Friday, June 18, 2010

'ಕಾಲ'

ಕಾಲ ನಿಷ್ಪಕ್ಷಪಾತಿ -------,
ಯಾರನ್ನೂ ಬಿಡುವುದಿಲ್ಲ !
ತನ್ನ ಹಲ್ಲಿನ ಮಿಲ್ಲಿನಲಿ 
ಎಲ್ಲರ ನುಣ್ಣಗೆ ಅರೆದು ,
ಕಷ್ಟ ನಷ್ಟಗಳ ಬಿಸಿನೀರಲಿ ಕಲೆಸಿ ,
ತಿಕ್ಕಿ ,ತೀಡಿ ,ಚೆನ್ನಾಗಿ ನಾದಿ,
ಜಂಜಡಗಳ ನಿಗಿನಿಗಿ ಕೆಂಡದಲಿ
ಸುಟ್ಟು ರೊಟ್ಟಿಯಾಗಿಸಿ,
ಸಾಂತ್ವನಕ್ಕೊಮ್ಮೆ ಆಗಾಗ 
ಬೆನ್ನಿಗೆ ಸುಖದ ಬೆಣ್ಣೆ ಸವರಿ!
'ಕೆಂಪು ಚಟ್ನಿ ಖಾರ'ದ ಜೊತೆ 
ಜಗಿದು ಜಗಿದು ತಿಂದು ,
ನುಂಗಿ ನೀರು ಕುಡಿದು ,
ತಣ್ಣಗೆ ಕಾಯುತ್ತಾನೆ ಮತ್ತೆ ,
ಹೊಸ ಹೊಸ ರೊಟ್ಟಿಗಳಿಗಾಗಿ !
ಕಾಲ -------ನಿಷ್ಪಕ್ಷಪಾತಿ ,
ಯಾರನ್ನೂ ---ಬಿಡುವುದಿಲ್ಲ!

('ತುಷಾರ '2000 ಜೂನ್ ನಲ್ಲಿ ಪ್ರಕಟಿತ )

37 comments:

  1. ” ಕಾಲ” ನನ್ನು ರೊಟ್ಟಿ ಮಾಡುವ ಪ್ರಕ್ರಿಯೆಯಲ್ಲಿ ಬಣ್ಣಿಸಿದ್ದು ತು೦ಬಾ ಇಷ್ಟವಾಯ್ತು...ನಿಜ ಕಾಲ ಯಾರನ್ನೂ ಬಿಡುವುದಿಲ್ಲ.

    ReplyDelete
  2. ಕವನ ಚೆನ್ನಾಗಿದೆ. ಕವನ ತುಷಾರದಲ್ಲಿ ಪ್ರಕಟವಾಗಿದ್ದಕ್ಕೆ ಖುಷಿಯಾಯ್ತು.. ಹೀಗೆಯೇ ನಿಮ್ಮ ಕವನಗಳು ನಾಡಿನ ಎಲ್ಲ ಪತ್ರಿಕೆಗಳಲ್ಲಿ ಪ್ರಕಟವಾಗಲಿ. ಆದರೆ ಕಾಲವು ನಿಷ್ಪಕ್ಷಪಾತಿ ಅನ್ನುವದರ ಬಗ್ಗೆ ವೈಯಕ್ತಿಕವಾಗಿ ನನಗೆ ಒಳಗೊಳಗೇ ಗುಮಾನಿ ಇದೆ.

    ReplyDelete
  3. ಕಾಲನನ್ನು ರೊಟ್ಟಿ ಬೇಯಿಸಿ ತಿನ್ನುವವನಿಗೆ ಹೋಲಿಸಿದ್ದು ಹೊಸದೆನಿಸಿತು ಮತ್ತು ಸೊಗಸಾಗಿದೆ. ಕೆಲವೊ೦ದು ರೊಟ್ಟಿ ಹೆಚ್ಚು ಸುಟ್ಟು ಕಪ್ಪಾಗಿದ್ದನ್ನು ಹೊರಗೆಸೆಯುತ್ತಾನೆ ಅಲ್ಲವೇ?
    dhanyavaadagalu mattu abhinandanegalu.

