Sunday, November 28, 2010

"ವೈದ್ಯನೊಬ್ಬನ ಮರೆಯದ ನೆನಪುಗಳು"-ಭಾಗ೧

ಇದನ್ನೆಲ್ಲಾ ಹೇಗೆ ಬರೆಯುವುದೋ ಗೊತ್ತಿಲ್ಲ .ಆದರೆ ಬರೆಯದೆ ಇರುವುದೂ ಸಾಧ್ಯವಾಗುತ್ತಿಲ್ಲ.ಇಂತಹ ಹಲವಾರು ಘಟನೆಗಳು ನೆನಪಿನ ಹಗೇವಿನಲ್ಲಿ ಆಳವಾಗಿ ಬೇರು ಬಿಟ್ಟಿವೆ.ಸುಮಾರು ಇಪ್ಪತೆಂಟು ವರ್ಷಗಳ ಹಿಂದಿನ ಘಟನೆ .ಆಗ ನಾನು ಸಿರುಗುಪ್ಪದಿಂದ ಎಂಟು ಕಿಲೋಮೀಟರ್ ದೂರದ ದೇಶನೂರು ಎಂಬ ಹಳ್ಳಿಯ ಸನಿಹವಿದ್ದ ಸಕ್ಕರೆ ಕಾರ್ಖಾನೆಯಲ್ಲಿ  ವೈದ್ಯನಾಗಿದ್ದೆ.ಆಗ ಆಸ್ಪತ್ರೆಯೆಂದರೆ ಕಾರ್ಖಾನೆಯಲ್ಲೇ ಸಣ್ಣದೊಂದು ಶೆಡ್ ಇತ್ತು.ಆಸ್ಪತ್ರೆಯ ಸಿಬ್ಬಂಧಿಗಳೆಂದರೆ ನಾನು ಮತ್ತು ಔಷಧಿ ಕೊಡುವ ಒಬ್ಬ ಕಾಂಪೌಂಡರ್ ಇಬ್ಬರೇ.ಸಣ್ಣ ,ಪುಟ್ಟ ಖಾಯಿಲೆಗಳಿಗೆ ಔಷಧಿ ಮತ್ತು ತುರ್ತು ಚಿಕಿತ್ಸೆ ಮಾತ್ರ ಅಲ್ಲಿ ಲಭ್ಯವಿತ್ತು.ಹೆಚ್ಚಿನ ಚಿಕಿತ್ಸೆಗೆ ಕಾರ್ಮಿಕರು ಅವರ ಸ್ವಂತ ಖರ್ಚಿನಲ್ಲಿ ಎಂಟು ಕಿಲೋಮೀಟರ್ ದೂರವಿದ್ದ ಸಿರುಗುಪ್ಪಕ್ಕೋ ,ಐವತ್ತು ಕಿಲೋಮೀಟರ್ ದೂರದ ಬಳ್ಳಾರಿಗೋ ಹೋಗಬೇಕಿತ್ತು.
ಅಸಾಧ್ಯ ಬಿಸಿಲಿನ ಪ್ರದೇಶ.ಶೀಟಿನ ಮನೆ.ಸಂಜೆಯ ವೇಳೆಗೆ ,ಕೆಂಡ ಕಾದಂತೆ ಕಾಯುತ್ತಿತ್ತು.ರಾತ್ರಿ ಸ್ವಲ್ಪ ತಂಪಾಗುತ್ತಿತ್ತು. ಆದರೂ ವಿಪರೀತ ಸೆಖೆಯಿಂದಾಗಿ ರಾತ್ರಿ ಸರಿಯಾಗಿ ನಿದ್ರೆ ಬರುತ್ತಿರಲಿಲ್ಲ.ಚೊಚ್ಚಲ ಹೆರಿಗೆಗೆಂದು ತವರಿಗೆ ಹೋಗಿದ್ದ ಹೆಂಡತಿಯಿಂದ ಪತ್ರ ಬಂದು ವಾರವಾಗಿತ್ತು.ಆಗೆಲ್ಲಾ ,ಈಗಿನಂತೆ ಫೋನಿನ ಸೌಕರ್ಯವಿರಲಿಲ್ಲ.ಮೊದಲೇ ಸೆಖೆ.ಮೇಲೆ ಹೆಂಡತಿ ಹೇಗಿದ್ದಾಳೋ ಎನ್ನುವ ಆತಂಕ. ರಾತ್ರಿ ಎರಡಾದರೂ  ನಿದ್ರೆಯ ಸುಳಿವಿಲ್ಲ.ಆಗ ಜೋರಾಗಿ ಬಾಗಿಲು ಬಡಿಯುವ ಶಬ್ದ ,ಜೊತೆಗೇ ಯಾರೋ ಆತಂಕದ ದನಿಯಲ್ಲಿ 'ಸಾರ್,ಸಾರ್'ಎಂದು ಕೂಗುವ ಶಬ್ದ.ಹೋಗಿ ಬಾಗಿಲು ತೆರೆದೆ.ಕಾರ್ಖಾನೆಯ ರಸ್ತೆಯ ಪಕ್ಕದಲ್ಲೇ ಗುಡಿಸಲುಗಳಲ್ಲಿ ವಾಸಿಸುತ್ತಿದ್ದ, ಸಕ್ಕರೆ ಮೂಟೆಗಳನ್ನು ಲಾರಿಗಳಿಗೆ ತುಂಬುವ ಹಮಾಲಿಗಳ ಸಣ್ಣ ತಂಡವೊಂದು ಲಾಟೀನುಗಳನ್ನು ಹಿಡಿದು ನಿಂತಿತ್ತು.'ಏನ್ರಪ್ಪಾ?.....ಏನಾಯಿತು...?'ಎಂದೆ. ಅವರಲ್ಲೊಬ್ಬ ಮುಖಂಡ ನಂತೆ ಇದ್ದವನು 'ಸಾರ್....,ಗಡಾನೆ ಬರ್ರಿ ಸಾರ್ ...,ಹುಲಿಗೆಪ್ಪನ ಹೆಂಡತಿಗೆ ಹೆರಿಗೆ ತ್ರಾಸಾಗಿದೆ'ಎಂದ. ಏನು ,ಎತ್ತ ಎಂದು ಅರ್ಥವಾಗದಿದ್ದರೂ 'ಸರಿ ನಡೀರಿ 'ಎಂದು ಮನೆಯ ಬಾಗಿಲಿಗೆ ಬೀಗ ಹಾಕಿ ಔಷಧಿಗಳಿದ್ದ ಸಣ್ಣ ಪೆಟ್ಟಿಗೆಯೊಂದನ್ನು ಹಿಡಿದು ಅವರ ಜೊತೆ ಸುಮಾರು ಅರ್ಧ ಕಿಲೋಮೀಟರ್ ದೂರವಿದ್ದ ಅವರ ಗುಡಿಸಿಲಿನ ಕಡೆ ನಡೆದೆ.ಸಿರಗುಪ್ಪದಲ್ಲಿ ಒಂದು ಸರ್ಕಾರಿ ಆಸ್ಪತ್ರೆ ಇದ್ದರೂ ಹೆರಿಗೆಗೆ ಅಲ್ಲೇಕೆ ಕರೆದುಕೊಂಡು ಹೋಗಲಿಲ್ಲವೆಂದು ಕೇಳಿದೆ.'ಅಲ್ಲೂ ರೊಕ್ಕ ಇಲ್ಲದೆ ಏನೂ ಮಾಡಂಗಿಲ್ರೀ  ಸಾಹೇಬ್ರೇ.ನಾವು ಬಡವರು ರೊಕ್ಕ ಎಲ್ಲಿ ತರೋಣ್ ರೀ' ಎಂದ ಅವರಲ್ಲೊಬ್ಬ .ನಮ್ಮ ಅವ್ಯವಸ್ಥೆಯನ್ನು ಹಳಿಯುತ್ತಾ ,ಆ ನಡುರಾತ್ರಿಯ ಕತ್ತಲೆಯಲ್ಲಿ ,ಲಾಟೀನುಗಳ ಮಂದ ಬೆಳಕಿನಲ್ಲಿ ಅವರ ಗುಡಿಸಳುಗಳತ್ತ ಲಗುಬಗೆಯಿಂದ ಹೆಜ್ಜೆ ಹಾಕಿದೆ.  
