Tuesday, December 18, 2012

"ಹೆಸರಿನಲ್ಲಿ ಹಾಸ್ಯ!!!"

ದಿನನಿತ್ಯದ,ಏಕತಾನತೆಯ,ಜಂಜಾಟದ ಬದುಕಿನಲ್ಲೂ ಕೆಲವೊಮ್ಮೆ ನಡೆಯುವ ಹಾಸ್ಯ ಪ್ರಸಂಗಗಳು ಬದುಕನ್ನು ಹಸನಾಗಿಸುತ್ತವೆ.

ಮೊನ್ನೆ ನಮ್ಮ ಆಸ್ಪತ್ರೆಯ ಹೊರ ರೋಗ ವಿಭಾಗಕ್ಕೆ ನಲವತ್ತೇಳು ವರ್ಷ ವಯಸ್ಸಿನ ಮಹಿಳಾ ರೋಗಿಯೊಬ್ಬರು ಚೀಟಿ ಬರೆಸಿಕೊಂಡು ಬಂದರು.ಚೀಟಿಯಲ್ಲಿ,ಅವರ ಹೆಸರನ್ನು 'ಹೇಮಂತ',ಎಂದು ಬರೆಯಲಾಗಿತ್ತು.'ಅರೇ....! ಇದು ಸಾಮಾನ್ಯವಾಗಿ ಗಂಡಸರು ಇಟ್ಟುಕೊಳ್ಳುವ ಹೆಸರಲ್ಲವೆ....?!' ಅನಿಸಿತು. ಆ ಹೆಂಗಸನ್ನು ಹೆಸರೇನೆಂದು ಕೇಳಿದೆ.ಅದಕ್ಕವರು "ಹೇಮ" ಅಂದರು!ಚೀಟಿ ಬರೆದು ಕೊಟ್ಟ ನನ್ನ ಶಿಷ್ಯನನ್ನು ಕರೆದು, 'ಏನಪ್ಪಾ ಇದು ಇವರ ಹೆಸರನ್ನು"ಹೇಮಂತ"ಅಂತ ಬರೆದಿದ್ದೀಯಲ್ಲಾ ?'ಎಂದೆ.ಅದಕ್ಕವನು'ಸರ್ ....ಎರಡೆರಡು ಸಲ ಕೇಳಿದೆ .ಅವರು "ಹೇಮಂತ"ಎಂದೇ  ಹೇಳಿದರು ' ಎಂದ ಭೂಪ!!

ಆ ಹೆಂಗಸಿಗೆ ನಡೆದ ಪರಪಾಟು ಅರ್ಥವಾಗಿ ನಗತೊಡಗಿದರು.ಚೀಟಿ ಬರೆಯುವವನು ಹೆಸರೇನು ಎಂದು ಎರಡೆರಡು ಸಲ ಕೇಳಿದಾಗ, ಇವರು ಎರಡು ಸಲವೂ,"ಹೇಮ ಅಂತ "ಎಂದು ಉತ್ತರಿಸಿದ್ದರು."ಹೇಮ ಅಂತ "ಅನ್ನುವುದನ್ನು,ನನ್ನ  ಶಿಷ್ಯ "ಹೇಮಂತ"ಎಂದು ಅರ್ಥ ಮಾಡಿ ಕೊಂಡಿದ್ದ!!! ಆದ ಎಡವಟ್ಟು ಅರ್ಥವಾಗಿ ಅವನೂ ,ನಗುತ್ತಾ ಚೀಟಿ ಬರೆಯಲು ಹೋದ.ಆಸ್ಪತ್ರೆಯ ಎಲ್ಲರಿಗೂ ಗೊತ್ತಾಗಿ,ಎಲ್ಲರೂ ನಕ್ಕಿದ್ದೇ, ನಕ್ಕಿದ್ದು !!!

Thursday, December 13, 2012

"ಎಂತಹ ಅದ್ಭತ ಪ್ರೀತಿ ಅದು ....!!!"

ಅದೊಂದು ಸಾಧಾರಣ ಬೀದಿ ನಾಯಿ.ಆದರೆ ಅದರಲ್ಲಿ ಎಂತಹ ಅಸಾಧಾರಣ ಪ್ರೀತಿ ಇದೆ ಮತ್ತು ಆ ಪ್ರೀತಿಯಲ್ಲಿ ಎಂತಹ ಮಾಂತ್ರಿಕತೆ ಇದೆ ಎನ್ನುವುದು ಅದನ್ನು ಅನುಭವಿಸಿದವರಿಗೇ  ಗೊತ್ತು!ಸುಮಾರು ಹತ್ತು ವರ್ಷಗಳಿಂದ ಅದನ್ನು ನೋಡುತ್ತಿದ್ದೇವೆ.ತಿಂಗಳಿಗೋ,ಎರಡು ತಿಂಗಳಿಗೋ ಒಮ್ಮೆ ಬೆಂಗಳೂರಿಗೆ ಹೋದಾಗ ಸಾಮಾನ್ಯವಾಗಿ  ನಾವು 'ಕಾವಲ್  ಬೈರ್ ಸಂದ್ರ' ದಲ್ಲಿರುವ   ನೆಂಟರೊಬ್ಬರ ಮನೆಯಲ್ಲೇ ಉಳಿದುಕೊಳ್ಳುವುದು.ಆ ನಾಯಿ ಒಮ್ಮೊಮ್ಮೆ  ಗೇಟಿನ ಒಳಗೆ ಬಂದು ಹಾಯಾಗಿ ಚಪ್ಪಲಿಗಳಿರುವ ಮೂಲೆಯೊಂದರಲ್ಲಿ ಹಾಗೆಯೇ ಮುದುರಿಕೊಂಡು ಮಲಗುತ್ತದೆ.ಮನೆಯೊಡತಿಯ  ದನಿ ಕೇಳಿದರೆ ಸಾಕು, ಹೊರಕ್ಕೆ ಓಟ!ಆದರೆ ನಾವೆಲ್ಲಾ ಬಂದಾಗ ಅದಕ್ಕೇನೋ ಖುಷಿ.ಅದು ಹೇಗೋ ನಾವು ಬಂದಿದ್ದು ಪತ್ತೆ ಹಚ್ಚಿ ,ಬಾಲ ಅಲ್ಲಾಡಿಸುತ್ತಾ ಒಳಗೆ ಬಂದು ನಮ್ಮ ಮೇಲೆ ಎಗರುತ್ತದೆ.ಪ್ರೀತಿಯಿಂದ ತಲೆ ಸವರಿಸಿಕೊಳ್ಳುತ್ತದೆ!ನಿಲ್ಲಿಸಿದರೆ ,ಬಲಗಾಲನ್ನು ಮೇಲೆತ್ತಿ ,ಮತ್ತೆ ತಲೆ ಸವರುವಂತೆ ಸನ್ನೆ ಮಾಡುತ್ತದೆ!ಮನೆಯೊಡತಿ ಬಂದು ಎಷ್ಟು ಗದರಿದರೂ ಆಚೆ ಹೋಗುವುದಿಲ್ಲ!ನಾವೆಲ್ಲಾ ಇದ್ದೇವೆ  ಅನ್ನೋ ಭಂಡ ಧೈರ್ಯವೋ ಏನೋ!ಮನೆಗೆ ಬಂದವರು ಅಂಗಡಿಗೆ ಹೋಗಿ ಅದಕ್ಕೆ  ಒಂದು ಚೂರು ಬನ್ನನ್ನೋ ,ಬ್ರೆಡ್ಡನ್ನೋ ಹಾಕಿದರೆ ಸ್ವರ್ಗ ಸಿಕ್ಕವರಂತೆ ಆಡುತ್ತದೆ!ನಾನು ಹೋದಾಗ ಅದರ ಬಳಿ ಸ್ವಲ್ಪ ಹೊತ್ತು ಕುಳಿತು ಅದರ ಪ್ರೀತಿಯ ವಲಯದ ತರಂಗಗಳನ್ನು ಅನುಭವಕ್ಕೆ ತಂದು ಕೊಳ್ಳುತ್ತೇನೆ.ಅದೆಂಥದೋ ಅನಿರ್ವಚನೀಯ ಆನಂದ ಸಿಗುತ್ತದೆ.ಈ ಸಲ ಹೋದ ವಾರ ಹೋದಾಗ ಒಂದು ಅಪೂರ್ವ ಘಟನೆ ನಡೆಯಿತು.ಅದಕ್ಕೆ  ಬಹಳ ಪ್ರೀತಿ ಪಾತ್ರರೊಬ್ಬರು ಬೆಳೆಗ್ಗೆ ಒಂಬತ್ತು ಗಂಟೆಗೆ ತಮ್ಮ ಊರಿಗೆ ಪ್ರಯಾಣ ಬೆಳೆಸಿದರು..ಅದೆಲ್ಲಿತ್ತೋ ಮಹರಾಯ,ಸರಿಯಾದ ಸಮಯಕ್ಕೆ ಬಾಲ  ಅಲ್ಲಾಡಿಸಿಕೊಂಡು ಬೀಳ್ಕೊಡಲು ಹಾಜರಾಯಿತು!ಅವರು ಕಾರನ್ನು ಹತ್ತಿದ ಮೇಲೆ,ಅದಕ್ಕೆ  ಅವರ ಮುಖ ಸರಿಯಾಗಿ ಕಾಣಿಸುತ್ತಿರಲಿಲ್ಲ.ತಕ್ಷಣ ಎದುರು ಮನೆಯ ಕಾಂಪೌಂಡ್ ಹತ್ತಿ ಅವರು ಹೋಗುವುದನ್ನೇ ನೋಡುತ್ತಾ ಕುಳಿತಿತ್ತು!ಕಾರು ಮುಂದೆ ಹೋದ ಮೇಲೆ ,ಕೆಳಗಿಳಿದು ಗೇಟಿನ ಬಳಿ ನಿಂತಿದ್ದ ನಮ್ಮ ಬಳಿ ಬಾಲ  ಅಲ್ಲಾಡಿಸುತ್ತಾ ಬಂತು.ಆ ಮೂಕ ಪ್ರಾಣಿಯ ಪ್ರೀತಿ ಕಂಡು ಮೂಕ ವಿಸ್ಮಿತ ನಾಗಿದ್ದೆ!! ಅಬ್ಬಾ!!.......ಎಂತಹಾ ಅದ್ಭುತ ಪ್ರೀತಿ ಅದು!!!

Thursday, December 6, 2012

"ಸರ್.......ಸೆಂಟ್ ಬರುತ್ತೆ!!! "

ನನ್ನ ವೈದ್ಯಕೀಯ ವೃತ್ತಿ ಜೀವನದ ಸುಮಾರು ಮೂವತ್ತಾರು ವರ್ಷಗಳಲ್ಲಿ ಇದೇ  ಮೊದಲ ಬಾರಿಗೆ ಇಂತಹ ತೊಂದರೆಯೊಂದನ್ನು ನಾನು ಕೇಳಿದ್ದು !!! ಮೊನ್ನೆ ಆಸ್ಪತ್ರೆಯ ಪರೀಕ್ಷಾ ಕೊಠಡಿಯಲ್ಲಿ ರೋಗಿಯೊಬ್ಬ ಬಂದು ಕುಳಿತ."ಏನಪ್ಪಾ....,ಏನು ತೊಂದರೆ?" ಎಂದೆ ."ಸಾರ್ ...,ಮೂತ್ರದಲ್ಲಿ ಸೆಂಟ್ ಬರುತ್ತೆ "ಎಂದ.ಈ ಹೊಸ ತರಹದ ಕಂಪ್ಲೈಂಟ್  ಕೇಳಿ ಒಂದು ಕ್ಷಣ ಅವಾಕ್ಕಾದೆ!!!ಅವನ ತೊಂದರೆ ಅರ್ಥವಾದರೂ,ಸ್ವಲ್ಪ ತಮಾಷೆ ಮಾಡೋಣ ಎನಿಸಿ,ನಗುತ್ತಾ "ಅಲ್ಲಪ್ಪಾ.......,ಎಲ್ಲರೂ ಸೆಂಟ್ ಹೊಡ್ಕೋತಾರೆ.ನಿನಗೆ ಮೂತ್ರದಲ್ಲೇ ಸೆಂಟ್ ಬರೋದಾದ್ರೆ ಒಳ್ಳೇದೇ ಆಯ್ತಲ್ಲಾ!!!"ಎಂದೆ .ರೋಗಿಗೆ ತನ್ನ ತಪ್ಪು ಅರಿವಾಗಿ,ಅವನೂ ನಗುತ್ತಾ "ಅಯ್ಯೋ ......ಆ ಸೆಂಟ್ ಅಲ್ಲಾ ಸಾರ್,ಒಂದು ರೀತಿ ಕೆಟ್ಟ ವಾಸನೆ ಬರುತ್ತೆ"ಎಂದ.ಪಾಪ 'ಸ್ಮೆಲ್ 'ಅನ್ನುವುದಕ್ಕೆ ಬದಲಾಗಿ ಸೆಂಟ್ ಅಂದಿದ್ದ. ಕನ್ನಡದಲ್ಲಿ 'ವಾಸನೆ ಬರುತ್ತೆ 'ಅಂದಿದ್ದರೆ ಆಗುತ್ತಿತ್ತಲ್ಲಪ್ಪಾ ...,ಇಷ್ಟೆಲ್ಲಾ ಕಸರತ್ತು ಯಾಕೆ ಎಂದು ಹೇಳಿ ಔಷಧಿ ಕೊಟ್ಟು ಕಳಿಸಿದೆ.ವೈದ್ಯ ಮಿತ್ರರೊಬ್ಬರಿಗೆ ಈ ಘಟನೆಯ ಬಗ್ಗೆ ಹೇಳಿದಾಗ,'ದಿನ ನಿತ್ಯ ಇಂತಹ ಅನುಭವಗಳು ಆಗುತ್ತಲೇ ಇರುತ್ತವೆ ಸಾರ್!! "ಮೋಶನ್ ಟೆಸ್ಟ್ "   ಮಾಡಿ ಅನ್ನೋಕೆ "ಮೋಹನ್ ಟೆಸ್ಟ್" ಮಾಡಿ ಅಂತಾರೆ!"ಸ್ಟೂಲ್ ಟೆಸ್ಟ್ ಮಾಡಿ" ಅನ್ನೋಕೆ "ಟೂಲ್ ಟೆಸ್ಟ್ ಮಾಡಿ "ಅಂತಾರೆ!!!' ಎಂದರು ನಗುತ್ತಾ.

Tuesday, November 13, 2012

"ಡೌವ್ ಸೋಪ್ ಹಾಕಿ!!!"

ಈಗ ಸುಮಾರು ಹನ್ನೆರಡು ವರುಷಗಳ ಹಿಂದೆ ನಮ್ಮ ಆಸ್ಪತ್ರೆಗೆ ಇನ್ನೂ ಮದುವೆಯಾಗದ ತರುಣ ವೈದ್ಯರೊಬ್ಬರು ಸೇರಿದರು.ಸದಾ ನಗುಮುಖ.ಮೇಲೆ ಸ್ಪುರದ್ರೂಪಿ.ಸ್ವಾಭಾವಿಕವಾಗಿ ಅವರ ಬಳಿ  ತರುಣಿಯರೇ ಹೆಚ್ಚು ಬರುತ್ತಿದ್ದರು.ಒಮ್ಮೆ ಹುಡುಗಿಯರಿಬ್ಬರು ಅವರನ್ನು ನೋಡುವ ಸಲುವಾಗಿ ಆಸ್ಪತ್ರೆಗೆ ಬಂದರು."ಏನಮ್ಮಾ ಏನು ತೊಂದರೆ ?'ಎಂದರು ಡಾಕ್ಟರು.ಹುಡುಗಿಯರು,ಏನೋ ಒಂದು ಕೇಳೋಣವೆಂದುಕೊಂಡು  "ಮೊಡವೆಗೆ ಯಾವ ಸೋಪು ಹಾಕಬೇಕು ಹಾಕಬೇಕು ಸಾರ್?"ಎಂದು ನುಲಿಯುತ್ತಾ ಕೇಳಿದರು.ನಮ್ಮ ಚೆಂದದ ಡಾಕ್ಟರು ಸ್ವಾಭಾವಿಕವಾಗಿ"ಡೌವ್ ಹಾಕಿ"ಎಂದರು.ಹುಡುಗಿಯರು ಕಿಸಿ,ಕಿಸಿ ನಗುತ್ತಾ ಅಲ್ಲಿಂದ ಕಾಲ್ಕಿತ್ತರು.ಇವರಿಗೆ ಡೌವ್ ಸೋಪನ್ನು ಹಾಕಿ ಎಂದು ಹೇಳಿದ್ದಕ್ಕೆ ಹಾಗೇಕೆ ನಗುತ್ತಾ ಓಡಿಹೋದರೆಂಬುದು ಅರ್ಥವಾಗದೇ ನನ್ನ ಛೇಂಬರಿಗೆ ಬಂದು,ನಡೆದದ್ದೆನ್ನೆಲ್ಲಾ ತಿಳಿಸಿ "ಹುಡುಗಿಯರು ಹಾಗೇಕೆ ನಗುತ್ತಾ ಓಡಿ  ಹೋದರು ಸಾರ್"ಎಂದರು.ನಾನು 'ಡೌವ್ ಹಾಕುವುದು'ಎನ್ನುವುದರ ಅರ್ಥವನ್ನು ಹೇಳಿದ ಮೇಲೆ"ಅಯ್ಯೋ ರಾಮ"ಎನ್ನುತ್ತಾ,ಆದ ಎಡವಟ್ಟಿಗೆ  ಡಾಕ್ಟ್ರು ನಾಚಿಕೆಯಿಂದ ಇನ್ನಷ್ಟು ಕೆಂಪಾದರು.ಈಗ ಅವರಿಗೆ ಮದುವೆಯಾಗಿ ಏಳು ವರ್ಷದ ಮಗನಿದ್ದಾನೆ.ಹೆಂಡತಿಯೂ ವೈದ್ಯೆ.ಹೋದವಾರ ಬೆಂಗಳೂರಿನಲ್ಲಿ ಮನೆಯವರೆಲ್ಲಾ ಸೇರಿದಾಗ ಈ ಘಟನೆಯನ್ನು ನೆನಪಿಸಿಕೊಂಡು,ಅವರನ್ನು ಛೇಡಿಸುತ್ತಾ , ಎಲ್ಲರೂ ನಕ್ಕಿದ್ದೇ ನಕ್ಕಿದ್ದು.

Wednesday, November 7, 2012

"ಆನಂದ ನಿಮ್ಮೊಳಗೇ ಇದೆ !!!!"

