ಸುಮಾರು ಮೂವತ್ತೈದು ವರ್ಷಗಳ ಹಿಂದಿನ ಮಾತು.ಆಗ ನಾನು ಬಳ್ಳಾರಿ ಮೆಡಿಕಲ್ ಕಾಲೇಜಿನಲ್ಲಿ ಹೌಸ್ ಸರ್ಜೆನ್ಸಿ ಮಾಡುತ್ತಿದ್ದೆ.ಮೆಡಿಸಿನ್ ಪೋಸ್ಟಿಂಗ್ ಇತ್ತು.ಒಂದು ದಿನ ಬೆಳಿಗ್ಗೆವಾರ್ಡಿನ ರೌಂಡ್ಸ್ ನಲ್ಲಿ ನಮ್ಮ ಮೆಡಿಸಿನ್ ಪ್ರೊಫೆಸರ್ ಅವರು ಕಂಪ್ಲಿ ಯಿಂದ ಬಂದ ಸುಮಾರು ಎಪ್ಪತ್ತು ವರ್ಷ ವಯಸ್ಸಿನ ರೈತ,ಗೌಡಜ್ಜನಿಗೆ ಟ್ರೀಟ್ಮೆಂಟ್ ಹೇಳಿದರು.ಗೌಡಜ್ಜನಿಗೆ ಸುಮಾರು ದಿನಗಳಿಂದ ರಕ್ತ ಬೇಧಿಯಾಗುತ್ತಿತ್ತು.ಸುಮಾರು ಕಡೆ ತೋರಿಸಿಕೊಂಡು ಕಡೆಗೆ ಇಲ್ಲಿಗೆ ಬಂದಿದ್ದ.ನಮ್ಮ ಪ್ರೊಫೆಸರ್ ಅವನಿಗೆ 'ಅಲ್ಸರೇಟಿವ್ ಕೊಲೈಟಿಸ್' ಎನ್ನುವ ದೊಡ್ಡ ಕರುಳಿನ ಖಾಯಿಲೆಯಿದೆ ಎಂದು ರೋಗ ನಿರ್ಧಾರ(DIAGNOSIS) ಮಾಡಿ 'ಮಜ್ಜಿಗೆ ಎನೀಮ 'ಟ್ರೀಟ್ಮೆಂಟ್ ಕೊಡುವುದಕ್ಕೆ ಹೇಳಿದ್ದರು .ಆಗಿನ ಕಾಲದಲ್ಲಿ 'ಅಲ್ಸರೆಟಿವ್ ಕೊಲೈಟಿಸ್'ಖಾಯಿಲೆಗೆ ನಮ್ಮ ಮೆಡಿಸಿನ್ ಪ್ರೊಫೆಸರ್ ಅವರು ಕೆಲವು ಮಾತ್ರೆಗಳನ್ನು ಪುಡಿ ಮಾಡಿ ರೋಗಿಯ ಕಡೆಯವರಿಂದ ಮಜ್ಜಿಗೆ ತರಿಸಿ,ಅದರಲ್ಲಿ ಮಾತ್ರೆಯ ಪುಡಿಯನ್ನು ಸೇರಿಸಿ ಗುದ ದ್ವಾರದ ಮೂಲಕ Retention Enema ಕೊಡುತ್ತಿದ್ದರು. ಈ ಟ್ರೀಟ್ ಮೆಂಟಿಗೆ ನಾವೆಲ್ಲಾ 'ಮಜ್ಜಿಗೆ ಎನೀಮ'ಟ್ರೀಟ್ಮೆಂಟ್ ಎನ್ನುತ್ತಿದ್ದೆವು.ಇದು ನಮ್ಮ ಯುನಿಟ್ಟಿನಲ್ಲಿ ಮಾತ್ರ ಚಾಲ್ತಿಯಲ್ಲಿ ಇದ್ದದ್ದರಿಂದ ಬೇರೆ ಯುನಿಟ್ಟಿನವರಿಗೆ ಹಾಸ್ಯದ ವಿಷಯವಾಗಿತ್ತು. ನಾನು ಕೇಸ್ ಶೀಟಿನಲ್ಲಿ ಟ್ರೀಟ್ಮೆಂಟ್ ಬರೆದು ಅಲ್ಲಿದ್ದ ನರ್ಸ್ ಗೆ ಟ್ರೀಟ್ಮೆಂಟ್ ಶುರು ಮಾಡುವಂತೆ ಹೇಳಿ ಬೇರೆಯ ವಾರ್ಡಿಗೆ ಹೋದೆ.ಅರ್ಧ ಗಂಟೆಯಲ್ಲೇ ಗೌಡಜ್ಜನ ವಾರ್ಡಿನಿಂದ ನನಗೆ ಕರೆ ಬಂತು.ಗೌಡಜ್ಜ ನೋವಿನಿಂದ ಬೊಬ್ಬಿಡುತ್ತಿದ್ದ.ಅವನ ಬಾಯಿಂದ ಹಳ್ಳಿ ಭಾಷೆಯ ಬೈಗಳು ಪುಂಖಾನು ಪುಂಖವಾಗಿ ಹೊರ ಬರುತ್ತಿದ್ದವು. "ಸಾಯ್....ಕೊಲ್ತಾರಲೇ ಸೂಳೀ ಮಕ್ಳು!! ಇದ್ಯಾವ ಸೀಮೆ ಔಷದೀಲೇ.....ಯಪ್ಪಾ ....ಸಾಯ್ತೀನೋ , ಮುಕುಳ್ಯಾಗ ಉರಿಯಕ್ ಹತ್ತೈತಲೇ !!!"ಎಂದು ಕೂಗುತ್ತಿದ್ದ .ತನ್ನ ಮಗನನ್ನು "ನೀನ್ಯಾವ ಹುಚ್ಚು ಸೂಳೀ ಮಗನಲೇ ...........ಇಲ್ಲೀಗೆ ನನ್ ...ಎದಕ್ ಕರ್ಕಂಡ್ ಬಂದೀಯಲೇ .......