Saturday, April 16, 2011

"ಅಪರಿಚಿತನೊಬ್ಬನ ....ಪ್ರೇಮ ಕಥೆ!!!"

ಇದು ಸುಮಾರು ಒಂದು ವಾರದ ಹಿಂದೆ ನಡೆದ ಕಥೆ..............
ಏನೂ ಏರಿಳಿತಗಳಿಲ್ಲದೆ ಮಾಮೂಲಾಗಿ ನಡೆಯುತ್ತಿರುವ  ಜೀವನ ಇದ್ದಕ್ಕಿದ್ದಂತೆ ವಿಚಿತ್ರ ತಿರುವುಗಳನ್ನು ಪಡೆದು ಕೊಳ್ಳುತ್ತದೆ.ಒಂದೆರಡು ಗಂಟೆಗಳ ಮೊದಲು,ಒಬ್ಬ ಅಪರಿಚಿತ ವ್ಯಕ್ತಿಯೊಬ್ಬನ ಜೀವನದ ನಿರ್ಣಾಯಕ ಘಟ್ಟದಲ್ಲಿ ನಾನೂ ಸಕ್ರಿಯವಾಗಿ ಪಾಲ್ಗೊಳ್ಳುತ್ತೇನೆ ಎಂದು ಕನಸು ಮನಸಿನಲ್ಲೂ ನೆನಸಿರಲಿಲ್ಲ..........
ನನ್ನ ಆಪ್ತ ಸ್ನೇಹಿತ ರಾಜಣ್ಣನ ಮಾತು ನೆನಪಿಗೆ ಬಂತು.......
'ಸರ್ ,ಇಲ್ಲಿ ಯಾವುದೂ ಆಕಸ್ಮಿಕವಲ್ಲ.The whole universe is a quantum soup of energy or consciousness.Every thing is predestined.Time and space really don't exist......'
ಹೀಗೂ  ಇರಬಹುದೇ? ಎಂದು ಎಷ್ಟೋ ಸಲ ಅನಿಸಿದ್ದುಂಟು..............

ಅವನು ಸುಮಾರು ಇಪ್ಪತಾರು ವರ್ಷ  ವಯಸ್ಸಿನ ಸುಂದರ ಯುವಕ.ಆ ಕಣ್ಣುಗಳಲ್ಲಿ ಅದೇನೋ ವಿಶಿಷ್ಟ ಆಕರ್ಷಣೆ ಇದೆ ಎನಿಸಿತು.ಕಾಮತ್ ಯಾತ್ರಿ ನಿವಾಸದಲ್ಲಿ ಊಟದ ಟೇಬಲ್ ಮುಂದೆ ಎದುರು ಬದುರು ಕುಳಿತು ಊಟಕ್ಕೆ ಆರ್ಡರ್ ಮಾಡಿ ಮಾತಾಡುತ್ತಿದ್ದೆವು.

ಅವನ ಪರಿಚಯವಾಗಿ ಇನ್ನೂ ಒಂದು ಗಂಟೆಯಾಗಿತ್ತಷ್ಟೇ.......!
 'ಸೀ ಬರ್ಡ್' ಬಸ್ ನಲ್ಲಿ  ಊರಿಗೆ  ಟಿಕೆಟ್ ಬುಕ್ ಮಾಡಿಸಿಕೊಂಡು ,ಇನ್ನೇನು ಆಟೋ ಹತ್ತಿ ವಿಜಯನಗರಕ್ಕೆಮನೆಗೆ  ಹೊರಟಿದ್ದೆ.
ಸ್ವಪ್ನ ಬುಕ್ ಸ್ಟಾಲ್'ಗೆ ಒಮ್ಮೆ ಭೇಟಿ ಕೊಡೋಣ ಎನಿಸಿ ಅಲ್ಲಿಗೆ ಹೋಗಿ ಮೊದಲನೇ ಮಹಡಿಯಲ್ಲಿದ್ದ ಆಧ್ಯಾತ್ಮಿಕ ಪುಸ್ತಕಗಳತ್ತ ಕಣ್ಣು ಹಾಯಿಸುತ್ತಿದ್ದೆ. ಅಲ್ಲೇ ಆ ಯುವಕನ ಪರಿಚಯವಾಗಿದ್ದು...............

ರಾಶಿ ,ರಾಶಿ 'ಓಶೋ'ಪುಸ್ತಕಗಳನ್ನು ಜೋಡಿಸಿ ಇಟ್ಟುಕೊಂಡಿದ್ದ.........
ಯಾವುದನ್ನು ಖರೀದಿಸಬೇಕೋ ತಿಳಿಯದೆ  ಪರದಾಡುತ್ತಿದ್ದ........
'ಒಂದೇ ಸಲ ಇಷ್ಟೆಲ್ಲಾ ಪುಸ್ತಕಗಳನ್ನು ಯಾಕೆ ಖರೀದಿಸುತ್ತೀರಿ .........?
ಸ್ವಲ್ಪ ಖರೀದಿಸಿ ,ಇಷ್ಟವಾದರೆ ಮತ್ತಷ್ಟು ಖರೀದಿಸಬಹುದಲ್ಲಾ.....'ಎಂದೆ.
'ಸರ್ ನಾನು ಅಮೇರಿಕಾದಲ್ಲಿ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ........
ಒಂದುವಾರ ರಜಾ ಹಾಕಿ ಇಲ್ಲಿಗೆ ಬಂದಿದ್ದೇನೆ.ಬರೋ ಮಂಗಳವಾರ ವಾಪಸ್ ಹೋಗ ಬೇಕು. 
ಅಲ್ಲಿ ಈ ಪುಸ್ತಕಗಳು ಸಿಗುವುದಿಲ್ಲ.ಸಿಕ್ಕರೂ ಬೆಲೆ ಜಾಸ್ತಿ .ಅದಕ್ಕೇ ಒಂದು ವರ್ಷಕ್ಕಾಗುವಷ್ಟು ಪುಸ್ತಕ ತೆಗೆದು ಕೊಂಡು ಹೋಗುತ್ತಿದ್ದೇನೆ 'ಎಂದ. ಅವನ ಪುಸ್ತಕಗಳಿಗೆ ನನ್ನ ಕಾರ್ಡ್ ಉಪಯೋಗಿಸಿ ಸುಮಾರು ಮುನ್ನೂರು ರೂಪಾಯಿಗಳಷ್ಟು ಡಿಸ್ಕೌಂಟ್ ಅನ್ನೂ  ಕೊಡಿಸಿದೆ.........

