Wednesday, May 30, 2012

"ಧ್ಯಾನದ ನಿಜವಾದ ಪರಿಣಿತಿ!!!"

ಆಧ್ಯಾತ್ಮಿಕ ಆಸಕ್ತಿ ಇರುವ ಜಿಜ್ಞಾಸು ಒಬ್ಬನಿಗೆ ಸರಿಯಾದ "ಧ್ಯಾನ"ಮಾಡುವ ವಿಧಾನವನ್ನು ಕಲಿಯ ಬೇಕೆಂದು ಮನಸ್ಸಾಯಿತು.ಹಲವಾರು ಗುರುಗಳ ಬಳಿ ಹಲವಾರು ಧ್ಯಾನದ ಮಾರ್ಗಗಳನ್ನು ಕಲಿತರೂ,ಅವನಿಗೆ ಸಮಾಧಾನ ವಾಗಲಿಲ್ಲ.ಸೂಕ್ತ ಗುರುವನ್ನು ಹುಡುಕುತ್ತಾ, ಕಡೆಗೆ "ಜೆನ್"ಗುರುವೊಬ್ಬರ ಬಳಿ ಬಂದ.ಗುರು ಅವನಿಗೆ ಧ್ಯಾನದ ಅತೀ ಉತ್ತಮ ವಿಧಾನವನ್ನು ಹೇಳಿಕೊಡುವುದಾಗಿ ಒಪ್ಪಿಕೊಂಡ.ಅಲ್ಲಿಯ ತನಕ ಆಶ್ರಮದ ಕೆಲಸಗಳನ್ನು ಮಾಡುತ್ತಿರಬೇಕೆಂದು ತಿಳಿಸಿದ.ಆದರೆ ಹಲವಾರು ತಿಂಗಳುಗಳೇ ಕಳೆದರೂ ಗುರು ಅವನಿಗೆ ಧ್ಯಾನದ ಬಗ್ಗೆ ಏನನ್ನೂ ತಿಳಿಸಲಿಲ್ಲ.ಕಡೆಗೆ ಶಿಷ್ಯನೇ ತಾನು ಅಲ್ಲಿಗೆ ಬಂದ ವಿಷಯದ ಬಗ್ಗೆ ಪ್ರಸ್ತಾಪಿಸಿದ.ಗುರು"ಹೌದಲ್ಲವೇ!!ಹಾಗಿದ್ದರೆ ನಾಳೆಯಿಂದ 'ಧ್ಯಾನ'ದ ಬಗ್ಗೆ ತಿಳಿಯಲು ತಯಾರಾಗಿರು"ಎಂದ.ಮಾರನೇ ದಿನ ಶಿಷ್ಯ ಏನೋ ಕೆಲಸ ಮಾಡುತ್ತಿದ್ದಾಗ ಗುರು ಹಿಂದಿನಿಂದ ಸದ್ದಾಗದಂತೆ ಬಂದು ಒಂದು ದಪ್ಪ ದೊಣ್ಣೆಯಿಂದ ಜೋರಾಗಿ ಪೆಟ್ಟು ಕೊಟ್ಟ. ಹಟಾತ್ತನೆ ನಡೆದ ಧಾಳಿಯಿಂದ ಶಿಷ್ಯ ಗಾಭರಿಗೊಂಡ.ಅದಕ್ಕೆಗುರು ಹೇಳಿದ "ಇದು ಧ್ಯಾನದ ಮೊದಲ ಹಂತ.ನೀನು ಸದಾ ಎಚ್ಚರದಲ್ಲಿರಬೇಕು.ನಾನು ಯಾವಾಗ ಬೇಕಾದರೂ ಬಂದು ಪೆಟ್ಟು ಕೊಡಬಹುದು.ಸದಾ ಎಚ್ಚರದಲ್ಲಿದ್ದರೆ ನೀನು ಪೆಟ್ಟಿನಿಂದ ತಪ್ಪಿಸಿಕೊಳ್ಳಬಹುದು".ಹಲವಾರು ಸಲ ಪೆಟ್ಟು ತಿಂದ ಮೇಲೆ ಶಿಷ್ಯನಿಗೆ ಗುರುವಿನ ಪೆಟ್ಟಿನಿಂದ ತಪ್ಪಿಸಿಕೊಳ್ಳುವ ಪರಿಣಿತಿ ಬಂತು. ನಂತರ ಗುರು "ನೀನೀಗ ಧ್ಯಾನದ ಎರಡನೇ ಹಂತ ಕಲಿಯಲು ಯೋಗ್ಯನಾಗಿದ್ದೀಯ.