Thursday, October 28, 2010

"ಮೂಗಿನಲ್ಲಿ ಕಾದಿತ್ತು ವಿಸ್ಮಯ!!!"

ಮಧ್ಯಾಹ್ನ ಸುಮಾರು ಮೂರು ಗಂಟೆಯ ಸಮಯ.ಊಟಕ್ಕೆ ಅವರೇ ಕಾಳಿನ ಸಾಂಬಾರ್ ಬೇರೆ ತಿಂದಿದ್ದರಿಂದ ಜೋರು ನಿದ್ರೆ.ಸ್ವತಹ ವೈದ್ಯರಾಗಿದ್ದ ಕನ್ನಡದ ಹಾಸ್ಯ ಸಾಹಿತಿ ರಾ.ಶಿ.(ಡಾ.ಶಿವರಾಂ ) ಹೇಳುತ್ತಿದ್ದ ಹಾಗೆ ಅದು ಡಾಕ್ಟರ್ ಗಳು ಮತ್ತು ದೆವ್ವಗಳು ಸ್ವಲ್ಪ ರೆಸ್ಟ್ ತೆಗೆದುಕೊಳ್ಳುವ ಸಮಯ !ಆದರೆ ಆ ಸಮಯದಲ್ಲೂ ನಮ್ಮನ್ನು ಪರೀಕ್ಷೆ ಮಾಡುವ ಸಲುವಾಗಿಯೇ,ಹಪ್ಪಳ ಮಾರುವವರು,ಉಪ್ಪಿನ ಕಾಯಿ  ಮಾರುವವರು,ಬಿ.ಬಿ.ಎಮ್.ವಿದ್ಯಾರ್ಥಿಗಳೆಂದು ಹೇಳಿಕೊಂಡು ಬಂದು, ನಮಗೆ ಬೇಡದ ವಸ್ತು ಗಳನ್ನು ಮಾರಲೇ ಬೇಕೆಂದು ಬೇತಾಳಗಳ  ಹಾಗೆ ಬೆನ್ನು ಬೀಳುವವರು ,ನಮ್ಮ ನಿದ್ರೆಯ ಶತ್ರುಗಳಂತೆ ಕಾಡುತ್ತಾರೆ!'ಕಿರ್ರೋ'ಎಂದು ಅರಚಿ ಕೊಳ್ಳುತ್ತಿದ್ದ ಡೋರ್-ಬೆಲ್ ನಿಂದ ನಿದ್ರಾ ಭಂಗ ವಾಗಿ ,ಹೋಗಿ ಬಾಗಿಲು ತೆಗೆದೆ.ಮೂಗು ಸೋರುತ್ತಿದ್ದ ನಾಲಕ್ಕು ವರುಷದ ಮಗನನ್ನು ಕರೆದು ಕೊಂಡು ಬಂದಿದ್ದ ವ್ಯಕ್ತಿಯೊಬ್ಬ "ನೀವು ಮೂಗಿನ ಡಾಕ್ಟರ್ರಾ ?"ಎಂದ.ನಿದ್ರೆ ಹಾಳಾಗಿದ್ದಕ್ಕೆ ಮೂಗಿನ ತನಕ ಬಂದ ಕೋಪವನ್ನು ತಡೆದುಕೊಂಡು ಹೌದೆಂದೆ.ಮಗನನ್ನು ಒಂದು ತಿಂಗಳಿಂದ ಮಕ್ಕಳ ಡಾಕ್ಟರ್ ಒಬ್ಬರ ಹತ್ತಿರ ತೋರಿಸುತ್ತಿರಿರುವುದಾಗಿಯೂ ,ಮೂಗಿನಿಂದ ಸಿಂಬಳ ಸೋರುವುದು ,ಕೆಟ್ಟ ವಾಸನೆ ಬರುವುದು ನಿಂತಿಲ್ಲವೆಂದೂ ,ಯಾರದೋ ಸಲಹೆಯ ಮೇರೆಗೆ ನನ್ನಲ್ಲಿಗೆ ಕರೆದು ಕೊಂಡು ಬಂದುದಾಗಿಯೂ ಹೇಳಿದ.