ನಾನು ಹೊರಟು ನಿಂತಾಗ  'ಬನ್ನಿ ಸಾರ್ ,ಯಾತ್ರಿನಿವಾಸ್ ನಲ್ಲಿ ಊಟ ಮಾಡಿ ಹೋಗೋಣ.ಹೇಗಿದ್ದರೂ ನನ್ನ ಬೈಕ್ ಇದೆ.ನಾನೂ ವಿಜಯನಗರದ ಕಡೆ ಹೋಗುತ್ತಿರುವುದರಿಂದ ನಿಮ್ಮ ಮನೆಗೆ ಡ್ರಾಪ್  ಕೊಡುತ್ತೇನೆ'ಎಂದ..........

ಯಾತ್ರಿ ನಿವಾಸದಲ್ಲಿ  ಊಟ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಅವನು 'ಸರ್ ನನ್ನದೊಂದು ವೈಯಕ್ತಿಕ ಸಮಸ್ಯೆ ಯಿದೆ .........,ನಿಮಗೆ ಬೇಸರವಿಲ್ಲ ಎಂದರೆ ಹೇಳುತ್ತೇನೆ.ನೀವು ಸಾಕಷ್ಟು ಅನುಭವವುಳ್ಳವರು.ನಿಮ್ಮನ್ನು ನೋಡಿ,ನಿಮ್ಮ ಜೊತೆ ಮಾತನಾಡಿದಾಗ ನಿಮ್ಮಿಂದ ನನ್ನ ಸಮಸ್ಯೆಗೆ  ಪರಿಹಾರ ಸಿಗಬಹುದು ಎನಿಸಿತು ' ಎಂದ............
'ಅದೇನು ಸಮಸ್ಯೆ ಹೇಳಿ.......ಎಲ್ಲಾ ಸಮಸ್ಯೆಗಳಿಗೂ ಒಂದು ಪರಿಹಾರ ಇದ್ದೆ ಇರುತ್ತದೆ.ಅದನ್ನು ನಾವು ಕಂಡುಕೊಳ್ಳಬೇಕು  ಅಷ್ಟೇ 'ಎಂದೆ.ಸಮಸ್ಯೆ ಎಷ್ಟು ಗಹನವಾಗಿದೆ ಎಂಬುದರ ಅರಿವೂ  ನನಗಿರಲಿಲ್ಲ.

'ಸಾರ್ ಮೂರು ವರ್ಷಗಳ ಹಿಂದೆ ಅಮೆರಿಕಾಗೆ ಹೋಗುವ ಮೊದಲು ನಮ್ಮ ಪಕ್ಕದ ಮನೆ ಹುಡುಗಿಯ ಜೊತೆ ಸ್ನೇಹವಾಯಿತು.ಅವಳೂ ನಮ್ಮ ಕಾಲೇಜಿನಲ್ಲೇ ಓದುತ್ತಿದ್ದಳು.ಅವಳು ಇಲ್ಲೇ ಬೆಂಗಳೂರಿನಲ್ಲೇ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕೆಲಸಮಾಡುತ್ತಿದ್ದಾಳೆ.ಪರಿಚಯ ಪ್ರೇಮಕ್ಕೆ ತಿರುಗಿತು.ನಮ್ಮಿಬ್ಬರದೂ ಬೇರೆ ಜಾತಿ.ಅವಳಿಗೆ ತಾಯಿ ಮತ್ತು ತಂಗಿ ಯೊಬ್ಬಳಿದ್ದಾಳೆ.ನಾವಿಬ್ಬರೂ ಮುಂದಿನ ವರ್ಷ ಮದುವೆಯಾಗಬೇಕು ಎಂದುಕೊಂಡಿದ್ದೆವು.ನಮ್ಮ ಮನೆಯಲ್ಲಿ ಅಪ್ಪ ,ಅಮ್ಮ ತಂಗಿ ಇದ್ದಾರೆ. ಇಬ್ಬರ ಮನೆಯಲ್ಲೂ ನಾವಿಬ್ಬರೂ ಪ್ರೀತಿಸುತ್ತಿರುವುದೂ ,ಮದುವೆ ಆಗಬೇಕೆಂದು ಕೊಂಡಿರುವುದೂ ಗೊತ್ತಿತ್ತು.ಒಂದು ತಿಂಗಳ ಹಿಂದಿನವರೆಗೂ ಎಲ್ಲವೂ ಸರಿಯಾಗಿಯೇ ಇತ್ತು ಸರ್............'ಎಂದು ಕಥೆ ನಿಲ್ಲಿಸಿ ,ಸ್ವಲ್ಪ ನೀರು ಕುಡಿದು ಗಂಟಲು ಸರಿಮಾಡಿ ಕೊಂಡ.ಕಣ್ಣಾಲಿಗಳು ತುಂಬಿ ಬಂದವು.