ದಡ್..ಸೂಳೀ ಮಗನೆ!!!'ಎಂದು ಬಾಯಿಗೆ ಬಂದ ಹಾಗೆ ಬೈದು ಸಿಟ್ಟು ತೀರಿಸಿಕೊಳ್ಳುತ್ತಿದ್ದ. ವಾರ್ಡಿನ ಇತರೆ ರೋಗಿಗಳು ಎದ್ದು ಕೂತು ತಮಾಷೆ ನೋಡುತ್ತಿದ್ದರು. ನರ್ಸ್ ಗಳು ಏನು ಮಾಡಲೂ ತೋಚದೆ, ಮಲಯಾಳಿ ರೀತಿಯ ಕನ್ನಡದಲ್ಲಿ 'ಎಂತ ಆಯ್ತೆ ಮಾರಾಯ್ತಿ!?'ಎಂದು ಮಾತನಾಡುತ್ತ ,ಅತ್ತಿಂದಿತ್ತ ಸರ ಬರನೆ ಏನೂ ಮಾಡದೆ ಗಡಿಬಿಡಿಯಿಂದ ಓಡಾಡುತ್ತಿದ್ದರು. ಗೌಡಜ್ಜನ ಪರದಾಟ ನೋಡಿ ನನಗೆ ಎಲ್ಲೋ ಏನೋ ಎಡವಟ್ಟಾಗಿದೆ ಎನ್ನಿಸಿತು.ನರ್ಸ್ "ನಾನು ಎಂತದ್ದೂ ಮಾಡಿಲ್ಲಾ ಡಾಕ್ಟ್ರೆ.......ಪೇಶಂಟ್ ನ ಮಗ ...ಮಜ್ಜಿಗೆ ತಂದದ್ದು...ನಾನು ಅದರಲ್ಲಿ ಮಾತ್ರೆಯ ಪುಡಿಯನ್ನು ಮಿಕ್ಸ್ ಮಾಡಿ ಎನೀಮಾ ಕೊಟ್ಟದ್ದು !!......ಅಷ್ಟೇ!! "ಎಂದು ಮೊದಲೇ ಅಗಲವಾಗಿದ್ದ ಕಣ್ಣುಗಳನ್ನು ಇನ್ನಷ್ಟು ಅಗಲ ಮಾಡಿ ಭಯ ಭೀತಳಾಗಿ ನಿಂತಳು.ಗೌಡಜ್ಜನ ಮಗ "ಸಿಸ್ಟರ್ ಮಜ್ಜಿಗೀ ತಾ ಅಂದರ್ರೀ ........ನಾನು ಈ ತಂಬಗೀ ತುಂಬಾ ಆಸ್ಪತ್ರೀ ಎದುರಿನ ಹೋಟೆಲ್ಲಿನಾಗೆ,ಹತ್ತು ರೂಪಾಯಿ ಮಜ್ಜಿಗಿ ತಂದು ಕೊಟ್ಟೀನ್ರೀ !!!"ಎಂದ.'ಹೋಟೆಲಿನ ಮಜ್ಜಿಗಿ!!!........' ನನಗೆ ಜ್ಞಾನೋದಯವಾಯಿತು!! ಗೌಡಜ್ಜನ ಮಗ "ಇನ್ನೂ ಮಜ್ಜಿಗೀ ಉಳಿದೈತೆ ನೋಡ್ರೀ"ಎಂದು ತಂಬಿಗೆಯಲ್ಲಿ ಇನ್ನೂ ಸ್ವಲ್ಪ ಉಳಿದಿದ್ದ ಮಜ್ಜಿಗೆ ತೋರಿಸಿದ.ಅದು ಹೋಟೆಲ್ಲಿನಲ್ಲಿ ಸಿಗುವ 'ಕುಡಿಯುವ ಮಸಾಲಾ ಮಜ್ಜಿಗೆ!'ಅದರಲ್ಲಿ ಚೆನ್ನಾಗಿ ಅರೆದು ಹಾಕಿದ ಹಸೀ ಮೆಣಸಿನ ಕಾಯಿ,ಕೊತ್ತಂಬರಿ,ಕರಿಬೇವು ತೇಲುತ್ತಿತ್ತು!!! ಸಿಸ್ಟರ್, ಕುಡಿಯುವ ಮಜ್ಜಿಗೆಯನ್ನೇ ಸರಿಯಾಗಿ ನೋಡದೆ ಎನೀಮಾಗೆ ಉಪಯೋಗಿಸಿ ಬಿಟ್ಟಿದ್ದರು!! ಗೌಡಜ್ಜನ ಬೊಬ್ಬೆಗೆ ಖಾರದ ಮಜ್ಜಿಗೆಯೇ ಕಾರಣವೆಂದು ಗೊತ್ತಾಗಿತ್ತು.ಆದರೆ ಕಾಲ ಮಿಂಚಿತ್ತು!!ಖಾರದ ಮಜ್ಜಿಗೆ ಗೌಡಜ್ಜನ ಗುದ ದ್ವಾರದಲ್ಲಿ ತನ್ನ ಕೆಲಸ ಶುರು ಮಾಡಿತ್ತು!! ನಿಜಕ್ಕೂ ನನಗೆ ಏನು ಮಾಡಬೇಕೋ ಗೊತ್ತಾಗಲಿಲ್ಲ!!!!! ಪ್ರೊಫೆಸರ್ ಅವರನ್ನೇ ಕೇಳೋಣವೆಂದು ಕೊಂಡು ಓ.ಪಿ.ಡಿ ಕಡೆ ಓಡಿದೆ.
Wednesday, September 28, 2011
Thursday, September 22, 2011
"ಹೀಗೊಂದು ಅವಿಸ್ಮರಣೀಯ ಅನುಭವ!"
