Thursday, February 25, 2010

ಮೌನ -----------------ಬಂಗಾರ

ಎಲ್ಲೋ --------------ಕೆಲವರ ಮಾತು ,
ಬೆಳ್ಳಿಯಂತೆ ------- ಕಿಮ್ಮತ್ತಿನದು!
ಕೆಲವರದು,  ಒನ್ ಗ್ರಾಂ ಗೋಲ್ಡು !
ಹೊರಗೆ ಥಳುಕು, ಒಳಗೆ  ಹುಳುಕು,
ಬರೀ ಒಂದಿಷ್ಟು ಗಮ್ಮತ್ತಿನದು!
ಹೆಚ್ಚಿನವರ ಮಾತು,
ಖಾಲಿ ಡಬ್ಬಿಯೊಳಗಿನ  ಕಲ್ಲೊಂದರ ,
ಗಲ,ಗಲ ---------ಶಬ್ದ,
ಬರೀ--------ಹಿತ್ತಾಳೆ!
ಇನ್ನು ಕೆಲವರದು -----ಚುಚ್ಚುವ,
ಮೈಯೆಲ್ಲಾ ಮುಳ್ಳಿರುವ ಕತ್ತಾಳೆ!
ಆದ್ದರಿಂದ ---------ಮಾತಿಗಿಂತ,
ಮೌನವೇ---------------ಲೇಸು!
ಅದು ಎಂದೆಂದಿಗೂ  ------------------,
ಅಪ್ಪಟ -------------------ಬಂಗಾರ!  

Tuesday, February 23, 2010

ತಿರುಪತಿ ----ಬೆಟ್ಟ

ಸಾಲು ಸಾಲು ---------------,
ಮುಗಿಲಿಗೇ ಏಣಿ ಹಾಕಿದ ಹಾಗೆ ,
ಮೂರು  ಸಾವಿರದ ಐದು ನೂರ ಐವತ್ತು ,
ತಿರುಪತಿಯ ಬೆಟ್ಟದ ಮೆಟ್ಟಿಲು !
ಕೋಟಿ ಕೋಟಿ ಹರಕೆಗಳ ತೊಟ್ಟಿಲು !
ಹತ್ತಿದವರಿಗೆ ಗೊತ್ತು -------,
ಹತ್ತುವುದರ ಕಷ್ಟ -----------!
ತೀರದ ಮುಗಿಯದ ಕಷ್ಟಗಳಂತೆ ,
ಒಂದಾದ ಮೇಲೊಂದರಂತೆ ---,
ಮೆಟ್ಟಿಲುಗಳ -----------ಸಂತೆ !
ನಾವು ಮೆಟ್ಟಿಲು ಏರಿದಂತೆ ---------,
ಅವೂ ಏರುತ್ತವೆ ಮೇಲೆ ಮೇಲೆ -----!
ಸುಖದ ಮೂಟೆ ಹೊತ್ತ ಕತ್ತೆ ಶರೀರಕ್ಕೆ ,
 ಕ್ಷಣ ಕ್ಷಣಕ್ಕೂ ಉಬ್ಬಸ, ಬೆವರು !
ಕಷ್ಟವೇನು ಎಂಬುದ ಅರಿಯದ ಶರೀರಕ್ಕೆ ,
ಕಷ್ಟವೋ ಕಷ್ಹ್ತ ----------------!
ನಮ್ಮ ದೇಹದ ಪೆಟ್ರೋಲು ಬೇಗನೆ ತೀರಿ,
ಮುಂದೆ ಮೆಟ್ಟಿಲು ಹತ್ತಿಸುವುದು -------,
ಗೋವಿಂದ ನಾಮ ಸ್ಮರಣೆಯ ಪೆಟ್ರೋಲು !
ಭವ ಸಾಗರವ ದಾಟಿಸುವ ---------,
ಭಗವನ್ನಾಮ ಸ್ಮರಣೆಯ-----,
---------ಹರಿಗೋಲು !!!

