Tuesday, August 17, 2010

'ಸ್ನೇಹದಲ್ಲಿ ಇರೋ ಸುಖ ಗೊತ್ತೇಇರಲಿಲ್ಲ'

ಸ್ನೇಹದಲ್ಲಿ,ಅದೂ ಬ್ಲಾಗ್ ಸ್ನೇಹದಲ್ಲಿ ,ಇಂತಹ ಸುಖ,ಸಂತೋಷ,ಆನಂದ ಇದೆಯೆಂದು ,ನಿಜಕ್ಕೂ ಗೊತ್ತಿರಲಿಲ್ಲ! ಓಹ್!! ಅದು ಕನಸೇ ?ಎಂದು ಮೈ ಚಿವುಟಿ ನೋಡಿಕೊಳ್ಳು ವಂತಾಗುತ್ತದೆ !ನಿಜಕ್ಕೂ this is not an exaggeration .ಆಗಸ್ಟ್ 14  ಮತ್ತು 15 ನಿಜಕ್ಕೂ ನನ್ನ  ಜೀವನದಲ್ಲಿ ಬಹಳ ದಿನ ನೆನಪಿನಲ್ಲಿ ಉಳಿಯುವುದರಲ್ಲಿ ಸಂದೇಹವಿಲ್ಲ.ಡಿ.ವಿ.ಜಿ.ಯವರ  ಮಂಕು ತಿಮ್ಮನ ಕಗ್ಗದಲ್ಲಿ ಒಂದು ಕವನ ಹೀಗಿದೆ;

ಒಮ್ಮೆ ಹೂದೋಟದಲಿ,ಒಮ್ಮೆ ಕೆಳೆ ಕೂಟದಲಿ
ಒಮ್ಮೆ ಸಂಗೀತದಲಿ ,ಒಮ್ಮೆ ಶಾಸ್ತ್ರದಲಿ
ಒಮ್ಮೆ ಸಂಸಾರದಲಿ ,ಮತ್ತೊಮ್ಮೆ ಮೌನದಲಿ
ಬ್ರಹ್ಮಾನುಭವಿ ಯಾಗೋ ಮಂಕು ತಿಮ್ಮ .