ಇಂದು ಮುಂಜಾನೆ ಸುಮಾರು ಹನ್ನೊಂದು ಗಂಟೆಗೆ ಆಸ್ಪತ್ರೆಯ O.P.D. ಯಲ್ಲಿ ರೋಗಿಗಳನ್ನು ಪರೀಕ್ಷೆ ಮಾಡುತ್ತಿದ್ದೆ.ಸುಮಾರು ಹದಿನೆಂಟು ವರ್ಷ ವಯಸ್ಸಿನ ಹುಡುಗನನ್ನು ಜ್ವರ ಮತ್ತು ಕೆಮ್ಮಿಗೆ ಚಿಕಿತ್ಸೆ ಕೊಡಿಸಲು ಅವನ ತಾಯಿ ಕರೆದುಕೊಂಡು ಬಂದಿದ್ದರು.ಆ ಹುಡುಗನ್ನು ನಮ್ಮ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ನೋಡಿದ್ದರಿಂದ ಅವನ ಓದಿನ ಬಗ್ಗೆ ವಿಚಾರಿಸಿದೆ.ಹುಡುಗ ಸಾಗರದಲ್ಲಿ ಕಾಲೇಜೊಂದರಲ್ಲಿ ಎರಡನೇ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ಡಿಪ್ಲೋಮಾ ಓದುತ್ತಿದ್ದ .ಅವನನ್ನು ಪರೀಕ್ಷೆ ಮಾಡಿ ಔಷದಿ ಬರೆದು ಕೊಟ್ಟೆ.ಹೋಗುವಾಗ ಅವನ ತಾಯಿ "ಸರ್.....,ಹದಿನೆಂಟು ವರ್ಷದ ಹಿಂದೆ ಚಕ್ರಾನಗರದಲ್ಲಿದ್ದಾಗ
ಈ ಹುಡುಗನ ಡೆಲಿವರಿ ಮಾಡಿದ್ದು ನೀವೇ ಸರ್.ನಿಮಗೆ ನೆನಪಿಲ್ಲಾ ಅಂತ ಕಾಣುತ್ತೆ.ಮಗು ಹುಟ್ಟಿದ ತಕ್ಷಣ ಉಸಿರಾಟವಿಲ್ಲದೆ ಮೈ ಎಲ್ಲಾ ನೀಲಿ ಬಣ್ಣಕ್ಕೆ ತಿರುಗಿತ್ತು.ನೀವು ತಕ್ಷಣ ಬಾಯಿಯಿಂದ ಮಗುವಿನ ಬಾಯಿಗೆ ಉಸಿರು ಕೊಟ್ಟು ಮಗುವನ್ನು ಉಳಿಸಿ ಕೊಟ್ಟಿರಿ.ನಿಮ್ಮ ಉಪಕಾರವನ್ನು ನಾವು ಯಾವತ್ತೂ ಮರೆಯೋದಿಲ್ಲಾ ಸರ್"ಎಂದು ಕಣ್ಣಿನಲ್ಲಿ ನೀರು ತಂದು ಕೊಂಡರು.ಹುಡುಗ ಬಗ್ಗಿ ನನ್ನ ಕಾಲು ಮುಟ್ಟಿ ನಮಸ್ಕಾರ ಮಾಡಿದ.ಇದ್ದಕ್ಕಿದ್ದಂತೆ ಅವನು ನನ್ನ ಕಾಲು ಮುಟ್ಟಿದ್ದರಿಂದ ನಾನು ಕೊಂಚ ಗಲಿಬಿಲಿ ಗೊಂಡೆ.ನನಗೆ ಏನು ಹೇಳಬೇಕೋ ತೋಚದೆ ಮಾತು ಹೊರಡಲಿಲ್ಲ.ಮನಸ್ಸಿನಲ್ಲಿ ಒಂದು ರೀತಿಯ ಧನ್ಯತಾ ಭಾವವಿತ್ತು.ಅವ್ಯಕ್ತ ಆನಂದದ ಒಂದು ವಿಶಿಷ್ಟ ಅವಿಸ್ಮರಣೀಯ ಅನುಭೂತಿ ಉಂಟಾಗಿತ್ತು!!
Wednesday, September 21, 2011
"ಜೀ ಹುಜೂರ್.....ಮೈ ಹಾಜಿರ್ ಹ್ಞೂ !!! "
ಬಡ ರೈತನೊಬ್ಬ ತನ್ನ ಹೊಲವನ್ನು ಉಳುತ್ತಿರುವಾಗ ಒಂದು ಮಾಯಾ ದೀಪ ಸಿಕ್ಕಿತು.ಅದನ್ನು ಮುಟ್ಟಿದ ತಕ್ಷಣವೇ ದೈತ್ಯಾಕಾರದ ಭೂತವೊಂದು ಎದುರಿಗೆ ಕೈ ಕಟ್ಟಿ ನಿಂತಿತು.ರೈತ ಹೆದರಿ ಕಂಗಾಲಾದ.ಭೂತ ಮಾತನಾಡ ತೊಡಗಿತು "ಹೆದರ ಬೇಡ,ಇನ್ನು ಮೇಲೆ ನೀನೇ ನನಗೆ ಯಜಮಾನ.ನೀನು ಯಾವ ಕೆಲಸ ಕೊಟ್ಟರೂ ಮಾಡುತ್ತೇನೆ.ಆದರೆ ನೀನು ನನಗೆ ಸದಾ ಕೆಲಸ ಕೊಡುತ್ತಿರಬೇಕು.ನನಗೆ ಕೆಲಸ ಇಲ್ಲದಿದ್ದರೆ ನಿನ್ನನ್ನು ತಿಂದು ಮುಗಿಸುತ್ತೇನೆ.ಹೇಳು ಏನು ಮಾಡಲಿ?"ಎಂದಿತು.ರೈತ ಬೇಡಿದ್ದನ್ನೆಲ್ಲ ಭೂತ ಕ್ಷಣಾರ್ಧದಲ್ಲಿ ನೆರವೆರಿಸುತ್ತಿತ್ತು.ಆಹಾರ ,ಅರಮನೆಯಂತಹ ಮನೆ,ಐಶ್ವರ್ಯ,ಆಳು ಕಾಳು ಎಲ್ಲವೂ ಸಿಕ್ಕಿದ ಮೇಲೆ ರೈತನಿಗೆ ಭೂತಕ್ಕೆ ಕೆಲಸ ಒದಗಿಸುವುದೇ ದೊಡ್ಡ ಕೆಲಸವಾಯಿತು!ಎಲ್ಲವನ್ನೂ ಕ್ಷಣಾರ್ಧದಲ್ಲಿ ಮುಗಿಸಿ "ಕೆಲಸ ಕೊಡು ,ಇಲ್ಲದಿದ್ದರೆ ನಿನ್ನನ್ನು ಮುಗಿಸುತ್ತೇನೆ"ಎಂದು ದುಂಬಾಲು ಬೀಳುತ್ತಿತ್ತು.ರೈತನಿಗೆ ಜೀವ ಭಯ ಕಾಡತೊಡಗಿತು.The servant had become a master!ಈ ಭೂತದ ಕಾಟದಿಂದ ಹೇಗಾದರೂ ತಪ್ಪಿಸಿಕೊಳ್ಳಬೇಕು ಎಂದುಕೊಂಡು ಊರಿನ ಬುದ್ಧಿವಂತನೊಬ್ಬನ ಸಲಹೆ ಕೇಳಿದ.ಸೂಕ್ತ ಸಲಹೆ ಸಿಕ್ಕಿತು.ಭೂತ ಅವನನ್ನು ಅಟ್ಟಿಸಿಕೊಂಡು ಬಂದು"ಕೆಲಸ ಕೊಡು"ಎಂದಿತು.ಅದಕ್ಕೆ ತನ್ನ ಮನೆಯ ಮುಂದೆ ಉದ್ದನೆಯ ಕೋಲೊಂದನ್ನು ನೆಡುವಂತೆ ಹೇಳಿದ.ಭೂತ ಕ್ಷಣಾರ್ಧದಲ್ಲಿ ಕೋಲು ನೆಟ್ಟಿತು."ಕೋಲು ನೆಟ್ಟು ಆಯಿತು.ಮುಂದೆ?"ಎಂದಿತು ಭೂತ."ನಾನು ಮುಂದಿನ ಕೆಲಸ ಹೇಳುವ ತನಕ ಈ ಕೋಲನ್ನು ಹತ್ತಿ ಇಳಿಯುತ್ತಿರು"ಎಂದ ರೈತ.ಭೂತ ತನ್ನ ಕೆಲಸ ಶುರುವಿಟ್ಟು ಕೊಂಡಿತು.ರೈತ ಭೂತದ ಕಾಟ ತಪ್ಪಿದ್ದಕ್ಕೆ ನೆಮ್ಮದಿಯ ಉಸಿರು ಬಿಟ್ಟ.