ಸಂಜೆ ನಾಲಕ್ಕೂವರೆಗೆ ಆಸ್ಪತ್ರೆಗೆ ಬರುವಂತೆ ಹೇಳಿ ಕಳಿಸಿಕೊಟ್ಟೆ .ಸಂಜೆ ಆಸ್ಪತ್ರೆಯಲ್ಲಿ  ಆ ಹುಡುಗನ ಪರೀಕ್ಷೆ ಮಾಡಿದೆ.ಮಾರು ದೂರಕ್ಕೇ, ಮೂಗಿನಿಂದ ಗಪ್ಪೆಂದು ಸಹಿಸಲು ಅಸಾಧ್ಯವಾದ ಕೆಟ್ಟ ವಾಸನೆ ಬರುತ್ತಿತ್ತು.ಮೂಗಿನಿದ ರಕ್ತ ಮಿಶ್ರಿತ ಸಿಂಬಳ ಸೋರುತ್ತಿತ್ತು.ನೋಡಿದ ತಕ್ಷಣ ಹುಡುಗ ಮೂಗಿನಲ್ಲಿ ಏನೋ ವಸ್ತುವೊಂದನ್ನು ಹಾಕಿ ಕೊಂಡಿರುವುದು ಖಾತ್ರಿಯಾಯಿತು.ಸೂಕ್ತ ಸಲಕರಣೆ ಗಳ ಸಹಾಯದಿಂದ ಬೆಳ್ಳಗಿನ ಮೂಳೆಯಂತೆ ಕಾಣುತ್ತಿದ್ದ ವಸ್ತುವೊಂದನ್ನು ಮೂಗಿನಿಂದ ಕಷ್ಟಪಟ್ಟು ಹೊರತೆಗೆದೆ.ಮೂಗಿನಿಂದ ಸಾಕಷ್ಟು ರಕ್ತ ಸ್ರಾವವಾಗುತ್ತಿತ್ತು.'ಮೂಗಿನ ಕಾರ್ಟಿಲೇಜ್ ಏನಾದರೂ ಕಿತ್ತು ಬಂತಾ ಸಾರ್ !?' ಅಂತ ಅಲ್ಲೇ ಇದ್ದ  ಸಹ ವೈದ್ಯರೊಬ್ಬರು ಗಾಭರಿಗೊಂಡು ಉದ್ಗಾರ ತೆಗೆದರು .ಮೂಗಿನ ರಕ್ತಸ್ರಾವ ನಿಲ್ಲುವಂತೆ ಮೂಗನ್ನು ಗಾಜ್ ನಿಂದ ಪ್ಯಾಕ್ ಮಾಡಿದ ಮೇಲೆ,"ಇಲ್ಲಿ ನೋಡಿ ನೀವು ಹೇಳಿದ ಮೂಗಿನ ಕಾರ್ಟಿಲೇಜ್ "ಎಂದು ಮೂಳೆಯಂತೆ ಕಾಣುತ್ತಿದ್ದ ತುಂಡನ್ನು ಎರಡು ಹೋಳು ಮಾಡಿ ತೋರಿಸಿದೆ .ಅದು ಮೇಲಿನ ಸಿಪ್ಪೆ ಹೋದ ಹುಣಿಸೇ ಬೀಜ ವಾಗಿತ್ತು!ಅದನ್ನು ಎರಡು ಹೋಳು ಮಾಡಿದಾಗ ಸುಮಾರು ಒಂದು ಇಂಚಿನ ಮೊಳಕೆ ಒಡೆದು ಹೊರ ಬರುತ್ತಿತ್ತು.ಇನ್ನೂ ಸ್ವಲ್ಪ ದಿನ ಬಿಟ್ಟಿದ್ದರೆ ಮೂಗಿನಿಂದ ಹುಣಿಸೇ ಸಸಿ ಬೆಳೆಯುತ್ತಿತ್ತೋ ಏನೋ !!!

