ಹೀಗೂ ಇರಬಹುದೇ? ಎಂದು ಎಷ್ಟೋ ಸಲ ಅನಿಸಿದ್ದುಂಟು..............
ಅವನು ಸುಮಾರು ಇಪ್ಪತಾರು ವರ್ಷ ವಯಸ್ಸಿನ ಸುಂದರ ಯುವಕ.ಆ ಕಣ್ಣುಗಳಲ್ಲಿ ಅದೇನೋ ವಿಶಿಷ್ಟ ಆಕರ್ಷಣೆ ಇದೆ ಎನಿಸಿತು.ಕಾಮತ್ ಯಾತ್ರಿ ನಿವಾಸದಲ್ಲಿ ಊಟದ ಟೇಬಲ್ ಮುಂದೆ ಎದುರು ಬದುರು ಕುಳಿತು ಊಟಕ್ಕೆ ಆರ್ಡರ್ ಮಾಡಿ ಮಾತಾಡುತ್ತಿದ್ದೆವು.
ಅವನ ಪರಿಚಯವಾಗಿ ಇನ್ನೂ ಒಂದು ಗಂಟೆಯಾಗಿತ್ತಷ್ಟೇ.......!
'ಸೀ ಬರ್ಡ್' ಬಸ್ ನಲ್ಲಿ ಊರಿಗೆ ಟಿಕೆಟ್ ಬುಕ್ ಮಾಡಿಸಿಕೊಂಡು ,ಇನ್ನೇನು ಆಟೋ ಹತ್ತಿ ವಿಜಯನಗರಕ್ಕೆಮನೆಗೆ ಹೊರಟಿದ್ದೆ.
ಸ್ವಪ್ನ ಬುಕ್ ಸ್ಟಾಲ್'ಗೆ ಒಮ್ಮೆ ಭೇಟಿ ಕೊಡೋಣ ಎನಿಸಿ ಅಲ್ಲಿಗೆ ಹೋಗಿ ಮೊದಲನೇ ಮಹಡಿಯಲ್ಲಿದ್ದ ಆಧ್ಯಾತ್ಮಿಕ ಪುಸ್ತಕಗಳತ್ತ ಕಣ್ಣು ಹಾಯಿಸುತ್ತಿದ್ದೆ. ಅಲ್ಲೇ ಆ ಯುವಕನ ಪರಿಚಯವಾಗಿದ್ದು...............
ರಾಶಿ ,ರಾಶಿ 'ಓಶೋ'ಪುಸ್ತಕಗಳನ್ನು ಜೋಡಿಸಿ ಇಟ್ಟುಕೊಂಡಿದ್ದ.........
ಯಾವುದನ್ನು ಖರೀದಿಸಬೇಕೋ ತಿಳಿಯದೆ ಪರದಾಡುತ್ತಿದ್ದ........
'ಒಂದೇ ಸಲ ಇಷ್ಟೆಲ್ಲಾ ಪುಸ್ತಕಗಳನ್ನು ಯಾಕೆ ಖರೀದಿಸುತ್ತೀರಿ .........?
ಸ್ವಲ್ಪ ಖರೀದಿಸಿ ,ಇಷ್ಟವಾದರೆ ಮತ್ತಷ್ಟು ಖರೀದಿಸಬಹುದಲ್ಲಾ.....'ಎಂದೆ.
'ಸರ್ ನಾನು ಅಮೇರಿಕಾದಲ್ಲಿ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ........
ಒಂದುವಾರ ರಜಾ ಹಾಕಿ ಇಲ್ಲಿಗೆ ಬಂದಿದ್ದೇನೆ.ಬರೋ ಮಂಗಳವಾರ ವಾಪಸ್ ಹೋಗ ಬೇಕು.
ಅಲ್ಲಿ ಈ ಪುಸ್ತಕಗಳು ಸಿಗುವುದಿಲ್ಲ.ಸಿಕ್ಕರೂ ಬೆಲೆ ಜಾಸ್ತಿ .ಅದಕ್ಕೇ ಒಂದು ವರ್ಷಕ್ಕಾಗುವಷ್ಟು ಪುಸ್ತಕ ತೆಗೆದು ಕೊಂಡು ಹೋಗುತ್ತಿದ್ದೇನೆ 'ಎಂದ. ಅವನ ಪುಸ್ತಕಗಳಿಗೆ ನನ್ನ ಕಾರ್ಡ್ ಉಪಯೋಗಿಸಿ ಸುಮಾರು ಮುನ್ನೂರು ರೂಪಾಯಿಗಳಷ್ಟು ಡಿಸ್ಕೌಂಟ್ ಅನ್ನೂ ಕೊಡಿಸಿದೆ.........