'ಕೆಳೆ ಕೂಟದಲಿ'ಎಂದರೆ ಸ್ನೇಹಿತರ ಜೊತೆಯಲ್ಲಿ ಬ್ರಹ್ಮಾನುಭವಿ ಯಾಗುವುದು ಹೇಗೆಂದು ಅರ್ಥ ವಾಗಿರಲಿಲ್ಲ.ಆದರೆ ಆ ಮಾತುಗಳು ಈ ಎರಡು ದಿನದಲ್ಲಿ ಅನುಭವಕ್ಕೆ ಬಂತು ಎಂದು ಧೈರ್ಯವಾಗಿ ಹೇಳಬಲ್ಲೆ.ಈ ಒಂದು ಆನಂದದ ಅನುಭವ ನನಗೆ ಹಿಂದೆಂದೂ ಸಿಕ್ಕಿರಲಿಲ್ಲವೆಂದು ಖಂಡಿತವಾಗಿ ಹೇಳಬಹುದು.
ಆಗಸ್ಟ್ ಹದಿನಾಲ್ಕರನಂದು ನಾನು,ನಾಭಿ ಬ್ಲಾಗಿನ ನಾರಾಯಣ್ ಭಟ್,ಇಟ್ಟಿಗೆ ಸಿಮೆಂಟು ಬ್ಲಾಗಿನ ನಮ್ಮೆಲ್ಲರ ಮೆಚ್ಚಿನ ಪ್ರಕಾಶಣ್ಣ ,ಮನದಾಳದಿಂದ ಬ್ಲಾಗಿನ ಪ್ರವೀಣ್ ಗೌಡ ,ಈ ನಾಲ್ಕು ಜನ ಸಪ್ನಾ ಬುಕ್ ಹೌಸಿನಲ್ಲಿ ಮಧ್ಯಾಹ್ನ  ಸುಮಾರು ಹನ್ನೆರಡು ಗಂಟೆಯ ವೇಳೆಗೆ ಭೇಟಿಯಾದೆವು .ಪ್ರಕಾಶಣ್ಣ ಅವರ ಸೂಜಿಗಲ್ಲಿನಂತಹ ವ್ಯಕ್ತಿತ್ವ ಯಾರನ್ನಾದರೂ ಮೋಡಿ ಮಾಡಿ ಬಿಡುತ್ತದೆ.ಅವರ ಮಾತು,ಹಾಸ್ಯ ,ಆತ್ಮೀಯತೆ ,ಸ್ನೇಹ ನಮ್ಮನ್ನೆಲ್ಲ ಮಂತ್ರ ಮುಗ್ಧರನ್ನಾಗಿ  ಮಾಡಿತ್ತು!ಸುಮಾರು ಆರು ಗಂಟೆಗಳ ಕಾಲ ,ಮಾತು ,ನಗು,ಹರಟೆ .ನಗು,ಮತ್ತಷ್ಟು -----ಇನ್ನಷ್ಟು ನಗು.ಅದು ಕೊಟ್ಟ ಆನಂದವನ್ನು ಮಾತಿನಲ್ಲಿ ಬಣ್ಣಿಸಲು ಸಾಧ್ಯವಿಲ್ಲ.ಅವರ ಮನೆಯವರು ತೋರಿದ ಆದರ ಮತ್ತು ಆಥಿತ್ಯಕ್ಕೆ ನಾನು ಚಿರ ಋಣಿ .ಮರು ದಿನ ಸಿಕ್ಕವರು ವಿ.ಆರ್.ಭಟ್,ಪರಾಂಜಪೆ,ನಾಗರಾಜ್.ಕೆ.,ಮತ್ತು ಪ್ರವೀಣ್ ಗೌಡ.ಇವರೆಲ್ಲರ ಮುಗ್ಧ,ಸ್ನಿಗ್ಧ ಸ್ನೇಹಕ್ಕೆ ಯಾವುದು ಸಾಟಿ? ಓ ದೇವರೇ ,ನಿನ್ನ ಗಣಿಯಲ್ಲಿ ಎಂತೆಂತಹ ರತ್ನಗಳು!ಎಂದು ಮನದಲ್ಲೇ ವಂದಿಸಿದೆ.  ವಿ.ಆರ್.ಭಟ್ಟರು ಜ್ಞಾನದ ಸಾಗರ!
ಮೊಗೆದಷ್ಟೂ ಇದೆ ಅವರಲ್ಲಿರುವ ಜ್ಞಾನದ ಗಂಗೆ!ಅವರ ಜ್ಞಾನ ಭಂಡಾರಕ್ಕೆ ಮೂಕ ವಿಸ್ಮಿತನಾಗಿದ್ದೆ.ಪರಾಂಜಪೆ ಅದ್ಭುತ ಸ್ನೇಹ ಜೀವಿ!ಮಿತ ಭಾಷಿ.ಹೆಚ್ಚು ಮಾತನಾಡದೆ observe ಮಾಡುತ್ತಾ sponge ನಂತೆ ಎಲ್ಲವನ್ನೂ absorb ಮಾಡುತ್ತಿದ್ದರು!ಇನ್ನು ನಾಗರಾಜ್ ಮತ್ತು ಪ್ರವೀಣ್ ನನ್ನ ಮಗನ ವಯಸ್ಸಿನ ಹುಡುಗರು.ಅವನಂತೆಯೇ ಈ ಕಣ್ಮಣಿಗಳು ನನ್ನ  ಹೃದಯಕ್ಕೆ ತುಂಬಾ ಹತ್ತಿರವಾದರು!ಅವರ ಮನಸ್ಸುಗಳು ಮುಂಜಾನೆಯ ಮಂಜಿನ ಹನಿಗಳಂತೆ ಸುಂದರ!ಅವರ್ಣನೀಯ! ಮನೆಗೆ ಬಂದಾಗ ,ಜಿ.ಎಸ್.ಶಿವ ರುದ್ರಪ್ಪ ಅವರ ಈ ಗೀತೆ ನೆನಪಾಯಿತು;

ಎಲ್ಲೋ ಹುಡುಕಿದೆ ,ಇಲ್ಲದ ದೇವರ
ಕಲ್ಲು ಮಣ್ಣು ಗಳ  ಗುಡಿಯೊಳಗೆ !
ಇಲ್ಲೇ ಇರುವ ಪ್ರೀತಿ ಸ್ನೇಹಗಳ
ಗುರುತಿಸದಾದೆನು ನಮ್ಮೊಳಗೇ !