ಈಗ  ಒಂದು ತಿಂಗಳಿಂದ ಅವಳ ತಾಯಿ ಬದಲಾಗಿದ್ದಾರೆ.ನನಗಿಂತ ಒಳ್ಳೆಯ ಹುದ್ದೆಯಲ್ಲಿರುವ,ಎರಡರಷ್ಟು ಸಂಬಳ ತರುವ ,ಅವರದೇ ಜಾತಿಯ ಸುಂದರ ಹುಡುಗನ ಜೊತೆ ನನ್ನ ಹುಡುಗಿಯನ್ನು ಮದುವೆ ಆಗಲು ಬಲವಂತ ಮಾಡುತ್ತಿದ್ದಾರೆ.  ಆ ಹುಡುಗನ ಜೊತೆ ಮದುವೆಗೆ ಒಪ್ಪದೇ ,ಹೋದ ವಾರ ನನ್ನ ಹುಡುಗಿ ನಿದ್ದೆ ಗುಳಿಗೆಗಳನ್ನು  ನುಂಗಿ ಆಸ್ಪತ್ರೆಗೆ ಸೇರಿದ್ದಾಳೆ ಎಂದು ತಿಳಿದು ,ಒಂದು ವಾರ ರಜದ ಮೇಲೆ ಬಂದಿದ್ದೇನೆ ಸರ್.
 ನೆನ್ನೆ ನನ್ನ ತಂದೆ ತಾಯಿಯರನ್ನು ಅವರ ಮನೆಗೆ  ನಮ್ಮಿಬ್ಬರ ಮದುವೆಯ ಬಗ್ಗೆ ಮಾತು ಕತೆ ನಡೆಸಲು ಕರೆದುಕೊಂಡು ಹೋಗಿದ್ದೆ. ಅವರ ತಾಯಿ ನಮ್ಮೊಡನೆ ಬಹಳ ಕೆಟ್ಟದಾಗಿ ನಡೆದು ಕೊಂಡರು. ನಾನೇದರೂ ಅವಳನ್ನು ಮದುವೆ ಆದರೆ ಅವರು ನಮ್ಮ ಮನೆ ಮುಂದೆ ಬಂದು ಮೈಗೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿ ಕೊಳ್ಳುವುದಾಗಿ ಹೆದರಿಸಿದರು.ಬಾಯಿಗೆ ಬಂದಂತೆ ಕೂಗಾಡಿದರು.ನಮ್ಮ ಮನೆಯವರೆಲ್ಲಾ ಬಹಳವಾಗಿ  ನೊಂದುಕೊಂಡಿದ್ದಾರೆ.ಇದೆಲ್ಲಾ ಬೇಕಿತ್ತಾ?ಎನ್ನುತ್ತಿದ್ದಾರೆ 'ಎಂದು ಮಾತು ನಿಲ್ಲಿಸಿದ. ಸ್ವಲ್ಪ ಸಮಯ ಮೌನವಾಗಿದ್ದು 'ಈಗ ನಾನೇನು ಮಾಡಬೇಕು ಸರ್?ನನ್ನ ಸ್ನೇಹಿತರೆಲ್ಲಾ ನಾಳೆಯೇ ಆ ಹುಡುಗಿಯನ್ನು ಕರೆದುಕೊಂಡು ಹೋಗಿ ಯಾವುದಾದರೂ ದೇವಸ್ಥಾನದಲ್ಲಿ ಮದುವೆ ಆಗಿಬಿಡು.ಆಮೇಲೆ ಏನಾಗುತ್ತೋ ನೋಡಿಕೊಳ್ಳೋಣ ಎನ್ನುತ್ತಿದ್ದಾರೆ'ಎಂದ.

'ಆ ರೀತಿ ಮದುವೆ ಆಗುವುದು ನಿನಗೆ ಸರಿ ಅನಿಸುತ್ತಾ..................?'ಎಂದೆ.
'ಇಲ್ಲಾ ಸರ್.ಅದ್ಯಾಕೋ ನನ್ನ ಮನಸ್ಸು ಒಪ್ಪುತ್ತಿಲ್ಲ.ನನಗೂ,ನನ್ನ ಹುಡುಗಿಗೂ  ಮದುವೆಯಾಗಬೇಕಾದ ತಂಗಿಯರಿದ್ದಾರೆ.ಈ ರೀತಿ ಮದುವೆ ಆದರೆ ನಾಳೆ ಅವರ ಮದುವೆಗೆ ತೊಂದರೆ ಆಗುವುದಿಲ್ಲವೇ ಸಾರ್? '.......ಎಂದ. 
'ನೀನು ಹೇಳುವುದು ಸರಿ.ನಿನ್ನ ಮನಸ್ಸು ಒಪ್ಪದ ಕೆಲಸವನ್ನು ಖಂಡಿತಾ ಮಾಡಬೇಡ'ಎಂದೆ.
'ನಿಮ್ಮ ಸಲಹೆ ಏನು ಸರ್....?'ಎಂದು ಕೇಳಿ ನನ್ನನ್ನೇ ನೋಡುತ್ತಾ ಕುಳಿತ.
'ನೋಡು ,ನನಗೂ ನಿನ್ನ ವಯಸ್ಸಿನ ಮಕ್ಕಳಿದ್ದಾರೆ.ನೀನು ಈ ರೀತಿ ನಾಳೆ ಮದುವೆಯಾಗಿ ನಿನ್ನ ಹುಡುಗಿಯನ್ನು ಇಲ್ಲೆಯೇ ಬಿಟ್ಟು  ಮಾರನೆ ದಿನವೇ ಅಮೇರಿಕಾಗೆ ಹೋಗುವುದು ಸರಿಯಲ್ಲ.ಮದುವೆ ಎನ್ನುವುದು ನಿಮ್ಮಿಬ್ಬರ ವೈಯಕ್ತಿಕ ವಿಷಯವಾದರೂ ಎರಡೂ ಕುಟುಂಬಗಳ ಒಪ್ಪಿಗೆ,ಒತ್ತಾಸೆ,ಇದ್ದರೆ ಒಳಿತು ಎನಿಸುತ್ತದೆ.ನಿನ್ನ ಹುಡುಗಿ ಮಾನಸಿಕವಾಗಿ ನಿನ್ನ ಜೊತೆ ಧೃಢವಾಗಿ  ನಿಲ್ಲ ಬೇಕು.ಬೇರೆ ಯಾರನ್ನೂ, ಯಾರದೇ ಬಲವಂತಕ್ಕೂ ,ಯಾವುದೇ ಕಾರಣಕ್ಕೂ  ಮದುವೆ ಆಗಲು  ಒಪ್ಪ ಬಾರದು. ಎರಡೂ ಮನೆಯವರನ್ನೂ  ಒಪ್ಪಿಸಿ ,ಆರು ತಿಂಗಳೋ, ಒಂದು ವರ್ಷವೋ  ತಡೆದು ಮದುವೆ  ಆಗುವುದು ಒಳಿತು.Rash decisions give rash results.ಇದು ನನ್ನ ವೈಯಕ್ತಿಕ ಅಭಿಪ್ರಾಯ. ಇನ್ನುನಿರ್ಧಾರ ನಿನ್ನ ಸ್ವಂತದ್ದು 'ಎಂದೆ.
'ನಿಮ್ಮ ಹತ್ತಿರ ಮಾತನಾಡಿದ ಮೇಲೆ ಮನಸ್ಸು ಎಷ್ಟೋ ಹಗುರವಾಯಿತು ಸರ್ ' ಎಂದು ಎದ್ದ.
'ನಾನು ಹೇಳಿದ್ದು ಎಷ್ಟು ಸರಿ..ಯಾವುದು ಸರಿ! ಯಾವುದು ತಪ್ಪು !' ಎನ್ನುವ ಜಿಜ್ಞಾಸೆ ನನ್ನನ್ನು ಕಾಡತೊಡಗಿತು.
ಬೈಕಿನಲ್ಲಿ  ಮನೆಯ ಹತ್ತಿರ ಡ್ರಾಪ್ ಮಾಡಿ ಹೋಗುತ್ತಿದ್ದ ಅವನನ್ನೇ ನೋಡುತ್ತಾ ಸ್ವಲ್ಪ ಹೊತ್ತು ಅಲ್ಲೇ ನಿಂತಿದ್ದೆ.ಭಾರ ಮನಸ್ಸಿನಿಂದ ಗೇಟು ತೆರೆದು ಮನೆ ಕಡೆ ಹೆಜ್ಜೆ ಹಾಕಿದೆ.

