Sunday, July 29, 2012
"ಡಯಾಬಿಟಿಸ್ ಇದೆಯೇ? ಕೊಬ್ಬು ಕಮ್ಮಿ ಮಾಡಿ !!!"
ಮೊನ್ನೆ ಮದುವೆಯೊಂದಕ್ಕೆ ಹೋಗಿದ್ದೆ.ಧಾರೆ ಮಹೂರ್ತ ಹತ್ತಕ್ಕೆ ಮುಗಿದು,ಊಟದ ತನಕ ಸಾಕಷ್ಟು ಸಮಯವಿದ್ದುದರಿಂದ ಪರಿಚಯಸ್ಥರ ಜೊತೆ ಹರಟೆ ಕಾರ್ಯಕ್ರಮ ಶುರುವಾಯಿತು.ಎಲ್ಲರೂ ಮಧ್ಯವಯಸ್ಕರೇ ಆದ್ದರಿಂದ ಸಹಜವಾಗಿ ಎಲ್ಲರ ಹರಟೆಯ ವಿಷಯವೂ ಬೀಪಿ,ಡಯಾಬಿಟಿಸ್ಸೇ !!!ಈಗೀಗ ಬೀಪಿ,ಶುಗರ್ರು ಇಲ್ಲದವರೇ ಅಪರೂಪವೇನೋ ಎನ್ನುವಂತಾಗಿ ಬಿಟ್ಟಿದೆ !ಇಲ್ಲೊಂದು ಮುಖ್ಯ ವಿಷಯವನ್ನು ನಿಮಗೆ ಹೇಳಲೇ ಬೇಕೆಂಬ ಉದ್ದೇಶದಿಂದ ಈ ಲೇಖನ ಬರೆಯುತ್ತಿದ್ದೇನೆ.ವಯಸ್ಕರಲ್ಲಿ ಬರುವ ಸಕ್ಕರೆ ಖಾಯಿಲೆ ಅಥವಾ ಟೈಪ್ 2 ಡಯಾಬಿಟಿಸ್ ನಲ್ಲಿ ಇನ್ಸುಲಿನ್ ಕೊರತೆಗಿಂತ ಹೆಚ್ಚಾಗಿ ,ಇರುವ ಇನ್ಸುಲಿನ್ ಸಮರ್ಪಕವಾಗಿ ಕೆಲಸ ಮಾಡುತ್ತಿರುವುದಿಲ್ಲ.ಇದಕ್ಕೆ INSULIN RESISTANCE ಎನ್ನುತ್ತಾರೆ.ಇದು ಸಾಮಾನ್ಯವಾಗಿ ಮಧ್ಯವಯಸ್ಕ,ಸ್ಥೂಲ ಕಾಯ ಡಯಾಬಿಟಿಸ್ ರೋಗಿಗಳಲ್ಲಿ ಹೆಚ್ಚು.ಮದುವೆ ಮನೆಯಲ್ಲಿ ಇವರನ್ನುಗಮನಿಸಿದರೆ ,ನನಗೆ 'ಶುಗರ್ ಲೆಸ್'ಕಾಫಿ ಎನ್ನುವ ಇವರು , ಊಟದಲ್ಲಿ ಎರಡೆರಡು ಒಬ್ಬಟ್ಟಿಗೆ ತುಪ್ಪ ಹಾಕಿಸಿಕೊಂಡು ಹೊಡೆಯುತ್ತಾರೆ!ಚಿರೋಟಿಗೆ ಬೂರಿಸಕ್ಕರೆ,ಮೇಲೆ ಬಾದಾಮಿ ಹಾಲು!ಹೆಚ್ಚೇನಿಲ್ಲಾ.........ಎರಡೇ ಎರಡು ಅಲೂ ಬೋಂಡಾ! ಇಷ್ಟೆಲ್ಲಾ ತಿಂದು ಮೇಲೆ ಎರಡೆರಡು ಕಪ್ ಪಾಯಸ !ಅಪರೂಪಕ್ಕೆ ತಿಂದರೆ ಹೋಗಲಿ ಎನ್ನ ಬಹುದು.ಬೆಂಗಳೂರಿನಂತಹ ನಗರಗಳಲ್ಲಿ ವಾರಕ್ಕೊಂದು ಮದುವೆ ಮುಂಜಿ ಕಾರ್ಯಕ್ರಮ ನಡೆಯುತ್ತಲೇ ಇರುತ್ತವೆ.ಇಂತಹವರು 'ಏನು ಮಾಡೋದು ಸರ್ ಏನು ಮಾತ್ರೆ ತೆಗೆದು ಕೊಂಡರೂ ,ಎಷ್ಟು ಡಯಟ್ ಕಂಟ್ರೋಲ್ ಮಾಡಿದರೂ ಶುಗರ್ರು ಇನ್ನೂರ ಐವತ್ತಕಿಂತ ಕಮ್ಮೀನೇ ಆಗೋಲ್ಲಾ ಅಂತಾರೆ!' ಇಂತಹವರು ತಮ್ಮ ಆಹಾರದಲ್ಲಿ ಕೊಬ್ಬಿನ ಅಂಶವನ್ನು ಆದಷ್ಟೂ ಕಮ್ಮಿ ಮಾಡಲೇ ಬೇಕು.ಒಂದು ಗ್ರ್ಯಾಂ ಪಿಷ್ಟದಿಂದ (carbohydrate) 4 ಕ್ಯಾಲೋರಿ ಎನರ್ಜಿ ಉತ್ಪತ್ತಿಯಾದರೆ,ಒಂದು ಗ್ರ್ಯಾಂ ಕೊಬ್ಬು (fat) 9 ಕ್ಯಾಲೋರಿ ಎನರ್ಜಿ ಕೊಡುತ್ತದೆ.ವ್ಯಯವಾಗದ ಎನರ್ಜಿ ದೇಹದ ಎಲ್ಲಾ ಕಡೆ (ಮುಖ್ಯವಾಗಿ ಮಾಂಸ ಖಂಡ ಗಳಲ್ಲಿ) ಸೇರಿ insulin resistance ಗೆ ಕಾರಣವಾಗುತ್ತದೆ.ಆದ್ದರಿಂದ ತೂಕ ಹೆಚ್ಚಿರುವ ಡಯಾಬಿಟಿಸ್ ರೋಗಿಗಳು ಮುಖ್ಯವಾಗಿ ತಮ್ಮ ಆಹಾರದಲ್ಲಿನ ಕೊಬ್ಬಿನ ಅಂಶವನ್ನು ಕಮ್ಮಿ ಮಾಡಲೇ ಬೇಕು .ದೇಹದ ಮಾಂಸ ಖಂಡಗಳು ಕೆಲಸ ಮಾಡಿದರೆ ಅವುಗಳಲ್ಲಿ ಕೊಬ್ಬಿನ ಅಂಶ ಹೆಚ್ಚು ಸೇರುವುದಿಲ್ಲ.ಆದ್ದರಿಂದ ದಿನಕ್ಕೆ ಅರ್ಧ ತಾಸಿನಿಂದ ಒಂದು ತಾಸಿನ ನಡಿಗೆ ಬೇಕೇ ಬೇಕು.ನಡಿಗೆಯನ್ನು ನಿಲ್ಲಿಸಲೇ ಬಾರದು.ಇವರು ಔಷಧಿಗಳನ್ನು ಸರಿಯಾಗಿ ತೆಗೆದುಕೊಂಡು ,ಕೊಬ್ಬಿನ ಅಂಶ ಕಮ್ಮಿ ಮಾಡಿ ,ನಡೆ ಮುಂದೆ ,ನಡೆ ಮುಂದೆ ಎಂದು ನಡಿಗೆಯನ್ನು ತಮ್ಮ ದಿನ ನಿತ್ಯದ ಜೀವನದಲ್ಲಿ ಅಳವಡಿಸಿ ಕೊಂಡರೆ ,ಯಾವುದೇ ತೊಂದರೆ ಇಲ್ಲದೆ ಎಲ್ಲರಂತೆ ಸುಖವಾಗಿ ಬಾಳಬಹುದು. ಶುಭಮಸ್ತು.ಸರ್ವೇ ಜನಾಹ ಸುಖಿನೋ ಭವಂತು!ನಮಸ್ಕಾರ.
