Friday, July 30, 2010

'ಖಾಲಿ ಜಗಾ ಕಹಾಂ ಹೈ?'

ಒಮ್ಮೆ ನಾನು ರೈಲಿನಲ್ಲಿ ದೆಹಲಿಯಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದೆ .ನನ್ನ ಎದುರಿನ ಸಾಲಿನಲ್ಲಿ ನಾಲಕ್ಕು ಜನ ಕೂರುವ ಜಾಗದಲ್ಲಿ ಮೂರು ಜನ ಮಾತ್ರ ಕೂತಿದ್ದರು.ಮಧ್ಯದಲ್ಲಿ ಕುಳಿತಿದ್ದ ಧಡೂತಿ ವ್ಯಕ್ತಿ ,ಬಹಳ ಹೊತ್ತಿನಿಂದ ಯಾರಿಗೂ ಜಾಗ ಕೊಡದೆ ಕಾಲುಗಳನ್ನು ಅಗಲಿಸಿಕೊಂಡುಇಬ್ಬರ ಜಾಗ ಆಕ್ರಮಿಸಿಕೊಂಡು  ಆರಾಮವಾಗಿ ಕುಳಿತಿದ್ದ.ಕೆಲವರು ಕೇಳಲು ಧೈರ್ಯ ಸಾಲದೇ ಮುಂದೆ ಹೋದರೆ ,ಕೆಲವರು ಜಾಗ ಕೇಳಿ ಆ ಧಡೂತಿ ವ್ಯಕ್ತಿಯ ಹತ್ತಿರ 'ಜಗಾ ಕಹಾಂ ಖಾಲಿ ಹೈ?ಕ್ಯಾ ಸಿರ್ ಪರ್ ಬೈಠೋಗೇ ?'ಎಂದು  ಹೇಳಿಸಿಕೊಂಡು ಮುಂದೆ ಹೋಗುತ್ತಿದ್ದರು.ಅವನ ಒರುಟು ತನದಿಂದ ಜನ ಬೇಸರ ಗೊಂಡಿದ್ದರೂ, ಅವನ ಆಕಾರ ಮತ್ತು ನಡವಳಿಕೆ ನೋಡಿ ಸುಮ್ಮನಿದ್ದರು.ಮುಂದೊಂದು ಸ್ಟೇಶನ್ ನಲ್ಲಿ ಒಬ್ಬ ಭಾರಿ ಸರ್ದಾರ್ ಜೀ ಬೋಗಿಯೊಳಗೆ ಹತ್ತಿದ.ಧಾರಾಕಾರವಾಗಿ ಸುರಿಯುತ್ತಿದ್ದ ಬೆವರು ಒರಿಸಿಕೊಳ್ಳುತ್ತಿದ್ದ ಅವನಿಗೆ ಧಡೂತಿಯವನು ಕುಳಿತಿದ್ದ ಡಬಲ್ ಸೀಟು ಕಣ್ಣಿಗೆ ಬಿತ್ತು.ಸ್ವಲ್ಪವೂ ಹಿಂಜರಿಯದೆ ಆ ಧಡೂತಿ  ಯವನಿಗೆ 'ಜರಾ ಸರಕೋ ಭೈಯ್ಯಾ 'ಎಂದಾ.ಧಡೂತಿ ವ್ಯಕ್ತಿ ತನ್ನ ಮಾಮೂಲಿ ವರಸೆಯಲ್ಲಿ 'ಜಗಾ ಕಹಾಂ ಖಾಲೀ  ಹೈ?ಕ್ಯಾ ಸಿರ್ ಪರ್ ಬೈಠೋಗೇ ?'ಎಂದು ಕೆಕ್ಕರಿಸಿ ನೋಡುತ್ತಾ  ಸಿಡುಕಿದ.ತಕ್ಷಣವೇ ಸರ್ದಾರ್ ಜೀ ತುಂಟ ನಗೆ ನಗುತ್ತಾ  'ಕ್ಯಾ ಸಿರ್ ಮೇ ಜಗಾ ಖಾಲೀ ಹೈ?' ಎಂದುವ್ಯಂಗ್ಯದ ಹರಿತ  ಬಾಣ ಒಂದನ್ನು  ಬಿಟ್ಟ.ಬಾಣ ನಾಟಿತು.ಈ ಅನಿರೀಕ್ಷಿತ ಮಾತಿನ ಧಾಳಿಯಿಂದ ಅವಾಕ್ಕಾದ ಧಡಿಯ, ಮರು ಮಾತಾಡದೆ ಸರಿದು ಜಾಗ ಬಿಟ್ಟ.ಸರ್ದಾರ್ ಜೀ ನಗುತ್ತಲೇಅವನ ಪಕ್ಕ  ಕುಳಿತುಕೊಂಡ.ಬೋಗಿಯಲ್ಲಿ ಈ ತಮಾಷೆಯನ್ನು ನೋಡುತ್ತಿದ್ದವರು ನಗು ತಡೆದು ಕೊಳ್ಳಲು ಕಷ್ಟಪಡುತ್ತಿದ್ದರು.ನಾನೂ ಮನಸ್ಸಿನಲ್ಲೇ ನಕ್ಕೆ.

Wednesday, July 28, 2010

'ನಲ್ಲಿ ಇದೆ,---- ನೀರಿಲ್ಲ!'