37 comments:

 1. ಇಲ್ಲ ಸರ್, ನೀವು ಹೇಳಿರುವುದೇ ಸರಿ.... ಹೇಗಾದರು ಮಾಡಿ ಎರಡೂ ಮನೆಯವರನ್ನ ಒಪ್ಪಿಸಿ ಮದುವೆಯಾಗುವುದೇ ಒಳಿತು...

  ReplyDelete
 2. ಕಥೆ ಚನ್ನಾಗಿದೆ..
  ಮು೦ದೇನಾಯ್ತು...?

  ReplyDelete
 3. sir if its a story then its ok. if its otherwise why you experienced "dwandwa" after advising?

  ReplyDelete
 4. ಮನಸು ಮೇಡಂ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಸರಿ,ತಪ್ಪು,ಎನ್ನುವುದು ವ್ಯಕ್ತಿಗತ.ನನಗೆ ತಿಳಿದಿದ್ದನ್ನು,ಆ ಸಮಯಕ್ಕೆ ಸರಿ ಅನಿಸಿದ್ದನ್ನು ಅವನಿಗೆ ಹೇಳಿದ್ದೇನೆ.

  ReplyDelete
 5. ಚುಕ್ಕಿಚಿತ್ತಾರ ಮೇಡಂ;ಇದು ಕಥೆಯಲ್ಲ ,ಜೀವನ,ಮುಂದೇನಾಯಿತು ಎಂದು ತಿಳಿದುಕೊಳ್ಳುವ ಕುತೂಹಲ ನನಗೂ ಇದೆ.ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 6. ಉಮೇಶ್ ದೇಸಾಯ್;ಜಿಜ್ಞಾಸೆ ಮೂಡಿದ್ದಂತೂ ನಿಜ.ಏಕೆ ಎನ್ನುವ ನಿಮ್ಮ ಪ್ರಶ್ನೆಗೆ ನನ್ನಲ್ಲಿ ಉತ್ತರವಿಲ್ಲ.ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 7. ಸರ್
  ಇಂದಿನ ಎಷ್ಟೋ ಸಂಭಂಧಗಳು ಹೀಗೆಯೇ ಮುರಿದು ಬಿದ್ದಿವೆ

  ಜಾತಿಯ ಭೂತ ಎದ್ದು ಓಡಿಸಲೆಬೇಕಿದೆ

  ನಿಮ್ಮ ಲೇಖನ ಇಷ್ಟವಾಯಿತು

  ReplyDelete
 8. ಮದುವೆಯ ಚರ್ಚೆಗೆ ಹುಡುಗ-ಹುಡುಗಿ ಒಪ್ಪಿದರೂ ಮನೆಗಳವರು ಒಪ್ಪಬೇಕಲ್ಲ ? ಎಷ್ಟೋ ಸಮಯ ಹಣ, ಅಂತಸ್ತಿಗೆ ಹುಡುಗಿಯರು ಬದಲಾಗುವ ಪ್ರಮೇಯ ಕೂಡ ಇರುತ್ತದೆ-ಇದನ್ನು ಹಲವು ಕೇಸುಗಳಲ್ಲಿ ನೋಡಿದ್ದೇನೆ; ಪ್ರೀತಿ ಕ್ಷಣಿಕ! ಪ್ರೀತಿ ಬಹಳಕಾಲ ಒಂದೇ ರೀತಿಯಲ್ಲಿ ಇರುವುದಿಲ್ಲ, ಯಾವುದೋ ಪ್ರಲೋಭನೆಯಿಂದ ' ಆ ಹುಡುಗಿಯನ್ನು ಬಿಟ್ಟು ಬದುಕಲಾರೆ' ಎಂದುಕೊಂಡ ಹುಡುಗ ಕಾಲಾನಂತರ ಬದಲಾಗಬಹುದು ಅಥವಾ ಇನ್ಯಾವುದೋ ಹುಡುಗನ ಯಾವುದೋ ಸೆಳೆತದಿಂದ ಹುಡುಗಿಯ ಮನಸ್ಸೂ ಬದಲಾಗಬಹುದು. ಒಟ್ಟಾರೆ ಪ್ರೇಮಜೀವನ ಎಲ್ಲರಿಗೂ ಸುಲಭ ಸಾಧ್ಯವಲ್ಲ. ಎರಡೂ ಕುಟುಂಬಗಳೂ ಸ್ಥಿರ ಮನಸ್ಕರಾಗಿ ಒಪ್ಪಿದರೆ, ಹುಡುಗ-ಹುಡುಗಿ ಕೂಡ ಜೀವನದ ಅಂತ್ಯದ ವರೆಗೆ ಸಹಬಾಳ್ವೆ ನಡೆಸುವ ಅನ್ಯೋನ್ಯತೆ ಇದ್ದರೆ ಆಗ ಮಾತ್ರ ಲವ್ ಮ್ಯಾರೇಜ್ ಸಕ್ಸಸ್; ಇಲ್ಲದಿದ್ದರೆ ಎಲ್ಲಾ ಟುಸ್ ಟುಸ್! ಲೇಖನ ವಿವೇಚನೆಗೆ ಎಳೆಯುತ್ತದೆ, ನಮಸ್ಕಾರ.