ಈ ರೀತಿಯ ಸ್ನೇಹವನ್ನೂ ,ಸಂತೋಷವನ್ನೂ ,ಆನಂದವನ್ನೂ ಕೊಟ್ಟು ,ಡಿ.ವಿ.ಜಿ.ಯವರು ಹೇಳಿದಂತೆ 'ಕೆಳೆ ಕೂಟದ' ಬ್ರಹ್ಮಾನು ಭವವನ್ನು
ಮಾಡಿಸಿದಂತಹ ಬ್ಲಾಗಿನ ಸ್ನೇಹಿತರಾದ  ಪ್ರಕಾಶಣ್ಣ,ವಿ.ಆರ್.ಭಟ್,ಪ್ರವೀಣ್ ,ಪರಾಂಜಪೆ,ಎನ್.ಆರ್.ಭಟ್,ಮತ್ತು ನಾಗರಾಜ್ ,ಇವರೆಲ್ಲಾ
ನೂರು ವರುಷ ಸುಖದಿಂದ,ಸಂತೋಷದಿಂದ ,ಹೀಗೇ ನಗು ನಗುತ್ತಾ ಬಾಳಲಿ ಎಂದು ಆ ದೇವನಲ್ಲಿ ನನ್ನ ಪ್ರಾರ್ಥನೆ.

23 comments:

  1. ಮೂರ್ತಿ ಸರ್,
    ಬೆಂಗಳೂರಿಗೆ ಬಂದ ಸುದ್ದಿ, ನಡೆದ ಮಾತುಕತೆಯನ್ನ ನಿಮ್ಮಿಂದ ಪ್ರವೀಣ್, ಪ್ರಕಾಶಣ್ಣ ನಿಂದ ಕೇಳಿ ಹೊಟ್ಟೆ ಕಿಚ್ಚಾದ್ದಕ್ಕಿಂತ ನಿಮ್ಮ ಈ ಲೇಖನ ಓದಿ ಆಯಿತು...... ನಿಜ ಸರ್.... ಈ ಬ್ಲಾಗ್ ಬಂಧ ನಾವು ಅನಿಸಿದ್ದಕ್ಕಿಂತ ದೊಡ್ಡದಿದೆ ಸರ್.... ಇದನ್ನು ಮತ್ತು ಅನುಭವಿಸೋಣ ಸರ್.... ಆಗಷ್ಟ್ ೨೨ ಕ್ಕೆ ಬನ್ನಿ.....

    ReplyDelete
  2. ಸರ್ ನೀವು ಹೇಳೋದು ನಿಜಾ
    ಬ್ಲಾಗ್ ಒಂದು ಕುಟುಂಬದ ವಾತಾವರಣ ನಿರ್ಮಾಣ ಮಾಡಿದೆ
    ನಿಜಕ್ಕೂ ನೀವು ಅದೃಷ್ಟವಂತರು ಅವರನ್ನೆಲ್ಲ ಭೆಟ್ಟಿ ಆಗಿ ಬಂದಿದ್ದಿರಾ

    ReplyDelete
  3. ಕೃಷ್ಣಮೂರ್ತಿಯವರೆ..

    ನಿಮ್ಮ ಸ್ನೇಹಕ್ಕೆ ನನ್ನಲ್ಲಿ ಮಾತನಾಡಲು ಮಾತಿಲ್ಲ...!

    ನಿಮ್ಮೊಡನೆ ಕಳೆದ ಕ್ಷಣಗಳು..
    ಮಾತುಗಳು..
    ಜೀವನದಲ್ಲಿ ಕೆಲವೊಮ್ಮೆ ಮಾತ್ರ ಸಿಗುತ್ತವೆ...

    ಎಲ್ಲೆಲ್ಲೋ ಇರುವ ನಾವೆಲ್ಲ ಸೇರಿದ್ದು...
    ಆತ್ಮೀಯತೆಯ ಬಂಧದಲ್ಲಿ ಸಿಕ್ಕಿದ್ದು.. ಎಲ್ಲವೂ ಸೋಜಿಗ...

    ಅಂದು..
    ಎಷ್ಟೋ ವರ್ಷಗಳ ಬಾಲ್ಯ ಸ್ನೇಹಿತರಂತೆಯೆ ಹರಟಿದೆವು..
    ನಕ್ಕೇವು..
    ಕೆಲವು ನೆನಪುಗಲನ್ನು ಹಂಚಿಕೊಂಡು ಕಣ್ಣಲ್ಲಿ ನೀರೂ ಸಹ ಬಂತು...

