Sunday, October 16, 2011

"ಕವಿತೇ....ನೀನೆಲ್ಲಿ ಅವಿತೇ?!!!"

ಕವಿತೆಯೆಂದರೆ 
ಹೀಗೇ ಎಂದು 
ಹೇಳುವುದು ಹ್ಯಾಗೇ ?
ಕವಿತೆ ಎಂದರೆ ......
ಸಂಜೆಗೆಂಪು ಬಾನಲ್ಲಿ 
ಭಗವಂತನ ಕಾಣದ
ಕೈಯ ಸಹಿಯಂತಿರುವ
ಬೆಳ್ಳಕ್ಕಿ ಸಾಲು !
ಸವಿಯಾದೊಂದು ನಿದ್ದೆ ಮಾಡಿ 
ಎದ್ದ ಆಹ್ಲಾದ!
ಕವಿತೆಯೆಂದರೆ......
ಚಿಂತಾಮಣಿಯಲ್ಲಿ 
ಕಂಡ ಆ ಮುಖ!
'ಫಳ್'ಎಂದು ಕ್ಯಾಮೆರಾದ 
ಫ್ಲಾಶ್ ನಂತೆ ಬೆಳಗಿದ 
ಆ ಕಿರು ನಗು!
ಎಲ್ಲೋ ಹಚ್ಚಿದ ಅಗರು 
ಗಾಳಿಯಲ್ಲಿ ಅಲೆ ಅಲೆಯಾಗಿ
ತೇಲಿ ಬಂದು...............,
ನಮ್ಮನ್ನೂ ಅದರೊಡನೆ 
ತೇಲಿಸಿದ ಹಾಗೆ!
ಕವಿತೆಯೆಂದರೆ......
ನಲ್ಲೆಯ ಆಲಿಂಗನ!
ಮೈಸೂರು ಮಲ್ಲಿಗೆಯ ಕಂಪು!
ಕದ್ದು ಸಿಕ್ಕ ಮುದ್ದು!
ಜೋಗದ ಸಿರಿ ಬೆಳಕು!
ಕವಿತೆಯೆಂದರೆ ಹೀಗೇ
ಎಂದು ಹೇಳಲಾಗದು !
ಅದಕ್ಕೇ .................
ಕವಿತೇ..................!!
ನೀನೆಲ್ಲಿ ಅವಿತೇ ?!!
...........ಎನ್ನುವುದು!!!


14 comments:

  1. ಎಲ್ಲಿಂದ ಶುರೂ ಮಾಡಲಿ ಸಾರ್! ಕವಿತೆಯೇ ಹಾಗೇ ಅದು ಅಂದಿನ ನಲ್ಲೆಯ ಪಿಸುಮಾತು.

    ನೀವು ಅಡಿಗರನ್ನು ನೆನಸಿಕೊಳ್ಳುತ್ತಲೇ, ಚಿಂತಾಮಣಿಯ ಲಕ್ಷ್ಮಣ ರಾಯರನ್ನೂ ಉದ್ಧರಿಸಿ. ಕಡೆಗೆ ಗಾಳಿಪಟವೂ ಹಾರಿಸುವ ಮಕ್ತಗಾಮಿನಿ.

    ನಿಮ್ಮದೇ ಮಾತಂತೆ ಹೇಳೆ! ಸ್ವಲ್ಪ ರಸಿಕತನ ಅದಕ್ಕೆ ಮೀರಿದ ತುಂಟತನ...

    ಈ ಕವನ ನಿಮ್ಮ ಕವಿ ಪಟುತ್ವದ ಜೊತೆಗೆ, ನಿಮ್ಮ ಓದಿನ ವಿಸ್ತಾರ, ಗ್ರಹಿಕೆಯ ಆಯಸ್ಕಾಂತತೆ, ಅರ್ಥೈಸಿಕೊಳ್ಳುವ ಮನಸು ಮತ್ತು ಹೊಸಬರ ಬಾಲಚೇಸ್ಟೆಗಳನ್ನೂ ಮೆಚ್ಚುವ ದೊಡ್ಡ ಮನಸ್ಸನ್ನೂ ತೋರಿಸಿಕೊಡುತ್ತದೆ.