  ReplyDelete
 9. Neevu heliruva sariyagide...Aadare..oppisuva bageyentu?!
  Bekkige gante kattuvavaraaru?

  ReplyDelete
 10. ಮುಂದೇನಾಯ್ತು???
  ಕಾದುನೋಡಬೇಕು ಅಲ್ವಾ.

  ReplyDelete
 11. ಗುರು ಸರ್;ಯಾರೋ ಆಗಂತುಕ ವ್ಯಕ್ತಿ ಇದ್ದಕ್ಕಿದ್ದಂತೆ ಹತ್ತಿರವಾದದ್ದು,ತನ್ನ ಕ್ಲಿಷ್ಟವಾದ ವೈಯಕ್ತಿಕ ಸಮಸ್ಯೆಗೆ ನನ್ನ ಬಳಿ ಸಲಹೆ ಕೇಳಿದ್ದು,ಎಲ್ಲವೂ ಒಂದು ವಿಶಿಷ್ಟ ಅನುಭವ!ನಮ್ಮ ಪಕ್ಕದ ವ್ಯಕ್ತಿ ಎಂತೆಂತಹ ಸಮಸ್ಯೆಗಳನ್ನು ಹೊತ್ತು ಕೊಂಡು ತಿರುಗುತ್ತಾನೆ ಎಂಬುದರ ಅರಿವೂ ನಮಗಿರುವುದಿಲ್ಲ!ಆ ನೋವು ಅನುಭವಿಸಿದವನಿಗೇ ಗೊತ್ತು.ಆದದ್ದೆಲ್ಲಾ ಒಳಿತೇ ಆಗುತ್ತದೆ ಎಂಬ ನಂಬಿಕೆಯಿಂದ ಮುಂದೆ ಸಾಗಬೇಕಷ್ಟೇ.ಅದೇ ಜೀವನ.ಅಲ್ಲವೇ?ಧನ್ಯವಾದಗಳು.

  ReplyDelete
 12. ಭಟ್ ಸರ್;ಮನೆಯವರ ಒಪ್ಪಿಗೆ ಇರದೇ ಮದುವೆಯಾಗುವ ಜೋಡಿಗಳು ಯಾವುದೇ ಕಷ್ಟ ಬಂದರೂ ಎದುರಿಸುವ ಧ್ರುಢತೆ ಹೊಂದಿರಬೇಕು.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 13. ಸುಷ್ಮಾ ಅವರೆ;ನನ್ನ ಬ್ಲಾಗಿಗೆ ಸ್ವಾಗತ.ಯಾರು ಏನೇ ಹೇಳಿದರೂ ಅವರವರ ಜೀವನವನ್ನು ಅವರವರೇ ಎದುರಿಸಬೇಕು.ಅವರ ಬೆಕ್ಕಿಗೆ ಅವರೆ ಗಂಟೆ ಕಟ್ಟಬೇಕು.ಅಲ್ಲವೇ?ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 14. ಸುಬ್ರಮಣ್ಯ;ಮುಂದೇನಾಯ್ತು ಎನ್ನುವ ವಿಷಯ ಆ ಅಪರಿಚಿತ ವ್ಯಕ್ತಿಯಷ್ಟೇ ನಿಘೂಡ!

  ReplyDelete
 15. ನಾಗರಾಜ್;ನೀವು ಹೇಳುವುದು ಸರಿ.ಇದುವೇ ಜೀವನ!

  ReplyDelete
 16. "ಅಪರಿಚಿತನೊಬ್ಬನ ....ಪ್ರೇಮ ಕಥೆ!!!" ಇದನ್ನು ಪರಿಚಿತನ ಪ್ರೇಮಕಥೆ ಯಂತೆ ಮುಂದೇನಾಯ್ತು , ಮುಂದೇನಾಯ್ತು ಎನ್ನುವ ಹಾಗೆ ಕುತೂಹಲಭರಿತವಾಗಿ ನಿರೂಪಣೆ ಮಾಡಿ ಬರೆದಿದ್ದೀರಿ ನಿಮಗೆ ಜೈ ಹೋ.ಸಾಮಾನ್ಯವಾಗಿ ಯಾವುದೇ ಹುದ್ದೆಯಲ್ಲಿದ್ದರೂ ಪ್ರೀತಿ ಯಲ್ಲಿ ಬಿದ್ದ ಜೋಡಿಗಳ ತಾಕಲಾಟ ಹೀಗೆ ಇರುತ್ತದೆ. ಇಬ್ಬರಲ್ಲಿಯೂ ಪರಸ್ಪರ ನಂಬಿಕೆ ವಿಶ್ವಾಸ ವಿದ್ದಲ್ಲಿ ಯಾರನ್ನು ಕೇಳದೆ ಎಲ್ಲ ಅದೇ ತಡೆಗಳನ್ನು ಮೀರಿ ಅವರೇ ವಿವಾಹ ಆಗುತ್ತಿದ್ದರು. ನನ್ನ ಅನಿಸಿಕೆಯಂತೆ ನಿಮ್ಮ ಲೇಖನದ ನಾಯಕ ಇನ್ನೂ ಹುಡುಗಿಯ ಮನಸ್ಸನ್ನು ಗೆದ್ದಿಲ್ಲವೆಂದು ನನ್ನ ಭಾವನೆ !!! ಆದರೂ ನೀವು ನೀಡಿರುವ
  Rash decisions give rash results.ಇದು ನನ್ನ ವೈಯಕ್ತಿಕ ಅಭಿಪ್ರಾಯ. ಇನ್ನುನಿರ್ಧಾರ ನಿನ್ನ ಸ್ವಂತದ್ದು ' ಎಂಬ ನಿಮ್ಮ ಸಲಹೆ ಸರಿಯಾಗಿದೆ.


