Saturday, November 13, 2010

"ಡಯಾಬಿಟಿಸ್."..........ಭಾಗ ಒಂದು (ಮರೆಯಲಾರದ ಅನುಭವಗಳು)

ನಾಳೆ ನವೆಂಬರ್ 14 ನೇ ತಾರೀಕು ವಿಶ್ವ ಮಧುಮೇಹ ದಿನಾಚರಣೆ (World Diabetes Day ). ನಮ್ಮ ದೇಶ ವಿಶ್ವದಲ್ಲೇ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಅಂದರೆ ಸುಮಾರು ನಾಲಕ್ಕುಕೋಟಿ ಯಷ್ಟು ಮಧುಮೇಹಿಗಳನ್ನು ಹೊಂದಿ ಮೊದಲ ಸ್ಥಾನದಲ್ಲಿದೆ. ಇದಕ್ಕೆಲ್ಲಾ ನಮ್ಮ ಶಿಸ್ತಿಲ್ಲದ ಅನಾರೋಗ್ಯಕರ ಜೀವನ ಶೈಲಿ, ಹೊತ್ತು ಗೊತ್ತಿಲ್ಲದೇ ಬರೀ ಬಾಯಿ ಚಪಲಕ್ಕಾಗಿ ತಿನ್ನುವುದೇ; ಒಂದು ಗೀಳಾಗಿರುವುದು ,ಹೆಚ್ಚುತ್ತಿರುವ ಮಾನಸಿಕ ಒತ್ತಡದಿಂದ ನಗು,ಸುಖ ,ಶಾಂತಿ,ನೆಮ್ಮದಿ ಕಮ್ಮಿಯಾಗಿರುವುದು,ಶಾರೀರಿಕ ವ್ಯಾಯಾಮದ ಕೊರತೆ, ಇವೆಲ್ಲವೂ ಕಾರಣವಾಗಿರಬಹುದು. ಸಕ್ಕರೆ ಖಾಯಿಲೆಯ ಬಗ್ಗೆ ಅರಿವನ್ನು ಮೂಡಿಸುವುದು ,ಅದು ಬರದಂತೆ ತಡೆಯುವುದು,ಬಂದಾಗ ಅದನ್ನು ನಿಯಂತ್ರಣದಲ್ಲಿಡುವುದು ಈ ವಿಶ್ವ ಮಧುಮೇಹ ದಿನಾಚರಣೆಯ ಮುಖ್ಯ ಉದ್ದೇಶ.'ಡಯಾಬಿಟಿಸ್ ಒಂದು ರೋಗವೇ ಅಲ್ಲ ' ಅನ್ನುವಷ್ಟು ಸಾಮಾನ್ಯಾವಾಗಿದ್ದರೂ ,ಇದನ್ನು ಸರಿಯಾಗಿನಿಯಂತ್ರಣದಲ್ಲಿ ಇಡದಿದ್ದರೆ, ಕೆಲವರ್ಷಗಳನಂತರ ಇದು ನರಮಂಡಲ,ಮಿದುಳು,ಹೃದಯ,ಕಣ್ಣು ,ಮೂತ್ರ ಪಿಂಡ,ರಕ್ತನಾಳಗಳ ಮೇಲೆ ಉಂಟು ಮಾಡುವ ಅಡ್ಡ ಪರಿಣಾಮಗಳನ್ನು ಹಗುರವಾಗಿ ಪರಿಗಣಿಸುವಂತಿಲ್ಲ. ಒಂದೇ ಸಲಕ್ಕೆ ಸಕ್ಕರೆ ಖಾಯಿಲೆಯ ಬಗ್ಗೆ ಎಲ್ಲಾ ವಿಷಯಗಳನ್ನು ತಿಳಿಸುವುದು ಅಸಾಧ್ಯವಾದರೂ ನಮ್ಮ ಕೈಲಾದಷ್ಟು ರೋಗಿಗಳಿಗೆ ಅರಿವನ್ನು ನೀಡುವ ಪ್ರಯತ್ನ ಮಾಡುತ್ತಿದ್ದೇವೆ.ಈ ನಿಟ್ಟಿನಲ್ಲಿ ಇತ್ತೀಚಿಗೆ ಮಾಧ್ಯಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲೇಖನಗಳು ಬರುತ್ತಿರುವುದು ಸ್ವಾಗತಾರ್ಹ. ನನ್ನ ಬ್ಲಾಗಿನಲ್ಲೂ ಈಗಾಗಲೇ ಸಕ್ಕರೆ ಖಾಯಿಲೆಯ ಬಗ್ಗೆ ಎರಡು ಲೇಖನಗಳನ್ನು ಪ್ರಕಟಿಸಿದ್ದೇನೆ.