Tuesday, February 16, 2010

ರೂಪಾಂತರ

ಅರಣ್ಯದ ಮಧ್ಯೆ ಬಿದಿರು ಮೆಳೆಯಲ್ಲಿ,
ನನ್ನ ಸಮನಾರಿಲ್ಲೆಂದು ಮೆರೆಯುತ್ತಿದ್ದ ನನಗೆ,
ಬಿತ್ತೊಂದು ------------ಕೊಡಲಿ ಪೆಟ್ಟು!                      
ಪೇಪೆರ್ ಮಿಲ್ಲಿನಲ್ಲಿ ರೂಪಾಂತರಗೊಂಡು,
ಸುದ್ದಿಯಾಗಿ,----------ಕಡೆಗೆ ರದ್ದಿಯಾಗಿ, 
ಮತ್ತೆ ಪೇಪರ್ ಬ್ಯಾಗ್ ಆಗಿ,
ಯಾರದೋ ಕಷ್ಟಗಳ ಸಾಮಾನು,
ಹೊಟ್ಟೆಯಲಿ ಹೊತ್ತು ಸಾಗಿಸಿ,
ಈಗ, ಉಪಯೋಗ ವಿಲ್ಲದೆ ಬಿದ್ಡಿದೇನೆ,
ಮನೆಯ ಹೊರಗೆ-------------!
ನಿಮ್ಮದೇ ಕರೆ ಕರೆಯಲ್ಲಿ ನೀವಿದ್ದರೂ,
ನನ್ನ ಕರೆಗೆ ಓಗೊಟ್ಟಿರಿ 
ನನ್ನ ಪುಣ್ಯ -------------!
ನನ್ನನೊಮ್ಮೆ ಗಾಳಿಪಟವಾಗಿಸಿ,
ತೇಲಿಬಿಡಿ ಆಗಸದಲ್ಲಿ -----------,
ನಿಮ್ಮ ಕಲ್ಪನೆಗಳ ಜೊತೆ,
ರಂಗು ರಂಗಿನ ---------
ಕನಸುಗಳ ಜೊತೆ!
ನಲಿಯುತ್ತೇನೆ ಹಕ್ಕಿಗಳೊಡನೆ,
ಒಂದು ಕ್ಷಣ------------,
ಮಣ್ಣಲ್ಲಿ, ಮಣ್ಣಾಗುವ ಮುನ್ನ!    
       (Inspired by sri. Narayan Bhat's article about a paper bag in his blog .)      

Sunday, February 14, 2010

ಕಳೆದೇ ಹೋಗುತ್ತಿದೆ ಬದುಕು ----!

ಕಳೆದೇ  ಹೋಗುತ್ತಿದೆ ಬದುಕು ----!                  
ಈ ಕ್ಷಣದಲ್ಲಿ-----------!   
ಕೈ ಯಿಂದ ಜಾರುತ್ತಿರುವ ,
ಈ ಕ್ಷಣದ------ ಕಣ ಕಣದಲ್ಲಿ !!
ಸದಾ ಬೆಂಬಿಡದ   ಭೂತ !
ಇಲ್ಲವೇ ------------,
ಭವಿತವ್ಯದ ನೀರ್ಗುಳ್ಳೆಯ ವಿಸ್ಮೃತಿ!
ಇವೆರಡರ ನಡುವೆ ಹಾರಾಡುವ ,
ಇವೆರಡರ ನಡುವೆ ಓಲಾಡುವ ,
ಗೆಳೆಯಾ ----------,
 ಎಲ್ಲಿದೆ ಹೇಳು ಈ ಕ್ಷಣದ ಬದುಕು !
 ಮುದುಡುತ್ತಿವೆ ಈ ಕ್ಷಣದಲ್ಲಿ ,
ಅಸಂಖ್ಯಾತ ಹೂವುಗಳು !
ಮಕ್ಕಳ ಮುಗ್ಧ ನಗು ,
ನಲ್ಲೆಯ ಕಣ್ಣ ನಕ್ಷತ್ರದ ಮಿನುಗು !
ಯಾರ ಕಣ್ಣಿಗೂ ಬೀಳದ ,
ಪ್ರಕೃತಿಯ ಒನಪು ವಯ್ಯಾರ !
ಬೆಡಗಿನ ಬೆರಗು ----------!
            ನಮಗೋ ,ಅಯ್ಯೋ ------ವಿಸ್ಮೃತಿ !
             ಯಾವುದೂ ಕಾಣದೆ ಭ್ರಮಿತರಾಗಿದ್ದೇವೆ !
             ಹೊರಗಣ್ಣ ತೆರೆದಿದ್ದರೂ ಒಳಗಣ್ಣ ಬೆರಗ,
             ಮುಚ್ಚಿದ್ದೇವೆ -------------------!
             ನಿದ್ರಿಸುತ್ತಲೇ ಜೀವಿಸಿದ್ದೇವೆ ಅನುದಿನ !
             ನಿದ್ರಿಸುತ್ತಲೇ --------ಸಾಯುತ್ತೇವೆ ,
             ಎಂದೋ ---------------ಒಂದು ದಿನ !