"ನಾನು ಆನಂದದಿಂದ ಇರಬೇಕು ಎಂಬ ನಿಮ್ಮ ಅಂತರ್ಯದ ಭಾವನೆಯು ಯಾವುದೇ ಬೋಧನೆ,ತತ್ವ ಶಾಸ್ತ್ರದ ಗ್ರಂಥಗಳು ಅಥವಾ ಧರ್ಮದಿಂದ ಆದದ್ದಲ್ಲ.ನಾನು ಆನಂದದಿಂದ ಇರಬೇಕು ಎಂಬುದೇ ಜೀವನದ ಮೂಲಭೂತ ಅಪೇಕ್ಷೆಯಾಗಿದೆ"



ಬ್ರಹ್ಮಾನಂದ ವೆಂದರೆ ಸೃಷ್ಟಿಯೇ ಆನಂದ .ಆಳವಾದ ಆಂತರ್ಯದ ಅಂಶವು ಸೃಷ್ಟಿಯ  ಮೂಲವಾದ ಆನಂದವೇ ಆಗಿದೆ.ನಾವು ಬ್ರಹ್ಮಾನಂದವೆಂದು ಹೇಳುವಾಗ ಸ್ವಯಂ  ಸೃಷ್ಟಿ ಕರ್ತನನ್ನೇ  ಕುರಿತು ಹೇಳುತ್ತಿರುತ್ತೇವೆ.ಅವನೇ ಆನಂದ ಪೂರ್ಣ ಅಥವಾ ಆನಂದ ಭರಿತ.
ಸೃಷ್ಟಿಯ ಮೂಲ ಬೇರೆಲ್ಲೋ ಕುಳಿತಿಲ್ಲ!ನಿಮ್ಮ ಶರೀರವನ್ನೇ ಅವಲೋಕಿಸಿದಾಗ ,ನೀವು ಜನಿಸಿದ ಕ್ಷಣದಿಂದ ಇಲ್ಲಿಯವರೆಗೂ ಅದೆಷ್ಟು ವೃದ್ಧಿಯಾಗಿದೆ!! ಈ ಬೆಳವಣಿಗೆಯು ಬಾಹ್ಯದ ಹಿಗ್ಗಿಸುವಿಕೆಯಿಂದ ಉಂಟಾದುದಲ್ಲ.ಸೃಷ್ಟಿಕರ್ತನು ನಮ್ಮ ಅಂತರ್ಯದಲ್ಲಿ ನಿರಂತರವಾಗಿ ಕ್ರಿಯಾ ಶೀಲನಾಗಿರುವುದರಿಂದ ಇವೆಲ್ಲವೂ ಸಂಭವಿಸುತ್ತಿದೆ.

ಪ್ರಸ್ತುತದಲ್ಲಿ ಸೃಷ್ಟಿಯ ಮೂಲವು ನಿಮ್ಮ ಆಂತರ್ಯದಲ್ಲೇ ಇದೆ.ಅದೇ ಆನಂದ ಮಯ.ನಿಮ್ಮ ಜೀವನದಲ್ಲಿ ಸೃಷ್ಟಿಯ ಈ ಮೂಲಭೂತ ಶಕ್ತಿಯು ಪ್ರಕಾಶಗೊಂಡರೆ,ಅದು ಹೊರ ಹೊಮ್ಮಲು ನೀವು ಅನುವು ಮಾಡಿ ಕೊಟ್ಟರೆ ಆನಂದವಾಗಿರುವುದೊಂದೇ ನಿಮಗಿರುವ ಮಾರ್ಗ.ನಿಮ್ಮ ಆಂತರ್ಯದ ಸಾರದೊಂದಿಗೆ ನೀವು ಏಕತಾನ ಹೊಂದದೆ ಇರುವುದರಿಂದ ಬೇರೆ ಸ್ಥಿತಿಗಳು ನಿಮ್ಮ ಭಾಗವಾಗಿವೆ.ನೀವು ಅನುಭವಿಸುವ ಇನ್ನೆಲ್ಲಾ ರೀತಿಯ ಸ್ಥಿತಿ ಗಳು ನಿಮ್ಮ ಮನಸ್ಸ್ಸು ನಿಮ್ಮ ನಿಯಂತ್ರಣ ಮೀರಿದುದರಿಂದ ಉಂಟಾದವುಗಳಾಗಿವೆ.

ಜೀವನದಲ್ಲಿ ಕ್ಲೇಶಗಳು ಉಂಟಾಗುವುದು ಯಾವುದೇ ಬಾಹ್ಯ ಸನ್ನಿವೇಶ ಗಳಿಂದಾಗಲೀ ,ಯಾವುದೇ ವ್ಯಕ್ತಿಗಳಿಂದಾಗಲೀ ಅಲ್ಲವೆಂಬುದನ್ನು ನಾವು ಅರಿತಿಲ್ಲ.ಬಾಹ್ಯ ಸನ್ನಿವೇಶಗಳು ಶಾರೀರಿಕ ನೋವನ್ನು ಉಂಟು ಮಾಡಬಹುದು.ಆದರೆ ಮಾನಸಿಕ ನರಳಾಟ ಹಾಗೂ ದುಃಖಗಳು ನಿಮ್ಮ ಅಂಕೆ ಮೀರಿದ ಮನಸ್ಸಿನಿಂದಾದದ್ದು.

"ನಾನು ಆನಂದ ದಿಂದ ಇರಬೇಕು" ಎಂಬ ನಿಮ್ಮ ಆಂತರ್ಯದ ಭಾವನೆಯು ಯಾವುದೇ ಬೋಧನೆ,ತತ್ವ ಶಾಸ್ತ್ರ,ಗ್ರಂಥಗಳು,ಅಥವಾ ಧರ್ಮದಿಂದ ಆದದ್ದಲ್ಲ."ನಾನು ಆನಂದದಿಂದ ಇರಬೇಕು "ಎನ್ನುವುದೇ ಜೀವನದ ಅಪೇಕ್ಷೆಯಾಗಿದೆ.ನಿಮ್ಮೊಳಗಿರುವ ಚೈತನ್ಯವು ಆನಂದವನ್ನು ಆಶಿಸುತ್ತದೆ.ಏಕೆಂದರೆ ನಿಮ್ಮೊಳಗಿರುವ ಸೃಷ್ಟಿಯ ಮೂಲ ಭೂತ ಉಗಮದ ಪ್ರಕೃತಿ ಸ್ವಭಾವವೇ ಆನಂದವಾಗಿದೆ.


(ಸದ್ಗುರು ಜಗ್ಗಿ ವಾಸುದೇವ್ ಅವರ "ಅನುದಿನದ ಆನಂದ "ಎಂಬ ಪುಸ್ತಕದಿಂದ ಆಯ್ದ ಭಾಗ)




Tuesday, November 6, 2012

"ಆತ್ಮ ಪ್ರಶಂಶೆ ಒಳ್ಳೆಯದಲ್ಲ"

ನಮ್ಮಲ್ಲಿ ಹಲವಾರು ಮಂದಿಗೆ ತಮ್ಮ ಬಗ್ಗೆ ಅತಿಯಾಗಿ ಹೇಳಿಕೊಳ್ಳುವುದು ಒಂದು ಚಟವಾಗಿದೆ.ಇಂತಹ ಚಟವೊಂದು ತಮಗಿದೆ,ಅದರಿಂದ ಬೇರೆಯವರಿಗೆ ಕಿರಿ ಕಿರಿಯಾಗುತ್ತಿದೆ ಎನ್ನುವ ಅರಿವೂ ಅವರಿಗಿರುವುದಿಲ್ಲ.ಆತ್ಮ ಪ್ರಶಂಶೆ,ಆತ್ಮ ಹತ್ಯೆಗೆ ಸಮ ಎನ್ನುತ್ತದೆ ಮಹಾಭಾರತದ ಈ ಕಥೆ.ಕುರುಕ್ಷೇತ್ರದ ಪ್ರಮುಖ ಘಟ್ಟದಲ್ಲಿ ಅರ್ಜುನನಿಲ್ಲದೆ, ಅಭಿಮನ್ಯುವನ್ನು ಕಳೆದುಕೊಳ್ಳಬೇಕಾಯಿತು.ನೊಂದ ಯುಧಿಷ್ಟಿರ,ಅರ್ಜುನನಿಗೆ 'ಮಗನನ್ನು ರಕ್ಷಿಸದ ನಿನ್ನ ಗಾಂಡೀವಕ್ಕೆ ಧಿಕ್ಕಾರ'ಎಂದು ಬಿಟ್ಟ.ಅರ್ಜುನನಾದರೋ ತನ್ನ ಪರಮ ಪ್ರೀತಿಯ ಗಾಂಡೀವವನ್ನು ಹೀಯಾಳಿಸಿದವರನ್ನು ಜೀವ ಸಹಿತ ಉಳಿಸುವುದಿಲ್ಲವೆಂದು ಎಂದೋ ಪ್ರತಿಜ್ಞೆ ಮಾಡಿದ್ದ .ಇದಕ್ಕೆ ಕೃಷ್ಣ ಅರ್ಜುನನಿಗೆ ಒಂದು ಉಪಾಯ ಸೂಚಿಸಿದ.ಧರ್ಮಜನ ನಿಂದನೆ ಮಾಡು ,ಇದರಿಂದ ಅವನನ್ನು ಕೊಂದಂತೆ ಆಗುತ್ತದೆ ಎಂದ.ಜೀವ ತೆಗೆಯುವುದಕ್ಕಿಂತ ಇದು ಉತ್ತಮವೆಂದು ಅರ್ಜುನ ಒಲ್ಲದ ಮನಸ್ಸಿನಿಂದ ಅಣ್ಣನ ನಿಂದನೆ ಮಾಡಿದ.ಧರ್ಮರಾಯನಂತಹ ಅಣ್ಣನನ್ನು ನಿಂದನೆ ಮಾಡಬೇಕಾಯಿತಲ್ಲ ಎಂದು ಅರ್ಜುನ ನೊಂದು,ಆತ್ಮ ಹತ್ಯೆಗೆ ಸಿದ್ಧನಾದ.ಈ ಬಿಕ್ಕಟ್ಟನ್ನು ಪರಿಹರಿಸಲು ಮತ್ತೆ  ಕೃಷ್ಣ ಬರ ಬೇಕಾಯಿತು.ಅರ್ಜುನನಿಗೆ 'ನಿನ್ನನ್ನು ನೀನೇ ಹೊಗಳಿಕೋ.ಇದು ಅತ್ಮಹತ್ಯೆಗಿಂತ ಕಟುವಾದ ಶಿಕ್ಷೆ 'ಎಂದು ಸೂಚಿಸಿದ.ಅದರಂತೆ ಅರ್ಜುನ ತನ್ನನ್ನು ತಾನೇ ಹೊಗಳಿಕೊಂಡು ಸಧ್ಯದ ಸಂಕಷ್ಟದಿಂದ ಪಾರಾದ.ಪರನಿಂದೆ ಕೊಲೆಗೂ,ಆತ್ಮ ಪ್ರಶಂಶೆ ಆತ್ಮ ಹತ್ಯೆಗೂ ಸಮವೆಂಬುದು ಇದರ ಸಾರಾಂಶ.ಇನ್ನಾದರೂ ನಾವು ಪರ ನಿಂದನೆ ಮತ್ತು ಆತ್ಮ ಪ್ರಶಂಶೆಗಳಿಂದ ದೂರವಿರೋಣವೆ?ನಮಸ್ಕಾರ.
(ನವೆಂಬರ್ ೩,ಶನಿವಾರ ವಿಜಯಕರ್ನಾಟಕ ,ಬೋಧಿವೃಕ್ಷ ದಲ್ಲಿ ಪ್ರಕಟವಾಗಿದೆ.ಲೇಖಕರು;ಸ್ವಾಮಿ ಆನಂದ ಪೂರ್ಣ.)

Saturday, September 8, 2012

"ಎಲ್ಲಾ....ಪ್ರೇಯಸಿಗಾಗಿ---!!! "

ಬೆರಳಷ್ಟೇ ಗಾತ್ರದ
ಹಸಿರು ಪುಟ್ಟ ಹಕ್ಕಿ!!
ನುಗ್ಗೆ ಮರದ ಹೂವಿಗೆ
ಲಗ್ಗೆ......... ಹಾಕಿದೆ!!
ನುಗ್ಗೆ ಮರಕ್ಕೋ ರೋಮಾಂಚನ!!
ರೆಂಬೆ ರೆಂಬೆಗೂ ಹಸಿರು ಹುಚ್ಚು!!
ಪಕ್ಕದ ಗುಲ್ಮೊಹರಿಗೆ,
ಮೈ ತುಂಬಾ ಕೆಂಪು ಕಿಚ್ಚು !!
ಗಾಳಿಯಲ್ಲೇ ರೆಕ್ಕೆ ಬಡಿದು,
ಮಧುವ ಹೀರಿದ ಮತ್ತಿನಲ್ಲಿ
ಅಲ್ಲೇ ಒಂದರೆ ಕ್ಷಣ ,
ತೇಲಾಡುವ ತ್ರಿಶಂಕು!!!
ಮತ್ತೆ ಮರದ ಮೇಲೆಕೂತು,
ಗತ್ತಿನಿಂದ ಕತ್ತು ಕೊಂಕಿಸಿ,
ಪುಚ್ಚಗಳ ತಿದ್ದಿ ತೀಡಿ,
ಅತ್ತಿತ್ತ ತಿರುಗಿ ....,
ಚುಂಚದಲ್ಲೊಂದು ಹೂವ ಹಿಡಿದು,
ಪುರ್ರನೆ ಹಾರಿತ್ತು !!!
ಪ್ರೇಯಸಿಯ ಹುಡುಕುತ್ತಾ !!!

Wednesday, August 15, 2012

"ನಂಗಿನ್ನೊಂದು ಕನ್ಯಾ ನೋಡ್ರಪ್ಪಾ !!!!"

ನಮ್ಮ ಹಿರಿಯರ ಹಾಸ್ಯ ಪ್ರಜ್ಞೆ ಅದ್ಭುತವಾಗಿತ್ತು!!!ಇದು ನಾನು ಹೇಳಿದ್ದಲ್ಲ.ಬೀಚಿ ಯವರು ತಮ್ಮ ಆತ್ಮ ಕಥನ "ಭಯಾಗ್ರಫಿ"ಯಲ್ಲಿ ಅದರ ಬಗ್ಗೆಯೇ ಒಂದು ಅಧ್ಯಾಯ ವನ್ನು ಬರೆದಿದ್ದಾರೆ.ಹರಪನಹಳ್ಳಿಯಲ್ಲಿದ್ದ ಶೇಷ ಮುತ್ಯ ಮತ್ತು ಕಮಲ ಕಕ್ಕಿ ತೊಂಬತ್ತರ ಸನಿಹದ ವೃದ್ಧ ದಂಪತಿಗಳು.ಆ ವಯಸ್ಸಿನಲ್ಲೂ ಅವರದು ಬತ್ತದ ಉತ್ಸಾಹ ಮತ್ತು ಅದ್ಭುತ ಹಾಸ್ಯ ಪ್ರಜ್ಞೆ!!!ಒಂದು ರಾತ್ರಿ ಶೇಷ ಮುತ್ಯ ಮನೆಯಿಂದ ಹೊರಬಿದ್ದರು.ಒಂದು ಕೈಯಲ್ಲಿ ಬಡಿಗೆ ,ಇನ್ನೊಂದು ಕೈಯಲ್ಲಿ ಕಮಲ ಕಕ್ಕಿಯ ಕೈ.ಕಮಲ ಕಕ್ಕಿಯ ಇನ್ನೊಂದು ಕೈಯಲ್ಲಿ ಕೈ ದೀಪ.ಕಮಲ ಕಕ್ಕಿ ಗಟ್ಟಿ ದನಿಯಲ್ಲಿ ಪೇಚಾಡಿಕೊಂಡರು."ಕಣ್ಣಿಲ್ಲ,ಕಾಲಿಲ್ಲ.ಕುಂತಲ್ಲಿ ಕೂಡೋಲ್ಲಾ ,ನಿಂತಲ್ಲಿ ನಿಲ್ಲೋಲ್ಲಾ!ಮುದಕರಾದ ಮ್ಯಾಲೆ ಮನೆಯಾಗೆ ಸುಮ್ಮನೆ ಕೂಡ ಬಾರದೇನು?"ಇದಕ್ಕೆ ಶೇಷ ಮುತ್ಯನ ಉತ್ತರ "ಏ....,ಏನೇ !! ನೀನೇ ನನ್ನ ಮುದುಕ ಅಂದು ಬಿಟ್ಟರೆ ಮಂದಿ ಅನ್ನದೆ ಬಿಟ್ಟಾರೇ...?"ಅಲ್ಲಿದ್ದವರೆಲ್ಲಾ ಜೋರಾಗಿ ನಕ್ಕರು.ಕಮಲ ಕಕ್ಕಿಯೂ "ಮಾತಿಗೇನೂ ಕಮ್ಮಿ ಇಲ್ಲ "ಎಂದು ನಕ್ಕು ಸುಮ್ಮನಾದರು.ಶೇಷ ಮುತ್ಯ ಮತ್ತು ಕಮಲ ಕಕ್ಕಿ ಇಬ್ಬರೂ ಒಂದೇ ಬಾರಿಗೆ ಹಾಸಿಗೆ ಹಿಡಿದರು.ಸಾವು ಸಮೀಪಿಸಿದೆ ಅನ್ನಿಸಿತು ಮಕ್ಕಳಿಗೆ.ಎಲ್ಲಾ ಬಂಧುಗಳನ್ನೂ ಕರೆಸಿದರು.ಕಮಲ ಕಕ್ಕಿ ಮೊದಲು ಸತ್ತರು.ಶೇಷ ಮುತ್ಯ ಅರೆ ಬರೆ ಪ್ರಜ್ಞಾವಸ್ಥೆಯಲ್ಲಿದ್ದರು. ಅವರಿಗೆ ಕಮಲ ಕಕ್ಕಿಯ ಸಾವಿನ ಸುದ್ಧಿ ಹೇಳಿದರೆ ಹೃದಯಾ ಘಾತ ವಾಗಬಹುದು ಎಂದು ಹೆದರುತ್ತಲೇ ಅವರ ಬಳಿ ಸಮೀಪಿಸಿ"ಶೇಷ ಮುತ್ಯಾ,ಶೇಷ ಮುತ್ಯಾ ...."ಎಂದು ಕೂಗಿದರು.ಸಾವಿನತ್ತ ಸಾಗುತ್ತಿದ್ದ ಶೇಷ ಮುತ್ಯಾ ಕಣ್ಣು ತೆರೆದರು.ಏನು ಎಂಬಂತೆ ನೋಡಿದರು."ಕಮಲ ಕಕ್ಕಿ ಹೋದಳು"ಎಂದರು."ಹೋದಳೇ......?".....ಮೌನ.ಸಣ್ಣದೊಂದು ಕಿರು ನಗೆಯೊಂದಿಗೆ ಕ್ಷೀಣ ದನಿಯಲ್ಲಿ "ನಂಗಿನ್ನೊಂದು ಕನ್ಯಾ ನೋಡ್ರಪಾ"ಎಂದರು.ಸಾಯುವ ಸಮಯದಲ್ಲೂ ಹಾಸ್ಯವೇ?!!! ಎಂತಹ ಅದ್ಭುತ,ಅಪರೂಪದ ಚೇತನ ಇವರದು!!ಸಾವಿನ ಮನೆಯಲ್ಲಿ ನಗೆಯೇ ನಗೆ.ಕೆಲ ಗಂಟೆಗಳ ನಂತರ ಶೇಷ ಮುತ್ಯ ಕೂಡ ದೇಹವನ್ನು ತ್ಯಜಿಸಿದರು.ನಗು ನಗುತ್ತಲೇ ಇಹಲೋಕ ಯಾತ್ರೆ ಮುಗಿಸಿ ಎಲ್ಲರ ಮನಸ್ಸಿನಲ್ಲೂ ತಂಬೆಳಕಿನಂತೆ ಉಳಿದು ಹೋದರು!!!