    ನೀವು ಹೊರಡುವಾಗ ನಿಜಕ್ಕೂ ಬಹಳ ಕಷ್ಟವಾಯಿತು...
    ಹೇಳಲಾಗದ ಭಾವ ಗಂಟಲಲ್ಲಿ ಉಕ್ಕಿ ಬಂದಿತ್ತು...

    ಈ ಸ್ನೇಹ..
    ಈ ಪ್ರೀತಿ..
    ಈ ವಿಷ್ವಾಸ ಯಾವಾಗಲೂ ಹೀಗೆಯೇ ಇರಲಿ...

    ನೀವೆಂದ ಮಾತು ನಿಜ..
    "ಎಲ್ಲೋ ಹುಡುಕಿದೆ ಇಲ್ಲದ ದೇವರ....."

    ಮತ್ತೊಮ್ಮೆ ಬನ್ನಿ..
    ನಮ್ಮಲ್ಲಿಗೆ..
    ನಮ್ಮನೆಗೆ..
    ನಮ್ಮ ಮನದೊಳಗೆ...

    ReplyDelete
  4. "ಸರ್ಜನರ ಸಹವಾಸ ಹೆಜ್ಜೇನು ಸವಿದ೦ತೆ" ಎಲ್ಲರಿಂದ ವಿಷಯ ತಿಳಿಯಿತು....
    ನಮಗೆ ಹೆಜ್ಜೇನು ಸವಿಯೊ ಯೋಗ ನಿಮ್ಮಿಂದ ಸಿಗಲಿ.....

    ReplyDelete
  5. ಜೀವನ ಯಾತ್ರೆಯಲ್ಲಿ ಹಲವರು ಸಿಗುತ್ತಾರೆ. ಆದರೆ ಹೃದಯಕ್ಕೆ ಕನ್ನ ಹಾಕುವವರು ಕೆಲವರು ಮಾತ್ರ ! ನಿಮ್ಮೆಲ್ಲರ ಜೊತೆಗೆ ಇರುವ ಪ್ರತೀ ನಿಮಿಷ ಪ್ರತೀ ಸೆಕೆಂಡ್ ನಾವು ಅಂತಹ ಅತ್ಯುತ್ತಮ ಸಮಯವನ್ನು ಅನುಭವಿಸುವ ಅದೃಷ್ಟ ಪಡೆದಿದ್ದೆವು ಅಂದು, ಅದು ಎಂದೆಂದೂ ನಮ್ಮದಾಗಲಿ, ಬಹುಶಃ ನೂರು ದಿನ ನಮ್ಮೊಟ್ಟಿಗೆ ಇದ್ದರೂ ನಮ್ಮ ಕಥಾನಕ ಮುಗಿಯುತ್ತಿರಲಿಲ್ಲ! ಹೇಳದೆ ಇರುವ ವಿಷಯಗಳೇ ಹಲವಿರುವಾಗ ಹೇಳಿದ್ದನ್ನು ನೆನೆಸಿಕೊಳ್ಳುವುದೇ ನಮ್ಮ ಭಾಗ್ಯವೀಗ. ನನ್ನ ಬಗ್ಗೆ ಬಹಳ ಜಾಸ್ತಿ ಬರೆದಿರಲ್ಲ, ನಾನು ಆಥರದ ಸಾಗರವೇನಲ್ಲ ಆದರೆ 'ಸಾಗರ'ದ ಸಂಬಂಧವನ್ನು ಎರಡು ರೀತಿಯಲ್ಲಿ ಇಟ್ಟುಕೊಂಡವ, ಒಂದು ನಿಮ್ಮ ಹತ್ತಿರದ ಊರು ಸಾಗರದ ಸಂಬಂಧ, ಇನ್ನೊಂದು ಕಡಲ ಹತ್ತಿರದ ಮಲೆನಾಡ ಕರಾವಳಿ ನನ್ನದಾಗಿರುವುದರಿಂದ ಅಲ್ಲೊಂದು ಸಾಗರ! ಅಕ್ಷರಶಃ ನೀವು ಹೇಳಿದಂತೆ ಡೀವೀಜಿ ಅನುಭವಿಸಿ ಬರೆದ ಕಗ್ಗಗಳು ಎಲ್ಲರ ಅನುಭವಕ್ಕೆ ನಿಲುಕುವಂತಹುದಲ್ಲ, ತಾವು ಇದನ್ನೆಲ್ಲಾ ತಲೆಯಲ್ಲಿ ತುಂಬಿಕೊಂಡು ಬಹಳ ಅನುಭಾವಿಗಳಾಗಿ ನಮ್ಮ ಪಾಲಿಗೆ ಸಿಕ್ಕಿದ್ದೀರಿ, ಹಿರಿಯರಾದ ನಿಮ್ಮ ಆಶೀರ್ವಾದ-ಪ್ರೀತಿ ನಮ್ಮೆಲ್ಲರಿಗೆ ಸದಾ ಸಿಗಲಿ, ಜೊತೆಗೆ ಮುಗ್ಧ ಮಗುವಿನ ಮನಸ್ಸಿನ ನಿಮ್ಮ ಸ್ನೇಹ ಕೂಡ. ಶಬ್ಧಗಳು ಸೋಲುವ ಪರಿಸ್ಥಿತಿ, ಕಣ್ಣಿಂದ ಮನದುಂಬಿ ಆನಂದ ಭಾಷ್ಪ ಬರುತ್ತಿದೆ, ತಮ್ಮ ಬಗ್ಗೆ ಬ್ಲಾಗಿನಲ್ಲಿ ಬರೆದಿದ್ದೇನೆ-ನೋಡಿ, ಅನಂತ ನಮಸ್ಕಾರಗಳು