23 comments:

  1. ಸೃಷ್ಟಿ ವೈಚಿತ್ರ್ಯವೇ ಸರಿ

    ReplyDelete
  2. ಬಹಳ ಚೆನ್ನಾಗಿದೆ ಪ್ರಸ೦ಗ. ಇ೦ತಹ ಅನುಭವ ಲೇಖನಗಳು ಇನ್ನಷ್ಟು ಬರಲಿ.

    ReplyDelete
  3. ಡಾಕ್ಟರೆ,
    ಎಂಥಾ ಗಂಭೀರ ಸ್ಥಿತಿಯೂ ನಿಮ್ಮ ಲೇಖನಿಯಲ್ಲಿ ವಿನೋದದ ಮುಸುಕು ಹಾಕಿಕೊಂಡೇ ಬರುತ್ತದೆ. ಹುಣಿಸೇ ಬೀಜವು ಸಸಿಯಾಗಿದ್ದರೆ ಎನ್ನುವ comment ತುಂಬಾ ನಗಿಸಿತು!

    ReplyDelete
  4. ಡಾಕ್ಟರೆ,
    ತುಂಬಾ ಗಂಭೀರ ಪರಿಸ್ಥಿತಿ...
    ಚೆನ್ನಾಗಿ ಬರೆದಿದ್ದೀರ.......

    ReplyDelete
  5. ಮದ್ಯಾಹ್ನ ದ ಸವಿ ನಿದ್ದೆ ಹಾಳು ಮಾಡಿದ್ದನ್ನು ಮೂಗಿನ ತನಕ ಕೊಪಬಂದರೂ ಸಹಿಸಿಕೊಂಡು ,ನಾಲ್ಕು ವರ್ಷದ ಮಗವಿನ ಮೂಗಿನಿಂದ ಹುಣಸೆ ಬೀಜ ತೆಗೆದ ಘಟನೆ ರೋಚಕವಾಗಿ ಮೂಡಿಬಂದಿದೆ. ಸಾಮನ್ಯವಾಗಿ ಚಿಕ್ಕಮಕ್ಕಳು ಇಂತಹ ಅವಘಡಗಳನ್ನು ಮಾಡಿ ಕೊಳ್ಳುತ್ತಿರುತ್ತಾರೆ. ಸಕಾಲದಲ್ಲಿ ಚಿಕಿತ್ಸೆ ನೀಡಿ ಮಗುವನ್ನು ಪಾರು ಮಾಡಿದ್ದೀರಿ ನಿಮಗೆ ಧನ್ಯವಾದಗಳು.ಸ್ವಾಮೀ ನಿಮ್ಮ ಬತ್ತಳಿಕೆಯಲ್ಲಿ ಇನ್ನೂಇಂತಹ ಬಹಳಷ್ಟು ಬಾಣಗಳು ಅವಿತು ಕೊಂಡಿವೆ.ಹುಡುಕಿ ತೆಗೆದು ಬ್ಲಾಗಿನಲ್ಲಿ ಬಿಡಿ !! ನಿಮ್ಮ ಬ್ಲಾಗಿನಲ್ಲಿ ಸೆಂಚುರಿಗೆ ಇನ್ನೊಂದು ಲೇಖನ ಬಾಕಿ ಇದೆ ಈ ನೂರನೇ ಅದ್ಭುತ ಲೇಖನಕ್ಕೆ ಕಾದಿದ್ದೇನೆ.ಅಡ್ವಾನ್ಸಾಗಿ ಶುಭಾಶಯಗಳು

    ReplyDelete
  6. ಕೃಷ್ಣಮೂರ್ತಿ ಸರ್,
    ಮೂಗಿನ ವೃತ್ತಾಂತ ಕರುಣಾಜನಕವಾಗಿ ಶುರುವಾದರೂ ನಿಮ್ಮ ಕೈಯಿಂದ ಶುಭಾಂತ್ಯವಾದದು ಖುಷಿಯಾಯಿತು.

    ನಾಸಿಕ ಪ್ರಸಂಗ ಹಂಚಿಕೊಂಡಿದ್ದಕ್ಕೆ ವಂದನೆಗಳು

    ReplyDelete
  7. ಹೌದು ಸರ್, ಮಕ್ಕಳು ಏನನ್ನಾದರೂ ಮೂಗಿಗೆ ಹಾಕಿಕೊ೦ಡು ಪಜೀತಿ ಮಾಡಿಕೊಳ್ಳುತ್ತವೆ. ನನ್ನ ಅಣ್ಣನ ಮಗಳೂ ಒಮ್ಮೆ ಶೇ೦ಗಬೀಜವನ್ನು ಮೂಗಿನಲ್ಲಿ ಅದು ಹೇಗೋ ಹಾಕಿಕೊ೦ಡಿದ್ದಳು. ತಕ್ಷಣ ಡಾಕ್ಟರ್ ಹತ್ತಿರ ಕರೆದು ಕೊ೦ಡು ಹೋಗಿ ತೆಗೆಸಿದರು. ಅಷ್ಟರಲ್ಲಾಗಲೇ ಅದು ಊದಿಕೊ೦ಡು ಬಿಟ್ಟಿತ್ತು. ಒ೦ದೆರಡು ಘ೦ಟೆಗಳ ಕಾಲ ಬಹಳ ಟೆನ್ಶನ್ ಆಗಿಬಿಟ್ಟಿತ್ತು.. ಮಕ್ಕಳ ವಿಷಯದಲ್ಲಿ ಎಷ್ಟು ಜಾಗರೂಕರಾಗಿದ್ದರೂ ಸಾಲದು.