ಪ್ರೇಮಾ ನಾರಾಯಣ್ ಸುಮಾರು ಐವತ್ತು ವರ್ಷ ವಯಸ್ಸಿನ ,ಎರಡೆರಡು ಸ್ನಾತಕೋತ್ತರ ಪದವಿಗಳನ್ನು ಪಡೆದ ವಿದ್ಯಾವಂತ ಮಹಿಳೆ.ನಮ್ಮ ಎಂಜಿನಿಯರ್ ಒಬ್ಬರ ಪತ್ನಿ. ಸುಮಾರು ಹತ್ತು ವರ್ಷಗಳಿಂದ ಅವರಿಗೆ ಸಕ್ಕರೆ ಖಾಯಿಲೆ ಇತ್ತು.ಮಾತ್ರೆಗಳನ್ನು ಹೆಚ್ಚಿನ ಡೋಸ್ ನಲ್ಲಿ ತೆಗೆದುಕೊಂಡರೂ ಪಥ್ಯ ಸರಿಯಾಗಿ ಮಾಡದೇ,ಒಮ್ಮೊಮ್ಮೆ ಅವರ ರಕ್ತದಲ್ಲಿನ ಸಕ್ಕರೆ ಅಂಶ ಏರುತ್ತಿತ್ತು. 'ಇಷ್ಟು ವಿದ್ಯಾವಂತೆಯಾಗಿದ್ದರೂ ,ಸಕ್ಕರೆ ಖಾಯಿಲೆಯ  ಬಗ್ಗೆ ಎಲ್ಲಾ ಮಾಹಿತಿ ಇದ್ದರೂ ,ಈ ಹೆಂಗಸಿಗೆ ನಾಲಿಗೆ ಚಪಲದ ಮೇಲೆ ಸ್ವಲ್ಪವೂ ಹಿಡಿತವಿಲ್ಲವಲ್ಲಾ! ' ಎಂದು ನನಗೆ ಅವರ ಮೇಲೆ ಸಿಟ್ಟಿತ್ತು. ಆ ದಿನ ಆಸ್ಪತ್ರೆಯ ನನ್ನ ಪರೀಕ್ಷಾ ಕೋಣೆಯಲ್ಲಿ ಪ್ರೇಮಾ ನಾರಾಯಣ್ ನನ್ನ ಮುಂದೆ ಕೂತಿದ್ದರು.ಅವರ 'ಬ್ಲಡ್ ಶುಗರ್ ರಿಪೋರ್ಟ್'ನನ್ನ ಕೈಯಲ್ಲಿತ್ತು .ರಕ್ತದ ಸಕ್ಕರೆ ಅಂಶ 400 mg % ಎಂದು ತೋರಿಸುತ್ತಿತ್ತು .(normal-....140mg% ಇರಬೇಕು ). ನಾನು.....'ಯಾಕೆ ಮೇಡಂ ....? ....ಶುಗರ್ ಇಷ್ಟು ಜಾಸ್ತಿಯಾಗಿದೆ?..' ಎಂದೆ. ಅದಕ್ಕವರು 'ಅಯ್ಯೋ ...,ಏನ್ಮಾಡೋದು ಡಾಕ್ಟ್ರೆ! ಮನೆಯವರು ಡೆಲ್ಲಿಯಿಂದ 'ಆಗ್ರಾ ಕಾ  ಪೇಟಾ' (ಒಂದು ರೀತಿಯ ಸಿಹಿ ತಿಂಡಿ)ತಂದಿದ್ದರು.......,ಚೆನ್ನಾಗಿ ತಿಂದುಬಿಟ್ಟೆ ' ಎಂದರು.ನನಗೆ ತಕ್ಷಣ ಸಿಟ್ಟು ಬಂದು 'ಏನು ಮೇಡಂ ..., ನಿಮಗೆ ಇಷ್ಟೆಲ್ಲಾ ತಿಳಿವಳಿಕೆ ಇದ್ದರೂ ನೀವು ಡಯಟ್ ಮಾಡೋಲ್ವಲ್ಲಾ......! ' ಎಂದೆ.ಅದಕ್ಕವರು ಸ್ವಲ್ಪವೂ ಸಿಟ್ಟಾಗದೆ ಇಂಗ್ಲೀಷಿನಲ್ಲಿ 'Doctor.....,are you a diabetic ?' ಎಂದರು. ಒಂದು ಕ್ಷಣ ನನಗೆ ಏನು ಹೇಳಬೇಕೋ ತೋಚದೆ ,ತಕ್ಷಣಕ್ಕೆ ಮಾತು ಹೊರಡಲಿಲ್ಲ. ಈ ಮುಂಚೆ ಯಾರೂ ನನ್ನನ್ನು ಈ ರೀತಿ ಕೇಳಿರಲಿಲ್ಲ. ಸ್ವಲ್ಪ ಸಾವರಿಸಿಕೊಂಡು 'no madame ,I am...not a diabetic ' ಎಂದೆ. ಅದಕ್ಕವರು 'That is the  reason you can't understand ,what is it to be a diabetic !'( ನಿಮಗೆ ಸಕ್ಕರೆ ಖಾಯಿಲೆ ಇಲ್ಲ,ಅದಕ್ಕೇಸಕ್ಕರೆ ಖಾಯಿಲೆಯವರ ಮಾನಸಿಕ ಸ್ಥಿತಿ ನಿಮಗೆ ಅರ್ಥವಾಗುವುದಿಲ್ಲಾ )'ಎಂದರು.  ನಾನು ಅವಾಕ್ಕಾದೆ...! ಹೌದಲ್ಲವೇ!ಅವರ ಮಾತಿನಲ್ಲಿ ಸತ್ಯವಿದೆ ಅನ್ನಿಸಿತು. ದೇಹದಿಂದ ಸಕ್ಕರೆ ಅಂಶ ಉಪಯೋಗವಾಗದೆ ಮೂತ್ರದಲ್ಲಿ ಸೋರಿ ಹೋಗುತ್ತಿರುವಾಗ ,ದೇಹಕ್ಕೆ ಸಿಹಿ ತಿನ್ನಬೇಕು ಎಂದು ಬಲವಾದ ಬಯಕೆ    (craving) ಉಂಟಾಗುತ್ತದೋ ...ಏನೋ ! ಪಾಪ ಅವರ ಕಷ್ಟ ಅವರಿಗೆ ! ಕೆಲವೊಮ್ಮೆ ಅವರಿಗೆ ಸಿಹಿ ತಿನ್ನುವ craving ಎಷ್ಟು ಉಂಟಾಗುತ್ತಿತ್ತೆಂದರೆ  ರಾತ್ರಿ ಎರಡು ಗಂಟೆಗೆ ಸ್ಕೂಟರ್ ನಲ್ಲಿ ಯಜಮಾನರನ್ನು ಕಳಿಸಿ ಸ್ವೀಟ್ ,ಅಂಗಡಿಯ ಬಾಗಿಲು ತೆರೆಸಿ , ಮೈಸೂರ್ ಪಾಕ್ ತರಿಸಿ,....ತಿಂದಿದ್ದರಂತೆ...!! ಆ ದಿನದಿಂದ ,ಸಕ್ಕರೆ ರೋಗಿಗಳ ಬಗ್ಗೆ ನನ್ನ ಸಹಾನುಭೂತಿ ಹೆಚ್ಚಾಗಿದೆ.ಅವರ  ಮಾನಸಿಕ ಸ್ಥಿತಿಯನ್ನು ಅರ್ಥ ಮಾಡಿಕೊಂಡು,ಕಷ್ಟಗಳನ್ನು ಸಮಾಧಾನದಿಂದ ಕೇಳಿ  ಸೂಕ್ತ  ಪರಿಹಾರ ನೀಡಲು ಪ್ರಯತ್ನಿಸುತ್ತಿದ್ದೇನೆ.2010 ರ ಜಾಗತಿಕ ಮಧುಮೇಹ ದಿನದ  ಧ್ಯೇಯದಂತೆ ಈ ಕ್ಷಣದಿಂದ ಮದುಮೇಹವನ್ನು ನಿಯಂತ್ರಿಸೋಣ.  ಎಲ್ಲರ ಬಾಳನ್ನೂ ಸಿಹಿಯಾಗಿಸೋಣ. ಎಲ್ಲರಿಗೂ ನನ್ನ ನಮಸ್ಕಾರ.