    ReplyDelete
  2. ಬದರಿ;ನಿಮ್ಮ ಅದ್ಭುತ ಪ್ರತಿಕ್ರಿಯೆಗೆ ಏನು ಹೇಳುವುದು ಎಂದು ತಿಳಿಯುತ್ತಿಲ್ಲ.ನಿಮ್ಮ ಹೊಗಳಿಕೆಗೆ ಎಷ್ಟು ಅರ್ಹನೋ ತಿಳಿಯದು.ಕವಿತೆ ನಿಮಗೆ ಇಷ್ಟವಾಗಿದೆ.ನನಗೆ ಅಷ್ಟೇ ಸಾಕು.ಎಲ್ಲಕ್ಕಿಂತ ನಿಮ್ಮೆಲ್ಲರ ಪ್ರೀತಿ,ಸ್ನೇಹ ದೊಡ್ಡದು.ಬರುತ್ತಿರಿ.ನಮಸ್ಕಾರ.

    ReplyDelete
  3. ಕವಿತೆ ಎಂದರೆ ಕವಿಯೊಳಗೆ ಅವಿತಿರುವ ಭಾವುಕತೆಯೇನೋ!!!!!
    ಚೆನ್ನಾಗಿದೆ... ಕವಿತೆಯ ಮೇಲಿನ ಕವಿತೆ.
    ಧನ್ಯವಾದ

    ReplyDelete
  4. ಬದರಿಯವರು ಕುವೆಂಪುರವರ ಬೆಳ್ಳಕ್ಕಿ ಸಾಲನ್ನು ಮರೆತು ಬಿಟ್ಟರೇನೊ?
    ಕವಿಗಳನ್ನೇ ನಿಮ್ಮ ಕವನದಲ್ಲಿ ಪೋಣಿಸಿದ್ದೀರಿ. ಸ್ವಾರಸ್ಯಕರವಾಗಿದೆ.

    ReplyDelete
  5. ಕವಿತೆ ಚೆನ್ನಾಗಿದೆ. ಮನಸ್ಸಿನ ಆಲೋಚನೆಗಳು ವಿಸ್ತಾರವಾದಾಗ ಗದ್ಯವಾಗುತ್ತದೆ. ವಿಸ್ತಾರದಲ್ಲಿ ಮೌನವೇ ಹೆಚ್ಚು ಇಷ್ಟವಾದಾಗ ಪದ್ಯವಾಗುತ್ತದೆ. ಉದ್ದುದ್ದು ಹೇಳುವುದನ್ನು ಚುಟುಕಾಗಿ ಹೇಳಿ ಮುಗಿಸಿ ಬಿಡುವುದು. ಅದು ಎಲ್ಲರಿಗೂ ಇಷ್ಟ. ನಿಮ್ಮ ಕವಿತೆ ನನಗೆ ಇಷ್ಟವಾಯಿತು. ಬರೆಯುತ್ತಾ ಇರಿ. ನಾವು ಓದುತ್ತಾ ಇರುತ್ತೇವೆ.

    ReplyDelete
  6. ಕವಿತೆಯೆಂದರೆ ಏನೆಂದು ತಿಳಿಯದಂತೆ ಹೇಳಿದ್ದು ನಮಗೆಲ್ಲಾ ಹಲವಾರು ತಿಳಿದಿರದ ವಿಶಯವನ್ನು ತಿಳಿದಂತೆ.
    ಧನ್ಯವಾದ ಡಾಕ್ಟ್ರೇ...

    ReplyDelete
  7. ಚಿನ್ಮಯ್;ಕವಿತೆಯೆಂದರೆ ಹೀಗಿರಬೇಕೆಂದು ಹೇಳುವುದಕ್ಕೆ ನಮ್ಮಲ್ಲಿ ಕುವೆಂಪು,ಬೇಂದ್ರೆ,
    ಕೆ.ಎಸ್.ನ,ಅಡಿಗರಂತಹ ಸಾಲು ಸಾಲು ಕವಿಗಳ ಪರಂಪರೆಯೇ ಇದೆ!ಕವಿತೆ
    ಎನ್ನುವುದು ಕವಿಯ ಛಾಪು.ಹೇಳುವುದನ್ನು ತನ್ನದೇ ರೀತಿಯಲ್ಲಿ ಚೆಂದವಾಗಿ ಉಪಮೆ,ಪ್ರತಿಮೆಗಳನ್ನು ಬಳಸಿ ಹೇಳುವ ಕಲೆ!ಒಬ್ಬೊಬ್ಬರ ಕವಿತೆಯೂ ಒಂದೊಂದು ಸೊಗಸು!ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  8. ಸುನಾತ್ ಸರ್;ನೀವು ಹೇಳುವುದು ಸರಿ.ಮೊದಲಿಗೆ ಕುವೆಂಪುರವರನ್ನು ಸ್ಮರಿಸಿದ್ದೀನೆ. ಸಾಲುಗಳು ಹೆಚ್ಚುವುದೆಂದು ಹೆಚ್ಚು ಕವಿಗಳನ್ನು ಸೇರಿಸಿರಲಿಲ್ಲ.ಈಗ ನನ್ನ ನೆಚ್ಚಿನ ಕವಿಗಳಾದ ಕೆ.ಎಸ್.ನ.ಮತ್ತು ನಿಸಾರ್ ಅಹಮ್ಮದ್ ಅವರನ್ನೂ ಸೇರಿಸಿದ್ದೇನೆ.