    ReplyDelete
  4. ರೊಟ್ಟಿಯಾಗುವ ಅನುಭವ ಹೊಸತು ಅನ್ನಿಸಿತು.

    ReplyDelete
  5. ಕಾಲನ ರೊಟ್ಟಿಯ ಕವನ ತುಂಬಾ ಚೆನ್ನಾಗಿದೆ
    ಕಾಲನ ಮಹಿಮೆ ಬಲ್ಲವರಾರು

    ReplyDelete
  6. ಚುಕ್ಕಿ ಚಿತ್ತಾರ ಅವರಿಗೆ ನಮನಗಳು.ಕಾಲ ನಮ್ಮನ್ನು ರೊಟ್ಟಿ ಮಾಡಿ ತಿನ್ನುವ ಪರಿಕಲ್ಪನೆ ಹೊಸದೇನಲ್ಲ.ಸುಮಾರು ಕವನಗಳಲ್ಲಿ ಈ ಪರಿಕಲ್ಪನೆಯಿದೆ ಎನಿಸುತ್ತದೆ.
    ತಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.ಬರುತ್ತಿರಿ.

    ReplyDelete
  7. ನಾರಾಯಣ್ ಭಟ್ಟರಿಗೆ ನಮನಗಳು.ಸರ್ ಇಸವಿಯನ್ನು ತಪ್ಪಾಗಿ ಓದಿದ್ದೀರಿ.ಕವನ ಪ್ರಕಟವಾಗಿದ್ದು ಹತ್ತು ವರ್ಷಗಳ ಹಿಂದೆ.ನಿಮ್ಮ ಗುಮಾನಿಯನ್ನು ನಾನು ಗೌರವಿಸುತ್ತೇನೆ.ಬರುತ್ತಿರಿ.ಧನ್ಯವಾದಗಳು.

    ReplyDelete
  8. ಸೀತಾರಾಮ್ ಸರ್ ;ನಮಸ್ಕಾರ.ಕೆಲವು ರೊಟ್ಟಿಗಳು ಕಾಲನ ಬೆಂಕಿಯಲ್ಲಿ ಹದವಾಗಿ ಬೆಂದು ರುಚಿಯಾಗುತ್ತವೆ.ಕೆಲವು ಸುಟ್ಟು ಕರಕಾಗುತ್ತವೆ.ಇದೂ ಕಾಲನ ಕರಾಮತ್ತೇ ಅಲ್ಲವೇ?ಧನ್ಯವಾದಗಳು.

    ReplyDelete
  9. ಭಾಶೇ;ಅವರಿಗೆ ನಮಸ್ಕಾರ.'ಹೊಸ ಹೊಸಬನಾಗುವನು ಅನುಕ್ಷಣವು ಮಾನವನು,ವಸುಧೆಯಾ ಮೂಸೆಯಲಿ ಪುಟ ಪಾಕವಾಂತು'ಎಂದು ಡಿ.ವಿ.ಜಿ.ಯವರು ತಮ್ಮ ಕಗ್ಗದಲ್ಲಿ ಇನ್ನೊಂದು ರೀತಿಯಲ್ಲಿ ಹೇಳಿದ್ದಾರೆ.ಜಗದ ಜಂಜಡಗಳ ಸೌದೆ ಉರಿಯಲ್ಲಿ ನಾವೆಲ್ಲಾ ಸುಟ್ಟು ರೊಟ್ಟಿಗಳಾಗಿ ಹದವಾಗಲೇ ಬೇಕು!ಅದಿಲ್ಲದಿದ್ದರೆ ಹಸಿ ಹಸಿಯಾಗಿಯೇ ಉಳಿದುಬಿಡುತ್ತೀವೇನೋ.ಧನ್ಯವಾದಗಳು.

