Wednesday, June 26, 2013

" ಹೀಗೊಂದು ಅದ್ಭುತ ಝೆನ್ ಕಥೆ !!!!"

ಹೀಗೊಂದು ಝೆನ್ ಕಥೆ.ಗುರು ಮತ್ತು ಶಿಷ್ಯರಿಬ್ಬರೂ ಒಂದು ಮುಂಜಾನೆ,ತುಂಬಿ ಹರಿಯುತ್ತಿದ್ದ ಹೊಳೆಯೊಂದನ್ನು ದಾಟಲು ಶುರು ಮಾಡಿದರು. ಸುಂದರ ಯುವತಿಯೊಬ್ಬಳು ಶಿಷ್ಯನನ್ನು,ಹೊಳೆಯನ್ನು ದಾಟಲು ತನಗೆ ಸಹಾಯ ಮಾಡುವಂತೆ ಕೋರಿದಳು. ಶಿಷ್ಯ  ತಾವು ಸನ್ಯಾಸಿಗಳು ಹೆಂಗಸರನ್ನು ಮುಟ್ಟುವಂತಿಲ್ಲವೆಂದೂ,ಸಹಾಯ ಮಾಡಲು ಸಾಧ್ಯವಿಲ್ಲವೆಂದು ಹೇಳಿ ಮುಂದೆ ನಡೆದ. ನಂತರ ಯುವತಿ ಗುರುವಿನ ಸಹಾಯವನ್ನು ಯಾಚಿಸಿದಳು.

 ಗುರು ಒಂದು  ಮಾತನ್ನೂ ಆಡದೆ ಆ ಯುವತಿಯನ್ನು ಎತ್ತಿಕೊಂಡು ಹೊಳೆಯನ್ನು ದಾಟಿಸಿ ಆಚೆ ದಡದಲ್ಲಿ ಬಿಟ್ಟು ,ತನ್ನ  ಶಿಷ್ಯ ನೊಡನೆ ಪ್ರಯಾಣ ವನ್ನು  ಮುಂದುವರಿಸಿದ. ಸಂಜೆ ಗುರು ಶಿಷ್ಯರಿಬ್ಬರೂ ಆಶ್ರಮ ಒಂದರಲ್ಲಿ ತಂಗಿದರು. ಶಿಷ್ಯ ಸಿಟ್ಟಿನಿಂದ ಗುರುವನ್ನು "ನೀವು ಮಾಡಿದ್ದು ತಪ್ಪಲ್ಲವೇ?" ಎಂದು ಪ್ರಶ್ನಿಸಿದ. ಗುರುವಿಗೆ ಶಿಷ್ಯನ ಸಿಟ್ಟಿನ ಕಾರಣ ಅರ್ಥವಾಗದೇ ,ಮುಗ್ಧತೆಯಿಂದ"ನಾನೇನು ತಪ್ಪು ಮಾಡಿದೆ?"ಎಂದು ಕೇಳಿದ.

ಅದಕ್ಕೆ ಶಿಷ್ಯ "ನೀವು ಬೆಳಿಗ್ಗೆ ಆ ಹೆಂಗಸನ್ನು ಮುಟ್ಟಿದ್ದು ತಪ್ಪಲ್ಲವೆ?ನಾವು ಸನ್ಯಾಸಿಗಳು ಹೆಂಗಸರನ್ನು ಮುಟ್ಟಬಹುದೇ?" ಎಂದು ಸಿಟ್ಟಿನಿಂದ ಕೇಳಿದ. ಅದನ್ನು ಕೇಳಿ ಗುರು ಗಹ ಗಹಿಸಿ ನಕ್ಕು, ಶಿಷ್ಯನನ್ನು ಉದ್ದೇಶಿಸಿ, "ಅಲ್ಲಪ್ಪಾ ಶಿಷ್ಯ ..... ,ನಾನು ಆ ಹೆಂಗಸನ್ನು ಬೆಳಿಗ್ಗೆಯೇ ಆಚೆ ದಡ ದಲ್ಲಿ ಇಳಿಸಿ ಮರೆತು ಬಿಟ್ಟೆ. ಆದರೆ ನೀನು ಅವಳನ್ನು ನಿನ್ನ ಮನಸ್ಸಿನಲ್ಲಿ ಇನ್ನೂ ಹೊತ್ತು ತಿರುಗುತ್ತಿದ್ದೀ ಯಲ್ಲಾ  !!!!"ಎಂದು ಮತ್ತೆ ನಗತೊಡಗಿದ.