ಹೊಸ ಕವಿತೆಗನ್ನು ಬರೆಯಲಾಗುತ್ತಿಲ್ಲ.ಬ್ಲಾಗಿಗೆ ಏನು ಹಾಕಬೇಕು ಎಂದು ಯೋಚಿಸುತ್ತಿದ್ದಾಗ ಪುಸ್ತಕ ರಾಶಿಯಲ್ಲಿ ಇಪ್ಪತ್ತು ವರುಷಗಳ ಹಿಂದೆ ಬರೆದ ಕವಿತೆಗಳ ಡೈರಿಯೊಂದು ಸಿಕ್ಕಿತು.ಅದರಿಲ್ಲಿನ ಈ ಕವಿತೆ ಇಂದಿಗೂ ಪ್ರಸ್ತುತವೆನಿಸಿದ್ದರಿಂದ ಅದನ್ನು ಬ್ಲಾಗಿನಲ್ಲಿ ಹಾಕುತ್ತಿದ್ದೇನೆ.ಈ ಕವಿತೆ ಬಳ್ಳಾರಿ ಜಿಲ್ಲಾ ಕಾವ್ಯ ಮಾಲಿಕೆ '97 ರಲ್ಲಿ ಪ್ರಕಟಗೊಂಡಿತ್ತು .
'ನಲ್ಲಿ ಇದೆ--,ನೀರಿಲ್ಲ!'
--------------------------------

ನಲ್ಲಿ ಇದೆ ನೀರಿಲ್ಲವೆಂದು 
ಗೊಣಗೋದೇಕೆ ಸ್ನೇಹಿತರೇ ?
ನಮ್ಮ ದೇಶದಲ್ಲಿ ಎಲ್ಲವೂ  ಹೀಗೇ
ಮಾರ್ಗವೇ ಇಲ್ಲಾ ಬೇರೆ!

ಕಾಲೆಜಿವೆ,ಸ್ಕೂಲುಗಳಿವೆ!
ನಿಮ್ಮ ಮಕ್ಕಳಿಗೆ ಮಾತ್ರ ಸೀಟಿಲ್ಲಾ!
ಪುಸ್ತಕಗಳು ಪ್ರಿಂಟ್ ಆಗಿದ್ರೂ 
ಮಾರ್ಕೆಟ್ಟಿಗೆ ಇನ್ನೂ ಬಂದಿಲ್ಲಾ !

ನಿಮಿಷಕ್ಕೊಂದು ಆಟೋ ಬಂದ್ರೂ
ನೀವು ಹೇಳಿದ ಕಡೆ ಬರೋಲ್ಲಾ !
ಅಕಸ್ಮಾತ್ತಾಗಿ ಬಂದ್ರೂನೂವೆ 
ಮೀಟರ್ ಸರಿಯಾಗಿರೋಲ್ಲಾ !  

ಕಛೇರಿಗಳೋ ಮಾರಿಗೊಂದು 
ಕೆಲಸ ಮಾತ್ರ ನಡೆಯೋಲ್ಲಾ 
ಅರ್ಜಿ ಮುಂದೆ ಸಾಗೋಲ್ಲಾ
ಯಾವುದೂ ಊರ್ಜಿತವಾಗೊಲ್ಲ!

ಧರ್ಮಗಳೋ ಲೆಕ್ಕ ಇಲ್ಲ 
ಅಧರ್ಮ ಅನ್ಯಾಯ ತಪ್ಪಿಲ್ಲ 
ಮನುಷ್ಯರೇನೋ ಸಾಕಷ್ಟಿದ್ದರೂ 
ಮನುಷ್ಯತ್ವವೇ ಕಾಣೋಲ್ಲಾ !

ನಲ್ಲಿ ಇದೆ ನೀರಿಲ್ಲವೆಂದು 
ಗೊಣಗೋದೇಕೆ ನೀವು ?
ಹೆಸರಿಗೆ ಮಾತ್ರಾ ಬದುಕ್ತಾ ಇಲ್ವಾ ?
ಅದರ ಹಾಗೇ ನಾವೂ !!! 

Saturday, July 24, 2010

'ಜೋಕಾಲೇಲಿ ಜೀಕು ! '

ನಾನು ಆಸ್ಪತ್ರೆಗೆ ಹೊರಡಲು ತಯಾರಾಗುತ್ತಿದ್ದೆ. ಆರನೇ ತರಗತಿ ಓದುತ್ತಿದ್ದ  ಪಕ್ಕದ ಮನೆಯ ಹುಡುಗಿ ಸ್ಮಿತಾ  ಬಂದು'ಅಂಕಲ್ ಶಾಲೆಯಲ್ಲಿ ಕಾಂಪಿಟೇಶನ್ ಇದೆ ,ನಮಗೆ ಒಂದು ಹಾಡು ಬರೆದುಕೊಂಡು ಬರಬೇಕು ಅಂತ ಹೇಳಿದ್ದಾರೆ ,ಪ್ಲೀಸ್ ಬರೆದುಕೊಡಿ ಅಂಕಲ್ 'ಎಂದು ಪೀಡಿಸತೊಡಗಿದಳು.'ಇವತ್ತು  ಲೇಟಾಯಿತಮ್ಮ ನಾಳೆ ಬರೆದುಕೊಡುತ್ತೀನಿ 'ಎಂದರೆ ಕೇಳಲಿಲ್ಲ.'ಟೀಚರ್ ಹೊಡೆಯುತ್ತಾರೆ ಅಂಕಲ್ 'ಎಂದು ಬಾಣ ಬಿಟ್ಟು, ಅಳತೊಡಗಿದಳು.ಈ ಟೀಚರ್ ಗಳು ಮಕ್ಕಳನ್ನು ಹೊಡೆದು ನಮ್ಮನ್ನೇಕೆ ಹೀಗೆ ಪೀಡಿಸುತ್ತಾರೆಂದು ನನಗೆ ಈಗಲೂ ಅರ್ಥವಾಗಿಲ್ಲ.'ಏನೋ ಒಂದು ಬರೆದುಕೊಡಿ,ಪಾಪ ಮಗು ಕೇಳುತ್ತೆ' ಎಂದು ನನ್ನವಳ ತಾಕೀತು ಬೇರೆ.ಆಗ ತಾನೇ ಕವಿತೆಗಳನ್ನು ಬರೆಯಲು ಶುರು ಮಾಡಿದ್ದೆ .ಸರಿ ,ಅವಸರದಲ್ಲೇ ಒಂದು ಹಾಡು ಬರೆದುಕೊಟ್ಟೆ.ಅದಕ್ಕೆ ಒಂದು ರಾಗವನ್ನೂ ಹಾಕಿ ಕೊಟ್ಟೆ.ಸ್ಮಿತಾ ಹಾಡು ಸಿಕ್ಕ ಸಂತೋಷದಲ್ಲಿ ಮನೆಗೆ  ಓಡಿದಳು.ಶಾಲೆಯಲ್ಲಿ ಆ ಹಾಡನ್ನು ಹಾಡಿ ಬಹುಮಾನವನ್ನೂ ಗಿಟ್ಟಿಸಿದಳು.ನಾನು ಮೊದಮೊದಲು ಬರೆದ ಗೀತೆಗಳಲ್ಲಿ ಇದೂ ಒಂದು.ನೀವೂ ನಿಮ್ಮ ಮಕ್ಕಳಿಗೆ ಈ ಹಾಡನ್ನು ಹೇಳಿಕೊಡಿ.ಹಾಡು ಇಷ್ಟವಾಯಿತೇ ತಿಳಿಸಿ.ನಮಸ್ಕಾರ.

