Monday, July 2, 2012

"ಹೀಗೊಂದು ಆಟೋ ಅನುಭವ !!!"

ನೆನ್ನೆ ಸಂಜೆ ಸುಮಾರು ಆರು ಘಂಟೆಗೆ ಬೆಂಗಳೂರಿನಲ್ಲಿ ವಿಜಯನಗರದಿಂದ ಶೇಷಾದ್ರಿಪುರಂಗೆ ಹೋಗಲು ಆಟೋಗಾಗಿ ಕಾಯುತ್ತಿದ್ದೆ.ರಜಾ ದಿನವಾದ್ದರಿಂದ ಮಲ್ಲೇಶ್ವರಂನ 'ಮಂತ್ರಿ ಮಾಲ್ 'ಸುತ್ತ ಮುತ್ತ ವಿಪರೀತ 'ಟ್ರ್ಯಾಫಿಕ್ ಜ್ಯಾಮ್'ನಿಂದಾಗಿ ಆ ಕಡೆ ಬರಲು ಯಾವ ಆಟೋದವರೂ ಇಷ್ಟ ಪಡುವುದಿಲ್ಲ .ಖಾಲಿ ಆಟೋ ಅಂತ ಕೈ ತೋರಿಸಿದರೆ,ಆಟೋ ನಿಲ್ಲಿಸಿ 'ಶೇಷಾದ್ರಿಪುರಂ' ಎಂದು ಹೇಳಿದ ತಕ್ಷಣ,ಕೆಟ್ಟ ಮುಖ ಮಾಡಿ,ತಿರಸ್ಕಾರದ ನೋಟ ಬೀರಿ,ದುರ್ದಾನ ತೆಗೆದು ಕೊಂಡವರಂತೆ 'ಭರ್'ಎಂದು ಮುಂದೆ ಹೋಗಿಬಿಡುತ್ತಾರೆ!ಸುಮಾರು ಹತ್ತು ಆಟೋಗಳಿಗೆ 'ಕೈ ತೋರಿಸಿ ಅವಲಕ್ಷಣ'ಎನಿಸಿ ಕೊಂಡಿದ್ದಾಯಿತು! ಅವೆಲ್ಲಾ 'ನಾ....ಒಲ್ಲೇ'ಎಂದು ಮುನಿಸಿಕೊಂಡು ಮುಂದೆ ಹೋದವು.ಹನ್ನೊಂದನೇ ಆಟೋದವನು ನಾನು ಶೇಷಾದ್ರಿಪುರಂ ಎಂದಾಗ ಬನ್ನಿ ಎಂಬಂತೆ ಸುಮ್ಮನೇ ತಲೆ ಆಡಿಸಿದ!ಸುಮಾರು ಆಟೋದವರು ಆಟೋ ಹತ್ತಿದ ತಕ್ಷಣ ತಮ್ಮ ಕಷ್ಟಗಳ ಪ್ರವರ ಶುರುಮಾಡಿಬಿಡುತ್ತಾರೆ. ಟ್ರ್ಯಾಫಿಕ್ ಅನ್ನೋ,ರಾಜಕೀಯ ಅವ್ಯವಸ್ಥೆಯನ್ನೋ ಬಯ್ದು ಮನಸ್ಸು ಹಗುರ ಮಾಡಿಕೊಳ್ಳುತ್ತಾರೆ.ಅಥವಾ ನಮ್ಮ ಬಗ್ಗೆ 'ನೀವು ಯಾರು?ಎತ್ತ?ಎಲ್ಲಿಂದ ಬಂದಿರಿ?ಎಲ್ಲಿ ಕೆಲಸ?ಎಷ್ಟು ಮಕ್ಕಳು?'ಎಂದೆಲ್ಲಾ ಪ್ರಶ್ನೆ ಕೇಳುತ್ತಾ ತಲೆ ಚಿಟ್ಟು ಹಿಡಿಸುತ್ತಾರೆ!ನಾವು ತಲಪುವ ಸ್ಥಳ ಬರುವ ತನಕ ಮುಳ್ಳಿನ ಮೇಲೆ ಕೂತಂತಾಗಿರುತ್ತದೆ!ಆಶ್ಚರ್ಯ ವೆಂಬಂತೆ ಈ ಆಟೋದವನು ತುಟಿ ಬಿಚ್ಚಲಿಲ್ಲ!ಯಾವುದೇ ಆತುರವಿಲ್ಲದೇ(ಆಟೋದವರಲ್ಲೊಂದು ಅಪರೂಪದ ಗುಣ !),ನಿಧಾನವಾಗಿ ಕರೆದೊಯ್ದ.ನನ್ನ ವೈದ್ಯಕೀಯ ಒಳಗಣ್ಣು ಇವನಿಗೇನೋ ತೊಂದರೆ ಇದೆ ಎಂದು ಹೇಳುತ್ತಿತ್ತು.ನಾನು ಇಳಿಯುವ ಸ್ಥಳ ಬಂದಾಗ ಮೀಟರ್ ಅರವತ್ತು ರೂಪಾಯಿ ತೋರಿಸುತ್ತಿತ್ತು.ನೂರು ರೂಪಾಯಿಯ ನೋಟೊಂದನ್ನು ಕೊಡುತ್ತಾ "ಯಾಕಪ್ಪ ಹುಶಾರಿಲ್ಲವಾ?"ಎಂದೆ.ಅದಕ್ಕವನು 'ನನಗೆ ಕಿಡ್ನಿ ಫೈಲ್ಯೂರ್ ಆಗಿದೆ ಸರ್.ಇದ್ದ ಹಣಾ ಎಲ್ಲಾ ಆಸ್ಪತ್ರೆಗೇಖರ್ಚಾಯಿತು.ಆಪರೇಶನ್ ಎಲ್ಲಾ ನಮ್ಮ ಕೈಯಲ್ಲಿ ಎಲ್ಲಿ ಆಗುತ್ತೇ ಸರ್?ನಾನು ಬಹಳ ದಿನ ಬದುಕೊಲ್ಲಾ ಅಂತ ಗೊತ್ತು'ಎಂದು ತಣ್ಣಗೆ ಹೇಳಿದ.ಅವನನ್ನು ನೋಡಿದ ತಕ್ಷಣ ಅವನಿಗೇನೋ ಹುಶಾರಿಲ್ಲ ಅಂತ ತಿಳಿಯುತ್ತಿತ್ತು.ಆದರೆ ಅವನಿಗೆ 'ಕಿಡ್ನಿ ಫೈಲ್ಯೂರ್'ಆಗಿರಬಹುದೆಂದು ನಾನು ಕನಸು ಮನಸಿನಲ್ಲೂ ಊಹಿಸಿರಲಿಲ್ಲ.ಒಂದು ಕ್ಷಣ ಅವನ ಕಣ್ಣುಗಳಲ್ಲಿ 'ಸಾವು'ಇಣುಕಿ ಹೋದದ್ದು ಕಂಡು ಅವಾಕ್ಕಾದೆ."ಇಂತಹ ಸ್ಥಿತಿಯಲ್ಲೂ ಗಾಡಿ ಓಡಿಸುತ್ತಿದ್ದೀಯಲ್ಲಪ್ಪಾ! ಸುಸ್ಥಾಗುವುದಿಲ್ಲವಾ?"ಎಂದೆ. 'ಏನು ಮಾಡೋದು ಸರ್!ತುಂಬಾ ಸುಸ್ತಾಗುತ್ತೆ!ಉಸಿರಿರೋಗಂಟಾ ಹೊಟ್ಟೀಗೋಸ್ಕರ ಹೊಡೆದಾಡಲೇ ಬೇಕಲ್ಲಾ ಸರ್?ಮನೇಲಿ ಸಣ್ಣ ಸಣ್ಣ ಮಕ್ಕಳಿದ್ದಾರೆ.ನಾನು ಆಟೋ ಓಡಿಸದಿದ್ದರೆ ಅವಕ್ಕೆ ಊಟವಿಲ್ಲ' ಎಂದು ಕಣ್ಣಲ್ಲಿ ನೀರು ತಂದು ಕೊಂಡ.'ಲೈಫು ಇಷ್ಟೇನೇ!!!'ಅನಿಸಿ, ಮನಸ್ಸು ಭಾರವಾಯಿತು. ನಾನು ಕೊಟ್ಟ ನೂರು ರೂಪಾಯಿಗೆ ಅವನು ಕೊಟ್ಟ ಬಾಕಿ ಹಣ ನಲವತ್ತು ರೂಪಾಯಿಗಳನ್ನು ಅವನಿಗೇ ಹಿಂದಿರುಗಿಸಿ,'ಅದನ್ನು ನೀನೇ ಇಟ್ಟು ಕೊಳ್ಳಪ್ಪಾ,ಒಳ್ಳೆಯದಾಗಲೀ'ಎಂದು ಬೀಳ್ಕೊಟ್ಟೆ.'ಥ್ಯಾಂಕ್ಯೂ ಸರ್.ದೇವರು ನಿಮ್ಮಂಥವರನ್ನು ಚೆನ್ನಾಗಿಟ್ಟಿರಲಿ'ಎಂದು ಹಾರೈಸಿ,ನನ್ನ ಮನಸ್ಸಿನಲ್ಲೊಂದು ಬಿರುಗಾಳಿ ಎಬ್ಬಿಸಿ 'ಭರ್'ಎಂದು ಸದ್ದು ಮಾಡುತ್ತಾ ,ಕತ್ತಲಲ್ಲಿ ಕಣ್ಮರೆಯಾದ!!!