Saturday, August 11, 2012

"ಜೋಕು........ಜೋಕಾಲಿ!!!"

೧)ಹೆಂಗಸೊಬ್ಬಳು ಕಣ್ಣಾಸ್ಪತ್ರೆಯ ಡಾಕ್ಟರರ ಮೇಲೆ "ನೀವು ನನ್ನ ಗಂಡನ ಕಣ್ಣಿನ ಆಪರೇಶನ್ ಸರಿಯಾಗಿ ಮಾಡಿಲ್ಲ.ಕಣ್ಣಿನ ಆಪರೇಶನ್ ಮಾಡಿದ ಮೇಲೆ ನನ್ನ ಗಂಡ ನನ್ನನ್ನು ಕಣ್ಣೆತ್ತಿಯೂ ನೋಡುತ್ತಿಲ್ಲ!!"ಎಂದು ಕೋರ್ಟಿನಲ್ಲಿ ದಾವೆ ಹಾಕಿದಳು.ಕೋರ್ಟಿನಲ್ಲಿ ಕಣ್ಣಾಸ್ಪತ್ರೆಯ ಡಾಕ್ಟರ್ರು"ನಾವು ನಿಮ್ಮ ಗಂಡನ ದೃಷ್ಟಿಯನ್ನು ಸರಿಮಾಡಿದ್ದೇವೆ.ಅದರಿಂದಾದ ಅನಾಹುತಕ್ಕೆನಾವು ಜವಾಬ್ದಾರರಲ್ಲ"ಎಂದರು.
೨)ಮೆಡಿಕಲ್ ಕಾಲೇಜಿನಲ್ಲಿ ಪ್ರೊಫೆಸರ್ ಒಬ್ಬರು ವಿದ್ಯಾರ್ಥಿಗಳಿಗೆ ಹೇಳುತ್ತಿದ್ದರು"ನೀವು ಬೀಚಿನಲ್ಲಿ ಹೋಗುತ್ತಿದ್ದೀರ.ಸುಂದರ ಯುವತಿಯೊಬ್ಬಳು ಸ್ಮೃತಿ ತಪ್ಪಿ ಬಿದ್ದಿದ್ದಾಳೆ.ಅವಳು ಉಸಿರಾಡುತ್ತಿಲ್ಲ.ತಕ್ಷಣವೇ ನೀವು ಅವಳ ತುಟಿಗಳನ್ನು ಬೆರಳುಗಳಿಂದ ಅಗಲಿಸಿ,ಬಾಯಿಂದ ಬಾಯಿಗೆ ಉಸಿರು ತುಂಬ ಬೇಕು.ಜೊತೆ ಜೊತೆಗೆ ನಿಮ್ಮ ಎರಡೂ ಕೈಗಳನ್ನೂ ಅವಳ ಎದೆಯ ಮೇಲಿರಿಸಿ ನಿಮಿಷಕ್ಕೆ ಅರವತ್ತು ಸಲ ಒತ್ತಬೇಕು.ಏನಾದರೂ ಪ್ರಶ್ನೆಗಳಿವೆಯೆ?(any questions?)"ಎಂದರು.ಹಿಂದಿನ ಬೆಂಚಿನಲ್ಲಿದ್ದ ಬಂಟಾ ಸಿಂಗ್ ಪ್ರಶ್ನಿಸಿದ "ಅವಳನ್ನು ಸ್ಮೃತಿ ತಪ್ಪಿಸುವುದು ಹೇಗೆ?".
೩)ಎಂಬತ್ತೆರಡು ವರ್ಷದ ಮಾರಿಸ್ ವೈದ್ಯಕೀಯ ಪರೀಕ್ಷೆಗೆಂದು ವೈದ್ಯರ ಬಳಿ ಹೋದ.ವೈದ್ಯರು ಕೆಲ ಔಷಧಿಗಳನ್ನು ಬರೆದು ಕೊಟ್ಟರು.ಜೊತೆಗೆ" you have got a heart murmer,be careful" ಎಂದು ಹೇಳಿದ್ದರು.ಎರಡು ದಿನಗಳ ಬಳಿಕ ಪಬ್ ಒಂದರಲ್ಲಿ ಮಾರಿಸ್ ಚೆಂದದ ಯುವತಿಯೊಂದಿಗೆ ಕುಳಿತದ್ದು ಕಂಡ ಡಾಕ್ಟರ್ "Ah !Morris !! you are doing great!! aren't you?" ಎಂದರು.ಅದಕ್ಕೆ ಮಾರಿಸ್" I sincerely followed your advise doctor. you had said -get a hot mamma and be cheerful".ತಾನು ಹೇಳಿದ್ದೇನು !!ಇವನು ಮಾಡುತ್ತಿರುವುದೇನು!!ಎಂದು ಡಾಕ್ಟರ್ರು ಅವಾಕ್ಕಾದರು.
(ಆಧಾರ:ಇಂದಿನ DECCAN HERALD ನ KHUSHWANT SINGH ಅವರ ಕಾಲಂ)

Saturday, August 4, 2012

"ಎಲೇಲೆ ರಸ್ತೇ!!! ಏನೀ ಅವ್ಯವಸ್ತೆ!!!"

ನೀವು ನಂಬಲೇ ಬೇಕು!!
ಇದು ಹೆದ್ದಾರಿಯ ಒಂದು ರಸ್ತೆ !!
ಲಾರಿಯೊಂದು ಹಳ್ಳದಲ್ಲಿಯೇ
ಸಿಲುಕಿ ಹೊರಬರಲಾಗದೇ
ಅಲ್ಲೇ ಪಕ್ಕಕ್ಕೆಒರಗಿದೆ ಸುಸ್ತಾಗಿ!!
ದ್ವಿಚಕ್ರಿಗಳಿಗೆ ಈ ಹಳ್ಳಗಳ
ದಾಟುವುದು ಹೇಗೆಂಬ ಚಿಂತೆ!!
ಈ ಕೆಟ್ಟ ರಸ್ತೆಯೂ ಚಿರಾಯು !
ಪಾಪಿಯೊಬ್ಬನ ಹಾಗೆ !
ಒಂದು ಕಡೆಯಿಂದ
ಮರಮ್ಮತ್ತು ನಡೆಯುತ್ತಿದ್ದಂತೆ
ಮತ್ತೊಂದು ಕಡೆಯಿಂದ
ಕಿತ್ತು ಹಳ್ಳ ಹಿಡಿಯುತ್ತಿದೆ!
ಹೇಗೆ ಮಲಗಿದೆ ನೋಡಿ
ಮೈಲಿಗಳ ಉದ್ದಕ್ಕೂ
ಹಳ್ಳ ಕೊಳ್ಳಗಳ ಹೊದ್ದು
ಮಳ್ಳಿಯ ಹಾಗೆ !
ಒಂದೊಂದು ಕಿತ್ತ
ಜಲ್ಲಿ ಕಲ್ಲಿನ ಹಿಂದೆ
ಕೋಟಿಗಟ್ಟಲೆ ಹಣದ
ಲೂಟಿಯ ಕಥೆ! ಟಾರಿನಂತೆಯೇ
ಕೊತ ಕೊತನೆ ಕುದಿವವರ
ಬಿಸಿ ಬಿಸಿ ನಿಟ್ಟುಸಿರಿನ,
ಬೆವರಿನ ವ್ಯಥೆ ! ಇದ್ದ ಬದ್ದ
ಇಂಚಿಂಚು ಜಾಗವನ್ನೂ
ಸೈಟಿಸಿ ,ಅಪಾರ್ಟ್ ಮೆಂಟಿಸಿ,
ತಮ್ಮನ್ನು ಒಕ್ಕಲೆಬ್ಬಿಸಿದ್ದಕ್ಕೆ
ಕೆರೆ,ಕೊಳ್ಳಗಳೆಲ್ಲಾ
ರಸ್ತೆಗೇ ಇಳಿದು
ಧರಣಿ ಕೂತಿವೆಯೇ ಹೇಗೆ !?
ಇದು ತೀರದ, ಮುಗಿಯದ
ಕರ್ಮ ಕಾಂಡ !
ನಮ್ಮೆಲ್ಲರ ಬದುಕಿನ
ಬವಣೆಗಳ ಹಾಗೆ !!!
ಈ ರಸ್ತೆಗಳು ನಮ್ಮ ದೇಶದ
ಹಣೆ ಬರಹವೇ ಹೇಗೆ?!!!
(ಚಿತ್ರ ಕೃಪೆ;UMESH VASHISHT .ಬಜ್ಜಿಗರು.)

"ಭಲ್ಲೇ!!!......ಭಲ್ಲೇ!!!.....ಭಲ್ಲೇ!!!

ಬಯಸಿಯೂ ಬಾರದ ಮುಂಗಾರು!
ಬಯಸದೇ ಬಂದ ರೋಗ !
ಇದೇ ಏನೋ ? ಯೋಗಾ ಯೋಗ !
ಮರತೇ ಬಿಟ್ಟ ಸಂಸ್ಥೆ !!
ತಿರುಗಿಯೂ ನೋಡದ
ಕೈಕೊಟ್ಟ.......... ನಲ್ಲೆ!!
ಒಲ್ಲೆ....,ಒಲ್ಲೆ.....,ಒಲ್ಲೆ !!!
ಮರೆತೇನೆಂದರೂ ಮರೆಯಲೊಲ್ಲೇ !!
ಬಿಟ್ಟೇನೆಂದರೂ ಬಿಡಲೊಲ್ಲೆ!!
ನಾನೂ ಬಾಳ ಬೇಕಲ್ಲೇ!!?
ಅದಕ್ಕೊಂದೇ ದಾರಿ !!
ಎಲ್ಲ ಮರೆತು, ನಾನೂ ಸರದಾರನಾಗಿ
ಕುಣಿಯಬೇಕು ಈಗಲೇ ,ಇಲ್ಲೇ!!!
ಭಲ್ಲೇ !!!.....ಭಲ್ಲೇ !!!...ಭಲ್ಲೇ !!!
(ಆತ್ಮೀಯ ಮಿತ್ರ ಶ್ರೀಮಾನ್ ಬದರಿಯವರು ಫೇಸ್ ಬುಕ್ ನಲ್ಲಿ ಬರೆದ ನಾಲ್ಕು ಸಾಲುಗಳಿಂದ ಪ್ರೇರಿತ)

Thursday, August 2, 2012

"ಸಂಸಾರ!!!.......ಗಡಿಯಾರ!!!

ನಮ್ಮ ಸಂಸಾರ ..........,
ಎದುರಿನ ಗೋಡೆಯ ಮೇಲಿನ
ಗಡಿಯಾರ.............,
ಎರಡಕ್ಕೂ ಎಷ್ಟೊಂದು ಸಾಮ್ಯ!
ನನ್ನ ಹೆಂಡತಿ.............,
ಶಿಸ್ತಿನ ಸಿಪಾಯಿ !
ಸೆಕೆಂಡಿನ ಮುಳ್ಳಿನ ಹಾಗೆ
ಸಪೂರ.........!
ಮೂಗಿಗೆ ಕವಡೆ ಕಟ್ಟಿಕೊಂಡ
ಗಾಣದೆತ್ತಿನ ದುಡಿತ !
ಅವಳ ನಿರಂತರ
ಪ್ರೀತಿಯ ತುಡಿತವೇ
ನಮ್ಮ ಸಂಸಾರದ
ನಾಡಿಯ ಮಿಡಿತ !
ಮಕ್ಕಳೋ ..........,
ನಿಮಿಷದ ಮುಳ್ಳುಗಳಂತೆ !
ನಿಮಿಷಕ್ಕೊಂದು ರೀತಿ !
ಗಂಟೆಗೆ ಅರವತ್ತರ
ಅವಸರದ ಓಟ !
ಇನ್ನು,ಅರವತ್ತರದ ಸನಿಹದ
ನಾನೋ.................!
ಗಂಟೆಯ ಮುಳ್ಳು !
ಧಡಿಯ !ನಿಧಾನಿ!
ಮನೆಯ ಪ್ರಧಾನಿ (?) !
ಗಂಟೆಗೊಮ್ಮೆ ಕದಲಿಕೆ!
ಮನೆಯೊಡತಿಯಿಂದ
'ಎಷ್ಟು ಸ್ಲೋ', ಎಂಬ ಸಣ್ಣದೊಂದು ಮೂದಲಿಕೆ!
ಪ್ರೀತಿಯ ಬ್ಯಾಟರಿ ಮುಗಿದಾಗ
ಮನೆಯಲ್ಲಿ ಹಠಾತ್ ಮುಷ್ಕರ!
ಸ್ವಲ್ಪ ಕಾಲ ...........,
ಎಲ್ಲವೂ ,ಎಲ್ಲರೂ ಸ್ತಬ್ಧ!
ಮತ್ತೆ ಪ್ರೀತಿಯ ಹೊಸ ಚೈತನ್ಯ
ಮರು ಚಾಲನೆ ನೀಡುವ ತನಕ!!
ಮತ್ತದೇ ಓಟದ ಮಾಟ !!!

Sunday, July 29, 2012

"ಡಯಾಬಿಟಿಸ್ ಇದೆಯೇ? ಕೊಬ್ಬು ಕಮ್ಮಿ ಮಾಡಿ !!!"

ಮೊನ್ನೆ ಮದುವೆಯೊಂದಕ್ಕೆ ಹೋಗಿದ್ದೆ.ಧಾರೆ ಮಹೂರ್ತ ಹತ್ತಕ್ಕೆ ಮುಗಿದು,ಊಟದ ತನಕ ಸಾಕಷ್ಟು ಸಮಯವಿದ್ದುದರಿಂದ ಪರಿಚಯಸ್ಥರ ಜೊತೆ ಹರಟೆ ಕಾರ್ಯಕ್ರಮ ಶುರುವಾಯಿತು.ಎಲ್ಲರೂ ಮಧ್ಯವಯಸ್ಕರೇ ಆದ್ದರಿಂದ ಸಹಜವಾಗಿ ಎಲ್ಲರ ಹರಟೆಯ ವಿಷಯವೂ ಬೀಪಿ,ಡಯಾಬಿಟಿಸ್ಸೇ !!!ಈಗೀಗ ಬೀಪಿ,ಶುಗರ್ರು ಇಲ್ಲದವರೇ ಅಪರೂಪವೇನೋ ಎನ್ನುವಂತಾಗಿ ಬಿಟ್ಟಿದೆ !ಇಲ್ಲೊಂದು ಮುಖ್ಯ ವಿಷಯವನ್ನು ನಿಮಗೆ ಹೇಳಲೇ ಬೇಕೆಂಬ ಉದ್ದೇಶದಿಂದ ಈ ಲೇಖನ ಬರೆಯುತ್ತಿದ್ದೇನೆ.ವಯಸ್ಕರಲ್ಲಿ ಬರುವ ಸಕ್ಕರೆ ಖಾಯಿಲೆ ಅಥವಾ ಟೈಪ್ 2 ಡಯಾಬಿಟಿಸ್ ನಲ್ಲಿ ಇನ್ಸುಲಿನ್ ಕೊರತೆಗಿಂತ ಹೆಚ್ಚಾಗಿ ,ಇರುವ ಇನ್ಸುಲಿನ್ ಸಮರ್ಪಕವಾಗಿ ಕೆಲಸ ಮಾಡುತ್ತಿರುವುದಿಲ್ಲ.ಇದಕ್ಕೆ INSULIN RESISTANCE ಎನ್ನುತ್ತಾರೆ.ಇದು ಸಾಮಾನ್ಯವಾಗಿ ಮಧ್ಯವಯಸ್ಕ,ಸ್ಥೂಲ ಕಾಯ ಡಯಾಬಿಟಿಸ್ ರೋಗಿಗಳಲ್ಲಿ ಹೆಚ್ಚು.ಮದುವೆ ಮನೆಯಲ್ಲಿ ಇವರನ್ನುಗಮನಿಸಿದರೆ ,ನನಗೆ 'ಶುಗರ್ ಲೆಸ್'ಕಾಫಿ ಎನ್ನುವ ಇವರು , ಊಟದಲ್ಲಿ ಎರಡೆರಡು ಒಬ್ಬಟ್ಟಿಗೆ ತುಪ್ಪ ಹಾಕಿಸಿಕೊಂಡು ಹೊಡೆಯುತ್ತಾರೆ!ಚಿರೋಟಿಗೆ ಬೂರಿಸಕ್ಕರೆ,ಮೇಲೆ ಬಾದಾಮಿ ಹಾಲು!ಹೆಚ್ಚೇನಿಲ್ಲಾ.........ಎರಡೇ ಎರಡು ಅಲೂ ಬೋಂಡಾ! ಇಷ್ಟೆಲ್ಲಾ ತಿಂದು ಮೇಲೆ ಎರಡೆರಡು ಕಪ್ ಪಾಯಸ !ಅಪರೂಪಕ್ಕೆ ತಿಂದರೆ ಹೋಗಲಿ ಎನ್ನ ಬಹುದು.ಬೆಂಗಳೂರಿನಂತಹ ನಗರಗಳಲ್ಲಿ ವಾರಕ್ಕೊಂದು ಮದುವೆ ಮುಂಜಿ ಕಾರ್ಯಕ್ರಮ ನಡೆಯುತ್ತಲೇ ಇರುತ್ತವೆ.ಇಂತಹವರು 'ಏನು ಮಾಡೋದು ಸರ್ ಏನು ಮಾತ್ರೆ ತೆಗೆದು ಕೊಂಡರೂ ,ಎಷ್ಟು ಡಯಟ್ ಕಂಟ್ರೋಲ್ ಮಾಡಿದರೂ ಶುಗರ್ರು ಇನ್ನೂರ ಐವತ್ತಕಿಂತ ಕಮ್ಮೀನೇ ಆಗೋಲ್ಲಾ ಅಂತಾರೆ!' ಇಂತಹವರು ತಮ್ಮ ಆಹಾರದಲ್ಲಿ ಕೊಬ್ಬಿನ ಅಂಶವನ್ನು ಆದಷ್ಟೂ ಕಮ್ಮಿ ಮಾಡಲೇ ಬೇಕು.ಒಂದು ಗ್ರ್ಯಾಂ ಪಿಷ್ಟದಿಂದ (carbohydrate) 4 ಕ್ಯಾಲೋರಿ ಎನರ್ಜಿ ಉತ್ಪತ್ತಿಯಾದರೆ,ಒಂದು ಗ್ರ್ಯಾಂ ಕೊಬ್ಬು (fat) 9 ಕ್ಯಾಲೋರಿ ಎನರ್ಜಿ ಕೊಡುತ್ತದೆ.ವ್ಯಯವಾಗದ ಎನರ್ಜಿ ದೇಹದ ಎಲ್ಲಾ ಕಡೆ (ಮುಖ್ಯವಾಗಿ ಮಾಂಸ ಖಂಡ ಗಳಲ್ಲಿ) ಸೇರಿ insulin resistance ಗೆ ಕಾರಣವಾಗುತ್ತದೆ.ಆದ್ದರಿಂದ ತೂಕ ಹೆಚ್ಚಿರುವ ಡಯಾಬಿಟಿಸ್ ರೋಗಿಗಳು ಮುಖ್ಯವಾಗಿ ತಮ್ಮ ಆಹಾರದಲ್ಲಿನ ಕೊಬ್ಬಿನ ಅಂಶವನ್ನು ಕಮ್ಮಿ ಮಾಡಲೇ ಬೇಕು .ದೇಹದ ಮಾಂಸ ಖಂಡಗಳು ಕೆಲಸ ಮಾಡಿದರೆ ಅವುಗಳಲ್ಲಿ ಕೊಬ್ಬಿನ ಅಂಶ ಹೆಚ್ಚು ಸೇರುವುದಿಲ್ಲ.ಆದ್ದರಿಂದ ದಿನಕ್ಕೆ ಅರ್ಧ ತಾಸಿನಿಂದ ಒಂದು ತಾಸಿನ ನಡಿಗೆ ಬೇಕೇ ಬೇಕು.ನಡಿಗೆಯನ್ನು ನಿಲ್ಲಿಸಲೇ ಬಾರದು.ಇವರು ಔಷಧಿಗಳನ್ನು ಸರಿಯಾಗಿ ತೆಗೆದುಕೊಂಡು ,ಕೊಬ್ಬಿನ ಅಂಶ ಕಮ್ಮಿ ಮಾಡಿ ,ನಡೆ ಮುಂದೆ ,ನಡೆ ಮುಂದೆ ಎಂದು ನಡಿಗೆಯನ್ನು ತಮ್ಮ ದಿನ ನಿತ್ಯದ ಜೀವನದಲ್ಲಿ ಅಳವಡಿಸಿ ಕೊಂಡರೆ ,ಯಾವುದೇ ತೊಂದರೆ ಇಲ್ಲದೆ ಎಲ್ಲರಂತೆ ಸುಖವಾಗಿ ಬಾಳಬಹುದು. ಶುಭಮಸ್ತು.ಸರ್ವೇ ಜನಾಹ ಸುಖಿನೋ ಭವಂತು!ನಮಸ್ಕಾರ.