ಅಲ್ಲಲ್ಲೇ ಹರಿಯುತ್ತಿದ್ದ ಕೊಚ್ಚೆಯ ನೀರನ್ನು ದಾಟಿಕೊಂಡು ,ತಮ್ಮ ಸರಹದ್ದಿಗೆ ಆಗಂತುಕನೊಬ್ಬನ ಆಗಮನ ವಾಗುತ್ತಿದ್ದಂತೆ ಜೋರಾಗಿ ಬೊಗಳುತ್ತಿದ್ದ ಹತ್ತಾರು ನಾಯಿಗಳನ್ನು ಲೆಕ್ಕಿಸದೆ ಅವರು ಕರೆದುಕೊಂಡು ಹೋದ ಗುಡಿಸಲೊಂದರೊಳಗೆ ಹೋದೆ.ಅಲ್ಲಿ ಕಂಡ ದೃಶ್ಯ   ಎಂತಹ ಗಂಡೆದೆ ಉಳ್ಳವರೂ ಹೌಹಾರುವಂತಿತ್ತು .ಸಗಣಿಯಿಂದ ಸಾರಿಸಿದ ನೆಲದ ಮೇಲೆ ಹಾಸಿದ್ದ ಕೌದಿಯೊಂದರ ಮೇಲೆ ಗರ್ಭಿಣಿ ಹೆಂಗಸೊಬ್ಬಳು 'ಯಪ್ಪಾ ,ನನ್ ಕೈಯಾಗೆ ಆಗಾಕಿಲ್ಲೋ ....ನಾನ್  ಸಾಯ್ತೀನ್ರೋ .....ಯಪ್ಪಾ'ಎಂದು ಜೋರಾಗಿ ನರಳುತ್ತಿದಳು.ಅವಳ ಪಕ್ಕದಲ್ಲಿದ್ದ ಮುದುಕಿಯೊಬ್ಬಳು 'ಎಲ್ಲಾ ಸರಿ ಹೋಕ್ಕತೆ ಸುಮ್ಕಿರು, ದಾಗ್ದಾರ್ ಸಾಬ್ ಬಂದಾನೆ 'ಎಂದು ಸಮಾಧಾನ ಮಾಡುತ್ತಿದ್ದಳು.ಅವರು ಕೊಟ್ಟ ಸೋಪು ,ಬಿಸಿನೀರಿನಿಂದ ಕೈ ತೊಳೆದೆ.ಅದೊಂದು 'breach delivery' ಆಗಿತ್ತು .ಮಾಮೂಲಾಗಿ ಮಗುವಿನ ತಲೆ ಮೊದಲು ಹೊರಗೆ ಬರುತ್ತದೆ. 'ಬ್ರೀಚ್ ' ಡೆಲಿವರಿಯಲ್ಲಿ ,ಮಗುವಿನ ಕಾಲುಗಳು ಹೊರಗೆ ಬರುತ್ತವೆ. ಈ ಹೆಂಗಸಿನಲ್ಲಿ ಮಗುವಿನ ಕಾಲುಗಳು ಹೊರಬಂದು ತಲೆಯ ಭಾಗ ಹೊರಬರದೆ ಸಿಕ್ಕಿಕೊಂಡಾಗ ಏನು ಮಾಡಲು ತೋಚದೆ, ನನ್ನನ್ನು ಕರೆಸಿದ್ದರು.ಆಸ್ಪತ್ರೆಯಲ್ಲಿ ಎಲ್ಲಾ ಸೌಕರ್ಯಗಳಿದ್ದೂ ,ಸಹಾಯಕ್ಕೆ ದಾದಿಯರಿದ್ದೂ, ನಡೆಸುವ ಹೆರಿಗೆಗಳಲ್ಲೇ ನೂರೆಂಟು ತೊಂದರೆಗಳು.ಅಂಥದ್ದರಲ್ಲಿ ಆ ಗುಡಿಸಲಿನಲ್ಲಿ ಸಗಣಿಸಾರಿಸಿದ ನೆಲದ ಮೇಲೆ ಕುಳಿತು  ,ಲಾಟೀನಿನ ಮಂದ ಬೆಳಕಿನಲ್ಲಿ,ಅದೂ 'ಬ್ರೀಚ್ ಡೆಲಿವರಿ'ಮಾಡಬೇಕಾದಾಗ , ಹೆರಿಗೆಗಳನ್ನು ಮಾಡಿ  ಅನುಭವವಿರದ ನನ್ನ ಸ್ಥಿತಿ ಹೇಗಿದ್ದಿರಬಹುದೋ ನೀವೇ ಊಹಿಸಿಕೊಳ್ಳಿ. ದೇವರ ದಯೆಯಿಂದ ಹೆರಿಗೆ ನಾನು ನೆನೆಸಿದಷ್ಟು ಕಷ್ಟವಾಗಲಿಲ್ಲ.ಹೆಣ್ಣು ಮಗುವಿನ ಜನನವಾಯಿತು.ಮಗುವಿನ ಅಳು ಕೇಳುತ್ತಿದ್ದಂತೆ ಅಲ್ಲಿದ್ದವರ ಮುಖಗಳಲ್ಲಿ ಸಂತಸದ ನಗು ಮೂಡಿತು.
ಇದಾಗಿ ಸುಮಾರು ಇಪ್ಪತ್ತು ವರ್ಷಗಳ ನಂತರ ನಾನು ರಾಯಚೂರಿನ ಶಕ್ತಿನಗರದಲ್ಲಿ ವೈದ್ಯಾಧಿಕಾರಿಯಾಗಿದ್ದಾಗ ,ಸಿರುಗುಪ್ಪದಿಂದ ನಾನು ಹೆರಿಗೆ ಮಾಡಿದ ಹೆಂಗಸು ತನ್ನ ಪತಿಮತ್ತು ಮಗಳೊಂದಿಗೆ ನನ್ನನ್ನು ಹುಡುಕಿಕೊಂಡು ಬಂದು,ನಾನೆಷ್ಟೇ ಬೇಡವೆಂದರೂ ಮಗಳಿಂದ ನನ್ನ ಕಾಲಿಗೆ ನಮಸ್ಕಾರ ಮಾಡಿಸಿ, ತನ್ನ ಮಗಳ ಲಗ್ನಪತ್ರಿಕೆ ಕೊಟ್ಟು ಹೋದಳು.ಎಷ್ಟೋ ಸಲ ಜನಗಳ ವರ್ತನೆಯಿಂದ ಬೇಸತ್ತ ಮನಸ್ಸಿಗೆ ,ಆ ಕ್ಷಣದಲ್ಲಿ ವೈದ್ಯನಾದದ್ದು  ಸಾರ್ಥಕವೆನಿಸಿತ್ತು.ಮನದಲ್ಲಿ ಒಂದು ಅಲೌಕಿಕ ಸಂತಸ ಮನೆ ಮಾಡಿತ್ತು.       