ಸ್ನೇಹಿತರೇ,ಈ ಕಥೆಯಲ್ಲಿ ನಮಗೊಂದು ಅದ್ಭುತ ಪಾಠವಿದೆ.ನಮ್ಮೆಲ್ಲರ ಮನಸ್ಸೂ ಈ ಭೂತದಂತೆ.ಸದಾ ಕಾಲ ಏನನ್ನಾದರೂ ಯೋಚಿಸುತ್ತಲೇ ಇರುತ್ತದೆ.ಕೆಲವೊಮ್ಮೆ ಆಲೋಚನೆಗಳಿಂದ ತಲೆ ಚಿಟ್ಟು ಹಿಡಿದರೂ,ಅವುಗಳಿಂದ ತಪ್ಪಿಸಿಕೊಳ್ಳಲಾಗದೇ ಚಡಪಡಿಸುತ್ತೇವೆ!Again here the servant becomes a master! a bad master!! ಈ ಮನಸ್ಸೆಂಬ ಭೂತಕ್ಕೆ ಭಗವನ್ನಾಮ ಸ್ಮರಣೆ ಎನ್ನುವ 'ಕೋಲನ್ನು ಹತ್ತುವ' ಕೆಲಸ ಕೊಟ್ಟರೇ ನಮಗೆ ಅದರಿಂದ ಮುಕ್ತಿ!! ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.
Saturday, September 17, 2011
"ಆತ್ಮನಿಗೆಆತ್ಮನೇಮಿತ್ರ ಆತ್ಮನೇ ಶತ್ರು"
"ಆತ್ಮನಿಗೆ ಆತ್ಮನೇ ಮಿತ್ರ,ಆತ್ಮನಿಗೆ ಆತ್ಮನೇಶತ್ರು!ಆತ್ಮನಿಂದಲೇ ಆತ್ಮನ ಉದ್ಧಾರ!ಆತ್ಮನಿಂದಲೇ ಆತ್ಮನ ಅವಸಾನ!"ಹೀಗೆನ್ನುತ್ತದೆ ಭಗವದ್ಗೀತೆ(೬ ನೇ ಅಧ್ಯಾಯ ೫ ನೇ ಶ್ಲೋಕ).
ಇದೇ ಭಾವ ಕೆ.ಸಿ.ಶಿವಪ್ಪ ನವರ 'ಮುದ್ದುರಾಮನ ಮನಸು'ಪುಸ್ತಕದ ಈ ಕೆಳಗಿನ ಚೌಪದಿಯಲ್ಲಿದೆ:
ಯಾರು ಮುನಿದರೆ ಏನು?ಯಾರು ಒಲಿದರೆ ಏನು?
ನಿನ್ನರಿವು ನಿನಗೆ ಮುದ ತರದಿರುವ ತನಕ ?
ಸಂಗ ಸುಖ ಶಾಶ್ವತವೆ?ಕಡಲ ಸೇರದೆ ಹೊನಲು?
ನೀ ಅತ್ಮಸಖನಾಗು-ಮುದ್ದು ರಾಮ. (333)
ನಾವು ಎಲ್ಲಿಯವರೆಗೆ ನಮ್ಮ ಸಂತೋಷಕ್ಕಾಗಿ ಹೊರಗಿನ ಪ್ರಪಂಚದ ಆಗು ಹೋಗು ಗಳ ಮೇಲೆ,ಇತರ ವ್ಯಕ್ತಿಗಳ ಮೇಲೆ ಅವಲಂಬಿತರಾಗಿರುತ್ತೆವೋ ಅಲ್ಲಿಯವರೆಗೆ ನಮಗೆ ದುಃಖ ತಪ್ಪಿದ್ದಲ್ಲ ಎನ್ನುತ್ತದೆ ಗೀತೆ.ಆತ್ಮದ ಅರಿವನ್ನು ಧ್ಯಾನದಿಂದ ಪಡೆದು 'ಆತ್ಮ ಸಖ'ನಾದರೆ ನಮಗೂ ಆನಂದ ,ನಮ್ಮ ಸುತ್ತಲಿನವರಿಗೂ ಆನಂದ!ಏನಂತೀರಿ?ನಿಮ್ಮ ಅನಿಸಿಕೆ ತಿಳಿಸಿ.
Thursday, September 15, 2011
"ಟ್ರೀಟ್ ಮೆಂಟ್ ಚೆನ್ನಾಗಿದೆ "
೧)ಮುಲ್ಲಾ ನಸೀರುದ್ದೀನನಿಗೆ ಎಲ್ಲಾ ವಿಷಯಕ್ಕೂ ವಿಪರೀತ ಭಯವಾಗುತ್ತಿತ್ತು .ಅವನ ಸ್ನೇಹಿತ ಅವನನ್ನು ಮನೋವೈದ್ಯರೊಬ್ಬರ ಬಳಿಗೆ ಕಳಿಸಿದ.ಕೆಲ ತಿಂಗಳುಗಳ ಬಳಿಕ ಸ್ನೇಹಿತ ಮುಲ್ಲಾನನ್ನು ಭೇಟಿಯಾದಾಗ ಕೇಳಿದ "ಈಗ ಹೇಗಿದ್ದೀಯ ಮುಲ್ಲಾ?".ಅದಕ್ಕೆ ಮುಲ್ಲಾ ಹೇಳಿದ "ಮೊದಲೆಲ್ಲಾ ಟೆಲಿಫೋನ್ ರಿಂಗ್ ಆದರೆ ಟೆಲಿಫೋನ್ ಎತ್ತಲು ಹೆದರುತ್ತಿದ್ದೆ "ಎಂದ.ಸ್ನೇಹಿತ ಕೇಳಿದ"ಈಗ?".ಅದಕ್ಕೆಮುಲ್ಲಾ ಉತ್ತರಿಸಿದ "ಈಗ ತುಂಬಾ improve ಆಗಿದ್ದೀನಿ.ಟೆಲಿ ಫೋನ್ ರಿಂಗ್ ಆಗದಿದ್ದರೂ ಅದರಲ್ಲಿ ಮಾತನಾಡುತ್ತೇನೆ ! ". .........ಚಿಕಿತ್ಸೆಯ ಫಲ !
೨)ನಮ್ಮ ದಿನ ನಿತ್ಯದ ವ್ಯವಹಾರಗಳು ಹೇಗಿರುತ್ತವೆ ನೋಡಿ;
ಕಮಲಮ್ಮ(ಸಿಟ್ಟಿನಿಂದ );"ಏನ್ರೀ ರಾಧಮ್ಮ .......!ನನಗೆ ಶಾಂತಮ್ಮ ಹೇಳಿದರು.....,ನಾನು ಅವರಿಗೆ ಹೇಳಬೇಡಿ ಎಂದು ನಿಮಗೆ ಹೇಳಿದ ವಿಷಯವನ್ನು ನೀವು ಅವರಿಗೆ ಹೇಳಿ ಬಿಟ್ಟಿರಂತೆ!ಹೌದೇ!!"
