Tuesday, June 22, 2010

'ಲೈವ್-ಬ್ಯಾಂಡ್ 'ಹುಡುಗಿಯರು

ಎಲ್ಲಿಂದಲೋ ---------,
ಹೊಟ್ಟೆಯ ಪಾಡಿಗೆಂದು ,
ಕಾಳನರಸಿ ಬಂದು ,
ಜಾಲಕ್ಕೆ  ಬಿದ್ದ ,
ವಲಸೆ ಹಕ್ಕಿಗಳು ನಾವು!


ನಿಮ್ಮ ತುಂಬಿದ ---,
ಗುಡಾಣ ಹೊಟ್ಟೆಗಳ ,
ಅಮಲಿಗೆ ,ತೆವಲಿಗೆ ,
ಗರಿಬಿಚ್ಚಿ ಕುಣಿದು ,
ನಿಮ್ಮನ್ನು ನಲಿಸಬೇಕಾಗಿ 
ಬಂದದ್ದು --------,
ನಮ್ಮ ಅನಿವಾರ್ಯತೆ!

ಈಗ-- ,ಇಲ್ಲಿ---, ಹೀಗೆ,
ಪೋಲೀಸ್ ಠಾಣೆಯಲ್ಲಿ,
ನಡುರಾತ್ರಿಯಲ್ಲಿ ನಡುಗುತ್ತಾ ,
ಒಳಗೊಳಗೇ ಕುದಿಯುತ್ತಾ,
ಟಿ.ವಿ.ಕ್ಯಾಮರಾಗಳ ಮುಂದೆ 
ಮುಖ ಮುಚ್ಚಿ ಕೂತಿದ್ದೇವೆ !
ಅನಾಥರಂತೆ ----------!


ತಿಂದುಂಡು ,ಕುಡಿದು ,
ನಮ್ಮೊಡನೆ ಕುಣಿದು ,
ಮಜಾ ,ಮಸ್ತಿ, ಮುಗಿಸಿ ,
ಬಾರಿನ ಹಿತ್ತಿಲ ಬಾಗಿಲಿಂದ ,
ನಿಮ್ಮದು 'ಗ್ರೇಟ್ ಎಸ್ಕೇಪ್ '!
ನಿಮ್ಮ ನಿಮ್ಮ ಮನೆಗಳಲ್ಲಿ 
ಮಡದಿ ಮಕ್ಕಳೊಡನೆ 
ಬೆಚ್ಚಗೆ ಮಲಗಲು !
ಮರ್ಯಾದಸ್ಥರಂತೆ !
 

26 comments:

  1. ಸರ್,
    ತುಂಬಾ ಚೆನಾಗಿ ಬರೆದಿದ್ದೀರಿ... ಜೀವನದ ಸಮಸ್ಯಗಳನ್ನು ತೀರಿಸಲು ಹಿಡಿದಿರುವ ಆವರ ದಾರಿ.... ಅಯ್ಯೋ ಎನಿಸುತ್ತದೆ... ಮನ ಮುಟ್ಟುವ ಸಾಲುಗಳು

    ReplyDelete
  2. Oh !. This is superb. ಹಿಂದೊಮ್ಮೆ ಮಾನ್ಯ ವಿ.ಆರ್. ಭಟ್ಟರು ಇದೇ ಬ್ಲಾ^ಗಿನಲ್ಲಿ ಒಂದು ಕಾಮೆಂಟ ಹಾಕಿದ್ದರು.." ಕವನ ಕೆಲ್ಸ ಮಾಡ್ಬೇಕು " ಅಂತ. ನಿಮ್ಮ ಎಲ್ಲಾ ಕವನಗಳು ವಸ್ತುನಿಷ್ಠ ಮತ್ತು ಅರ್ಥಪೂರ್ಣವಾಗಿರುತ್ತವೆ. ಸರಳತೆ ಮತ್ತೊಂದು +ಅಂಶ. ಧನ್ಯವಾದಗಳು.

    ReplyDelete
  3. ಮನ ಕಲಕುವ ಕವನ...

    ReplyDelete
  4. ಮಾನ್ಯ ಸುಬ್ರಮಣ್ಯ ಸರ್;ನಮಸ್ಕಾರಗಳು.ಕೆಲ ದಿನಗಳ ಹಿಂದೆ ಬಾರ್ ಒಂದರ ಮೇಲೆ ರೈಡ್ ಆದಾಗ ನೋಡಿದ ದೃಶ್ಯ ಮನ ಕಲಕಿ ಕವನದ ರೂಪ ಪಡೆದಿದೆ.ಕೆಲವು ಹುಡುಗಿಯರು ತಮ್ಮ ಸ್ವಂತ ನಿರ್ಧಾರದಿಂದ ಈ ಕೆಲಸ ಮಾಡುತ್ತಿರಬಹುದು.ಆದರೆ ಬಹಳಷ್ಟು ಜನ ಅಸಹಾಯಕತೆಯಿಂದ ಈ ಜಾಲದಲ್ಲಿ ಸಿಕ್ಕಿದವರು.ಅವರ ಬಗ್ಗೆ ನಮಗೆ ಕನಿಷ್ಟ ಅನುಕಂಪವಾದವೂ ಬೇಡವೇ?