Friday, July 20, 2012
"ಅಬ್ಬಾ.......!!! ಆ ಕ್ಷಣಗಳು.......!!! "
ಜೀವನದಲ್ಲಿ ಅಂತಹ ಕ್ಷಣಗಳು ನಮ್ಮ ಶತ್ರುವಿಗೂ ಬರಬಾರದು !!!ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ನಡೆದ ಘಟನೆಯನ್ನು ನೆನೆಸಿಕೊಂಡರೆ,ಈಗಲೂ ನನ್ನ ಕೈಕಾಲುಗಳು ತಣ್ಣಗಾಗುತ್ತವೆ!!!ಬೆಂಗಳೂರಿನಿಂದ ರಾಯಚೂರಿಗೆ ಸಂಸಾರ ಸಮೇತನಾಗಿ ಟ್ರೈನಿನಲ್ಲಿ ಹೊರಟಿದ್ದೆ.ಸಂಜೆ ಸುಮಾರು ಐದು ಗಂಟೆಯ ಸಮಯ.ನನ್ನ ಹೆಂಡತಿಯ ಕಂಕುಳಲ್ಲಿ ಒಂದು ವರ್ಷದ ಮಗಳು,ನನ್ನ ಕೈ ಹಿಡಿದ ಐದು ವರ್ಷದ ಮಗ,ಒಂದು ರಾಶಿ ಮನೆ ಸಾಮಾನು.ಬೆಂಗಳೂರು ಸಿಟಿ ರೈಲ್ವೇ ಸ್ಟೇಷನ್ನಿನ ಟ್ಯಾಕ್ಸಿ ಸ್ಟ್ಯಾಂಡ್ ನಲ್ಲಿ ಇಳಿದ ತಕ್ಷಣ ,ಸಕ್ಕರೆ ಪಾಕಕ್ಕೆ ನೊಣ ಮುತ್ತುವಂತೆ ಕೂಲಿಗಳ ಒಂದು ದೊಡ್ಡ ಹಿಂಡೇ ನಮ್ಮನ್ನು ಮುತ್ತಿಕೊಂಡರು.ಕೂಲಿ ಮಾತಾಡುವ ಮೊದಲೇ,ಮೂರು ನಾಲಕ್ಕು ಜನ ಸಾಮಾನುಗಳನ್ನು ಹೊತ್ತುಕೊಂಡು 'ಯಾವ ಬೋಗಿ ಸರ್'ಎನ್ನುತ್ತಾ ಹೊರಟೀ ಬಿಟ್ಟರು!!ನಂತರ ಅವರು ಮಾಡುವ ರಗಳೆಗೆ ಹೆದರಿ,ಹರ ಸಾಹಸ ಮಾಡಿ ಅವರಿಂದ ಬಿಡಿಸಿಕೊಂಡು ಒಬ್ಬ ಕೂಲಿಯನ್ನು ಗೊತ್ತು
ಮಾಡಿದೆ.ಹೆಂಡತಿಯನ್ನು ಮಗಳೊಂದಿಗೆ ಅರ್ಧ ಸಾಮಾನುಗಳ ಬಳಿ ಅಲ್ಲೇ ಬಿಟ್ಟು ,ಇನ್ನರ್ಧ ಸಾಮಾನುಗಳನ್ನು ತಲೆಯ ಮೇಲೆ ಹೊತ್ತ ಕೂಲಿಯವನ ಹಿಂದೆ,ಮಗನ ಕೈ ಹಿಡಿದು ಹೊರಟೆ.ಟ್ರೈನ್ ಆಗಲೇ ಪ್ಲ್ಯಾಟ್ ಫಾರಂನಲ್ಲಿ ಬಂದು ನಿಂತಿತ್ತು .ನಮಗೆ ರಿಸರ್ವ್ ಆಗಿದ್ದ ಬೋಗಿಯನ್ನು ಹುಡುಕಿ ,ಚಾರ್ಟ್ ನಲ್ಲಿ ನಮ್ಮಬರ್ತ್ ನಂಬರ್ ನೋಡಿ ,ಅಲ್ಲಿ ನಮ್ಮ ಸಾಮಾನುಗಳನ್ನು ಇಟ್ಟು,ಮಗನನ್ನು ಅಲ್ಲೇ ಕೂರಿಸಿ "ಅಮ್ಮನನ್ನೂ ,ಪಾಪುವನ್ನೂ ಕರೆದುಕೊಂಡು ಮಿಕ್ಕ ಸಾಮನುಗಳನ್ನು ತರುತ್ತೇನೆ ,ಇಲ್ಲೇ ಕೂತಿರು ಪುಟ್ಟಾ"ಎಂದೆ."ಹೂಂ"ಎಂದು ತಲೆಯಾಡಿಸಿದ ಮಗರಾಯ.ಪಕ್ಕದಲ್ಲಿದ್ದ ಪ್ರಯಾಣಿಕರಿಗೆ ಸ್ವಲ್ಪ ನೋಡಿಕೊಂಡಿರುವಂತೆ ಹೇಳಿ,ಮತ್ತೆ ಕೂಲಿಯವನೊಂದಿಗೆ ಟ್ಯಾಕ್ಸಿ ಸ್ಟ್ಯಾಂಡ್ ಬಳಿ ಹೋದೆ.ನನ್ನ ಹೆಂಡತಿ"ಮಗ ಎಲ್ಲಿ"ಎಂದಳು."ಟ್ರೈನಿನಲ್ಲಿ ಸಾಮಾನುಗಳ ಜೊತೆ ಕೂರಿಸಿ ಬಂದಿದ್ದೇನೆ,ಪಕ್ಕದವರಿಗೆ ಹೇಳಿದ್ದೇನೆ,ಕೂತಿರುತ್ತಾನೆ ಬಾ "ಎಂದೆ."ರೀ!ನಿಮಗೆ ಅಷ್ಟೂ ಗೊತ್ತಾಗೊದಿಲ್ಲವಾ !?ಅವನೋಬ್ಬನನ್ನೇ ಯಾಕೆ ಕೂರಿಸಿ ಬಂದಿರಿ?"ಎಂದು ತರಾಟೆಗೆ ತೆಗೆದುಕೊಂಡಳು.ನನಗೆ ಒಂದು ಕ್ಷಣ ಎದೆಯಲ್ಲಿ ಅವಲಕ್ಕಿ ಕುಟ್ಟಿ ದಂತಾಯಿತು.ಆದರೂ ಅದನ್ನು ತೋರಿಸಿಕೊಳ್ಳದೇ,ಧೈರ್ಯ ತಂದುಕೊಂಡು "ಏನೂ ಆಗೋಲ್ಲಾ.....,ನೀನು ಸುಮ್ನೆ ಇಲ್ಲದಿರೋದೆಲ್ಲಾ ಯೋಚನೆ ಮಾಡಬೇಡ"ಎಂದು ದಬಾಯಿಸಿ,ಇನ್ನುಳಿದ ಸಾಮಾನುಗಳೊಂದಿಗೆ ನನ್ನ ಬೋಗಿಗೆ ಬಂದೆ.