Wednesday, March 23, 2011

"ತಿರುಪತಿಯ .....ತಂದೆಯೇ!!"

ನನ್ನ ಸ್ನೇಹಿತರೊಬ್ಬರ ಮಗ ಮತ್ತು ನನ್ನ ಮಗ ಇಬ್ಬರೂ ಇಂಗ್ಲೀಶ್ ಮಾಧ್ಯಮದಲ್ಲಿ ಐದನೇ ತರಗತಿಯಲ್ಲಿ ಓದುತ್ತಿದ್ದರು.ಒಂದನೇ ತರಗತಿಯವರಗೆ ಅಲ್ಪ ಸ್ವಲ್ಪ ಕನ್ನಡ ಕಲಿತಿದ್ದ ಅವರಿಗೆ, ಎರಡನೇ ತರಗತಿಯಿಂದ ಕನ್ನಡ ಕಲಿಸುವುದನ್ನು ನಿಲ್ಲಿಸಲಾಯಿತು.ಐದನೇ ತರಗತಿಗೆ ಬಂದಾಗ ಕನ್ನಡದ ಒಂದನೇ ತರಗತಿಯ ಪುಸ್ತಕವನ್ನೇ ಮತ್ತೆ ಶುರು ಮಾಡುವುದಾಗಿ ಹೇಳಲಾಗಿತ್ತು.ಆದರೆ ಆ ವರ್ಷ ಬಂದ ಹೊಸ ಶಿಕ್ಷಣಾಧಿಕಾರಿಯ ಆದೇಶದ ಪ್ರಕಾರ  ಕನ್ನಡ ಮಾಧ್ಯಮದ ಐದನೇ ತರಗತಿಯ ಪುಸ್ತಕವನ್ನೇ ಇಂಗ್ಲೀಶ್ ಮಾಧ್ಯಮದವರಿಗೂ ಇಡಲಾಯಿತು.ಎರಡನೇ ತರಗತಿಯಿಂದ ಕನ್ನಡ ಕಲಿಯುವುದನ್ನೇ ಬಿಟ್ಟಿದ್ದ ಹುಡುಗರಿಗೆ ಐದನೇ ತರಗತಿಯ ಕನ್ನಡ ಕಬ್ಬಿಣದ ಕಡಲೆಯಾಯಿತು.ಸರಿ ಮನೆಯಲ್ಲಿ ಕನ್ನಡ ಕಲಿಸುವ ಹೊಸ ಜವಾಬ್ದಾರಿಯನ್ನು ನಾವು ಹೊರಬೇಕಾಯಿತು.
ನನ್ನ ಸ್ನೇಹಿತರ ಮಗನಿಗೆ ತಂದೆಗೆ ಪತ್ರ ಒಂದನ್ನು ಬರೆದುಕೊಂಡು ಬರಲು ಹೇಳಲಾಗಿತ್ತು.ಪತ್ರವನ್ನು "ತೀರ್ಥ ರೂಪು ತಂದೆಯವರಿಗೆ" ಎಂದು ಶುರು ಮಾಡುವ ಬದಲು, "ತಿರುಪತಿ ತಂದೆಯವರಿಗೆ "ಎಂದು ಶುರು ಮಾಡಿದ್ದ!ನನ್ನ ಸ್ನೇಹಿತರು ನಕ್ಕು ನಕ್ಕು ಸುಸ್ತಾಗಿ,ತಮಗೆ ಅರಿವಿಲ್ಲದೆ ತಮ್ಮ ತಲೆಯನ್ನೊಮ್ಮೆ ಸವರಿಕೊಂಡರು!ಅವನ ಕನ್ನಡವನ್ನು ನೋಡಿ ಮನಸ್ಸಿನಲ್ಲೇ 'ಗೋವಿಂದಾ ....ಗೋವಿಂದ !'ಎಂದು ಕೊಂಡರು.
ನನ್ನ ಮಗನಿಗೊಮ್ಮೆ ಕನ್ನಡ ಪದಗಳನ್ನು ಕೊಟ್ಟು ,ಸ್ವಂತ ವಾಕ್ಯಗಳನ್ನು ರಚಿಸುವುದನ್ನು ಹೇಳಿ ಕೊಡುತ್ತಿದ್ದೆ..ಅವನಿಗೆ ಒತ್ತಕ್ಷರಗಳನ್ನು ಬರೆಯುವುದು ಸ್ವಲ್ಪ ಕಷ್ಟವಾಗುತ್ತಿತ್ತು.'ಗಾಭರಿ'ಎನ್ನುವ ಪದವನ್ನು ಎರಡೆರಡು ಸಲ ಹೇಳಿದೆ.
'ಗಾಭರಿ'ಎನ್ನುವ ಪದವನ್ನು 'ಗಾ','ಬರೀ'ಎಂದು ಪದ ವಿಭಾಗ ಮಾಡಿಕೊಂಡು, "ಗಂಗಾಗೆ....ಗಾ.... ಬರೀಬೇಕು" ಎಂದು ವಾಕ್ಯ ರಚನೆ ಮಾಡಿಕೊಂಡು ಬಂದ!'ಏನೋ ಇದು ?' ಎಂದರೆ, 'ನೀನೆ ಗಾ ..ಬರೀ ,ಗಾ ....ಬರೀ ..ಅಂತ ಎರಡು ಸಲ ಹೇಳಿದೆಯಲ್ಲಪ್ಪಾ', ಎಂದು ರಾಗ ತೆಗೆದು ನನ್ನ ಮುಖವನ್ನೇ ನೋಡತೊಡಗಿದ!ನಾನು ಈ ಹೊಸ ರೀತಿಯ ವಾಕ್ಯ ರಚನೆ ನೋಡಿ ಅವಾಕ್ಕಾದೆ.