ರಾಧಮ್ಮ ;"ಛೆ !ಛೆ!ಎಂತಹ ಕೆಟ್ಟ ಹೆಂಗಸೂ ರೀ ಆ ಶಾಂತಮ್ಮ!ನಾನು ನೀವು ಹೇಳಿದಿರಿ ಅಂತ ಅವಳಿಗೆ ಹೇಳಿದ ವಿಷಯವನ್ನುನಿಮಗೆ ಹೇಳಬೇಡಿ ಎಂದು ಹೇಳಿದ್ದೆ!"
ಕಮಲಮ್ಮ;"ಆಯಿತು ಬಿಡಿ....,ಅವಳು ಈ ವಿಷಯ ನನಗೆ ಹೇಳಿದಳು ಅಂತನಾನು ನಿಮಗೆ ಹೇಳಿದೆ ಅಂತ ಅವಳಿಗೆ ಹೇಳಬೇಡಿ....ಆಯ್ತಾ!!"............(.ದೇವರೇ ಗತಿ!!!)
(ಇದು ಓಶೋ ರವರ yoga-the science of living ಪುಸ್ತಕದಿಂದ ಆಯ್ದುಕೊಂಡಿದ್ದು .ಅಭಿಪ್ರಾಯ ತಿಳಿಸಿ.)
Wednesday, September 14, 2011
"ನಿಜವಾದ ಪ್ರೀತಿ ಬಂಧಿಸುವುದಿಲ್ಲ !!"
ನೆನ್ನೆಯ ಪ್ರಜಾವಾಣಿಯಲ್ಲಿ ಗುರುರಾಜ್ ಕರ್ಜಗಿಯವರ 'ಕರುಣಾಳು ಬಾ ಬೆಳಕೆ'ಓದಿದೆ .ಅದರಲ್ಲಿದ್ದ ವಿಚಾರಗಳು ನಮ್ಮೆಲ್ಲರ ಕಣ್ಣು ತೆರೆಸುವಂತಹದ್ದು.ನಮ್ಮ ಅತಿಯಾದ ಪ್ರೀತಿ ನಮ್ಮ ಪ್ರೀತಿ ಪಾತ್ರರನ್ನು ಕಟ್ಟಿ ಹಾಕುತ್ತಿದೆಯೇ?ನಾವೆಲ್ಲಾ ಯೋಚಿಸ ಬೇಕಾದಂತಹ ವಿಷಯ.ಲೇಖಕರು ಸಣ್ಣವರಿದ್ದಾಗ ಅವರ ಮನೆಯಲ್ಲಿ ಸಾಕಿದ ನಾಯಿ, ಬೆಳ್ಳಗಿರುವ ಬೆಣ್ಣೆಯ ಮುದ್ದೆಯಂತಿದ್ದ ಮರಿಯೊಂದನ್ನು ಹಾಕಿತ್ತು.ಇವರಿಗೆ ಅದನ್ನು ಕಂಡರೆ ಎಲ್ಲಿಲ್ಲದ ಪ್ರೀತಿ.ಸದಾಕಾಲ ಅದನ್ನು ಎದೆಗೆ ಅವುಚಿಕೊಂಡೇ ಓಡಾಡುತ್ತಿದ್ದರು .ಆ ನಾಯಿಮರಿಗೋ ಹಿಂಸೆಯಾಗಿ ಕುಂಯ್ ಗುಡುತ್ತಿತ್ತಂತೆ.ಅವರಜ್ಜ ಅವರಿಗೆ'ನೀನು ನಿಜವಾಗಿ ನಾಯಿ ಮರಿಯನ್ನು ಪ್ರೀತಿಸುತ್ತಿದ್ದರೆ,ಅದನ್ನು ಕೆಳಗೆ ಬಿಡು.ಅದು ಸುಖವಾಗಿ ಆಟವಾಡಿಕೊಂಡು ಇರುವುದನ್ನು ನೋಡಿ ಸಂತಸಪಡು' ಎಂದರು.ಅಜ್ಜನ ಮಾತು ಕೇಳಿ,ಅದನ್ನು ಕೆಳಗೆ ಬಿಟ್ಟು ಅದು ಅಲ್ಲಿ ಇಲ್ಲಿ ಬಾಲ ಅಲ್ಲಾಡಿಸಿಕೊಂಡು ಓಡಾಡುವುದನ್ನು ನೋಡಿ ಖುಷಿ ಪಟ್ಟರಂತೆ.ಈ ಘಟನೆ ಯಿಂದ ನಾನು ದೊಡ್ಡದೊಂದು ಪಾಠ ಕಲಿತೆ ಎನ್ನುತ್ತಾರೆ ಲೇಖಕರು.ನೀವು ನಿಮ್ಮ ಹೆಂಡತಿಯನ್ನು ತುಂಬಾ ಪ್ರೀತಿಸುತ್ತೀರಾ? ಹಾಗಾದರೆ ಆಕೆ ನಿಮ್ಮ ಆಜ್ಞೆಯಂತೆಯೇ ನಡೆಯ ಬೇಕೆಂಬ ಹಠ ಬಿಡಿ.ಆಕೆಯ ಮೇಲೆ ನಿಮ್ಮ ಅಧಿಕಾರ ಚಲಾಯಿಸಬೇಡಿ.ನಿಮ್ಮ ಗಂಡನ ಬಗ್ಗೆ ನಿಮಗೆ ಪ್ರೀತಿಯೇ?ಹಾಗಾದರೆ ಅವರ ಬಗ್ಗೆ ಸಂಪೂರ್ಣ ನಂಬಿಕೆಯಿರಲಿ.ಅವರ ಎಲ್ಲಾ ಸಮಯವನ್ನೂ ನನಗೆ ಮೀಸಲಿಡಬೇಕೆಂಬ ಹಠ ಬೇಡ.