    ReplyDelete
  10. ಗುರು ಸರ್ ;ನಮಸ್ಕಾರ.ಕಾಲಾಯ ತಸ್ಮೈ ನಮಃ ಅನ್ನುವುದು ಅದಕ್ಕೇ ಇರಬೇಕು.ಬರುತ್ತಿರೀ.ಧನ್ಯವಾದಗಳು.

    ReplyDelete
  11. ವಸಂತ್;ನಮಸ್ಕಾರ.ನಿಮಗೆ ನನ್ನ ಬ್ಲಾಗಿಗೆ ಸ್ವಾಗತ.ಹೀಗೇ ತಪ್ಪದೆ ಬರುತ್ತಿರಿ.ಧನ್ಯವಾದಗಳು.

    ReplyDelete
  12. ತಾವು ಡಾಕ್ಟರ್ ಹೌದೆ ಎಂದೆನ್ನಿಸಿತು , ಗಾಬರಿಯಾಗಬೇಡಿ ! ತಮ್ಮ ಕವನ ಸಾಹಿತ್ಯ ಹೂರಣ ತಿಂದರೆ ರೊಟ್ಟಿ ಅಂಗಡಿಯ ಕಾಲ ಕಿಟ್ಟಪ್ಪನೂ ಜೋಗದ ಗುಂಡಿಯಲ್ಲಿ ಒಂದಿಲ್ಲೊಂದು ದಿನ ಜಾರಿ ಬೀಳುತ್ತಾನೆ! ಈ ಕಲ್ಪನೆ ಬಹಳ ಹಿಡಿಸಿತು. ಚೆನಾಗಿದೆ-ರಸಪಾಕ ಅಲ್ಲಲ್ಲ ಕೊಳಲ ನಿನಾದ, ಜುಳುಜುಳು ಹರಿವ ನದಿಯ ಮಂಜುಳ ನಿನಾದವದು, ತೈಲಧಾರೆಯದು, ಹೊರಗೆ ಮಳೆಯ ಮುಸಲಧಾರೆ-ಒಳಗೆ ಕಾವ್ಯದ ತೈಲ ಧಾರೆ-ತಾವು ವೈದ್ಯರೇ ಹೌದು, ಅರೆಕಾಲಿಕ ಆಯುರ್ವೇದ ಸತ್ವವನ್ನೂ ಅಳವಡಿಸಿಕೊಂಡ ನಿಸರ್ಗ ನಿರ್ಮಿತ ವೈದ್ಯ ತಾವು, ಬರಲಿ ಹಲವು ಟಾನಿಕ್ಕು, ನಮಗೆ ಬಾಟಲಿಯ ಟಾನಿಕ್ಕು ಬೇಡ, ಇದು ಬೇಕು-ಕೊಳಲ ಬ್ರಾಂಡಿನ ಟಾನಿಕ್ಕು,ನಮಸ್ಕಾರ

    ReplyDelete
  13. ಕಾಲನ ಕಾಲ ಬುಡಕ್ಕೆ ಕೈ ಹಾಕಿ ಕಿತ್ತ ಕೊಳಲ ನಿನಾದ.............!
    ಡಾಕ್ಟ್ರೆ........
    ನಿಮ್ಮ ಈ ಕವನಕ್ಕೆ ಹೀಗೊಂದು ಶೀರ್ಷಿಕೆ ಕೊಡೋಣ ಅನ್ಕೊಂಡಿದ್ದೇನೆ(ತಮ್ಮ ಅಭ್ಯಂತರವಿಲ್ಲದಿದ್ದರೆ!)
    ಚಂದದ ಕವನ,
    ಕಾಲಾಯ ತಸ್ಮೈ ನಮಃ !