  --
  ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

  ReplyDelete
 17. ಮೂರ್ತಿ ಸರ್,

  ಚೆನ್ನಾಗಿದೆ....ಆ ಹುಡುಗ ಈವಾಗ ಗಡಿಬಿಡಿಯಲ್ಲಿ ಅವಳನ್ನು ಮದುವೆಯಾದರೂ ಅವನು ಇಲ್ಲಿ ನಿಲ್ಲ್ಲಿಕ್ಕೆ ಸಾಧ್ಯವಿಲ್ಲದಿರುವುದರಿಂದ ಹಾಗೂ ಆಕೆಯನ್ನು ಕರೆದು ಕೊಂಡು ಹೋಗಲೂ ಸಾಧ್ಯವಿಲ್ಲದಿರುವುದರಿಂದ ಆತನ ಸ್ನೇಹಿತರ ಮಾತಿನಂತೆ ನಡೆದುಕೊಳ್ಳುವುದು ತಪ್ಪಾಗುತ್ತದೆ ಎನ್ನುವುದು ನನ್ನ ಅನಿಸಿಕೆ. ನೀವು ಕೊಟ್ಟ ಸಲಹೆ ಸರಿಯಾಗೇ ಇದೆ..ಆದರೆ ಹುಡುಗಿಯ ಮನೆಯವರು ಇದಕ್ಕೆ ಒಪ್ಪುತ್ತಾರೆ ಎಂಬ ಭರವಸೆ ಇಲ್ಲ.....ಆ ಹುಡುಗನ ಬಾಳು ಹಸನಾಗಲಿ ಎಂದು ಹಾರೈಸೋಣ.....
  http://ashokkodlady.blogspot.com/

  ReplyDelete
 18. ಬಾಲು ಸರ್;ನನ್ನ ಅನಿಸಿಕೆಯಂತೆ ಹುಡುಗಿಯ ನಿರ್ಧಾರ ಅಷ್ಟು ಧೃಢ ವಾಗಿರಲಿಲ್ಲವೆನಿಸುತ್ತದೆ.ಪಾಪ ಅವಳಿಗೆ ಏನೇನು ಒತ್ತಡ ಗಳು ಇತ್ತೋ!ಯಾರಿಗೆ ಗೊತ್ತು?!!ಒಟ್ಟಿನಲ್ಲಿ ಅವರಿಬ್ಬರಿಗೂ ಒಳಿತಾಗಲಿ ಎಂದು ಹಾರೈಸೋಣ.ಧನ್ಯವಾದಗಳು.

  ReplyDelete
 19. ಅಶೋಕ್ ಸರ್;ನೀವು ಹೇಳುವುದು ಸರಿ.ದುಡುಕಿ ಪಶ್ಚಾತ್ತಾಪ ಪಡುವುದಕ್ಕಿಂತ ತಾಳ್ಮೆ ವಹಿಸಿ ಧೈರ್ಯದಿಂದ ಬಂದದ್ದನ್ನು ಎದುರಿಸುವುದು ಒಳಿತು ಎನಿಸುತ್ತದೆ.ನೀವೆಂದಂತೆ ಅವರಿಬ್ಬರಿಗೂ ಒಳಿತಾಗಲಿ ಎಂದು ಹಾರೈಸೋಣ.

  ReplyDelete
 20. uffhh.... sakkat aagi barediddiraa saar....

  nirUpaNe maaDida shaili superb.....

  matte katheyallina nimma maatugaLu 100% satya....

  ReplyDelete
 21. ನಿಮ್ಮ ಗೆಳೆಯ ಹೇಳಿರುವದೇ (Every thing is predestined), ಸತ್ಯ ಅಂತ ಅನ್ನಿಸ್ತಾ ಇದೆ. ನಿಮ್ಮ ಪಾತ್ರವನ್ನು ನೀವು ನಿರ್ವಹಿಸಿದಿರಿ ಅಲ್ಲವೇ!
  ನಿರೂಪಣೆ ಚೆನ್ನಾಗಿ ಬಂದಿದೆ.

  ReplyDelete
 22. ಡಾಕ್ಟ್ರೇ ಎಲ್ಲಾ ಹೇಳಿ ನಿರ್ಧಾರ ನಿನ್ನದು ಎನ್ನುವ ಮಟ್ಟಕ್ಕೆ ಅವನು ಬೆಳದಿಲ್ಲ ಅನ್ನೋದೂ ನನ್ನ ಆಲೋಚನೆ ಬಾಲು ಹೇಳಿದ್ದು..ಸರಿ...ಹುಡುಗಿಯನ್ನ ಒಪ್ಪೋದಾದ್ರೆ ಅವನಿಗೆ ಹುಡುಗಿ ಮುಖ್ಯ ಆದ್ರೆ ಎಲ್ಲರನ್ನ ಒಪ್ಪಿಸಿ ಮದುವೆ ಆಗೋದು..ಇಲ್ಲವಾದ್ರೆ ರೆಜಿಸ್ಟರ್ಡ್ ಮದುವೆ ಮತ್ತು ಕೆಲ ಕಾಲ ಹೊರದೇಶಕ್ಕೆ ಹೋಗೋದನ್ನ ತಡೆದುಕೊಳ್ಳುವುದು ಆ ಸಮಯದಲ್ಲಿ ಪರಿಸ್ಥಿತಿ ತಿಳಿಯಾದರೆ ಸರಿ ಇಲ್ಲವಾದರೆ ಹುಡುಗಿಯೊಡನೆ ಇಲ್ಲೇ ಸೆಟ್ಲ ಆಗುವುದು ಇಲ್ಲ ಅವಳನ್ನೂ ಜೊತೆಗೆ ಕರೆದೊಯ್ಯುವುದು...ನಿಜ ಇವೆಲ್ಲಾ ಹೇಳುವಷ್ಟು ಸುಲಭವಲ್ಲ...ಆದರೂ ಹುಡುಗಿ ಮುಖ್ಯ ಅಂದ್ರೆ ಎಲ್ಲಾ ಮಾಡಲೇಬೇಕು...ಇಲ್ಲವಾದರೆ ..ಕರಿಯರ್ ಮುಖ್ಯ ಅಂತ ಹುಡ್ಗೀನಾ ಬಿಡ್ಬೇಕು,,,,