ನಾನು ಹೊರಟು ನಿಂತಾಗ 'ಬನ್ನಿ ಸಾರ್ ,ಯಾತ್ರಿನಿವಾಸ್ ನಲ್ಲಿ ಊಟ ಮಾಡಿ ಹೋಗೋಣ.ಹೇಗಿದ್ದರೂ ನನ್ನ ಬೈಕ್ ಇದೆ.ನಾನೂ ವಿಜಯನಗರದ ಕಡೆ ಹೋಗುತ್ತಿರುವುದರಿಂದ ನಿಮ್ಮ ಮನೆಗೆ ಡ್ರಾಪ್ ಕೊಡುತ್ತೇನೆ'ಎಂದ..........
ಯಾತ್ರಿ ನಿವಾಸದಲ್ಲಿ ಊಟ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಅವನು 'ಸರ್ ನನ್ನದೊಂದು ವೈಯಕ್ತಿಕ ಸಮಸ್ಯೆ ಯಿದೆ .........,ನಿಮಗೆ ಬೇಸರವಿಲ್ಲ ಎಂದರೆ ಹೇಳುತ್ತೇನೆ.ನೀವು ಸಾಕಷ್ಟು ಅನುಭವವುಳ್ಳವರು.ನಿಮ್ಮನ್ನು ನೋಡಿ,ನಿಮ್ಮ ಜೊತೆ ಮಾತನಾಡಿದಾಗ ನಿಮ್ಮಿಂದ ನನ್ನ ಸಮಸ್ಯೆಗೆ ಪರಿಹಾರ ಸಿಗಬಹುದು ಎನಿಸಿತು ' ಎಂದ............
'ಅದೇನು ಸಮಸ್ಯೆ ಹೇಳಿ.......ಎಲ್ಲಾ ಸಮಸ್ಯೆಗಳಿಗೂ ಒಂದು ಪರಿಹಾರ ಇದ್ದೆ ಇರುತ್ತದೆ.ಅದನ್ನು ನಾವು ಕಂಡುಕೊಳ್ಳಬೇಕು ಅಷ್ಟೇ 'ಎಂದೆ.ಸಮಸ್ಯೆ ಎಷ್ಟು ಗಹನವಾಗಿದೆ ಎಂಬುದರ ಅರಿವೂ ನನಗಿರಲಿಲ್ಲ.
'ಸಾರ್ ಮೂರು ವರ್ಷಗಳ ಹಿಂದೆ ಅಮೆರಿಕಾಗೆ ಹೋಗುವ ಮೊದಲು ನಮ್ಮ ಪಕ್ಕದ ಮನೆ ಹುಡುಗಿಯ ಜೊತೆ ಸ್ನೇಹವಾಯಿತು.ಅವಳೂ ನಮ್ಮ ಕಾಲೇಜಿನಲ್ಲೇ ಓದುತ್ತಿದ್ದಳು.ಅವಳು ಇಲ್ಲೇ ಬೆಂಗಳೂರಿನಲ್ಲೇ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕೆಲಸಮಾಡುತ್ತಿದ್ದಾಳೆ.ಪರಿಚಯ ಪ್ರೇಮಕ್ಕೆ ತಿರುಗಿತು.ನಮ್ಮಿಬ್ಬರದೂ ಬೇರೆ ಜಾತಿ.ಅವಳಿಗೆ ತಾಯಿ ಮತ್ತು ತಂಗಿ ಯೊಬ್ಬಳಿದ್ದಾಳೆ.ನಾವಿಬ್ಬರೂ ಮುಂದಿನ ವರ್ಷ ಮದುವೆಯಾಗಬೇಕು ಎಂದುಕೊಂಡಿದ್ದೆವು.ನಮ್ಮ ಮನೆಯಲ್ಲಿ ಅಪ್ಪ ,ಅಮ್ಮ ತಂಗಿ ಇದ್ದಾರೆ. ಇಬ್ಬರ ಮನೆಯಲ್ಲೂ ನಾವಿಬ್ಬರೂ ಪ್ರೀತಿಸುತ್ತಿರುವುದೂ ,ಮದುವೆ ಆಗಬೇಕೆಂದು ಕೊಂಡಿರುವುದೂ ಗೊತ್ತಿತ್ತು.ಒಂದು ತಿಂಗಳ ಹಿಂದಿನವರೆಗೂ ಎಲ್ಲವೂ ಸರಿಯಾಗಿಯೇ ಇತ್ತು ಸರ್............'ಎಂದು ಕಥೆ ನಿಲ್ಲಿಸಿ ,ಸ್ವಲ್ಪ ನೀರು ಕುಡಿದು ಗಂಟಲು ಸರಿಮಾಡಿ ಕೊಂಡ.ಕಣ್ಣಾಲಿಗಳು ತುಂಬಿ ಬಂದವು.