    ReplyDelete
  14. ಕಾಲವೇ ಹಾಗೆ ಒಮ್ಮೆ ಸುಟ್ಟು,ಒಮ್ಮೆ ಬೆಣ್ಣೆ ಸವರಿ ನಮ್ಮ ಪಕ್ವ ಮಾಡುತ್ತದೆ...ಸುಟ್ಟು ಕರಕಲಾಗುವುದು ನಮಗೆ ಬಿಟ್ಟಿದ್ದು ಅಲ್ಲವ ಸರ್... ತುಂಬಾ ಚನ್ನಾಗಿದೆ:)

    ReplyDelete
  15. ನಿಜ ನಿಜ..
    ನಾವೆಲ್ಲಾ ಕಾಲನ ಕೈನಲ್ಲಿನ ರೊಟ್ಟಿಯೇ..
    ಎಲ್ಲರೊಡನೆ ಕಲೆಸುತ್ತಾನೆ..
    ತಟ್ಟುತ್ತಾನೆ.. ಸುಡುತ್ತಾನೆ... ಮತ್ತೆ ಚಟ್ನಿಯ ಜೊತೆ ಬೆರೆಸಿ ತಾನೇ ನುಂಗುತ್ತಾನೆ.. ಕಾಲ ನಿಜವಾಗ್ಯೂ ನಿಷ್ಕರುಣಿ.. ಕವಿತೆ ಓದಿಸಿದ್ದಕ್ಕೆ ಧನ್ಯವಾದಗಳು...

    ReplyDelete
  16. ವಿ.ಆರ್.ಭಟ್ ಸರ್;ನೀವಿಲ್ಲದೆ ಬ್ಲಾಗ್ ಭಣಗುಟ್ಟುತ್ತದೆ !ನಿಮ್ಮ ಬರಹಗಳ ಫ್ಯಾನ್ ನಾನು.ಅದು ಹೇಗೆ ಅಷ್ಟೊಂದು ವಿಷಯಗಳನ್ನು ತುಂಬಿಟ್ಟುಕೊಂಡು ದಿನಕ್ಕೊಂದು ಬ್ಲಾಗ್ ಬರೆಯುತ್ತೀರಿ ಎನ್ನುವುದು ನನಗೊಂದು ವೈದ್ಯಕೀಯ ವಿಸ್ಮಯ!ಒಂದು ಪುಟ್ಟ ಕವಿತೆ ಬರೆದರೆ ನನ್ನ ತಲೆ ಖಾಲಿ!ನೀವು ಯಾವತ್ತಿಗೂ ನನಗೆ ವಿಸ್ಮಯವಾಗಿಯೇ ಉಳಿಯುತ್ತೀರಿ.ಬ್ಲಾಗಿಗೆ ಬರುತ್ತಿರಿ.ನಿಮ್ಮ ಅಭಿಮಾನ ಹೀಗೇ ಮುಂದುವರೆಯಲಿ.ನಮಸ್ಕಾರ.

    ReplyDelete
  17. ಪ್ರವೀಣ್ ಸರ್;ಕೊಳಲಿನ ನಾದ ಕಾಲ ಭೈರವನ ಕುಣಿತವನ್ನು ಸೌಮ್ಯಗೊಳಿಸಲಿ.ಎಲ್ಲರೂ ನೂರು ವರುಷ ಸುಖ,ಶಾಂತಿ,ನೆಮ್ಮದಿಯಿಂದ ಬಾಳಲಿ
    ಎಂಬುದೇ ನನ್ನ ಹಾರೈಕೆ.ಕಾಲನನ್ನು ಗೆಲೆಯನನ್ನಾಗಿ ಮಾಡಿಕೊಂಡು ಅವನ ಬರವನ್ನು ಮುಂದೂಡುವ ಶಕ್ತಿ ನಮ್ಮೆಲ್ಲರಲ್ಲಿ ಇದೆ!ನಮಸ್ಕಾರ.