    ReplyDelete
  6. bloginindgaagi 35 varushagala nantara nimma sahityikavagi shreemantavagiruva barahagalindagi
    nimma melina abhimana emmadiyagide.sneha munduvariyali.sahityada seve munduvariyali.dhanyavadagalu.

    ReplyDelete
  7. nimma bagge V.R bhat sir haagu paraanjape sir ella tiLisiddaare namagu nimmannu beti maaduva asse ide....

    ReplyDelete
  8. wow..:))..3 ಬ್ಲಾಗ್ ನಲ್ಲೂ ನಿಮ್ಮೆಲ್ಲರ ಭೇಟಿಯ ಬಗ್ಗೆ ಓದಿ, ನಮಗೆ ಭೇಟಿ ಮಾಡಿದಷ್ಟು ಕುಶಿಯಾಗ್ತಿದೆ.

    ReplyDelete
  9. ಬ್ಲಾಗಿಗರ ಸ್ನೇಹ ಇದೇ ರೀತಿ ವರ್ಧಿಸುತ್ತಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

    ReplyDelete
  10. ದೂರದ ಭೇಟಿ ಆಗಿ ಹೋಯಿತು. ಇಲ್ಲೇ ಸನಿಹದಲ್ಲಿದ್ದರೂ ಇನ್ನೂ ನಿಮ್ಮನ್ನು ಭೇಟಿಮಾಡಲಾಗಲಿಲ್ಲವಲ್ಲ? ಡಾಕ್ಟ್ರೇ..ಯಾವಾಗ ಭೇಟಿ

    ReplyDelete
  11. ಪ್ರತಿಕ್ರಿಯಿಸಿದ ಎಲ್ಲಾ ಮಹನೀಯರಿಗೂ ನನ್ನ ನಮನಗಳು.ಇದೇ ರೀತಿ ಬ್ಲಾಗಿಗರ ಸ್ನೇಹ ವೃದ್ಧಿಸಲಿ ಎನ್ನುವುದೇ ಆ ಭಗವಂತನಲ್ಲಿ ನನ್ನ ಪ್ರಾರ್ಥನೆ.ಧನ್ಯವಾದಗಳು.

    ReplyDelete
  12. ಶರ್ಮತಲವಾಟರವರಿಗೆ ನಮನಗಳು.ನಿಮಗೆ ಅನುಕೂಲವಾದಾಗ ಖಂಡಿತ ಆದಷ್ಟು ಬೇಗ ಭೇಟಿಯಾಗೋಣ.ಧನ್ಯವಾದಗಳು.