ಕೆಲವರು ತಮ್ಮ ಮಕ್ಕಳನ್ನು ಎಷ್ಟು ಪ್ರೀತಿಸುತ್ತಾರೆಂದರೆ ಏನಾದೀತೋ ಎಂಬ ಭಯದಿಂದ ಅವರಿಗೆ ಏನನ್ನೂ ಸ್ವತಂತ್ರವಾಗಿ ಮಾಡಲು ಬಿಡುವುದಿಲ್ಲ.ಅವರ ಮೇಲಿನ ನಮ್ಮ ಅತಿಯಾದ ವ್ಯಾಮೋಹ ಅವರನ್ನು ಅತಂತ್ರ ರಾಗಿಸುತ್ತದೆ.ಮಕ್ಕಳ ರೆಕ್ಕೆ ಬಲಿಸುವುದು ಏಕೆ?ಅವರು ಹಾರಲಿ ಎಂದು ತಾನೇ?ರೆಕ್ಕೆ ಬಲಿಸಿ ಅವರನ್ನು ಹಾರಲು ಬಿಡದಿದ್ದರೆ ಹೇಗೆ? ನಿಜವಾದ ಪ್ರೀತಿ ಬಂಧಿಸುವುದಿಲ್ಲ.ಮುಕ್ತಗೊಳಿಸುತ್ತದೆ.ಭಗವಂತ ನಮ್ಮನ್ನು ಅತಿಯಾಗಿ ಪ್ರೀತಿಸುವುದರಿಂದಲೇ ನಮ್ಮನ್ನು ಸ್ವತಂತ್ರವಾಗಿ ಬಿಟ್ಟಿದ್ದಾನೆ!ಅಲ್ಲವೇ?
ಕೆಲವರು ತಮ್ಮ ಮಕ್ಕಳನ್ನು ಎಷ್ಟು ಪ್ರೀತಿಸುತ್ತಾರೆಂದರೆ ಏನಾದೀತೋ ಎಂಬ ಭಯದಿಂದ ಅವರಿಗೆ ಏನನ್ನೂ ಸ್ವತಂತ್ರವಾಗಿ ಮಾಡಲು ಬಿಡುವುದಿಲ್ಲ.ಅವರ ಮೇಲಿನ ನಮ್ಮ ಅತಿಯಾದ ವ್ಯಾಮೋಹ ಅವರನ್ನು ಅತಂತ್ರ ರಾಗಿಸುತ್ತದೆ.ಮಕ್ಕಳ ರೆಕ್ಕೆ ಬಲಿಸುವುದು ಏಕೆ?ಅವರು ಹಾರಲಿ ಎಂದು ತಾನೇ?ರೆಕ್ಕೆ ಬಲಿಸಿ ಅವರನ್ನು ಹಾರಲು ಬಿಡದಿದ್ದರೆ ಹೇಗೆ? ನಿಜವಾದ ಪ್ರೀತಿ ಬಂಧಿಸುವುದಿಲ್ಲ.ಮುಕ್ತಗೊಳಿಸುತ್ತದೆ.ಭಗವಂತ ನಮ್ಮನ್ನು ಅತಿಯಾಗಿ ಪ್ರೀತಿಸುವುದರಿಂದಲೇ ನಮ್ಮನ್ನು ಸ್ವತಂತ್ರವಾಗಿ ಬಿಟ್ಟಿದ್ದಾನೆ!ಅಲ್ಲವೇ?
(ಇದು ಲೇಖಕರ ಅಭಿಪ್ರಾಯ.ನಿಮ್ಮ ಅಭಿಮತ ತಿಳಿದುಕೊಳ್ಳುವ ಕುತೂಹಲ ನನಗೆ.ನಿಮ್ಮ ಪ್ರತಿಕ್ರಿಯೆ ತಿಳಿಸಿ.)
Sunday, September 11, 2011
"ಮನುಷ್ಯರ .......ಮಾತು"
ಮಾತಿನ ಬಗ್ಗೆ ಎರಡು ಮಾತು.ಮಾತು ಮನುಷ್ಯನಿಗೆ ವರವೂ ಹೌದು,ಶಾಪವೂ ಹೌದು. ಹೇಳುವಂತಹ ಮಾತುಗಳನ್ನು ಹೇಳಬಹುದಾದಲ್ಲಿ ಹೇಳಿದರೆ ಅರ್ಥ.ಹೇಳಬಾರದಲ್ಲಿ ಹೇಳಿದರೆ ಅನರ್ಥ! ಹೇಳಬಾರದನ್ನು ಹೇಳಿ,ಎಡವಟ್ಟು ಮಾಡಿಕೊಂಡು 'ಅಯ್ಯೋ ನಾನು ಹೀಗೆ ಹೇಳಬಾರದಿತ್ತು ,ಹಾಗೆ ಹೇಳಬೇಕಾಗಿತ್ತು' ಎಂದು ಪರದಾಡುವರೇ ಹೆಚ್ಚು.ಕೆಲವರ ಮಾತು ಕೇಳುತ್ತಲೇ ಇರಬೇಕುಎನಿಸುತ್ತದೆ.ಕೆಲವರು ಮಾತು ಶುರು ಮಾಡಿದರೆ ಎದ್ದು ಓಡಿ ಹೊಗಬೇಕಿನಿಸುತ್ತದೆ.ಮಾತನಾಡುವುದೂ ಒಂದು ಕಲೆ.ಈ ಕಲೆಯನ್ನು ಸಿದ್ಧಿಸಿ ಕೊಂಡವರಲ್ಲಿ ನಮ್ಮ ಹಿರಿಯ ಕವಿ ಜಿ.ಪಿ.ರಾಜ ರತ್ನಂಕೂಡಒಬ್ಬರು. ಅವರ'ರತ್ನನಪದಗಳು'
ಪುಸ್ತಕದಲ್ಲಿ ಮಾತಿನ ಬಗ್ಗೆಯೇ ಒಂದುಕವನವಿದೆ.ಕವನದ ಹೆಸರು'ಮನ್ಸರ್ ಮಾತು'.ಕವನ ಓದಿ ನಿಮ್ಮ ಅಭಿಪ್ರಾಯ ತಿಳಿಸಿ;
'ಮನ್ಸರ್ ಮಾತು '
ಹೇಳಾದ್ ಏನ್ರ,ಹೇಳಾದ್ ಇದ್ರೆ
ಜಟ್ ಪಟ್ನ ಹೇಳಿ ಮುಗೀಸು .
ಯಾವ್ದಕ್ ಇಕ್ಬೇಕ್ ಗೊತ್ತ್ ಮಾಡ್ಕೊಂಡಿ
ಆಮೇಕ್ ದೊಣ್ಣೆ ಬೀಸು.
ಸುತ್ಕೊಂಡ್ ಸುತ್ಕೊಂಡ್ ಮಾತಾಡ್ತಿದ್ರೆ
ಕೇಳಾಕ್ ಬಲ್ ಪಜೀತಿ .
ಬೈರ್ಗೆ ಕೊರದಂಗ್ ಕೊರಿತಾನಿದ್ರೆ
ಯಾವ್ ದೇವರ್ಗೆ ಪ್ರೀತಿ ?
ಕುಂಬಾರ್ ಗೌಡನ್ ಚಕ್ರಕ್ಕೂನೆ
ಗಾಳ ನೋಡಿದ್ ಮೀನ್ಗೂ
ಸುತ್ಕೊಂಡ್ ಸುತ್ಕೊಂಡ್ ಹೋಗೋದ್ ಸಹಜ
ಅದ್ಯಾಕ್ ನನಗೂ ನಿನಗೂ ?