Wednesday, November 24, 2010

"ಯಾರೋ ಹೇಳಿದರು ಅಂತ ......!"(ಡಯಾಬಿಟಿಸ್ ಭಾಗ -2)

ನಾನು  ಇನ್ನೇನು ಆಸ್ಪತ್ರೆಗೆ ಹೊರಡಬೇಕು ಎನ್ನುವಾಗ,ಎದುರು ಮನೆಯ ಸಂದೀಪ ಬಂದ.'ಸರ್ ...,ಊರಿಂದ ನಮ್ಮ ಅಂಕಲ್ ಬಂದಿದ್ದಾರೆ.ಆಪರೇಶನ್ ಆಗಿದೆ......,ಡ್ರೆಸ್ಸಿಂಗ್ ಮಾಡಬೇಕು.ಆಸ್ಪತ್ರೆಗೆ ಕರೆದುಕೊಂಡು ಬರಲಾ?' ಎಂದ.ನಾನು ಹೊರಡುವ ಆತುರದಲ್ಲಿ  ಇದ್ದುದರಿಂದ ಹೆಚ್ಚು ವಿಚಾರಿಸುವ ಗೋಜಿಗೆ ಹೋಗಲಿಲ್ಲ.ಮಾಮೂಲಾಗಿ 'ಅಪೆಂಡಿಕ್ಸ್' ,ಅಥವಾ 'ಹರ್ನಿಯಾ'ಆಪರೇಶನ್ ಆದವರು ಡ್ರೆಸ್ಸಿಂಗ್ ಮಾಡಿಸಿಕೊಳ್ಳಲು ಆಸ್ಪತ್ರೆಗೆ ಬರುತ್ತಿದುದುಂಟು.ನಾನು ಅದೇ ರೀತಿ ಯಾರೋ ಡ್ರೆಸ್ಸಿಂಗ್ ಮಾಡಿಸಿಕೊಳ್ಳಲು ಬರುತ್ತಿರಬೇಕೆಂದುಕೊಂಡಿದ್ದೆ. ಆದರೆ ,ಸಂದೀಪನ ಜೊತೆ ಸುಮಾರು ಇಪ್ಪತೆಂಟು ವಯಸ್ಸಿನ ಯುವಕನೊಬ್ಬ ಒಂದು ಕಾಲಿಲ್ಲದೇ ,ಊರುಗೋಲಿನ ಸಹಾಯದಿಂದ ,ಕುಂಟುತ್ತಾ ಆಸ್ಪತ್ರೆಗೆ ಬಂದಿದ್ದು ನೋಡಿ ಗಾಭರಿಯಾಯಿತು.ಎಡಗಾಲಿನ ತೊಡೆಯ ಕೆಳಗಿನ ಭಾಗ ಇರಲಿಲ್ಲ.ತೊಡೆಯ ಸುತ್ತಾ  ಬ್ಯಾಂಡೇಜ್  ಇತ್ತು.ಯಾವುದಾದರೂ ಅಪಘಾತವಾಯಿತೇನೋ ಎಂದುಕೊಂಡೆ.ಡ್ರೆಸ್ಸಿಂಗ್ ಮಾಡುತ್ತಾ 'ಏನಾಯಿತು'ಎಂದು ಕೇಳಿದೆ.ಅದಕ್ಕವನು 'ಸುಮಾರು  ಐದು ವರ್ಷಗಳಿಂದ ಡಯಾಬಿಟಿಸ್ ಇತ್ತುಸರ್.ಮಾತ್ರೆ ತೆಗೆದುಕೊಳ್ಳುವಾಗ ಶುಗರ್  ಕಂಟ್ರೋಲ್ ನಲ್ಲಿತ್ತು.ಜೀವನ ಪೂರ್ತಿ ಇದೆ ರೀತಿ ಮಾತ್ರೆ ತೆಗೆದುಕೊಳ್ಳಬೇಕೆಂಬ ಬೇಸರವೂ ಇತ್ತು.ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದರೆ ಕಿಡ್ನಿ ತೊಂದರೆ ಬರುತ್ತೆ ಅಂತ ಯಾರೋ ಹೆದರಿಸಿದರು.  ಒಂದು ಪುಡಿ ಕೊಟ್ಟು,ದಿನಾ ಬೆಳಿಗ್ಗೆ ಪುಡಿ ತೆಗೆದುಕೊಂಡು ,ಸಾಧ್ಯವಾದಷ್ಟು ಎಳನೀರು ಕುಡಿಯಬೇಕೆಂದರು.ನಮ್ಮದೇ ತೆಂಗಿನ ತೋಟವಿದ್ದುದರಿಂದ ದಿನಕ್ಕೆ ಆರೇಳು ,ಎಳನೀರು ಕುಡಿಯುತ್ತಿದ್ದೆ.ಮಾತ್ರೆ ಸಂಪೂರ್ಣ ನಿಲ್ಲಿಸಿದೆ.ಕಾಲಿಗೆ ಒಂದು ಸಣ್ಣ ಗಾಯವಾಗಿ ಎಡಗಾಲಿನ ಮಂಡಿಯ ಕೆಳಗಿನ ಭಾಗ  ಪೂರ್ತಿ ಕಪ್ಪಾಯಿತು.ಕಾಲು 'gangrene' ಆಗಿದೆಯೆಂದು  ಮಂಡಿಯ ಮೇಲೆ ಕತ್ತರಿಸಿದರು. ನೋಡಿ ಸಾರ್............,ಯಾರೋ ಹೇಳಿದ್ದು ಮಾಡಲು ಹೋಗಿ ಒಂದು ಕಾಲನ್ನು ಕಳೆದುಕೊಂಡೆ 'ಎಂದು ನಿಟ್ಟುಸಿರು ಬಿಟ್ಟ.ಅವನನ್ನು ನೋಡಿ'ಯಾರದೋ ಮಾತು ಕೇಳಿಕೊಂಡು ಈ ಸ್ಥಿತಿ ತಂದುಕೊಂಡನಲ್ಲ ಪಾಪ' ಎನಿಸಿತು.ಅವತ್ತೆಲ್ಲ ಒಂದು ರೀತಿಯ ಬೇಸರ ಮನಸ್ಸನ್ನು ಆವರಿಸಿಕೊಂಡಿತ್ತು. ಕೆಲವರ ಜೀವನದಲ್ಲಿ ಹೀಗೆಲ್ಲಾ ಏಕಾಗುತ್ತದೆ ಎಂದು ಒಂದು ರೀತಿಯ ಜಿಜ್ಞಾಸೆ ಕಾಡಿತ್ತು.