ಜೀವನವೆಂಬ ಜೋಕಾಲೇಲಿ
ಮೇಲೇ ಕೆಳಗೆ ಜೀಕು !
ಕಷ್ಟ ಸುಖ ಎಲ್ಲಾ ಒಂದೇ 
ಅನ್ನೋ ಸಮತೆ ಬೇಕು !


ಹೂವಿನ ಜೊತೆಗೇ ಮುಳ್ಳೂಇರಲಿ 
ಗುಲಾಬಿ ಗಿಡದಲ್ಲಿ !
ಹಾಳೂ ಮೂಳೂ ಎಲ್ಲಾ ಇರಲಿ 
ಬಾಳಿನ ತೋಟದಲಿ !


ಹಸಿರಿನ ಜೊತೆಗೇ ಕೆಸರೂ ಇರಲಿ 
ತೋಟದ ಹಾದಿಯಲಿ !
ನೋವೂ ,ನಲಿವೂ ಎಲ್ಲಾ ಇರಲಿ 
ಬಾಳಿನ ರಾಗದಲಿ!

ಬೇವು ಬೆಲ್ಲ ಎಲ್ಲಾ ಇರಲು 
ಬಾಳು ಸೊಗಸಣ್ಣಾ !
ಸುಖವೊಂದನ್ನೇ ಬೇಡಲು ಬೇಡ 
ಅಯ್ಯೋ ಮಂಕಣ್ಣಾ !

 (ಚಿತ್ರ ಕೃಪೆ;ಅಂತರ್ಜಾಲ )

Wednesday, July 21, 2010

'ದಾಂಪತ್ಯ ಗೀತೆ '

ದಾಂಪತ್ಯ ಜೀವನವೆಂದರೆ ಒಲವು ನಲಿವಿನ ಜೊತೆ ಜೊತೆಗೇ ಸಿಟ್ಟು ಸೆಡವು,ಕೋಪ ತಾಪ,ಮೌನದ ಶೀತಲ ಸಮರ ,ಇವೆಲ್ಲಾ ಇದ್ದದ್ದೇ.ಮದುವೆಗೆ ಮೊದಲು ,ಸುಂದರ ಕನಸುಗಳದೇ ಸಾಮ್ರಾಜ್ಯ.ಅಲ್ಲಿ ಕಷ್ಟಗಳ ಇರುಸು ಮುರುಸು,ಮುನಿಸುಗಳ ಕಿನಿಸು ಇವುಗಳ ಸುಳಿವೂ ಇರುವುದಿಲ್ಲ.ದಾಂಪತ್ಯದ ಹಾದಿಯಲ್ಲಿ ಜೊತೆ ಜೊತೆಯಲಿ ಸಾಗಿ ,ಅಗ್ನಿಪರೀಕ್ಷೆಗಳಿಗೆ ಒಳಗಾಗಿ ಒಬ್ಬರನ್ನೊಬ್ಬರು ಅರಿತು ನಡೆದಾಗ, ಬಾಳು ಸಹನೀಯವಾಗುತ್ತದೆ.ನನ್ನ ಇಪ್ಪತ್ತೊಂಬತ್ತು ವರುಷಗಳ ದಾಂಪತ್ಯದಲ್ಲಿ ,ಶಾಂತಿ,ಸಹನೆ,ತಾಳ್ಮೆಯಿಂದ ನನ್ನ ಜೊತೆಗೂಡಿ ಬಂದ ನನ್ನ ಸಹ ಧರ್ಮಿಣಿಗೆ ಈ ದಿನ, ಹುಟ್ಟು ಹಬ್ಬದ ಶುಭಾಶಯಗಳನ್ನು ಕೋರುತ್ತಾ ಸುಮಾರು ಇಪ್ಪತ್ತು ವರುಷಗಳ ಹಿಂದೆ ಬರೆದ ಗೀತೆಯೊಂದನ್ನು ಬ್ಲಾಗಿನಲ್ಲಿ  ಹಾಕುತ್ತಿದ್ದೇನೆ.ಹೇಗಿದೆ ತಿಳಿಸಿ.ನಮಸ್ಕಾರ.

ನನ್ನ ನಿನ್ನ ನಡುವೆ 
ಯಾಕೇ ಈ ಗೋಡೆ ?
ಸಿಟ್ಟು ಅತ್ತ ಇಟ್ಟು 
ಸ್ವಲ್ಪ ಇತ್ತ ನೋಡೇ|

ನಾನು ಯಾರೋ ನೀನು ಯಾರೋ 
ಮನಸು ಮನಸು ಕೂಡಿ ,
ಒಲವು ಮೂಡಿತು ,ಮದುವೆಯಾಯಿತು 
ಒಂದೇ ಹಾಡ ಹಾಡಿ|

ಹಾಯಿ ಎರಡು ,ಹುಟ್ಟು ಎರಡು ,
ದೋಣಿ ಮಾತ್ರ ಒಂದೇ !
ಯಾತ್ರಿ ನಾವುಗಳು ಇಬ್ಬರಾದರೂ 
ಯಾನ ಮಾತ್ರ ಒಂದೇ |

ಮಾತೂ ಇರಲಿ ,ಮುನಿಸೂ ಇರಲಿ 
ಮೌನ ಮಾತ್ರ ಬೇಡ !
ನಮ್ಮಿಬ್ಬರ ನಡುವೆ ಎಂದೂ 
ಬಲೆ ನೇಯದಿರಲಿ ಜೇಡ |  

Monday, July 19, 2010

'ಶಾಪಗ್ರಸ್ತ -----ಯಕ್ಷರು !'