29 comments:

  1. ಡಾಕ್ಟ್ರೆ...

    ಬಹಳ ಕಷ್ಟವಾಯಿತು...
    ಮನಸ್ಸೆಲ್ಲ ಭಾರವಾಯ್ತು...
    ದೇವರು ತಾನು ಇದ್ದೇನೆ ಎನ್ನುವದನ್ನು ಅವನಿಗೆ ಸಾಬೀತು ಪಡಿಸಲೆಂದು ಹಾರೈಸೋಣ...

    ಸಾವು ಎದುರಿಗೆ ಇದ್ದಾಗ ನಾವೆಲ್ಲ "ಪ್ರಾಮಾಣಿಕರಾಗಿರ್ತೇವೆ" ಅನ್ನೋದು ಎಷ್ಟು ಸೋಜಿಗ ಅಲ್ವಾ?

    ReplyDelete
    Replies
    1. ಪ್ರಕಾಶಣ್ಣ;ನೆನ್ನೆ ಸಂಜೆ ಈ ಘಟನೆ ನಡದ ಮೇಲೆ ಮನಸ್ಸೇಕೋ ಭಾರವಾಗಿತ್ತು.ಅವನ ತಣ್ಣಗಿನ ಕಣ್ಣುಗಳಲ್ಲಿ ಸಾವು ಇಣುಕುತ್ತಿರುವಂತೆ ಭಾಸವಾಗುತ್ತಿತ್ತು.ಒಬ್ಬ ವ್ಯಕ್ತಿ ತಾನು ಹೆಚ್ಚು ದಿನ ಬದುಕುವುದಿಲ್ಲಾ ಎಂದು ಗೊತ್ತಿದ್ದೂ ಕರ್ಮಯೋಗಿಯಯಂತೆ ಕೆಲಸಮಾಡುವುದು ಅಚ್ಚರಿಯಲ್ಲವೇ?ಅಥವಾ ಅದು ಬದುಕಿನ ಅನಿವಾರ್ಯತೆಯೇ?ಪ್ರತಿಕ್ರಿಯೆಗೆ ಧನ್ಯವಾದಗಳು.

      Delete
  2. ಡಾಕ್ಟ್ರೆ...ಪ್ರತಿಕ್ರಿಯೆ ಮಾಡಲು ಆಗುತ್ತಿಲ್ಲ..ಮಾಡದೆ ಹೋದರೆ..ನನಗೆ ನಾನೇ ಸಮಾಧಾನ ಮಾಡಿಕೊಳ್ಳಲು ಆಗೋದಿಲ್ಲ..
    ಆಟೋ ಚಾಲಕನ ಮಾತು ಕೇಳುತಿದ್ದ ಹಾಗೆ ನನ್ನ ಮನಸು ಆರು ತಿಂಗಳ ಹಿಂದೆ ಓಡಿತು..
    ತುಂಬಾ ಸಹನೀಯ ಲೇಖನ..ಕಣ್ಣು ತುಂಬಿ ಬರುತ್ತೆ...ಒಂದು ಸಾರಿ ಓದಿದರೂ ಹಲವಾರು ಮಾರ್ದನಿಗಳು
    ನನ್ನ ಮನ ಪಟಲಕ್ಕೆ ಬಡಿದು ಬಡಿದು ವಾಪಸಾಗುತ್ತಿದೆ..
    ಪ್ರಕಾಶಣ್ಣ ಹೇಳಿದ ಹಾಗೆ ಸಾವು ಹತ್ತಿರವಿದ್ದಾಗ ಪ್ರಾಮಾಣಿಕರಾಗುತ್ತೇವೆ....ಎಂತಹ ಮಾತುಗಳು..
    ಧನ್ವ್ಯವಾದಗಳು...ಹಂಚಿಕೊಂಡಿದ್ದಕ್ಕೆ

    ReplyDelete
    Replies
    1. ಶ್ರೀಕಾಂತ್;ನಿಮಗೂ ಇದೆ ರೀತಿಯ ಯಾವುದೋ ಘಟನೆ ನೆನಪಾಗಿರಬಹುದು.ಪ್ರತಿಕ್ರಿಯೆಗೆ ಧನ್ಯವಾದಗಳು.

      Delete
  3. ಮನಸ್ಸು ಭಾರವಾಯಿತು. ನಿಮ್ಮ ಬರಹದಲ್ಲಿ ನಿಮ್ಮ ಮಾನವೀಯತೆ ಮೆರೆದಿದೆ.

    ಆಟೋದವರ ಕಿರಿಕಿರಿ ಅತಿರೇಕಕ್ಕೆ ತಲುಪಿರುವ ಈ ಹೊತ್ತಿನಲ್ಲಿ, ಇಂತಹ ಅಪರೂಪದ ಜೀವನ ಹೋರಾಟಗಾರನ ಬಗ್ಗೆ ಮರುಕವಾಯಿತು.

    ಭಗವಂತ ಪರಿಕ್ಷೆಗಳನ್ನು ಬಡವನಿಗೇ ಏಕೆ ಒಡ್ಡುತ್ತಾನೋ ಎಂದು ಅಚ್ಚರಿಯಾಗುತ್ತದೆ!

    ಕೆಳ ಅಸಂಘಟಿತ ಕಾರ್ಮಿಕ ವಲಯಕ್ಕೆ ಸರ್ಕಾರದಿಂದ ಯಾವ ಸವಲತ್ತುಗಳು ದೊರಕುವುದಿಲ್ಲ. ಅವರಿಗೆ ಕನಿಷ್ಠ ಯಶಸ್ವಿನಿ ಯೋಜನೆಯ ಕಾರ್ಡು ಸಹ ಸರ್ಕಾರ ಕೊಡುತ್ತದೋ ಇಲ್ಲವೋ ಗೊತ್ತಿಲ್ಲ. ಪಾಪ ಈ ಆಟೋ ಗೆಳೆಯ ಪ್ರತಿವಾರ ಡಯಾಲಿಸಿಸಿಗೆ, ನಂತರ ಕಿಡ್ನಿ ಟ್ರಾನ್ಸ್ ಪ್ಲಾಂಟೇಷನ್ನಿಗೆ ಅದೆಲ್ಲಿಂದ ದುಡ್ಡು ಹೊಂಚುತ್ತಾನೋ? ಪಾಪ..