ಸಾಮಾನುಗಳಿವೆ....,ಮಗ ಇಲ್ಲ!!!!ಪಕ್ಕದವರನ್ನು ಕೇಳಿದರೆ "ಇಲ್ಲೇ ಇದ್ದನಲ್ಲಾ!!,ಅರೇ ....!!"ಎಂದು ಆಚೀಚೆ ನೋಡ ತೊಡಗಿದರು!!ನನ್ನ ಎದೆ ಧಸಕ್ ಎಂದಿತು.ಮೈ ಬೆವರೊಡೆಯಿತು.ಕೈ ,ಕಾಲು ತಣ್ಣಗಾಗಿ,ಹೊಟ್ಟೆಯಲ್ಲಿ ವಿಚಿತ್ರ ತಳಮಳ!! ಹೆಂಡತಿ ದೊಡ್ಡ ದನಿಯಲ್ಲಿ ಗೊಳೋ ಎಂದು ಅಳತೊಡಗಿದಳು.ಕಂಕುಳಲ್ಲಿದ್ದ ಒಂದು ವರ್ಷದ ಮಗಳು ಏನೋ ಗಡಿಬಿಯಾಗಿದೆ ಎಂದು ತಿಳಿದು,ಗಾಭರಿಯಿಂದ ತಾನೂ ಜೋರಾಗಿ ಅಳಲು ಶುರು ಮಾಡಿದಳು.ಆಗ ಸಮಯ 5.30.ಇನ್ನು ಹದಿನೈದು ನಿಮಿಷದಲ್ಲಿ ಟ್ರೈನ್ ಹೊರಡುತ್ತೆ!!ನನ್ನ ಬಳಿ ಇರುವುದು ಹದಿನೈದೇ ನಿಮಿಷ!!ಅಷ್ಟರಲ್ಲಿ ,ಆ ದೊಂಬಿಯಲ್ಲಿ ,ಕಳೆದು ಹೋದ ಮಗನನ್ನು ಎಲ್ಲಿ ಹುಡುಕುವುದು!!?ಹೇಗೆ ಹುಡುಕುವುದು?ಮೊದಲು ಟ್ರೈನಿನ ಮುಂಭಾಗಕ್ಕೆ ಓಡಿ,ಎಂಜಿನ್ ಡ್ರೈವರ್ ಗೆ ನಡೆದ ವಿಷಯ ಹೇಳಿದೆ.ಅವನು "ಗಾರ್ಡ್ ಗೆ ವಿಷಯ ತಿಳಿಸಿ"ಎಂದ.ಮತ್ತೆ ಹುಚ್ಚನಂತೆ ಟ್ರೈನ್ ನ ಹಿಂಭಾಗಕ್ಕೆ ಓಡಿ,ಗಾರ್ಡ್ ಗೆ ವರದಿ ಒಪ್ಪಿಸಿದೆ.ನಾವು ಇದ್ದದ್ದು ಒಂಬತ್ತನೇ ಪ್ಲ್ಯಾಟ್ ಫಾರಂ.ಗಾರ್ಡ್ ಮೊದಲನೇ ಪ್ಲ್ಯಾಟ್ ಫಾರಮ್ಮಿಗೆ ಹೋಗಿ ಅನೌನ್ಸರ್ ಗೆ ಹೇಳುವಂತೆ ಹೇಳಿದ.ನನಗೆ ದಿಕ್ಕೇ ತೋಚಲಿಲ್ಲ!!ಏನಾದರೂ ಮಗ ಬಂದಿರ ಬಹುದೇ ಎಂದು ಆಸೆಯಿಂದ ಬೋಗಿಯ ಬಳಿ ಬಂದು ,ಕಿಟಕಿಯಿಂದ ಒಳಗೆ ಇಣುಕಿದೆ."ಇನ್ನೂ ಸಿಗಲಿಲ್ಲವೆನ್ರೀ !!!"ಎಂದು ಕೂಗಿದ ಹೆಂಡತಿಯ ಅಳು ತಾರಕಕ್ಕೇರಿತು !!ಸ್ಪರ್ಧೆಗಿಳಿದಂತೆ ಮಗು ಇನ್ನೂ ಜೋರಾಗಿ ಅಳ ತೊಡಗಿತು!! ಅಕ್ಕ ಪಕ್ಕದವರು ತಲೆಗೊಂದರಂತೆ ಸಲಹೆ ಕೊಡ ತೊಡಗಿದರು.ಕೆಲವರು "ಸಾಮಾನುಗಳನ್ನು ಇಳಿಸಿಕೊಂಡು ಇಳಿದು ಬಿಡಿ "ಎಂದರೆ ಮತ್ತೆ ಕೆಲವರು "ಬೇಡ,ಬೇಡ,ನಿಮ್ಮ ಮಗ ಮತ್ಯಾವುದಾದರೂ ಬೋಗಿಗೆ ಹತ್ತಿರಬಹುದು"ಎಂದರು.ಇನ್ನು ಕೆಲವರು"ಪಕ್ಕದ ಪ್ಲ್ಯಾಟ್ ಫಾರಮ್ಮಿ ನಲ್ಲಿ ನಿಂತಿರುವ ಟ್ರೈನ್ ನಲ್ಲೂ ಒಮ್ಮೆ ನೋಡಿ" ಎಂದರು.ಟ್ರೈನ್ ಹೊರಡಲು ಕೆಲವೇ ನಿಮಿಷಗಳು ಬಾಕಿ ಇವೆ!!!ನನಗೋ ಏನು ಮಾಡಬೇಕೆಂದು ದಿಕ್ಕೇ ತೋಚದಂತಾಗಿತ್ತು!!ಜೀವನದಲ್ಲಿ ಮೊದಲ ಬಾರಿಗೆ ಅಸಹಾಯಕನಾಗಿ,ಹೃತ್ಪೂರ್ವಕವಾಗಿ "ಅಪ್ಪಾ ಈಗ ನೀನೇ ಗತಿ"ಎಂದು ದೇವರನ್ನು ಪ್ರಾರ್ಥಿಸಿದೆ.ನನ್ನ ಪ್ರಾರ್ಥನೆ ಆ ದೇವನಿಗೆ ತಲುಪಿತು.ವಯಸ್ಸಾದ ,ಗಡ್ಡ ಧಾರಿ ಕೂಲಿಯೊಬ್ಬನ ರೂಪದಲ್ಲಿ ದೇವರು, ಅಳುತ್ತಿದ್ದ ನನ್ನ ಮಗನ ಕೈ ಹಿಡಿದು ಬರುತ್ತಿದ್ದ.ಹೃದಯ ಬಾಯಿಗೆ ಬಂದಂತಾಯಿತು.'