ನಾವೆಲ್ಲರೂ ಆ ಶಿಷ್ಯನಂತೆಯೇ ಅಲ್ಲವೇ ?ಎಂದೋ ನಡೆದ ವಿಷಯಗಳ ಭಾರವನ್ನು ಮನಸ್ಸಿನಲ್ಲಿ  ಅನಾವಶ್ಯವಾಗಿ ಹೊತ್ತು ತಿರುಗುತ್ತಿಲ್ಲವೇ? ಈ ಕಥೆಯಲ್ಲಿ ನಮಗೆಲ್ಲಾ ಒಂದು ಅದ್ಭುತ ಪಾಠವಿದೆ ಎಂದು ಅನಿಸಿದ್ದಿರಿಂದ ನಿಮ್ಮೊಂದಿಗೆ ಹಂಚಿಕೊಂಡಿದ್ದೇನೆ.ನಮಸ್ಕಾರ.

5 comments:

  1. ಡಾಕ್ಟ್ರೆ...
    ನೀವೆನ್ನುವದು ನಿಜ..
    ಅನಾವಶ್ಯಕ ವಿಚಾರಗಳನ್ನು ತಲೆಯಲ್ಲಿ ಹೊತ್ತು ತಿರುಗುವದು ನಮ್ಮ ಸ್ವಭಾವ...
    ಕೆಸುವಿನ ಎಲೆಯ ಮೇಲಿನ ನೀರಿನಂತಿರಲಿ ನಮ್ಮ ಆಚಾರ ವಿಚಾರ..

    ಥ್ಯಾಂಕ್ಯೂ

    ReplyDelete
  2. ಝೆನ್ ಕಥೆಗಳು ತಿದ್ದುವ ಸುಲಭೋಪಾಯಗಳು.

    ಈ ಕಥೆ ಮತ್ತು ಅದು ನಮ್ಮೊಳಗೆ ಸುಮ್ಮನೆ ಕಾಡುತ್ತಲೇ ಇರುವ ಭಾವಗಳ ಬಿಡುಗಡೆಗೆ ಪ್ರೇರೇಪಿಸುವ ರೀತಿ ಎರಡಕ್ಕೂ ಮನೋ ನಮಸ್ಕಾರಗಳು.

    ReplyDelete
  3. ಬೆಟ್ಟ ಹತ್ತುವಾಗ ತಲೆಯ ಮೇಲೆ ಭಾರ ಇರಬಾರದು ಎನ್ನುತ್ತಾರೆ.. ಸಾಧನೆಯ ಶಿಖರ ಏರುವಾಗ ಮನದಲ್ಲೂ ಭಾರ ಇರಬಾರದು ಎಂದು ಈ ಕಥೆ ಹೇಳುತ್ತದೆ. ಹಂಚಿಕೊಂಡದ್ದಕ್ಕೆ ಧನ್ಯವಾದಗಳು ಡಾಕ್ಟ್ರೆ

    ReplyDelete
  4. ನಿಜ ಸರ್. ಬೇಕಾದ್ದು ಬೇಡದ್ದು ಎಲ್ಲವನ್ನೂ ತಲೆಯಲ್ಲಿ ಹೊತ್ತು ತಲೆಭಾರ ಮಾಡಿಕೊಂಡು ಬದುಕುತ್ತೇವೆ ನಾವು. ಎಷ್ಟೋ ವರ್ಷದ ಹಿಂದೆ ಆದ ಅವಮಾನ, ಮುಜುಗರವನ್ನು ಈಗಲೂ ನೆನೆದು ತಲೆಬಿಸಿ ಮಾಡಿಕೊಳ್ಳುತ್ತೇವೆ. ಮನುಷ್ಯರ ಸ್ವಭಾವವೇ ಹಾಗೆ

    ReplyDelete
  5. ನಿಮ್ಮ ಬ್ಲಾಗಿಗೆ ಆಕಸ್ಮಿಕ ಭೇಟಿ ನನ್ನದು. ತುಂಬ ಮೌಲಿಕ ವಿಚಾರಗಳು ನಿಮ್ಮ ಬರಹಗಳಲ್ಲಿವೆ.
    ಧನ್ಯವಾದಗಳು.

    ReplyDelete

Note: Only a member of this blog may post a comment.