    ReplyDelete
    Replies
    1. ಸಾಮಾನ್ಯವಾಗಿ ನಾವೆಲ್ಲಾ ಆಟೋದವರ ಬಗ್ಗೆಯಾಗಲೀ ಇತರರ ಬಗ್ಗೆಯಾಗಲೀ ಕೆಲವು prejudiced ideas ಇಟ್ಟುಕೊಂಡಿರುತ್ತೇವೆ.ಆದರೆ ಅವರಲ್ಲೂ ಜೀವನದ ಹೋರಾಟದಲ್ಲಿ ಹೆಣಗಿ ಹಣ್ಣಾದವರೂ ಇದ್ದಾರೆ.ನನಗೆ ಇದೊಂದು ವಿಶಿಷ್ಟ ಅನುಭವ!

      Delete
  4. manassu bhaaravaaytu odi..... so sad.........

    ReplyDelete
    Replies
    1. ಜೀವನ ಕಷ್ಟಕರ.ಬೇರೆಯವರ ಕಷ್ಟ ನಮಗೆ ಕಾಣುವುದಿಲ್ಲ.ಅಷ್ಟೇ!ಪ್ರತಿಕ್ರಿಯೆಗೆ ಧನ್ಯವಾದಗಳು.

      Delete
  5. ಲೇಖನ ಓದಿ ಮನಸು ಭಾರವಾಯಿತು.ಜೀವನದ ಮತ್ತೊಂದು ಮುಖದ ದರ್ಶನ ಮಾಡಿಸಿದ್ದೀರಿ.ಆಟೋದವರಲ್ಲೂ ಬಹಳ ಪ್ರಾಮಾಣಿಕರು ಇದ್ದಾರೆ. ನಿಮಗೆ ಸಿಕ್ಕ ಆಟೋ ಚಾಲಕ ತನ್ನ ಅನಾರೋಗ್ಯದಿಂದ ಗುಣವಾಗಿ ಹೊರಬರಲಿ ಎಂದು ಪ್ರಾರ್ಥಿಸುತ್ತೇನೆ. ಹಾಗೆ ಅವನ ಬಗ್ಗೆ ಮರುಕಗೊಂದು ಮಿಡಿದ ನಿಮ್ಮ ವ್ಯಕ್ತಿತ್ವಕ್ಕೆ ಒಂದು ಸಲಾಂ.
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
    Replies
    1. ಬಾಲಣ್ಣ;ಅವನನ್ನು ನೋಡಿದರೆ ಅವನಿಗೆ ಏನೋ ತೊಂದರೆ ಇದೆ ಎಂದು ಮೇಲು ನೋಟಕ್ಕೇತಿಳಿಯುತ್ತಿತ್ತು.ಆದರೆ ಇಷ್ಟೊಂದು ತೊಂದರೆಯಲ್ಲಿದ್ದಾನೆ ಮತ್ತು ಆಟೋ ಓಡಿಸುವುದು ಅವನ ಜೀವನನಿರ್ವಹಣೆಗೆ ಅನಿವಾರ್ಯವಾಗಿದೆ ಎಂದು ತಿಳಿದಾಗ ಮನಸ್ಸಿಗೆ ತುಂಬಾ ಕಷ್ಟವಾಯಿತು.ಪ್ರತಿಕ್ರಿಯೆಗೆ ಧನ್ಯವಾದಗಳು.

      Delete
  6. Doctor.... kanna hanigaLu tiLiyade haridu barutive.... dEvaru eetanige innashtu shakti kodalendu aashisuve, ivara makkaLa nenedu manasu kivuchidantaagutide...

    Roopa

    ReplyDelete
    Replies
    1. ರೂಪ ಮೇಡಂ;ನಮಸ್ಕಾರ ಹಾಗೂ ಬ್ಲಾಗಿಗೆ ಸ್ವಾಗತ.ಸಾಮಾನ್ಯವಾಗಿ ನಮ್ಮ ಕಷ್ಟಗಳ ಹೊರೆ ಹೊತ್ತ ನಮಗೆ ಬೇರೆಯವರ ತೊಂದರೆಗಳು ಗಮನಕ್ಕೆ ಬರುವುದಿಲ್ಲ.ನಮ್ಮ ಕೈಯಲ್ಲಿ ಬಹಳಷ್ಟು ಸಹಾಯ ಮಾಡಲಾಗದಿದ್ದರೂ ನಾಲಕ್ಕು ಸಾಂತ್ವನದ ಮಾತುಗಳು ಅವರ ಹೊರೆಯನ್ನು ಸ್ವಲ್ಪ ಕಡಿಮೆ ಮಾಡಬಹುದೇನೋ!ಪ್ರತಿಕ್ರಿಯೆಗೆ ಧನ್ಯವಾದಗಳು.

      Delete
  7. ಒಮ್ಮೆ ಕಸಿವಿಸಿಯಾಯಿತು

    ReplyDelete
    Replies
    1. ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

      Delete
  8. ಸಾವು : ಕರುಣೆಗೆ ಕುರುಡು - ಖುಷಿಯ ಕೇಕೆಗೆ ಕಿವುಡು...
    ಮಾತುಗಳಿಲ್ಲ - ಮನಸು ಭಾರ ಭಾರ...