Friday, July 20, 2012

"ಅಬ್ಬಾ.......!!! ಆ ಕ್ಷಣಗಳು.......!!! "

ಜೀವನದಲ್ಲಿ ಅಂತಹ ಕ್ಷಣಗಳು ನಮ್ಮ ಶತ್ರುವಿಗೂ ಬರಬಾರದು !!!ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ನಡೆದ ಘಟನೆಯನ್ನು ನೆನೆಸಿಕೊಂಡರೆ,ಈಗಲೂ ನನ್ನ ಕೈಕಾಲುಗಳು ತಣ್ಣಗಾಗುತ್ತವೆ!!!ಬೆಂಗಳೂರಿನಿಂದ ರಾಯಚೂರಿಗೆ ಸಂಸಾರ ಸಮೇತನಾಗಿ ಟ್ರೈನಿನಲ್ಲಿ ಹೊರಟಿದ್ದೆ.ಸಂಜೆ ಸುಮಾರು ಐದು ಗಂಟೆಯ ಸಮಯ.ನನ್ನ ಹೆಂಡತಿಯ ಕಂಕುಳಲ್ಲಿ ಒಂದು ವರ್ಷದ ಮಗಳು,ನನ್ನ ಕೈ ಹಿಡಿದ ಐದು ವರ್ಷದ ಮಗ,ಒಂದು ರಾಶಿ ಮನೆ ಸಾಮಾನು.ಬೆಂಗಳೂರು ಸಿಟಿ ರೈಲ್ವೇ ಸ್ಟೇಷನ್ನಿನ ಟ್ಯಾಕ್ಸಿ ಸ್ಟ್ಯಾಂಡ್ ನಲ್ಲಿ ಇಳಿದ ತಕ್ಷಣ ,ಸಕ್ಕರೆ ಪಾಕಕ್ಕೆ ನೊಣ ಮುತ್ತುವಂತೆ ಕೂಲಿಗಳ ಒಂದು ದೊಡ್ಡ ಹಿಂಡೇ ನಮ್ಮನ್ನು ಮುತ್ತಿಕೊಂಡರು.ಕೂಲಿ ಮಾತಾಡುವ ಮೊದಲೇ,ಮೂರು ನಾಲಕ್ಕು ಜನ ಸಾಮಾನುಗಳನ್ನು ಹೊತ್ತುಕೊಂಡು 'ಯಾವ ಬೋಗಿ ಸರ್'ಎನ್ನುತ್ತಾ ಹೊರಟೀ ಬಿಟ್ಟರು!!ನಂತರ ಅವರು ಮಾಡುವ ರಗಳೆಗೆ ಹೆದರಿ,ಹರ ಸಾಹಸ ಮಾಡಿ ಅವರಿಂದ ಬಿಡಿಸಿಕೊಂಡು ಒಬ್ಬ ಕೂಲಿಯನ್ನು ಗೊತ್ತು
ಮಾಡಿದೆ.ಹೆಂಡತಿಯನ್ನು ಮಗಳೊಂದಿಗೆ ಅರ್ಧ ಸಾಮಾನುಗಳ ಬಳಿ ಅಲ್ಲೇ ಬಿಟ್ಟು ,ಇನ್ನರ್ಧ ಸಾಮಾನುಗಳನ್ನು ತಲೆಯ ಮೇಲೆ ಹೊತ್ತ ಕೂಲಿಯವನ ಹಿಂದೆ,ಮಗನ ಕೈ ಹಿಡಿದು ಹೊರಟೆ.ಟ್ರೈನ್ ಆಗಲೇ ಪ್ಲ್ಯಾಟ್ ಫಾರಂನಲ್ಲಿ ಬಂದು ನಿಂತಿತ್ತು .ನಮಗೆ ರಿಸರ್ವ್ ಆಗಿದ್ದ ಬೋಗಿಯನ್ನು ಹುಡುಕಿ ,ಚಾರ್ಟ್ ನಲ್ಲಿ ನಮ್ಮಬರ್ತ್ ನಂಬರ್ ನೋಡಿ ,ಅಲ್ಲಿ ನಮ್ಮ ಸಾಮಾನುಗಳನ್ನು ಇಟ್ಟು,ಮಗನನ್ನು ಅಲ್ಲೇ ಕೂರಿಸಿ "ಅಮ್ಮನನ್ನೂ ,ಪಾಪುವನ್ನೂ ಕರೆದುಕೊಂಡು ಮಿಕ್ಕ ಸಾಮನುಗಳನ್ನು ತರುತ್ತೇನೆ ,ಇಲ್ಲೇ ಕೂತಿರು ಪುಟ್ಟಾ"ಎಂದೆ."ಹೂಂ"ಎಂದು ತಲೆಯಾಡಿಸಿದ ಮಗರಾಯ.ಪಕ್ಕದಲ್ಲಿದ್ದ ಪ್ರಯಾಣಿಕರಿಗೆ ಸ್ವಲ್ಪ ನೋಡಿಕೊಂಡಿರುವಂತೆ ಹೇಳಿ,ಮತ್ತೆ ಕೂಲಿಯವನೊಂದಿಗೆ ಟ್ಯಾಕ್ಸಿ ಸ್ಟ್ಯಾಂಡ್ ಬಳಿ ಹೋದೆ.ನನ್ನ ಹೆಂಡತಿ"ಮಗ ಎಲ್ಲಿ"ಎಂದಳು."ಟ್ರೈನಿನಲ್ಲಿ ಸಾಮಾನುಗಳ ಜೊತೆ ಕೂರಿಸಿ ಬಂದಿದ್ದೇನೆ,ಪಕ್ಕದವರಿಗೆ ಹೇಳಿದ್ದೇನೆ,ಕೂತಿರುತ್ತಾನೆ ಬಾ "ಎಂದೆ."ರೀ!ನಿಮಗೆ ಅಷ್ಟೂ ಗೊತ್ತಾಗೊದಿಲ್ಲವಾ !?ಅವನೋಬ್ಬನನ್ನೇ ಯಾಕೆ ಕೂರಿಸಿ ಬಂದಿರಿ?"ಎಂದು ತರಾಟೆಗೆ ತೆಗೆದುಕೊಂಡಳು.ನನಗೆ ಒಂದು ಕ್ಷಣ ಎದೆಯಲ್ಲಿ ಅವಲಕ್ಕಿ ಕುಟ್ಟಿ ದಂತಾಯಿತು.ಆದರೂ ಅದನ್ನು ತೋರಿಸಿಕೊಳ್ಳದೇ,ಧೈರ್ಯ ತಂದುಕೊಂಡು "ಏನೂ ಆಗೋಲ್ಲಾ.....,ನೀನು ಸುಮ್ನೆ ಇಲ್ಲದಿರೋದೆಲ್ಲಾ ಯೋಚನೆ ಮಾಡಬೇಡ"ಎಂದು ದಬಾಯಿಸಿ,ಇನ್ನುಳಿದ ಸಾಮಾನುಗಳೊಂದಿಗೆ ನನ್ನ ಬೋಗಿಗೆ ಬಂದೆ.ಸಾಮಾನುಗಳಿವೆ....,ಮಗ ಇಲ್ಲ!!!!ಪಕ್ಕದವರನ್ನು ಕೇಳಿದರೆ "ಇಲ್ಲೇ ಇದ್ದನಲ್ಲಾ!!,ಅರೇ ....!!"ಎಂದು ಆಚೀಚೆ ನೋಡ ತೊಡಗಿದರು!!ನನ್ನ ಎದೆ ಧಸಕ್ ಎಂದಿತು.ಮೈ ಬೆವರೊಡೆಯಿತು.ಕೈ ,ಕಾಲು ತಣ್ಣಗಾಗಿ,ಹೊಟ್ಟೆಯಲ್ಲಿ ವಿಚಿತ್ರ ತಳಮಳ!! ಹೆಂಡತಿ ದೊಡ್ಡ ದನಿಯಲ್ಲಿ ಗೊಳೋ ಎಂದು ಅಳತೊಡಗಿದಳು.ಕಂಕುಳಲ್ಲಿದ್ದ ಒಂದು ವರ್ಷದ ಮಗಳು ಏನೋ ಗಡಿಬಿಯಾಗಿದೆ ಎಂದು ತಿಳಿದು,ಗಾಭರಿಯಿಂದ ತಾನೂ ಜೋರಾಗಿ ಅಳಲು ಶುರು ಮಾಡಿದಳು.ಆಗ ಸಮಯ 5.30.ಇನ್ನು ಹದಿನೈದು ನಿಮಿಷದಲ್ಲಿ ಟ್ರೈನ್ ಹೊರಡುತ್ತೆ!!ನನ್ನ ಬಳಿ ಇರುವುದು ಹದಿನೈದೇ ನಿಮಿಷ!!ಅಷ್ಟರಲ್ಲಿ ,ಆ ದೊಂಬಿಯಲ್ಲಿ ,ಕಳೆದು ಹೋದ ಮಗನನ್ನು ಎಲ್ಲಿ ಹುಡುಕುವುದು!!?ಹೇಗೆ ಹುಡುಕುವುದು?ಮೊದಲು ಟ್ರೈನಿನ ಮುಂಭಾಗಕ್ಕೆ ಓಡಿ,ಎಂಜಿನ್ ಡ್ರೈವರ್ ಗೆ ನಡೆದ ವಿಷಯ ಹೇಳಿದೆ.ಅವನು "ಗಾರ್ಡ್ ಗೆ ವಿಷಯ ತಿಳಿಸಿ"ಎಂದ.ಮತ್ತೆ ಹುಚ್ಚನಂತೆ ಟ್ರೈನ್ ನ ಹಿಂಭಾಗಕ್ಕೆ ಓಡಿ,ಗಾರ್ಡ್ ಗೆ ವರದಿ ಒಪ್ಪಿಸಿದೆ.ನಾವು ಇದ್ದದ್ದು ಒಂಬತ್ತನೇ ಪ್ಲ್ಯಾಟ್ ಫಾರಂ.ಗಾರ್ಡ್ ಮೊದಲನೇ ಪ್ಲ್ಯಾಟ್ ಫಾರಮ್ಮಿಗೆ ಹೋಗಿ ಅನೌನ್ಸರ್ ಗೆ ಹೇಳುವಂತೆ ಹೇಳಿದ.ನನಗೆ ದಿಕ್ಕೇ ತೋಚಲಿಲ್ಲ!!ಏನಾದರೂ ಮಗ ಬಂದಿರ ಬಹುದೇ ಎಂದು ಆಸೆಯಿಂದ ಬೋಗಿಯ ಬಳಿ ಬಂದು ,ಕಿಟಕಿಯಿಂದ ಒಳಗೆ ಇಣುಕಿದೆ."ಇನ್ನೂ ಸಿಗಲಿಲ್ಲವೆನ್ರೀ !!!"ಎಂದು ಕೂಗಿದ ಹೆಂಡತಿಯ ಅಳು ತಾರಕಕ್ಕೇರಿತು !!ಸ್ಪರ್ಧೆಗಿಳಿದಂತೆ ಮಗು ಇನ್ನೂ ಜೋರಾಗಿ ಅಳ ತೊಡಗಿತು!! ಅಕ್ಕ ಪಕ್ಕದವರು ತಲೆಗೊಂದರಂತೆ ಸಲಹೆ ಕೊಡ ತೊಡಗಿದರು.ಕೆಲವರು "ಸಾಮಾನುಗಳನ್ನು ಇಳಿಸಿಕೊಂಡು ಇಳಿದು ಬಿಡಿ "ಎಂದರೆ ಮತ್ತೆ ಕೆಲವರು "ಬೇಡ,ಬೇಡ,ನಿಮ್ಮ ಮಗ ಮತ್ಯಾವುದಾದರೂ ಬೋಗಿಗೆ ಹತ್ತಿರಬಹುದು"ಎಂದರು.ಇನ್ನು ಕೆಲವರು"ಪಕ್ಕದ ಪ್ಲ್ಯಾಟ್ ಫಾರಮ್ಮಿ ನಲ್ಲಿ ನಿಂತಿರುವ ಟ್ರೈನ್ ನಲ್ಲೂ ಒಮ್ಮೆ ನೋಡಿ" ಎಂದರು.ಟ್ರೈನ್ ಹೊರಡಲು ಕೆಲವೇ ನಿಮಿಷಗಳು ಬಾಕಿ ಇವೆ!!!ನನಗೋ ಏನು ಮಾಡಬೇಕೆಂದು ದಿಕ್ಕೇ ತೋಚದಂತಾಗಿತ್ತು!!ಜೀವನದಲ್ಲಿ ಮೊದಲ ಬಾರಿಗೆ ಅಸಹಾಯಕನಾಗಿ,ಹೃತ್ಪೂರ್ವಕವಾಗಿ "ಅಪ್ಪಾ ಈಗ ನೀನೇ ಗತಿ"ಎಂದು ದೇವರನ್ನು ಪ್ರಾರ್ಥಿಸಿದೆ.ನನ್ನ ಪ್ರಾರ್ಥನೆ ಆ ದೇವನಿಗೆ ತಲುಪಿತು.ವಯಸ್ಸಾದ ,ಗಡ್ಡ ಧಾರಿ ಕೂಲಿಯೊಬ್ಬನ ರೂಪದಲ್ಲಿ ದೇವರು, ಅಳುತ್ತಿದ್ದ ನನ್ನ ಮಗನ ಕೈ ಹಿಡಿದು ಬರುತ್ತಿದ್ದ.ಹೃದಯ ಬಾಯಿಗೆ ಬಂದಂತಾಯಿತು.'ಗಳ ಗಳನೆ' ಮಗುವಿನಂತೆ ಅತ್ತು ಬಿಟ್ಟೆ .ನನ್ನ ಮಗ ನನಗೆ ಸಿಕ್ಕಿದ್ದ!!! ಯಾವ ನಿಧಿ ಸಿಕ್ಕಿದರೂ ನನಗೆ ಅಷ್ಟು ಸಂತೋಷವಾಗುತ್ತಿರಲಿಲ್ಲ!!!ಆ ಕೂಲಿಯವನ ಎರಡೂ ಕೈಗಳನ್ನೂ ಹಿಡಿದು ಕಣ್ಣಿಗೆ ಒತ್ತಿಕೊಂಡೆ.ಅವನಿಗೆ ಕೈ ಮುಗಿದು ,ಜೇಬಿನಲ್ಲಿದ್ದ ನೂರರ ಎರಡು ನೋಟುಗಳನ್ನು ಹೊರತೆಗೆದೆ.ಆ ಪುಣ್ಯಾತ್ಮ ಕೂಲಿಯವನು "ನಕ್ಕೋ ಸಾಬ್,ನಕ್ಕೋ ಸಾಬ್"ಎನ್ನುತ್ತಿದ್ದರೂ ಕೇಳದೇ,ಆ ನೋಟುಗಳನ್ನು ಅವನ ಜೇಬಿಗೆ ತುರುಕಿ,ಮಗನ ಕೈ ಹಿಡಿದು ಓಡುತ್ತಾ ಬೋಗಿಗೆ ಬಂದು ಕಿಟಿಕಿಯ ಪಕ್ಕದ ನನ್ನ ಸೀಟಿನಲ್ಲಿ ಕುಳಿತೆ.ಮಗ ಅಳುತ್ತಾ ಅಮ್ಮನ ಮಡಿಲು ಸೇರಿದ.ಅಮ್ಮ ,ಮಗಳು ಅಳು ನಿಲ್ಲಿಸಿದರು.ನನ್ನ ಹೆಂಡತಿ ಅಕ್ಕ ಪಕ್ಕದವರಿಗೆ ನನ್ನ ಬೇಜವಾಬ್ದಾರಿಯ ಬಗ್ಗೆ ಅರಿವು ಮಾಡಿಕೊಡುತ್ತಿದ್ದಳು.ನಾನು ಏನನ್ನೂ ಕೇಳುವ ಸ್ಥಿತಿ ಯಲ್ಲಿ ಇರಲಿಲ್ಲ.ದಿಗ್ಮೂಢನಾಗಿದ್ದೆ !! ಕಿಟಕಿಯಾಚೆ ಶೂನ್ಯ ದೃಷ್ಟಿ ನೆಟ್ಟಿದ್ದೆ.ಕಣ್ಣುಗಳಲ್ಲಿ ಧಾರಾಕಾರ ನೀರು!! I was very badly shaken for the first time in my life!!I was literally trembling!!ಇದ್ಯಾವುದರ ಪರಿವೆಯೇ ಇಲ್ಲದೆ ಟ್ರೈನು ಪ್ಲ್ಯಾಟ್ ಫಾರಂ ಬಿಟ್ಟು ಮೆಲ್ಲನೆ ಮುಂದೆ ಸರಿಯ ತೊಡಗಿತು.ಹೊರಗೆ ನಿಧಾನವಾಗಿ ಕತ್ತಲಾವರಿಸುತ್ತಿದ್ದರೆ,ವಿಚಿತ್ರವೆಂಬಂತೆ ನನ್ನ ಬಾಳಿನಲ್ಲಿ ಆವರಿಸಿದ್ದ ಕತ್ತಲು ದೂರವಾಗಿತ್ತು !!!