ನೀನು ನಿದ್ದೆ ಮಾಡುವಾಗ ಬಂದು ಪೆಟ್ಟು ಕೊಡುತ್ತೇನೆ.ನೀನು ನಿದ್ದೆಯಲ್ಲೂ 'ಧ್ಯಾನಸ್ಥ' ಎಂದರೆ ಎಚ್ಚರದ ಸ್ಥಿತಿ ಯಲ್ಲಿರಬೇಕು"ಎಂದ.ಹಲವಾರು ಸಲ ನಿದ್ದೆಯಲ್ಲಿದ್ದಾಗ ಪೆಟ್ಟು ತಿಂದ ಮೇಲೆ ಶಿಷ್ಯನಿಗೆ ಅದರಲ್ಲೂ ಪರಿಣಿತಿ ಬಂತು.ನಂತರ ಧ್ಯಾನದ ಮೂರನೇ ಹಂತದಲ್ಲಿ ನಿಜವಾದ ಖಡ್ಗ ವನ್ನು ಉಪಯೋಗಿಸುವುದಾಗಿಯೂ ,ಸ್ವಲ್ಪ ಎಚ್ಚರ ತಪ್ಪಿದರೂ ಅದು ಅವನ ಪ್ರಾಣಕ್ಕೇ ಕುತ್ತು ತರಬಹುದೆಂದೂ ಗುರು ಹೇಳಿದ.ಈ ಪರೀಕ್ಷೆಯಲ್ಲಿ ಒಮ್ಮೆಯೂ ಎಚ್ಚರ ತಪ್ಪುವಂತಿರಲಿಲ್ಲ!!!ಶಿಷ್ಯ ಈ ಕೊನೆಯ ಹಂತದ ಕಠಿಣ ಪರೀಕ್ಷೆಯಲ್ಲೂ ಗೆದ್ದ.ಗುರುವಿಗೆ ತುಂಬಾ ಸಂತೋಷವಾಯಿತು.ಶಿಷ್ಯನಿಗೆ"ಈಗ ನೀನು ಧ್ಯಾನದ ಎಲ್ಲಾ ಹಂತಗಳಲ್ಲೂ ನಿಜವಾದ ಪರಿಣಿತಿ ಪಡೆದಿದ್ದೀಯ.ನಾಳೆ ನೀನು ಊರಿಗೆ ಹೊರಡಬಹುದು"ಎಂದ. ಶಿಷ್ಯನಿಗೆ "ಗುರುವು ತನ್ನನ್ನು ಎಂತೆಂತಹ ಕಠಿಣ ಪರೀಕ್ಷಗಳಿಗೆ ಒಡ್ಡಿದನಲ್ಲಾ!!!ತಾನೊಮ್ಮೆ ಇವನಿಗೊಂದು ಪೆಟ್ಟು ಕೊಟ್ಟು ಪರೀಕ್ಷೆ ಮಾಡಬೇಕು"ಎನ್ನುವ ಆಲೋಚನೆ ಮನಸ್ಸಿನಲ್ಲಿ ಬಂತು.ಅವನ ಆಲೋಚನೆ ಯನ್ನು ತಕ್ಷಣವೇ ಗ್ರಹಿಸಿದ ಗುರು "ನೀನೇನೂ ನನಗೆ ಪೆಟ್ಟು ಕೊಟ್ಟು ಪರೀಕ್ಷೆ ಮಾಡುವುದು ಬೇಡ.ನಾನು ಸದಾ ಎಷ್ಟು ಎಚ್ಚರದಲ್ಲಿ ಇರುತ್ತೇನೆ ಎಂದರೆ,ಬೇರೆಯವರ ಆಲೋಚನೆಗಳೂ ನನಗೆ ತಿಳಿಯುತ್ತವೆ"ಎಂದ!!! ಶಿಷ್ಯನಿಗೆ ಮಾತೇ ಹೊರಡಲಿಲ್ಲ !!! ತಾನಿನ್ನೂ ಸಾಧಿಸುವುದು ಬಹಳಷ್ಟಿದೆ ಎಂದುಕೊಂಡು ಗುರುವಿಗೆ ನಮಿಸಿ ತನ್ನೂರಿಗೆ ಹೊರಟ.