  ReplyDelete
 23. ದಿನಕರ್;ರೆಗ್ಯುಲರ್ ಕಥೆಗಾರರಾದ ನಿಮಗೆ,ನನ್ನಂತಹ ಅಪರೂಕ್ಕೆ ಕಥೆ ಬರೆದಿರುವ ಅಮೆಚೂರ್ ಕಥೆಗಾರನ ಕಥೆ ಹಿಡಿಸಿದ್ದು ಸಂತಸವಾಯಿತು.ಇನ್ನೂ ಹಲಕೆಲವು ವಿಷಯಗಳನ್ನು ತುರುಕಿದರೆ ಕಥೆ ಗೋಜಲು ಗೋಜಲಾಗಿ,ಕಥೆ ತನ್ನ ನೈಜತೆಯನ್ನು ಕಳೆದು ಕೊಳ್ಳುತ್ತದೆ ಎನಿಸಿ ಆದಷ್ಟೂ ಪಾತ್ರಗಳನ್ನುಮತ್ತು ವಿಷಯಗಳನ್ನೂ ಸೀಮಿತಗೊಳಿಸಿದ್ದೇನೆ.ಇದು ನೈಜ ಕಥೆ.ಪಾಪ ಹುಡುಗನ ಪರಿಸ್ಥಿತಿ ನಿಜಕ್ಕೂ ಇಕ್ಕಟ್ಟಿನ ಪರಿಸ್ಥಿತಿ ಯಾಗಿತ್ತು.ಅವರಿಬ್ಬರಿಗೂ ನನ್ನ ಶುಭ ಹಾರೈಕೆಗಳು.

  ReplyDelete
 24. ನಾರಾಯಣ್ ಭಟ್ ಸರ್;ಕೆಲವೊಂದು ಘಟನೆಗಳು ವಿಚಿತ್ರ ರೀತಿಯಲ್ಲಿ ಘಟಿಸಿಬಿಡುತ್ತವೆ.ಆ ಘಟನೆಗಳಲ್ಲಿ ನಮ್ಮ ಪಾತ್ರ ನಿಮಿತ್ತ ಮಾತ್ರವಾಗಿರುತ್ತದೆ.ಇದೂ ಅಂತಹದ್ದೇ ಒಂದು ಘಟನೆ.ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.

  ReplyDelete
 25. ಅಜಾದ್ ಸರ್;ಈ ಹುಡುಗ ನಾ ಕಂಡ ಆ ವಯಸ್ಸಿನ ಇತರ ಸಾಮಾನ್ಯ ಹುಡುಗರಿಗಿಂತ ಅತ್ಯಂತ ಪ್ರಬುದ್ಧ ಬುದ್ಧಿ ಮಟ್ಟದ ಹುಡುಗ.ಎಲ್ಲವೂ ತಿಳಿದು,ಮೊದಲು ಒಪ್ಪಿಗೆ ಕೊಟ್ಟು ಆಮೇಲೆ ಇವನಿಗಿಂತ ಒಳ್ಳೆಯ ,ಸ್ವಜಾತಿಯ ವರ ಸಿಕ್ಕಿದನೆಂದು ಮನಸ್ಸು ಬದಲಾಯಿಸಿ,ಆ ಹುಡುಗಿಗೆ ಬೇರೆ ಮದುವೆಯಾಗಲು ಒತ್ತಡ ತಂದ ಹುಡುಗಿಯ ತಾಯಿ ಇಷ್ಟೆಲ್ಲಾ ಅವಾಂತರಕ್ಕೆ ಕಾರಣ.ಆ ಹುಡುಗಿ ಅನಾಹುತ ಮಾಡಿಕೊಂಡು ಆಸ್ಪತ್ರೆಗೆ ಸೇರಿದ್ದಾಳೆ ಎಂದು ತಿಳಿದು ಒಂದು ವಾರ ರಜಾ ಹಾಕಿ ಅಮೆರಿಕಾದಿಂದ ಅವಳನ್ನು ನೋಡಿ ಹೋಗಲು ಬಂದ ಹುಡುಗ,ಆ ಹುಡುಗಿಯನ್ನು ಅವರ ಮನೆಯವರ ಒಪ್ಪಿಗೆ ಇಲ್ಲದೆ,ಓಡಿಸಿಕೊಂಡು ಹೋಗಿ ಮದುವೆಯಾಗಿ ತನ್ನ ಅಮೆರಿಕಾದ ಕೆಲಸವನ್ನೂ ಇದ್ದಕ್ಕಿದ್ದಂತೆ ಬಿಟ್ಟು ಇಲ್ಲಿಯೇ ಇದ್ದು ಬಿಡುವುದು ಎಷ್ಟು ಸರಿ? ಇದು practical solution ಅಲ್ಲ. ಇಲ್ಲಿ ಹುಡುಗಿಯ ಪಾತ್ರ ಕೂಡ ಮುಖ್ಯ.ಅವಳಿಗೂ ಅವನನ್ನೇ ಮದುವೆಯಾಗಬೇಕು ಎಂದು ಬಲವಾಗಿ ಇರುವುದಾದರೆ ಅವನ ಜೊತೆ ನೀಡಲು ದೃಢವಾಗಿ ನಿಂತು ತನ್ನ ತಾಯಿಯನ್ನು ಒಪ್ಪಿಸಿ ಮದುವೆಯಾಗುವುದು ಸರಿಯಾದ ದಾರಿ ಅನಿಸುತ್ತದೆ.ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 26. ಈ ನೈಜ ಕಥೆಯ ನಾಯಕ ಹಿರಿಯರ ಅನುಭವ ಪೂರ್ಣ ಸಲಹೆ ಕೇಳಿದ್ದು ಒಳ್ಳೆಯದೇ. ಆದರೆ ಸ್ವ೦ತ ಹಾಗೂ ದೃಢ ನಿರ್ಧಾರ ಆತನದೇ
  ಆದರೆ ಒಳಿತು. ನಿಮ್ಮ ಸಲಹೆ ಉತ್ತಮವಾಗಿದೆ ಸರ್. ಆತನ ಪ್ರೇಮಪ್ರಕರಣಕ್ಕೆ ಶುಭ ಹಾರೈಕೆಗಳು.

