Sunday, October 30, 2011

"ನನ್ನ ರೊಕ್ಕಾ ನನಗ್ ಕೊಡ್ರೀ !!! "

ನನ್ನ ಸ್ನೇಹಿತ ಹೇಮಚಂದ್ರ ರಾಷ್ಟ್ರೀಕೃತ ಬ್ಯಾಂಕ್ ಒಂದರ ಅಧಿಕಾರಿ.ಕೆಲ ವರ್ಷಗಳ ಹಿಂದೆ ರಾಯಚೂರಿನ ಬಹಳ ಹಿಂದುಳಿದ ತಾಲ್ಲೂಕೊಂದರ ಹಳ್ಳಿಯಲ್ಲಿದ್ದ ಬ್ಯಾಂಕಿನ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ.ಒಂದು ದಿನ ಬ್ಯಾಂಕಿಗೆ ಅಜ್ಜನೊಬ್ಬ ಹಳೆಯ ರುಮಾಲೊಂದರಲ್ಲಿ ತಾನು ಕೂಡಿಟ್ಟಿದ್ದ ಹಣವನ್ನೆಲ್ಲಾ ಕಟ್ಟಿಕೊಂಡು ಬಂದು ,'ಯಪ್ಪಾ......, ನಾ ಸೇರಿಸಿಟ್ಟ ರೊಕ್ಕಾಇದರಾಗ  ಐತಿ.ಇದನ ನೀವು ಜ್ವಾಪಾನ ಮಾಡ್ತೀರೇನ್ ಯಪ್ಪಾ?' ಎಂದು ಕೇಳಿದ.ತಮ್ಮ ಬ್ಯಾಂಕ್ ಇರುವುದೇ ಅದಕ್ಕೆಂದೂ,ಅವನ ಹಣವನ್ನು ಜೋಪಾನವಾಗಿ ಇಡುವುದಲ್ಲದೇ ಅದಕ್ಕೆ ವರುಷಕ್ಕೆಇಷ್ಟು ಅಂತ ಬಡ್ಡಿಯನ್ನೂ ಸೇರಿಸಿಕೊಡುವುದಾಗಿ ಬ್ಯಾಂಕಿನವರು ಹೇಳಿದರು.'ಯಪ್ಪಾ ನನಗ ಬೇಕಂದಾಗ ನನ ರೊಕ್ಕಾ ನನಗ ಕೊಡ್ತೀರೆನ್ರೀ?'ಎಂದು ಎರೆಡೆರಡು ಬಾರಿ ಕೇಳಿಕೊಂಡ ಮೇಲೆ ತನ್ನ ಗಂಟನ್ನು ಬಿಚ್ಚಿ ಟೇಬಲ್ ಮೇಲಿಟ್ಟ.ಅದರಲ್ಲಿ ಐದು,ಹತ್ತು,ಇಪ್ಪತ್ತರ ಹಲವು ನೋಟುಗಳೂ,ಐವತ್ತು ನೂರರ ಕೆಲವು ನೋಟುಗಳೂ, ಒಂದು ರಾಶಿ ಚಿಲ್ಲರೆ ಹಣವೂ ಸೇರಿ ಎಲ್ಲಾ ಒಟ್ಟು ಐದು ಸಾವಿರದಷ್ಟು ಹಣ ಇತ್ತು.ಅದು ಅವನು ಬಹಳ ವರ್ಷಗಳಿಂದ ಕೂಡಿಟ್ಟ ಹಣವಾಗಿತ್ತು.ಅದನ್ನು ಅವನ ಮುಂದೆಯೇ ಎಣಿಸಿ,ಅರ್ಜಿಯಲ್ಲಿ  ಅವನ ಹೆಬ್ಬೆಟ್ಟು ಒತ್ತಿಸಿ ,ಐದು ಸಾವಿರಕ್ಕೆ ಒಂದು ವರ್ಷದ ಒಂದು  fixed deposit ಮಾಡಿ, ಅವನ ಕೈಯಲ್ಲಿ ಅದರ ದಾಖಲೆ  ಪತ್ರವನ್ನು ಕೊಟ್ಟು ಕಳಿಸಿದರು.