದ ಡೋರ್-ಬೆಲ್ ನಿಂದ ನಿದ್ರಾ ಭಂಗ ವಾಗಿ ,ಹೋಗಿ ಬಾಗಿಲು ತೆಗೆದೆ.ಮೂಗು ಸೋರುತ್ತಿದ್ದ ನಾಲಕ್ಕು ವರುಷದ ಮಗನನ್ನು ಕರೆದು ಕೊಂಡು ಬಂದಿದ್ದ ವ್ಯಕ್ತಿಯೊಬ್ಬ "ನೀವು ಮೂಗಿನ ಡಾಕ್ಟರ್ರಾ ?"ಎಂದ.ನಿದ್ರೆ ಹಾಳಾಗಿದ್ದಕ್ಕೆ ಮೂಗಿನ ತನಕ ಬಂದ ಕೋಪವನ್ನು ತಡೆದುಕೊಂಡು ಹೌದೆಂದೆ.ಮಗನನ್ನು ಒಂದು ತಿಂಗಳಿಂದ ಮಕ್ಕಳ ಡಾಕ್ಟರ್ ಒಬ್ಬರ ಹತ್ತಿರ ತೋರಿಸುತ್ತಿರಿರುವುದಾಗಿಯೂ ,ಮೂಗಿನಿಂದ ಸಿಂಬಳ ಸೋರುವುದು ,ಕೆಟ್ಟ ವಾಸನೆ ಬರುವುದು ನಿಂತಿಲ್ಲವೆಂದೂ ,ಯಾರದೋ ಸಲಹೆಯ ಮೇರೆಗೆ ನನ್ನಲ್ಲಿಗೆ ಕರೆದು ಕೊಂಡು ಬಂದುದಾಗಿಯೂ ಹೇಳಿದ.ಸಂಜೆ ನಾಲಕ್ಕೂವರೆಗೆ ಆಸ್ಪತ್ರೆಗೆ ಬರುವಂತೆ ಹೇಳಿ ಕಳಿಸಿಕೊಟ್ಟೆ .ಸಂಜೆ ಆಸ್ಪತ್ರೆಯಲ್ಲಿ ಆ ಹುಡುಗನ ಪರೀಕ್ಷೆ ಮಾಡಿದೆ.ಮಾರು ದೂರಕ್ಕೇ, ಮೂಗಿನಿಂದ ಗಪ್ಪೆಂದು ಸಹಿಸಲು ಅಸಾಧ್ಯವಾದ ಕೆಟ್ಟ ವಾಸನೆ ಬರುತ್ತಿತ್ತು.ಮೂಗಿನಿದ ರಕ್ತ ಮಿಶ್ರಿತ ಸಿಂಬಳ ಸೋರುತ್ತಿತ್ತು.ನೋಡಿದ ತಕ್ಷಣ ಹುಡುಗ ಮೂಗಿನಲ್ಲಿ ಏನೋ ವಸ್ತುವೊಂದನ್ನು ಹಾಕಿ ಕೊಂಡಿರುವುದು ಖಾತ್ರಿಯಾಯಿತು.ಸೂಕ್ತ ಸಲಕರಣೆ ಗಳ ಸಹಾಯದಿಂದ ಬೆಳ್ಳಗಿನ ಮೂಳೆಯಂತೆ ಕಾಣುತ್ತಿದ್ದ ವಸ್ತುವೊಂದನ್ನು ಮೂಗಿನಿಂದ ಕಷ್ಟಪಟ್ಟು ಹೊರತೆಗೆದೆ.ಮೂಗಿನಿಂದ ಸಾಕಷ್ಟು ರಕ್ತ ಸ್ರಾವವಾಗುತ್ತಿತ್ತು.'ಮೂಗಿನ ಕಾರ್ಟಿಲೇಜ್ ಏನಾದರೂ ಕಿತ್ತು ಬಂತಾ ಸಾರ್ !?' ಅಂತ ಅಲ್ಲೇ ಇದ್ದ ಸಹ ವೈದ್ಯರೊಬ್ಬರು ಗಾಭರಿಗೊಂಡು ಉದ್ಗಾರ ತೆಗೆದರು .ಮೂಗಿನ ರಕ್ತಸ್ರಾವ ನಿಲ್ಲುವಂತೆ ಮೂಗನ್ನು ಗಾಜ್ ನಿಂದ ಪ್ಯಾಕ್ ಮಾಡಿದ ಮೇಲೆ,"ಇಲ್ಲಿ ನೋಡಿ ನೀವು ಹೇಳಿದ ಮೂಗಿನ ಕಾರ್ಟಿಲೇಜ್ "ಎಂದು ಮೂಳೆಯಂತೆ ಕಾಣುತ್ತಿದ್ದ ತುಂಡನ್ನು ಎರಡು ಹೋಳು ಮಾಡಿ ತೋರಿಸಿದೆ .ಅದು ಮೇಲಿನ ಸಿಪ್ಪೆ ಹೋದ ಹುಣಿಸೇ ಬೀಜ ವಾಗಿತ್ತು!ಅದನ್ನು ಎರಡು ಹೋಳು ಮಾಡಿದಾಗ ಸುಮಾರು ಒಂದು ಇಂಚಿನ ಮೊಳಕೆ ಒಡೆದು ಹೊರ ಬರುತ್ತಿತ್ತು.ಇನ್ನೂ ಸ್ವಲ್ಪ ದಿನ ಬಿಟ್ಟಿದ್ದರೆ ಮೂಗಿನಿಂದ ಹುಣಿಸೇ ಸಸಿ ಬೆಳೆಯುತ್ತಿತ್ತೋ ಏನೋ !!!