Tuesday, July 17, 2012

"ನಿನ್ನ ಅದಮ್ಯ ಚೈತನ್ಯಕ್ಕೆ ನನ್ನದೊಂದು ಸಲಾಂ!!!"

ಗೋಡೆಯ ಬಿರುಕಿನಲ್ಲಿ
ಅಲ್ಲೇ ಇರುಕಿನಲ್ಲಿ
ಗರಿಗೆದರಿ ಚಿಗುರೊಡೆದು
ನಳ ನಳಿಸಿ...........,
ನಗುವ,ನಲಿವ,
ಚಿ..ಗು..ರು..........!
ನನಗೆ ನೀನೇ ಗುರು......!
ಚಿಗುರೊಡೆವ ನಿನ್ನ ಛಲಕ್ಕೆ
ನಮೋನ್ನಮಃ.....!
ಮಣ್ಣಿನ ಹದಬೇಕೆಂದು
ಗೊಣಗಲಿಲ್ಲ!
ಪಾತಿ ಮಾಡಿ,ಬದು ತೋಡಿ
ನೀರುಣಿಸಿ
ಆರೈಕೆ ಮಾಡೆಂದು
ಗೋಗರೆಯಲಿಲ್ಲ! ನಿನ್ನನ್ಯಾರೂ ....... ಬಿತ್ತಲಿಲ್ಲ,ಬೆಳೆಯಲಿಲ್ಲ!
ಸುಖಾ ಸುಮ್ಮನೆ
ಯಾವುದೋ ಗಾಳಿಯಲಿ ಬೀಜವಾಗಿ ತೂರಿಬಂದು
ಗೋಡೆಯಲಿ ಸಿಲುಕಿ
ಮಿಡುಕದೆ
ಸಿಡುಕದೆ
ನಕ್ಕು ಹೊರ ಬಂದೆ
ಮೈ ಕೊಡವಿ!
ನಿನ್ನ ಅದಮ್ಯ ಚೈತನ್ಯಕ್ಕೆ ಜೀವನೋತ್ಸಾಹಕ್ಕೆ
ಇದೋ ..............,
ನನ್ನದೊಂದು ಸಲಾಂ!

Sunday, July 15, 2012

"ಎದೆಗು ,ಎದೆಗು ನಡುವೆ ಕಡಲು!!! "

ಗಂಟಲೊಳಗಿನ ಬಿಸಿ ತುಪ್ಪ
ಉಗುಳಲಾಗದು, ನುಂಗಲಾಗದು!
ಹೆಸರಿಗೆ ಮಾತ್ರದ ಸಂಬಂಧಗಳು !
ಎದೆಗೂ,ಎದೆಗೂ ನಡುವೆ ಕಡಲು!
ಕಡಲೊಳಗೆ ಸಾವಿರ ಸಾವಿರ
ಮುಸುಕಿನ ಗುದ್ದಾಟದ
ಶಾರ್ಕ್,ತಿಮಿಂಗಿಲಗಳು!
ನಮ್ಮ ನಮ್ಮ ಅಹಂಕಾರಗಳ
ಆಕ್ಟೋಪಸ್ ಹಿಡಿತಗಳು!
ಇಷ್ಟು ಸಾಲದೇ ಸಂಬಂಧ ಕೆಡಲು!
ಮೇಲೆ ಮಾತಿನ ಮರ್ಮಾಘಾತದ
ಅಲೆಗಳ ಹೊಡೆತಕ್ಕೆ
ಆತ್ಮೀಯತೆಯ ಸೇತುವಿನ
ಬೆಸೆಯಲಾಗದ ಬಿರುಕು!
ಯಾವುದೋ ಮದುವೆಯಲ್ಲೋ
ಮುಂಜಿಯಲ್ಲೋ,
ಎದುರೆದುರು ಸಿಕ್ಕಾಗ
ಹುಳ್ಳಗೆ ನಕ್ಕು 'ಹಾಯ್'ಎಂದು
ಗಾಯಕ್ಕೆ ಮುಲಾಮು ಸವರೋಣ!!
ಮುಂದಿನ ಭೆಟ್ಟಿಯ ತನಕ
ನಿರಾಳವಾಗಿ 'ಬೈ'ಎಂದು ಬಿಡೋಣ!!

Thursday, July 12, 2012

"ನನಗಲ್ಲ....,ನಿನಗೇ....ಮರೆವು!!!"

ಗಂಡ ಹೆಂಡತಿ ಇಬ್ಬರಿಗೂ ಸುಮಾರು ಎಂಬತ್ತೈದರ ವಯಸ್ಸು.ವಯೋಗುಣಕ್ಕೆ ಸಹಜವಾಗಿ ಸಣ್ಣ ಪುಟ್ಟ ತೊಂದರೆಗಳಿದ್ದರೂ ಅವರಿಗಿದ್ದ ಬಹು ದೊಡ್ಡ ಸಮಸ್ಯೆ ಎಂದರೆ ಮರೆವು .ಮರೆತು ಹೋಗಬಹುದದ್ದನ್ನು ಬರೆದಿಟ್ಟುಕೊಳ್ಳುವಂತೆ ಡಾಕ್ಟರ್ ಒಬ್ಬರು ಸಲಹೆ ನೀಡಿದರು .ಆದರೆ ಇಬ್ಬರೂ ತಮಗೆ ಮರೆವಿದೆಯೆಂದು ಒಪ್ಪಿಕೊಳ್ಳಲು ತಯಾರಿರಲಿಲ್ಲ .ಗಂಡ 'ನನ್ನ ಹೆಂಡತಿಗೆ ತುಂಬಾ ಮರೆವು ಡಾಕ್ಟ್ರೆ'ಎಂದರೆ, ಹೆಂಡತಿ 'ಹಾಗೇನಿಲ್ಲಾ ಡಾಕ್ಟ್ರೆ ಅವರಿಗೇ ವಿಪರೀತ ಮರೆವು 'ಎಂದು ದಬಾಯಿಸುತ್ತಿದ್ದಳು .ಒಂದು ಸಂಜೆ ಇಬ್ಬರೂ ಟಿ.ವಿ.ನೋಡುತ್ತಾ ಕುಳಿತಾಗ ಗಂಡ ಅಡಿಗೆ ಮನೆಗೆ ಹೋಗಲು ಎದ್ದುನಿಂತ .ಹೆಂಡತಿ' ಯಾಕ್ರೀ ಎದ್ರಿ' ?ಎಂದಳು .ಗಂಡ 'ಅಡಿಗೆ ಮನೆಗೆ ,ನೀರು ಕುಡಿಯೋಕೆ 'ಎಂದ .'ಹಾಗೇ ಅಡಿಗೆಮನೆ ಫ್ರಿಡ್ಜ್ ನಿಂದ ನನಗೊಂದು ಕೇಕ್ ತಂದುಕೊಡಿ .ಬರೆದಿಟ್ಟುಕೊಳ್ಳಿ ,ಮರೀತೀರ 'ಎಂದಳು ಹೆಂಡತಿ.ಗಂಡನಿಗೆ ಸಿಟ್ಟು ಬಂತು . 'ಹೋಗೇ---ಹೋಗೇ ,ಅದನ್ನೆಲ್ಲಾ ಯಾರಾದರೂ ಬರೆದಿಟ್ಟು ಕೊಳ್ಳುತ್ತಾರಾ ,ನೀ ಹೇಳಿದ ಕೇಕ್ ಮರೀದೆ ತರ್ತೀನಿ,ನೋಡ್ತಾ ಇರು 'ಎಂದು ನಿಧಾನವಾಗಿ ಅಡಿಗೆ ಮನೆಗೆ ಹೋದ .
ಅರ್ಧ ಗಂಟೆಯ ನಂತರ ಬ್ರೆಡ್ ಟೋಸ್ಟ್ ಇದ್ದ ಪ್ಲೇಟ್ ಒಂದನ್ನು ಕೈಯಲ್ಲಿ ಹಿಡಿದು ಬಂದು, 'ನೋಡು ,ನೀನು ಹೇಳಿದ ಬ್ರೆಡ್ ಟೋಸ್ಟ್ ಜ್ಞಾಪಕ ಇಟ್ಟು ಕೊಂಡು ತಂದಿಲ್ವಾ ?ಸುಮ್ನೆ ಮರೆವೂ ,ಮರೆವೂ ಅಂತೀಯ', ಎಂದ .ಹೆಂಡತಿ ಆಶ್ಚರ್ಯದಿಂದ 'ಹೌದಲ್ರೀ ನಿಮ್ಮ ನೆನಪಿನ ಶಕ್ತಿ ಚೆನ್ನಾಗೆ ಇದೆ !ನಾನು ಹೇಳಿದ್ದು ಬ್ರೆಡ್ ಟೋಸ್ಟೇ 'ಎಂದು ಒಪ್ಪಿಕೊಂಡಳು.'ನೋಡಿದ್ಯಾ ,ನೆನಪಿಟ್ಟುಕೊಂಡು ನಿನಗೆ ಬ್ರೆಡ್ ಟೋಸ್ಟ್ ತಂದಿದ್ದಲ್ಲದೇ ನಾನು ಕುಡಿಯೋಕೆ ಅಂತ ಹೋಗಿದ್ದ ಕಾಫಿಯನ್ನೂ ಮರೀದೆ ಮಾಡಿ ಕುಡಿದು ಬಂದೆ ',ಎಂದು ಗಂಡ ಜಂಬ ಕೊಚ್ಚಿಕೊಂಡ !!!

Tuesday, July 10, 2012

"ಹೆಂಡತಿಗೆ ಕಿವಿ ಕೆಪ್ಪು !!!"

ವೈದ್ಯರೊಬ್ಬರ ಬಳಿಗೆ ಒಬ್ಬ ವ್ಯಕ್ತಿ ಬಂದು "ಸರ್,ನನ್ನ ಹೆಂಡತಿಗೆ ಕಿವಿ ಸರಿಯಾಗಿ ಕೇಳಿಸುವುದಿಲ್ಲಾ ಅಂತ ನನಗೆ ಅನುಮಾನ. ಏನಾದರೂ ಔಷಧಿ ಇದ್ದರೆ ಕೊಡಿ"ಎಂದ.
ಅದಕ್ಕೆ ವೈದ್ಯರು "ನೋಡಿ ಮಿಸ್ಟರ್,ಹಾಗೆಲ್ಲಾ ಪರೀಕ್ಷೆ ಮಾಡದೇ ಔಷಧಿ ಕೊಡಲು ಆಗುವುದಿಲ್ಲ.ಅವರನ್ನು ಕರೆದು ಕೊಂಡು ಬನ್ನಿ ,ಪರೀಕ್ಷೆ ಮಾಡಿ ಔಷಧಿ ಕೊಡೋಣ"ಎಂದರು.
ಅದಕ್ಕೆ ಆ ವ್ಯಕ್ತಿ "ಅವಳು ಆಸ್ಪತ್ರೆಗೆ ಬರುವುದಿಲ್ಲಾ ಸರ್.ನಿಮಗೇ ಕಿವಿ ಕೆಪ್ಪು.ಬೇಕಾದರೆ ನೀವೇ ಪರೀಕ್ಷೆ ಮಾಡಿಸಿಕೊಳ್ಳಿ"ಎಂದು ದಬಾಯಿಸುತ್ತಾಳೆ ಎಂದ.
ಅದಕ್ಕೆ ವೈದ್ಯರು"ಅವರಿಗೆ ಎಷ್ಟು ದೂರದಿಂದ ಕಿವಿ ಕೇಳುವುದಿಲ್ಲ ಎಂದು ತಿಳಿದು ಕೊಂಡು ಬನ್ನಿ .ಆಮೇಲೆ ನೋಡೋಣ"ಎಂದರು.
ಆ ದಿನ ಆ ವ್ಯಕ್ತಿ ತನ್ನ ಹೆಂಡತಿಗೆ ಎಷ್ಟು ದೂರದಿಂದ ಕಿವಿ ಕೇಳುವುದಿಲ್ಲ ಎಂದು ತಿಳಿದುಕೊಳ್ಳಬೇಕೆಂದು ನಿರ್ಧರಿಸಿ ಮನೆಗೆ ಬಂದ.ಹೆಂಡತಿ ಅಡಿಗೆ ಮನೆಯಲ್ಲಿದ್ದಳು.
ಇವನು ಮನೆಯ ಮುಂಬಾಗಿಲ ಬಳಿ ನಿಂತು"ಏನೇ, ಇವತ್ತು ಏನಡಿಗೆ ?"ಎಂದು ಕೂಗಿದ.
ಉತ್ತರವಿಲ್ಲ.ನಡು ಮನೆಗೆ ಬಂದು ಕೂಗಿದ.ಉತ್ತರವಿಲ್ಲ.ಹೀಗೆಯೇ ಹತ್ತಾರುಸಲ ಸ್ವಲ್ಪ,ಸ್ವಲ್ಪವೇ ಹತ್ತಿರಬಂದು"ಏನೇ ,ಇವತ್ತು ಏನಡಿಗೆ?"ಎಂದು ಪ್ರಶ್ನೆ ಕೇಳಿ ,ಉತ್ತರ ಸಿಗದೇ, ಕಡೆಗೆ ಅಡಿಗೆ ಮನೆಗೆ ಬಂದು "ಏನೇ....,ಇವತ್ತು ಏನಡಿಗೆ?"ಎಂದ.
ಅದಕ್ಕೆ ಅವನ ಹೆಂಡತಿ"ಅಯ್ಯೋ......!ಆಗ್ಲಿಂದ ಹತ್ತು ಸಲ ಬೆಂಡೆಕಾಯಿ ಸಾಂಬಾರು,ಬೆಂಡೆಕಾಯಿ ಸಾಂಬಾರು ಅಂತ ಬಡಕೊಂಡು,ಬಡಕೊಂಡು ಸಾಕಾಯಿತು.ನಿಮಗೇ ಕಿವಿ ಕೆಪ್ಪಾಗಿದೆ ಅಂತ ಹೇಳಿದರೆ ನೀವು ಕೇಳೋಲ್ಲಾ!ಮೊದಲು ಹೋಗಿ ಪರೀಕ್ಷೆ ಮಾಡಿಸಿಕೊಳ್ಳಿ."ಎಂದಳು.
ಪರೀಕ್ಷೆ ಮಾಡಲು ಬಂದವನೇ ಪರೀಕ್ಷೆಯಲ್ಲಿ ಫೇಲಾಗಿದ್ದ!!! ಪರೀಕ್ಷೆಯ ರಿಸಲ್ಟ್ ತಿಳಿದು ಪೇಲಾಗಿದ್ದ!!!

Sunday, July 8, 2012

"ಬದುಕಲು ಕಲಿಸಿದ"ಮರೆಯಲಾರದ ರೋಗಿ!!!

ಬಿಳಿಗಿರಿ ಆಚಾರ್ಯರು ಸುಮಾರು ಎಂಬತ್ತೈದರ ಆಸುಪಾಸಿನ ಸಾತ್ವಿಕ ಸ್ವಭಾವದ ವಯೋವೃದ್ಧರು .ಯಾರನ್ನೂ ನೋಯಿಸದ ಮಾಗಿದ ವ್ಯಕ್ತಿತ್ವ .ಎಷ್ಟೇ ಕಷ್ಟವಿದ್ದರೂ ಸದಾ ಅವರ ಮುಖದಲ್ಲೊಂದು ಮಾಸದ ಮಂದಹಾಸವಿರುತ್ತಿತ್ತು. ಉಬ್ಬಸದ ತೊಂದರೆಗಾಗಿ ಆಗಾಗ ಆಸ್ಪತ್ರೆಗೆ ಅಡ್ಮಿಟ್ ಆಗುತ್ತಿದ್ದರು.ಆಸ್ಪತ್ರೆಯಲ್ಲಿದ್ದಾಗಲೂ ಕಾಲಹರಣ ಮಾಡದೇ, ಯಾವುದಾದರೊಂದು ಪುಸ್ತಕ ಓದುತ್ತಿದ್ದರು.ಆ ಇಳಿ ವಯಸ್ಸಿನಲ್ಲೂ ಅವರದು ಅಚ್ಚರಿ ಮೂಡಿಸುವಂತಹ ಜ್ಞಾನ ದಾಹ! ಆ ದಿನ ವಾರ್ಡ್ ರೌಂಡ್ಸ್ ನಲ್ಲಿ ಅವರ ಬೆಡ್ಡಿನ ಹತ್ತಿರ ಹೋದಾಗ, ಅವರು ಸ್ವಾಮಿ ಜಗದಾತ್ಮಾನಂದರ ಪ್ರಸಿದ್ಧ ಪುಸ್ತಕ 'ಬದುಕಲು ಕಲಿಯಿರಿ -ಭಾಗ ಒಂದು ' ಓದುತ್ತಿದ್ದರು. ನನ್ನ ಸಹೋದ್ಯೋಗಿಯೊಬ್ಬರು ಸುಮ್ಮನಿರದೇ 'ಏನು ಆಚಾರ್ರೆ ,ಈ ವಯಸ್ಸಿನಾಗೂ ,ಬದುಕಲು ಕಲಿಯಿರಿ ಪುಸ್ತಕ ಓದುತ್ತಿದ್ದೀರಿ?' ಎಂದು ಕೇಳಿಯೇ ಬಿಟ್ಟರು.ಆಚಾರ್ಯರೂ ಸ್ವಲ್ಪವೂ ಬೇಸರ ಪಟ್ಟುಕೊಳ್ಳದೆ,ತಮ್ಮನ್ನು ತಾವೇ ಹಾಸ್ಯ ಮಾಡಿಕೊಳ್ಳುವಂತೆ 'ಏನ್ ಮಾಡೋದ್ರೀ.......,ಸಾಯೋ ಕಾಲ ಬಂದದೆ,ಇನ್ನೂ ಬದುಕೋದು ಕಲಿತೇ ಇಲ್ಲಾ ! 'ಎಂದು ಜೋರಾಗಿ ನಕ್ಕರು.ಅವರ ಕೆಮ್ಮು , ಉಬ್ಬಸ ಹೆಚ್ಚಾಯಿತು.ನಾನು 'ಆಯಾಸ ಮಾಡಿಕೋ ಬೇಡ್ರಿ ಆಚಾರ್ರೆ 'ಎಂದೆ.ಅದಕ್ಕವರು 'ಏನೂ ಆಗಂಗಿಲ್ಲ ಬಿಡ್ರೀ.ಹಂಗೇನಾದರೂ ಆದರೂ ಮತ್ತಷ್ಟು ಛಲೋನಾ ಆತು 'ಎಂದು ಮತ್ತೆ ನಕ್ಕರು . ತಮ್ಮ ಬಳಿ ಇದ್ದ 'ಬದುಕಲು ಕಲಿಯಿರಿ -ಭಾಗ ೨'ಪುಸ್ತಕವನ್ನು ನನ್ನ ಸಹೋದ್ಯೋಗಿಗೆ ಕೊಟ್ಟು 'ಬಹಳ ಒಳ್ಳೇ ಪುಸ್ತಕ ,ಇವತ್ತು ಓದಿ ನಾಳೆ ನನಗ ಕೊಡ್ರಿ'ಎಂದರು.ಮಾರನೇ ದಿನ ಬೆಳಿಗ್ಗೆ ವಾರ್ಡಿಗೆ ಬಂದಾಗ ಆಚಾರ್ಯರ ಬೆಡ್ ಖಾಲಿಯಾಗಿತ್ತು.ಬೆಳಿಗ್ಗೆ ಐದು ಗಂಟೆಗೆ ಆಚಾರ್ಯರು ತೀರಿಕೊಂಡಿದ್ದರು.ಅವರಿಗೆ ವಾಪಸ್ ಕೊಡಲು ತಂದ,ಅವರು ಕೊಟ್ಟ 'ಬದುಕಲು ಕಲಿಯಿರಿ'ಪುಸ್ತಕ ನನ್ನ ಸಹೋದ್ಯೋಗಿಯ ಕೈಯಲ್ಲಿತ್ತು. ಆಚಾರ್ಯರು ಬದುಕಿನ ಕಲಿಕೆ ಮುಗಿಸಿದ್ದರು.........!!!ಅವರ ಖಾಲಿ ಬೆಡ್ಡಿನಿಂದ "ಸಾಯೋವರೆಗೂ ಕಲಿಯೋದು ಮುಗಿಯಂಗಿಲ್ರೀ "ಎಂದು ಆಚಾರ್ಯರು ಹೇಳಿ ನಕ್ಕಂತಾಯಿತು!!!ಅವರು ತಮ್ಮ ಸಾವಿನಲ್ಲೂ ಹೊಸ ಪಾಠವೊಂದನ್ನು ಕಲಿಸಿದ್ದರು !!!ಅವರ ಅದಮ್ಯ ಚಿತನ್ಯಕ್ಕೆಎಲ್ಲಿಯ ಸಾವು ?ಇಂತಹ ರೋಗಿಯನ್ನು ಮರೆಯುವುದಾದರೂ ಹೇಗೆ!?

