Wednesday, October 12, 2011

"ಕಹಿ ನೆನಪುಗಳಿಗೆ ಸಾವಿಲ್ಲ"

ಕನಸಿನಲ್ಲೂ ಬೆಚ್ಚಿ 
ಅಳುವಂತೆ ಮಾಡುವ 
ನಿಮ್ಮ ನೆನಪು ......,
ಆಳದಲ್ಲೆಲ್ಲೋ ಮುರಿದು 
ಮುಲುಗುಡಿಸುವ ಮುಳ್ಳು!
ವರುಷಗಳು ಉರುಳಿದಂತೆ 
ನೆನಪುಗಳು ಮಾಸುತ್ತವೆಂಬುದೆಲ್ಲಾ
ಬರೀ........... ಸುಳ್ಳು!
ಕೀವಾಗಲೊಲ್ಲದು 
ಹೊರಬರಲೊಲ್ಲದು!
ಹಸಿಯಾಗಿ, ಬಿಸಿಯಾಗಿ 
ಕಾಯಾಗಿ,ಕಲ್ಲಾಗಿ 
ಕಾಡಿಸುತ್ತದೆ ಸದಾ 
ನಿಮ್ಮ ಮಾತಿನ ಬತ್ತಳಿಕೆಯಿಂದ 
ಬಿಟ್ಟ ಬಾಣಗಳ
ಗಾಯದ ನೆನಪು!
ಅಂತ್ಯ ಹಾಡಲೇ ಬೇಕಿದೆ ನಾನು,
ಇದು ಕೊಡುವ ನೋವಿಗೆ 
ಅಂತರಂಗದ ಕಾವಿಗೆ 
ದಿನ ನಿತ್ಯದ ಸಾವಿಗೆ 
ಈ ಗೋಳಿನ ಹಾಡಿಗೆ .
ಅಯ್ಯೋ ....ನೆನಪುಗಳೇ 
ಬಿಡಿಯಪ್ಪ....ನನ್ನನ್ನು!
ಬಿಡಿ........ನನ್ನ ಪಾಡಿಗೆ!!

15 comments:

  1. ಭಾವಗಳು ಶಬ್ಧಗಳಲ್ಲಿ ಸಮರ್ಥವಾಗಿ ವ್ಯಕ್ತವಾಗಿವೆ...

    ಸುಂದರ ಭಾವುಕ ಕವನಕ್ಕಾಗಿ ಅಭಿನಂದನೆಗಳು...

    ReplyDelete
  2. ಪ್ರಕಾಶಣ್ಣ;ನಲಿವಿನಂತೆ ನೋವೂ ಕೂಡ ಜೀವನದ ಅವಿಭಾಜ್ಯ ಅಂಗವಲ್ಲವೇ?ಕೆಲವೊಮ್ಮೆ ಯಾರೋ,ಎಂದೋ ಆಡಿದ ಮಾತುಗಳು ಕೊಡುವ ವೇದನೆ ಅಸಾಧ್ಯ!ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  3. ನಿಮಗಿಂತ ಕವಿ ಹೃದಯವೇ ನನ್ನದು?

    ಸಾಗರವು - ನದಿಯನ್ನು ಕೇಳಿದಂತೆ, ಕವಿ ಪೋಷಕರ ಪ್ರಭಲ ಕವಿತೆಗೆ ನನ್ನದೆಂತ ಅಲ್ಪ ಪ್ರತಿಕ್ರಿಯೆ ಹೇಳಿ!

    ಎಷ್ಟು ಮನೋಜ್ಞವಾಗಿ ಬರೆಯಬಲ್ಲಿರೀ ಸಾರ್! ಕವಿತೆಗಳನ್ನು ನೀವು ಗರ್ಭದಲಿ ಶಿಶುವನ್ನು ಸಂಬಾಳಿಸುವ ತಾಯ ಅಕ್ಕರೆ ನಿಮ್ಮದು.

    ಮೂರು ಸಕಾರಣಗಳಿಗಾಗಿ ಇತ್ತಿಚೆಗೆ ಬ್ಲಾಗ್ ಲೋಕದಲ್ಲಿ ನನ್ನ ಮನಸು ಗೆದ್ದ ಕವನ ಇದು:

    ೧). ಆಳದಲ್ಲೆಲ್ಲೋ ಮುರಿದು
    ಮುಲುಗುಡಿಸುವ ಮುಳ್ಳು
    ಇಂತಹ ಸಾಲುಗಳೇ ಸಾಕು ನೆನಪಿನ ಸಿಹಿಯನ್ನ ಬಿಚ್ಚಿಡಲು. ಎಲ್ಲರಿಗೂ ಹಳೇ ನೆನಪುಗಳ ಮಧುರತೆ ಮುಳ್ಳಿನಂತೆ ಮುಲುಗಡಿಸುತ್ತದೆ.