20 comments:

 1. ಮೂರ್ತಿ ಸರ್, ನಮಸ್ತೆ.
  ನಿಮ್ಮ ಈ ಲೇಖನ ನನಗೆ ನನ್ನ ಐದನೇ ತರಗತಿಯ ನೆನಪು ಮಾಡಿತು.
  ಓದಿದ್ದು ಕನ್ನಡ ಮಾಧ್ಯಮ, ಒಮ್ಮೆಲೇ ಇಂಗ್ಲಿಷ್ ಬಂತು ನೋಡಿ ಐದನೇ ತರಗತಿಗೆ..!!
  ಮೇಡಂ ನನಗೆ ಏನೋ ಬರೆಯಲು ಹೇಳಿದ್ರು, ನಾನು ಬರೆದೆ. ತಪ್ಪು ತಪ್ಪಾಗಿ.
  ನಮ್ಮ ಮನೆಯಲ್ಲಿ ನನಗೆ ಆವಾಗಾವಾಗ ಪಾಠ ಹೇಳ್ತಿದ್ರು ನನ್ನ ತಂದೆ.
  ಆ ವಯಸ್ಸಿಗೆ ಹಾಗು ನನ್ನ ಬುದ್ದಿ ಮಟ್ಟಕ್ಕೆ ಎಷ್ಟು ಬೇಕು ಅಷ್ಟನ್ನು ಹೇಳಿಕೊಡ್ತಿದ್ರು.
  ಆದ್ರೆ,
  ಅವತ್ತು ಮೇಡಂ ನಾನು ಬರೆದದ್ದು ಈಡಿ ಕ್ಲಾಸಿಗೆ ಒಮ್ಮೆ ತೋರಿಸಿ, ಪರ ಪರನೇ ನನ್ನ ನೋಟ್ಬುಕ್ ಹರಿದು...
  ನನ್ನ ಕಪಾಳಿಗೆ ಹೊಡೆದ್ರು, ಹೊಡೆದ್ರು,ಹೊಡೆದ್ರು..... :(
  ನನ್ನ ಮುಖ ಬಾತುಕೊಂಡು ವಿಕಾರವಾಯ್ತು..! ಒಂದು ವಾರ ನಾನು ಮಾನಸಿಕ ರೋಗಿಯಂತ್ತಾಗಿದ್ದೆ..
  ಯಾರ ಮೇಲಿನ ಸಿಟ್ಟೋ ಅಥವಾ ನಾನು ಮಾಡಿದ್ದು ಅಂತ ದೊಡ್ಡ ತಪ್ಪೋ.? ಗೊತ್ತಿಲ್ಲ.
  ಆದ್ರೆ, ಅವರನ್ನು ನಾನು ಎಂದು ಮರೆಯಲ್ಲ. ಅದು ಮುಖದ ಮೇಲಿನ ಗಾಯ ಅಲ್ಲ, ಮನದ ಮೇಲಿನ ಗಾಯ.
  ನನ್ನ ಮನಸ್ಸಿನ ಮೇಲೆ ದೊಡ್ಡ ಗಾಯ ಮಾಡಿದ ಅವರನ್ನ ಮರೆಯುವುದು ತುಂಬಾ ಕಷ್ಟ. :(
  ಸಾರಿ, ನಿಮ್ಮ ಪೋಸ್ಟಿಗೆ ಏನು ಕಾಮೆಂಟ್ ಹಾಕಬೇಕೋ ತಿಳಿತಿಲ್ಲ.. ದಯವಿಟ್ಟು ಕ್ಷಮಿಸಿ.