Monday, November 15, 2010

"ಕಂಬಳಿ ಹುಳುವಿನಂತಹ...ಮನವೇ !"

ದುರ್ಗುಣಗಳ ಮೊಟ್ಟೆಯೊಡೆದು 
ಮೈಯೆಲ್ಲಾ ಮುಳ್ಳಾಗಿ 
ಎಲ್ಲರನ್ನೂ ಚುಚ್ಚುವ 
ಎಲ್ಲರಲ್ಲೂ ತಪ್ಪುಹುಡುಕುವ
ಸಿಕ್ಕಸಿಕ್ಕಲ್ಲಿ  ಮೇಯುವ ,
ಇಲ್ಲೇ ನರಳುವ ....,
ಇಲ್ಲೇ ಹೊರಳುವ ...,
ಈ ಜಗದ ಜಂಜಾಟಗಳ
ಹೊಲಸಲ್ಲೇ ತೆವಳುವ,
ಕಂಬಳಿಹುಳದಂಥ  ಮನವೇ !
ನೀ ,ಧ್ಯಾನದ,ಮೌನದ 
ಕೋಶದೊಳಹೊಕ್ಕು,
ಸುಂದರ ಪತಂಗವಾಗಿ 
ಮಾರ್ಪಟ್ಟು ............!
ಆನಂದದಿ ಹಾರಾಡು!
ಎಲ್ಲರ ಮನದ .......,
ಪ್ರೀತಿಯ ಹೂಗಳ ....,
ಮಕರಂದ ಹುಡುಕುವ
ಸುಂದರ ಚಿಟ್ಟೆಯಾಗು !
ಸಚ್ಚಿದಾನಂದರೂಪವಾಗು!
ನಿನ್ನ.. ನಿಜಸ್ವರೂಪವೇ 
..............ನೀನಾಗು!

Saturday, November 13, 2010

"ಡಯಾಬಿಟಿಸ್."..........ಭಾಗ ಒಂದು (ಮರೆಯಲಾರದ ಅನುಭವಗಳು)