ಈಗ ಒಂದು ತಿಂಗಳಿಂದ ಅವಳ ತಾಯಿ ಬದಲಾಗಿದ್ದಾರೆ.ನನಗಿಂತ ಒಳ್ಳೆಯ ಹುದ್ದೆಯಲ್ಲಿರುವ,ಎರಡರಷ್ಟು ಸಂಬಳ ತರುವ ,ಅವರದೇ ಜಾತಿಯ ಸುಂದರ ಹುಡುಗನ ಜೊತೆ ನನ್ನ ಹುಡುಗಿಯನ್ನು ಮದುವೆ ಆಗಲು ಬಲವಂತ ಮಾಡುತ್ತಿದ್ದಾರೆ. ಆ ಹುಡುಗನ ಜೊತೆ ಮದುವೆಗೆ ಒಪ್ಪದೇ ,ಹೋದ ವಾರ ನನ್ನ ಹುಡುಗಿ ನಿದ್ದೆ ಗುಳಿಗೆಗಳನ್ನು ನುಂಗಿ ಆಸ್ಪತ್ರೆಗೆ ಸೇರಿದ್ದಾಳೆ ಎಂದು ತಿಳಿದು ,ಒಂದು ವಾರ ರಜದ ಮೇಲೆ ಬಂದಿದ್ದೇನೆ ಸರ್.
ನೆನ್ನೆ ನನ್ನ ತಂದೆ ತಾಯಿಯರನ್ನು ಅವರ ಮನೆಗೆ ನಮ್ಮಿಬ್ಬರ ಮದುವೆಯ ಬಗ್ಗೆ ಮಾತು ಕತೆ ನಡೆಸಲು ಕರೆದುಕೊಂಡು ಹೋಗಿದ್ದೆ. ಅವರ ತಾಯಿ ನಮ್ಮೊಡನೆ ಬಹಳ ಕೆಟ್ಟದಾಗಿ ನಡೆದು ಕೊಂಡರು. ನಾನೇದರೂ ಅವಳನ್ನು ಮದುವೆ ಆದರೆ ಅವರು ನಮ್ಮ ಮನೆ ಮುಂದೆ ಬಂದು ಮೈಗೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿ ಕೊಳ್ಳುವುದಾಗಿ ಹೆದರಿಸಿದರು.ಬಾಯಿಗೆ ಬಂದಂತೆ ಕೂಗಾಡಿದರು.ನಮ್ಮ ಮನೆಯವರೆಲ್ಲಾ ಬಹಳವಾಗಿ ನೊಂದುಕೊಂಡಿದ್ದಾರೆ.ಇದೆಲ್ಲಾ ಬೇಕಿತ್ತಾ?ಎನ್ನುತ್ತಿದ್ದಾರೆ 'ಎಂದು ಮಾತು ನಿಲ್ಲಿಸಿದ. ಸ್ವಲ್ಪ ಸಮಯ ಮೌನವಾಗಿದ್ದು 'ಈಗ ನಾನೇನು ಮಾಡಬೇಕು ಸರ್?ನನ್ನ ಸ್ನೇಹಿತರೆಲ್ಲಾ ನಾಳೆಯೇ ಆ ಹುಡುಗಿಯನ್ನು ಕರೆದುಕೊಂಡು ಹೋಗಿ ಯಾವುದಾದರೂ ದೇವಸ್ಥಾನದಲ್ಲಿ ಮದುವೆ ಆಗಿಬಿಡು.ಆಮೇಲೆ ಏನಾಗುತ್ತೋ ನೋಡಿಕೊಳ್ಳೋಣ ಎನ್ನುತ್ತಿದ್ದಾರೆ'ಎಂದ.
'ಆ ರೀತಿ ಮದುವೆ ಆಗುವುದು ನಿನಗೆ ಸರಿ ಅನಿಸುತ್ತಾ..................?'ಎಂದೆ.