  ReplyDelete
 2. ವೈದ್ಯಲೋಕದಿ೦ದ ವಿದ್ಯಾಲೋಕಕ್ಕೆ ಕಾಲಿಟ್ಟು..ಉತ್ತಮ ಹಾಸ್ಯದ ಹೂರಣವನ್ನು ಬಡಿಸಿದ್ದೀರಿ...ಡಾ. ಸರ್. ಧನ್ಯವಾದಗಳು.

  ಅನ೦ತ್

  ReplyDelete
 3. ಅನಿಲ್;ನಿಮ್ಮ ಶಾಲೆಯಲ್ಲಿ ಆದ ನಿಮಗೆ ಅನುಭವ ಬಹಳಷ್ಟು ಮಕ್ಕಳಿಗೆ ಆಗಿ ಮಾನಸಿಕ ಆಘಾತ ಉಂಟುಮಾಡುತ್ತದೆ.ಶಿಕ್ಷಕ ವೃತ್ತಿಯನ್ನು ಆಯ್ದು ಕೊಂಡವರು ಮಕ್ಕಳ ಎಳೆಯ ಮನಸ್ಸಿಗೆ ನೋವು ಉಂಟುಮಾಡದ ಹಾಗೆ ನಡೆದುಕೊಳ್ಳುವುದು ಬಹಳ ಮುಖ್ಯ. ನೋವನ್ನೆಲ್ಲಾ ಮರೆತು ಒಮ್ಮೆ ನಕ್ಕುಬಿಡಿ,ಪ್ಲೀಸ್.ಧನ್ಯವಾದಗಳು.

  ReplyDelete
 4. ಅನಂತ್ ಸರ್;ನಮ್ಮ ಈಗಿನ ಶಿಕ್ಷಣ ಪದ್ಧತಿಯಿಂದ ಮಕ್ಕಳಲ್ಲಿರುವ ಕ್ರಿಯಾಶೀಲ ಮನಸ್ಸು ನಶಿಸುತ್ತಿರುವುದು ವಿಷಾದನೀಯ.ಶಿಕ್ಷಕರು ಒಂದು ಪ್ರಶ್ನೆಗೆ ತಾವು ಬರೆಸಿದ ಉತ್ತರವನ್ನೇ ಅದೇ ರೀತಿ ಬರೆಯಬೇಕು ಎನ್ನುವುದನ್ನು ಕಡ್ಡಾಯ ಮಾಡುವುದರಿಂದ ಮಕ್ಕಳಿಗೆ ಬೇರೆ ರೀತಿಯಲ್ಲೂ ಸರಿಯಾದ ಉತ್ತರ ಬರೆಯಬಹುದು ಎನ್ನುವ ಅರಿವು ಇರುವುದಿಲ್ಲ.ಅದೇ ಉತ್ತರವನ್ನು ಉರು ಹೊಡೆಯುತ್ತಾರೆ.ಪೋಷಕರಿಗೆ ಇದೊಂದು ದೊಡ್ಡ ಸಮಸ್ಯೆ.ಪೋಷಕರು ಬರೆಸಿದ ಉತ್ತರ ಸರಿ ಇದ್ದರೂ ಶಿಕ್ಷಕರು ಅದು ತಾವು ಬರೆಸಿದ ರೀತಿ ಇಲ್ಲದಿದ್ದರೆ ತಪ್ಪೆನ್ನುತ್ತಾರೆ!ಮಕ್ಕಳನ್ನು ಬಾಯಿ ಪಾಠ ಮಾಡುವ ಯಂತ್ರಗಳನ್ನಾಗಿ ತಯಾರು ಮಾಡುತ್ತಿರುವುದು ವಿಶಾದಕರವಲ್ಲವೇ?