    ReplyDelete
  9. ಶ್ರೀವತ್ಸಕಂಚೀಮನೆ;ನಮಸ್ಕಾರ.ನನ್ನ ಬ್ಲಾಗಿಗೆ ಸ್ವಾಗತ.ಸಾವು ಹೋರಾಟದ,ಹೆಣಗಾಟದ,
    ಗೋಳಾಟದ ಬದುಕಿಗೊಂದು ಅಂತ್ಯದ ಅಂಕದ ಪರದೆಯಲ್ಲವೇ?ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
    Replies
    1. ಬದುಕು ನಾಟಕವಾದರೆ - ಎಲ್ಲ ಅಡೆತಡೆಗಳ ದಾಟಿ ನಾಟಕವಾಡುವ ಆಸೆ ನಮ್ಮಲ್ಲಿರುವಂತೆಯೇ, ನಾಟಕ ಒಂದು ಓಘದಲ್ಲಿ ಸಾಗುತ್ತಿರುವಾಗ ಒಮ್ಮೆಲೇ ಸಾವಿನ ಅಂಕದ ಪರದೆ ಬಿದ್ದರೆ ಆಭಾಸವಲ್ಲವೇ...ನಾಟಕಕಾರನಿಗೆ ನೋವೆನಿಸದೇ...
      ಏನೋ ಅರ್ಥವಾಗುತ್ತಿಲ್ಲ...
      :::
      ::
      :
      ಸಾಧ್ಯವಾದರೆ ನನ್ನ ಬ್ಲಾಗಿಗೂ ಭೇಟಿ ಕೊಡಿ...
      www.bhaavagalagonchalu.blogspot.com

      Delete
    2. ಶ್ರೀವತ್ಸಕಂಚೀಮನೆ;ಮತ್ತೊಮ್ಮೆ ಪ್ರತಿಕ್ರಿಯಿಸಿದ್ದಕ್ಕೆ ಧನ್ಯವಾದಗಳು.
      ನನಗನಿಸುವುದು ಇಷ್ಟು.ಬದುಕು ಒಂದು ಘಟನೆಗಳ ಸರಣಿ.ಅದಕ್ಕೆಅರ್ಥ ಕಲ್ಪಿಸುವುದು ನಮ್ಮ ಮನಸ್ಸು.ಒಳ್ಳೆಯದಾದರೆ ಅದೃಷ್ಟ ಎನ್ನುತ್ತೇವೆ!ಅವಘಡಗಳಾದರೆ ವಿಧಿ ಲಿಖಿತ ಎನ್ನುತ್ತೇವೆ!ಇಲ್ಲಿ ನೋವು,ನಲಿವು,ಕಷ್ಟ,ಸುಖ,ಹಗಲು,ರಾತ್ರಿ ಎಲ್ಲವೂ ಇವೇ.It is a world of dualities.Life comes as a total package whether you want it or not.ಸಮುದ್ರದಲ್ಲಿ ಎಲ್ಲವೂ ಉಪ್ಪಾಗುವಂತೆ,ನಮ್ಮೆಲ್ಲಾ ಕಷ್ಟನಷ್ಟಗಳೂ,ಸುಖ ದುಃಖ ಗಳೂ ಬ್ರಮ್ಹನಲ್ಲಿ ಒಪ್ಪಾಗುತ್ತವೆ!!! ಈ ಜೀವನ ಪಾಕದಲ್ಲಿ ಇವೆಲ್ಲಾ ವಿವಿಧ ರುಚಿಗಳು.ಅಷ್ಟೇ!!!ನಮಸ್ಕಾರ.

      Delete
  10. ಡಾಕ್ಟರೇ ತಮಗೆ ಆ ಆಟೋ ಚಾಲಕನ ವಿಳಾಸ ಗೊತ್ತಿದ್ದರೆ ಯಾವುದಾದರೂ ಪತ್ರಿಕೆಯಲ್ಲಿ ಸಹಾಯಕ್ಕಾಗಿ ಪತ್ರ ಬರೆದರೆ (ಉದಾ: ಪ್ರಜಾವಾಣಿ) ಬಹುಶಃ ಆತನಿಗೆ ಸಹಾಯ ದೊರಕಬಹುದು ಅನಿಸುತ್ತದೆ. ನಮ್ಮ ಜನರಲ್ಲಿ ಇನ್ನೂ ಮನುಷ್ಯತ್ವ ಇದೆ. ಮೋಸಗಾರರಿಗೆ ಸಹಾಯ ಮಾಡುವವರಿರುವಾಗ ಇಂತಹವರಿಗೆ ಸಹಾಯ ಮಾಡಲು ಮುಂದೆ ಬರುವವರು ಇದ್ದೇ ಇರುತ್ತಾರೆ

    ReplyDelete
    Replies
    1. ಅರವಿಂದ;ನಮಸ್ಕಾರ ಹಾಗೂ ನನ್ನ ಬ್ಲಾಗಿಗೆ ಸ್ವಾಗತ.ತಾವು ಹೇಳುವುದು ಸರಿ.ನನಗೆ ಆ ಆಟೋದವನು ಆಕಸ್ಮಿಕವಾಗಿ ಸಿಕ್ಕ ಆಗಂತುಕ.ಅವನ ಹೆಸರು,ವಿಳಾಸ,ಒಂದೂ ಗೊತ್ತಿಲ್ಲ.ನಾನು ಆಟೋ ಇಳಿದು ಮೀಟರ್ ನ ಹಣ ಕೊಡುವಾಗ ಅವನ ಖಾಯಿಲೆಯ ವಿಷಯ ತಿಳಿಯಿತು.ಹಣ ಕೊಟ್ಟ ಕೂಡಲೇ ಭರ್ ಎಂದು ಹೊರಟೀಬಿಟ್ಟ.ಆದರೆ ಮನಸ್ಸಿನಲ್ಲಿ ಮಾತ್ರ ಉಳಿದು ಬಿಟ್ಟ!