Wednesday, February 10, 2010

ಧ್ಯಾನಸ್ಥ -------------ಸ್ವಸ್ಥ `

ನಮ್ಮ ವರಾಂಡದ ಕಿಟಕಿಯ ಸರಳುಗಳ ಆಚೆ, ಬಿಡುಗಡೆಯ ಬಯಲಿನಲ್ಲಿ, ಕಾಣುತ್ತಿದೆ ಒಂದು ಧ್ಯಾನಸ್ಥ ತೆಂಗಿನ ಮರ .ಚಳಿ,ಬಿಸಿಲು,ಮಳೆ,ಗಾಳಿಗಳ ಲೆಕ್ಕಿಸದೆ ದಶಕಗಳಿಂದ ತಪೋ ನಿರತ .ಆಗೊಮ್ಮೆ ಈಗೊಮ್ಮೆ ಗಾಳಿ ಇಡುವ ಕಚಗುಳಿಗೆ ಮೆಲ್ಲನೆಯ ಸ್ಪಂದನ.ಗರಿಗಳು ನುಡಿಸುವ ಸರಿಗಮಕ್ಕೆ ಏರಿ ಇಳಿಯುವ ಹಾರ್ಮೊನಿಯಮ್ಮಿನ ಕೀ ಗಳಂತೆ .ತನ್ನ ಸಂಗೀತಕ್ಕೆ ಮನಸೋತು ತಾನೇ ತಲೆದೂಗುತ್ತದೆ.ಪಕ್ಕದಲ್ಲೇ ಸಾಥ್ ನೀಡುತ್ತಿದೆ ಇನ್ನೊಂದು ಮರ.ಹಿಮಾಲಯದ ಸಾಧು ಒಬ್ಬನಂತೆ, ತನ್ನೆಲ್ಲಾ ಎಲೆಗಳನ್ನು ಉದುರಿಸಿ ಬೆತ್ತಲಾಗಿ, ಚಳಿಗೆ, ಏನ್ ಮಾಡ್ತೀಯೋ ಮಾಡ್ಕೋ ಹೋಗ್,ಎಂದು ಸವಾಲೆಸೆಯುತ್ತದೆ.ಎಲ್ಲಿಂದಲೋ ಬಂದ ಹಕ್ಕಿಗಳ ಹಿಂಡೊಂದು ತೆಂಗಿನ ಮರದ ತಪಸ್ಸು ಕೆಡಿಸಲು ಗರಿಗಳಲ್ಲಿ ಕೂತು, ಏನೂ ಪ್ರಯೋಜನವಿಲ್ಲೆಂದು ತಮ್ಮಲ್ಲೇ ಮಾತಾಡಿಕೊಂಡು ,ಬುರ್ರ್ ಎಂದು ಒಟ್ಟಿಗೇ ಹಾರಿಹೊಗುತ್ಹವೆ . ಇದ್ಯಾವುದನ್ನೂ  ಲೆಕ್ಕಿಸದ ತೆಂಗಿನಮರ ಮೊದಲಿನಂತೆ ಧ್ಯಾನಸ್ಥ ! ಸ್ವಸ್ಥ!! ಕಿಟಕಿ ಬಾಗಿಲುಗಳಿಂದ  ನಮ್ಮನು  ನಾವೇ ಬಂಧಿಸಿ ಕೊಂಡು, ತಲೆಯಲ್ಲಿ ನಾನಾ ಚಿಂತೆಯ, ಗಿಳಿ,ಗೂಬೆ,ಕಾಗೆಗಳನ್ನು ಬಿಟ್ಟುಕೊಂಡು, ಅವುಗಳ ಕಿರುಚುವಿಕೆಯಿಂದ ತಲೆ ಚಿಟ್ಟು ಹಿಡಿಸಿಕೊಂಡು  ಬದುಕುತ್ತಿರುವ ನಮ್ಮ ಬದುಕು --------------ಅಸ್ವಸ್ಥ.