ನಾಳೆ ನವೆಂಬರ್ 14 ನೇ ತಾರೀಕು ವಿಶ್ವ ಮಧುಮೇಹ ದಿನಾಚರಣೆ (World Diabetes Day ). ನಮ್ಮ ದೇಶ ವಿಶ್ವದಲ್ಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಂದರೆ ಸುಮಾರು ನಾಲಕ್ಕುಕೋಟಿ ಯಷ್ಟು ಮಧುಮೇಹಿಗಳನ್ನು ಹೊಂದಿ ಮೊದಲ ಸ್ಥಾನದಲ್ಲಿದೆ. ಇದಕ್ಕೆಲ್ಲಾ ನಮ್ಮ ಶಿಸ್ತಿಲ್ಲದ ಅನಾರೋಗ್ಯಕರ ಜೀವನ ಶೈಲಿ, ಹೊತ್ತು ಗೊತ್ತಿಲ್ಲದೇ ಬರೀ ಬಾಯಿ ಚಪಲಕ್ಕಾಗಿ ತಿನ್ನುವುದೇ; ಒಂದು ಗೀಳಾಗಿರುವುದು ,ಹೆಚ್ಚುತ್ತಿರುವ ಮಾನಸಿಕ ಒತ್ತಡದಿಂದ ನಗು,ಸುಖ ,ಶಾಂತಿ,ನೆಮ್ಮದಿ ಕಮ್ಮಿಯಾಗಿರುವುದು,ಶಾರೀರಿಕ ವ್ಯಾಯಾಮದ ಕೊರತೆ, ಇವೆಲ್ಲವೂ ಕಾರಣವಾಗಿರಬಹುದು. ಸಕ್ಕರೆ ಖಾಯಿಲೆಯ ಬಗ್ಗೆ ಅರಿವನ್ನು ಮೂಡಿಸುವುದು ,ಅದು ಬರದಂತೆ ತಡೆಯುವುದು,ಬಂದಾಗ ಅದನ್ನು ನಿಯಂತ್ರಣದಲ್ಲಿಡುವುದು ಈ ವಿಶ್ವ ಮಧುಮೇಹ ದಿನಾಚರಣೆಯ ಮುಖ್ಯ ಉದ್ದೇಶ.'ಡಯಾಬಿಟಿಸ್ ಒಂದು ರೋಗವೇ ಅಲ್ಲ ' ಅನ್ನುವಷ್ಟು ಸಾಮಾನ್ಯಾವಾಗಿದ್ದರೂ ,ಇದನ್ನು ಸರಿಯಾಗಿನಿಯಂತ್ರಣದಲ್ಲಿ ಇಡದಿದ್ದರೆ, ಕೆಲವರ್ಷಗಳನಂತರ ಇದು ನರಮಂಡಲ,ಮಿದುಳು,ಹೃದಯ,ಕಣ್ಣು ,ಮೂತ್ರ ಪಿಂಡ,ರಕ್ತನಾಳಗಳ ಮೇಲೆ ಉಂಟು ಮಾಡುವ ಅಡ್ಡ ಪರಿಣಾಮಗಳನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಒಂದೇ ಸಲಕ್ಕೆ ಸಕ್ಕರೆ ಖಾಯಿಲೆಯ ಬಗ್ಗೆ ಎಲ್ಲಾ ವಿಷಯಗಳನ್ನು ತಿಳಿಸುವುದು ಅಸಾಧ್ಯವಾದರೂ ನಮ್ಮ ಕೈಲಾದಷ್ಟು ರೋಗಿಗಳಿಗೆ ಅರಿವನ್ನು ನೀಡುವ ಪ್ರಯತ್ನ ಮಾಡುತ್ತಿದ್ದೇವೆ.ಈ ನಿಟ್ಟಿನಲ್ಲಿ ಇತ್ತೀಚಿಗೆ ಮಾಧ್ಯಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲೇಖನಗಳು ಬರುತ್ತಿರುವುದು ಸ್ವಾಗತಾರ್ಹ. ನನ್ನ ಬ್ಲಾಗಿನಲ್ಲೂ ಈಗಾಗಲೇ ಸಕ್ಕರೆ ಖಾಯಿಲೆಯ ಬಗ್ಗೆ ಎರಡು ಲೇಖನಗಳನ್ನು ಪ್ರಕಟಿಸಿದ್ದೇನೆ.