ಗಳ ಗಳನೆ' ಮಗುವಿನಂತೆ ಅತ್ತು ಬಿಟ್ಟೆ .ನನ್ನ ಮಗ ನನಗೆ ಸಿಕ್ಕಿದ್ದ!!! ಯಾವ ನಿಧಿ ಸಿಕ್ಕಿದರೂ ನನಗೆ ಅಷ್ಟು ಸಂತೋಷವಾಗುತ್ತಿರಲಿಲ್ಲ!!!ಆ ಕೂಲಿಯವನ ಎರಡೂ ಕೈಗಳನ್ನೂ ಹಿಡಿದು ಕಣ್ಣಿಗೆ ಒತ್ತಿಕೊಂಡೆ.ಅವನಿಗೆ ಕೈ ಮುಗಿದು ,ಜೇಬಿನಲ್ಲಿದ್ದ ನೂರರ ಎರಡು ನೋಟುಗಳನ್ನು ಹೊರತೆಗೆದೆ.ಆ ಪುಣ್ಯಾತ್ಮ ಕೂಲಿಯವನು "ನಕ್ಕೋ ಸಾಬ್,ನಕ್ಕೋ ಸಾಬ್"ಎನ್ನುತ್ತಿದ್ದರೂ ಕೇಳದೇ,ಆ ನೋಟುಗಳನ್ನು ಅವನ ಜೇಬಿಗೆ ತುರುಕಿ,ಮಗನ ಕೈ ಹಿಡಿದು ಓಡುತ್ತಾ ಬೋಗಿಗೆ ಬಂದು ಕಿಟಿಕಿಯ ಪಕ್ಕದ ನನ್ನ ಸೀಟಿನಲ್ಲಿ ಕುಳಿತೆ.ಮಗ ಅಳುತ್ತಾ ಅಮ್ಮನ ಮಡಿಲು ಸೇರಿದ.ಅಮ್ಮ ,ಮಗಳು ಅಳು ನಿಲ್ಲಿಸಿದರು.ನನ್ನ ಹೆಂಡತಿ ಅಕ್ಕ ಪಕ್ಕದವರಿಗೆ ನನ್ನ ಬೇಜವಾಬ್ದಾರಿಯ ಬಗ್ಗೆ ಅರಿವು ಮಾಡಿಕೊಡುತ್ತಿದ್ದಳು.ನಾನು ಏನನ್ನೂ ಕೇಳುವ ಸ್ಥಿತಿ ಯಲ್ಲಿ ಇರಲಿಲ್ಲ.ದಿಗ್ಮೂಢನಾಗಿದ್ದೆ !! ಕಿಟಕಿಯಾಚೆ ಶೂನ್ಯ ದೃಷ್ಟಿ ನೆಟ್ಟಿದ್ದೆ.ಕಣ್ಣುಗಳಲ್ಲಿ ಧಾರಾಕಾರ ನೀರು!! I was very badly shaken for the first time in my life!!I was literally trembling!!ಇದ್ಯಾವುದರ ಪರಿವೆಯೇ ಇಲ್ಲದೆ ಟ್ರೈನು ಪ್ಲ್ಯಾಟ್ ಫಾರಂ ಬಿಟ್ಟು ಮೆಲ್ಲನೆ ಮುಂದೆ ಸರಿಯ ತೊಡಗಿತು.ಹೊರಗೆ ನಿಧಾನವಾಗಿ ಕತ್ತಲಾವರಿಸುತ್ತಿದ್ದರೆ,ವಿಚಿತ್ರವೆಂಬಂತೆ ನನ್ನ ಬಾಳಿನಲ್ಲಿ ಆವರಿಸಿದ್ದ ಕತ್ತಲು ದೂರವಾಗಿತ್ತು !!!
Tuesday, July 17, 2012
"ನಿನ್ನ ಅದಮ್ಯ ಚೈತನ್ಯಕ್ಕೆ ನನ್ನದೊಂದು ಸಲಾಂ!!!"
ಗೋಡೆಯ ಬಿರುಕಿನಲ್ಲಿ
ಅಲ್ಲೇ ಇರುಕಿನಲ್ಲಿ
ಗರಿಗೆದರಿ ಚಿಗುರೊಡೆದು
ನಳ ನಳಿಸಿ...........,
ನಗುವ,ನಲಿವ,
ಚಿ..ಗು..ರು..........!
ನನಗೆ ನೀನೇ ಗುರು......!
ಚಿಗುರೊಡೆವ ನಿನ್ನ ಛಲಕ್ಕೆ
ನಮೋನ್ನಮಃ.....!
ಮಣ್ಣಿನ ಹದಬೇಕೆಂದು
ಗೊಣಗಲಿಲ್ಲ!
ಪಾತಿ ಮಾಡಿ,ಬದು ತೋಡಿ
ನೀರುಣಿಸಿ
ಆರೈಕೆ ಮಾಡೆಂದು
ಗೋಗರೆಯಲಿಲ್ಲ!
ನಿನ್ನನ್ಯಾರೂ .......
ಬಿತ್ತಲಿಲ್ಲ,ಬೆಳೆಯಲಿಲ್ಲ!
ಸುಖಾ ಸುಮ್ಮನೆ
ಯಾವುದೋ ಗಾಳಿಯಲಿ
ಬೀಜವಾಗಿ ತೂರಿಬಂದು
ಗೋಡೆಯಲಿ ಸಿಲುಕಿ
ಮಿಡುಕದೆ
ಸಿಡುಕದೆ
ನಕ್ಕು ಹೊರ ಬಂದೆ
ಮೈ ಕೊಡವಿ!
ನಿನ್ನ ಅದಮ್ಯ ಚೈತನ್ಯಕ್ಕೆ
ಜೀವನೋತ್ಸಾಹಕ್ಕೆ
ಇದೋ ..............,
ನನ್ನದೊಂದು ಸಲಾಂ!
Sunday, July 15, 2012
"ಎದೆಗು ,ಎದೆಗು ನಡುವೆ ಕಡಲು!!! "
ಗಂಟಲೊಳಗಿನ ಬಿಸಿ ತುಪ್ಪ
ಉಗುಳಲಾಗದು, ನುಂಗಲಾಗದು!
ಹೆಸರಿಗೆ ಮಾತ್ರದ ಸಂಬಂಧಗಳು !
ಎದೆಗೂ,ಎದೆಗೂ ನಡುವೆ ಕಡಲು!