Monday, February 8, 2010

ಕರಾಮತ್ತು ----------------!

ನಮ್ಮ  ದೇಶದಲ್ಲಿ 
ಬಿ .ಟಿ.ಬದನೆ ತಳಿಯ                   
ಜಾರಿಗೆ  ತರಲಿದೆ,
ಮಾನ್ಸಂಟೋ----------!
ಅದರಲ್ಲೇನಿದೆಯೋ ಕರಾಮತ್ತು!
ಯಾರಿಗೆ  ಗೊತ್ತು--------?
 ಯಾರು  ಯಾರಿಗೆ  ಎಷ್ಟು  ಎಷ್ಟು ,
percent ಓ ----------!???

Sunday, February 7, 2010

B.T. ಬದನೆ (ಸಾಮಾನ್ಯನೊಬ್ಬನ------------ ಹನಿಸಿಕೆಗಳು)

ವಿಜ್ಞಾನದ ಲೇಬೆಲ್ ಹಚ್ಚಿಕೊಂಡ  ಅಜ್ಞಾನಿ  ಮಹಾಶಯರೇ!
ಪ್ರಳಯಾಂತಕರು ಸ್ವಾಮಿ  ನೀವು !
ನಮ್ಮ ತಟ್ಟೆಯ  ಬದನೆಯನ್ನೇ , 
ಕುಲಾಂತರಿಸಲು  ಹೊರಟಿದ್ದೀರಲ್ಲ!

ಪಾಪ , ಏನೂ  ಅರಿಯದ  ಮುಗ್ಧ  ಬದನೆಗಳು!
ಮೊನ್ನೆ  ಬೆಳಿಗ್ಗೆ  ದೋಸೆಗೆ  ಬದನೆ ಚಟ್ನಿ , 
ನಿನ್ನೆ  ಮಧ್ಯಾನ್ನ  ಬದನೆ ಸಾಂಬಾರ್,
ರಾತ್ರಿ  ಚಪಾತಿಗೆ  ತುಂಬು ಬದನೆಯ
ಮಸಾಲೆದಾರ್  ಪಲ್ಯ !
ಈ  ದಿನ  ಮಧ್ಯಾನ್ನ ವಾಂಗಿಬಾತು!
ಬದನೆಯ  ತಳಿಗಳೆಲ್ಲ  ಬ.ಟಿ.ಯ ಹೆಸರು  ಕೇಳಿ 
ಹೆದರಿ  ಗುಳೆ ಹೊರಟು ನಮ್ಮ  ಫ್ರಿಡ್ಜ್  ಸೇರಿವೆಯಲ್ಲ !  
ಫ್ರಿಡ್ಜ್ ಬಾಗಿಲು  ತೆರೆದು  ನೋಡಿದರೆ ,
ಆ  ಚಳಿಯಲ್ಲೂ  ಸಣ್ಣಗೆ  ಬೆವರುತ್ತಿವೆ  ಪಾಪ !
ಬ.ಟಿ . ಬದನೆಯ  ಆಕ್ರಮಣಕ್ಕೆ  ಹೆದರಿ !
ತರಕಾರಿಗಳ  ರಾಜ ವಂಶಜರೆ  ಹೆದರದಿರಿ!
ನಮ್ಮ  ಫ್ರಿಡ್ಜ್ ಗಳ  ಆಶ್ರಯದಲ್ಲಿ  
ತಣ್ಣಗಿರಿ  ಮಹಾಸ್ವಾಮಿಗಳೇ !
ನಿಮಗೆ  ವರ್ಣ  ಸಂಕರಣದ  ಭಯ  ಬೇಡ .
ನಾವಿದ್ದೇವಲ್ಲ  ಅಭಿಮಾನಿ  ದೇವರುಗಳು!
ಯಾವ  ಕಾಲಕ್ಕೂ  ನಿಮ್ಮ  ಹುಳುಕನ್ನು  
ಬಿಟ್ಟುಕೊದುವುದಿಲ್ಲ
ನೀವು  ನಮಗೆ 
 ಹೇಗಿದ್ದರೂ  ಚೆನ್ನ !