    ReplyDelete
  13. ಸರ್ಜನರಿಗೆ ನಮೋನ್ನಮಃ. ಅಲ್ಪಾವಧಿಯ ಭೇಟಿಯಲ್ಲಿಯೇ ಆತ್ಮೀಯತೆಯ ಹೊನಲು ಹರಿಸಿ ನಮಗೆಲ್ಲ ನೀವು ಆಪ್ತರಾದಿರಿ, ಅದು ನಿಮ್ಮ ವ್ಯಕ್ತಿತ್ವದಲ್ಲಿರುವ ಚು೦ಬಕ ಶಕ್ತಿ. ನಿಮ್ಮ ಬರಹ ಓದಿ ಖುಷಿಯಾಯ್ತು. ಈ ಪ್ರೀತಿ ವಿಶ್ವಾಸ ಇನ್ನಷ್ಟು ವರ್ಧಿಸಲಿ ಎ೦ದು ಆಶಿಸುವೆ.

    ReplyDelete
  14. ಸರ್,
    ನೀವನ್ನೋದು ನಿಜ...ಅಗಸ್ಟ್ ೧೪ರ ಸ್ನೇಹಕೂಟ ನೀಡಿದ ಸಂತಸ ಅವಿಸ್ಮರಣೀಯ...ಅದನ್ನು ಆಯೋಜಿಸಿದ ನಿಮಗೆ ಋಣಿ.

    ReplyDelete
  15. ತಮ್ಮೆಲ್ಲರ ಸ್ನೇಹ(ಕಾಣದಿದ್ದರೂ ನಮ್ಮಲ್ಲಿರುವ ಸ್ನೇಹ) ಹೀಗೆಯೆ ಮುಂದುವರೆಯಲಿ

    ReplyDelete
  16. ಪ್ರತಿಕ್ರಿಯೆ ನೀಡಿದ ಪರಾಂಜಪೆ,ನಾರಾಯಣ್ ಭಟ್,ಸುಬ್ರಮಣ್ಯ ಮಾಚಿಕೊಪ್ಪಮತ್ತು ಸಾಗರಿಯವರಿಗೆ ಅನಂತ ವಂದನೆಗಳು.ನಮ್ಮೆಲ್ಲರ ಬ್ಲಾಗಿನ ಭಾಂಧವ್ಯ ಅನಂತವಾಗಿರಲಿ ಎಂದು ಹಾರೈಸುತ್ತೇನೆ.ಎಲ್ಲರಿಗೂ ನಮಸ್ಕಾರ.

    ReplyDelete
  17. ಸರ್, ನೀವು ಬಂದ ವಿಷಯ ಪ್ರಕಾಶಣ್ಣ ಮೊನ್ನೆ ಹೇಳಿದರು. ನಾನು ಅದೇ building ನಲ್ಲೆ ಇರೋದು. ಇನ್ನೊಮ್ಮೆ ಬಂದಾಗ ನನ್ನ ಮನೆಗೂ ಬೇಟಿ ಕೊಡಿ.

    ReplyDelete
  18. ಬ್ಲಾಗಿಗರ ಸ್ನೇಹಕ್ಕೆ ಜೈ!