    ReplyDelete
  18. ನಮಸ್ಕಾರ ಶ್ರೀಕಾಂತ್;ಕಾಲ ನಮಗೆಲ್ಲಾ ಗುರುವಿದ್ದ ಹಾಗೆ.ಪೆಟ್ಟುಕೊಟ್ಟು ,ತಿದ್ದಿ ,ಬುದ್ಧಿ ಹೇಳುವ ಗುರು ಅವನು!ಎಂತೆಂತಹವರು ಹೇಗೆಲ್ಲಾ ಬದಲಾಗುತ್ತಾರೆ!ಧನ್ಯವಾದಗಳು.

    ReplyDelete
  19. ನಮಸ್ಕಾರ ಸ್ನೋ ವೈಟ್ ಮೇಡಂ.ನಿಮ್ಮ ಹೆಸರು ಗೊತ್ತಿರದ ಕಾರಣ ನಿಮ್ಮನ್ನು ಸ್ನೋ ವೈಟ್ ಎಂದೇ ಕರೆದಿದ್ದೇನೆ.ನಿಮ್ಮ ಕವಿತೆಗಳೂ ಚೆನ್ನಾಗಿರುತ್ತವೆ.ಇದು ಹತ್ತು ವರುಷಗಳ ಹಿಂದಿನ ಕವಿತೆ.ಹೊಸ ಸರಕು ಸಧ್ಯಕ್ಕೆ ಖಾಲಿಯಾಗಿರುವುದರಿಂದ ಹಳೆಯ ಸಂಚಿ ಬಿಚ್ಚಿದ್ದೇನೆ.ನಿಮ್ಮೆಲ್ಲರ ಪ್ರೋತ್ಸಾಹಕ್ಕೆ ಧನ್ಯವಾದಗಳು.

    ReplyDelete
  20. ದಿಲೀಪ್ ಹೆಗ್ಗಡೆ ಸರ್ ;ನಮಸ್ಕಾರ ಹಾಗೂ ನನ್ನ ಬ್ಲಾಗಿಗೆ ಸ್ವಾಗತ.ಕಾಲ ನಿಷ್ಕರುಣಿಯಲ್ಲ,ಕರುಣಿ ಎನ್ನುತ್ತಾರೆ ಡಿ.ವಿ.ಜಿ. ಹಳೇ ತಲೆಗಳೆಲ್ಲಾ ಹಾಗೇ ಉಳಿದುಬಿಟ್ಟರೆ ಹೊಸಬರಿಗೆ ಎಡೆ ಎಲ್ಲಿ?ಎನ್ನುವುದು ಅವರ ಪ್ರಶ್ನೆ.ಒಂದು ರೀತಿಯಲ್ಲಿ ಅದೂ ಸರಿಯಲ್ಲವೇ?ನಿಮ್ಮ ಅಭಿಮಾನ ಪೂರಕ ಪ್ರೋತ್ಸಾಹ ಹೀಗೇ ಮುಂದುವರಿಯಲಿ.ಧನ್ಯವಾದಗಳು.

    ReplyDelete
  21. ಕವನ ಚೆನ್ನಾಗಿದೆ . ಕಾಲ ಎಂಥವರನ್ನೂ ಹದಗೊಳಿಸುತ್ತದೆ.

    ReplyDelete
  22. ಸುಮ ಅವರಿಗೆ ನಮಸ್ಕಾರಗಳು.ಕಾಲದ ಜಾಲದಲ್ಲಿ ಎಂತಹವರೂ ಪಳಗುತ್ತಾರೆ ಎನ್ನುವ ನಿಮ್ಮ ಮಾತು ಸತ್ಯ.ಧನ್ಯವಾದಗಳು.