ಕಡಲೊಳಗೆ ಸಾವಿರ ಸಾವಿರ
ಮುಸುಕಿನ ಗುದ್ದಾಟದ
ಶಾರ್ಕ್,ತಿಮಿಂಗಿಲಗಳು!
ನಮ್ಮ ನಮ್ಮ ಅಹಂಕಾರಗಳ
ಆಕ್ಟೋಪಸ್ ಹಿಡಿತಗಳು!
ಇಷ್ಟು ಸಾಲದೇ ಸಂಬಂಧ ಕೆಡಲು!
ಮೇಲೆ ಮಾತಿನ ಮರ್ಮಾಘಾತದ
ಅಲೆಗಳ ಹೊಡೆತಕ್ಕೆ
ಆತ್ಮೀಯತೆಯ ಸೇತುವಿನ
ಬೆಸೆಯಲಾಗದ ಬಿರುಕು!
ಯಾವುದೋ ಮದುವೆಯಲ್ಲೋ
ಮುಂಜಿಯಲ್ಲೋ,
ಎದುರೆದುರು ಸಿಕ್ಕಾಗ
ಹುಳ್ಳಗೆ ನಕ್ಕು 'ಹಾಯ್'ಎಂದು
ಗಾಯಕ್ಕೆ ಮುಲಾಮು ಸವರೋಣ!!
ಮುಂದಿನ ಭೆಟ್ಟಿಯ ತನಕ
ನಿರಾಳವಾಗಿ 'ಬೈ'ಎಂದು ಬಿಡೋಣ!!
Thursday, July 12, 2012
"ನನಗಲ್ಲ....,ನಿನಗೇ....ಮರೆವು!!!"
ಗಂಡ ಹೆಂಡತಿ ಇಬ್ಬರಿಗೂ ಸುಮಾರು ಎಂಬತ್ತೈದರ ವಯಸ್ಸು.ವಯೋಗುಣಕ್ಕೆ ಸಹಜವಾಗಿ ಸಣ್ಣ ಪುಟ್ಟ ತೊಂದರೆಗಳಿದ್ದರೂ ಅವರಿಗಿದ್ದ ಬಹು ದೊಡ್ಡ ಸಮಸ್ಯೆ ಎಂದರೆ ಮರೆವು .ಮರೆತು ಹೋಗಬಹುದದ್ದನ್ನು ಬರೆದಿಟ್ಟುಕೊಳ್ಳುವಂತೆ ಡಾಕ್ಟರ್ ಒಬ್ಬರು ಸಲಹೆ ನೀಡಿದರು .ಆದರೆ ಇಬ್ಬರೂ ತಮಗೆ ಮರೆವಿದೆಯೆಂದು ಒಪ್ಪಿಕೊಳ್ಳಲು ತಯಾರಿರಲಿಲ್ಲ .ಗಂಡ 'ನನ್ನ ಹೆಂಡತಿಗೆ ತುಂಬಾ ಮರೆವು ಡಾಕ್ಟ್ರೆ'ಎಂದರೆ, ಹೆಂಡತಿ 'ಹಾಗೇನಿಲ್ಲಾ ಡಾಕ್ಟ್ರೆ ಅವರಿಗೇ ವಿಪರೀತ ಮರೆವು 'ಎಂದು ದಬಾಯಿಸುತ್ತಿದ್ದಳು .ಒಂದು ಸಂಜೆ ಇಬ್ಬರೂ ಟಿ.ವಿ.ನೋಡುತ್ತಾ ಕುಳಿತಾಗ ಗಂಡ ಅಡಿಗೆ ಮನೆಗೆ ಹೋಗಲು ಎದ್ದುನಿಂತ .ಹೆಂಡತಿ' ಯಾಕ್ರೀ ಎದ್ರಿ' ?ಎಂದಳು .ಗಂಡ 'ಅಡಿಗೆ ಮನೆಗೆ ,ನೀರು ಕುಡಿಯೋಕೆ 'ಎಂದ .'ಹಾಗೇ ಅಡಿಗೆಮನೆ ಫ್ರಿಡ್ಜ್ ನಿಂದ ನನಗೊಂದು ಕೇಕ್ ತಂದುಕೊಡಿ .ಬರೆದಿಟ್ಟುಕೊಳ್ಳಿ ,ಮರೀತೀರ 'ಎಂದಳು ಹೆಂಡತಿ.ಗಂಡನಿಗೆ ಸಿಟ್ಟು ಬಂತು . 'ಹೋಗೇ---ಹೋಗೇ ,ಅದನ್ನೆಲ್ಲಾ ಯಾರಾದರೂ ಬರೆದಿಟ್ಟು ಕೊಳ್ಳುತ್ತಾರಾ ,ನೀ ಹೇಳಿದ ಕೇಕ್ ಮರೀದೆ ತರ್ತೀನಿ,ನೋಡ್ತಾ ಇರು 'ಎಂದು ನಿಧಾನವಾಗಿ ಅಡಿಗೆ ಮನೆಗೆ ಹೋದ .
ಅರ್ಧ ಗಂಟೆಯ ನಂತರ ಬ್ರೆಡ್ ಟೋಸ್ಟ್ ಇದ್ದ ಪ್ಲೇಟ್ ಒಂದನ್ನು ಕೈಯಲ್ಲಿ ಹಿಡಿದು ಬಂದು, 'ನೋಡು ,ನೀನು ಹೇಳಿದ ಬ್ರೆಡ್ ಟೋಸ್ಟ್ ಜ್ಞಾಪಕ ಇಟ್ಟು ಕೊಂಡು ತಂದಿಲ್ವಾ ?ಸುಮ್ನೆ ಮರೆವೂ ,ಮರೆವೂ ಅಂತೀಯ', ಎಂದ .ಹೆಂಡತಿ ಆಶ್ಚರ್ಯದಿಂದ 'ಹೌದಲ್ರೀ ನಿಮ್ಮ ನೆನಪಿನ ಶಕ್ತಿ ಚೆನ್ನಾಗೆ ಇದೆ !ನಾನು ಹೇಳಿದ್ದು ಬ್ರೆಡ್ ಟೋಸ್ಟೇ 'ಎಂದು ಒಪ್ಪಿಕೊಂಡಳು.'ನೋಡಿದ್ಯಾ ,ನೆನಪಿಟ್ಟುಕೊಂಡು ನಿನಗೆ ಬ್ರೆಡ್ ಟೋಸ್ಟ್ ತಂದಿದ್ದಲ್ಲದೇ ನಾನು ಕುಡಿಯೋಕೆ ಅಂತ ಹೋಗಿದ್ದ ಕಾಫಿಯನ್ನೂ ಮರೀದೆ ಮಾಡಿ ಕುಡಿದು ಬಂದೆ ',ಎಂದು ಗಂಡ ಜಂಬ ಕೊಚ್ಚಿಕೊಂಡ !!!
Tuesday, July 10, 2012
"ಹೆಂಡತಿಗೆ ಕಿವಿ ಕೆಪ್ಪು !!!"