32 comments:

  1. ವಿಶ್ವ ಮಧುಮೇಹ ದಿನದ ನೆನಪಿನಲ್ಲಿ ಮಾಹಿತಿಯುಕ್ತ ಬರಹ ಕೊಟ್ಟಿದ್ದೀರಿ. ನಿಮ್ಮ ಅನುಭವಜನ್ಯ ಬರಹ ತು೦ಬಾ ಚೆನ್ನಾಗಿರುತ್ತದೆ. ಇನ್ನಷ್ಟು ಬರೆಯಿರಿ.

    ReplyDelete
  2. very true.. very very nice article.. only the person who have the issues (both psycological and physical) can only feel the pain... But they somehow have to supress their temptations which is the cause of the issues in the first place, thats for their own good..
    Regards
    Bhavana

    ReplyDelete
  3. ನಿಜ ಸರ್ ಈ ಡಯಾಬಿಟಿಕ್ ಎಂಬ ಕಾಯಿಲೆಯಲ್ಲದ ಕಾಯಿಲೆಯ ಬಗ್ಗೆ ಇರುವಷ್ಟು ತಪ್ಪು ಕಲ್ಪನೆಗಳು ಇನ್ನಾವುದರ ಬಗ್ಗೆಯೂ ಇಲ್ಲವೇನೊ. ಇತ್ತೀಚೆಗೆ ನನ್ನ ಸೋದರತ್ತೆ ಈ ಕಾಯಿಲೆಗೊಳಗಾಗಿ ಯಾರ್ಯಾರೋ ಎನೇನೊ ಹೇಳಿದರೂಂತ ಸಿಕ್ಕಾಪಟ್ಟೇ ಡಯಟ್ ಮಾಡಿ ತುಂಬ ಬಳಲಿ ಬಿಟ್ಟಿದ್ದರು. ಆಮೇಲೆ ಅವರನ್ನ ಒಳ್ಳೆಯ ಡಯಾಬಿಟಾಲಜಿಸ್ಟ್ ಬಳಿ ಕರೆದೊಯ್ದು ಅದರ ಬಗ್ಗೆ ತಿಳುವಳಿಕೆ ಮೂಡಿಸಿದಾಗ ಈಗ ಅದರ ಜೊತೆ ಸಹಬಾಳ್ವೆ ರೂಢಿಸಿಕೊಂಡಿದ್ದಾರೆ.

    ReplyDelete
  4. ಪರಾಂಜಪೆ ಸರ್;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನನ್ನ ವೈದ್ಯಕೀಯ ವೃತ್ತಿಯ ಅನುಭವದಲ್ಲಿ ವೇದ್ಯ ವಾದ ವಿಷಯಗಳನ್ನು ಎಲ್ಲರಲ್ಲೂ ಹಂಚಿ ಕೊಳ್ಳುವ ಸಣ್ಣ ಪ್ರಯತ್ನ ಇದು.ನಿಮ್ಮೆಲ್ಲರ ಪ್ರೋತ್ಸಾಹ ಪೂರಕ ಅನಿಸಿಕೆಗಳು ನನ್ನ ಬರವಣಿಗೆಗೆ ಸಹಾಯಕ.ನಮಸ್ಕಾರ.

    ReplyDelete
  5. Bhavana Rao;Thanks for your kind comments.You are absolutely right.Any disorder especially Diabetes is more of a personality disorder than just the physical aspect.Total life style modification is more important than just the medication.Regards.