ಕೇಳೋರ್ ಇನ್ನಾ ಕೇಳಬೇಕಂತಾ
ಕುಂತ್ಕಂಡ್ ಇದ್ದಂಗೇನೇ
ಹೇಳೋದ್ನ ಎಷ್ಟೋ ಅಷ್ಟರಲ್ ಹೇಳಿ
ಮನೇಗೆ ಹೋಗೋನ್ಗೆ ಮೇನೆ!
ಮಾತ್ ಇರಬೇಕು ಮಿಂಚ್ ಹೊಳದಂಗೆ !
ಕೇಳ್ದೋರ್ 'ಹಾಂ 'ಅನಬೇಕು !
ಸೋನೆ ಹಿಡದ್ರೆ ಉಗದ್ ಅಂದಾರು
'ಮುಚ್ಕೊಂಡ್ ಹೋಗೋ ಸಾಕು'!
ಮನ್ಸನ್ ಮಾತು ಎಂಗಿರಬೇಕು ?
ಕವಣೆ ಗುರಿ ಇದ್ದಂಗೆ !
ಕೇಳ್ದೋರ್ ಮನ್ಸಿಗೆ ಲಗತ್ ಆಗ್ಬೇಕು
ಮಕ್ಕಳ ಮುತ್ತಿದ್ದಂಗೆ !
Saturday, September 10, 2011
"ಕವಿತೆಯ ಕಷ್ಟ"
ಕವಿ ಜಿ.ಎಸ್.ಶಿವರುದ್ರಪ್ಪನವರ 'ಅಗ್ನಿ ಪರ್ವ'ಕವನ ಸಂಕಲನದಲ್ಲಿ 'ಕವಿತೆಯ ಕಷ್ಟ' ಎನ್ನುವ ಕವಿತೆ ಇಷ್ಟವಾಯಿತು.ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.ಓದಿ ನಿಮ್ಮ ಅನಿಸಿಕೆ ತಿಳಿಸಿ;
ಕೆಲವು ಕವಿತೆಗಳು
ಕರೆದ ಕೂಡಲೇ ಬಂದು ಬಿಡುತ್ತವೆ
ಚಿಕ್ಕ ಮಕ್ಕಳ ಹಾಗೆ !
ಇನ್ನು ಕೆಲವಂತೂ ಹೊಸಿಲು ದಾಟಿ ಹೊರಕ್ಕೆ
ಬರುವುದೇ ಇಲ್ಲ -ಹೊಸ ಮದುವೆ ಹೆಣ್ಣಿನ ಹಾಗೆ,
ಅವಕ್ಕೆ ಮೈ ತುಂಬ ನಾಚಿಕೆ.
ಕೆಲವು ಕವಿತೆಗಳು ಮುಂಜಾನೆ ಗಿಡದ ಮೈತುಂಬ
ಸಮೃದ್ಧವಾಗಿ ಅರಳುವ ಹೂವು.
ಇನ್ನು ಕೆಲವು ಎಷ್ಟು ಪುಂಗಿಯೂದಿದರೂ
ಹುತ್ತ ಬಿಟ್ಟು ಹೊರಕ್ಕೆ ಬಾರದ ಹಾವು.
ಮತ್ತೆ ಕೆಲವು ಮಬ್ಬು ಕತ್ತಲಲ್ಲಿ ಮಲಗಿರುವ
ಆಕಾರವಿರದ ನೋವು.
ಕೆಲವು ಕವಿತೆಗಳು ಕಾರ್ತೀಕದಲ್ಲಿ ಮನೆ ತುಂಬ
ಕಿಲ ಕಿಲ ನಗುವ ಹಣತೆಗಳು.
ಕೆಲವಂತೂ ಯಾವ ದುರ್ಬೀನಿಗೂ
ಕಾಣದಂತೆ ಅಡಗಿರುವ ಅಪರೂಪದ ನಕ್ಷತ್ರಗಳು.
ಕವಿತೆಯ ಕಷ್ಟ -ಸುಲಭದ ಮಾತಲ್ಲ
ಹೀಗೇ ಎಂದು ಹೇಳಲಾಗುವುದಿಲ್ಲ
ಒಂದೊಂದು ಸಲ ಸಲೀಸಾಗಿ ನೆಲ ಬಿಟ್ಟು
ಏರಿದ ವಿಮಾನ
ಅಷ್ಟೇ ಸುಗಮವಾಗಿ ನಿಲ್ದಾಣಕ್ಕೆ ಇಳಿಯುವುದು
ತೀರಾ ಅನುಮಾನ!
Friday, September 9, 2011
"ಜಗದ ಜಂಗೀ ಕುಸ್ತಿ..........!! "
ಯಾವ ಕರ್ಮದ ಫಲ
ನೂಕಿದ್ದಕ್ಕೋ !
ಯಾವ ಅನುಬಂಧದ ಬಲ
ಸೆಳೆದದ್ದಕ್ಕೋ!
ಜಗವೆಂಬ ಅಖಾಡಕ್ಕೆ
ಬಂದು ಬಿದ್ದ
ಜಟ್ಟಿ ನಾನು !
ನನ್ನಾಣೆ ನಾನೇ
ಬಯಸಿ ಬರಲಿಲ್ಲ!
ಕಣ್ಣು ತೆರೆಯುವ ಮೊದಲೇ
ಕಣದಲಿದ್ದೆ !
ಉಸಿರು ಬಿಡುವ ಮೊದಲೇ
ಸೆಣಸುತಲಿದ್ದೆ!
ಯಾರು ಯಾರೋ ಹಾಕಿದ
ಪಟ್ಟು ಗಳನ್ನೂ ....,
ವಿಧಿ ಹಾಕಿದ
'ಪಾತಾಳ ಗರಡಿಯನ್ನೂ'
ಬಿಡಿಸಿಕೊಳ್ಳಲು ಹೆಣಗಿ
ಅಖಾಡದ ಮಣ್ಣು ಮುಕ್ಕಿದ್ದೇನೆ!
ಸೋಲೋ.....ಗೆಲುವೋ......,
ಜಗದ ಈ ಜಂಗೀ ಕುಸ್ತಿ
ಮುಗಿಯುವುದನ್ನೇ ಕಾಯುತ್ತಾ
ಸೆಣಸುವುದೊಂದೇ ಮಂತ್ರವಾಗಿ !
ಸೆಣಸುತ್ತಲೇ .......ಇದ್ದೇನೆ !
ಇನ್ನೂ............!!
Tuesday, September 6, 2011
"ನಿನ್ನ ಅದಮ್ಯ ಚೈತನ್ಯಕ್ಕೆ ನನ್ನದೊಂದು ಸಲಾಂ "
ಗೋಡೆಯ ಬಿರುಕಿನಲ್ಲಿ
ಅಲ್ಲೇ ಇರುಕಿನಲ್ಲಿ
ಗರಿಗೆದರಿ ಚಿಗುರೊಡೆದು
ನಳ ನಳಿಸಿ...........,
ನಗುವ,ನಲಿವ,
ಚಿ..ಗು..ರು..........!