18 comments:

  1. ಇದೇ ತರದ ಜೆನ್ ಕಥೆ ಓದಿದ್ದೆ. ಅಲ್ಲಿ ಶಿಷ್ಯ ಅದ್ಯಾವುದೋ ಮಾರ್ಷಲ್ ಆರ್ಟ್ ಕಲೀಲಿಕ್ಕೆ ಗುರು ಇದ್ದಲ್ಲಿಗೆ ಹೋಗ್ತಾನೆ.

    ReplyDelete
  2. ಸುಬ್ರಮಣ್ಯರವರೇ;ಮಾರ್ಶಿಯಲ್ಆರ್ಟ್ ಕಲಿಕೆಯಲ್ಲೂ ಧ್ಯಾನಕ್ಕೆ ಹೆಚ್ಚಿನ ಮಹತ್ವ ಕೊಡುತ್ತಾರೆ.ಇಲ್ಲಿ 'ಧ್ಯಾನ'ವೆಂದರೆ ಸಂಪೂರ್ಣ ಎಚ್ಚರದ ಸ್ಥಿತಿ. ಎರಡೂ ಜೆನ್ ಕಥೆಗಳ ಆಶಯ ಒಂದೇ ಅನಿಸುತ್ತದೆ.ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.

    ReplyDelete
  3. ಧ್ಯಾನವೆಂದರೆ ಏಕಾಗ್ರತೆ ಮತ್ತು ಅದರ ಸದ್ವಿನಿಯೋಗ ಎಂದು ಆ ಗುರುವು ಶಿಷ್ಯನಿಗೆ ಅದ್ಭುತವಾಗಿ ತೋರಿಸಿಕೊಟ್ಟರು.

    ಒಳ್ಳೆಯ ಕಥೆಯನ್ನು ಹೊತ್ತು ತಂದ ನಿಮಗೂ ಧನ್ಯವಾದಗಳು.

    ReplyDelete
  4. ಪ್ರತಿಕ್ರಿಯೆಗೆ ಧನ್ಯವಾದಗಳು ಬದರಿ.ಬರುತ್ತಿರಿ.ನಮಸ್ಕಾರ.

    ReplyDelete
  5. [ನೀನೇನೂ ನನಗೆ ಪೆಟ್ಟು ಕೊಟ್ಟು ಪರೀಕ್ಷೆ ಮಾಡುವುದು ಬೇಡ.ನಾನು ಸದಾ ಎಷ್ಟು ಎಚ್ಚರದಲ್ಲಿ ಇರುತ್ತೇನೆ] ಈ ಸಾಲು ಓದುವಾಗ ರೋಮಾಂಚನ ವಾಯ್ತು. ಯಾವಾಗಲೂ ಎಚ್ಛರದಲ್ಲಿರುವುದಕ್ಕೆ ಬಲು ಸಾಧನೆ ಮಾಡಬೇಕು.

    ReplyDelete
  6. ಹರಿಹರಪುರ ಶ್ರೀಧರ್;ಬಹಳ ದಿನಗಳ ಮೇಲೆ ಬ್ಲಾಗಿಗೆ ಬಂದಿದ್ದೀರಿ.ಬ್ಲಾಗಿಗೆ ಸ್ವಾಗತ.ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  7. ಡಾಕ್ಟರ್ ಸಾರ್ ಅದ್ಭತ ಸನ್ನಿವೇಶ ಇದನ್ನು ಪ್ರತಿಯೊಬ್ಬರೂ ಗಮನಿಸಿ ಜೀವನದಲ್ಲಿ ಅಳವಡಿಸಿ ಕೊಳ್ಳಬೇಕೂ, ಗುರು ಶಿಷ್ಯರ ಸಂಭಂದದಲ್ಲಿ ಇಂತಹ ಘಟನೆಗಳು ಒಳ್ಳೆಯ ನೀತಿ ಪಾಠ ಕಲಿಸುತ್ತವೆ. ಒಳ್ಳೆಯ ಲೇಖನ ಸಾರ್ ಥ್ಯಾಂಕ್ಸ್.
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
    Replies
    1. ಬಾಲೂ ಸರ್;ಬಹಳ ದಿನಗಳ ನಂತರ ನಿಮ್ಮನ್ನು ಬ್ಲಾಗಿನಲ್ಲಿ ಕಂಡು ಸಂತಸವಾಗುತ್ತಿದೆ.ಬ್ಲಾಗ್ ಜೀವಂತ ವಾಗಿರಲು ನಿಮ್ಮೆಲ್ಲರ ಪ್ರೋತ್ಸಾಹಕ ನುಡಿಗಳು ಅವಶ್ಯಕ.ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

      Delete
  8. ಸೂಪರ್ರಾಗಿದೆ. ಗುರು ಎಲ್ಲಾ ಪಾಠಗಳನ್ನೂ ಶಿಷ್ಯನಿಗೆ ಹೇಳಿ ಕೊಡುವುದಿಲ್ಲವಂತೆ. ಹೇಳಿ ಕೊಟ್ಟರೆ ಅದನ್ನು ಉಪಯೋಗಿಸಿ ಶಿಷ್ಯ ಗುರುವಿಗೇ ತಿರುಮಂತ್ರ ಹಾಕಬಹುದು ಎಂದು..