    ReplyDelete
  6. ಮಧುಮೇಹದ ಬಗ್ಗೆ ಉತ್ತಮ ಅರಿವು ಮೂಡಿಸುವ ಲೇಖನವನ್ನು ಬರೆಯುತ್ತಿದ್ದೀರಿ ಸರ್. ಧನ್ಯವಾದಗಳು. ನನ್ನವರಿಗೆ ೨೪ವರ್ಷಗಳಿ೦ದ ಮಧುಮೇಹವಿದೆ. ಪ್ರಾರ೦ಭದಲ್ಲಿ ಬಹಳ ಕಟ್ಟುನಿಟ್ಟಾಗಿ ಡಯಟ್ ಪಾಲಿಸುವ ಬಗ್ಗೆಯೇ ಚಿ೦ತಿಸುತ್ತಿದ್ದೆ. ಆ ಬಗ್ಗೆ ಸುಮಾರು ಲೇಖನಗಳನ್ನೂ ಓದಿದೆ. ನ೦ತರ ಅವರೇ ಅರ್ಥ ಮಾಡಿಕೊ೦ಡು ಡಯಟ್ ಗೆ ಹೊ೦ದಿಕೊ೦ಡ ನ೦ತರ ನಿರಾಳವಾಗಿದ್ದೇನೆ. ಪ್ರತಿಯೊಬ್ಬರಿಗೂ ತಮ್ಮ ಆರೋಗ್ಯದ ಪ್ರಾಥಮಿಕ ಅರಿವು ಇರಬೇಕಾದದ್ದು ಅತ್ಯವಷ್ಯಕವೆನಿಸುತ್ತದೆ. ಮು೦ದಿನ ಭಾಗವನ್ನು ನಿರೀಕ್ಷಿಸುತ್ತಾ........ವ೦ದನೆ ಗಳು.

    ReplyDelete
  7. ಸುಮ ಮೇಡಂ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾಗಳು.ಯಾರೋ ಏನೋ ಹೇಳಿದರು ಅಂತ ಏನೇನೋ ಮಾಡಿ 'ಕಿಡ್ನಿಫೈಲ್ಯೂರ್'ನಂತಹ ತೊಂದರೆಗಳಿಗೆ ಸಿಲುಕಿಕೊಂಡ ಹಲವಾರು ಡಯಾಬಿಟಿಸ್ ರೋಗಿಗಳನ್ನು ನೋಡಿದ್ದೇನೆ.ಆದ್ದರಿಂದ ಮಧುಮೇಹಕ್ಕೆ ಆರಂಭಿಕ ಹಂತದಲ್ಲೇ ಸರಿಯಾದ ಚಿಕಿತ್ಸೆ ನೀಡುವುದು ಅತಿಮುಖ್ಯ.ಜೀವನ ಶೈಲಿಯ ಬದಲಾವಣೆಯೂ ಅಷ್ಟೇ ಮುಖ್ಯ.ನಮಸ್ಕಾರ.

    ReplyDelete
  8. ಪ್ರಭಾಮಣಿ ಮೇಡಂ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನನಗೆ ಎಷ್ಟೇ ವಿಷಯಗಳು ತಿಳಿದಿದ್ದರೂ ಪ್ರತಿ ರೋಗಿಯೂ ನನಗೆ ಗುರುವೇ!ನನ್ನ ರೋಗಿಗಳಿಂದ ನಾನು ಬಹಳಷ್ಟು ಹೊಸ ವಿಷಯಗಳನ್ನು ತಿಳಿದುಕೊಂಡಿದ್ದೇನೆ.ಅಂತಹ ಒಂದು ಘಟನೆಯನ್ನು ಇಲ್ಲಿ ಉಲ್ಲೇಖಿಸಿದ್ದೇನೆ.ಬ್ಲಾಗಿಗೆ ಬರುತ್ತಿರಿ.ನಿಮ್ಮ ಪ್ರೋತ್ಸಾಹಪೂರ್ವಕ ಪ್ರತಿಕ್ರಿಯೆಗಳು ನನ್ನ ಬರವಣಿಗೆಗೆ ಸಹಾಯಕ.ನಮಸ್ಕಾರ.

    ReplyDelete
  9. ಡಾ. ನಿಮ್ಮ ಲೇಖನ ಅತ್ಯುತ್ತಮವಾಗಿ ಮೂಡಿ ಬಂದಿದೆ. ಧನ್ಯವಾದಗಳು

    ReplyDelete
  10. ಡಾಕ್ಟರ್ ಒಳ್ಳೆಯ ಮಾಹಿತಿ ಇದೆ ನಿಮ್ಮ ಲೇಖನದಲ್ಲಿ. ನಾ ಬೆಂಗಳೂರಿಗೆ ಬಂದಮೇಲೆ (೩ ವರ್ಷ) ದಹಿಂದೆ ಒಮ್ಮೆ ಲಿಪಿಡ್ ಪ್ರೊಫೈಲ್ ಮಾಡಿಸಿಕೊಂಡೆ.ನಾನೂ ಮಧುಮೇಹಿ ಅನ್ನೋದು ತಿಳೀತು.ಒಬ್ಬ ಒಳ್ಳೆಯ ಪ್ರಾಮಾಣಿಕ ಡಾಕ್ಟರ್ ಸಿಕ್ಕಿದ್ದಾರೆ. ಈ ಸಲ ಚೆಕ್ ಮಾಡಿಸಿದಾಗ ಸುಮಾರು ೨೩೦ ಇತ್ತು. ಕೇವಲ ಗುಳಿಗೆ ಸಾಕು ಅಂತ ಹೇಳಿದಾರೆ..ದೀಪಾವಳಿ
    ಮನೇಲಿ ಸಿಹಿ ತಿಂದಿದ್ದು ಹೆಚ್ಚಿಗೆನೆ ಇದೆ..ನೋಡುವ ಮುಂದಿನಸಾರಿ....