Saturday, February 6, 2010

ನೀನು ನನಗೆ ಅರ್ಥವಾಗಿಲ್ಲ !

ನನ್ನ ಅಂತರಾಳದ ಗುಹೆಯಲ್ಲಿ ಎಲ್ಲೋ ಹುದುಗಿರುವ ನಾನು ನನಗೇ ಅರ್ಥವಾಗಿಲ್ಲ ! ಇನ್ನು ನೀನು ನನ್ನನ್ನು, ನಾನು ನಿನ್ನನ್ನು, ಅರ್ಥಮಾಡಿ ಕೊಳ್ಳಬೇಕೆನ್ನುವುದು, ಅರ್ಥವಿಲ್ಲದ ವ್ಯರ್ಥ ಪ್ರಲಾಪ. ನಿನಗೆ ಕಾಣಿಸುವ ನಾನು, ನಿಜವಾದ ನಾನಲ್ಲ ! ನನಗೆ ಕಾಣಿಸುವ ನೀನು ನಿಜವಾದ ನೀನಲ್ಲ ! ಹೀಗೆ ಕಾಣಿಸದ ನನಗಾಗಿ ನೀನು , ನಿನಗಾಗಿ ನಾನು , ಸುಮ್ಮನೆ ಹುಡುಕಾಡುವ ಗೋಜಿಗೇ ಹೋಗದೆ , ಕಾಣುವ ನಾನು ನೀನು ಎಲ್ಲರೂ , ಹೊಂದಿಕೊಂಡು ಬಾಳಬಾರದೇಕೆ? ಒಮ್ಮೆಯಾದರೂ ---------------, ಧರೆಯ ಹಸಿರಾಗಬಾರದೇಕೆ!? ಹಸಿರ ಉಸಿರಾಗಬಾರದೇಕೆ! ?

ಚ್ಯುಯಿಂಗ್ ಗಮ್

ನಮ್ಮೆಲರ ಬದುಕು--------, ಚ್ಯುಯಿಂಗ್ ಗಮ್
ಇದ್ದ ಹಾಗೆ!
ಮೊದಮೊದಲು ಸಿಹಿಯಾಗಿದ್ದದ್ದು ,
ಜಗಿಯುತ್ತಾ-----ಜಗಿಯುತ್ತಾ,
ಕಡೆಗೆ--,ಬರೀ, ಸಪ್ಪೆ!
ಸಿಹಿಯಾದ ಹಣ್ಣು ಎಂದುಕೊಂಡದ್ದು,
ಅಯ್ಯೋ----ಬರೀ ಸಿಪ್ಪೆ!
ಈ ಬದುಕೆಂಬ ಚ್ಯುಯಿಂಗ್ ಗಮನ್ನು,
ಜಗಿದೂ, ಜಗಿದೂ,
ಜಗಿಯುವುದೇ ತಲೆ ನೋವಾದರೂ,
ಅದೇ, ಹಿತವಾಗಿ,
ಸಂಬಂಧಗಳು ರಾಡಿಯಾದರೂ,
ಅದೇ, ರೂಢಿಯಾಗಿ,
ನುಂಗಲೂ ಆಗದೆ,
ಉಗಿಯಲೂ ಆಗದೆ,
ಜಗಿಯುತ್ತಲೇ ಇರಬೇಕೆನಿಸುವ,
ಈ ನಮ್ಮೆಲರ ಬದುಕು,
ನಮ್ಮೆಲ್ಲರನ್ನೂ, ಎಡೆಬಿಡದೆ,
'ಚ್ಯೂ', ಮಾಡುವ----'ಗಮ್ಮು'.
ಕೊನೆ ಕೊನೆಗೆ,ಈ----ಬದುಕು
ಜಗಿದೂ,ಜಗಿದೂ ಬೇಸತ್ತು,
ಕೈಯಲ್ಲಿ ಹಿಡಿದು
ಬೀಸಿ ದೂರ ಒಗೆಯಬೇಕೆನಿಸಿದಾಗ, ------
ಅಂಟಂಟು.........,
ಅಯ್ಯೋ-----ಈ ಬದುಕಿನ ನಂಟು!

published in Tushara Feb 2010