    ReplyDelete
  23. ಕಾಲನ ಕಾವಲಿಯಲ್ಲಿ ಸರಿಯಾಗಿ ಬೆಂದ ರೊಟ್ಟಿ ಮಾತ್ರ ತಿನ್ನಲು ರುಚಿ.. ಅರೆಬೆಂದ ಅತಿಬೆಂದ ರೊಟ್ಟಿಗಳು ಸ್ವಲ್ಪ ಕಷ್ಟ. ಕವನ ಬಹಳ ಚೆನ್ನಾಗಿದೆ.

    ReplyDelete
  24. satyavaada maatu...kavana chennagide.

    ReplyDelete
  25. ಸಾಗರಿಯವರಿಗೆ ನಮನಗಳು;ಕಾಲ ಈ ಜಗದ ಶಾಲೆಯಲ್ಲಿ ನಮ್ಮೆಲ್ಲರ ಗುರು.ಅರೆಬೆಂದ ರೊಟ್ಟಿಗಳು ಕೊನೇವರೆಗೂ ಕಲಿಯುವುದೇ ಇಲ್ಲ.ಇನ್ನುರೋಗದಿಂದ,ಕಷ್ಟದಿಂದ,ನಷ್ಟದಿಂದ
    ಬೆಂದ ಜೀವಗಳು ಸೀದು ಹೋದ ರೊಟ್ಟಿಗಳು.ಒಟ್ಟಿನಲ್ಲಿ ಕಾಲನ ತಂಡೂರಿಯಲ್ಲಿ ನಾವೆಲ್ಲಾ ಬೇಯಲೇ ಬೇಕಾದ ರೊಟ್ಟಿಗಳು.ಧನ್ಯವಾದಗಳು.

    ReplyDelete
  26. ಜ್ಯೋತಿಯವರಿಗೆ ನಮಸ್ಕಾರ ಹಾಗೂ ನನ್ನ ಬ್ಲಾಗಿಗೆ ಸ್ವಾಗತ.ನಿಮ್ಮ ಇತ್ತೀಚಿನ ಕವಿತೆ ತುಂಬಾ ಚೆನ್ನಾಗಿದೆ.ಬರುತ್ತಿರಿ.ಧನ್ಯವಾದಗಳು.

    ReplyDelete
  27. ಪ್ರಕೃತಿದತ್ತವಾದ ಯಾವುದೇ ವಸ್ತುವಿಗೂ ಭೇದವಿಲ್ಲ, ಆದರೆ ಅದನ್ನೆದುರಿಸುವ ಅರ್ಹತೆಯನ್ನ ಹೊಂದುವಲ್ಲಿ ಸಮಾನತೆಯಿಲ್ಲ, ಅಲ್ವ ಸರ್?

    ತುಂಬಾ ಚೆನ್ನಾಗಿ ಬರೆದಿದ್ದೀರ :)

    ReplyDelete
  28. KALA MATTU ROTTI -ERADANNOO SAMEEKARISI,SARALAVAGIRISI ,KALANA MAHIME TILISIDDAKKE DHANYAVADAGALU. NIMMA EE KAVANA-SADAA KALA- NITYA NUTANA.

    ReplyDelete
  29. ಕಾಲನನ್ನು ರೊಟ್ಟಿಯಾಗಿಸಿದ ರೀತಿ ತುಂಬಾನೆ ಚನ್ನಾಗಿದೆ.

    ಹೊನ್ನ ಹನಿ
    http://honnahani.blogspot.com/

    ReplyDelete
  30. ಡಾ.ಟಿ.ಕೆ.ಮೂ. ನಿಮ್ಮ ರೊಟ್ಟಿಯ ಗಟ್ಟಿತನ ಎಷ್ಟೆಂದರೆ ...ಜೊಳ್ಳಿಲ್ಲ...ತಿರುಳೆಲ್ಲ..ಮನದಲ್ಲಿ ತುಂಬೆಲ್ಲಾ..ಭಾವಕ್ಕೆ ಇಂಬು ಕೊಟ್ಟಿದೆ...ಇಷ್ಟವಾಯ್ತು ..ಸರಳ ಮತ್ತು ಮನದಾಳಕ್ಕೆ ಹೋಗುವ ಭಾವಾರ್ಥ