    ReplyDelete
  11. ಜಿತೇಂದ್ರ ;ತಮ್ಮ ಪ್ರತಿಕ್ರಿಯೆಯೇ ನನಗೆ ಮತ್ತಷ್ಟು ಲೇಖನಗಳನ್ನು ಬರೆಯಲು ಪ್ರೋತ್ಸಾಹ ನೀಡುತ್ತಿದೆ.ನನ್ನ ವೈದ್ಯಕೀಯ ಅನುಭವಗಳನ್ನು ಹಂಚಿಕೊಳ್ಳುವುದರಿಂದ ಯಾರಿಗಾದರೂ ಉಪಯೋಗವಾದರೆ ಸಂತೋಷ.ಧನ್ಯವಾದಗಳು.ನಮಸ್ಕಾರ.

    ReplyDelete
  12. MADHU MEHIGALIGE NIMMA SALAHE SIHIYAGALI.AROGYA
    MARALI BARALI.NIMMA PRAYATNA SAFALAVAGALI.
    GELEYANA BARAVANIGEGE NOORONDU SALAAM.MUNDUVAREYALI.

    ReplyDelete
  13. ಉಮೇಶ್ ದೇಸಾಯ್ ಸರ್;ನಿಮ್ಮಪ್ರತಿಕ್ರಿಯೆಗೆ ಧನ್ಯವಾದಗಳು.ಸಿಹಿ ತಿಂಡಿಗಳು 'high glycemic index'ಇರುವ ಆಹಾರವಾದ್ದರಿಂದ ರಕ್ತದಲ್ಲಿ ಗ್ಲೂಕೋಸ್ ಅಂಶ ಇದ್ದಕ್ಕಿದ್ದಂತೆ ಜಾಸ್ತಿಯಾಗುತ್ತದೆ.ಆದ್ದರಿಂದ ಆದಷ್ಟೂ ಸಿಹಿ ತಿಂಡಿಗಳನ್ನು ತಿನ್ನದಿರುವುದು ಒಳ್ಳೆಯದು.ದೈಹಿಕ ವ್ಯಾಯಾಮ ಅವಶ್ಯ.ದಿನಾ ಕನಿಷ್ಠ ಅರ್ಧ ತಾಸಿನ ನಡಿಗೆ ಒಳ್ಳೆಯದು.ಹೆಚ್ಚು ಕಾಳು,ತರಕಾರಿಗಳನ್ನು ಉಪಯೋಗಿಸುವುದು ಒಳ್ಳೆಯದು .ನಮಸ್ಕಾರ.

    ReplyDelete
  14. ಹೇಮಚಂದ್ರ;ನಿಮ್ಮ ಶುಭ ಹಾರೈಕೆಗಳಿಗೆ ಧನ್ಯವಾದಗಳು.ಗೆಳೆಯನ ಬರವಣಿಗೆಗೆ ಸತತ ಪ್ರತಿಕ್ರಿಯೆ ನೀಡಿ ಪ್ರೋತ್ಸಾಹ ನೀಡಿದ್ದೀರಿ.ನನ್ನ ಸಫಲತೆಯಲ್ಲಿ ನಿಮ್ಮಂತಹ ಸ್ನೇಹಿತರ ಪಾಲೂ ಇದೆ.ನಮಸ್ಕಾರ.

    ReplyDelete
  15. ಮನ ಮುಕ್ತಾ ಮೇಡಂ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ನಿಮ್ಮ ಪ್ರೋತ್ಸಾಹಪೂರಕ ಪ್ರತಿಕ್ರಿಯೆ ಮುಂದೆಯೂ ಹೀಗೇ ಬರುತ್ತಿರಲಿ ಎಂದು ಹಾರೈಸುತ್ತೇನೆ.ನಮಸ್ಕಾರ.