'ಇಲ್ಲಾ ಸರ್.ಅದ್ಯಾಕೋ ನನ್ನ ಮನಸ್ಸು ಒಪ್ಪುತ್ತಿಲ್ಲ.ನನಗೂ,ನನ್ನ ಹುಡುಗಿಗೂ ಮದುವೆಯಾಗಬೇಕಾದ ತಂಗಿಯರಿದ್ದಾರೆ.ಈ ರೀತಿ ಮದುವೆ ಆದರೆ ನಾಳೆ ಅವರ ಮದುವೆಗೆ ತೊಂದರೆ ಆಗುವುದಿಲ್ಲವೇ ಸಾರ್? '.......ಎಂದ.
'ನೀನು ಹೇಳುವುದು ಸರಿ.ನಿನ್ನ ಮನಸ್ಸು ಒಪ್ಪದ ಕೆಲಸವನ್ನು ಖಂಡಿತಾ ಮಾಡಬೇಡ'ಎಂದೆ.
'ನಿಮ್ಮ ಸಲಹೆ ಏನು ಸರ್....?'ಎಂದು ಕೇಳಿ ನನ್ನನ್ನೇ ನೋಡುತ್ತಾ ಕುಳಿತ.
'ನೋಡು ,ನನಗೂ ನಿನ್ನ ವಯಸ್ಸಿನ ಮಕ್ಕಳಿದ್ದಾರೆ.ನೀನು ಈ ರೀತಿ ನಾಳೆ ಮದುವೆಯಾಗಿ ನಿನ್ನ ಹುಡುಗಿಯನ್ನು ಇಲ್ಲೆಯೇ ಬಿಟ್ಟು ಮಾರನೆ ದಿನವೇ ಅಮೇರಿಕಾಗೆ ಹೋಗುವುದು ಸರಿಯಲ್ಲ.ಮದುವೆ ಎನ್ನುವುದು ನಿಮ್ಮಿಬ್ಬರ ವೈಯಕ್ತಿಕ ವಿಷಯವಾದರೂ ಎರಡೂ ಕುಟುಂಬಗಳ ಒಪ್ಪಿಗೆ,ಒತ್ತಾಸೆ,ಇದ್ದರೆ ಒಳಿತು ಎನಿಸುತ್ತದೆ.ನಿನ್ನ ಹುಡುಗಿ ಮಾನಸಿಕವಾಗಿ ನಿನ್ನ ಜೊತೆ ಧೃಢವಾಗಿ ನಿಲ್ಲ ಬೇಕು.ಬೇರೆ ಯಾರನ್ನೂ, ಯಾರದೇ ಬಲವಂತಕ್ಕೂ ,ಯಾವುದೇ ಕಾರಣಕ್ಕೂ ಮದುವೆ ಆಗಲು ಒಪ್ಪ ಬಾರದು. ಎರಡೂ ಮನೆಯವರನ್ನೂ ಒಪ್ಪಿಸಿ ,ಆರು ತಿಂಗಳೋ, ಒಂದು ವರ್ಷವೋ ತಡೆದು ಮದುವೆ ಆಗುವುದು ಒಳಿತು.Rash decisions give rash results.ಇದು ನನ್ನ ವೈಯಕ್ತಿಕ ಅಭಿಪ್ರಾಯ. ಇನ್ನುನಿರ್ಧಾರ ನಿನ್ನ ಸ್ವಂತದ್ದು 'ಎಂದೆ.
'ನಿಮ್ಮ ಹತ್ತಿರ ಮಾತನಾಡಿದ ಮೇಲೆ ಮನಸ್ಸು ಎಷ್ಟೋ ಹಗುರವಾಯಿತು ಸರ್ ' ಎಂದು ಎದ್ದ.
'ನಾನು ಹೇಳಿದ್ದು ಎಷ್ಟು ಸರಿ..ಯಾವುದು ಸರಿ! ಯಾವುದು ತಪ್ಪು !' ಎನ್ನುವ ಜಿಜ್ಞಾಸೆ ನನ್ನನ್ನು ಕಾಡತೊಡಗಿತು.
ಬೈಕಿನಲ್ಲಿ ಮನೆಯ ಹತ್ತಿರ ಡ್ರಾಪ್ ಮಾಡಿ ಹೋಗುತ್ತಿದ್ದ ಅವನನ್ನೇ ನೋಡುತ್ತಾ ಸ್ವಲ್ಪ ಹೊತ್ತು ಅಲ್ಲೇ ನಿಂತಿದ್ದೆ.ಭಾರ ಮನಸ್ಸಿನಿಂದ ಗೇಟು ತೆರೆದು ಮನೆ ಕಡೆ ಹೆಜ್ಜೆ ಹಾಕಿದೆ.