    ReplyDelete
  9. ರವಿ ಮೂರ್ನಾಡು;ಪ್ರತಿಕ್ರಿಯೆಗೆ ಧನ್ಯವಾದಗಳು.ನಿಮ್ಮ ಕವಿತೆಗಳೂ ತುಂಬಾ ಚೆನ್ನಾಗಿರುತ್ತವೆ.ಬರುತ್ತಿರಿ.ನಮಸ್ಕಾರ.

    ReplyDelete
  10. ಅಜಾದ್ ಸರ್;ಕವಿತೆಗಳದ್ದೇ ಒಂದು ಅದ್ಭುತ ಮಾಯಾ ಪ್ರಪಂಚ!ಕನ್ನಡದಲ್ಲಿ ಎಷ್ಟೊಂದು ಒಳ್ಳೆಯ ಕವಿಗಳು!ಅವರ ರಾಶಿ ರಾಶಿ ಕವಿತೆಗಳು!ಜೀವನಪೂರ್ತಿ ಓದಿದರೂ ಮುಗಿಯೋದಿಲ್ಲಾ!ಕನ್ನಡದ ಸಾಹಿತ್ಯಾಸಕ್ತರು ಅದೃಷ್ಟವಂತರೇ ಸರಿ!ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  11. ಸುನಾತ ಸಾರ್, ನನ್ನ ಕಣ್ತಪ್ಪಿಗೆ ಕ್ಷಮೆ ಇರಲಿ.

    ಕುವೆಂಪು ರವರ ಕಂಪು
    ಬೇಂದ್ರೆಯವರ ತಂತಿ
    ಕೆ.ಎಸ್.ಎನ್ ರವರ ಮಲ್ಲಿಗೇ
    ಅಡಿಗರ ಅಡಿಪಾಯ
    ಜಿ.ಪಿ. ರಾಜರತ್ನಂರ ನಂಜಿ
    ಜೇ.ಎಸ್.ಎಸ್ ರ ಕಡಲೂ
    ನಿಸಾರರ ಸಾರ
    ಬಿ.ಆರ್.ಎಲ್ ರ ಪೋಲಿತನ
    ಹೀಗೆ,

    ಎಲ್ಲದರ ಹೂರಣ ಮತ್ತು ಭವ್ಯ ಪರಂಪರೆಯ ಮುಂದುವರಿಕೆ ನಮ್ಮ ಕಾವ್ಯ.

    ರನ್ನತ್ರಯರು, ನವೋದಯ, ನವ್ಯ ಹೀಗೆ ಕನ್ನಡಮ್ಮನಿಗೆ ದಿನಕ್ಕೊಂದು ಅಲಾಕಾರ.

    ನಿಮ್ಮ ಕಾವ್ಯ ಪರಿಷ್ಕರಣೆ ಪ್ರಸ್ತುತ ಮತ್ತು ಪ್ರಶಂಸನೀಯ.

    ReplyDelete
  12. ಕವಿತೆಯ ಮೇಲಿನ ಕವಿತೆ ಚೆನ್ನಾಗಿದೆ ಡಾಕ್ಟ್ರೆ...

    ReplyDelete
  13. ಮೌನ ರಾಗ ಮೇಡಂ;ಪ್ರತಿಕ್ರಿಯೆಗೆ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  14. KAVITEYA MELONDU KAVITE ADARA MELONDU PUTTA KATHE
    EDU ALEYALLA-NAMMANNU CHUMBAKADANTE SELEYUVA SELE.

    ReplyDelete

Note: Only a member of this blog may post a comment.