      Delete
  11. sir namskara nimma lekhana odi karulu chur enditu. sir innodu vishaya nimage kelabeku shivamogga bali narayana murthy ennuva aurveda vidya ru kiddny failure annu bari oushadi galidale gunapadisuttiddare ennuttare. benaglurinalli eega avarade maatu prati budavara mattu shanivaara janagalella sagarada baliya avara oorige hoguttiddare kelavaru namge gunavaitu endare matte kelvaru gunavaguttede ennuttiddare idu nijkku sadava dayavittu tilisi bekadare avara bagegina lekhanada link nimage tilisuttene
    dhanyavaadagalondige
    manohar bs

    ReplyDelete
    Replies
    1. ಮಾನ್ಯ ಮನು ಅವರಿಗೆ;ನಮಸ್ಕಾರಗಳು ಹಾಗೂ ನನ್ನ ಬ್ಲಾಗಿಗೆ ಸ್ವಾಗತ.ನನಗೆ ನಾರಾಯಣ ಮೂರ್ತಿಯವರ ಟ್ರೀಟ್ಮೆಂಟ್ ಬಗ್ಗೆ ತಿಳಿದಿಲ್ಲ.ನಾನೂ ವಿಚಾರಿಸುತ್ತೇನೆ.ತಾವೂ ಲಿಂಕ್ ಕಳಿಸಿಕೊಡಿ.CHRONIC KIDNEY DISEASE(CKD)OR CH.RENAL FAILURE ನಲ್ಲಿ ನನಗೆ ತಿಳಿದಂತೆ ಔಷಧಿಗಳು ಇಲ್ಲ.DIALYSIS ಅಥವಾ RENAL TRANSPLANT ಮಾಡಬೇಕು.ಪ್ರತಿಕ್ರಿಯೆಗೆ ಧನ್ಯವಾದಗಳು.

      Delete
  12. ಪಾಪ. ಕೆಲವೊಂದು ತಿರುವು ಅನಿರೀಕ್ಷಿತ ಅಲ್ವೇ ಸರ್,.