ವೈದ್ಯರೊಬ್ಬರ ಬಳಿಗೆ ಒಬ್ಬ ವ್ಯಕ್ತಿ ಬಂದು "ಸರ್,ನನ್ನ ಹೆಂಡತಿಗೆ ಕಿವಿ ಸರಿಯಾಗಿ ಕೇಳಿಸುವುದಿಲ್ಲಾ ಅಂತ ನನಗೆ ಅನುಮಾನ.
ಏನಾದರೂ ಔಷಧಿ ಇದ್ದರೆ ಕೊಡಿ"ಎಂದ.
ಅದಕ್ಕೆ ವೈದ್ಯರು "ನೋಡಿ ಮಿಸ್ಟರ್,ಹಾಗೆಲ್ಲಾ ಪರೀಕ್ಷೆ ಮಾಡದೇ ಔಷಧಿ ಕೊಡಲು ಆಗುವುದಿಲ್ಲ.ಅವರನ್ನು ಕರೆದು ಕೊಂಡು ಬನ್ನಿ ,ಪರೀಕ್ಷೆ ಮಾಡಿ ಔಷಧಿ ಕೊಡೋಣ"ಎಂದರು.
ಅದಕ್ಕೆ ಆ ವ್ಯಕ್ತಿ "ಅವಳು ಆಸ್ಪತ್ರೆಗೆ ಬರುವುದಿಲ್ಲಾ ಸರ್.ನಿಮಗೇ ಕಿವಿ ಕೆಪ್ಪು.ಬೇಕಾದರೆ ನೀವೇ ಪರೀಕ್ಷೆ ಮಾಡಿಸಿಕೊಳ್ಳಿ"ಎಂದು ದಬಾಯಿಸುತ್ತಾಳೆ ಎಂದ.
ಅದಕ್ಕೆ ವೈದ್ಯರು"ಅವರಿಗೆ ಎಷ್ಟು ದೂರದಿಂದ ಕಿವಿ ಕೇಳುವುದಿಲ್ಲ ಎಂದು ತಿಳಿದು ಕೊಂಡು ಬನ್ನಿ .ಆಮೇಲೆ ನೋಡೋಣ"ಎಂದರು.
ಆ ದಿನ ಆ ವ್ಯಕ್ತಿ ತನ್ನ ಹೆಂಡತಿಗೆ ಎಷ್ಟು ದೂರದಿಂದ ಕಿವಿ ಕೇಳುವುದಿಲ್ಲ ಎಂದು ತಿಳಿದುಕೊಳ್ಳಬೇಕೆಂದು ನಿರ್ಧರಿಸಿ ಮನೆಗೆ ಬಂದ.ಹೆಂಡತಿ ಅಡಿಗೆ ಮನೆಯಲ್ಲಿದ್ದಳು.
ಇವನು ಮನೆಯ ಮುಂಬಾಗಿಲ ಬಳಿ ನಿಂತು"ಏನೇ, ಇವತ್ತು ಏನಡಿಗೆ ?"ಎಂದು ಕೂಗಿದ.
ಉತ್ತರವಿಲ್ಲ.ನಡು ಮನೆಗೆ ಬಂದು ಕೂಗಿದ.ಉತ್ತರವಿಲ್ಲ.ಹೀಗೆಯೇ ಹತ್ತಾರುಸಲ ಸ್ವಲ್ಪ,ಸ್ವಲ್ಪವೇ ಹತ್ತಿರಬಂದು"ಏನೇ ,ಇವತ್ತು ಏನಡಿಗೆ?"ಎಂದು ಪ್ರಶ್ನೆ ಕೇಳಿ ,ಉತ್ತರ ಸಿಗದೇ, ಕಡೆಗೆ ಅಡಿಗೆ ಮನೆಗೆ ಬಂದು "ಏನೇ....,ಇವತ್ತು ಏನಡಿಗೆ?"ಎಂದ.
ಅದಕ್ಕೆ ಅವನ ಹೆಂಡತಿ"ಅಯ್ಯೋ......!ಆಗ್ಲಿಂದ ಹತ್ತು ಸಲ ಬೆಂಡೆಕಾಯಿ ಸಾಂಬಾರು,ಬೆಂಡೆಕಾಯಿ ಸಾಂಬಾರು ಅಂತ ಬಡಕೊಂಡು,ಬಡಕೊಂಡು ಸಾಕಾಯಿತು.ನಿಮಗೇ ಕಿವಿ ಕೆಪ್ಪಾಗಿದೆ ಅಂತ ಹೇಳಿದರೆ ನೀವು ಕೇಳೋಲ್ಲಾ!ಮೊದಲು ಹೋಗಿ ಪರೀಕ್ಷೆ ಮಾಡಿಸಿಕೊಳ್ಳಿ."ಎಂದಳು.
ಪರೀಕ್ಷೆ ಮಾಡಲು ಬಂದವನೇ ಪರೀಕ್ಷೆಯಲ್ಲಿ ಫೇಲಾಗಿದ್ದ!!! ಪರೀಕ್ಷೆಯ ರಿಸಲ್ಟ್ ತಿಳಿದು ಪೇಲಾಗಿದ್ದ!!!
Sunday, July 8, 2012
"ಬದುಕಲು ಕಲಿಸಿದ"ಮರೆಯಲಾರದ ರೋಗಿ!!!
