Friday, October 14, 2011

"ಎದೆಗೂ,ಎದೆಗೂ ನಡುವೆ ಕಡಲು !!"

ಗಂಟಲೊಳಗಿನ ಬಿಸಿ ತುಪ್ಪ 
ಉಗುಳಲಾಗದು, ನುಂಗಲಾಗದು!
ಹೆಸರಿಗೆ ಹತ್ತಿರದ ಬಂಧುಗಳು!
ಎದೆಗೂ,ಎದೆಗೂ ನಡುವೆ ಕಡಲು!
ಕಡಲೊಳಗೆ ಸಾವಿರ ಸಾವಿರ 
ಮುಸುಕಿನ ಗುದ್ದಾಟದ 
ಶಾರ್ಕ್,ತಿಮಿಂಗಿಲಗಳು!
ನಮ್ಮ ನಮ್ಮ ಅಹಂಕಾರಗಳ 
ಆಕ್ಟೋಪಸ್ ಹಿಡಿತಗಳು!
ಇಷ್ಟು ಸಾಲದೇ ಸಂಬಂಧ ಕೆಡಲು!
ಮೇಲೆ ಮಾತಿನ ಮರ್ಮಾಘಾತದ 
ಅಲೆಗಳ ಹೊಡೆತಕ್ಕೆ 
ಆತ್ಮೀಯತೆಯ ಸೇತುವಿನ 
ಬೆಸೆಯಲಾಗದ ಬಿರುಕು!
ಯಾವುದೋ ಮದುವೆಯಲ್ಲೋ 
ಮುಂಜಿಯಲ್ಲೋ,
ವೈಕುಂಠ ಸಮಾರಾಧನೆಯಲ್ಲೋ 
ಎದುರೆದುರು ಸಿಕ್ಕಾಗ 
ಹುಳ್ಳಗೆ ನಕ್ಕು 'ಹಾಯ್'ಎಂದು 
ಗಾಯಕ್ಕೆ ಮುಲಾಮು ಸವರೋಣ!!
ಮುಂದಿನ ಭೆಟ್ಟಿಯ ತನಕ 
ನಿರಾಳವಾಗಿ 'ಬೈ'ಎಂದು  ಬಿಡೋಣ!!


21 comments:

  1. Byeeeeeeeeee endu ondu Dodda bye helbeku :) channagide Dr.

    ReplyDelete
  2. ದೀಪಕ್;ಹ..ಹ..ಹಾ...!ಹಾಗೇ ಆಗಲಿ.ನೀವು ಹೇಳಿದಂತೆ ದೊಡ್ಡ ಬೈ ಎಂದು ಬಿಡೋಣ.ನಿಮ್ಮ ಪ್ರತಿಕ್ರಿಯೆ ಚೆನ್ನಾಗಿದೆ.ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.
    ನಮಸ್ಕಾರ.

    ReplyDelete
  3. ಬಂಧುಗಳು ಆಕ್ಟೋಪಸ್ ಹಿಡಿತಗಳು. ಅತ್ಯುತ್ತಮ ಉಪಮೆ ಪ್ರತಿಮೆಗಳ ಉತ್ಕೃಷ್ಟ ಕವನ.

    "ಎದೆಗೂ ಎದೆಗೂ ನಡುವೆ ಕಡಲು" ಎಲ್ಲಿಂದ ಆಯ್ದು ತಂದಿರೇ ದೇವರೇ, ಇಂಥ ದೈವಿಕ ಪುಷ್ಪದಂತಹ ಸಾಲು?

    ನೆಂಟರು ಉಂಡು ಹೋಗಲು ಕಾದು ನಿಂತವರು, ತಿವಿದು ಚುಚ್ಚೋ ಮಾನವ ಗಡಪಾರೆಗಳು. ಬಂಧುಗಳ ಸ್ವಾರ್ಥತೆ ಬಗ್ಗೆ ಒಳ್ಳೆಯ ಕವನ.

    ಮದುವೆಗೋ ಮುಂಜಿಗೋ ಸಾವಿಗೋ ವೈಕುಂಠ ಸಮಾರಂಭಕ್ಕೋ ಸಿಕ್ಕು ಹುಳ್ಳಕ್ಕೆ ನಕ್ಕು!

    ವ್ಹಾವ್ ಜೇ ವ್ಹಾವ್!

    ReplyDelete
  4. ಬದರಿ;ಇವೆಲ್ಲಾ ಹೇಳಿಕೊಳ್ಳಲಾರದಂತಹ ಜಾಗದಲ್ಲಿ ಉಂಟಾಗುವ ಹೇಳಿಕೊಳ್ಳಲಾಗದಂಥಾ ನೋವು.ಈ ಅಮೂರ್ತ ನೋವಿಗೆ ಒಂದು ಮೂರ್ತ ಸ್ವರೂಪ ಕೊಡಲು ಈ ನನ್ನ ಪ್ರಯತ್ನ.ಎಷ್ಟು ಸಫಲತೆ ಸಿಕ್ಕಿದೆಯೆಂದು ನೀವೇ ಹೇಳಬೇಕು.ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  5. ಆಹಾ...ಡಾಕ್ಟ್ರೇ...ಮಸ್ತಾದ ಹೋಲಿಕೆ...ಕೆಟ್ಟು ಹೋದ ಸಂಬಂಧಗಳು ರಾಡಿಯಾಗದೇ ಇರುವುದಕ್ಕೆ ಈ Hi,Bye

    ಗಳೇ ಸೂಕ್ತ..ಚೆನ್ನಾಗಿದೆ...