    ReplyDelete
  13. ಈಶ್ವರ್ ಭಟ್;ನಮಸ್ಕಾರ.ಇಂತಹ ಘಟನೆಗಳು ನಮಗೆ,"ಇರುವ ಬದುಕನ್ನು ಮತ್ತಷ್ಟು ಗಾಢವಾಗಿ ಪ್ರೀತಿಸಬೇಕು ಮತ್ತು ಸಾಧ್ಯವಿದ್ದಷ್ಟೂ ಪ್ರೀತಿಯನ್ನು ಹಂಚಬೇಕು"ಎನ್ನುವ ಪಾಠ ಕಲಿಸುತ್ತವೆ!ಅಲ್ಲವೇ?"EVERY ONE YOU MEET IS FIGHTING HIS OWN BATTLE.BE AS KIND AS POSSIBLE" ಎನ್ನುವುದನ್ನು ಆಗಾಗ ನೆನಪು ಮಾಡಿಕೊಳ್ಳುತ್ತಿರುತ್ತೇನೆ.ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  14. ವೈದ್ಯಮಿತ್ರರೇ, ಆಗಾಗ ಓದುತ್ತಿದ್ದರೂ ಮತ್ತೆ ಮತ್ತೆ ಪ್ರತಿಕ್ರಿಯಿಸಲು ಆಗಿರಲಿಲ್ಲ, ಈಗೊಮ್ಮೆ ಬರೆಯುತ್ತಿದ್ದೇನೆ. ಭಾರತೀಯ ಆಯುರ್ವೇದದ ಅಗಾಧತೆಯ ಬಗ್ಗೆ ತಮಗೆ ತಿಳಿದೇ ಇದೆ ಮತ್ತು ಅಲೋಪಥಿ ವೈದ್ಯರೆಂಬ ಕಾರಣಕ್ಕೆ ಆಯುರ್ವೇದದಲ್ಲಿ ಇರುವ ಹುರುಳನ್ನು ತಾವು ಅಲ್ಲಗಳೆಯುವ ನಿಮ್ನ ಮನಸ್ಕರಲ್ಲ ಎಂಬುದೂ ಗೊತ್ತು; ಈಗಷ್ಟೇ ಹೊಸ ಕರ್ಮವೀರದಲ್ಲಿ ೧೮೫ ವರ್ಷಗಳ ಕಾಲ [೧೭೭೭-೧೯೫೫]ಬದುಕಿದ್ದ ಶ್ರೀಮಾನ್ ತಪಸ್ವೀಜೀಯವರ ಬಗ್ಗೆ ಓದುತ್ತಿದ್ದೆ, ಅವರು ಮೂರುಸಲ ’ಕಾಯಕಲ್ಪ’ವೆಂಬ ಚಿಕಿತ್ಸೆಯಿಂದ ತನ್ನ ಶರೀರವನ್ನು ಯೌವ್ವನಕ್ಕೆ ಮರಳಿಸಿಕೊಂಡು ತಮ್ಮ ಸಾಧನೆ ಮುಂದುವರಿಸಿದರು ಎಂಬುದು ಈಗ ಲಭ್ಯವಿರುವ ಇತಿಹಾಸ! ಹಿಮಾಲಯದ ಗುಹೆಗಳಲ್ಲಿ ಸಾವಿರಾರು ವರ್ಷಗಳಿಂದ ತಪಸ್ಸನ್ನಾಚರಿಸುತ್ತಿರುವ ಮಹಾತ್ಮರಿದ್ದಾರೆ ಎನ್ನಲಾಗುತ್ತದೆ-ಅವರಲ್ಲಿ ಬಹುತೇಕರು ಎಲ್ಲರಿಗೂ ಕಾಣದ ಸೂಕ್ಷ್ಮಶರೀರಿಗಳಂತೆ. ಈ ತಪಸ್ವೀಜೀ ತಮ್ಮ ಜೀವಿತದಲ್ಲಿ ಒಮ್ಮೆ೫೦೦೦ ವರ್ಷಗಳಿಂದ ಜೀವಿಸುತ್ತಿರುವ ಮಹರ್ಷಿಯೊಬ್ಬರನ್ನು ಸಂಧಿಸಿದ್ದರಂತೆ!! ಆ ಮಹಾಮಹಿಮರು ತಾನು ಹಾಗೆ ಬದುಕಿರಲು ಬಳಸುವ ಕೆಲವು ಗಿಡಮೂಲಿಕೆಗಳನ್ನು ತಪಸ್ವೀಜೀಯವರಿಗೆ ತೋರಿಸಿದ್ದರಂತೆ. ವಿರಾಗಿಯಾಗಿದ್ದ ತಪಸ್ವೀಜೀಗೆ ಅದು ಅಷ್ಟಾಗಿ ಬೇಕೆನಿಸಲಿಲ್ಲವೇನೋ ಹೀಗಾಗಿ ಅವರು ಇನ್ನೂ ಬಹಳಕಾಲ ಬದುಕಲು ಇಷ್ಟಪಡಲಿಲ್ಲ. ಆದರೂ ಮೂರು ಶತಮಾನಗಳನ್ನು ಸಾಕ್ಷಾತ್ ಕಂಡ ಇತ್ತೀಚಿನ ಏಕೈಕ ವ್ಯಕ್ತಿ ಈ ತಪಸ್ವೀಜೀ ಎಂಬುದು ಒಂದು ದಾಖಲೆಯಾಗಿದೆ.