ಆರು ತಿಂಗಳ ನಂತರ ಅಜ್ಜ ತನ್ನ ಮಗಳ ಮದುವೆ   ಇರುವುದರಿಂದ ತನಗೆ ಹಣದ ಅವಶ್ಯಕತೆ ಇರುವುದೆಂದೂ,ತನ್ನ ಹಣವನ್ನು ವಾಪಸ್  ತನಗೆ ಕೊಡಬೇಕೆಂದೂ ಕೇಳಿಕೊಂಡ.ಒಂದು ವರ್ಷಕ್ಕೆ ಎಫ್.ಡಿ.ಇಟ್ಟಿರುವುದರಿಂದ ಬಡ್ಡಿ ಹಣ ಪೂರ್ತಿ ಬರುವುದಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ಹೇಳಿದ್ದನ್ನು ತಪ್ಪಾಗಿ ಅರ್ಥ ಮಾಡಿಕೊಂಡ ಅಜ್ಜ "ನನ್ ರೊಕ್ಕಾ ನನಗ ಪೂರಾ ಕೊಡಂಗಿಲ್ಲಾ  ಅಂದ್ರ ಏನ್ರೀ........? ಶಾಲೀ ಕಲ್ತಿಲ್ಲಾ ಅಂತಾ ಮೋಸಾ ಮಾಡ್ತೀರೇನು ?"ಎಂದು ಕೂಗಾಡಲು ಶುರು ಹಚ್ಚಿಕೊಂಡ.ಅವನನ್ನು ಒಳಗೆ ಕರೆದು ಮ್ಯಾನೇಜರ್ ಅವರ ಚೇಂಬರ್ ನಲ್ಲಿ ಕೂರಿಸಿ , ಅವನ ಅಸಲು ಹಣ ಐದು ಸಾವಿರವನ್ನು ಪೂರ್ತಿ ಕೊಡುವುದಾಗಿಯೂ ,ಬಡ್ಡಿಯ ಹಣ ಸ್ವಲ್ಪ ಕಡಿಮೆ ಬರುವುದೆಂದೂ ಅವನಿಗೆ ತಿಳಿಸಿ ಹೇಳಬೇಕಾದರೆ ಅಧಿಕಾರಿಗಳಿಗೆ ಸಾಕು ಸಾಕಾಯಿತು. ಅವನು ಒಪ್ಪಿದ ಮೇಲೇ ರಸೀದಿಗಳಿಗೆ ಅವನ ಹೆಬ್ಬೆಟ್ಟು ಒತ್ತಿಸಿಕೊಂಡುಅಸಲು ಐದು ಸಾವಿರ ( ಐದುನೂರರ ಹತ್ತು ನೋಟುಗಳು) ಮತ್ತು ಬಡ್ಡಿ ಹಣ  ನಾನ್ನೂರು ಚಿಲ್ಲರೆ  ಅವನ ಮುಂದಿಟ್ಟು ತೆಗೆದು ಕೊಂಡು ಹೋಗುವಂತೆ ತಿಳಿಸಿದರು.ಅಜ್ಜ ಆ ಹಣ ಮುಟ್ಟಲು ಸುತರಾಂ ಒಪ್ಪಲಿಲ್ಲ."ಇದು ನಾ ಕೊಟ್ಟ ರೊಕ್ಕ ಅಲ್ರೀ! ಈ ರೊಕ್ಕ ಬ್ಯಾಡ್ರೀ.......,ನಾ ಕೊಟ್ಟ  ರೊಕ್ಕನ  ನನಗ ವಾಪಸ್  ಕೊಡ್ರೀ ಸಾಹೇಬ್ರಾ  !"ಎಂದು ಗಂಟು ಬಿದ್ದ.ಇದು ಅವನು ಕೊಟ್ಟ ಹಣದಷ್ಟೇ ಮೊತ್ತದ ಹಣವೆಂದೂ,ಎಲ್ಲಾ ಒಂದೇ ಎಂದೂ ಎಷ್ಟು ತಿಳಿಸಿ ಹೇಳಿದರೂ ಅಜ್ಜ "ನಾ ಕೊಟ್ಟ ರೊಕ್ಕ ಎಲ್ಲಿ ಹೋತು?