  ReplyDelete
 27. ಪ್ರಭಾಮಣಿ ಮೇಡಂ;ಒಂದು ಪ್ರೇಮ ಪ್ರಕರಣ ಸಫಲವಾಗಿ ಮದುವೆಯಲ್ಲಿ ಶುಭಾಂತ್ಯ ವಾಗಬೇಕಾದರೆ ಇಬ್ಬರು ಪ್ರೇಮಿಗಳೂ ದೃಢವಾದ ನಿಲುವನ್ನು ತೆಗೆದುಕೊಳ್ಳ ಬೇಕಾಗುತ್ತದೆ.ತಡವಾದರೂ, ಮನೆಯವರ ಒಪ್ಪಿಗೆಯೂ ಅವಶ್ಯ ಅನಿಸುತ್ತದೆ. ನಿಮ್ಮ ಹಾರೈಕೆಯಂತೆ ಇಬ್ಬರಿಗೂ ಒಳಿತಾಗಲಿ.ಧನ್ಯವಾದಗಳು.

  ReplyDelete
 28. ನಿಮ್ಮ ಸಲಹೆಯನ್ನು ನಾನು ನೂರಕ್ಕೆ ನೂರರಷ್ಟು ಸರಿಯೆಂದು ಒಪ್ಪುವೆ. ಒಳ್ಳೆಯ ಕೆಲಸ ಮಾಡಿದ್ದೀರಿ. "Rash decisions give rash results" ಎಂಬ ವಾಕ್ಯ ಚೆನ್ನಾಗಿದೆ.

  ReplyDelete
 29. ಪ್ರದೀಪ್ ರಾವ್;ಪಾಪ ಹುಡುಗ ಬಹಳ ಒತ್ತಡದಲ್ಲಿದ್ದ.ಒಂದುವಾರ ಹುಡುಗಿಯ ಆರೋಗ್ಯವನ್ನು ವಿಚಾರಿಸಲೆಂದು ರಜಾ ಹಾಕಿ ಅಮೇರಿಕಾ ದಿಂದ ಬಂದವನು ನಿಂತ ನಿಲುವಿನಲ್ಲಿ ಮದುವೆ ಆಗುವ ನಿರ್ಧಾರ ಅವನಿಗೂ ಸರಿ ಅನಿಸಿರಲಿಲ್ಲ.ನಾನು ಹೇಳಿದ್ದು ಅವನ ನಿಲುವೂ ಆಗಿತ್ತು.ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 30. ಡಾಕ್ಟ್ರೇ,

  ನಿಮ್ಮ ಅಭಿಪ್ರಾಯ ಸರಿಯೆನಿಸಿತು. ಏಕೆಂದರೆ ನಿಜವಾಗಿ ಇಬ್ಬರಲ್ಲೂ ಗಾಢವಾದ ಪ್ರೀತಿಯಿದ್ದಲ್ಲಿ ಹುಡುಗಿಯೂ ಕಾಯುತ್ತಾಳೆ. ಈತನೂ ಕಾಯುತ್ತಾನೆ. ಸಧ್ಯಕ್ಕೆ ಕಾಯುವುದೇ ಸರಿಯೆಂದು ನನ್ನ ಅಭಿಪ್ರಾಯ. ನಡುವೆ ಅವರಿಬ್ಬರ ನಡುವೆ ಪ್ರೀತಿಯೆನ್ನುವುದು ಬ್ರೇಕ್ ಆದರೆ ಅವರಲ್ಲಿನ ಪ್ರೀತಿ ಗಟ್ಟಿಯಿಲ್ಲವೆಂದೇ ಅರ್ಥವಲ್ಲವೇ!. ನೈಜಕತೆಗೆ ಸುಂದರ ಅಭಿಪ್ರಾಯವೆಂದುಕೊಳ್ಳುತ್ತೇನೆ. ಮತ್ತೆ ಮುಂದೆ ಅ ಹುಡುಗ ಸಿಕ್ಕರೆ ಏನಾಯ್ತು ಅಂತ ಬರೆಯಿರಿ..

  ReplyDelete
 31. shivu; ಪ್ರತಿಕ್ರಿಯೆಗೆ ಧನ್ಯವಾದಗಳು.ಹುಡುಗಿಯಲ್ಲೂ ಹುಡುಗನಿಗೆ ಇರುವ ಕಮಿಟ್ ಮೆಂಟ್ ಇದ್ದರೆ ಅವರ ಪ್ರೇಮ ಸಫಲವಾಗುತ್ತದೆ.ಅವರಿಬ್ಬರಿಗೂ ಒಳಿತಾಗಲಿ ಎಂದು ಹಾರೈಸೋಣ.

  ReplyDelete
 32. ನೀವು ದ್ವಂದ್ವದಲ್ಲಿ ಬೀಳಬೇಕಾಗಿಲ್ಲ .... ನೀವು, ನಿಮ್ಮ ಸಲಹೆ ಕೊಟ್ಟಿದ್ದೀರಿ (ನನ್ನ ಪ್ರಕಾರ ಒಳ್ಳೆಯ ಸಲಹೆ) ....ನಿರ್ಧಾರ ಆತನಿಗೆ ಬಿಟ್ಟಿದ್ದೀರಿ
  ಇದಕ್ಕಿಂತ ಇನ್ನೇನು ಮಾಡಲು ಸಾಧ್ಯ ಒಬ್ಬ ಅಪರಿಚಿತನಿಗೆ ?

  to be frank ನಾನು ಏನಾದ್ರೂ ಸಪ್ನಾ ಬುಕ್ ಹೌಸ್ ನಲ್ಲಿ ಆತನನ್ನ ನೋಡಿದ್ರೆ ಒಂದು strange look ಕೊಟ್ಟು ಬರ್ತಿದ್ದೆ ಅನ್ಸುತ್ತೆ :)

  ReplyDelete
 33. ಆನಂದ;ನನ್ನ ಬ್ಲಾಗಿಗೆ ಸ್ವಾಗತ.ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

  ReplyDelete
 34. kaala samasyeyannu saraleekaranagolisuvadu mattu gamya purvanirdhaarita. manassugala taakalaata hegiruvado tiliyado?
  kaalaaya tasmai namah!

  ReplyDelete
 35. ಮನುಷ್ಯನಿಗೆ ಪ್ರೀತಿಯ ಹಾಗೆ ದೃಢತೆ ಕೂಡಾ ಇರಬೇಕು ಅನಿಸುತ್ತೆ

  ReplyDelete
 36. ಮನುಷ್ಯನಿಗೆ ಪ್ರೀತಿಯ ಹಾಗೆ ದೃಢತೆ ಕೂಡಾ ಇರಬೇಕು ಅನಿಸುತ್ತೆ

  ReplyDelete