    ReplyDelete
  16. ನನ್ನ ಸಂಬಂಧಿಕರಲ್ಲಿ ಕೆಲವರು ಮಧುಮೇಹಿಗಳು. ನಾನವರಿಗೆ ಹೇಳಿದ್ದು ಇಷ್ಟೇ : ನಾವೀಗ ಭಾರತೀಯತೆಯನ್ನು ಬಿಟ್ಟಿದ್ದೇವೆ, ನಮಗೆ ಯೋಗ,ಪ್ರಾಣಾಯಾಮ, ಮುದ್ರೆ ಇವೆಲ್ಲಾ ಗೊತ್ತಿಲ್ಲ,ಧ್ಯಾನ, ಪೂಜೆ ಇವುಗಳಲ್ಲಿ ಢಾಂಬಿಕ ಆಸಕ್ತಿ ತೋರುತ್ತೇವೆ. ತ್ರಿಕರಣ ಶುದ್ಧಿಯುಳ್ಳ ಒಬ್ಬನೇ ಒಬ್ಬ ವ್ಯಕ್ತಿಗೂ ಮಧುಮೇಹವಾಗಲೀ ಅಥವಾ ಇನ್ಯಾವುದೇ ರೋಗವಾಗಲೀ ಬಾಧಿಸುವುದು ಅತೀ ಕಡಿಮೆ ಅಥವಾ ಇಲ್ಲವೇ ಇಲ್ಲ ಎಂದರೂ ಅತಿಶಯೋಕ್ತಿಯಲ್ಲ! ನನ್ನದೊಂದು ಸಣ್ಣ ಅರಿಕೆ ತಮ್ಮಲ್ಲಿ: ತಾವು ಬಹಳ ಓದಿಕೊಂಡಿವರು, ಮುತ್ಸದ್ಧಿಗಳು, ಸಾಧ್ಯವಾದರೆ ಕೆಲವರಿಗಾದರೂ ಭಾರತೀಯ ಯೋಗ ಮತ್ತು ಪ್ರಾಣಾಯಾಮಗಳನ್ನು ಅನುಸರಿಸಲು ಸಲಹೆ ಮಾಡುವಿರೇ ? ಬಾಬಾ ರಾಮ್ ದೇವ್ ತನ್ನ ಜೀವಿತವನ್ನು ಇದಕ್ಕಾಗಿಯೇ ಮೀಸಲಿಟ್ಟಿದ್ದಾರೆ. ಬಾಬಾ ಎಂದ ತಕ್ಷಣ ನಾವು ಮೂಗುಮುರಿಯುವುದು ಬೇಡ ಅಲ್ಲವೇ ? ಅವರ ಆಶ್ರಮ ಹಲವರಿಗೆ ಪರಿಣಾಮಕಾರೀ ಪರಿಹಾರ ಒದಗಿಸಿದೆ--ಕೇವಲ ಯೋಗ, ಧ್ಯಾನ ಮತ್ತು ಪ್ರಾಣಾಯಾಮಗಳೇ ಮಧುಮೇಹದ ಸಂಪೂರ್ಣ ನಿವಾರಣೆಗೆ ದಾರಿ, ಕಾರಣ ಜಿಹ್ವಾ ಚಾಪಲ್ಯವನ್ನೂ ಯೋಗದಿಂದಲೇ ನಿಯಂತ್ರಿಸುವುದರಿಂದ ಸಿಹಿಯನ್ನೋ ಅಥವಾ ಇನ್ನೇನನ್ನೋ ತಿನ್ನಬೇಕೆನ್ನುವ ಬಯಕೆ ಸಹಜವಾಗಿ ದೂರವಾಗುತ್ತದೆ! ಭಾರತ ಮಧುಮೇಹ ನ್ಯೂನತೆ ಮುಕ್ತರಾಷ್ಟ್ರವಾಗಲಿ ಎಂದು ತಮ್ಮೊಡನೆ ನಾನೂ ದನಿಗೂಡಿಸಿದ್ದೇನೆ, ಬರಹ ಮಾರ್ಮಿಕವಾಗಿದೆ, ನಮಸ್ಕಾರ

    ReplyDelete
  17. ಸಕ್ಕರೆ ಕಾಯಿಲೆ ಬಗ್ಗೆ ಅರಿವು ಮೂಡಿಸುವಲ್ಲಿ ನಿಮ್ಮ ಲೇಖನ ಯಶಸ್ವಿಯಾಗಿದೆ.ನೀವು ಹೇಳಿದಂತೆ ಪ್ರತೀ ರೋಗಿಯೂ ವೈಧ್ಯರಿಗೆ ಗುರುವಿನಂತೆ.ನಿಮ್ಮ ಬತ್ತಳಿಕೆ ಯಲ್ಲಿ ಇಂತಹ ಘಟನೆಗಳು ಬಹಳಷ್ಟು ಇವೆ .ಅವು ಹೊರಬಂದಷ್ಟು ನಮಗೆ ಅರಿವು ಹೆಚ್ಚುತ್ತಾ ಹೋಗುತ್ತದೆ. ನಿಮ್ಮ ಬರಹಕ್ಕೆ ಜೈ.ಹೋ

    --
    ಪ್ರೀತಿಯಿಂದ ನಿಮ್ಮವ ಬಾಲು.

    ReplyDelete
  18. ಮಧುಮೇಹದ ಬಗ್ಗೆ ಉತ್ತಮ ಮಾಹಿತಿ-ಲೇಖನ ಡಾ. ಸರ್. ಧನ್ಯವಾದಗಳು.

    ReplyDelete
  19. ಧನ್ಯವಾದಗಳು. ಮಾವೀಯತೆಯ ಸೆಲೆಯ ನಿಮ್ಮ ಲೇಖನಗಳು ಯಾವಾಗಲೂ ಖುಷಿನೀಡುತ್ತವೆ.

    ReplyDelete
  20. ಸೀತಾರಾಂ ಸರ್;ಲೇಖನವನ್ನು ಇಷ್ಟಪಟ್ಟು ಪ್ರತಿಕ್ರಿಯೆ ನೀಡಿದ್ದಕ್ಕೆ ಧನ್ಯವಾದಗಳು.ತಮ್ಮೆಲ್ಲರ ಒತ್ತಾಸೆಯಿಂದ ನನ್ನಿಂದ ಇನ್ನೂ ಒಳ್ಳೆಯ ,ಉಪಯುಕ್ತ ಮಾಹಿತಿಯುಳ್ಳ ಲೇಖನಗಳು ಬರಲಿ.ನಮ್ಮ ಆರ್ಯರ ಆಶಯದಂತೆಎಲ್ಲರಿಗೂ ಶುಭವಾಗಲಿ.ಸರ್ವೇ ಜನಾಃ ಸುಖಿನೋ ಭವಂತು.ಸರ್ವೇ ಮಂತು ನಿರಾಮಯಹ.
    ನಮಸ್ಕಾರ.