Monday, July 2, 2012

"ಹೀಗೊಂದು ಆಟೋ ಅನುಭವ !!!"

ನೆನ್ನೆ ಸಂಜೆ ಸುಮಾರು ಆರು ಘಂಟೆಗೆ ಬೆಂಗಳೂರಿನಲ್ಲಿ ವಿಜಯನಗರದಿಂದ ಶೇಷಾದ್ರಿಪುರಂಗೆ ಹೋಗಲು ಆಟೋಗಾಗಿ ಕಾಯುತ್ತಿದ್ದೆ.ರಜಾ ದಿನವಾದ್ದರಿಂದ ಮಲ್ಲೇಶ್ವರಂನ 'ಮಂತ್ರಿ ಮಾಲ್ 'ಸುತ್ತ ಮುತ್ತ ವಿಪರೀತ 'ಟ್ರ್ಯಾಫಿಕ್ ಜ್ಯಾಮ್'ನಿಂದಾಗಿ ಆ ಕಡೆ ಬರಲು ಯಾವ ಆಟೋದವರೂ ಇಷ್ಟ ಪಡುವುದಿಲ್ಲ .ಖಾಲಿ ಆಟೋ ಅಂತ ಕೈ ತೋರಿಸಿದರೆ,ಆಟೋ ನಿಲ್ಲಿಸಿ 'ಶೇಷಾದ್ರಿಪುರಂ' ಎಂದು ಹೇಳಿದ ತಕ್ಷಣ,ಕೆಟ್ಟ ಮುಖ ಮಾಡಿ,ತಿರಸ್ಕಾರದ ನೋಟ ಬೀರಿ,ದುರ್ದಾನ ತೆಗೆದು ಕೊಂಡವರಂತೆ 'ಭರ್'ಎಂದು ಮುಂದೆ ಹೋಗಿಬಿಡುತ್ತಾರೆ!ಸುಮಾರು ಹತ್ತು ಆಟೋಗಳಿಗೆ 'ಕೈ ತೋರಿಸಿ ಅವಲಕ್ಷಣ'ಎನಿಸಿ ಕೊಂಡಿದ್ದಾಯಿತು! ಅವೆಲ್ಲಾ 'ನಾ....ಒಲ್ಲೇ'ಎಂದು ಮುನಿಸಿಕೊಂಡು ಮುಂದೆ ಹೋದವು.ಹನ್ನೊಂದನೇ ಆಟೋದವನು ನಾನು ಶೇಷಾದ್ರಿಪುರಂ ಎಂದಾಗ ಬನ್ನಿ ಎಂಬಂತೆ ಸುಮ್ಮನೇ ತಲೆ ಆಡಿಸಿದ!ಸುಮಾರು ಆಟೋದವರು ಆಟೋ ಹತ್ತಿದ ತಕ್ಷಣ ತಮ್ಮ ಕಷ್ಟಗಳ ಪ್ರವರ ಶುರುಮಾಡಿಬಿಡುತ್ತಾರೆ. ಟ್ರ್ಯಾಫಿಕ್ ಅನ್ನೋ,ರಾಜಕೀಯ ಅವ್ಯವಸ್ಥೆಯನ್ನೋ ಬಯ್ದು ಮನಸ್ಸು ಹಗುರ ಮಾಡಿಕೊಳ್ಳುತ್ತಾರೆ.ಅಥವಾ ನಮ್ಮ ಬಗ್ಗೆ 'ನೀವು ಯಾರು?ಎತ್ತ?ಎಲ್ಲಿಂದ ಬಂದಿರಿ?ಎಲ್ಲಿ ಕೆಲಸ?ಎಷ್ಟು ಮಕ್ಕಳು?'ಎಂದೆಲ್ಲಾ ಪ್ರಶ್ನೆ ಕೇಳುತ್ತಾ ತಲೆ ಚಿಟ್ಟು ಹಿಡಿಸುತ್ತಾರೆ!ನಾವು ತಲಪುವ ಸ್ಥಳ ಬರುವ ತನಕ ಮುಳ್ಳಿನ ಮೇಲೆ ಕೂತಂತಾಗಿರುತ್ತದೆ!ಆಶ್ಚರ್ಯ ವೆಂಬಂತೆ ಈ ಆಟೋದವನು ತುಟಿ ಬಿಚ್ಚಲಿಲ್ಲ!ಯಾವುದೇ ಆತುರವಿಲ್ಲದೇ(ಆಟೋದವರಲ್ಲೊಂದು ಅಪರೂಪದ ಗುಣ !),ನಿಧಾನವಾಗಿ ಕರೆದೊಯ್ದ.ನನ್ನ ವೈದ್ಯಕೀಯ ಒಳಗಣ್ಣು ಇವನಿಗೇನೋ ತೊಂದರೆ ಇದೆ ಎಂದು ಹೇಳುತ್ತಿತ್ತು.ನಾನು ಇಳಿಯುವ ಸ್ಥಳ ಬಂದಾಗ ಮೀಟರ್ ಅರವತ್ತು ರೂಪಾಯಿ ತೋರಿಸುತ್ತಿತ್ತು.ನೂರು ರೂಪಾಯಿಯ ನೋಟೊಂದನ್ನು ಕೊಡುತ್ತಾ "ಯಾಕಪ್ಪ ಹುಶಾರಿಲ್ಲವಾ?"ಎಂದೆ.ಅದಕ್ಕವನು 'ನನಗೆ ಕಿಡ್ನಿ ಫೈಲ್ಯೂರ್ ಆಗಿದೆ ಸರ್.ಇದ್ದ ಹಣಾ ಎಲ್ಲಾ ಆಸ್ಪತ್ರೆಗೇಖರ್ಚಾಯಿತು.ಆಪರೇಶನ್ ಎಲ್ಲಾ ನಮ್ಮ ಕೈಯಲ್ಲಿ ಎಲ್ಲಿ ಆಗುತ್ತೇ ಸರ್?ನಾನು ಬಹಳ ದಿನ ಬದುಕೊಲ್ಲಾ ಅಂತ ಗೊತ್ತು'ಎಂದು ತಣ್ಣಗೆ ಹೇಳಿದ.ಅವನನ್ನು ನೋಡಿದ ತಕ್ಷಣ ಅವನಿಗೇನೋ ಹುಶಾರಿಲ್ಲ ಅಂತ ತಿಳಿಯುತ್ತಿತ್ತು.ಆದರೆ ಅವನಿಗೆ 'ಕಿಡ್ನಿ ಫೈಲ್ಯೂರ್'ಆಗಿರಬಹುದೆಂದು ನಾನು ಕನಸು ಮನಸಿನಲ್ಲೂ ಊಹಿಸಿರಲಿಲ್ಲ.ಒಂದು ಕ್ಷಣ ಅವನ ಕಣ್ಣುಗಳಲ್ಲಿ 'ಸಾವು'ಇಣುಕಿ ಹೋದದ್ದು ಕಂಡು ಅವಾಕ್ಕಾದೆ."ಇಂತಹ ಸ್ಥಿತಿಯಲ್ಲೂ ಗಾಡಿ ಓಡಿಸುತ್ತಿದ್ದೀಯಲ್ಲಪ್ಪಾ! ಸುಸ್ಥಾಗುವುದಿಲ್ಲವಾ?"ಎಂದೆ. 'ಏನು ಮಾಡೋದು ಸರ್!ತುಂಬಾ ಸುಸ್ತಾಗುತ್ತೆ!ಉಸಿರಿರೋಗಂಟಾ ಹೊಟ್ಟೀಗೋಸ್ಕರ ಹೊಡೆದಾಡಲೇ ಬೇಕಲ್ಲಾ ಸರ್?ಮನೇಲಿ ಸಣ್ಣ ಸಣ್ಣ ಮಕ್ಕಳಿದ್ದಾರೆ.ನಾನು ಆಟೋ ಓಡಿಸದಿದ್ದರೆ ಅವಕ್ಕೆ ಊಟವಿಲ್ಲ' ಎಂದು ಕಣ್ಣಲ್ಲಿ ನೀರು ತಂದು ಕೊಂಡ.'ಲೈಫು ಇಷ್ಟೇನೇ!!!'ಅನಿಸಿ, ಮನಸ್ಸು ಭಾರವಾಯಿತು. ನಾನು ಕೊಟ್ಟ ನೂರು ರೂಪಾಯಿಗೆ ಅವನು ಕೊಟ್ಟ ಬಾಕಿ ಹಣ ನಲವತ್ತು ರೂಪಾಯಿಗಳನ್ನು ಅವನಿಗೇ ಹಿಂದಿರುಗಿಸಿ,'ಅದನ್ನು ನೀನೇ ಇಟ್ಟು ಕೊಳ್ಳಪ್ಪಾ,ಒಳ್ಳೆಯದಾಗಲೀ'ಎಂದು ಬೀಳ್ಕೊಟ್ಟೆ.'ಥ್ಯಾಂಕ್ಯೂ ಸರ್.ದೇವರು ನಿಮ್ಮಂಥವರನ್ನು ಚೆನ್ನಾಗಿಟ್ಟಿರಲಿ'ಎಂದು ಹಾರೈಸಿ,ನನ್ನ ಮನಸ್ಸಿನಲ್ಲೊಂದು ಬಿರುಗಾಳಿ ಎಬ್ಬಿಸಿ 'ಭರ್'ಎಂದು ಸದ್ದು ಮಾಡುತ್ತಾ ,ಕತ್ತಲಲ್ಲಿ ಕಣ್ಮರೆಯಾದ!!!

Thursday, June 21, 2012

"ವೈದ್ಯೋ ನಾರಾಯಣೋ ಹರಿ!!!"ನಮಗೆ ದೇವರ ಪಟ್ಟ ಬೇಡಾರೀ !!!