    ReplyDelete
  5. ಮಾನಸ ನಮಸ್ಕಾರ ;ನಾ ಹೇಳಬೇಕೆನ್ನುವುದನ್ನು ನನ್ನ ಕವಿತೆ ಹೇಳುತ್ತದೆ.ಮನಸ್ಸಿಗೆ
    ಬೇಸರ.ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  6. ನಾರಾಯಣ್ ಭಟ್ ಸರ್ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  7. ಗುರು ಸರ್ ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  8. ಒಳ್ಳೆಯ ಕವನ ಸರ್ . ಯಾರದೋ ತೆವಲಿಗೆ ಯಾರದೋ ಬಲಿ..

    ReplyDelete
  9. ಸುಮ ಮೇಡಂ ;ನಮಸ್ಕಾರ.ಇಂತದ್ದನೆಲ್ಲಾ ನೋಡಿಯೂ ಹುಡುಗಿಯರ ಮೇಲೆಯೇ ಎಲ್ಲಾ ತಪ್ಪನ್ನೂ ಹೊರಿಸುವವರು ಇನ್ನೂ ಇದ್ದಾರೆ ಎನ್ನುವುದೇ ಬೇಸರದ ಸಂಗತಿ.ಪ್ರತಿಕ್ರೆಯೆಗೆ ಧನ್ಯವಾದಗಳು.

    ReplyDelete
  10. ಡಾ ಸರ್,
    ಸತ್ಯದ ಮಾತುಗಳು.. ಮುಂಬೈ ಯಲ್ಲಿ ಕೆಲಸ ಮಾಡ್ತಾ ಇದ್ದಾಗ, ಬೆಳಗಿನ ತನಕ ರಸ್ತೆ ಕೆಲಸ ಮಾಡಬೇಕಾಗಿ ಬರುತ್ತಿತ್ತು..... ತುಂಬಾ ಸಲ ನಾನು ಲೈವ್ ಬ್ಯಾಂಡ್ ಹುಡುಗಿಯರನ್ನು ನೋಡಿದ್ದೇನೆ..... ಪಾಪ ಎನಿಸುತ್ತಿತ್ತು.......... ಈ ಬಗ್ಗೆ ಬರೆಯುತ್ತೇನೆ ಎಂದಾದರೂ...... ತುಂಬಾ ಒಳ್ಳೆಯ ಕವನಬರೆದಿದ್ದೀರಿ ಸರ್...... ಧನ್ಯವಾದ.....

    ReplyDelete
  11. ಕವನ ಬಹಳ ಚೆನ್ನಾಗಿದೆ ಸರ್.

    ReplyDelete
  12. ದಿನಕರಮೊಗೇರ;ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.ಸಮಾಜದಲ್ಲಿ ಅನೈತಿಕ ಚಟುವಟಿಕೆಗಳಿಗೆ ಯಾವುದೇ ರೀತಿಯಲ್ಲಿಯೂ ಬೆಂಬಲ ಇರಬಾರದು.ಅದರ ಬಗ್ಗೆ ಎರಡು ಮಾತಿಲ್ಲ.ಆದರೆ ತಪ್ಪನ್ನು ಅಸಹಾಯಕ ವರ್ಗವೊಂದರ ಮೇಲೇ ಹೊರಿಸುವುದು ಎಷ್ಟು ಸರಿ ಎನ್ನುವುದು ನನ್ನ ಪ್ರಶ್ನೆ.ಆ ರೀತಿಯ ಕೆಲಸಗಳಿಗೆ ಅವರನ್ನು ಪ್ರೆರೆಪಿಸುವವರ ತಪ್ಪೂ ಇದೆಯಲ್ಲವೇ? ಈ ಕವನ ರೈಡ್ ಆದ ಹುಡುಗಿಯರ ದೃಷ್ಟಿಯಿಂದಲೂ ಆ ಘಟನೆಯನ್ನು ನೋಡುವ ಒಂದು ಪ್ರಯತ್ನ.

    ReplyDelete
  13. ಧನ್ಯವಾದಗಳು ವಸಂತ್.ನಿಮ್ಮ ಪ್ರತಿಕ್ರಿಯೆಗಳು ಇನ್ನು ಮುಂದೆಯೂ ಬರುತ್ತಿರಲಿ.ನಮಸ್ಕಾರ.