8 comments:

  1. :-) when i was a small kid accidently i swallowed a sapota seed and mom scared me saying now a chikkoo tree will grow out of ur mouth..Imagining myself with a tree hanging out of my mouth scared me so much that i spent quite a few sleepless nights..:-) Kids inserting foreign bodies into their nose is quite common..
    malathi S

    ReplyDelete
  2. ನಮಸ್ಕಾರ...


    ಮೂಗಿನಲ್ಲಿ ಏನಾದರೂ ಸಿಕ್ಕಿಸಿಕೊಲ್ಲುವ ಕೆಲಸ ಮಕ್ಕಳು ಯಾಕಾದರೂ ಮಾಡ್ತಾರೋ.. ಗೊತ್ತಿಲ್ಲ..

    ನಮ್ಮ್ ಪರಿಚಯದ ಮಗುವೊಂದು ಮಲ್ಲಿಗೆ ಮೊಗ್ಗನ್ನು ಮೂಗಿನಲ್ಲಿ ಹಾಕಿಕೊಂಡು ಬಿಟ್ಟಿತ್ತು...
    ಎಲ್ಲರಿಗೂ ಆತಂಕವಾಗಿಬಿಟ್ಟಿತ್ತು..

    ಯಾರೋ ಒಬ್ಬ ಮಹಾನ್ ಬುದ್ಧಿವಂತರು ಖಾರದ ಪುಡಿಯನ್ನು ಮೂಗಿಗೆ ಸೇರಿಸಿಬಿಟ್ಟಿದ್ದರೂ..

    ಅಂತೂ ಹೇಗೋ ಮಲ್ಲಿಗೆ ಮೊಗ್ಗು ಮೂಗಿನಿಂದ ಹೊರಗೆ ಬಂದಿತ್ತು..

    ಹಾಸ್ಯಮಯ ಪ್ರಸಂಗ ಇಷ್ಟವಾಯಿತು... ನಮಸ್ಕಾರ...

    ReplyDelete
  3. doctor saab, some what scary..indeed how our noses, ears are accustomed to welcome alien objects and not only that allowing them to prosper..!!

