Saturday, April 3, 2010

ಎದ್ದು ಹೋದಿರಿ -------ಎಲ್ಲಿಗೆ ?

ಅಸಂಬದ್ಧ  ಮಾತುಗಳ 
ಬಡಬಡಿಸುತ್ತಲೇ ಇತ್ತು ಬಾಯಿ !
ನೋಟ ನೆಟ್ಟಿತ್ತು ಮೇಲಕ್ಕೆ ,
ದಾರಿ ಯಾವುದಯ್ಯಾ ವೈಕುಂಠಕ್ಕೆ ? 
ಯುದ್ಧದಲ್ಲಿ ಸೋತು ಶರಣಾಗಿ ,
ಬಿಳಿಯ ಬಾವುಟ ಹಾರಿಸಿದಂತೆ,
ಕಣ್ಣುಗಳ ಬಿಳಿಯ ಬಣ್ಣ 
ಮಾತ್ರ ---------ಕಾಣುತಿತ್ತು !
ಜೋಕಾಲೆಯಾಡಿತ್ತು ಜೀವ,
ಒಳಕ್ಕೂ ----,ಹೊರಕ್ಕೂ.
'ಕಣ್ಣಾ ಮುಚ್ಚೆ 'ಆಟ ಮುಗಿದಿತ್ತು !
ಒಳಗಿಂದಲೇ ಬಾಯಿಯ ಬಾಗಿಲು , 
ಕಣ್ಣುಗಳ ಕಿಟಕಿಗಳ ಮುಚ್ಚಿ ,
ಸಂತೆ ಮುಗಿಸಿ ,ಕಂತೆ ಒಗೆದು ,
ನಡೆದೇ ಬಿಟ್ಟಿರಿ ನಮ್ಮೆದುರೇ ,
ಉಸಿರ ಹಾದಿ ಹಿಡಿದು ,
ನಮಗೆ -------ಕಾಣದಂತೆ ,               
ಮರಳಿ ---------ಬಾರದಂತೆ .

5 comments:

  1. ಉಸಿರಿನ ದಾರಿಯ ಪರಿ ಆ ಹರಿಯೇ ಬಲ್ಲ.ಚೆನ್ನಾಗಿದೆ ಕವನ.

    ReplyDelete
  2. ಸಾವಿನ ನಿಗೂಢತೆ ನನ್ನನ್ನು ಬಹಳ ಕಾಡುತ್ತದೆ .ಧನ್ಯವಾದಗಳು .

    ReplyDelete
  3. ಹುಟ್ಟು --ಸಾವು ಈ ಎರಡರ ಆಚೆಗಿನದು ನಮಗೆ ತಿಳಿಯದ ಲೋಕ, ಸದಾ ಜಗಳ,ದೊಂಬಿ,ದ್ವೇಷ,ವೈಷಮ್ಯ,ಹಮ್ಮು-ಅಹಮ್ಮು ಗಳ ಮಧ್ಯದಲ್ಲೇ ಮುಳುಗಿರುವ ನಮಗೆ ಆಚೆ ಏನಿದೆ ಎಂದು ಚಿಂತಿಸಲೂ ಸಮಯವೆಲ್ಲಿದೆ ? ಔಪಚಾರಿಕ ಮಾತು, ಯಾಂತ್ರಿಕ ಕೆಲಸ, ಹುರುಳಿಲ್ಲದ ಹುಸಿನಗೆ, ಸುಳ್ಳನ್ನೇ ಸತ್ಯವೆಂದು ಜಪಿಸುವ ಬಗೆ ಇದ್ದನ್ನೆಲ್ಲ ಮೈವೆತ್ತ ಇಂದಿನ ನಮ್ಮ ಜನಾಂಗ ಆಚೆ ಏನಿದೆ ಎಂದು ಕಂಡಮಹಾತ್ಮರನ್ನೂ ಹಳದಿ ಕಣ್ಣಿನಿಂದ ನೋಡುತ್ತದೆ ! ಈ ವಿಷಯದಲ್ಲಿ ಅದೂ ತಮ್ಮ ವೃತ್ತಿಯಲ್ಲಿ ತಮ್ಮಥರದವರು ಬಹಳ ಬಹಳ ಬಹಳ ವಿರಳ, ನಿಮಗೂ, ನಿಮ್ಮ ಜೀವನಾಸಕ್ತಿಗೂ, ನಿಮ್ಮ ಸಾಹಿತ್ಯಾಭಿವ್ಯಕ್ತಿಗೂ ನೂರೆಂಟು ನಮನಗಳು.

    ReplyDelete
  4. ನಿಮ್ಮ ಪ್ರಾಮಾಣಿಕ ಅಭಿಪ್ರಾಯಗಳಿಗೆ ಧನ್ಯವಾದಗಳು ಭಟ್ಟರೆ.ಕಳೆದ ಎರಡು ವಾರಗಳಲ್ಲಿ ಹತ್ತಿರದವರ ಮೂರು ಸಾವುಗಳು ಸ್ವಲ್ಪ ಮಟ್ಟಿಗೆ ನನ್ನನ್ನು ಕಂಗೆಡಿಸಿರುವುದು ನಿಜ .ವೈದ್ಯನಾಗಿ ಕಳೆದ ಮೂವತ್ತ ನಾಲಕ್ಕು ವರ್ಷಗಳಲ್ಲಿ ಸಾವು ಬದುಕಿನ ನಡುವಿನ ಹೋರಾಟವನ್ನು ಬಹಳ ಹತ್ತಿರದಿಂದ ನೋಡಿದ್ದೇನೆ .ಸಾವು ಯಾವತ್ತಿಗೂ ನಿಗೂಢ .ಈ ನಿಗೂಢತೆಯೇ ನನ್ನನ್ನು ಬಹಳವಾಗಿ ಕಾಡುತ್ತದೆ .ಕೆಲವೇ ನಿಮಿಷಗಳ ಹಿಂದೆ ನಮ್ಮ ಜೊತೆ ಮಾತಾಡಿದವರು ಇದ್ದಕ್ಕಿದ್ದ ಹಾಗೇ ಇಲ್ಲವಾಗುತ್ತಾರೆ ಎಂದರೆ ನಂಬುವುದು ಕಷ್ಟ .ಆದರೆ ಅದು ವಾಸ್ತವ .ವಾಸ್ತವವನ್ನು ಬಹಳ ಜನ ತಕ್ಷಣಕ್ಕೆ ಒಪ್ಪಿಕೊಳ್ಳುವುದಿಲ್ಲ .ನಿರ್ಭಾವುಕತೆಯಿಂದ ಸಾವನ್ನು ನೋಡುವ ಪ್ರಯತ್ನ ಇದು .ಎಷ್ಟು ಸಫಲನಾಗಿದ್ದೇನೋ ತಿಳಿಯದು .

    ReplyDelete
  5. ವಿಜ್ಞಾನ ಎಷ್ಟೇ ಮು೦ದುವರೆದರೂ ಸಾವು ಇನ್ನು ನಿಗೂಢ ಸತ್ಯ!!! ನಿಲುಕದ ವೈಚಿತ್ರ್ಯ!! ತಡೆಯದ ಪ್ರವಾಹ!! ಚೆ೦ದದ ಸಾಲುಗಳು.

    ReplyDelete

Note: Only a member of this blog may post a comment.