    ReplyDelete
  6. ವಾಸ್ತವಕ್ಕೆ ಅತ್ಯ೦ತ ಸಮೀಪವಿರುವ, ಪ್ರಾಪ೦ಚಿಕತೆಯನ್ನು ಕಾಯ್ದುಕೊಳ್ಳಲು ಸಹಕರಿಸುವ ಸು೦ದರ ಕವನ ನೀಡಿದ್ದಕ್ಕಾಗಿ ಧನ್ಯವಾದಗಳು ಸರ್, ನನ್ನ ಬ್ಲಾಗ್ ಗೆ ೨ಭಾರಿ ಬಂದು ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ್ದಕ್ಕಾಗಿ ವ೦ದನೆಗಳು.

    ReplyDelete
  7. jeevana saarada kavana sir idu...
    tumbaa chennaagide....

    ReplyDelete
  8. ಡಾಕ್ಟ್ರೇ...ಚನ್ನಾಗಿದೆ ಸೂಕ್ಷ್ಮಗಳ ಸ್ಥೂಲ ಸ್ವರೂಪ ಹೊತ್ತುಬಂದ ಕವನ ಆದರೂ ಬಹಳ ಸ್ಟ್ರಾಂಗ್..ಸಂವೇದನೆ ತಲುಪಿಸೋದ್ರಲ್ಲಿ....ಅದ್ರಲ್ಲೂ ನೆಂಟ ನೀ ಬಾ ದಾರು ಗುಂಟ...ಮನೆಗೆ ಮಾತ್ರ ಬೇಡ...ಅನ್ನೋ ಮಾತು..

    ReplyDelete
  9. ಖಂಡಿತ ನಿಮ್ಮ ಪ್ರಯತ್ನಕ್ಕೆ ಸಾಫಲ್ಯತೆ ಸಿಕ್ಕಿದೆ ಸಾರ್!

    ಇಗೊಳ್ಳಿ ನನ್ನ ಕೊಸರು:

    ಸಾವಿಗಿಲ್ಲದ ನೆಂಟ
    ವೈಕುಂಟ ಸಮಾರಾಧನೆಗೆ
    ಹಾಜರು!

    ವಡೆ ಮೇಲೆ ವಡೆ ಪೋಣಿಸಿದ
    ವಡೆಯ
    ಪಕ್ಕದವಗಿಗೆ ಉಸುರಿದ
    ಈ ನಡುವೆ ಯಾಕೋ
    ವಡೆ ಗಾತ್ರ ಸಣ್ಣಗೆ!
    ಮೊನ್ನೆ ಶೆಟ್ಟಿ ಸತ್ತರೆ
    ವಡೆ ಮೇಲೆ ಗೋಡಂಬಿ...

    ReplyDelete
  10. ಮೌನ ರಾಗ ಮೇಡಂ;ಡಿ.ವಿ.ಜಿ.ಯವರ ಕಗ್ಗದ ಸಾಲುಗಳು ನೆನಪಾಗುತ್ತಿವೆ;

    ಸ್ಥೂಲ ಸೂಕ್ಷ್ಮ ವಿವೇಕವರಿಯದ ಬಂಧುಜನ.
    ಕಾಲ ದಂಷ್ಟ್ರಕೆ ನಿನ್ನ ಮೃದುಗೊಳಿಪ ಭಟರು!
    ಸಾಲವನು ನಿನ್ನಿಂದ ಸಲಿಸಿಕೊಳ ಬಂದವರು
    ತಾಳುಮೆಯಿನ್ ಅವರೊಳಿರೋ ಮಂಕುತಿಮ್ಮ!
    (ಕಾಲ ದಂಷ್ಟ್ರ-ಯಮನ ದವಡೆ)

    ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  11. ಪ್ರಭಾಮಣಿ ಮೇಡಂ;ಸಂಬಂಧಗಳಲ್ಲಿನ ಈ ಇರುಸು ಮುರುಸು ಎಲ್ಲರ ಅನುಭವವೇ!ವಿಧಿ ಇಲ್ಲ.ಸಹಿಸಿಕೊಳ್ಳಬೇಕು.ಅಲ್ಲವೇ?ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  12. ದಿನಕರ್;ನಿಮ್ಮ ಪ್ರೋತ್ಸಾಹಕ ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  13. ಅಮಿತ ಮೇಡಂ;ನನ್ನ ಬ್ಲಾಗಿಗೆ ಸ್ವಾಗತ.ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  14. ಅಜಾದ್ ಸರ್;'ನೆಂಟ'ರು ಎಲ್ಲರಿಗೂ ಇರುತ್ತಾರೆ ಆದರೆ ಅದರಲ್ಲಿ ಎಷ್ಟು ಜನ 'ಇಷ್ಟ'ರಾಗುತ್ತಾರೆ ಎನ್ನುವುದೇ ದೊಡ್ಡ ಸವಾಲು.ಅಲ್ಲವೇ? ಈ ರೀತಿಯ ಸಂಕಷ್ಟಗಳನ್ನು ಎಲ್ಲರೂ ಎದುರಿಸಲೇ ಬೇಕು.ಬೇರೆ ದಾರಿಯೇ ಇಲ್ಲ.ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  15. ಬದರಿ;ಹ..ಹ..ಹಾ...!ನಿಮ್ಮ ಕಾಮೆಂಟ್ ಸೂಪರ್.'ಮೊನ್ನೆ ಶೆಟ್ಟಿ ಸತ್ತಾಗ ವಡೆ ಮೇಲಿತ್ತು ಗೋಡಂಬಿ!'ಇಂಥವರೂ ಇರುತ್ತಾರಾ?!!!ನನ್ನ ಪದ್ಯಕ್ಕಿಂತ ನಿಮ್ಮ ಕೊಸರೇ ಚೆನ್ನಾಗಿದೆ.ಆಗಾಗ ನನ್ನ ಪದ್ಯಗಳಿಗೆ ಕೊಸರು ಹಾಕುವುದನ್ನು ತಪ್ಪಿಸಬೇಡಿ ಮತ್ತೆ!ನಿಮಗೆ ಮತ್ತೊಮ್ಮೆ ತುಂಬು ಹೃದಯದ ಧನ್ಯವಾದಗಳು.

    ReplyDelete
  16. ನಾವು ಚೆನ್ನಾಗಿದ್ದರೆ ನೆಂಟರು ಇಲ್ಲವೇ ಯಾರೂ ಹತ್ತಿರ ಬರುವುದೇ ಇಲ್ಲ... ಕೆಲವರು ಕೆಡುವುದನ್ನೇ ಕಾಯುತ್ತಾರೆ. ಸಂಬಂಧದಿಂದಾಗೋ ತಲೆನೋವು ಕೆಲವೊಮ್ಮೆ ಹೇಳಲೂ ಆಗದು ಆದರೂ ನಿಮ್ಮ ಹೋಲಿಗೆ ತುಂಬಾ ಚೆನ್ನಾಗಿದೆ .. ಹೇಳಲಾಗದ ಸತ್ಯಗಳು ಇವು ಅಲ್ಲವೇ ಸರ್

    ReplyDelete
  17. ಮನಸು ಮೇಡಂ;ಕೆಲವೊಮ್ಮೆ ಇವು 'ಆಡೋಹಂಗಿಲ್ಲಾ ಅನುಭವಿಸೋಹಂಗಿಲ್ಲಾ'
    ಅನ್ನೋ ಜಾತಿಯವು ಇವು!ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  18. ವಸಂತ್;ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  19. ಕವಿತೆಯಲ್ಲಿ ನಮ್ಮ ಪಂಚರಂಗಿ ಬದುಕಿನ ಅನಾವರಣ ಆಗಿದೆ !!! ಹೌದು ಸಂಬಂಧ ಗಳಲ್ಲಿ ನಿಮ್ಮ ಕವಿತೆಯಲ್ಲಿ ಬಂದಿರುವ ಎಲ್ಲಾ ರೆತಿಯ ಚಿತ್ರಣಗಳೂ ಕಂಡುಬರುತ್ತವೆ , ಆದರೂ ನಾವು ನೆನತರು ಎದುರಿಗೆ ಬಂದಾಗ ಹೊರಗೆ ಸಂತಸದ ಕೃತಕ ನಗು ನಕ್ಕು ಮನದಲ್ಲಿ ಬೇರೆಯದೇ ಆದ ಅರ್ಥದ ನಗು ನಕ್ಕು ಬಾಳುತ್ತೇವೆ , ಮುಂದಿನ ಭೇಟಿವರೆಗೆ ಅದೇ ಸೋಗಿನಲ್ಲಿ ಬಾಳುತ್ತೇವೆ. ಒಳ್ಳೆಯ ಕವಿತೆ ಸಾರ್ ಧನ್ಯವಾದಗಳು.
    ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]

    ReplyDelete
  20. ಬಾಲು ಸರ್;ಸಂಬಂಧಿಗಳನ್ನು ಸ್ನೇಹಿತರ ಹಾಗೆ ನಾವು ಹುಡುಕಿಕೊಂಡದ್ದಲ್ಲ.They are there by default!Nothing much can be done except accepting as they are!ಅಲ್ಲವೇ ಸರ್?ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete

Note: Only a member of this blog may post a comment.