    ReplyDelete
  21. ಭಟ್ ಸರ್;ನಿಮ್ಮ ಅದ್ಭುತ ಪ್ರತಿಕ್ರಿಯೆಗೆ ಎಷ್ಟು ಧನ್ಯವಾದಗಳನ್ನು ಅರ್ಪಿಸಿದರೂ ಕಡಿಮೆಯೇ.ನಾನು ಏನೇನು ಹೇಳಿಲ್ಲವೋ ಅದನ್ನೆಲ್ಲಾ ತಿಳಿಸಿದ್ದೀರಿ.ನಿಮ್ಮ ಅಭಿಪ್ರಾಯಗಳಿಗೆ ನನ್ನ ಸಂಪೂರ್ಣ ಸಹಮತವಿದೆ.'ಯೋಗಿಕ್ ಲಿವಿಂಗ್'ನಿಂದ ಸಮಗ್ರ ಆರೋಗ್ಯವನ್ನೂ ಪಡೆಯಬಹುದು ಎಂಬುದನ್ನು ಆದಷ್ಟೂ ಪ್ರತಿಯೊಬ್ಬ ರೋಗಿಗೆ ಮನವರಿಕೆ ಮಾಡಿಕೊಡುತ್ತಿದ್ದೇವೆ.ಧ್ಯಾನ ,ಪ್ರಾಣಾಯಾಮಗಳನ್ನು ನನ್ನ ಜೀವನದಲ್ಲೂ ಅಳವಡಿಸಿ ಕೊಂಡಿದ್ದೇನೆ.ಅಶಾಂತ ಮನಸ್ಸೇ ಎಲ್ಲ ರೋಗಗಳ ಮೂಲವಾದ್ದರಿಂದ ,ನನ್ನ ಎಲ್ಲಾ ರೋಗಿಗಳಿಗೂ ಸಾಧ್ಯವಾದ ಮಟ್ಟಿಗೆ ಆಧ್ಯಾತ್ಮದ ಅರಿವನ್ನು ನೀಡುತ್ತಿದ್ದೇನೆ.ಇದಕ್ಕೆ ನನ್ನೆಲ್ಲಾ ಸಹೋದ್ಯೋಗಿಗಳ ಸಹಮತ ಮತ್ತು ಸಹಕಾರವಿದೆ.ಆಸ್ಪತ್ರೆಯನ್ನು ಬರೀ ಔಷಧಿಗಳನ್ನು ಕೊಡುವ ಕೇಂದ್ರವನ್ನಾಗಿ ಮಾಡದೆ ಒಂದು 'ಸ್ಪಿರಿಚುಯಲ್ ಸೆಂಟರ್'ಅನ್ನಾಗಿ ಮಾಡುವ ಕಾಯಕ ಜಾರಿಯಲ್ಲಿದೆ.ನಿಮ್ಮ ಮುಕ್ತ ಪ್ರತಿಕ್ರಿಯೆ ನನ್ನ ಎಲ್ಲಾ ಲೇಖನಗಳಿಗೂ ಸಹಕಾರಿಯಾಗಿದೆ.ನಿಮ್ಮ ಪ್ರೋತ್ಸಾಹ ಮುಂದುವರೆಯುತ್ತದೆಂಬ ಭರವಸೆಯಿದೆ.ನಮಸ್ಕಾರ.

    ReplyDelete
  22. ನಿಮ್ಮೊಳಗೊಬ್ಬ ಬಾಲೂ ಸರ್;ನಿಮ್ಮ ಸ್ನೇಹಕ್ಕೆ ನೀವೇ ಸಾಟಿ!ನನ್ನ ಪ್ರತಿಯೊಂದು ಪ್ರಯತ್ನಕ್ಕೂ ಬೆನ್ನೆಲುಬಾಗಿದ್ದೀರಿ.ನಿಮ್ಮ ಸ್ನೇಹ ಪೂರ್ವಕ ಪ್ರತಿಕ್ರಿಯೆಗಳು ಇನ್ನಷ್ಟು ಒಳ್ಳೆಯ ಬರಹಗಳು ಹೊರಬರಲು ಒತ್ತಾಸೆ ನೀಡುತ್ತವೆ.ನಿಮ್ಮಂತಹವರ ಸ್ನೇಹ ಸದಾ ಕಾಲ ಇರಲಿ ಎಂಬುದೇ ನನ್ನ ಹಾರೈಕೆ.ನಮಸ್ಕಾರ.

    ReplyDelete
  23. ಅನಂತ್ ಸರ್;ನಿಮ್ಮ ಸ್ನೇಹ ಪೂರಕ ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು.ನಮಸ್ಕಾರ.

    ReplyDelete
  24. ಬಾಲು ಸಾಯಿಮನೆ ಸರ್;ಲೇಖನವನ್ನು ಇಷ್ಟಪಟ್ಟು ಓದಿ,ಪ್ರತಿಕ್ರಿಯೆ ನೀಡಿದ್ದಕ್ಕೆ ಅನಂತ ಧನ್ಯವಾದಗಳು.ನಮಸ್ಕಾರ.