    ನಮ್ಮ ಆಯುರ್ವೇದದಲ್ಲಿ ಏನುಂಟು ಏನಿಲ್ಲವೆಂಬುದು ನಮಗೇ ತಿಳಿದಿಲ್ಲ. ಕುಕೃತಫಲದಿಂದ ಜನ್ಮಾಂತರದಲ್ಲಿ ಪಡೆದ ಕಾಯಿಲೆಗಳಿಗೆ ಆ ಯಾ ಕಾಲಕ್ಕೆ ಸಮರ್ಪಕ ವೈದ್ಯರೂ ಕೆಲವೊಮ್ಮೆ ದೊರೆಯದಿರಬಹುದು ಅಥವಾ ರೋಗಿಗೆ ಶುಷ್ರೂಶೆ ಮಾಡಿಸಿಕೊಳ್ಳುವ ಆರ್ಥಿಕ ಅನುಕೂಲತೆ ಇಲ್ಲದೇ ಹೋಗಬಹುದು. ಉತ್ತರಭಾರತದ ಬಹುತೇಕ ರಾಜ್ಯಗಳಲ್ಲಿ ೪-೫ ವಯಸ್ಸಿನ ಮಕ್ಕಳು ಕೊಳವೆಬಾವಿಗಳಲ್ಲಿ ಬಿದ್ದು ಮೃತರಾಗುತ್ತಲೇ ಇರುತ್ತಾರೆ-ಕಾಣುತ್ತಲೇ ಇರುವ ಈ ಘಟನೆಗಳನ್ನು ತಡೆಯಲು ಸಾಧ್ಯವಾಗದ್ದನ್ನು ನೋಡುವಾಗ ಪೂರ್ವಜನ್ಮದ ಫಲ ಸುಳ್ಳಲ್ಲವೆಂಬ ಅಂಶ ತಿಳಿದುಬರುತ್ತದೆ. ಅದೇ ರೀತಿ ಆಟೋಚಾಲಕನ ಜೀವನಕೂಡ ತೂಗುಯ್ಯಾಲೆಯಲ್ಲಿರುವುದು ಕೇಳಿ ಬಹಳ ಬೇಸರವಾಯ್ತಾದರೂ ಲಭ್ಯವುಳ್ಳ ಮಾಧ್ಯಮಗಳ ಮೂಲಕ ಆತ ಸಾರ್ವಜನಿಕರಿಂದ ಸಹಾಯ ಕೋರಬಹುದಿತ್ತು ಎಂದೆನಿಸುತ್ತದೆ. ಎಷ್ಟೋ ಜನ ಪಾಪ ಹಳ್ಳಿಗಳಲ್ಲಿ, ಕುಗ್ರಾಮಗಳಲ್ಲಿ ಜನಸಂಪರ್ಕವೇ ಇಲ್ಲದ ಜಾಗಗಳಲ್ಲಿ ಇರುವವರು ಇಂತಹ ಕಾಯಿಲೆಗಳಿಂದ ಬಳಲಿ ಅಸುನೀಗುತ್ತಲೇ ಇರುತ್ತಾರೆ. ಬೆಳಕಿಗೆ ಬರುವ ಕೆಲವೇ ಘಟನೆಗಳಿಗಿಂತ ಬೆಳಕಿಗೆ ಬಾರದ ಸಾವಿರಾರು [ಅಥವಾ ದೇಶವ್ಯಾಪಿ ಅಂತ ತಿಳಿದರೆ], ಲಕ್ಷಾಂತರ ಘಟನೆಗಳು ಘಟಿಸಿಹೋಗಿರುತ್ತವೆ. ಆಟೋವೊಂದರ ಹಿಂದೆ ಬರೆದಿತ್ತು ’ಮಾನವ ಕೊಟ್ಟುದು ಮನೆತನಕ, ದೇವರು ಕೊಟ್ಟುದು ಕೊನೆತನಕ’; ಕೊಡುವ ದೇವರು ಆತನ ದಯನೀಯ ಸ್ಥಿತಿಯನ್ನು ಕಂಡು, ಆತನ ಜನ್ಮಾಂತರಗಳ ಕುಕೃತಫಲವನ್ನು ಮೊಟಕುಗೊಳಿಸಿ, ಆತನಿಗೆ ಸಕಾಲದಲ್ಲಿ ಸಹಾಯಸಿಕ್ಕು ಆರೋಗ್ಯ ಮರಳಿ ಲಭಿಸಿ ದೀರ್ಘಾಯುವಾಗಲಿ ಎಂದು ಈ ಮೂಲಕ ತಮ್ಮಜೊತೆ ನಿಂತು ದಯಾಮಯನಾದ ಪರಮಾತ್ಮನಲ್ಲಿ ಪ್ರಾರ್ಥಿಸುತ್ತಿದ್ದೇನೆ, ಧನ್ಯವಾದಗಳು.