ವೈದ್ಯನೂ ಎಲ್ಲರಂತೆ ಒಬ್ಬ ಮನುಷ್ಯ.ಎಲ್ಲಾ ಮನುಷ್ಯರಂತೆ ಅವನಿಗೂ ಮನುಷ್ಯರಿಗೆ ಸಹಜವಾದ ಆಸೆ,ರಾಗ ,ದ್ವೇಷ,ಸಿಟ್ಟು,ಅಸೂಯೆ ಮುಂತಾದ ಅವಗುಣಗಳು ಇದ್ದೇ ಇರುತ್ತವೆ.ವೈದ್ಯನಾಗಿ ಕರ್ತವ್ಯ ನಿರ್ವಹಿಸುವಾಗ ಅವನು ಎಲ್ಲಾ ಅವಗುಣಗಳನ್ನೂ ಆಚೆಗಿಟ್ಟು,ಸದ್ಗುಣಗಳ ಗಣಿಯೇ ಆಗಿರಬೇಕೆನ್ನುವುದು ಸಹಜವಾಗಿಯೇ ಎಲ್ಲರ ಆಶಯ.ಇದರಲ್ಲಿ ಖಂಡಿತ ತಪ್ಪಿಲ್ಲ.ಸಮಾಜದ ಬೇರೆಲ್ಲಾ ಕ್ಷೇತ್ರಗಳಲ್ಲೂ ಅರಾಜಕತೆ,ಭ್ರಷ್ಟಾಚಾರ,ಅವ್ಯವಸ್ಥೆ ತಾಂಡವವಾಡುತ್ತಿದೆ.ವೈದ್ಯಕೀಯ ವೃತ್ತಿಯೂ ಇದಕ್ಕೆ ಹೊರತಾಗಿಲ್ಲ. ವೈದ್ಯರೂ ಈ ಸಮಾಜದ ಒಂದು ಭಾಗ.ವೈದ್ಯರು ಕೆಟ್ಟಿದ್ದಾರೆಂದರೆ ಈ ಸಮಾಜವೂ ರೋಗಗ್ರಸ್ಥ ವಾಗಿದೆಯೆಂದೇ ಅರ್ಥವಲ್ಲವೇ? ಒಂದು ಸಮಾಜದ ಅಂಗವಾದ ಒಬ್ಬ ವ್ಯಕ್ತಿಯ ಮೂಲಭೂತ ವ್ಯಕ್ತಿತ್ವ ಬದಲಾಗದೇ ಅವನು ನಿರ್ವಹಿಸುವ ಕಾರ್ಯ ಕ್ಷೇತ್ರದಲ್ಲಿನ ವ್ಯಕ್ತಿತ್ವ ಕೂಡ ಬದಲಾಗುವುದಿಲ್ಲ. ಆದ್ದರಿಂದ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವ ವೈದ್ಯರ ಜವಾಬ್ದಾರಿ ಹೆಚ್ಚಿನದು.ಎಲ್ಲರಿಗಿಂತ ಹೆಚ್ಚಾಗಿ ಅವರು ತಮ್ಮ ಜೀವನದಲ್ಲಿ ಮಾನವೀಯಮೌಲ್ಯಗಳನ್ನು ಹೆಚ್ಚು ಅಳವಡಿಸಿಕೊಳ್ಳಬೇಕಾಗುತ್ತದೆ.ಅದಕ್ಕೆಆಧ್ಯಾತ್ಮದ ಅಧ್ಯಯನ ಹೆಚ್ಚು ಸಹಕಾರಿ.ಹಾಗೆಂದು ವೈದ್ಯರೆಲ್ಲರೂ ಎಲ್ಲವನ್ನೂ ಬಿಟ್ಟು ಸನ್ಯಾಸಿಗಳಾಗಲು ಸಾಧ್ಯವಿಲ್ಲ .ಸ್ವಲ್ಪ ಮಟ್ಟಿಗಾದರೂ ಬೇರೆಯವರ ಕಷ್ಟಗಳಿಗೆ ಸ್ಪಂದಿಸುವ ಗುಣ,ಮಾನವೀಯ ಅನುಕಂಪ ಹೊಂದಿರುವುದು ಅವಶ್ಯ.ಎಲ್ಲರಲ್ಲೂ ತನ್ನಲ್ಲಿರುವ ಚೈತನ್ಯವೇ ಅಡಗಿದೆ,ಎಲ್ಲರೂ ತನ್ನಂತೆಯೇ ತಮ್ಮ ತಮ್ಮ ಕಷ್ಟಗಳ ಹೊರೆ ಹೊರಲು ಹೆಣಗುತ್ತಿದ್ದಾರೆ ಎನ್ನುವ ಅರಿವು ಅವಶ್ಯ."BE KIND,AS EVERY ONE YOU MEET IS FIGHTING HIS OWN HARD BATTLE!!" ಅನುಕಂಪ ತುಂಬಿದ ನಾಲಕ್ಕುಒಳ್ಳೆಯ ಸಾಂತ್ವನದ ಮಾತು,ತಾಳ್ಮೆಯಿಂದ ಅವರ ಕಷ್ಟಗಳನ್ನು ಆಲಿಸುವಿಕೆ,ಆಸ್ಥೆಯಿಂದ ಅವರನ್ನು ಪರೀಕ್ಷಿಸಿ,ಅವರಿಗೆ ನೀಡುವ ಸಲಹೆ ,ಎಷ್ಟೋ ರೋಗಗಳನ್ನು ಗುಣ ಪಡಿಸಬಲ್ಲದು.ತನ್ನ ರೋಗಿಗಳಿಗೆ ತನ್ನಿಂದ ಒಳಿತಾಗುತ್ತದೆಯೆಂಬ ವೈದ್ಯನ ಬಲವಾದ ನಂಬಿಕೆಯೇ ರೋಗಿಗಳಿಗೆ ಸಂಜೀವಿನಿ ಯಾಗಬಲ್ಲದು! ಆದರೆ ಕೆಲವೊಮ್ಮೆ ಸೇವಾ ಮನೋಭಾವದ ವೈದ್ಯನೊಬ್ಬ ನಿಷ್ಠೆಯಿಂದ ತನ್ನೆಲ್ಲಾ ಅನುಭವಗಳನ್ನೂ ಧಾರೆ ಎರೆದು ಚಿಕಿತ್ಸೆ ನೀಡಿದರೂ ಚಿಕಿತ್ಸೆ ಫಲಕಾರಿಯಾಗದಿರಬಹುದು. ಭಗವದ್ಗೀತೆ ಯಲ್ಲಿ ಹೇಳಿದಂತೆ ನಿಷ್ಟೆಯಿಂದ ಕರ್ಮ ಮಾಡುವುದು ಅವನ ಕೈಯಲ್ಲಿದೆ.ಆದರೆ ಆ ಕರ್ಮದ ಫಲ ಅವನ ಕೈ ಮೀರಿದ್ದಲ್ಲವೇ?ಜನ ಮೊದಲು ಇದನ್ನು ಅರ್ಥ ಮಾಡಿಕೊಳ್ಳಬೇಕು.ಚಿಕಿತ್ಸೆ ಫಲಕಾರಿಯಾಗದಿದ್ದಲ್ಲಿ , ನ್ಯಾಯವಾಗಿ ,ನಿಷ್ಟೆಯಿಂದ ಕೆಲಸ ಮಾಡಿದ ವೈದ್ಯರೂ ರೋಗಿಯ ಕಡೆಯವರಿಂದ ಹಲ್ಲೆಗೊಳಗಾಗುವ ಘಟನೆಗಳು ದಿನ ನಿತ್ಯ ನಡೆಯುತ್ತಿವೆ.ಹಾಗಾಗಿ ವೈದ್ಯರಲ್ಲಿ ಆತಂಕ ಹೆಚ್ಚುತ್ತಿದೆ.ಕ್ಲಿಷ್ಟಕರವಾದ ಕೇಸ್ ಬಂದಾಗ ಸುಮ್ಮನೇ ಯಾಕೆ ಕಷ್ಟವನ್ನು ಮೈ ಮೇಲೆ ಎಳೆದುಕೊಳ್ಳಬೇಕು?ಎಂದು ರೋಗಿಯನ್ನು ಬೇರೊಂದು ಆಸ್ಪತ್ರೆಗೆ ರವಾನಿಸುವ ಧೋರಣೆ ವೈದ್ಯರಲ್ಲಿ ಹೆಚ್ಚಾಗುತ್ತಿದೆ.ಇದು ಖಂಡಿತ ಆರೋಗ್ಯಕರ ಬೆಳವಣಿಗೆಯಲ್ಲ.ಇದಕ್ಕೆ ಬರೀ ವೈದ್ಯರನ್ನು ದೂರಿ ಕೈ ತೊಳೆದುಕೊಂಡರೆ ಪ್ರಯೋಜನವಿಲ್ಲ.ಮೂವತ್ತೈದು ವರ್ಷಗಳ ಹಿಂದೆ ನಾನು ವೈದ್ಯಕೀಯ ಕ್ಷೇತ್ರಕ್ಕೆ ಕಾಲಿಟ್ಟಾಗ ರೋಗಿಯ ಕಡೆಯವರಿಂದ 'ಸರ್ ನಿಮ್ಮ ಪ್ರಯತ್ನ ನೀವು ಮಾಡಿ.ನೀವು ಸರಿಯಾದ ಚಿಕಿತ್ಸೆಯನ್ನೇ ಕೊಡುತ್ತೀರಿ ಎನ್ನುವ ನಂಬಿಕೆ ನಮಗಿದೆ.ಇನ್ನು ಅವನು ಬದುಕುವುದು ಬಿಡುವುದು ದೈವೇಚ್ಛೆ 'ಎಂದು ಭರವಸೆ ಕೊಡುತ್ತಿದ್ದರು.ಅಂತಹ ಮಾತುಗಳು ಸಾವು ಬದುಕಿನೊಡನೆ ಹೋರಾಡುವ ವೈದ್ಯನಿಗೆ ನೂರಾನೆಯ ಬಲ ಕೊಡುತ್ತವೆ!!ಈಗೀಗ ಜನರ ವರ್ತನೆ ಬದಲಾಗುತ್ತಿದೆ .ಪ್ರತಿಯೊಂದಕ್ಕೂ ವೈದ್ಯನ ಮೇಲೆ ಗೂಬೆ ಕೂರಿಸುವುದು ಸಾಮಾನ್ಯವಾಗಿದೆ.ಎಲ್ಲಾ ವೈದ್ಯರೂ ಸಾಚಾಗಳೆಂದು ನಾನು ಹೇಳುತ್ತಿಲ್ಲ.ಆದರೆ ಮಾಧ್ಯಮಗಳಲ್ಲಿ ಬಿಂಬಿಸುವಂತೆ ಎಲ್ಲಾ ವೈದ್ಯರೂ ಖಂಡಿತಾ ಖಳ ನಾಯಕರಲ್ಲ.ವೈದ್ಯಕೀಯ ಕಾಲೆಜುಗಳನ್ನು ಸ್ಥಾಪಿಸುವ ಉದ್ಯಮಿಗಳು,ಭಾವೀ ವೈದ್ಯರಿಂದ ಕೋಟಿಗಟ್ಟಲೆ ಹಣ ಲೂಟಿ ಹೊಡೆಯುತ್ತಾರೆ.ಅಲ್ಲಿಂದ ಹೊರ ಬಂದ ವೈದ್ಯರು ಮಾತ್ರ ನಿಸ್ವಾರ್ಥ ಸೇವೆ ಸಲ್ಲಿಸಲಿ ಎಂದು ಬಯಸುವುದು ಎಷ್ಟು ಸರಿ?ಇದಕ್ಕೆ ಪರಿಹಾರವೆಂದರೆ ಸರ್ಕಾರ ಖಾಸಗಿ ಕಾಲೇಜು ಗಳನ್ನು ಕಡಿಮೆ ಮಾಡಿ,ಸರ್ಕಾರಿ ಕಾಲೇಜುಗಳಲ್ಲಿ ಪ್ರತಿಭಾನ್ವಿತ,ಸೇವಾ ಮನೋಭಾವವಿರುವ ವಿಧ್ಯಾರ್ಥಿಗಳಿಗೆ ಸೀಟು ಕೊಡಲಿ.ಅವರಿಗೆ ವೈದ್ಯರಾದ ನಂತರ ಉಚ್ಚ ಅಧಿಕಾರಿಗಳಿಗೆ ಕೊಡುವಷ್ಟು ವೇತನ ನೀಡಲಿ.ಆಗ ಮಾತ್ರ ಜನ ಸಾಮಾನ್ಯರಿಗೆ ಒಳ್ಳೆಯ ವೈದ್ಯಕೀಯ ಸೇವೆ ಲಭ್ಯವಾಗುತ್ತದೆ.ಇಲ್ಲದಿದ್ದರೆ ಪರಿಸ್ಥಿತಿ ಮತ್ತಷ್ಟು ಹದ ಕೆಡುತ್ತದೆ.ಜನ ವೈದ್ಯರನ್ನು ನಾರಾಯಣ,ಹರಿ ಎಂದು ಹಾಡಿ ಹೊಗಳುವುದು ಬೇಡ.ನಮ್ಮನ್ನೂ ನಿಮ್ಮಂತೆ ನಡೆಸಿಕೊಂಡರೆ ಅಷ್ಟೇ ಸಾಕು.ನಿಮ್ಮ ಅಭಿಪ್ರಾಯ ತಿಳಿಸಿ.ನಮಸ್ಕಾರ.

Tuesday, June 19, 2012

"ಜಿಂದಗೀ,ಕೈಸಿ ಹೈ ಪಹೇಲಿ !! ಹಾಯೆ !!"-ಹೀಗೊಂದು ಅನುಭವ!!!!

ಕೆಲವು ದಿನಗಳಿಂದ ಯಾವುದೇ ಏರುಪೇರಿಲ್ಲದೇ ಜೀವ ನದಿ ಶಾಂತವಾಗಿ ಹರಿಯುತ್ತಿತ್ತು. ಶಾಂತವಾದ ಕೊಳವೊಂದರಲ್ಲಿ ಕಲ್ಲು ಹಾಕಿದಂತೆ ಮೊನ್ನೆ ತಲೆಯೊಳಗೆ ಹುಳವೊಂದನ್ನು ಬಿಟ್ಟುಕೊಂಡು,ಯಾವುದೋ ವಿಷಯವೊಂದರ ಬಗ್ಗೆ ಚಿಂತಿಸಿ,ಸಂಜೆಯ ವೇಳೆಗೆ ನನ್ನ ತಲೆ 'ಚಿಂದಿ,ಚಿತ್ರಾನ್ನ'ವಾಗಿತ್ತು.ಆಗ ಹತ್ತಿರದ ಸಂಬಂಧಿಯೊಬ್ಬರ ಫೋನು ಬಂತು.ಗೃಹ ಪ್ರವೇಶಕ್ಕೆ ಬರಲೇ ಬೇಕು ಎಂದು ಒತ್ತಾಯಪೂರ್ವಕ ಆಮಂತ್ರಣ.ಹೋಗಲಾರದಂತಹ ಪರಿಸ್ಥಿತಿ.ಅನಾನುಕೂಲ.ಅರ್ಥಮಾಡಿಸಲು ಹೆಣಗುತ್ತಿದ್ದೆ.ಅಷ್ಟರಲ್ಲಿ ಮೊಬೈಲ್ ನಲ್ಲಿ 'ಬೀಪ್....ಬೀಪ್ 'ಎನ್ನುವ ಶಬ್ದ ಬಂದು ಇನ್ನೊಂದು ಕರೆ ಬರುತ್ತಿರುವ ಸೂಚನೆ ಕೊಟ್ಟಿತು. ಗೃಹ ಪ್ರವೇಶದ ಆಮಂತ್ರಣದ ಕರೆ ಮುಗಿಯುತ್ತಿದ್ದಂತೆ ಇನ್ನೊದು ಕರೆ ಬಂತು.ಅವರೂ ಬಹಳ ಪರಿಚಯದವರು,ಆತ್ಮೀಯರು.ಮೇಲಾಗಿ ಸಹೃದಯಿ.ಅತ್ತ ಕಡೆಯಿಂದ ಅವರ ಮಾತು"ಸಾರಿ ಡಾಕ್ಟರ್ ,ದೇರ್ ಈಸ್ ಎ ಬ್ಯಾಡ್ ನ್ಯೂಸ್. ಇವತ್ತು ಬೆಳಿಗ್ಗೆ ನನ್ನ ಹೆಂಡತಿ ತೀರಿಕೊಂಡರು"ಎಂದರು.ಈ ಅನಿರೀಕ್ಷಿತ ಆಘಾತಕರ ಸುದ್ದಿಯಿಂದ ಏನು ಹೇಳಬೇಕೋ ತೋಚದೆ ತಲೆ ತಿರುಗಿದಂತಾಗಿ ,ಪದಗಳಿಗಾಗಿ ತಡವರಿಸುತ್ತಿದ್ದೆ. ಅಷ್ಟರಲ್ಲೇ ಮೊಬೈಲ್ ನಲ್ಲಿ 'ಬೀಪ್ .....ಬೀಪ್'ಎನ್ನುವ ಶಬ್ದ ಇನ್ನೊಂದು ಕರೆಯ ಬರವನ್ನು ಸೂಚಿಸುತ್ತಿತ್ತು.ಈ ಕರೆ ಮುಗಿಯುತ್ತಿದ್ದಂತೆ ಅತ್ತ ಕಡೆಯಿಂದ ಫೋನು.ಕರೆ ಮಾಡಿದ ವ್ಯಕ್ತಿ ಸಂತೋಷದಿಂದ ಆಕಾಶದಲ್ಲಿ ತೆಲಾಡುತ್ತಿದ್ದರು.'ಹಲ್ಲೋ ಡಾಕ್ಟರ್.ಐ ಯಾಮ್ ಸೋ ಹ್ಯಾಪಿ ಟು ಟೆಲ್ ಯು!! ನಾನು ತಾತ ಆದೆ!!!ನನ್ನ ಮಗನಿಗೆ ಮಗ ಹುಟ್ಟಿದ!!! ಈ ಸಂತೋಷದ ಸುದ್ದಿಯನ್ನು ನಮ್ಮ ಸ್ನೇಹಿತರಿಗೆಲ್ಲಾ ಹೇಳಿಬಿಡಿ'ಎಂದು ಫೋನ್ ಇಟ್ಟರು.ಪ್ರಪಂಚವೆಂದರೆ ಹೀಗೇ ಅಲ್ಲವೇ?ಅವರವರು ,ಅವರವರ ಲೋಕದಲ್ಲಿ, ಕಷ್ಟವನ್ನೋ,ಸುಖವನ್ನೋ,ನೋವನ್ನೋ,ನಲಿವನ್ನೋ ಅನುಭವಿಸುತ್ತಿರುತ್ತಾರೆ.ಅವರ ಜೀವನದಲ್ಲಾಗುತ್ತಿರುವ ಘಟನೆಯ ಬಗ್ಗೆ ಇವರಿಗೆ ಅರಿವಿಲ್ಲ......!ಇವರ ಬಗ್ಗೆ ......,ಅವರಿಗೆ ತಿಳಿಯದು!! ಅವರವರ ಪ್ರಪಂಚ ಅವರಿಗೆ!! ನನ್ನ ಆಧ್ಯಾತ್ಮದ ಗುರುವೊಬ್ಬರಿಗೆ ಈ ವಿಷಯ ತಿಳಿಸಿದೆ. 'ಈ ಘಟನೆಯಲ್ಲಿ ನಿಮಗೆ ತ್ರಿಮೂರ್ತಿಗಳ ದರ್ಶನ ವಾಗಿದೆಯಲ್ಲಾ ಡಾಕ್ಟರ್' ಎಂದರು!'ಹೇಗೆ ಸರ್?' ಎಂದೆ.'ನೋಡಿ ,ಹುಟ್ಟಿನ ಸುದ್ಧಿ ಬಂದಾಗ ಬ್ರಹ್ಮನ ದರ್ಶನವಾಯಿತು ,ಗೃಹ ಪ್ರವೇಶದ ಸುದ್ಧಿ ವಿಷ್ಣು ವಿನ ದರ್ಶನ.ಸಾವಿನ ಸುದ್ಧಿ ಮಹೇಶ್ವರನ ಪ್ರತೀಕವಲ್ಲವೇ?'ಎಂದರು!ನನಗೂ ಹೌದಲ್ಲವೇ ಅನ್ನಿಸಿತು!!! ನೀವೇನೆನ್ನುತ್ತೀರಿ ಎಂದು ಕಾಮೆಂಟಿನಲ್ಲಿ ತಿಳಿಸಿ.ನಮಸ್ಕಾರ.

Saturday, June 16, 2012

"ಮೂಗಿನಲ್ಲಿ ಕಾದಿತ್ತು ವಿಸ್ಮಯ !!!"

ಮಧ್ಯಾಹ್ನ ಸುಮಾರು ಮೂರು ಗಂಟೆಯ ಸಮಯ.ಊಟಕ್ಕೆ ಅವರೇ ಕಾಳಿನ ಸಾಂಬಾರ್ ಬೇರೆ ತಿಂದಿದ್ದರಿಂದ ಜೋರು ನಿದ್ರೆ.ಸ್ವತಹ ವೈದ್ಯರಾಗಿದ್ದ ಕನ್ನಡದ ಹಾಸ್ಯ ಸಾಹಿತಿ ರಾ.ಶಿ.(ಡಾ.ಶಿವರಾಂ ) ಹೇಳುತ್ತಿದ್ದ ಹಾಗೆ ಅದು ಡಾಕ್ಟರ್ ಗಳು ಮತ್ತು ದೆವ್ವಗಳು ಸ್ವಲ್ಪ ರೆಸ್ಟ್ ತೆಗೆದುಕೊಳ್ಳುವ ಸಮಯ !ಆದರೆ ಆ ಸಮಯದಲ್ಲೂ ನಮ್ಮನ್ನು ಪರೀಕ್ಷೆ ಮಾಡುವ ಸಲುವಾಗಿಯೇ,ಹಪ್ಪಳ ಮಾರುವವರು,ಉಪ್ಪಿನ ಕಾಯಿ ಮಾರುವವರು,ಬಿ.ಬಿ.ಎಮ್.ವಿದ್ಯಾರ್ಥಿಗಳೆಂದು ಹೇಳಿಕೊಂಡು ಬಂದು, ನಮಗೆ ಬೇಡದ ವಸ್ತು ಗಳನ್ನು ಮಾರಲೇ ಬೇಕೆಂದು ಬೇತಾಳಗಳ ಹಾಗೆ ಬೆನ್ನು ಬೀಳುವವರು ,ನಮ್ಮ ನಿದ್ರೆಯ ಶತ್ರುಗಳಂತೆ ಕಾಡುತ್ತಾರೆ!'ಕಿರ್ರೋ'ಎಂದು ಅರಚಿ ಕೊಳ್ಳುತ್ತಿದ್ದ ಡೋರ್-ಬೆಲ್ ನಿಂದ ನಿದ್ರಾ ಭಂಗ ವಾಗಿ ,ಹೋಗಿ ಬಾಗಿಲು ತೆಗೆದೆ.ಮೂಗು ಸೋರುತ್ತಿದ್ದ ನಾಲಕ್ಕು ವರುಷದ ಮಗನನ್ನು ಕರೆದು ಕೊಂಡು ಬಂದಿದ್ದ ವ್ಯಕ್ತಿಯೊಬ್ಬ "ನೀವು ಮೂಗಿನ ಡಾಕ್ಟರ್ರಾ ?"ಎಂದ.ನಿದ್ರೆ ಹಾಳಾಗಿದ್ದಕ್ಕೆ ಮೂಗಿನ ತನಕ ಬಂದ ಕೋಪವನ್ನು ತಡೆದುಕೊಂಡು ಹೌದೆಂದೆ.ಮಗನನ್ನು ಒಂದು ತಿಂಗಳಿಂದ ಮಕ್ಕಳ ಡಾಕ್ಟರ್ ಒಬ್ಬರ ಹತ್ತಿರ ತೋರಿಸುತ್ತಿರಿರುವುದಾಗಿಯೂ ,ಮೂಗಿನಿಂದ ಸಿಂಬಳ ಸೋರುವುದು ,ಕೆಟ್ಟ ವಾಸನೆ ಬರುವುದು ನಿಂತಿಲ್ಲವೆಂದೂ ,ಯಾರದೋ ಸಲಹೆಯ ಮೇರೆಗೆ ನನ್ನಲ್ಲಿಗೆ ಕರೆದು ಕೊಂಡು ಬಂದುದಾಗಿಯೂ ಹೇಳಿದ.ಸಂಜೆ ನಾಲಕ್ಕೂವರೆಗೆ ಆಸ್ಪತ್ರೆಗೆ ಬರುವಂತೆ ಹೇಳಿ ಕಳಿಸಿಕೊಟ್ಟೆ .ಸಂಜೆ ಆಸ್ಪತ್ರೆಯಲ್ಲಿ ಆ ಹುಡುಗನ ಪರೀಕ್ಷೆ ಮಾಡಿದೆ.ಮಾರು ದೂರಕ್ಕೇ, ಮೂಗಿನಿಂದ ಗಪ್ಪೆಂದು ಸಹಿಸಲು ಅಸಾಧ್ಯವಾದ ಕೆಟ್ಟ ವಾಸನೆ ಬರುತ್ತಿತ್ತು.ಮೂಗಿನಿದ ರಕ್ತ ಮಿಶ್ರಿತ ಸಿಂಬಳ ಸೋರುತ್ತಿತ್ತು.ನೋಡಿದ ತಕ್ಷಣ ಹುಡುಗ ಮೂಗಿನಲ್ಲಿ ಏನೋ ವಸ್ತುವೊಂದನ್ನು ಹಾಕಿ ಕೊಂಡಿರುವುದು ಖಾತ್ರಿಯಾಯಿತು.ಸೂಕ್ತ ಸಲಕರಣೆ ಗಳ ಸಹಾಯದಿಂದ ಬೆಳ್ಳಗಿನ ಮೂಳೆಯಂತೆ ಕಾಣುತ್ತಿದ್ದ ವಸ್ತುವೊಂದನ್ನು ಮೂಗಿನಿಂದ ಕಷ್ಟಪಟ್ಟು ಹೊರತೆಗೆದೆ.ಮೂಗಿನಿಂದ ಸಾಕಷ್ಟು ರಕ್ತ ಸ್ರಾವವಾಗುತ್ತಿತ್ತು.'ಮೂಗಿನ ಕಾರ್ಟಿಲೇಜ್ ಏನಾದರೂ ಕಿತ್ತು ಬಂತಾ ಸಾರ್ !?' ಅಂತ ಅಲ್ಲೇ ಇದ್ದ ಸಹ ವೈದ್ಯರೊಬ್ಬರು ಗಾಭರಿಗೊಂಡು ಉದ್ಗಾರ ತೆಗೆದರು .ಮೂಗಿನ ರಕ್ತಸ್ರಾವ ನಿಲ್ಲುವಂತೆ ಮೂಗನ್ನು ಗಾಜ್ ನಿಂದ ಪ್ಯಾಕ್ ಮಾಡಿದ ಮೇಲೆ,"ಇಲ್ಲಿ ನೋಡಿ ನೀವು ಹೇಳಿದ ಮೂಗಿನ ಕಾರ್ಟಿಲೇಜ್ "ಎಂದು ಮೂಳೆಯಂತೆ ಕಾಣುತ್ತಿದ್ದ ತುಂಡನ್ನು ಎರಡು ಹೋಳು ಮಾಡಿ ತೋರಿಸಿದೆ .ಅದು ಮೇಲಿನ ಸಿಪ್ಪೆ ಹೋದ ಹುಣಿಸೇ ಬೀಜ ವಾಗಿತ್ತು!ಅದನ್ನು ಎರಡು ಹೋಳು ಮಾಡಿದಾಗ ಸುಮಾರು ಒಂದು ಇಂಚಿನ ಮೊಳಕೆ ಒಡೆದು ಹೊರ ಬರುತ್ತಿತ್ತು.ಇನ್ನೂ ಸ್ವಲ್ಪ ದಿನ ಬಿಟ್ಟಿದ್ದರೆ ಮೂಗಿನಿಂದ ಹುಣಿಸೇ ಸಸಿ ಬೆಳೆಯುತ್ತಿತ್ತೋ ಏನೋ !!!