ನನಗೆ ನೀನೇ ಗುರು......!
ಚಿಗುರೊಡೆವ ನಿನ್ನ ಛಲಕ್ಕೆ
ನಮೋನ್ನಮಃ.....!
ಮಣ್ಣಿನ ಹದಬೇಕೆಂದು
ಗೊಣಗಲಿಲ್ಲ!
ಪಾತಿ ಮಾಡಿ,ಬದು ತೋಡಿ
ನೀರುಣಿಸಿ
ಆರೈಕೆ ಮಾಡೆಂದು
ಗೋಗರೆಯಲಿಲ್ಲ!
ನಿನ್ನನ್ಯಾರೂ .......
ಬಿತ್ತಲಿಲ್ಲ,ಬೆಳೆಯಲಿಲ್ಲ!
ನಿನ್ನನ್ಯಾರೂ .......
ಬಿತ್ತಲಿಲ್ಲ,ಬೆಳೆಯಲಿಲ್ಲ!
ಸುಖಾ ಸುಮ್ಮನೆ
ಯಾವುದೋ ಗಾಳಿಯಲಿ
ಬೀಜವಾಗಿ ತೂರಿಬಂದು
ಬೀಜವಾಗಿ ತೂರಿಬಂದು
ಗೋಡೆಯಲಿ ಸಿಲುಕಿ
ಮಿಡುಕದೆ
ಸಿಡುಕದೆ
ನಕ್ಕು ಹೊರ ಬಂದೆ
ಮೈ ಕೊಡವಿ!
ನಿನ್ನ ಅದಮ್ಯ ಚೈತನ್ಯಕ್ಕೆ
ಜೀವನೋತ್ಸಾಹಕ್ಕೆ
ಜೀವನೋತ್ಸಾಹಕ್ಕೆ
ಇದೋ ..............,
ನನ್ನದೊಂದು ಸಲಾಂ!
Sunday, September 4, 2011
"ಇಲ್ಲೊಂದು ಅದ್ಭುತ ಪದ್ಯ!!......ಮಿಸ್ಸಾಗ್ಲಿಲ್ಲ ಸಧ್ಯ!!"
ನವೋದಯ ಕನ್ನಡ ಸಾಹಿತ್ಯದ ಸೊಬಗನ್ನು ಹೆಚ್ಚಿಸಿದ ಕನ್ನಡ ಲೇಖಕರಲ್ಲಿ ,ರಾಘವ ಎನ್ನುವ ಕಾವ್ಯ ನಾಮದಿಂದ ಬರೆಯುತ್ತಿದ್ದ ಪ್ರೊ.ಎಂ.ವಿ.ಸೀತಾ ರಾಮಯ್ಯ ನವರೂ ಒಬ್ಬರು.ಅವರ ನೂರ ಒಂದನೇ ಜನ್ಮದಿನದ ಅಂಗವಾಗಿ
ಇಂದಿನ 'ಕನ್ನಡ ಪ್ರಭ'ದ ಸಾಪ್ತಾಹಿಕ ಪುರವಣಿಯಲ್ಲಿ 'ನೀವು ಕಂಡರಿಯದ ಎಂ.ವಿ.ಸೀ.'ಎನ್ನುವ ಲೇಖನದಲ್ಲಿ ಕೊಟ್ಟಿರುವ ಅವರ ಕವನ ಒಂದನ್ನು ನೋಡಿ ದಂಗಾಗಿ ಹೋದೆ!ಅದರ ಸೊಗಡನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿ ಬ್ಲಾಗಿನಲ್ಲಿ ಹಾಕುತ್ತಿದ್ದೇನೆ.ಕವನದ ಹೆಸರು 'ಕಲ್ಲಡಿಯ ಹುಲ್ಲು ಗರಿಕೆ'.ಓದಿ ತಿಳಿಸಿ ನಿಮ್ಮ ಅನಿಸಿಕೆ :
"ಕಲ್ಲಡಿಯ....ಹುಲ್ಲುಗರಿಕೆ"
ಕಲ್ಲಡಿಯ ಹುಲ್ಲು ಗರಿಕೆ
ಅದಕಿಲ್ಲ ಹೆದರಿಕೆ
ಮೇಲೆ ಕುಳಿತ ಚಪ್ಪಡಿಯ
ಭಾರವಪ್ಪಳಿಸುತಿದೆಯೆಂದು.
ಕತ್ತಲೆಯ ಗೋರಿ ಗವಿ ಸಂದುಬಾಯಿಂದ
ಹೊರ ಹಾಕಿಹುದು ತಲೆಯ -ತನ್ನ ಹೊಸಬೆಳೆಯ.
ಎಳೆಯ ಎಲೆಯ ತಲೆಯ.
ಏನದರ ಧೈರ್ಯ ಶೌರ್ಯ!
ಅದ ಮೆಚ್ಚಿ
ಬದುಕೆಂದು ಹರಸಿದನು ಸೂರ್ಯ.
ತುಂಬಿದನು ಆಯುಷ್ಯ ಅಪ್ಪುಗೆಯ ಬಿಸುಪಿತ್ತು.
ಗಾಳಿ,ಬಾಳಿನ ಗೆಳೆಯ
ಬಂದು ತಡವಿದನು ಮೈಯ
ಹೊಸ ಉಸಿರನಿತ್ತು.
ಮೈಯೊಲೆದು ತಲೆ ಕೊಡಹಿ
ನಿರ್ಭಯತೆಯಲಿ ನಲಿಯುತಿದೆ
ಹುಲ್ಲು ಗರಿಕೆ.
ಅದಕಿಲ್ಲ ಹೆದರಿಕೆ.
ಅಹುದು ,
ತೇನವಿನಾ ತೃಣಮಪಿ ನ ಚಲತಿ.
ಆದರೆ .............,
ಬಿದ್ದಾಗಲೆದ್ದು ನಿಲ್ಲುವ ಯತ್ನವಿಲ್ಲದಿರಲು
ಅವನೂ ಹಿಡಿಯ ಮೇಲೆತ್ತಿ.
(ಕವಿತೆಯ ಕೆಳಗೆ ಕವಿ ಪು.ತಿ.ನ. ಬರೆದ ಅಡಿ ಟಿಪ್ಪಣಿ ಹೀಗಿದೆ;'ಕಲ್ಲಡಿಯ ಗರಿಕೆ'ಯನ್ನು ಈಗತಾನೇ ಓದಿ ಸಂತಸಗೊಂಡೆ.ಒಳ್ಳೇ ಚೆಂದದ ಅನ್ಯೋಕ್ತಿ ಇದು.what a fine poem!congratulations! )
Subscribe to:
Posts (Atom)