ಪ್ರೇಮಾ ನಾರಾಯಣ್ ಸುಮಾರು ಐವತ್ತು ವರ್ಷ ವಯಸ್ಸಿನ ,ಎರಡೆರಡು ಸ್ನಾತಕೋತ್ತರ ಪದವಿಗಳನ್ನು ಪಡೆದ ವಿದ್ಯಾವಂತ ಮಹಿಳೆ.ನಮ್ಮ ಎಂಜಿನಿಯರ್ ಒಬ್ಬರ ಪತ್ನಿ. ಸುಮಾರು ಹತ್ತು ವರ್ಷಗಳಿಂದ ಅವರಿಗೆ ಸಕ್ಕರೆ ಖಾಯಿಲೆ ಇತ್ತು.ಮಾತ್ರೆಗಳನ್ನು ಹೆಚ್ಚಿನ ಡೋಸ್ ನಲ್ಲಿ ತೆಗೆದುಕೊಂಡರೂ ಪಥ್ಯ ಸರಿಯಾಗಿ ಮಾಡದೇ,ಒಮ್ಮೊಮ್ಮೆ ಅವರ ರಕ್ತದಲ್ಲಿನ ಸಕ್ಕರೆ ಅಂಶ ಏರುತ್ತಿತ್ತು. 'ಇಷ್ಟು ವಿದ್ಯಾವಂತೆಯಾಗಿದ್ದರೂ ,ಸಕ್ಕರೆ ಖಾಯಿಲೆಯ  ಬಗ್ಗೆ ಎಲ್ಲಾ ಮಾಹಿತಿ ಇದ್ದರೂ ,ಈ ಹೆಂಗಸಿಗೆ ನಾಲಿಗೆ ಚಪಲದ ಮೇಲೆ ಸ್ವಲ್ಪವೂ ಹಿಡಿತವಿಲ್ಲವಲ್ಲಾ! ' ಎಂದು ನನಗೆ ಅವರ ಮೇಲೆ ಸಿಟ್ಟಿತ್ತು. ಆ ದಿನ ಆಸ್ಪತ್ರೆಯ ನನ್ನ ಪರೀಕ್ಷಾ ಕೋಣೆಯಲ್ಲಿ ಪ್ರೇಮಾ ನಾರಾಯಣ್ ನನ್ನ ಮುಂದೆ ಕೂತಿದ್ದರು.ಅವರ 'ಬ್ಲಡ್ ಶುಗರ್ ರಿಪೋರ್ಟ್'ನನ್ನ ಕೈಯಲ್ಲಿತ್ತು .ರಕ್ತದ ಸಕ್ಕರೆ ಅಂಶ 400 mg % ಎಂದು ತೋರಿಸುತ್ತಿತ್ತು .(normal-....140mg% ಇರಬೇಕು ). ನಾನು.....'ಯಾಕೆ ಮೇಡಂ ....? ....ಶುಗರ್ ಇಷ್ಟು ಜಾಸ್ತಿಯಾಗಿದೆ?..' ಎಂದೆ. ಅದಕ್ಕವರು 'ಅಯ್ಯೋ ...,ಏನ್ಮಾಡೋದು ಡಾಕ್ಟ್ರೆ! ಮನೆಯವರು ಡೆಲ್ಲಿಯಿಂದ 'ಆಗ್ರಾ ಕಾ  ಪೇಟಾ' (ಒಂದು ರೀತಿಯ ಸಿಹಿ ತಿಂಡಿ)ತಂದಿದ್ದರು.......,ಚೆನ್ನಾಗಿ ತಿಂದುಬಿಟ್ಟೆ ' ಎಂದರು.ನನಗೆ ತಕ್ಷಣ ಸಿಟ್ಟು ಬಂದು 'ಏನು ಮೇಡಂ ..., ನಿಮಗೆ ಇಷ್ಟೆಲ್ಲಾ ತಿಳಿವಳಿಕೆ ಇದ್ದರೂ ನೀವು ಡಯಟ್ ಮಾಡೋಲ್ವಲ್ಲಾ......! ' ಎಂದೆ.ಅದಕ್ಕವರು ಸ್ವಲ್ಪವೂ ಸಿಟ್ಟಾಗದೆ ಇಂಗ್ಲೀಷಿನಲ್ಲಿ 'Doctor.....,are you a diabetic ?' ಎಂದರು. ಒಂದು ಕ್ಷಣ ನನಗೆ ಏನು ಹೇಳಬೇಕೋ ತೋಚದೆ ,ತಕ್ಷಣಕ್ಕೆ ಮಾತು ಹೊರಡಲಿಲ್ಲ. ಈ ಮುಂಚೆ ಯಾರೂ ನನ್ನನ್ನು ಈ ರೀತಿ ಕೇಳಿರಲಿಲ್ಲ. ಸ್ವಲ್ಪ ಸಾವರಿಸಿಕೊಂಡು 'no madame ,I am...not a diabetic ' ಎಂದೆ. ಅದಕ್ಕವರು 'That is the  reason you can't understand ,what is it to be a diabetic !'( ನಿಮಗೆ ಸಕ್ಕರೆ ಖಾಯಿಲೆ ಇಲ್ಲ,ಅದಕ್ಕೇಸಕ್ಕರೆ ಖಾಯಿಲೆಯವರ ಮಾನಸಿಕ ಸ್ಥಿತಿ ನಿಮಗೆ ಅರ್ಥವಾಗುವುದಿಲ್ಲಾ )'ಎಂದರು.  ನಾನು ಅವಾಕ್ಕಾದೆ...! ಹೌದಲ್ಲವೇ!ಅವರ ಮಾತಿನಲ್ಲಿ ಸತ್ಯವಿದೆ ಅನ್ನಿಸಿತು. ದೇಹದಿಂದ ಸಕ್ಕರೆ ಅಂಶ ಉಪಯೋಗವಾಗದೆ ಮೂತ್ರದಲ್ಲಿ ಸೋರಿ ಹೋಗುತ್ತಿರುವಾಗ ,ದೇಹಕ್ಕೆ ಸಿಹಿ ತಿನ್ನಬೇಕು ಎಂದು ಬಲವಾದ ಬಯಕೆ    (craving) ಉಂಟಾಗುತ್ತದೋ ...ಏನೋ ! ಪಾಪ ಅವರ ಕಷ್ಟ ಅವರಿಗೆ ! ಕೆಲವೊಮ್ಮೆ ಅವರಿಗೆ ಸಿಹಿ ತಿನ್ನುವ craving ಎಷ್ಟು ಉಂಟಾಗುತ್ತಿತ್ತೆಂದರೆ  ರಾತ್ರಿ ಎರಡು ಗಂಟೆಗೆ ಸ್ಕೂಟರ್ ನಲ್ಲಿ ಯಜಮಾನರನ್ನು ಕಳಿಸಿ ಸ್ವೀಟ್ ,ಅಂಗಡಿಯ ಬಾಗಿಲು ತೆರೆಸಿ , ಮೈಸೂರ್ ಪಾಕ್ ತರಿಸಿ,....ತಿಂದಿದ್ದರಂತೆ...!! ಆ ದಿನದಿಂದ ,ಸಕ್ಕರೆ ರೋಗಿಗಳ ಬಗ್ಗೆ ನನ್ನ ಸಹಾನುಭೂತಿ ಹೆಚ್ಚಾಗಿದೆ.ಅವರ  ಮಾನಸಿಕ ಸ್ಥಿತಿಯನ್ನು ಅರ್ಥ ಮಾಡಿಕೊಂಡು,ಕಷ್ಟಗಳನ್ನು ಸಮಾಧಾನದಿಂದ ಕೇಳಿ  ಸೂಕ್ತ  ಪರಿಹಾರ ನೀಡಲು ಪ್ರಯತ್ನಿಸುತ್ತಿದ್ದೇನೆ.2010 ರ ಜಾಗತಿಕ ಮಧುಮೇಹ ದಿನದ  ಧ್ಯೇಯದಂತೆ ಈ ಕ್ಷಣದಿಂದ ಮದುಮೇಹವನ್ನು ನಿಯಂತ್ರಿಸೋಣ.  ಎಲ್ಲರ ಬಾಳನ್ನೂ ಸಿಹಿಯಾಗಿಸೋಣ. ಎಲ್ಲರಿಗೂ ನನ್ನ ನಮಸ್ಕಾರ.

Thursday, November 11, 2010

"ಬಾಯಿಯಲ್ಲಿ .........ಅದೇನದು ...?"

ನಾನು ಬಳ್ಳಾರಿಯಲ್ಲಿ 1995 ರಲ್ಲಿ  E.N.T.ಮಾಡುತ್ತಿದ್ದಾಗ ,ನನ್ನ ಸಹಪಾಟಿ ಸುರೇಶನಿಗೆ ಸದಾ ಬಾಯಿಯಲ್ಲಿ ಗುಂಡು ಪಿನ್ನು ಕಚ್ಚಿಕೊಂಡಿರುವ ಅಭ್ಯಾಸವಿತ್ತು.ರಜನೀ ಕಾಂತ್ ಸಿನಿಮಾದಲ್ಲಿ ಬಾಯಲ್ಲಿ ಸಿಗರೇಟೊಂದನ್ನು ಕಚ್ಚಿಕೊಂಡು ಅತ್ತಿಂದಿತ್ತ ಹೊರಳಿಸಿ ಮಾತನಾಡುವಂತೆ ,ಬಾಯಲ್ಲಿ  ಗುಂಡು ಪಿನ್ನನ್ನು ಆಚೀಚೆ  ಹೊರಳಿಸುತ್ತಾ ವಿಚಿತ್ರ ದನಿಯಲ್ಲಿ ಮಾತಾಡುತ್ತಿದ್ದ.ನಾನು ಸಾಕಷ್ಟು ಸಲ ಎಚ್ಚರಿಸಿದರೂ ,ಪಿನ್ನು ಕಚ್ಚಿಕೊಂಡೇ' ಏನೂ ಆಗೋಲ್ಲಾ ಬಿಡಿಸಾರ್.ರೂಢಿ ಆಗಿದೆ.ನೀವು ಎಲ್ಲಾದಕ್ಕೂಸುಮ್ನೆ ಹೆದರುತ್ತೀರಾ'ಎಂದು ಹೇಳಿ ನನ್ನ ಬಾಯಿ ಮುಚ್ಚಿಸುತ್ತಿದ್ದ.ನಾನು ಹೇಳುವಷ್ಟು ಹೇಳಿ ಸುಮ್ಮನಾದೆ.