ಬಿಳಿಗಿರಿ ಆಚಾರ್ಯರು ಸುಮಾರು ಎಂಬತ್ತೈದರ ಆಸುಪಾಸಿನ ಸಾತ್ವಿಕ ಸ್ವಭಾವದ ವಯೋವೃದ್ಧರು .ಯಾರನ್ನೂ ನೋಯಿಸದ ಮಾಗಿದ ವ್ಯಕ್ತಿತ್ವ .ಎಷ್ಟೇ ಕಷ್ಟವಿದ್ದರೂ ಸದಾ ಅವರ ಮುಖದಲ್ಲೊಂದು ಮಾಸದ ಮಂದಹಾಸವಿರುತ್ತಿತ್ತು. ಉಬ್ಬಸದ ತೊಂದರೆಗಾಗಿ ಆಗಾಗ ಆಸ್ಪತ್ರೆಗೆ ಅಡ್ಮಿಟ್ ಆಗುತ್ತಿದ್ದರು.ಆಸ್ಪತ್ರೆಯಲ್ಲಿದ್ದಾಗಲೂ ಕಾಲಹರಣ ಮಾಡದೇ, ಯಾವುದಾದರೊಂದು ಪುಸ್ತಕ ಓದುತ್ತಿದ್ದರು.ಆ ಇಳಿ ವಯಸ್ಸಿನಲ್ಲೂ ಅವರದು ಅಚ್ಚರಿ ಮೂಡಿಸುವಂತಹ ಜ್ಞಾನ ದಾಹ! ಆ ದಿನ ವಾರ್ಡ್ ರೌಂಡ್ಸ್ ನಲ್ಲಿ ಅವರ ಬೆಡ್ಡಿನ ಹತ್ತಿರ ಹೋದಾಗ, ಅವರು ಸ್ವಾಮಿ ಜಗದಾತ್ಮಾನಂದರ ಪ್ರಸಿದ್ಧ ಪುಸ್ತಕ 'ಬದುಕಲು ಕಲಿಯಿರಿ -ಭಾಗ ಒಂದು ' ಓದುತ್ತಿದ್ದರು. ನನ್ನ ಸಹೋದ್ಯೋಗಿಯೊಬ್ಬರು ಸುಮ್ಮನಿರದೇ 'ಏನು ಆಚಾರ್ರೆ ,ಈ ವಯಸ್ಸಿನಾಗೂ ,ಬದುಕಲು ಕಲಿಯಿರಿ ಪುಸ್ತಕ ಓದುತ್ತಿದ್ದೀರಿ?' ಎಂದು ಕೇಳಿಯೇ ಬಿಟ್ಟರು.ಆಚಾರ್ಯರೂ ಸ್ವಲ್ಪವೂ ಬೇಸರ ಪಟ್ಟುಕೊಳ್ಳದೆ,ತಮ್ಮನ್ನು ತಾವೇ ಹಾಸ್ಯ ಮಾಡಿಕೊಳ್ಳುವಂತೆ 'ಏನ್ ಮಾಡೋದ್ರೀ.......,ಸಾಯೋ ಕಾಲ ಬಂದದೆ,ಇನ್ನೂ ಬದುಕೋದು ಕಲಿತೇ ಇಲ್ಲಾ ! 'ಎಂದು ಜೋರಾಗಿ ನಕ್ಕರು.ಅವರ ಕೆಮ್ಮು , ಉಬ್ಬಸ ಹೆಚ್ಚಾಯಿತು.ನಾನು 'ಆಯಾಸ ಮಾಡಿಕೋ ಬೇಡ್ರಿ ಆಚಾರ್ರೆ 'ಎಂದೆ.ಅದಕ್ಕವರು 'ಏನೂ ಆಗಂಗಿಲ್ಲ ಬಿಡ್ರೀ.ಹಂಗೇನಾದರೂ ಆದರೂ ಮತ್ತಷ್ಟು ಛಲೋನಾ ಆತು 'ಎಂದು ಮತ್ತೆ ನಕ್ಕರು . ತಮ್ಮ ಬಳಿ ಇದ್ದ 'ಬದುಕಲು ಕಲಿಯಿರಿ -ಭಾಗ ೨'ಪುಸ್ತಕವನ್ನು ನನ್ನ ಸಹೋದ್ಯೋಗಿಗೆ ಕೊಟ್ಟು 'ಬಹಳ ಒಳ್ಳೇ ಪುಸ್ತಕ ,ಇವತ್ತು ಓದಿ ನಾಳೆ ನನಗ ಕೊಡ್ರಿ'ಎಂದರು.ಮಾರನೇ ದಿನ ಬೆಳಿಗ್ಗೆ ವಾರ್ಡಿಗೆ ಬಂದಾಗ ಆಚಾರ್ಯರ ಬೆಡ್ ಖಾಲಿಯಾಗಿತ್ತು.ಬೆಳಿಗ್ಗೆ ಐದು ಗಂಟೆಗೆ ಆಚಾರ್ಯರು ತೀರಿಕೊಂಡಿದ್ದರು.ಅವರಿಗೆ ವಾಪಸ್ ಕೊಡಲು ತಂದ,ಅವರು ಕೊಟ್ಟ 'ಬದುಕಲು ಕಲಿಯಿರಿ'ಪುಸ್ತಕ ನನ್ನ ಸಹೋದ್ಯೋಗಿಯ ಕೈಯಲ್ಲಿತ್ತು. ಆಚಾರ್ಯರು ಬದುಕಿನ ಕಲಿಕೆ ಮುಗಿಸಿದ್ದರು.........!!!ಅವರ ಖಾಲಿ ಬೆಡ್ಡಿನಿಂದ "ಸಾಯೋವರೆಗೂ ಕಲಿಯೋದು ಮುಗಿಯಂಗಿಲ್ರೀ "ಎಂದು ಆಚಾರ್ಯರು ಹೇಳಿ ನಕ್ಕಂತಾಯಿತು!!!ಅವರು ತಮ್ಮ ಸಾವಿನಲ್ಲೂ ಹೊಸ ಪಾಠವೊಂದನ್ನು ಕಲಿಸಿದ್ದರು !!!ಅವರ ಅದಮ್ಯ ಚಿತನ್ಯಕ್ಕೆಎಲ್ಲಿಯ ಸಾವು ?ಇಂತಹ ರೋಗಿಯನ್ನು ಮರೆಯುವುದಾದರೂ ಹೇಗೆ!?
Monday, July 2, 2012
"ಹೀಗೊಂದು ಆಟೋ ಅನುಭವ !!!"
ನೆನ್ನೆ ಸಂಜೆ ಸುಮಾರು ಆರು ಘಂಟೆಗೆ ಬೆಂಗಳೂರಿನಲ್ಲಿ ವಿಜಯನಗರದಿಂದ ಶೇಷಾದ್ರಿಪುರಂಗೆ ಹೋಗಲು ಆಟೋಗಾಗಿ ಕಾಯುತ್ತಿದ್ದೆ.ರಜಾ ದಿನವಾದ್ದರಿಂದ ಮಲ್ಲೇಶ್ವರಂನ 'ಮಂತ್ರಿ ಮಾಲ್ 'ಸುತ್ತ ಮುತ್ತ ವಿಪರೀತ 'ಟ್ರ್ಯಾಫಿಕ್ ಜ್ಯಾಮ್'ನಿಂದಾಗಿ ಆ ಕಡೆ ಬರಲು ಯಾವ ಆಟೋದವರೂ ಇಷ್ಟ ಪಡುವುದಿಲ್ಲ .ಖಾಲಿ ಆಟೋ ಅಂತ ಕೈ ತೋರಿಸಿದರೆ,ಆಟೋ ನಿಲ್ಲಿಸಿ 'ಶೇಷಾದ್ರಿಪುರಂ' ಎಂದು ಹೇಳಿದ ತಕ್ಷಣ,ಕೆಟ್ಟ ಮುಖ ಮಾಡಿ,ತಿರಸ್ಕಾರದ ನೋಟ ಬೀರಿ,ದುರ್ದಾನ ತೆಗೆದು ಕೊಂಡವರಂತೆ 'ಭರ್'ಎಂದು ಮುಂದೆ ಹೋಗಿಬಿಡುತ್ತಾರೆ!