    ReplyDelete
  4. ಗುರುಗಳೇ,
    ಮಗುವೇನೋ ಮಕ್ಕಳಾಟದ ಸಹಜತೆಯಲ್ಲಿ ಹುಣಸೆ ಬೀಜವನ್ನು ಮೂಗಿಗೆ ಹಾಕಿಕೊಂಡಿತ್ತು. ಆದರೆ ಪಾಪ, ಆ ಪೋಷಕರಿಗೆಷ್ಟು ಹಿಂಸೆ ಆಗಿರಬಹುದು?

    ನಿಮ್ಮ ನಿದ್ರೆ ಭಂಗವಾದ್ರೂ ಪರವಾಗಿಲ್ಲ, ಮಗುವಿನ ಭಂಗ ದೂರ ಮಾಡಿದ್ರಲ್ಲ!
    ಧನ್ಯೋಸ್ಮಿ..........

    ReplyDelete
  5. ಅದು ಡಾಕ್ಟರ್ ಗಳು ಮತ್ತು ದೆವ್ವಗಳು ಸ್ವಲ್ಪ ರೆಸ್ಟ್ ತೆಗೆದುಕೊಳ್ಳುವ ಸಮಯ...:-)
    ಸೊಗಸಾದ ಪ್ರಸಂಗ...ಆದ್ರೆ ಅಷ್ಟೇ ತ್ರಾಸದಾಯಕ ಕೂಡ...ಮಗುವಿಗೆ ಹಾಗು ಪೋಷಕರಿಗೆ...ನಿರೂಪಣೆ ಶೈಲಿ ಸೊಗಸಾಗಿದೆ...

    ReplyDelete
  6. ಯಪ್ಪಾ ನನ್ನ ಬಾಲ್ಯ ಜ್ಞಾಪಕ್ಕೆ ಬಂತು.

    ನಾನೂ ಒಮ್ಮೆ ಮೂಗಿಗೆ ಪುಟ್ಟ ಬಾಲ್ ಬೇರಿಂಗಿನ ಕಬ್ಬಿಣದ ನುಣುಪಾದ ಬಾಲನ್ನು ತೂರಿಸಿಕೊಂಡು ಬಿಟ್ಟು ಪರಪಾಟಲು ಪಟ್ಟಿದೆ. ಅಂಚೆ ಮಾಸ್ತರ್ ಸುಬ್ಬರಾಯಪ್ಪ ಬಾಲು ತೂರಿಸಿಕೊಳ್ಳದ ಮೂಗಿಗೆ ತುಸು ನಶ್ಯ ವಾಸನೆ ತೋರಿಸಿ, ಅಕ್ಷೀ ಮಾಡಿಸಿ ಬಾಲ್ ತೆಗೆಸಿದ್ದರು. ಮಣ್ಣಲ್ಲಿ ಬಿದ್ದ ಬಾಲು ಎಲ್ಲು ಕಳೆಯಿತೋ? ಹುಡುಕಾಡಿ ಹುಡುಕಾಡಿ ತುಂಬಾ ರಚ್ಚೆ ಹಿಡಿದೆ ಅಂತ ನೆನಪು.

    ಶೀರ್ಷಿಕೆ ಪೊಗದಸ್ತಾಗಿದೆ, ಅಂತೆಯೇ ಬರಹವೂ...

    ReplyDelete
  7. ನಮ್ಮ ಪ್ರೀತಿಯ ಡಾಕ್ಟರ್ ಸಾಹೇಬರ ಕೊಳಲು ಬ್ಲಾಗಿನ ಈ ಅಮೋಘ ಲೇಖನ ಅವಧಿಯಲ್ಲಿ ಬೆಳಕು ಕಂಡಿದ್ದು ತುಂಬಾ ಖುಷಿ ತಂದಿತು.

    ReplyDelete

Note: Only a member of this blog may post a comment.