    ReplyDelete
  31. ಗೀತೆಯವರಿಗೆ ; ನಮನಗಳು .ಹುಟ್ಟುವವರಿಗೆ ಸಾವು ಇದ್ದದ್ದೇ.ಇದರ ನಡುವಿನ
    ಬದುಕನ್ನು ರೂಪಿಸಿಕೊಳ್ಳುವ ಶಕ್ತಿ ನಮ್ಮಲೇ ಇರುವುದರಿಂದ ಅದನ್ನು ಆದಷ್ಟೂ
    ಸುಂದರಗೊಳಿಸಿ ಕೊಳ್ಳುವುದರಲ್ಲೇ ಜಾಣತನವಿದೆಯಲ್ಲವೇ? ಧನ್ಯವಾದಗಳು.

    ReplyDelete
  32. ಹೇಮಚಂದ್ರ;ನೀವು ಹೇಳಿದಂತೆ ಕಾಲನ ಕವನ ನಿತ್ಯ ನೂತನ.ಏಕೆಂದರೆ ಕಾಲ ಸದಾಕಾಲ ಇರುವವನಲ್ಲವೇ?ಧನ್ಯವಾದಗಳು.ಬರುತ್ತಿರಿ.

    ReplyDelete
  33. ಹರೀಶ್ ;ನಮಸ್ಕಾರ ಹಾಗೂ ನನ್ನ ಬ್ಲಾಗಿಗೆ ಸ್ವಾಗತ.ನಿಮ್ಮ ನೇಗಿಲ ಯೋಗಿಯ ಕವನ ತುಂಬಾ ಚೆನ್ನಾಗಿದೆ.ಧನ್ಯವಾದಗಳು.

    ReplyDelete
  34. ಆಜಾದ್ ಸರ್ ;ನಮಸ್ಕಾರಗಳು .ನಿಮ್ಮ ಪ್ರೋತ್ಸಾಹಕ ನುಡಿಗಳು ನಮಗೆ ಸದಾ
    ದೊರೆಯುತ್ತಿರಲಿ.ಧನ್ಯವಾದಗಳು.

    ReplyDelete
  35. ಡಾ. ಸರ್,
    ತುಂಬಾ ಚೆನ್ನಾಗಿದೆ ಕವನ.... ಕಾಲನನ್ನು ರೊಟ್ಟಿ, ಜಾಲಕ್ಕೆ ಹೋಲಿಸಿ......' ಕಾಲನ ' ಕಾಲನ್ನು ಎಳೆದಿದ್ದೀರಿ......

    ReplyDelete
  36. ದಿನಕರ್ ಮೊಗೇರ ;ನಮಸ್ಕಾರ.ಇಲ್ಲಿ ಕಾಲನನ್ನು ಸಿರಿವಂತರು,ಬಡವರು ಎಂಬ ಬೇಧ ಮಾಡದೆ ಎಲ್ಲರನ್ನೂ ಸಮವರ್ತಿಯಂತೆ ನೋಡುವ ಜವರಾಯನಿಗೆ ಹೋಲಿಕೆ ಇದೆ .ಪರಿಣಾಮದಲ್ಲಿ ಕಡೆಗೆ ಎಲ್ಲರೂ ಒಂದೇ ಅಲ್ಲವೇ?ಎಲ್ಲರ ಕೊನೆ ಒಂದೇ ಅಲ್ಲವೇ?ಆ ಭಾವ ಇಲ್ಲಿ ವ್ಯಕ್ತವಾಗಿದೆ.ಧನ್ಯವಾದಗಳು.

    ReplyDelete

Note: Only a member of this blog may post a comment.