ಜ್ವಾಪಾನ ಮಾಡತೀವಿ ಅಂತ ತಗಂಡರಲ್ರೀ ! ನಮ್ಮ ರೊಕ್ಕ ನಮಗಾ ಕೊಡಂಗಿಲ್ಲಾ  ಅಂದ್ರ ಹ್ಯಾಂಗ್ರೀ ?"ಎಂದು ಕೂಗಾಡುತ್ತಾ ಹೋಗಿ ಊರ ಗೌಡನನ್ನು ಕರೆದುಕೊಂಡು ಬಂದ.ಊರ ಗೌಡ ವ್ಯವಹಾರಸ್ಥ.ಬ್ಯಾಂಕ್ ಅಧಿಕಾರಿಗಳು ನಡೆದದ್ದನ್ನು ತಿಳಿಸಿದ ಮೇಲೆ ಅವನಿಗೆ ಎಲ್ಲಾ ಅರ್ಥವಾಯಿತು. ಅವನು ಅಧಿಕಾರಿಗಳಿಗೆ ಕಣ್ಣು ಸನ್ನೆ ಮಾಡಿ "ಇದು ಬ್ಯಾಡ್ರೀ ಸರ್ ,ಹತ್ತು ರೂಪಾಯಿಯ ಹೊಸಾ ನೋಟು ಬಂದವಲ್ಲಾ,ಅವನ್ನು ತರ್ರೀ "ಎಂದ.ಅಷ್ಟೂ ಹಣಕ್ಕೂ ಹತ್ತು ರೂಪಾಯಿಗಳ ಹೊಸ ನೋಟು ಕೊಟ್ಟರು.ಗೌಡ ಅಜ್ಜನ ಕಡೆ ತಿರುಗಿ "ಅಜ್ಜಾ ....,ನೀ ಕೊಟ್ಟ ಹಣ ಎಲ್ಲ ಹಳೇದಾಗಿದ್ವು .ಸ್ವಚ್ಛ ಆಗಿ ಬರಲಿಕ್ಕೆ ದಿಲ್ಲಿಗೆ ಹೊಗ್ಯಾವೆ.ಅವು ಬರಲಿಕ್ಕೆ ಇನ್ನೂ  ಒಂದು ವರ್ಷ ಹಿಡೀತೈತಿ.ಅಷ್ಟರ ಮಟ ನೀ ತಡೀತೀಯೇನು?ಆಗಂಗಿಲ್ಲಾ !ಹೌದಲ್ಲೋ?  ಇವು  ಸ್ವಚ್ಛ ಆಗಿ ಈಗಷ್ಟೇ ಬಂದ ಹೊಸ ರೊಕ್ಕ.ನಿನಗಂತಾ  ಕೊಡಿಸೀನಿ. ಬಾಯಿ ಮುಚ್ಕಂಡು ತಕ್ಕಂಡು ಹೋಗು"ಎಂದ.ಗೌಡ ಹೇಳಿದ ಮಾತು ಅಜ್ಜನಿಗೆ ಒಪ್ಪಿಗೆ ಆಯಿತು.ಹತ್ತರ ಹೊಸ ನೋಟುಗಳನ್ನು ಅಜ್ಜ ತನ್ನ ರುಮಾಲಿನಲ್ಲಿ ಕಟ್ಟಿಕೊಂಡು ಸಂತಸದಿಂದ "ನೀ ಇದ್ದೀ ಅಂತ ಎಲ್ಲಾ ಸುಸೂತ್ರ ಆತು ನೋಡು ಗೌಡ"ಎಂದು ಗೌಡನ ಉಪಕಾರವನ್ನು ಕೊಂಡಾಡುತ್ತಾ  ಹೋದನಂತೆ. ಇಷ್ಟು ಹೇಳಿ ಹೇಮಚಂದ್ರ "ಹೇಗಿದೆ ನಮ್ಮ ಹಳ್ಳಿ ಅನುಭವ?"ಎಂದ.ನಾನು ಮಾತು ಹೊರಡದೆ ದಂಗಾಗಿದ್ದೆ!ಆಗ ಮನಸ್ಸಿನಲ್ಲಿ ಮೂಡಿದ ಪ್ರಶ್ನೆ...."ಹೀಗೂ ...ಉಂಟೆ !"