    ಒಂದು ಬೆಕ್ಕು, ಚಿರತೆಯ ಕಥೆ ನೆನಪಾಯಿತು. ಚಿರತೆ ಬೆಕ್ಕಿನ ಹತ್ತಿರ ಮರ ಏರೋದನ್ನ ಕಲಿಯಲು ಬಂದಿತಂತೆ. ಬೆಕ್ಕು ಹೇಳಿಕೊಟ್ಟ ಮೇಲೆ ಚಿರತೆ ಬೆಕ್ಕನ್ನೇ ತಿನ್ನಲು ಬಂತಂತೆ. ಬೆಕ್ಕು ಚಿರತೆಗಿಂದ ವೇಗವಾಗಿ ಓಡಲು ಸಾಧ್ಯವೇ ? ಹಾಗಾಗಿ ಮರ ಹತ್ತಿತಂತೆ. ಚಿರತೆಯೂ ಮರ ಹತ್ತಿತು. ಬೆಕ್ಕು ಮತ್ತೊಂದು ಕೊಂಬೆಯಿಂದ ಸರಸರನೆ ಮರ ಇಳಿಯಿತು. ಇಳಿದು ಪೆಚ್ಚಾಗಿ ಮರದ ಮೇಲೆ ಕುಳಿತಿದ್ದ ಚಿರತೆಗೆ ಹೇಳಿತಂತೆ.. ಇದಕ್ಕೇ ನಿನಗೆ ಮರ ಇಳಿಯುವುದು ಹೇಳಿ ಕೊಟ್ಟಿರಲಿಲ್ಲ. ಗುರು ಒಂದು ಪಾಠವನ್ನಾದರೂ ಶಿಷ್ಯನಿಗೆ ಹೇಳಿ ಕೊಡದೇ ತನ್ನ ಆತ್ಮರಕ್ಷಣೆಗಾಗಿ ಇಟ್ಟುಕೊಂಡೇ ಇರುತ್ತಾನೆ ಅಂದು..

    ReplyDelete
  9. ಪ್ರಶಸ್ತಿಯವರೇ;ನಿಮ್ಮಕಥೆಕೂಡ ಸಮಯೋಚಿತವಾಗಿದೆ.ಪ್ರತಿಕ್ರಿಯೆಗೆ ಧನ್ಯವಾದಗಳು.ಬ್ಲಾಗಿಗೆ ಬರುತ್ತಿರಿ.ನಮಸ್ಕಾರ.

    ReplyDelete
  10. dhanyavadagaLu Dr. Krishna Murthy
    'Tales told by mystics' pustakadalli intaha halavaaru kategaLive. nanagiShTavaadudannu naanoo haakuttEne.
    Blog ge bandu pratrikriyisidakke dhanyavadagaLu
    :-)
    malathi S

    ReplyDelete
  11. ಮಾಲತಿ ಮೇಡಂ;ಪ್ರತಿಕ್ರಿಯೆಗೆ ಧನ್ಯವಾದಗಳು.ಬ್ಲಾಗ್ ಪೈರು ಒಣಗುತ್ತಿದೆ ಎನ್ನುವ ಕೂಗು ಎಲ್ಲೆಡೆ ಕೇಳಿಬರುತ್ತಿದೆ.ಅದಕ್ಕೆ ನೀರೆರೆದು ಪೋಷಿಸುವ ಕೆಲಸ ನಮ್ಮೆಲ್ಲರದು.ಎಷ್ಟೇ ಕೆಲಸವಿದ್ದರೂ ಸಾಧ್ಯವಾದಷ್ಟು ಬ್ಲಾಗುಗಳಿಗೆ ಹೋಗಿ ಪ್ರತಿಕ್ರಿಯೆ ನೀಡಲು ನಿರ್ಧರಿಸಿದ್ದೇನೆ. ನೀವೂ ಬರುತ್ತಿರಿ.ನಮಸ್ಕಾರ.

    ReplyDelete
  12. ಸರ್, ಚೆನ್ನಾಗಿದೆ.

    ReplyDelete
    Replies
    1. ಭಟ್ ಸರ್;ಧನ್ಯವಾದಗಳು.ಬೆಂಗಳೂರಿಗೆ ಯಾವಾಗ ಬರುತ್ತೀರಿ?

      Delete
  13. ಧ್ಯಾನದಲ್ಲಿ ಎಚ್ಚರದ ಸ್ಥಿತಿಯ ಬಗ್ಗೆ ಉತ್ತಮ ಕಥೆಯನ್ನು ನಿರೂಪಿಸಿದ್ದಕ್ಕೆ ಧನ್ಯವಾದಗಳು ಸರ್.

    ಅನ೦ತ್

    ReplyDelete
  14. ಅನಂತ್ ಸರ್;ಇದೊಂದು ಜೆನ್ ಕಥೆ.ಓಶೋ ಅವರ ಪ್ರವಚನ ಒಂದರಲ್ಲಿ ಕೇಳಿದ್ದು.ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete

Note: Only a member of this blog may post a comment.