ಇಲ್ಲೇ ಇದ್ದಾರೆ ----!
ನಮ್ಮ ನಿಮ್ಮ ನಡುವೆ ,
ಗೊತ್ತೇ ಆಗದಂತೆ !
ಶಾಪಗ್ರಸ್ತ  ಯಕ್ಷರು!
ಈ ಅವ್ಯವಸ್ಥೆಯ ಆಗರದ 
ವ್ಯವಸ್ಥೆಯಲ್ಲಿ ಬೇಸತ್ತವರು ! 
ಕಾಡಿನ  ಕತ್ತಲಲ್ಲಿ 
ಮಿಂಚು  ಹುಳುವಾದವರು!
ತಾವೇ  ಬೆಳಕಾದವರು!
ರಾಜ  ಮಾರ್ಗದ  ಮರವಾಗಿ 
ಬೀಗ  ಬೇಕಿದ್ದವರು ,
ಗುಡ್ಡದ  ಕೆಳಗಿನ 
ಗರಿಕೆ  ಹುಲ್ಲಾಗಿ
ತಣ್ಣಗೇ  ಉಳಿದವರು!
ಇಂದ್ರಲೋಕವ  ಇಲ್ಲೂ 
ರಚಿಸ  ಬಲ್ಲಂಥವರು ,
ಅವಕಾಶವೇ  ಸಿಗದೆ
ತೆರೆಯ  ಮರೆಯಲ್ಲೇ 
ತಣ್ಣಗಾದವರು------!
ಕೂಗುವ ಕಾಗೆ ಕತ್ತೆಗಳಿಗೆ 
ರಂಗಸ್ಥಳವ ಬಿಟ್ಟುಕೊಟ್ಟು ,
ನೇಪಥ್ಯಕ್ಕೆ ಸರಿದವರು!
ಇಲ್ಲೇ ಇದ್ದಾರೆ --------!
ಗೊತ್ತೇ ಆಗದಂತೆ!  
ಪತ್ತೆಗೇ ಬಾರದಂತೆ !
ಎಲೆಯ ಹಿಂದಿರುವ 
ವನ ಸುಮದಂತೆ -----!
ಸೌರಭವ ಸೂಸುತ್ತಾ!
ನಮ್ಮೆಲ್ಲರ ನಡುವೆಯೇ 
ಶಾಪಗ್ರಸ್ತ ---ಯಕ್ಷರು !


(ಚಿತ್ರ ಕೃಪೆ;ಅಂತರ್ಜಾಲ)

Saturday, July 17, 2010

'ಪಾತರಗಿತ್ತಿ ಪಕ್ಕ'





ಆಸ್ಪತ್ರೆಯ ಡ್ರೆಸ್ಸಿಂಗ್ ರೂಮಿನಲ್ಲಿ ಪಟ್ಟಿ ಕಟ್ಟುತ್ತ ಇದ್ದ ಮಾಲಿಂಗ ನನ್ನ ರೂಮಿಗೆ ಬಂದು ಕರೆದು ಹೋದ .ಅಲ್ಲಿ ಇದ್ದ
ಸ್ಕ್ರೀನಿನ ಮೇಲೆ ರೆಕ್ಕೆಯ ಅಗಲ(wing span)ಸುಮಾರು ಏಳು ಇಂಚಿನಷ್ಟಿದ್ದ ಚಿಟ್ಟೆಯೊಂದು ಕುಳಿತಿತ್ತು.ಮೊದಲ ನೋಟಕ್ಕೆ
ಅದು ಚಿಟ್ಟೆ ಅನಿಸಿದರೂಅದೊಂದು ಪತಂಗದ(MOTHನ)ಒಂದು ಪ್ರಬೇಧವಿರಬಹುದು ಎನಿಸಿತು.ತಿಳಿದವರು ಹೆಚ್ಚಿನ ಮಾಹಿತಿ ನೀಡಲು
ಈ ಮೂಲಕ ವಿನಂತಿಸಿ ಕೊಳ್ಳುತ್ತೇನೆ .

Thursday, July 15, 2010

'ಬರಡು ಮನಕೆ ಹಸಿರು ಹೊದಿಕೆ'

ನಮ್ಮ ಮನೆಯ ಅನತಿ ದೂರದಲ್ಲೇ ಇದೆ ಈ ಪಾಳು ಬಿದ್ದ ಮನೆ.ಹೆಂಚು ಹಾರಿ ಹೋಗಿ ,ಕಿಟಕಿ ಬಾಗಿಳುಗಳಿಲ್ಲದೆ ಅನಾಥವಾಗಿ ನಿಂತಿದೆ.ಈ ಮನೆಯನ್ನು ನೋಡಿದಾಗಲೆಲ್ಲಾ ಏನೋ ಒಂದು ಅವ್ಯಕ್ತ ಭಾವನೆ . ಈ ಚಿತ್ರದ ಕುರಿತು ಕವಿತೆಯೊಂದನ್ನು ಬರೆಯಬೇಕೆಂದುಕೊಂಡಿದ್ದೇನೆ . ಇನ್ನೂ ಸಫಲತೆ ಸಿಕ್ಕಿಲ್ಲ.ನಮ್ಮ ಸುತ್ತ ಮುತ್ತ ಇರುವ ಹಲವರ ಬದುಕಿಗೂ ,ಈ ಪಾಳು ಬಿದ್ದ ಮನೆಗೂ ಸಾಕಷ್ಟು ಸಾಮ್ಯವಿದೆ ಎನಿಸುವುದಿಲ್ಲವೇ?ಇಲ್ಲೂ ಹಿಂದೊಮ್ಮೆಸಂತಸದ  ಬದುಕಿತ್ತಲ್ಲವೇ ?ಎನಿಸುತ್ತದೆ.ಚಿತ್ರಕ್ಕೆ ಶೀರ್ಷಿಕೆ ಏನು ಹಾಕಬೇಕೆಂದು ತಿಳಿಯದೇ,ಶೀರ್ಷಿಕೆಯೊಂದನ್ನು ಸೂಚಿಸುವಂತೆ ಕೋರಿದ್ದೆ.ಹಲವಾರು ಉತ್ತಮ ಶೀರ್ಷಿಕೆಗಳು ಹರಿದು ಬಂದವು.ಶೀರ್ಷಿಕೆ ಸೂಚಿಸಿದ ಎಲ್ಲರಿಗೂ ಧನ್ಯವಾದಗಳು.ಶ್ರೀಧರ್ ಅವರು ಕಳಿಸಿದ  ಶೀರ್ಷಿಕೆಯನ್ನು ಹಾಕಿದ್ದೇನೆ.ನಿಮ್ಮ ಪ್ರತಿ ಕ್ರಿಯೆಗಳಿಗೆ ಸ್ವಾಗತ.