    ReplyDelete
  14. Creativity;ಯವರಿಗೆ ನಮಸ್ಕಾರಗಳು.ಹೆಚ್ಚೇನೂ ಮಾಡಲಾಗದಿದ್ದರೂ ಹಿಂದೆ ಮುಂದೆ ನೋಡದೆ ಅವರನ್ನಷ್ಟೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದನ್ನು ಬಿಡೋಣ.It is easy blaming people than to understand them.The least you can do is to be sympathetic and see their point of view.ಧನ್ಯವಾದಗಳು.

    ReplyDelete
  15. ಚೆ೦ದದ ಕವನ. ಲೈವ ಬ್ಯಾ೦ಡ ಹುಡುಗಿಯರ ಮನದಾಳವನ್ನೆ ಹೇಳಿದ್ದಿರಾ..

    ReplyDelete
  16. LIVE BAND HUDUGIYARIGE SADAA JAARUVA CHINTE,
    KUNISUVAVARIGE SAKHAT SUKHADA KANTHE.ANIVARYATEYANNU -ANIVARYAVAGI OPPIKOLLABEKADA STHITHIYALLIDDEVE.

    ReplyDelete
  17. ತುಂಬಾ ಅರ್ಥಪೂರ್ಣವಾದ ಕವನ.
    "ಹಣ್ಣು ತಿಂದೋನು ನುಸುಳಿದ ಸಿಪ್ಪೆ ಸಿಕ್ಕಿಕೊಂಡಿತು"

    ReplyDelete
  18. ಕವನ ತುಂಬಾ ವಾಸ್ತವವಾಗಿದೆ.

    ReplyDelete
  19. ಧನ್ಯವಾದಗಳು ಸೀತಾರಾಂ ಸರ್.ಸುತ್ತ ಮುತ್ತಲ ವಿದ್ಯಮಾನಗಳಿಗೆ ಸ್ಪಂದಿಸದಿರುವುದು ಕಷ್ಟವೇ ಸರಿ.'ಅಪರಾಧಿಗಳ'ಪಟ್ಟ ಹೊತ್ತವರ ದೃಷ್ಟಿಯಲ್ಲೂ ವಿದ್ಯಮಾನಗಳ ಅವಲೋಕನದ ಒಂದು ಪ್ರಯತ್ನ ಮಾಡಿದ್ದೇನೆ.ನಮಸ್ಕಾರ.

    ReplyDelete
  20. ಹೆಮಚಂದ್ರ;ಪ್ರತಿಕ್ರಿಯೆಗೆ ಧನ್ಯವಾದಗಳು.ಸಾಕಷ್ಟು ಒಳ ಸುಳಿಗಳಿರುವ ಜಟಿಲ ಸಾಮಾಜಿಕ ಪ್ರಶ್ನೆ.ಇದು ಪ್ರಶ್ನೆಯಾಗಿಯೇ ಉಳಿದುಬಿಡುತ್ತದೆಯೋ ಏನೋ.ಕೆಲವೊಮ್ಮೆ ನಮ್ಮದೆಲ್ಲಾ ಬರೀ ಅರಣ್ಯರೋದನವೆನ್ನಿಸಿ ಬಿಡುತ್ತದೆ.ನಮಸ್ಕಾರ.

    ReplyDelete
  21. ಭಾಶೇಯವರಿಗೆ;ನಮಸ್ಕಾರ.ಪ್ರತಿಕ್ರಿಯೆಗೆ ಧನ್ಯವಾದಗಳು.ನೀವು ಹೇಳುವುದು ಸರಿಯಾಗಿದೆ.ಹಣ್ಣು ತಿಂದವನು ಜಾರಿಕೊಂಡರೆ,ಸಿಪ್ಪೆ ತಿಂದವನು ಸಿಕ್ಕಿಕೊಂಡ!

    ReplyDelete
  22. ಸಾಗರಿಯವರಿಗೆ ನಮನಗಳು.ಕೆಲವೊಮ್ಮೆ ವಾಸ್ತವ ಕಟುವೆನ್ನಿಸುತ್ತದೆ.ಪ್ರತಿಕ್ರಿಯೆಗೆ ಧನ್ಯವಾದಗಳು.

    ReplyDelete
  23. ಸರ್ ಮನಮಟ್ಟುವ ಕವನ

    ReplyDelete
  24. ಹರೀಶ್;ನಮಸ್ಕಾರ.ಕವನದ ಬಗ್ಗೆ ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು.

    ReplyDelete
  25. ಮೂರ್ತಿ ಸರ್,
    ತುಂಬಾ ಸುಂದರ ಕವನ...ಅರ್ತಪೂರ್ಣವಾಗಿ ಮನಮುಟ್ಟುವಂತೆ ಇತ್ತು...

    ReplyDelete

Note: Only a member of this blog may post a comment.