    ReplyDelete
  25. ಸುಬ್ರಮಣ್ಯ ಮಾಚಿಕೊಪ್ಪ;ನಿಮ್ಮ ಮುಗುಳು ನಗೆಯ :-)ಈ ಮಾರ್ಮಿಕ ಪ್ರತಿಕ್ರಿಯೆಗೆ ಧನ್ಯವಾದಗಳು.ಎಲ್ಲಾ ರೋಗಿಗಳು ಇದೊಂದನ್ನು ಅಳವಡಿಸಿಕೊಂಡರೂ ಖಾಯಿಲೆಯಲ್ಲಿ ಬಹಳಷ್ಟು ಸುಧಾರಣೆ ಕಂಡು ಬರುವುದರಲ್ಲಿ ಯಾವ ಅನುಮಾನವೂ ಇಲ್ಲ.ನಮಸ್ಕಾರ.

    ReplyDelete
  26. ಡಾಕ್ಟ್ರೆ...

    ಸಕ್ಕರೆ ರೋಗ ನಿಜಕ್ಕೂ ಭಯಂಕರ ಖಾಯಿಲೆ...
    ಆದರ ಬರದ ಹಾಗೆ ಎಚ್ಚರದಿಂದ ಇರುವದೇ ಒಳ್ಳೆಯದು...

    ನಾಲಿಗೆಯ ಚಾಪಲ್ಯ ಏನೆಲ್ಲ ಮಾಡಿಸುತ್ತದೆ ಅಲ್ವಾ?

    ಬೀಪಿ ಇರುವವರಿಗೆ ಕರಿದ ಪದಾರ್ಥಗಳನ್ನು ತಿನ್ನ ಬೇಕು, ಉಪ್ಪು ಜಾಸ್ತಿ ಬೇಕು ಅಂತ ಅನ್ನಿಸ ಬಹುದಾ?

    ಇಂಥಹ ಖಾಯಿಲೆಗಳಿಗೆ.. ಮಾನಸಿಕ ಒತ್ತಡಗಳು ಹೆಚ್ಚಾಗಿ ಕಾರಣ ಅಂತ ನನ್ನ ಭಾವನೆ ಅಲ್ಲವೆ?

    ಸಕಾಲಿಕ ಲೇಖನ ... ತುಂಬಾ ಧನ್ಯವಾದಗಳು ಸರ್...

    ReplyDelete
  27. ಪ್ರಕಾಶಣ್ಣ;ನಿಮ್ಮ ಸ್ನೇಹ ಪೂರಕ ಪ್ರತಿಕ್ರಿಯೆಗೆ ಧನ್ಯವಾದಗಳು.ಬ್ಲಾಗ್ ಸ್ನೇಹಿತರ ಪ್ರತಿಕ್ರಿಯೆಗಳು ಮತ್ತಷ್ಟು ಒಳ್ಳೆಯ ಬರಹಗಳಿಗೆ ನಾಂದಿಯಾಗುತ್ತವೆ ಎಂದು ನನ್ನ ಅನಿಸಿಕೆ.ಮಧುಮೇಹಿಗಳಲ್ಲಿ ಸಕ್ಕರೆ ಅಂಶ ಮೂತ್ರದಲ್ಲಿ ಸೋರಿಕೆಯಾಗುವುದರಿಂದ ಮತ್ತು ಟಿಶ್ಯೂ ಗಳಿಗೆ ಸಾಕಷ್ಟು ಗ್ಲೂಕೋಸ್ ಅಂಶ ಸಿಗದೇ ಇರುವುದರಿಂದ ಅವರಿಗೆ ಸಿಹಿ ತಿನ್ನುವ ಬಯಕೆ ಹೆಚ್ಚು ಎಂದು ನನ್ನ ಅನಿಸಿಕೆ.ದೇಹಕ್ಕೆ ಯಾವುದೇ ಅಂಶದ ಕೊರತೆ ಉಂಟಾದಾಗ ಅದರ ಬಗ್ಗೆ craving ಉಂಟಾಗಬಹುದು.ಆದರೆ ಬಿ.ಪಿ.ಪೇಶಂಟ್ ಗಳಲ್ಲಿ ಅಧಿಕ ಉಪ್ಪಿನ ಮತ್ತು ಕೊಬ್ಬಿನ ಅಂಶದ ಬಳಕೆ ಅದಕ್ಕೆ ಕಾರಣವಾಗಿರುತ್ತದೆ.ನಮಸ್ಕಾರ.

    ReplyDelete
  28. sir,
    nimma lekhana ondallaa ondu maahiti koDuttaa iratte...

    dhanyavaada...

    ReplyDelete
  29. ವಸಂತ್;ನಿಮ್ಮ ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  30. ದಿನಕರ್ ಮೊಗೇರ.ನಿಮ್ಮ ಸ್ನೇಹಪೂರ್ವಕ ಪ್ರತಿಕ್ರಿಯೆಗೆ ಅನಂತ ಧನ್ಯವಾದಗಳು.
    ನನ್ನ ಲೇಖನಗಳಲ್ಲಿ ಏನಾದರೂ ಒಂದು ಮಾಹಿತಿ ಕೊಡಬೇಕೆನ್ನುವುದೇ ನನ್ನ ಪ್ರಯತ್ನ.
    ನನ್ನ ಪ್ರಯತ್ನ ಎಷ್ಟರಮಟ್ಟಿಗೆ ಸಫಲತೆ ಪಡೆದಿದೆ ಎನ್ನುವುದನ್ನು ನೀವೇ ಹೇಳಬೇಕು.ನಮಸ್ಕಾರ.ಶುಭ ರಾತ್ರಿ.

    ReplyDelete

Note: Only a member of this blog may post a comment.