    ೨)ಕಾಡಿಸುತ್ತದೆ ಸದಾ
    ನಿಮ್ಮ ಮಾತಿನ ಬತ್ತಳಿಕೆಯಿಂದ
    ಬಿಟ್ಟ ಬಾಣಗಳ
    ಗಾಯದ ನೆನಪು!
    ಇಲ್ಲಿಗೆ ಎಂತ ಕವಿಯೂ ಸೋತು ಹೋಗುತ್ತಾನೆ! ಯಾಕೆಂದರೆ ನೀವು ಮನಸಲ್ಲಿಟ್ಟುಕೊಂಡು ಬರೆದಿರುವ ’ಆಕೆ’ ಅನುಭವಿಸಿರುವ ನೋವುಗಳ ಸ್ಪಷ್ಟ ಚಿತ್ರಣ ದೊರಕಿ ಹೋಗುತ್ತದೆ.

    ೩). ಕವಿತೆಯ ಅಂತ್ಯ, ನಾವೆಲ್ಲರೂ ಪ್ರತಿ ದಿನ ಅಂದು ಕೊಳ್ಳುವ ಭಾವ. ನೆನಪುಗಳೇ ಹಾಗೇ ಅವು ನಮ್ಮನ್ನು ಹೊರಗೆ ಹೇಳಿಕೊಳ್ಳಲೂ ಬಾರದಂತ ಮಾನಸಿಕ ನೋವುಗಳಿಗೆ ತಳ್ಳಿ ಬಿಡುತ್ತವೆ.

    ReplyDelete
  4. ಕವನ, ಕವನದ ಭಾವ, ಅಭಿವ್ಯಕ್ತಿ ಸೂಪರ್ ಆಗಿದೆ ಸರ್ :)

    ReplyDelete
  5. ಭಾವನೆಗಳಿಗೂ..ನೆನಪುಗಳಿಗೂ ಅದೇನೋ ಬಿಡಲಾಗದ ನಂಟು..
    ಆ ಕೊನೆಯ ಮೂರು ಸಾಲು...ವಾವ್ಹ್..
    ಓದುತ್ತಾ ನಾವು ಭಾವುಕತೆಯೊಳಗೆ ನುಗ್ಗಿ ಬಿಡುತ್ತೇವೆ..

    ReplyDelete
  6. ಡಾಕ್ಟ್ರೆ ಚನ್ನಾಗಿ ಮೂಡಿ ಬಂದಿದೆ.
    ನಿಮ್ಮ ಈ ಕವನದಿಂದ ಸ್ಪೂರ್ತಿಗೊಂಡು
    ನಮಗೂ ಸ್ವಲ್ಪ ಭಾವ ಉಕ್ಕಿ
    ಎರಡು ಸಾಲು ಗೀಚಿದ್ದೇನೆ
    ಬಂದು ನೋಡಿ. ಧನ್ಯವಾದ

    ReplyDelete
  7. ನೆನಪುಗಳು ಕಾಡುವ, ಮಗ್ಗುಲು ಮುಳ್ಳಾಗುವ ಭಾವ ತುಂಬಾ ಸೂಕ್ತವಾಗಿ ಮೂಡಿದೆ.

    ReplyDelete
  8. ಪ್ರತಿಕ್ರಿಯೆ ನೀಡಿದ ಎಲ್ಲಾ ಬ್ಲಾಗ್ ಬಂಧುಗಳಿಗೂ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  9. ಕೃಷ್ಣಮೂರ್ತಿಯವರೆ,
    ಈ ಬಾರಿ ನಮಗೆ ಸುಂದರ ಕವನವನ್ನು ಕೊಟ್ಟು ಸಂತೋಷ ಪಡಿಸಿದ್ದೀರಿ. ಗದ್ಯ ಹಾಗು ಪದ್ಯ ಈ ಎರಡೂ ರೀತಿಗಳಲ್ಲಿ ನಿಮ್ಮ ಕುಶಲತೆಯನ್ನು ವ್ಯಕ್ತ ಪಡಿಸಿದ್ದೀರಿ. ಅಭಿನಂದನೆಗಳು.

    ReplyDelete
  10. ಸುನಾತ್ ಸರ್;ತಮ್ಮಂತಹ ಹಿರಿಯರ ಆಶೀರ್ವಾದ ಸದಾ ಇರಲಿ.ಪ್ರತಿಕ್ರಿಯೆಗೆ ಧನ್ಯವಾದಗಳು.ನಮಸ್ಕಾರ.