    ReplyDelete
  19. ಸರ್ ನಮಸ್ಕಾರ,
    ಈ ವರ್ಷದ ಆಗಷ್ಟ್ ೧೫ ಮರೆಯಲಾರದ ದಿನ.
    ನಿಮ್ಮ ಪರಿಚಯವಾದದ್ದು ತುಂಬಾ ತುಂಬಾ ಸಂತೋಷ. ನಿಮ್ಮನ್ನ ಸಪ್ನಾ ಬುಕ್ ಹೌಸ್ ಹತ್ತಿರ ಭೇಟಿ ಮಾಡ್ಬೇಕು ಅಂದಾಗ ಸ್ವಲ್ಪ ಹಿಂಜರಿಕೆಯಾಗಿತ್ತು ! ಏನಪ್ಪಾ ಮೂರ್ತಿ ಸರ್ ಜೊತೆ ಮಾತಾಡೋದು ನನಗಿಂತ ವಯಸ್ಸಿನಲ್ಲಿ ಎಷ್ಟೋ ದೊಡ್ಡವರು, ಡಾಕ್ಟರು, ಬಹುಶಃ ಮಾತು ಕಡಿಮೆ, ಮೊದಲನೇ ಸಲ ಭೇಟಿಯಾಗುತ್ತಿರೋದು, ಇದುವರೆಗೂ ಫೋನ್ ನಲ್ಲಿ ಕೂಡ ಮಾತಾಡಿಲ್ಲ,ಹಾಗೆ ಹೀಗೆ ಅಂತ ಯೋಚನೆಗಳು ಆದ್ರೆ ಸರ್ ನೀವು ನೀಡಿದ ಸ್ನೇಹದಪ್ಪುಗೆಲ್ಲಿ ಎಲ್ಲವೂ ಮರೆಯಾಗಿ ಮುಂದಿನ ಸುಮಾರು ಮೂರುವರೆ ಘಂಟೆಗಳು ಕಳೆದದ್ದೇ ಗೊತ್ತಾಗಲಿಲ್ಲ. ಅವತ್ತು ಪರಾಂಜಪೆ ಸರ್ ಭೇಟಿ ನನಗೆ ಅನಿರೀಕ್ಷಿತ ಮತ್ತು ಭಟ್ ಸರ್ ನ್ನ ಕೂಡ ಮೊದಲ ಸಲ ಭೇಟಿಯಾಗಿದ್ದು. ನಿಮ್ಮ ಮತ್ತು ಭಟ್ ಸರ್ ಮಾತುಗಳನ್ನ ಕೇಳ್ತಾ ಕೇಳ್ತಾ ತುಂಬಾ ಖುಷಿಪಟ್ಟೆ. ಆ ಮಾತುಗಳಲ್ಲಿನ ಸಾಹಿತ್ಯ,ಜೋಕು,ಆದ್ಯಾತ್ಮ, ಪ್ರೀತಿ, ಸ್ನೇಹ . . . .ನೀವು ಹೇಳಿದ ಮೆಡಿಕಲ್ ಪ್ರೊಫೆಷನ್ನಿನ ಅನುಭವಗಳು ಆಶ್ಚರ್ಯಕರವಾಗಿದ್ದವು.
    ಪರಾಂಜಪೆ ಸರ್ ರವರ ಮೌನ,ಅವರಿಗೆ ನೀವೇ ಹೇಳಿದ ಮಾತು "You speak less, Because You are Intelligent" ಅನ್ನೋದು ಸತ್ಯ.
    ಸರ್ ನಿಮ್ಮ ಸ್ನೇಹ, ಆತ್ಮೀಯತೆಗೆ ನಾನು ತಲೆ ಬಾಗುವೆ. ನನಗೆ ಎಂಥ ಚೆಂದದ ದಿನವನ್ನ ಕಟ್ಟಿ ಕೊಟ್ಟಿದ್ದೀರ ನೀವು, ಭಟ್ ಸರ್, ಪರಾಂಜಪೆ ಸರ್ ಮತ್ತು ಪ್ರವೀಣ್.
    ಸಮಯ ಕಳೆದಂತೆಲ್ಲ ನಿಮ್ಮೆಲ್ಲರ ಆತ್ಮೀಯತೆಗೆ ನಾನು ಭಾವುಕನಾಗತೊಡಗಿದ್ದೆ. ನಿಮ್ಮ ಉತ್ಸಾಹಕ್ಕೆ ಬೆರಗಾಗಿದ್ದೆ.
    ನಾವೆಲ್ಲರೂ ಒಬ್ಬರಿಗೊಬ್ಬರು ಬೀಳ್ಕೊಟ್ಟ ಮೇಲೆ ಸಂಜೆ ನಾಲ್ಕೈದು ಬಾರಿ ನಿಮ್ಮ ಜೊತೆ ಮಾತಾಡೋಣ ಅಂತ ಪ್ರಯತ್ನಪಟ್ಟು ಸುಮ್ಮನಾಗಿದ್ದೆ,
    ಬರೀ ಬ್ಲಾಗ್ ಗಳಿಂದ ಇಂಥದ್ದೊಂದು ಸ್ನೇಹ, ಆತ್ಮೀಯತೆ ಸಿಗುತ್ತದೆ ಎನ್ನುವ ಕಲ್ಪನೆ ಕೂಡ ಇರಲಿಲ್ಲ. "ಬ್ಲಾಗ್ ಲೋಕಕ್ಕೆ" ಹೃದಯದಿಂದ ಥ್ಯಾಂಕ್ಸ್. ಇಂಥದ್ದೊಂದು ಭೇಟಿಗೆ ಕರೆದ ಗೆಳೆಯ ಪ್ರವೀಣ್ ಗೆ ಥ್ಯಾಂಕ್ಸ್ :-)
    wow. . . "I am really feeling proud, I had time with wonderful personalities".
    ಸರ್ ನಾವೆಲ್ಲಾ ಮತ್ತೆ ಮತ್ತೆ ಒಂದೆಡೆ ಸೇರೋಣ, ಮಾತಾಡೋಣ ಮತ್ತು ಚೆನ್ನಾಗಿ ಊಟ ಮಾಡೋಣ :-) ಇನ್ನು ಯಾವಾಗಾದರೂ ಆ ರಸ್ತೆಗಳಲ್ಲಿ ನೆಡೆಯುವಾಗ ಆಗಷ್ಟ್ ೧೫ರ ನೆನಪುಗಳು ಖಂಡಿತವಾಗಿ ಕೈಹಿಡಿದೆಳೆಯುತ್ತವೆ.
    ನಾನು ಮತ್ತು ಪ್ರವೀಣ್ ನಿಮಗೆ ಹತ್ತಿರವಾದೆವು ಅಂತ ಹೇಳಿದಿರಾ ಇದು ನಮ್ಮ ಅದೃಷ್ಟ ಅಂತ ಹೇಳಿದರೆ ತಪ್ಪಾಗಲಾರದು. ಅಷ್ಟಕ್ಕೂ "ಸರ್ಜನರ" ಸಂಗ ಸಿಗುವುದು ಸುಲಭದ ಮಾತಲ್ಲ, ಆದರೆ ನಮಗೆಷ್ಟು ಸಲೀಸಾಗಿ ಸಿಕ್ಕಿದೆಯಲ್ಲಾ ಎಂಬ ಸಂತೋಷವಿದೆ ಹ್ಹ ಹ್ಹ ಹ್ಹ . ಕೊರಿಕೆಯೊಂದಿಗೆ ಮಾತು ಮುಗಿಸುವೆ "ನಮಗೆ ನಿಮ್ಮ ಆಶೀರ್ವಾದ, ಪ್ರೋತ್ಸಾಹ, ಹಾರೈಕೆಗಳು ಬೇಕು".
    ಮತ್ತೆ ನಿಮ್ಮ ಭೇಟಿಯ ನಿರೀಕ್ಷೆಯಲ್ಲಿ . . . . ನಮಸ್ಕಾರಗಳೊಂದಿಗೆ . . . .
    ನಿಮ್ಮ
    NRK