Tuesday, July 13, 2010

'ನಾಯಿ ಪಾಡು '

ಪಾಪ ,ರಸ್ತೆಯ ಮೇಲೇ
ಮಲಗಿದೆ  ನಾಯಿ ----!
ಸುತ್ತಲಿನವರು  ತನಗೆ 
ಬೊಗಳಲು ಅವಕಾಶವನ್ನೇ 
ಕೊಡದಿರುವುದಕ್ಕಾಗಿ-----,
ತೆಪ್ಪಗಾಗಿದೆ ಅದರ ಬಾಯಿ !
ತಂಗಳು ಪೆಟ್ಟಿಗೆಯಲ್ಲಿ 
ಮೂರು ದಿನದ ತಂಗಳಿಟ್ಟು 
ತಿನ್ನುವವರು ಹೆಚ್ಚಾಗಿ ,
ತಿಪ್ಪೆ ಕೆದಕಿ ಪೆಚ್ಚಾಗಿ ,
ಹೊಟ್ಟೆಗೆ ಹಿಟ್ಟಿಲ್ಲದೇ ,
ರಸ್ತೆಯ ಮೇಲೆಯೇ ,
ಸಪ್ಪಗೆ ಮಲಗಿದೆ ನಾಯಿ !
ಇರದೆ ಬೇರೆ ದಾರಿ!
ಹರಿದು ಹೋದರೆ ಹೋಗಲಿ 
ದೊಡ್ಡದೊಂದು ಲಾರಿ 
ಎಂದು ಬೇಸರಗೊಂಡಂತೆ!
ಪ್ರಾಮಾಣಿಕತೆಯೇ ಸೊರಗಿ 
ಮೈ ಮುದುರಿಕೊಂಡಂತೆ !
ಬೆಪ್ಪಾಗಿ ಮಲಗಿದೆ ನಾಯಿ !

Monday, July 12, 2010

'ಸೋತರೇನೊಮ್ಮೆ?'

ಹೌದು ಸ್ವಾಮಿ,ಹೌದು !
ನೀವು ಕಲಿ ಕರ್ಣರೇ !
ನಿಮ್ಮ ಮಕ್ಕಳೂ -----,
ಇಂದ್ರ,ಚಂದ್ರರೇ ---!
ಇದೋ ನಿಮಗೆ ನಮ್ಮ 
ಮುಜರೆ ,ಸಲಾಮು !
ಆದರೇ ----------,
ಹೀಗೇಕೆ ಇರಿಯುತ್ತೀರಿ 
ನಿಮ್ಮ ಎದುರಿನವರೆದೆಯ 
ನಿಮ್ಮ ಮಾತಿನ ಈಟಿಯಲಿ?
ನಿಮ್ಮ ತುತ್ತೂರಿ ನೀವೇ ಊದುತ್ತ
ನಿಮಗೆ ನೀವೇ ವಂದಿ ಮಾಗಧರಾಗಿ 
ಬಹುಪರಾಕು ಹೇಳಿಕೊಳ್ಳುತ್ತಾ 
ಕುಗ್ಗಿದವರೆದೆಯ ಮೇಲೆ
ನಡೆಸಬಹುದೇ ನೀವು ಹೀಗೆ
ನಿಮ್ಮ ಡೊಳ್ಳು ಕುಣಿತ?
ನಿಮ್ಮ ಅಬ್ಬರದ ಬೊಬ್ಬೆಯಲಿ
ಹೂವಂಥ ಮನವೊಂದು 
ನಲುಗುತಿದೆ ಮನ ನೊಂದು !
ಚಿವುಟದಿರಿ ಮೊಗ್ಗುಗಳ !
ಅರಳ ಬಿಡಿ ಹೂವುಗಳ !
ಯಾರ ಬಿಸಿ ಉಸಿರು ತಾಗದೇ 
ಅರಳಲವು-------------,
ತಮ್ಮಷ್ಟಕ್ಕೆ ತಾವೇ !
ಸೋತರೇನೊಮ್ಮೆ ?
ಅದೇ ------ಸಾವೇ ?