17 comments:

  1. ಡಾಕ್ಟ್ರೆ...

    ಮುಗ್ಧತೆಗಳು ಬಹಳಷ್ಟು ಬಾರಿ ಪೇಚಿಗೆ ಸಿಲುಕಿಸಿ ಬಿಡುತ್ತವೆ.. ಅಲ್ಲವೆ?
    ಅಜ್ಜನ ಮುಗ್ಧತೆ ಇಷ್ಟವಾಯಿತು...

    ನಿಮ್ಮ ಅನುಭವಮಾಲೆಗಳು ಇನ್ನಷ್ಟು ಬರಲಿ... ಜೈ ಹೋ !!

    ReplyDelete
  2. ಗ್ರಾಮೀಣ ಭಾಗದ ಒಬ್ಬ ಅನಕ್ಷರಸ್ತ ಮುದುಕನ ಕಥೆ ಚೆನ್ನಾಗಿದೆ. ಮನಮುಟ್ಟುವ ನಿರೂಪಣೆ ಸರ್ .ರಾಜ್ಯೋತ್ಸವ ಶುಭಾಷಯಗಳು ತಮಗೆ.

    ReplyDelete
  3. ಗ್ರಾಮೀಣ ಬ್ಯಾಂಕಿನ ಅಧಿಕಾರಿಗಳ ಪರಿಪಾಟಲು ಬಹಳ ಸೊಗಸಾಗಿ ಚಿತ್ರಿಸಿದ್ದೀರ. ಅಜ್ಜಿಯ ತನ್ನದೇ ಹಣದ ವಾಪಸಾತಿಗೆ ಒತ್ತಾಯಿಸತೊಡಗಿದಾಗ ಅವರು ಎಂತಹ ಪರಿಪಾಟಲು ಪಟ್ಟಿರಬಹುದು ಎನ್ನುವುದು ತಮಾಷೆ ಪ್ರಸಂಗ.

    ಇಲ್ಲಿ ಊರ ಗೌಡರ ಪಾತ್ರ, ಹಳ್ಳಿಗಾಡಿನಲ್ಲಿ ಊರ ಗೌಡರ ಮಾತಿಗಿರುವ ಗೌರವವನ್ನು ಸನ್ನಿವೇಶ ಸಮೇತ ವಿವರಿಸಿದ್ದೀರ.

    ನಮ್ಮ ಹಳ್ಳಿಯ ಬ್ಯಾಂಕಿನಲ್ಲಿ ಒಡವೆ ಲಾಕರಿನಲ್ಲಿ ಇಟ್ಟು ಹೋದ ಹಳ್ಳಿಯವನೊಬ್ಬ, ಸುಮಾರು ದಿನಗಳ ನಂತರ ಮ್ಯಾನೇಜರನ್ನು ಭೇಟಿಯಾಗಿ, "ಬರೋ ಶುರವಾರ ಮಗಳ ಮದುವೆ ಐತಿ. ಒಡವಿ ಪಾಲಿಷ್ ಮಾಡಿ ಮದುವೆ ಮನೆಗೆನೇ ತಂದ್ಕೊಡ್ರೀ’ ಅಂತ ಪೀಡಿಸಿದನಂತೆ.

    ಒಳ್ಳೇ ಪ್ರಸಂಗ ಚಿತ್ರಿಸಿಕೊಟ್ಟಿದ್ದೀರಿ. ನಿಮ್ಮ ನೆನಪಿನ ಬುತ್ತಿಯಿಂದ ಇನ್ನಷ್ಟು ಮೊಗೆದುಕೊಡಿ.

    ReplyDelete
  4. ಹಹಹ ಪಾಪ, ಮುಗ್ಧ ಜನರು ... ಈ ರೀತಿ ಅನುಭವಗಳು ಬಹಳಷ್ಟು ನೆಡೆಯುತ್ತವೆ...

    ReplyDelete
  5. ಮುಗ್ದತೆಯ ಪರಮಾವಧಿ., ತಪ್ಪಲ್ಲ ಬಿಡಿ ! ಈಗಲೋ ಬ್ಯಾಂಕು ಎಂದರೇನು ಅಂಥ ತಿಳಿಯದ ತುಂಬಾ ಜನರಿದ್ದಾರೆ. ನನ್ನ ಕೆಲಸದ ವೇಳೆಯಲ್ಲಿ ಇಂತಹ ಎಷ್ಟೋ ಜನರನ್ನ ಭೇಟಿಯಾಗುತ್ತಿರುತ್ತೇನೆ. ಒಳ್ಳೆ ಲೇಖನ ..