ಒಮ್ಮೆ ಹೀಗೇ ,ಬಾಯಲ್ಲಿ ಗುಂಡು ಪಿನ್ನು ಕಚ್ಚಿಕೊಂಡು ಮಾತಾಡುತ್ತಿದ್ದಾಗ ,ಪಿನ್ನು ನಾಲಿಗೆ ಮೇಲೆ ಕುಳಿತು ಉಸಿರಾಟದ ನಾಳದ ಕಡೆಗೆ ಪ್ರಯಾಣ ಬೆಳೆಸಿತು.ಯಾವುದೇ ಹೊರವಸ್ತು ಉಸಿರಾಟದ ನಾಳದೊಳಗೆ ಹೊಕ್ಕರೆ ,ಉಸಿರಾಟಕ್ಕೆ ವಿಪರೀತ ತೊಂದರೆ ಯಾಗುತ್ತದೆ.ಇದನ್ನು ವೈದ್ಯಕೀಯ ಭಾಷೆಯಲ್ಲಿ stridor ಎನ್ನುತ್ತೇವೆ.ನಮ್ಮ ಪ್ರೊಫೆಸರ್ ವಿಪರೀತ ಸಿಟ್ಟಿನ ಮನುಷ್ಯ.ವಿಷಯ ತಿಳಿದು ಸುರೇಶನಿಗೆ 'ಯಕ್ಕಾ ಮಕ್ಕಾ 'ಬೈದರು.ಮಿಕ್ಕ P.G.Students ಗೂ ಮುಖಕ್ಕೆ ಮಂಗಳಾರತಿ ಆಯಿತು.ಸುರೇಶನನ್ನು ಆಪರೇಶನ್ ಥೀಯೆಟರ್ ಗೆ ಕರೆದು ಕೊಂಡು ಹೋಗಿ ,Bronchoscopy  ಎನ್ನುವ proceedure ಮಾಡಿ ಪಿನ್ನು ತೆಗೆದಿದ್ದಾಯಿತು. ನಾವೆಲ್ಲಾ ಸುರೇಶನಿಗೆ ಆಗಾಗ 'ಪಿನ್ನು ಬೇಕಾ ಸುರೇಶಾ?,ಎಂದು  ಅವನನ್ನು  ರೇಗಿಸುವುದನ್ನು ಮಾತ್ರ ಬಿಡಲಿಲ್ಲ.

ಮತ್ತೆ ಕೆಲವರಿಗೆ ಪೆನ್ನಿನ ಕ್ಯಾಪನ್ನೋ ,ಕಡ್ಡಿಯನ್ನೋ, ಕಚ್ಚಿಕೊಂಡಿರುವ ಅಭ್ಯಾಸ ಸಾಮಾನ್ಯ.ಅನೇಕ ಸಲ ಬಸ್ಸಿನಲ್ಲಿ ಹೋಗುವಾಗ ಕಡ್ಡಿಯನ್ನು ಬಾಯಿಯಿಂದ ತೆಗೆಯಲು ಹೇಳಿ 'ನಿಮಗ್ಯಾಕ್ರೀ .......,ನಿಮ್ಮ ಕೆಲಸ ನೋಡ್ರೀ!'ಎಂದು ಬೈಸಿಕೊಂಡಿದ್ದೇನೆ.  ಹಾಳಾದ್ದು .......!  ನೋಡಿಕೊಂಡು ಸುಮ್ಮನೆ ಇರಲಾಗುವುದಿಲ್ಲವಲ್ಲಾ .......!   ನಾನು ದಾಂಡೇಲಿಯ ಬಳಿ ಅಂಬಿಕಾನಗರದಲ್ಲಿ ಕೆಲಸ ಮಾಡುತ್ತಿದ್ದಾಗ ಆರನೇ ತರಗತಿಯ ಹುಡುಗನೊಬ್ಬ ರೆನಾಲ್ಡ್ ಪೆನ್ನಿನ ಕ್ಯಾಪನ್ನು ಬಾಯಲ್ಲಿ ಇಟ್ಟು ಕೊಂಡಿದ್ದಾಗ  ಅಕಸ್ಮಾತ್ತಾಗಿ ಅದು ಒಳ ಹೋಗಿ ಉಸಿರಾಟದ ನಾಳದಲ್ಲಿ ಸಿಕ್ಕಿಕೊಂಡು ,ಆಸ್ಪತ್ರೆಗೆಸಾಗಿಸುವಷ್ಟರಲ್ಲಿಯೇ
ಸಾವನ್ನು ಅಪ್ಪಿದ ದಾರುಣ ಘಟನೆಯೊಂದು ನಡೆಯಿತು.

ಹೇಳುತ್ತಾ ಹೋದರೆ, ನೂರಾರು ಘಟನೆಗಳು ನೆನಪಿಗೆ ಬರುತ್ತವೆ.ಮತ್ತೆ ಎಂದಾದರೂ ಅವುಗಳನ್ನು ದಾಖಲಿಸುತ್ತೇನೆ. ಇವತ್ತಿಗೆ ಇಷ್ಟು ಸಾಕು.ಇಂತಹ ಅಭ್ಯಾಸವಿರುವ ಯಾರಾದರೂ ನಿಮಗೆ  ಕಂಡರೆ ಅದನ್ನು ಬಿಡುವಂತೆ ಅವರಿಗೆ  ಹೇಳುವುದನ್ನು  ಮಾತ್ರ ಮರೆಯಬೇಡಿ.ನಮಸ್ಕಾರ.