    ReplyDelete
  8. ಮಕ್ಕಳ ಈ ಕಿಲಾಡಿತನದ ಫಜೀತಿಗಳು ಡಾಕ್ಟ್ರುಗಳಿಗೂ ದಾರಿ ತಪ್ಪಿಸುತ್ತವೆ. ತಮ್ಮ ಹಾಸ್ಯ ಪ್ರಜ್ಞೆಯು ವಿಶೇಷದ್ದೆ.

    ReplyDelete
  9. ನೋಡಿ ಎನ್ ಮಾಡ್ತಿರಾ ಡಾಕ್ಟರ್ರೆ???? ಮಕ್ಕಳ ಆಟ ಹೀಗೆ..ಏನೋ ನಿಮ್ಮಂಥ ಒಂದಷ್ಟು ಜನ ಡಾಕ್ಟರ್ ಗಳು ಇದ್ದಿದ್ದರಿಂದ ಒಳ್ಳೆಯದು ಇಲ್ಲಾ ಅಂದ್ರೆ ...???
    ಚೆನ್ನಾಗಿ ಬರೆದಿದ್ದಿರಾ ,,,

    ReplyDelete
  10. ಸರ್‍, ಚೆನ್ನಾಗಿದೆ ಮೂಗಿನಲ್ಲಿ ಕಾದಿದ್ದ ವಿಸ್ಮಯ.
    ಸರ್‍ ಇನ್ನೊಂದು ವಿಷ್ಯ.. ನಿಮಗೊಂದು ಶುಭಾಶಯ.
    ೯೯ ಬರಹ ಪೂರೈಸಿ ನೂರಕ್ಕೆ ಕಾಲಿಡುತ್ತಿರುವ ಈ ಸಂದರ್ಭದಲ್ಲಿ (ವಿಷ್ಯ ತಿಳಿಸಿದ್ದು ನಿಮ್ಮೊಳಗೊಬ್ಬ ಬಾಲು ಸರ್‍) ಮತ್ತಷ್ಟು ಬರಹಗಳು, ಅನುಭವಕಥನಗಳು ನಮಗೆಲ್ಲಾ ಸಿಗಲಿ.
    ಧನ್ಯವಾದಗಳು.

    ReplyDelete
  11. sir,
    nimma anubhava keLuttaa hodashTu majavaagide.....
    heege bareyiri sir....

    tumbaa chennaagide shaili...

    ReplyDelete
  12. ವೈದ್ಯೋ ನಾರಾಯಣೋ ಹರಿ. ಅಲ್ಲವೇ ? ಧನ್ಯವಾದಗಳು.

    ReplyDelete
  13. ಪಾಪ ಹುಡುಗ.. ಅವನಮನಸ್ಸಿನಲ್ಲಿ ಆ ಪಾಟೀ ರಕ್ತಿ ನೋಡಿ ಹೇಗನಿಸಿರಬೆಕೋ..