    ReplyDelete
  15. ಭಟ್ಟರೇ;ನಿಮ್ಮ ಆಶಯದಂತೆ ಎಲ್ಲರಿಗೂ ಆಲೋಪಥಿಯೋ,ಆಯುರ್ವೇದವೋ,
    ಹೋಮಿಯೋಪತಿಯೋ,ನ್ಯಾಚುರೋಪತಿಯೋ ,ಯಾವುದೋ ಒಂದು ಚಿಕಿತ್ಸೆ ಸಿಕ್ಕು ಎಲ್ಲರೂ ಆರೋಗ್ಯವಂತರಾಗುವಂತೆ ಆ ವೆಂಕಟಾಚಲಪತಿ ಕರುಣಿಸಲಿ.'ಸರ್ವೇ ಜನಾಃ ಸುಖಿನೋ ಭವಂತು,ಸರ್ವೇ ಮಂತು ನಿರಾಮಯಾಹ'.ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  16. ಡಾಕ್ಟ್ರೇ: ಆಟೋದವನ ಮಾತು ಕೇಳಿ ಮನಸ್ಸು ಕಿವುಚಿದಂತಾಯಿತು. ಇದು ನಿತ್ಯ ಬದುಕಿನಲ್ಲಿ ನಡೆಯುವ ಅನೇಕ ಮುಖಗಳಲ್ಲಿ ಇಂಥ ಎಷ್ಟೋ ಸತ್ಯ ಸಂಗತಿಗಳಿರುತ್ತವೆ...ಅವು ಹಾಗೆ ಕತ್ತಲಿನಂತೆ ಮುಚ್ಚಿಹೋಗುತ್ತವೆ..ಇಂಥವುಗಳಿಂದ ನಾವು ಕಲಿಯುವುದು ಬಹಳವಿರುತ್ತದೆ..ಸರ್ ಉತ್ತಮ ಅನುಭವವನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು.

    ReplyDelete
    Replies
    1. ಶಿವು;ತಮ್ಮ ಸೂಕ್ತ ಪ್ರತಿಕ್ರಿಯೆಗೆ ಧನ್ಯವಾದಗಳು.ನೀವು ಹೇಳಿದಂತೆ ದಿನ ನಿತ್ಯದ ಜೀವನದಲ್ಲಿ ಜನ ಅನುಭವಿಸುವ ಎಷ್ಟೋ ಇಂತಹ ಕಷ್ಟಗಳು ಬೆಳಕಿಗೇ ಬರುವುದಿಲ್ಲ.ಪಾಪ...,ಅವರವರ ಹೆಗಲಹೊರೆ ಅವರವರಿಗೆ!ಬರುತ್ತಿರಿ.ನಮಸ್ಕಾರ.

      Delete
  17. kolalalli badukina halavu ukhagala torisuttaa badukige ondu paatha needuttiddiraa... matregala haage doctre...

    ReplyDelete

Note: Only a member of this blog may post a comment.