    ReplyDelete
  6. ಹಳ್ಳಿಯ ಅಜ್ಜನ ಮುಗ್ಧತೆಯನ್ನು ಎತ್ತಿ ತೋರಿಸುವ ಲೇಖನ ಚೆನ್ನಾಗಿ ಬರೆದಿದ್ದೀರಿ ಸರ್,
    ಅಭಿನ೦ದನೆಗಳು

    ReplyDelete
  7. hha hha.... bareda riti chennaagide sir.....

    ishTa aaytu......

    ReplyDelete
  8. NANNA ANUBHAVAKKE AKSHARA ROOPA KOTTA NIMAGE DHANYAVADAGALU

    ReplyDelete
  9. ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಅನಂತ ಧನ್ಯವಾದಗಳು.ಬರುತ್ತಿರಿ.ನಮಸ್ಕಾರ.

    ReplyDelete
  10. ಹಹಹ....ಬಹಳ ಚನ್ನಾಗಿದೆ,...ಡಾಕ್ಟ್ರೇ..ಇದು ಹಳ್ಳಿ ಮುದ್ಕನ ಮುಗ್ಧತೆ ಆದರೆ ನನಗೆ ಓದು ಬಲ್ಲ ಅಂಗಡಿಯವನ ದಡ್ದತನದ ನೆನಪಾಗುತ್ತೆ...ಕುವೈತಿಂದ ಮದ್ರಾಸಲ್ಲಿ ಏರಪೋರ್ಟಲ್ಲಿ ಇಳಿದಾಗ ಬೆಳಗಿನ ಜಾವ ೫.೦೦,ಕ್ಕೆ ಇಳಿದು ಡೊಮೆಸ್ಟಿಕ್ ಸೆಕ್ಟರ್ ಗೆ ಬಂದಾಗ ಸುಮಾರು ೭.೦ ನನ್ನ ಮಗಳು ಮತ್ತು ಮಿಸಸ್ ಗೆ ತಿಂಡಿಬೇಕಾಗಿತ್ತಂತೆ..ಸರಿ ನನ್ನಲ್ಲಿ ದೀನಾರು ಮಾತ್ರ ಇದ್ದದ್ದು...ಎಕ್ಸ್ ಚೇಂಜ್ ಮಾಡ್ಸೋದು ಮರ್ತಿದ್ದೆ (ಇಂಟರ್ ನ್ಯಾಶನಲ್ ಸೆಕ್ಟರ್ ಬಳಿ ಇರುತ್ತೆ),,ಸರಿ ಚಹಾ ಅಂಗಡಿಯವನಿಗೆ ಒಮ್ದು ಪ್ಲೇಟ್ ಇಡ್ಲಿ, ಒಮ್ದು ಸ್ಯಾಂಡ್ವಿಚ್, ಎರಡು ಕಾಫಿ ಗೆ ಎಷ್ಟು ಅಂದೆ ಅವ ೨೦೦ ಅಂದ...ನಾನಂದೆ ಎರಡು ದೀನಾರ್ ಕೊಡ್ತೇನೆ ನನಗೆ ಚಿಲ್ಲರೆ ಬೇಡ ಎರ್ಡು ಪ್ಲೇಟ್ ಇಡ್ಲಿ, ಒಮ್ದು ಸಾಂಡ್ ವಿಚ್, ಎರಡು ಕಾಫಿ ಕೊಡು ಅಂದೆ...(ಸುಮಾರು ೨೪೦ ರೂಪಾಯಿ...ಆದ್ರೆ ೨ ದೀನಾರು ಸುಮಾರು ೩೧೦ ರೂಪಾಯಿತ್ತು ಆಗ)...ಎಷ್ಟು ಕೇಳಿದ್ರೂ ಕೊಡ್ಲಿಲ್ಲ ಅವ,,, ಅವನಿಗೆ ಬೇರೆಯವರೂ ಹೇಳಿದ್ರು..ಸ್ವಲ್ಪ ಹೊತ್ತಿನ ನಂತರ ಯಾರನ್ನಾದ್ರೂ ಕಳುಹಿಸಿ ಇಂಟರ್ ನ್ಯಾಶನಲ್ ಅರೈವಲ್ ಸೆಕ್ಶನ್ ಲಿ ಚೇಂಜ್ ಮಾಡಿಸ್ಕೋ ನಿನಗೆ ಏನಿಲ್ಲ ಅಂದ್ರೂ ೫೦-೬೦ ರೂಪಾಯಿ ಲಾಭ ಅಮ್ದ್ರೂ ಕೇಳಲಿಲ್ಲ..ಅಲ್ಲೇ ಇದ್ದ ಇನ್ನೊಬ್ಬ ಸಹ ಪ್ರಯಾಣಿಕ ಕೊಟ್ರು ನನ್ನ ಬಳಿ ೨ ದಿನ ತಗೊಂಡು...ಹಹಹಹಹ್