Saturday, July 10, 2010

'ಏನೂ ತಿನ್ನೋಲ್ಲಾ !ಆದರೂ ಶುಗರ್ರು '-ಭಾಗ 2

ಬೆಳಗಿನ ಜಾವ ಸುಮಾರು ಐದು ಗಂಟೆ .ಇನ್ನೂ ಮಸಕು ಮಸಕು ಕತ್ತಲೆ.ಡಿಸೆಂಬರ್ ತಿಂಗಳಾದ್ದರಿಂದ ಚುಮು ಚುಮು ಚಳಿ.ರಸ್ತೆಯಲ್ಲಿ ವಾಕಿಂಗ್ ಹೊರಟಿದ್ದೆ .ಸ್ವಲ್ಪ ದೂರದಲ್ಲಿ ಎದುರಿನಿಂದ ಭಾರೀ ದೇಹದ ವ್ಯಕ್ತಿಯೊಬ್ಬ 'ಧಸ್ ಭುಸ್ -ಧಸ್ ಭುಸ್'ಎಂದು ಸದ್ದು ಮಾಡುತ್ತಾ ಓಡುತ್ತಾ ಬರುತ್ತಿದ್ದ.ತಕ್ಷಣ ಯಾರು ಅಂತಾ ಗುರುತು ಸಿಗಲಿಲ್ಲ.'ಹಾಯ್ ಸರ್'ಎಂಬ ರಾಜುವಿನ ಪರಿಚಿತ ದನಿ ಕೇಳಿತು.ಏದುತ್ತಲೇ ರಾಜು ಎದುರಿಗೆ ಬಂದು ನಿಂತ.ಮುಖದಲ್ಲಿ ಅದೇ ಮಾಸದ ನಗು!ಯಾರೇ ಅಗಲಿ ರಾಜುವನ್ನು ಮಾತನಾಡಿಸದೆ ಮುಂದೆ ಹೋಗುತ್ತಿರಲಿಲ್ಲ.ಅಂತಹ ವ್ಯಕ್ತಿತ್ವ ರಾಜುವಿನದು!ಆ ಚಳಿಯಲ್ಲೂ ಧಾರಾಕಾರವಾಗಿ ಬೆವರುತ್ತಿದ್ದ.ಸಾಮಾನ್ಯವಾಗಿ ಎಲ್ಲಾ ಮಧ್ಯ ವಯಸ್ಕರಂತೆಯೇ ರಾಜುವಿಗೂ 'ಮಧ್ಯ ಪ್ರದೇಶ'ವಿಸ್ತಾರವಾಗಿ ಬೆಳದಿತ್ತು .ಇದರ ಜೊತೆ ಶುಗರ್ ಬೇರೆ ಅಂಟಿಕೊಂಡಿತ್ತು.ತನ್ನ 'apple ಹೊಟ್ಟೆ'ಯನ್ನು ಕರಗಿಸಲು ಜಾಗಿಂಗು,ಶಟಲ್ ,ಜಿಮ್ಮು ಅಂತ ಏನೆಲ್ಲಾ ಕಸರತ್ತು ಮಾಡಿದರೂ ಹೊಟ್ಟೆ ಮಾತ್ರ ಒಂದಿಷ್ಟೂ ಕರಗುತ್ತಿರಲಿಲ್ಲ.ರಾಜು ಮಾತ್ರ ಸ್ವಲ್ಪವೂ ಬೇಸರವಿಲ್ಲದೆ 'ಏನ್ ಸಾರ್ ಈ ಹೊಟ್ಟೆ! ಒಳ್ಳೇ ಕನ್ನಂಬಾಡಿ ಕಟ್ಟೆ ಹಾಗಿದೆ!'ಎಂದು ತನ್ನನ್ನು ತಾನೇ ಹಾಸ್ಯ ಮಾಡಿಕೊಂಡು ನಗುತ್ತಿದ್ದ.'ಸಾರ್ ಇದೇನ್ ಸರ್ ನಿಮ್ಮ ಹೊಟ್ಟೆ!ಬರಗಾಲದವರ ಹೊಟ್ಟೆ ಒಳಕ್ಕೆ ಹೋದಹಾಗೆ ಆಗಿದೆ!ಸಾರ್ ನನ್ನ ಹೊಟ್ಟೆ ಹೇಗೆ ಕಮ್ಮೀ ಮಾಡೋದು ಹೇಳಿ 'ಎಂದ. 'ರೀ ರಾಜೂ ,ತಿನ್ನೋದು ಸ್ವಲ್ಪ ಕಮ್ಮೀ ಮಾಡ್ರೀ,ನಿಮ್ ಹೊಟ್ಟೆನೂ ಕಮ್ಮೀ ಆಗುತ್ತೆ 'ಎಂದೆ .'ಮೊದಲು ತಿನ್ನೋದಕ್ಕಿಂತಾ ಅರ್ಧದಷ್ಟು ಕಮ್ಮಿಮಾಡಿದೀನಿ ಸಾರ್ ಈಗ!'ಎಂದ ರಾಜು.'ಇಡ್ಲಿ ಆದರೆ ,ಟಿಫಿನ್ ಗೆ ಎಷ್ಟು ಇಡ್ಲೀ ತಿಂತೀರ್ರೀ ?ಎಂದೆ'.'ಇಡ್ಲಿ ಆದರೆ ಹನ್ನೆರಡು ಇಡ್ಲಿ ಸಾರ್ 'ಎಂದ.'ಕಮ್ಮೀ ಮಾಡಿದ್ದೀನಿ ಅಂದ್ರೀ!ಹನ್ನೆರಡು ಇಡ್ಲಿ ಕಮ್ಮಿಏನ್ರೀ ರಾಜು!!?'ಎಂದೆ .'ಮೊದಲೆಲ್ಲಾ ಒಂದು ದೊಡ್ಡ ಇಡ್ಲಿ ಕುಕ್ಕರ್ ನ ಪೂರಾ ಒಬ್ಬೆ ,24 ಇಡ್ಲಿಯನ್ನ ನನಗೊಬ್ಬನಿಗೇ, ತಟ್ಟೆಗೆ ಹಾಗೇ ತಳ್ಳುತ್ತಾ ಇದ್ದರೂ ಸಾರ್ ಮನೆಯವರು .ಈಗ ಬರೀ ಹನ್ನೆರಡು ಇಡ್ಲಿ.ಅರ್ಧಕ್ಕರ್ಧ ಕಮ್ಮಿ ಆಯ್ತಲ್ಲಾ !'ಎಂದ.'ಅಲ್ರೀ ರಾಜೂ ,ಟಿಫಿನ್ನಿಗೆ ಹನ್ನೆರಡು ಇಡ್ಲಿ ತಿಂದರೆ ಹೊಟ್ಟೆ ಹೇಗ್ರೀ ಕಮ್ಮಿ ಆಗುತ್ತೆ?ತಿಂಡಿಗೆ  ಮೂರು ಇಡ್ಲಿ  ತಿಂದರೆ ಸಾಕಪ್ಪ'ಎಂದೆ.'ನಿಮ್ಮ ಮಾತು ಕೇಳಿ ಮೂರು ಇಡ್ಲಿ ತಿಂದರೆ ,ಒಂದು ಗಂಟೆ ಹೊತ್ತಿಗೆ ತಲೆ ತಿರುಗಿ ಬಿದ್ದು ,ಸತ್ತೇ ಹೋಗ್ತೀನಿ ಅಷ್ಟೇ!ಹೋಗೀ ಸಾರ್'ಎಂದು ಜೋರಾಗಿ ನಗುತ್ತಾ   ಜಾಗಿಂಗ್ ಮುಂದುವರೆಸಿದ ರಾಜು.ಈ ಘಟನೆ ನಡೆದು ಈಗ ಸುಮಾರು ಆರು ವರ್ಷಗಳಾಗಿವೆ.ಕೆಲವು ದಿನಗಳ ಹಿಂದೆ ರಾಜು ಸಿಕ್ಕಿದ್ದ.ತನ್ನ 'apple ಹೊಟ್ಟೆ'ಮತ್ತು ಶುಗರ್ ಎರಡನ್ನೂ ಜತನದಿಂದ ಕಾಪಾಡಿಕೊಂಡು ಬಂದಿದ್ದಾನೆ ರಾಜು!