    ReplyDelete
  20. ಸುಧೀಂದ್ರ ಸರ್;ಆ ದಿನ ತಡವಾಗಿದ್ದರಿಂದ ನಿಮ್ಮ ಭೇಟಿಯಾಗಲಿಲ್ಲ.ನನಗೆ ಚಿತ್ರ ಕಲೆ ಎಂದರೆ ತುಂಬಾ ಇಷ್ಟ.ನಿಮ್ಮನ್ನು ಭೇಟಿಯಾಗಲೇ ಬೇಕು.ಧನ್ಯವಾದಗಳು.

    ReplyDelete
  21. ಸೀತಾರಾಂ ಸರ್ ;ನೀವೂ ಇದ್ದಿದ್ದರೆ ಚೆನ್ನಾಗಿರುತಿತ್ತು.ನನ್ನ ಜೀವನದಲ್ಲಿ ಇದೊಂದು ವಿಶಿಷ್ಟ ಅನುಭವ!

    ReplyDelete
  22. ನಾಗರಾಜ್;ನಿಮ್ಮೆಲ್ಲರ ಆತ್ಮೀಯತೆ ಶಬ್ಧಗಳಿಗೆ ಮೀರಿದ್ದು!ಎಲ್ಲೋ ಓದಿದ ನೆನಪು ;'ಭಾವನೆಗಳ ಪಯಣಕ್ಕೆ ಭಾಷೆ ಒರುಟು ಯಾನ!'ಎಷ್ಟು ನಿಜ ಅಲ್ಲವೇ!ನಮ್ಮೆಲ್ಲರ ಭಾಂಧವ್ಯ ಹೀಗೇ ಮುಂದುವರಿಯಲಿ.ಧನ್ಯವಾದಗಳು.

    ReplyDelete
  23. Nija sir.. :)
    Hope to see you on super sunday :)

    ReplyDelete

Note: Only a member of this blog may post a comment.