    ReplyDelete
  14. ಇದನ್ನು ಓದಿದ ಮೇಲೆ 'ಮೂಗಿನಿಂದ ರಕ್ತ ಆಗಾಗ್ಯೆ ಬರುತ್ತಿದ್ದ' ಒಂದು ಕೇಸ್ ಜ್ಞಾಪಕಕ್ಕೆ ಬಂತು.ನನ್ನ ಸಣ್ಣ ಕ್ಲಿನಿಕ್ಗೆ ಈ ಕೇಸ್ ಬಂದಾಗ ಮೊಡವೆಯಾಗಲಿ ಗಾಯವಾಗಲಿ ಕಾಣದೆ, ಬೀಪಿನೂ ನಾರ್ಮಲ್ ಇದ್ದು ವೀಕ್ನೆಸ್ ಇರಬಹುದು ಎಂದು ವೈಟಮಿನ್ ಮಾತ್ರೆ ಕೊಟ್ಟು ಕಳಿಸಿದ್ದೆ.(ನಾನು ನೋಡಿದಾಗ ರಕ್ತ ಬರುತ್ತಿರಲಿಲ್ಲ)
    ಸಮಸ್ಯೆ ಕಡಿಮೆಯಾಗದೆ ಅವರು ಪಕ್ಕದ ಪಟ್ಟಣಕ್ಕೆ ಹೋಗಿ ಅಲ್ಲಿ ತೋರಿಸಿದಾಗ ಅಲ್ಲಿ ಸಿಟಿ,ಬಿಟಿ, ಟೆಸ್ಟ್ ಮಾಡಿಸಿ ಎಲ್ಲಾ ಸರಿಯಿದೆಯೆಂದು ಅಲ್ಲೂ ವೈಟಮಿನ್ ಮಾತ್ರೆ ಕೊಟ್ಟು ಕಳಿಸಿದ್ದರು.
    ಕೆಲವು ದಿನ ಆದರೂ ಸಮಸ್ಯೆ ನಿಲ್ಲಲಿಲ್ಲ. ಒಮ್ಮೆ ಆ ವ್ಯಕ್ತಿ ತುಂಬಾ ಹೊತ್ತು ಸುಡುಬಿಸಿಲಿನಲ್ಲಿ ನಿಂತಾಗ ಕಾರಣ ಗೊತ್ತಾಯಿತು-ಮೂಗಿನಿಂದ ಒಂದು ಇಂಬಳ ಹೊರಗೆ ಚೋಟುಹಾಕುತ್ತಿತ್ತು!!!

    ReplyDelete
  15. ಸ್ವಾಮಿ ಸಜ್ಜನ ಸರ್ಜನರೆ,
    ನಿಮ್ಮ ಅನುಭವದ ಮೂಟೆಯಲ್ಲಿ ಇಂತಹ ಅದೆಷ್ಟು ಪ್ರಸಂಗಗಳು ಅಡಗಿವೆ?
    ಏನೇ ಆಗಲಿ, ನಿದ್ರೆ ಹಾಳುಮಾಡಿದ ತಪ್ಪಿಗೆ ಕೋಪಗೊಳ್ಳದೆ ಮಗುವಿನ ಜೀವ ಉಳಿಸಿದ್ದೀರಿ, ಧನ್ಯೋಸ್ಮಿ!

    ReplyDelete
  16. ನಾಸಿಕ ವೃತ್ತಾಂತದಲ್ಲಿ, ರೋಗಿ ಅನುಭವಿಸಿರಬಹುದಾದ ವೇದನೆಯ ಕಲ್ಪನೆಯ ಜೊತೆಗೇ, ಮೂಗಿನಲ್ಲಿ ಹುಣಿಸೆ ಗಿಡ ಬೆಳೆದು ಮರವಾಗಿ ಅದರಲ್ಲಿ ಹುಣಿಸೆ ಹಣ್ಣು ಜೋತಾಡುತ್ತಿದ್ದರೆ ಹೇಗಿರಬಹುದಿತ್ತು ಎಂಬ ಕಲ್ಪನೆ ಕೂಡಾ ನಗುಬರಿಸುತ್ತದೆ.

    ReplyDelete
  17. ಆಸ್ಥೆಯಿಂದ ಓದಿ ನಲ್ಮೆಯಿಂದ ಪ್ರತಿಕ್ರಿಯಿಸಿದ ಎಲ್ಲ ಮಹನೀಯರಿಗೂ ಮಹಿಳೆಯರಿಗೂ ನನ್ನ ನಮನಗಳು.ನಿಮ್ಮೆಲ್ಲರ ಪ್ರೋತ್ಸಾಹ ಹೀಗೇ ಮುಂದುವರಿಯಲಿ ಎಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ.ಧನ್ಯವಾದಗಳು.

    ReplyDelete
  18. SADHYA HUDUGA NIRALAVAGI USIRADUVANTHAYITHU.RA.SHI.YAVARA SMARANE TANDADDAKKE, KORAVANJIYA LEKHANA MALE KANNA MUNDE BANTHU.

    ReplyDelete
  19. ಚೆನ್ನಾಗಿದೆ ಮಿನಿ ಆಪರೇಷನ್.
    ನಿಮ್ಮ ಹಿಂದಿನ ಲೇಖನ ’ಬದುಕಿನ ಪಯಣ’ ತುಂಬಾ
    ಅರ್ಥಗರ್ಭಿತವಾಗಿತ್ತು.

    ReplyDelete

Note: Only a member of this blog may post a comment.