Wednesday, July 7, 2010

'ಏನೂ ತಿನ್ನೋಲ್ಲಾ !ಆದರೂ ಹಾಳು ಶುಗರ್ರು!'-ಭಾಗ ೧

'ಸಾರ್ ,ದೇವರಾಣೆಗೂ ಹೇಳ್ತೀನಿ ,ನಾನು ಏನೂ ತಿನ್ನೊಲ್ಲಾ ,ಆದರೂ ಈ ಹಾಳು ಶುಗರ್ರು ಕಮ್ಮಿನೇ  ಆಗ್ತಿಲ್ಲಾ!ಕಣ್ಣಿನ ಆಪರೇಶನ್ ಮಾಡಿಸಬೇಕು,ಬೇಗ ಈ ಶುಗರ್ ಒಂದು ಕಮ್ಮಿ ಮಾಡಿಕೊಡಿ'ಎಂದು ಅಲವತ್ತು ಕೊಂಡಳು ಅರವತ್ತರ ಮುನಿಯಮ್ಮ.'ಏನೂ ತಿನ್ನದೇ ಶುಗರ್ ಹೇಗೆ ಜಾಸ್ತಿಯಾಗುತ್ತಮ್ಮಾ!ಅದೇನು ಗಾಳಿಯಿಂದ ಬರುತ್ಯೆ ?ನೀನೆಲ್ಲೋ ಮಾತ್ರೆ ತೊಗೊಳ್ಳೋದು ಬಿಟ್ಟಿರಬೇಕು'ಎಂದೆ .'ಅಯ್ಯೋ !ನಾನ್ಯಾಕೆ ಬಿಡಲೀ ಸಾರ್ ಮಾತ್ರೆನಾ!ಆ ಮಾತ್ರೇನೆ ಸರಿ ಇಲ್ಲಾ ,ಬೇರೆ ಯಾವುದಾದರೂ ಒಳ್ಳೇ ಮಾತ್ರೆ ಬರೆದು ಕೊಡಿ 'ಎಂದು ಮುನಿಸಿಕೊಂಡಳು ಮುನಿಯಮ್ಮ! 'ಎಲ್ಲೋ ಮಾವಿನ ಹಣ್ಣಿನ ಸೀಕರಣೆ,ಒಬ್ಬಟ್ಟು, ಹಲಸಿನ ಹಣ್ಣು ಎಲ್ಲಾ  ಚೆನ್ನಾಗಿ ತಿಂದಿದ್ದೀಯಾ  ಅಂತ ಕಾಣುತ್ತೇ'ಎಂದು ಇನ್ನಷ್ಟು ಕೆರಳಿಸಿದೆ. ಮುನಿಯಮ್ಮ ಮತ್ತಷ್ಟು ಮುನಿಸಿಕೊಂಡಳು !'ಪಥ್ಯ ಎಲ್ಲಾ ಸರೀಗೆ ಮಾಡ್ತಾ ಇದ್ದೀನಿ ಸಾರ್.ಅನ್ನ ತಿನ್ನಲ್ಲಾ,ಸಿಹಿ ಪದಾರ್ಥ ಮುಟ್ಟೋದಿಲ್ಲಾ !ಆದರೂ ಯಾಕೆ ಸಾರ್ ಶುಗರ್ ಕಮ್ಮಿ ಆಗ್ತಾ ಇಲ್ಲಾ?'ಎಂದು ಪಾಟಿಸವಾಲು ಹಾಕಿದಳು ಮುನಿಯಮ್ಮ.'ಬೆಳಿಗ್ಗೆಯಿಂದಾ ರಾತ್ರೀವರೆಗೂ ಏನೇನು ತಿಂತೀಯ ಹೇಳು ಮುನಿಯಮ್ಮ 'ಎಂದೆ ಶಾಂತವಾಗಿ.'ಬರೀಚಪಾತಿ, ಪಲ್ಯ ಬಿಟ್ಟರೆ ಬೇರೇನೂ ತಿನ್ನೊಲ್ಲಾ ಸಾರ್ 'ಎಂದಳು ಮುನಿಯಮ್ಮ.(ಇಟ್ಟಿಗೆ ಸಿಮೆಂಟು ಬ್ಲಾಗಿನ ಪ್ರಕಾಶ್ ಹೆಗಡೆಯವರ 'ಹೆಸರೇ ಬೇಡ'ಪುಸ್ತಕದಲ್ಲಿ ಅದೇ ತಾನೇ ಚಪಾತಿ ಪ್ರಸಂಗ ಓದಿದ್ದರಿಂದ ಚಪಾತಿ ಎಂದ ತಕ್ಷಣ ತುಂಬಾ ನಗು ಬಂದಿತ್ತು ಕಷ್ಟಪಟ್ಟು ತಡೆದುಕೊಂಡೆ).'ಸರಿ ಹೇಳು ,ಎಷ್ಟು ಚಪಾತಿ ತಿಂತೀಯ 'ಎಂದೆ.''ಸಾರ್ ಬೆಳಿಗ್ಗೆ ತಿಂಡಿಗೆ ಆರು ಚಪಾತಿ,ಪಲ್ಯ!ಮಧ್ಯಾನ್ನ ಊಟಕ್ಕೆ ಆರು ಚಪಾತಿ, ಪಲ್ಯ!ರಾತ್ರಿ ಊಟಕ್ಕೆ ಆರು ಚಪಾತಿ, ಪಲ್ಯ!ಅಷ್ಟೇಯ'ಎಂದಳು,ಅದೇನು ಮಹಾ ಅನ್ನುವ ಹಾಗೆ!ಲೆಕ್ಕ ಹಾಕಿದೆ.ತಲೆ ಗಿರ್ರೆನ್ನುತ್ತಿತ್ತು ! ಆರ್  ಮೂರ್ ಲಿ  ಹದಿನೆಂಟು! ದಿನಕ್ಕೆ ಹದಿನೆಂಟು ಚಪಾತಿ ಪ್ಲಸ್ ಪಲ್ಯ (ಅದೆಷ್ಟು ಕಿಲೋನೋ?) !!ತಿಂದರೆ ಶುಗರ್ ಹೇಗೆ ಕಮ್ಮಿಯಾಗಬೇಕು!!?ಒಳ್ಳೇ ಗರಡೀ ಮನೆ ಗೆ ಹೋಗಿ ವ್ಯಾಯಾಮ ಮಾಡುವವರು ತಿಂದ ಹಾಗೆ ತಿನ್ನುತ್ತಾಳಲ್ಲಾ ಈ  ಯಮ್ಮ  !!!ಎಂದು ಆಶ್ಚರ್ಯ ವಾಯಿತು.  
ಬರೀ ಚಪಾತಿಯದೆ ಲೆಕ್ಕ ಹಾಕಿದರೆ 3000-3600 ಕ್ಯಾಲೋರಿಯಾಗುತ್ತೆ!ಡಯಾಬಿಟೀಸ್ ಇದ್ದವರು ದಿನಕ್ಕೆ 1800 ಕ್ಕಿಂತಾ ಹೆಚ್ಚು ಕ್ಯಾಲೋರಿಯ  ಆಹಾರ ತೊಗೋಬಾರದು.ಈ ಮುನಿಯಮ್ಮನಿಗೆ ಕ್ಯಾಲೋರಿ ಲೆಕ್ಕ ಯಾವ ರೀತಿಯಲ್ಲಿ ಹೇಳುವುದು ಅಂತ ಯೋಚಿಸುತ್ತಾ ಕುಳಿತೆ.