    ReplyDelete
  11. ಓಯ್.. ನೆನಪುಗಳು ಅಂದುಕೊಂಡಾಗಲೆಲ್ಲಾ ಸವಿನೆನಪುಗಳನ್ನೇ ಆರಿಸಿಕೊಂಡು ಬರೆಯುವುದು ಸಾಮಾನ್ಯ ಅಂದುಕೊಂಡಿದ್ದೆ. ಅಲ್ಲಿ ಇಲ್ಲಿ ಪ್ರೀತಿ- ಸ್ನೇಹದಿಂದ ದುಃಖಕ್ಕೊಳಗಾದ ವಿಷಯದಲ್ಲಿ ನೆನಪನ್ನು ಕಾಡುವ ನೆನಪಾಗಿ ಓದಿದ್ದೇನೆ..
    ಆದರೆ ತಮ್ಮದು ಅದಕ್ಕಿಂತ ವಿಶೇಷವಾದ ನೆನಪು..ಚಿನ್ನಾಗಿದೆ.

    ನೆನಪುಗಳ ಬಗ್ಗೆ ಓದುವಾಗ ನೆನಪಾಗುವಂತಹ ,ಕಾವ್ಯವನ್ನು ಬರೆಯಲು ನೆನಪಿಸಿದ ನಿಮ್ಮೊಳಗಿನ ಕವಿಗೆ ಧನ್ಯವಾದಗಳು...

    ಮತ್ತೆ ನಮ್ಮನೆಗೆ ಬಂದಿದ್ದಕ್ಕಾಗಿ ಧನ್ಯವಾದ.
    ಮುಂದೆಯೂ ನಮ್ಮನೆಗೆ ನೆನಪಿಟ್ಟು ಬನ್ನಿ.
    ಇದು ನಮ್ಮನೆಯ ವಿಳಾಸ,
    http://chinmaysbhat.blogspot.com/



    ಹಾಂ ಹಾಗೆ ,"ಮುಲುಗುಡಿಸುವ" ಈ ಪದದ ಅರ್ಥವನ್ನೂ ದಯವಿಟ್ಟು ನನಗೆ ತಿಳಿಸಿಕೊಡಿ ಎಂದು ಕೋರಿಕೊಳ್ಳುತ್ತಾ,ಸುಂದರ ಪದಗಳ ನೆನಪಲ್ಲಿ



    ನಿಮ್ಮನೆ ಹುಡುಗ,
    ಚಿನ್ಮಯ ಭಟ್

    ReplyDelete
  12. ಸರ್,
    ಕವನ ತುಂಬಾ ಇಷ್ಟವಾಯ್ತು. ನಾಲಿಗೆ ಪದೇ ಪದೇ ನೋವಿರುವ ಹಲ್ಲಿನ ಕಡೆಗೇ ಹೊರಳುವದಂತೆ. ಮನಸ್ಸನ್ನೇ ಉದ್ದೇಶಿಸಿ ಹೇಳಿದ ಮಾತಿದು..ಎಷ್ಟು ಸತ್ಯ ಆಲ್ವಾ?

    ReplyDelete
  13. ಚಿನ್ಮಯ್;ಪ್ರತಿಕ್ರಿಯೆಗೆ ಧನ್ಯವಾದಗಳು.ನಿಮ್ಮ 'ಔಟ್ ಪುಟ್ಟಿಗೆ'ಖಂಡಿತಾ ಬರುತ್ತೇನೆ.ಮುಲುಗುಡಿಸು ಎಂದರೆ ಸದಾ ಕಾಲ ನೋವಿನಿಂದ ನರಳುವಂತೆ ಮಾಡು ಎಂದರ್ಥ.

    ReplyDelete
  14. ಭಟ್ ಸರ್;ನಿಮಗೆ ಕವನ ಹಿಡಿಸಿದ್ದು ಖುಷಿಯಾಯಿತು.ಅಮೆರಿಕಾದ ಅನುಭವಗಳ ಬಗ್ಗೆ ಬರೆಯಿರಿ.ಧನ್ಯವಾದಗಳು.

    ReplyDelete
  15. ಕಹಿ ನೆನಪುಗಳಿಗೂ ಸನ್ಮಾನವಾಗಿದೆ ನಿಮ್ಮ ಈ ಕವಿತೆಯಲ್ಲಿ !!!!!! ನಿಮ್ಮ ಈ ಕವಿತೆಯನ್ನು ಕಹಿನೆನಪುಗಳು ಓಡಿಹೋಗುತ್ತವೆ , ನಿಮ್ಮಲ್ಲಿರುವ ಕವಿಹೃದಯ ಎಂತದು ಎಂಬುದರ ಕನ್ನಡಿ ಈ ಕವಿತೆ ಸಾರ್ ಜೈ ಹೋ ಡಾಕ್ಟರ್ ಸಾಬ್!!!
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete

Note: Only a member of this blog may post a comment.