Sunday, July 8, 2012

"ಬದುಕಲು ಕಲಿಸಿದ"ಮರೆಯಲಾರದ ರೋಗಿ!!!

ಬಿಳಿಗಿರಿ ಆಚಾರ್ಯರು ಸುಮಾರು ಎಂಬತ್ತೈದರ ಆಸುಪಾಸಿನ ಸಾತ್ವಿಕ ಸ್ವಭಾವದ ವಯೋವೃದ್ಧರು .ಯಾರನ್ನೂ ನೋಯಿಸದ ಮಾಗಿದ ವ್ಯಕ್ತಿತ್ವ .ಎಷ್ಟೇ ಕಷ್ಟವಿದ್ದರೂ ಸದಾ ಅವರ ಮುಖದಲ್ಲೊಂದು ಮಾಸದ ಮಂದಹಾಸವಿರುತ್ತಿತ್ತು. ಉಬ್ಬಸದ ತೊಂದರೆಗಾಗಿ ಆಗಾಗ ಆಸ್ಪತ್ರೆಗೆ ಅಡ್ಮಿಟ್ ಆಗುತ್ತಿದ್ದರು.ಆಸ್ಪತ್ರೆಯಲ್ಲಿದ್ದಾಗಲೂ ಕಾಲಹರಣ ಮಾಡದೇ, ಯಾವುದಾದರೊಂದು ಪುಸ್ತಕ ಓದುತ್ತಿದ್ದರು.ಆ ಇಳಿ ವಯಸ್ಸಿನಲ್ಲೂ ಅವರದು ಅಚ್ಚರಿ ಮೂಡಿಸುವಂತಹ ಜ್ಞಾನ ದಾಹ! ಆ ದಿನ ವಾರ್ಡ್ ರೌಂಡ್ಸ್ ನಲ್ಲಿ ಅವರ ಬೆಡ್ಡಿನ ಹತ್ತಿರ ಹೋದಾಗ, ಅವರು ಸ್ವಾಮಿ ಜಗದಾತ್ಮಾನಂದರ ಪ್ರಸಿದ್ಧ ಪುಸ್ತಕ 'ಬದುಕಲು ಕಲಿಯಿರಿ -ಭಾಗ ಒಂದು ' ಓದುತ್ತಿದ್ದರು. ನನ್ನ ಸಹೋದ್ಯೋಗಿಯೊಬ್ಬರು ಸುಮ್ಮನಿರದೇ 'ಏನು ಆಚಾರ್ರೆ ,ಈ ವಯಸ್ಸಿನಾಗೂ ,ಬದುಕಲು ಕಲಿಯಿರಿ ಪುಸ್ತಕ ಓದುತ್ತಿದ್ದೀರಿ?' ಎಂದು ಕೇಳಿಯೇ ಬಿಟ್ಟರು.ಆಚಾರ್ಯರೂ ಸ್ವಲ್ಪವೂ ಬೇಸರ ಪಟ್ಟುಕೊಳ್ಳದೆ,ತಮ್ಮನ್ನು ತಾವೇ ಹಾಸ್ಯ ಮಾಡಿಕೊಳ್ಳುವಂತೆ 'ಏನ್ ಮಾಡೋದ್ರೀ.......,ಸಾಯೋ ಕಾಲ ಬಂದದೆ,ಇನ್ನೂ ಬದುಕೋದು ಕಲಿತೇ ಇಲ್ಲಾ ! 'ಎಂದು ಜೋರಾಗಿ ನಕ್ಕರು.ಅವರ ಕೆಮ್ಮು , ಉಬ್ಬಸ ಹೆಚ್ಚಾಯಿತು.ನಾನು 'ಆಯಾಸ ಮಾಡಿಕೋ ಬೇಡ್ರಿ ಆಚಾರ್ರೆ 'ಎಂದೆ.ಅದಕ್ಕವರು 'ಏನೂ ಆಗಂಗಿಲ್ಲ ಬಿಡ್ರೀ.ಹಂಗೇನಾದರೂ ಆದರೂ ಮತ್ತಷ್ಟು ಛಲೋನಾ ಆತು 'ಎಂದು ಮತ್ತೆ ನಕ್ಕರು . ತಮ್ಮ ಬಳಿ ಇದ್ದ 'ಬದುಕಲು ಕಲಿಯಿರಿ -ಭಾಗ ೨'ಪುಸ್ತಕವನ್ನು ನನ್ನ ಸಹೋದ್ಯೋಗಿಗೆ ಕೊಟ್ಟು 'ಬಹಳ ಒಳ್ಳೇ ಪುಸ್ತಕ ,ಇವತ್ತು ಓದಿ ನಾಳೆ ನನಗ ಕೊಡ್ರಿ'ಎಂದರು.ಮಾರನೇ ದಿನ ಬೆಳಿಗ್ಗೆ ವಾರ್ಡಿಗೆ ಬಂದಾಗ ಆಚಾರ್ಯರ ಬೆಡ್ ಖಾಲಿಯಾಗಿತ್ತು.ಬೆಳಿಗ್ಗೆ ಐದು ಗಂಟೆಗೆ ಆಚಾರ್ಯರು ತೀರಿಕೊಂಡಿದ್ದರು.ಅವರಿಗೆ ವಾಪಸ್ ಕೊಡಲು ತಂದ,ಅವರು ಕೊಟ್ಟ 'ಬದುಕಲು ಕಲಿಯಿರಿ'ಪುಸ್ತಕ ನನ್ನ ಸಹೋದ್ಯೋಗಿಯ ಕೈಯಲ್ಲಿತ್ತು. ಆಚಾರ್ಯರು ಬದುಕಿನ ಕಲಿಕೆ ಮುಗಿಸಿದ್ದರು.........!!!ಅವರ ಖಾಲಿ ಬೆಡ್ಡಿನಿಂದ "ಸಾಯೋವರೆಗೂ ಕಲಿಯೋದು ಮುಗಿಯಂಗಿಲ್ರೀ "ಎಂದು ಆಚಾರ್ಯರು ಹೇಳಿ ನಕ್ಕಂತಾಯಿತು!!!ಅವರು ತಮ್ಮ ಸಾವಿನಲ್ಲೂ ಹೊಸ ಪಾಠವೊಂದನ್ನು ಕಲಿಸಿದ್ದರು !!!ಅವರ ಅದಮ್ಯ ಚಿತನ್ಯಕ್ಕೆಎಲ್ಲಿಯ ಸಾವು ?ಇಂತಹ ರೋಗಿಯನ್ನು ಮರೆಯುವುದಾದರೂ ಹೇಗೆ!?