ಸುಮಾರು ಹತ್ತು ಆಟೋಗಳಿಗೆ 'ಕೈ ತೋರಿಸಿ ಅವಲಕ್ಷಣ'ಎನಿಸಿ ಕೊಂಡಿದ್ದಾಯಿತು! ಅವೆಲ್ಲಾ 'ನಾ....ಒಲ್ಲೇ'ಎಂದು ಮುನಿಸಿಕೊಂಡು ಮುಂದೆ ಹೋದವು.ಹನ್ನೊಂದನೇ ಆಟೋದವನು ನಾನು ಶೇಷಾದ್ರಿಪುರಂ ಎಂದಾಗ ಬನ್ನಿ ಎಂಬಂತೆ ಸುಮ್ಮನೇ ತಲೆ ಆಡಿಸಿದ!ಸುಮಾರು ಆಟೋದವರು ಆಟೋ ಹತ್ತಿದ ತಕ್ಷಣ ತಮ್ಮ ಕಷ್ಟಗಳ ಪ್ರವರ ಶುರುಮಾಡಿಬಿಡುತ್ತಾರೆ. ಟ್ರ್ಯಾಫಿಕ್ ಅನ್ನೋ,ರಾಜಕೀಯ ಅವ್ಯವಸ್ಥೆಯನ್ನೋ ಬಯ್ದು ಮನಸ್ಸು ಹಗುರ ಮಾಡಿಕೊಳ್ಳುತ್ತಾರೆ.ಅಥವಾ ನಮ್ಮ ಬಗ್ಗೆ 'ನೀವು ಯಾರು?ಎತ್ತ?ಎಲ್ಲಿಂದ ಬಂದಿರಿ?ಎಲ್ಲಿ ಕೆಲಸ?ಎಷ್ಟು ಮಕ್ಕಳು?'ಎಂದೆಲ್ಲಾ ಪ್ರಶ್ನೆ ಕೇಳುತ್ತಾ ತಲೆ ಚಿಟ್ಟು ಹಿಡಿಸುತ್ತಾರೆ!ನಾವು ತಲಪುವ ಸ್ಥಳ ಬರುವ ತನಕ ಮುಳ್ಳಿನ ಮೇಲೆ ಕೂತಂತಾಗಿರುತ್ತದೆ!ಆಶ್ಚರ್ಯ ವೆಂಬಂತೆ ಈ ಆಟೋದವನು ತುಟಿ ಬಿಚ್ಚಲಿಲ್ಲ!ಯಾವುದೇ ಆತುರವಿಲ್ಲದೇ(ಆಟೋದವರಲ್ಲೊಂದು ಅಪರೂಪದ ಗುಣ !),ನಿಧಾನವಾಗಿ ಕರೆದೊಯ್ದ.ನನ್ನ ವೈದ್ಯಕೀಯ ಒಳಗಣ್ಣು ಇವನಿಗೇನೋ ತೊಂದರೆ ಇದೆ ಎಂದು ಹೇಳುತ್ತಿತ್ತು.ನಾನು ಇಳಿಯುವ ಸ್ಥಳ ಬಂದಾಗ ಮೀಟರ್ ಅರವತ್ತು ರೂಪಾಯಿ ತೋರಿಸುತ್ತಿತ್ತು.ನೂರು ರೂಪಾಯಿಯ ನೋಟೊಂದನ್ನು ಕೊಡುತ್ತಾ "ಯಾಕಪ್ಪ ಹುಶಾರಿಲ್ಲವಾ?"ಎಂದೆ.ಅದಕ್ಕವನು 'ನನಗೆ ಕಿಡ್ನಿ ಫೈಲ್ಯೂರ್ ಆಗಿದೆ ಸರ್.ಇದ್ದ ಹಣಾ ಎಲ್ಲಾ ಆಸ್ಪತ್ರೆಗೇಖರ್ಚಾಯಿತು.ಆಪರೇಶನ್ ಎಲ್ಲಾ ನಮ್ಮ ಕೈಯಲ್ಲಿ ಎಲ್ಲಿ ಆಗುತ್ತೇ ಸರ್?ನಾನು ಬಹಳ ದಿನ ಬದುಕೊಲ್ಲಾ ಅಂತ ಗೊತ್ತು'ಎಂದು ತಣ್ಣಗೆ ಹೇಳಿದ.ಅವನನ್ನು ನೋಡಿದ ತಕ್ಷಣ ಅವನಿಗೇನೋ ಹುಶಾರಿಲ್ಲ ಅಂತ ತಿಳಿಯುತ್ತಿತ್ತು.ಆದರೆ ಅವನಿಗೆ 'ಕಿಡ್ನಿ ಫೈಲ್ಯೂರ್'ಆಗಿರಬಹುದೆಂದು ನಾನು ಕನಸು ಮನಸಿನಲ್ಲೂ ಊಹಿಸಿರಲಿಲ್ಲ.ಒಂದು ಕ್ಷಣ ಅವನ ಕಣ್ಣುಗಳಲ್ಲಿ 'ಸಾವು'ಇಣುಕಿ ಹೋದದ್ದು ಕಂಡು ಅವಾಕ್ಕಾದೆ."ಇಂತಹ ಸ್ಥಿತಿಯಲ್ಲೂ ಗಾಡಿ ಓಡಿಸುತ್ತಿದ್ದೀಯಲ್ಲಪ್ಪಾ!
ಸುಸ್ಥಾಗುವುದಿಲ್ಲವಾ?"ಎಂದೆ. 'ಏನು ಮಾಡೋದು ಸರ್!ತುಂಬಾ ಸುಸ್ತಾಗುತ್ತೆ!ಉಸಿರಿರೋಗಂಟಾ ಹೊಟ್ಟೀಗೋಸ್ಕರ ಹೊಡೆದಾಡಲೇ ಬೇಕಲ್ಲಾ ಸರ್?ಮನೇಲಿ ಸಣ್ಣ ಸಣ್ಣ ಮಕ್ಕಳಿದ್ದಾರೆ.ನಾನು ಆಟೋ ಓಡಿಸದಿದ್ದರೆ ಅವಕ್ಕೆ ಊಟವಿಲ್ಲ' ಎಂದು ಕಣ್ಣಲ್ಲಿ ನೀರು ತಂದು ಕೊಂಡ.'ಲೈಫು ಇಷ್ಟೇನೇ!!!'ಅನಿಸಿ, ಮನಸ್ಸು ಭಾರವಾಯಿತು. ನಾನು ಕೊಟ್ಟ ನೂರು ರೂಪಾಯಿಗೆ ಅವನು ಕೊಟ್ಟ ಬಾಕಿ ಹಣ ನಲವತ್ತು ರೂಪಾಯಿಗಳನ್ನು ಅವನಿಗೇ ಹಿಂದಿರುಗಿಸಿ,'ಅದನ್ನು ನೀನೇ ಇಟ್ಟು ಕೊಳ್ಳಪ್ಪಾ,ಒಳ್ಳೆಯದಾಗಲೀ'ಎಂದು ಬೀಳ್ಕೊಟ್ಟೆ.'ಥ್ಯಾಂಕ್ಯೂ ಸರ್.ದೇವರು ನಿಮ್ಮಂಥವರನ್ನು ಚೆನ್ನಾಗಿಟ್ಟಿರಲಿ'ಎಂದು ಹಾರೈಸಿ,ನನ್ನ ಮನಸ್ಸಿನಲ್ಲೊಂದು ಬಿರುಗಾಳಿ ಎಬ್ಬಿಸಿ 'ಭರ್'ಎಂದು ಸದ್ದು ಮಾಡುತ್ತಾ ,ಕತ್ತಲಲ್ಲಿ ಕಣ್ಮರೆಯಾದ!!!
Subscribe to:
Posts (Atom)