Saturday, July 3, 2010

'ಬದುಕು ,ಬಬಲ್ --ಗಮ್ '

ಬದುಕು 'ಬಬಲ್ ಗಮ್'ನ ಹಾಗೆ!
ಮೊದಮೊದಲು ಸಿಹಿಯಾಗಿದ್ದು,
ಜಗಿದದ್ದೇ------ ಜಗಿದದ್ದು!
ಜಗಿಯುತ್ತಾ-----ಜಗಿಯುತ್ತಾ,
ಕಡೆಗೆ------ಬರೀ, ಸಪ್ಪೆ!
ಸಿಹಿಯಾದ ಹಣ್ಣೆಂದು ಭ್ರಮಿಸಿದ್ದು  
ನಿಜದಲ್ಲಿ------ಖಾಲೀ ಸಿಪ್ಪೆ!
ಅಯ್ಯೋ ಬೆಪ್ಪೇ ಎಂದು ನಗುತ್ತಿದೆ
ಬಾಯಲ್ಲಿರುವ ಬಬಲ್ ಗಮ್ಮು !
ಜಗಿಯುವುದೇ ತಲೆ ನೋವಾದರೂ,
ಅದೇ, ಹಿತವೆನಿಸತೊಡಗಿ ,

ಸಂಬಂಧಗಳು ರಾಡಿಯಾದರೂ,
ಅದೇ------ರೂಢಿಯಾಗಿ !
ನುಂಗಲೂ ಆಗದೆ,ಉಗಿಯಲೂ ಬಾರದೆ,
ಜಗಿಯುತ್ತಲೇ ಇರಬೇಕೆನಿಸುವ,
ಈ ನಮ್ಮೆಲ್ಲರ  ಬದುಕು,
ಬಬಲ್ ಗಮ್ಮು ------!
ಕಡೆ ಕಡೆಗೆ ಬದುಕಿನ ಗಮ್ಮು,
ನಮ್ಮನ್ನೇ ಜಗಿಯ ತೊಡಗಿ,
ಸಾಕಾಗಿ ಕೈಯಲ್ಲಿ ಹಿಡಿದು,
ಬೀಸಿ ದೂರ ಒಗೆಯಬೇಕೆನಿಸಿದರೂ,
ಬಿಡದಲ್ಲಾ-----ಅಂಟು !  
ಬಿಡಿಸಲಾರದ ಗಂಟು!
ಬದುಕಿನ ಈ ನಂಟು !

(ತುಷಾರ ಫೆಬ್ರವರಿ 2010 ರಲ್ಲಿ ಪ್ರಕಟವಾದ ನನ್ನ ಕವನ 'ಚ್ಯೂಯಿಂಗ್ ಗಮ್'ಅನ್ನು ಅಲ್ಲಲ್ಲಿ ತಿದ್ದಿ,ತೀಡಿದ್ದರಿಂದ ಅದು ಈಗ 'ಬಬಲ್ -ಗಮ್ ' ಆಗಿ ಮಾರ್ಪಟ್ಟಿದೆ ! )