8 comments:

  1. sir, few people will teach us lessons which we would have never learnt through schools, text books.wonderful illustration

    ReplyDelete
  2. ಬದುಕಲು ಕಲಿಯುವಿಕೆಯು ನಿರಂತರ ಪ್ರಕ್ರಿಯೇ.

    ಮಾನ್ಯ ಆಚಾರ್ಯರ ಅದಮ್ಯ ಜೀವನೋತ್ಸಾಹ ಮತ್ತು ಆ ವಯಸ್ಸಿನಲ್ಲೂ ಪುಸ್ತಕ ಪಠನ ಮತ್ತು ಬೇರೆಯವರಿಗೂ ಓದಲು ಪ್ರೇರೇಪಿಸುವ ಸದುದ್ಧೇಶ ಆದರಣೀಯ.

    ಇಂತಹ ಮಹಾನ್ ಚೇತನವನ್ನು ಕಣ್ಣಾರೆ ಕಂಡು ಅವರ ಆರೈಕೆ ಮಾಡಿದ ತಾವೇ ಧನ್ಯ.

    ReplyDelete
  3. ಮನಸು ಭಾವನೆ ತೇವ ವಾಯಿತು ಹೌದು ವ್ಯಕ್ತಿ ಬದುಕಿದ್ದಾಗ ಏನು ಮಾಡಿದಾ ಅನ್ನೋದು ಮಾತ್ರ ಉಳಿಯೋದು , ಆಸ್ತಿಯಲ್ಲಾ ಅನ್ನೋದನ್ನ ಬಿಳಿಗಿರಿ ಆಚಾರ್ಯರು ನಿರೂಪಿಸಿ ಅಮರರಾದರು.ಈ ಸನಿವೇಶ ಮನಮುಟ್ಟುವಂತೆ ಇದೆ ನಿಮಗೆ ಜೈ ಹೋ ಸಾರ್ ಕೃಷ್ಣ ಮೂರ್ತಿ ಸಾರ್
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
  4. ಡಾಕ್ಟ್ರೆ...

    ಮನಸ್ಸೆಲ್ಲ ಭಾರವಾಯಿತು..
    ನಿನ್ನೆ ಅಷ್ಟೆಲ್ಲ ಜೀವನೋತ್ಸಾಹ ತೋರಿದ ವ್ಯಕ್ತಿ ಇಂದು ಮರೆಯಾಗಿ ಬಿಟ್ಟಿರುತ್ತಾರೆ..

    ದಿನ ನಿತ್ಯ ರೋಗಿಗಳ ಸಾವು ನೋವುಗಳನ್ನು ನೋದುವ ನಿಮ್ಮ ಬತ್ತಳಿಕೆಯಲ್ಲಿ ಇಂಥಹ ಇನ್ನೆಷ್ಟು ಅನುಭವಗಳಿವೆಯೋ........!

    ಇನ್ನಷ್ಟು ಬರೆಯಿರಿ......... ಜೈ ಹೋ !

    ReplyDelete
  5. ಸಾವಿನ ನಂತರದ ಬದುಕು ಯಾವಾಗಲು ನಮ್ಮ ಕಣ್ಣಿಗೆ ಕಾಣುವುದಿಲ್ಲ..ಆದ್ರೆ ಸಾವಿನ ನಂತರ ಬದುಕನ್ನು ನಮ್ಮ ಜನರು ಬದುಕಿಸಿಕೊಳ್ಳುತ್ತಾರಲ್ಲ ಅದಕ್ಕಿಂತ ಒಳ್ಳೆಯ ಬದುಕು ಇನ್ನೊಂದಿಲ್ಲ..
    ಮಾಸ್ಟರ್ ಹಿರಣ್ಣಯ್ಯ ಹೇಳುವಂತೆ ಬರಿ ಸಾಯಕ್ಕೊಸ್ಕರ ಬದುಕಬಾರದು..ಸತ್ತ ಮೇಲು ಬದುಕಬೇಕು..ಅಂತಹ ಒಂದು ಹಿರಿಯ ಚೇತನದ ಒಡನಾಟ ಪಡೆದ ನೀವೇ ಧನ್ಯರು..ಹಾಗು ಅದನ್ನು ಹಂಚಿಕೊಂಡದಕ್ಕೆ ಧನ್ಯವಾದಗಳು..

    ReplyDelete
  6. ಆಚಾರ್ಯರು ಬದುಕುವದನ್ನು ಯಾವತ್ತೋ ಕಲಿತಿದ್ದರು! ಇತರರಿಗೂ ಕಲಿಸಿದರು ಎನ್ನಬೇಕಷ್ಟೆ!

    ReplyDelete
  7. kaliyalu koneyilla aadare namage ide,,, aadarinda namma koneyavarege kaliyuttale irabeku doctre... olle paatha achaaryaru needidaru.

    ReplyDelete

Note: Only a member of this blog may post a comment.