Tuesday, November 9, 2010

"ತಾಯಂದಿರೇ--ಮಕ್ಕಳ ಮೇಲೊಂದು ನಿಗಾ ಇಡಿ!"

ಬೆಳಿಗ್ಗೆ ಸುಮಾರು ಒಂಬತ್ತು ಗಂಟೆ.ಆಗ ತಾನೇ ಆಸ್ಪತ್ರೆಗೆ ಬಂದಿದ್ದೆ.ತಾಯಿಯೊಬ್ಬಳು ಗಾಭರಿಯಿಂದ ಅಳುತ್ತಾ ತನ್ನ ಒಂದುವರ್ಷದ ಮಗುವನ್ನು ಎತ್ತಿಕೊಂಡು ಓಡಿಬಂದು 'ನನ್ನ ಮಗುವನ್ನು ಉಳಿಸಿಕೊಡಿ ಡಾಕ್ಟ್ರೆ' ಎಂದು ಗೋಳಾಡಲು ಶುರುಮಾಡಿದಳು.ಮಗು ವಿಪರೀತ ವಾಂತಿ ಮಾಡುತ್ತಿತ್ತು .ವಾಂತಿ ರಕ್ತ ಮಿಶ್ರಿತ ವಾಗಿತ್ತು .ಅಳುವಿನ ಮಧ್ಯೆ ಆ ತಾಯಿ ತಾನು ಒಳಗೆ ಕೆಲಸ ಮಾಡುತ್ತಿದ್ದಳೆಂದೂ,--ಮಗು ಹೊರಗೆ ಹಾಲ್ ನಲ್ಲಿ ಆಡುತ್ತಿತ್ತೆಂದೂ --,ಇದ್ದಕ್ಕಿಂದಂತೆ ವಾಂತಿ ಮಾಡಲು ಶುರು ಮಾಡಿತೆಂದೂ ಹೇಳಿದಳು.ಮೊದಲಿಗೆ ಆರೋಗ್ಯವಾಗಿದ್ದ ಈಮಗು ಇದ್ದಕ್ಕಿದ್ದ ಹಾಗೇ,ಹೀಗೇಕೆ 
ರಕ್ತವಾಂತಿಮಾಡುತ್ತಿದೆಎಂದುನನಗೆತಕ್ಷಣಕ್ಕೆಅರ್ಥವಾಗಲಿಲ್ಲ.ಆತಾಯಿಯಗೋಳಾಟ,ಆಮಗುಕಷ್ಟಪಡುತ್ತಾ,ಕೆಮ್ಮುತ್ತಾ.
ರಕ್ತವಾಂತಿಮಾಡುತ್ತಿದ್ದದ್ದು!,ಹೇಗಾಯಿತು, ಏನಾಯಿತು!!?ಎಂದು ಕುತೂಹಲದಿಂದ ಸೇರಿದ ಜನ ಜಂಗುಳಿ ! ಇವೆಲ್ಲವೂ ಸೇರಿ ನನಗೆ ಒಂದು ಕ್ಷಣ ದಿಕ್ಕೇ ತೋಚದಂತಾಗಿ ,ಎಲ್ಲವೂ ಅಯೋಮಯ ವಾಗಿತ್ತು!

ರೋಗಿಯನ್ನು ವಾರ್ಡಿನಲ್ಲಿ ಮಲಗಿಸಿ------- ಪರೀಕ್ಷೆ ಮಾಡಿದರೆ ,ಏನಾದರೂ ತಿಳಿಯಬಹುದೇನೋ ಎಂದು ವಾರ್ಡಿಗೆ ಕರೆದುಕೊಂಡು ಹೋದೆ.ವಾರ್ಡಿನ ಬೆಡ್ಡಿನ ಮೇಲೆ ಮಲಗಿಸಿದ ಕೂಡಲೇ ಮಗು ಮತ್ತೊಮ್ಮೆ ರಕ್ತ ಮಿಶ್ರಿತ ವಾಂತಿ ಮಾಡಿತು.ಆದರೆ ಈ ಸಲ ವಾಂತಿಯ ಜೊತೆ ಚೂಪಾದ ಅಂಚು ಗಳಿದ್ದ ಮಾತ್ರೆ ಉಪಯೋಗಿಸಿ ಬಿಸಾಡಿದ್ದ ಅಲ್ಯೂಮಿನಿಯಂ ಫಾಯಿಲ್ (aluminium foil ) ಒಂದು ಹೊರ ಬಂತು-----! ಮಗುವಿನ ವಾಂತಿ ನಿಂತಿತು.ಸಮಸ್ಯೆಗೆ ತಕ್ಷಣವೇ ಪರಿಹಾರ ಒದಗಿಸಿದ  ಆ ದೇವನಿಗೆ ಮನಸ್ಸಿನಲ್ಲಿಯೇ ನೂರೆಂಟು ನಮನ ಸಲ್ಲಿಸಿದೆ.

ಒಂಬತ್ತು  ತಿಂಗಳಿಂದ, ಒಂದೂವರೆ -----ಎರಡು ವರ್ಷದ ಒಳಗಿನ ಮಕ್ಕಳಿಗೆ , ಸಿಕ್ಕಿದ್ದನ್ನು ಬಾಯಿಗೆ ಹಾಕಿಕೊಳ್ಳುವ ಅಭ್ಯಾಸ ಇರುತ್ತದೆ.ತಾಯಂದಿರು ಮೈಯೆಲ್ಲಾ ಕಣ್ಣಾಗಿ ಮಗುವನ್ನು ನೋಡಿಕೊಳ್ಳಬೇಕು.ಮಾತ್ರೆಗಳು,ಕ್ಯಾಪ್ಸೂಲ್ ಗಳನ್ನು  ಉಪಯೋಗಿಸಿದ ಮೇಲೆ ಅವುಗಳ ಮೇಲಿನ ಹೊದಿಕೆಯ ರೂಪದ ಅಲ್ಯೂಮಿನಿಯಮ್ ಫಾಯಿಲ್'ಗಳನ್ನು ಎಲ್ಲೆಂದರಲ್ಲಿ ಬಿಸಾಡುವುದನ್ನು ಮೊದಲು ಬಿಡಬೇಕು. ಮಕ್ಕಳಿರುವ ಮನೆಯಲ್ಲಿ ನೀವು ಎಷ್ಟು ಎಚ್ಚರದಿಂದ್ದರೂ ಕಮ್ಮಿಯೇ------------!