    ReplyDelete
  11. ಆಜಾದ್ ಸರ್;ನಿಮ್ಮ ಅನುಭವ ತುಂಬಾನೇ ಚೆನ್ನಾಗಿದೆ.ಹಂಚಿಕೊಂಡಿದ್ದಕ್ಕೆ ಅನಂತ ಧನ್ಯವಾದಗಳು.ನಮಸ್ಕಾರ.

    ReplyDelete
  12. ವೈದ್ಯರೇ, ನಗಲೂ ಆರದ ಅಲ್ಲೂ ಆಗದ ಸ್ಥಿತಿಗೆ ಹಚ್ಚಿದಿರಿ! ಹಳ್ಳಿಯ ಮುಗ್ಧನ ಮನಸ್ಸು ತನ್ನ ಹಣವನ್ನು ಮಾತ್ರ ಬಯಸಿತು, ಬಡ್ಡಿ ಬೇಡದ ಸರಳ ಬದುಕು-ಬಡ್ಡಿಯಿಂದಲೇ ನಡೆವ ಬ್ಯಾಂಕು ನೋಡಿ ನಗು ಬಂತು. ಅದರಲ್ಲೂ ಹಳೆನೋಟು ಸ್ನಾನಕ್ಕೆ ದಿಲ್ಲಿಗೆ ಹೋದ ಮಾತು ಕೇಳಿ ಜಾಸ್ತಿನೆ ನಗಬೇಕಾಯ್ತು. ಘಟನೆ ಬಹಳ ಮಜವಾಗಿದೆ; ಪ್ರಸ್ತುತಿ ಪಸಂದಾಗಿದೆ, ನಮಸ್ಕಾರ.

    ReplyDelete
  13. ಬ್ಯಾಂಕ್ ನಲ್ಲಿ ಈ ತರಹ ಬಹಳಷ್ಟು ಪ್ರಸಂಗಗಳು ಆಗುತ್ತಿರುತ್ತವೆ....ಒಮ್ಮೆ ಒಬ್ಬ ಆಸಾಮಿ ಚೆಕ್ ನ ಮೇಲೆ ಸ್ವಂತಕ್ಕೆ ಅಂತ ಬರೆಯುವ ಬದಲು ಸೊಂಟಕ್ಕೆ ಎಂದು ಬರೆದು ತಂದಿದ್ದ....ಅಂಗಾಂಗಗಳಿಗೂ ಚೆಕ್ಕೇ ಎಂದು ನಾವು ನಕ್ಕಿದ್ದೋ ನಕ್ಕಿದ್ದು....

    ReplyDelete
  14. ತುಂಬಾ ಪೇಚಿನ ಪ್ರಸಂಗಗಳು.... ಮುಗ್ದತೆ... ಗೌಡರು....ತುಂಬಾ ಚೆನ್ನಾಗಿ ಬರೆದಿದ್ದೀರಿ ಜೊತೆಗೆ ಪ್ರತಿಕ್ರಿಯೆಯಲ್ಲಿ ಅಜ್ಯಾದರ ಪೂರಕ ಅನುಭವ...

    ReplyDelete
  15. @ವಿ.ಆರ್.ಭಟ್;ಪ್ರತಿಕ್ರಿಯೆಗೆ ಧನ್ಯವಾದಗಳು.
    @ಸಿಂಧು ಚಂದ್ರ;"ಸೊಂಟಕ್ಕೆ ಚೆಕ್!"ಚೆನ್ನಾಗಿದೆತುಂಬಾ ನಗುಬಂತು.ಪ್ರತಿಕ್ರಿಯೆಗೆ ಧನ್ಯವಾದಗಳು.
    @ಸೀತಾರಾಮ್ ಸರ್;ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete

Note: Only a member of this blog may post a comment.