  ReplyDelete
 5. ದಿನಕರ್;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 6. ತೀರ್ಥರೂಪರು "ತಿರುಪತಿ" ಆಗಿದ್ದು ನಗು ತರಿಸಿತು. ಆ೦ಗ್ಲ ಮಾಧ್ಯಮದ ಮಕ್ಕಳಿಗೆ ಕನ್ನಡ ಕಬ್ಬಿಣದ ಕಡಲೆ ಅನ್ನಿಸುವುದು ಸಹಜ. ನಿಮ್ಮ ಬರಹದಲ್ಲಿನ ವಿಚಾರ ಇ೦ದಿನ ವಿದ್ಯಾರ್ಥಿಗಳಿಗೂ ಪ್ರಸ್ತುತ.

  ReplyDelete
 7. ಡಾಕ್ಟ್ರೆ,

  ಕನ್ನಡ ಕಲಿಯದಿದ್ದರೆ ಏನಾಗುತ್ತದೆ ಎನ್ನುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕೆ..

  ReplyDelete
 8. ಸ್ವ - ಅನುಭವ ನೆನಪಿಗೆ ಬಂತು ಡಾಕ್ಟ್ರೆ...ನಾನು ಅಪ್ಪಟ ಕನ್ನಡ ಮೀಡಿಯಮ್ಮು...
  ಹಲವಾರು ಅವಾಂತರ ಇಂಗ್ಲಿಷ್ ಕಲಿಯುವಿಕೆಯಲ್ಲಿ ಆಗಿತ್ತು.

  Guide - ಚಲನಚಿತ್ರ ದೂರದರ್ಶನ ದಲ್ಲಿ ಬಿತ್ತರವಾದಾಗ
  "ಗುಇಡೆ ನೋಡಿದೆ" ಅಂತ ಹೇಳ್ಕೊಂಡು ಊರೆಲ್ಲ ತಿರುಗಿದ್ದೆ.

  ReplyDelete
 9. ಪರಾಂಜಪೆ ಸರ್;ಬರಹ ನಿಮಗೆ ಇಷ್ಟವಾಗಿದ್ದು ಸಂತೋಷವಾಯಿತು.ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 10. ಶಿವು;ನಮ್ಮ ಹುಡುಗರು ಕಷ್ಟಪಟ್ಟಾದರೂ ಕನ್ನಡ ಕಲಿತರು.ಓದಲು ಬರೆಯಲು ಕನ್ನಡ ಬರದ ಕನ್ನಡಿಗರೂ ಇದ್ದಾರೆ ಎನ್ನುವುದೇ ವಿಷಾದನೀಯ.

  ReplyDelete
 11. ದೀಪಕ್ ವಸ್ತಾರೆ;ನಿಮ್ಮ ಗು ಇಡೆ ನೆನಪು ನಗು ತರಿಸಿತು.ಧನ್ಯವಾದಗಳು.

  ReplyDelete
 12. Dr,
  tumbaa olle haasya da hoorana kodtiraa
  olleya baraha

  ReplyDelete
 13. ಗುರೂ ಸರ್;ನಿಮ್ಮ ಅಭಿಮಾನ ಪೂರ್ವಕ ಪ್ರತಿಕ್ರಿಯೆಗೆ ಧನ್ಯವಾದಗಳು.

  ReplyDelete
 14. ಸರ್,
  ಗಾ ಬರಿ ಮತ್ತು ತಿರುಪತಿ ನಗು ಮೂಡಿಸಿದವು :)

  ReplyDelete
 15. ಹ್ಹ ಹ್ಹ ಹ್ಹ...
  ಚನ್ನಾಗಿದೆ ಸರ್...
  ನನಗೂ ಇಂತಹದೆ ಒಂದು ಸನ್ನಿವೇಶ ಜ್ಞಾಪಕ ಆಯ್ತು.. ಸಮಯ ಸಿಕ್ಕಾಗ ಬ್ಲಾಗ್ ನಲ್ಲಿ ಬರಿತೀನಿ...

  ReplyDelete