Saturday, June 9, 2012

"ಹೀಗೊಂದು ಝೆನ್ ಕಥೆ"

ಒಬ್ಬ ಝೆನ್ ಗುರುವಿದ್ದ.ಅವನೆಂದೂ ಪ್ರಚಲಿತವಿದ್ದ ಸಿದ್ಧ ಸೂತ್ರಗಳನ್ನು ಹೇಳುತ್ತಿರಲಿಲ್ಲ.ಅವನ ಮಾತುಗಳೆಲ್ಲಾ ಧ್ಯಾನದಲ್ಲಿ ಹೃದಯದಿಂದ ಬಂದ ಮಾತುಗಳಾಗಿರುತ್ತಿದ್ದವು.ಒಂದು ಬಾರಿ ಅವನು ಪ್ರವಚನ ನೀಡುತ್ತಿದ್ದಾಗ ವ್ಯಕ್ತಿಯೊಬ್ಬ ಎದ್ದು ನಿಂತು "ಇಲ್ಲಿರುವ ಎಲ್ಲರೂನಿನ್ನ ಅನುಯಾಯಿಗಳೇ.ಎಲ್ಲರೂ ನಿನ್ನ ಮಾತು ಕೇಳುವವರೇ .ಆದರೆ ನಾನು ನಿನ್ನ ಅನುಯಾಯಿಯಲ್ಲ.ನಾನು ನಿನ್ನ ಯಾವುದೇ ಮಾತನ್ನು ಕೇಳಲು ತಯಾರಿಲ್ಲ.ನಾನು ನಿನಗೆ ವಿಧೇಯನಾಗುವಂತೆ ಮಾಡಲು ಸಾಧ್ಯವೇ?"ಎಂದ. ಅದಕ್ಕೆ ಗುರು "ಖಂಡಿತಾ ಸಾಧ್ಯ.ಹೇಗೆ ಎಂದು ಹೇಳುತ್ತೇನೆ.ನನ್ನ ಬಳಿ ಬಾ"ಎಂದ.ಅದರಂತೆ ಆ ವ್ಯಕ್ತಿ ಜನರ ಗುಂಪಿನಿಂದ ಎದ್ದು ಗುರುವಿನ ಬಳಿ ಬಂದ ."ಈಗ ನನ್ನ ಎಡಕ್ಕೆ ಬಾ"ಎಂದ ಗುರು.ವ್ಯಕ್ತಿ ಎಡಕ್ಕೆ ಬಂದ."ಎಡಕ್ಕಿಂತ ಬಲಗಡೆ ಸರಿಯಾಗಿ ಕೇಳಿಸುತ್ತದೆ .ನೀನು ಬಲಗಡೆ ಬರುವುದೇ ಉತ್ತಮ"ಎಂದ ಗುರು.ಅದರಂತೆ ವ್ಯಕ್ತಿ ಬಲಕ್ಕೆ ಬಂದ.ಅದಕ್ಕೆ ಗುರು "ನೋಡು,ಇಲ್ಲಿಯವರೆಗೆ ನೀನು ಹೇಳಿದಂತೆ ಕೇಳುತ್ತಿದ್ದೀ.ಈಗ ಎಲ್ಲರ ಮಧ್ಯೆ ಹೋಗಿ ಕುಳಿತು ನಾನು ಹೇಳುವುದನ್ನು ಆಲಿಸು"ಎಂದ.ವ್ಯಕ್ತಿ ಮರು ಮಾತಿಲ್ಲದೆ ಎಲ್ಲರ ಮಧ್ಯೆ ಹೋಗಿ ಕುಳಿತ. (ಇಂದಿನ ವಿಜಯ ಕರ್ನಾಟಕದ 'ಭೋದಿ ವೃಕ್ಷ' ವಿಭಾಗದಲ್ಲಿ ಪ್ರಕಟವಾದ ಝೆನ್ ಕತೆ )

Wednesday, June 6, 2012

"ಆಯ್ಕೆಗಳಿಲ್ಲದ ಅರಿವಿನ ಬದುಕು!!! "

ಆಧ್ಯಾತ್ಮಿಕ ಜಿಜ್ಞಾಸು ಒಬ್ಬ,'ಮನುಷ್ಯ ಸಂಪೂರ್ಣ ಸ್ವತಂತ್ರನೇ ಅಥವಾ ಅವನನ್ನು ಕರ್ಮ,ವಿಧಿ,ದೈವ,ಗ್ರಹಗತಿಗಳು,ಇವೆಲ್ಲಾ ಬಂಧಿಸಿವೆಯೇ' ಎಂದು ತಿಳಿದು ಕೊಳ್ಳಲು ಆಧ್ಯಾತ್ಮಿಕ ಅನುಭೂತಿ ಪಡೆದ ಜ್ಞಾನಿ ಗುರುವೊಬ್ಬರ ಬಳಿ ಬಂದು ತನ್ನನ್ನು ಕಾಡುತ್ತಿರುವ ಪ್ರಶ್ನೆಗೆ ಉತ್ತರ ನೀಡಬೇಕೆಂದು ಬಿನ್ನವಿಸಿಕೊಂಡ. ಗುರು ಇದ್ದಕ್ಕಿದ್ದಂತೆ ಅವನನ್ನು ಎದ್ದು ನಿಲ್ಲುವಂತೆ ಹೇಳಿದ.ಜಿಜ್ಞಾಸುವಿಗೆ 'ಇವನೆಂತಹ ಗುರು!ತಾನೊಂದು ಸಾಮಾನ್ಯ ಪ್ರಶ್ನೆ ಕೇಳಿದರೆ ಉತ್ತರಿಸದೆ ,ಎದ್ದು ನಿಲ್ಲುವಂತೆ ಹೇಳುತ್ತಿದ್ದಾನಲ್ಲಾ !!'ಎಂದು ಕಸಿವಿಸಿಯಾಯಿತು.ಮುಂದೆನಾಗುತ್ತದೆಯೋ ನೋಡಿಯೇ ಬಿಡೋಣ ಎಂದು ಎದ್ದು ನಿಂತ. ಗುರು ಜಿಜ್ಞಾಸುವಿಗೆ ಒಂದು ಕಾಲನ್ನು ಮೇಲಕ್ಕೆ ಎತ್ತಿ ನಿಲ್ಲುವಂತೆ ಹೇಳಿದ.ಶಿಷ್ಯ ಅದರಂತೆಯೇ ತನ್ನ ಬಲಗಾಲನ್ನು ಮೇಲೆತ್ತಿ ಎಡಗಾಲಿನ ಮೇಲೆ ನಿಂತ.ಅದಕ್ಕೆ ಗುರು 'ಒಳ್ಳೆಯದು....,ಈಗ ನಿನ್ನ ಎಡಗಾಲನ್ನೂ ಮೇಲೆತ್ತು'ಎಂದ!ಶಿಷ್ಯನಿಗೆ 'ಇವನೆಂತಹ ವಿಚಿತ್ರ ಗುರು! 'ಎನಿಸಿತು.ಆದರೂ ಅದನ್ನು ತೋರ್ಪಡಿಸದೆ 'ಅದು ಹೇಗೆ ಸಾಧ್ಯ ಗುರುಗಳೇ?ನಾನು ಈಗ ನಿಂತಿರುವುದೇ ಎಡಗಾಲಿನ ಮೇಲಲ್ಲವೇ?'ಎಂದ.ಅದಕ್ಕೆ ಗುರು 'ನಿನ್ನ ಪ್ರಶ್ನೆಗೆ ಇಲ್ಲಿ ಉತ್ತರವಿದೆ.ಮೊದಲು ನೀನು ಸ್ವತಂತ್ರನಾಗಿದ್ದೆ.ನಾನು ನಿನ್ನನ್ನು ಯಾವುದಾದರೂ ಒಂದು ಕಾಲನ್ನು ಎತ್ತಲು ಹೇಳಿದಾಗ ನೀನು ಎಡಗಾಲನ್ನು ಎತ್ತಬಹುದಾಗಿತ್ತು.ಬಲಗಾಲನ್ನು ಎತ್ತಿದ್ದು ನಿನ್ನ ಆಯ್ಕೆಯಾಗಿತ್ತು.ಒಮ್ಮೆ ನೀನು ಆಯ್ಕೆ ಮಾಡಿದ ಮೇಲೆ,ಆ ಆಯ್ಕೆಗೆ ನೀನು ಬದ್ಧ.ಅದು ನಿನ್ನನ್ನು ಬಂಧಿಸುತ್ತದೆ.ಕರ್ಮ,ವಿಧಿ,ದೈವ,ಗ್ರಹಚಾರ,ಎಲ್ಲವನ್ನೂ ಬದಿಗಿಡು.ನಿನ್ನ ಆಯ್ಕೆಗಳೇ ನಿನ್ನನ್ನು ಬಂಧಿಸುತ್ತವೆ!"ಆಯ್ಕೆಗಳಿಲ್ಲದ ಅರಿವಿನ ಬದುಕು" ನಿನ್ನನ್ನು ಬಿಡುಗಡೆಯತ್ತ ಕರೆದೊಯ್ಯುತ್ತದೆ'ಎಂದ.ಜಿಜ್ಞಾಸುವಿಗೆ ಗುರುವಿನ ಜ್ಞಾನದ ಆಳ ಅರಿವಾಯಿತು.ವಿನಮ್ರತೆಯಿಂದ ಗುರುವಿಗೆ ನಮಿಸಿ ತನ್ನೂರಿನ ದಾರಿ ಹಿಡಿದ. (ಸಾಧಾರಿತ)

Monday, June 4, 2012

"ಗ್ಯಾಸ್ಟ್ರಿಕ್"ಪ್ರಾಬ್ಲಂ....!!!!

ಮೊದಲೆಲ್ಲಾ ಯಾರಾದರೂ "ಗ್ಯಾಸ್ಟ್ರಿಕ್"ಪ್ರಾಬ್ಲಂ ಇದೇ ಸಾರ್ ಎಂದರೆ,ಅವರಿಗೆಲ್ಲೋ ಅಸಿಡಿಟಿ ಯಾಗಿ ಹೊಟ್ಟೆ ಉರಿ ಆಗಿರಬೇಕು ಎಂದುಕೊಳ್ಳುತ್ತಿದ್ದೆ.ಸಣ್ಣ ಸಣ್ಣ ಹುಡುಗರನ್ನೂ ಕರೆದುಕೊಂಡು ಬಂದು "ಇವನಿಗೆ ಗ್ಯಾಸ್ಟ್ರಿಕ್ ಪ್ರಾಬ್ಲಂ ಇದೆ,ಏನಾದರೂ ಔಷಧಿ ಕೊಡಿ ಸಾರ್"ಎಂದುಕೇಳಿದಾಗ, 'ಇಷ್ಟು ಸಣ್ಣ ಹುಡುಗನಿಗೂ ಹೊಟ್ಟೆ ಉರಿ ಯಾಗುತ್ತದೆಯೇ ?'ಎನ್ನುತ್ತಿದ್ದೆ."ಅವನಿಗೆ ಹೊಟ್ಟೆ ಉರಿ ಏನೂ ಇಲ್ಲಾ ಸಾರ್!ಗ್ಯಾಸ್ ಬಿಟ್ಟರೆ ಕೆಟ್ಟ ವಾಸನೆ. ಇವನ ಕಾಟದಿಂದ ಮನೇಲಿ ಯಾರೂ ಇರೋ ಹಂಗಿಲ್ಲಾ "ಎಂದು ಅಲವತ್ತು ಕೊಳ್ಳುತ್ತಿದ್ದರು.'ಗ್ಯಾಸ್ ಸಮಸ್ಯೆಗೆ', "ಗ್ಯಾಸ್ಟ್ರಿಕ್"ಸಮಸ್ಯೆ ಎನ್ನುತ್ತಾರೆಂದು ಆಗ ಅರ್ಥವಾಯಿತು!ಸಾಮಾನ್ಯವಾಗಿ ಮಧ್ಯವಯಸ್ಸಿನ,ಅಥವಾ ವಯಸ್ಸಾದ ಗಂಡಸರಿಗೆ ಈ ಸಮಸ್ಯೆ ಹೆಚ್ಚು . ಅವರ "ಗ್ಯಾಸ್ಟ್ರಿಕ್ "ಸಮಸ್ಯೆ, ಸಶಬ್ಧವಾಗಿ ಡಂಗೂರ ಸಾರಿ ಎಲ್ಲರಿಗೂ ತಿಳಿಸುವಂತಹುದು.ಸಮಯ,ಸಂದರ್ಭ ಒಂದೂ ನೋಡದೆ ಹೊರ ಬಂದು, ಅವರನ್ನು ಪೇಚಿನಲ್ಲಿ ಸಿಗಿಸಿ ಬಿಡುತ್ತದೆ . ನಮ್ಮ ಪರಿಚಯದವರೊಬ್ಬರ ಮಗಳು ತನ್ನ ಕಾಲೇಜಿನ ಸಹಪಾಟಿಗಳನ್ನು ಮನೆಗೆ ಕರೆದುಕೊಂಡು ಬಂದು, "ಇವಳು ದೀಪ,ಇವಳು ಸ್ನೇಹ,ಇವಳು ರೂಪ......"ಅಂತ ತನ್ನ ತಂದೆಗೆ ಪರಿಚಯ ಮಾಡಿಕೊಡುತ್ತಿದ್ದಾಗ,ಅವರ ತಂದೆ ಸಶಬ್ಧವಾಗಿ ಗ್ಯಾಸ್ ಬಿಟ್ಟರು.ಆ ವಯಸ್ಸಿನ ಹುಡುಗಿಯರಿಗೆ ಮೊದಲೇ ನಗು ಜಾಸ್ತಿ!ಸಣ್ಣ ಪುಟ್ಟದ್ದಕ್ಕೆಲ್ಲಾ ಕಿಸ ಕಿಸನೇ ನಗುವ ವಯಸ್ಸು.ಆ ಶಬ್ಧಕ್ಕೆ ಬಂದ ಹುಡುಗಿಯರೆಲ್ಲಾ ಹೆದರಿಕೊಂಡು, "ಹೋ......."ಎಂದು ನಗುತ್ತಾ ,ಚೆಲ್ಲಾ ಪಿಲ್ಲಿಯಾಗಿ ಹೊರಗೋಡಿದರು!!! ಅವರ ಮಗಳು ತನ್ನ ಸ್ನೇಹಿತೆಯರ ಎದುರಿಗೆ ಆದ ಅವಮಾನಕ್ಕೆ ,ತಂದೆಯ ಮೇಲೆ ಮುನಿಸಿಕೊಂಡು ಎರಡು ದಿನ ಮಾತು ಬಿಟ್ಟಳು! ನನ್ನ ಸ್ನೇಹಿತರೊಬ್ಬರ ಇಬ್ಬರು ಮಕ್ಕಳು ರಜಾ ಕಳೆಯಲೆಂದು ಅಜ್ಜಿಯ ಮನೆಗೆ ಹೋಗಿದ್ದರು.ರಾತ್ರಿ ಅಜ್ಜಿಯ ಪಕ್ಕ ಮಲಗಿದ್ದರು. ಬೆಳಿಗ್ಗೆ ಹಜಾರದಲ್ಲಿ ಮನೆ ಮಂದಿ ಎಲ್ಲಾ ಸೇರಿ,ಕಾಫಿ ಕುಡಿಯುತ್ತಿದ್ದಾಗ ಆ ಹುಡುಗರಲ್ಲೊಬ್ಬಅವರಮ್ಮನ ಬಳಿ ಹೋಗಿ ಅವರ ಅಜ್ಜಿಯನ್ನೇ ನೋಡುತ್ತಾ ಆಶ್ಚರ್ಯದಿಂದ "ಅಮ್ಮಾ ...,ಹೆಂಗಸರೂ ಗ್ಯಾಸ್ ಬಿಡುತ್ತಾರಾ?"ಎಂದು ಪ್ರಶ್ನಿಸಿದ. ಪಾಪ ಅವನ ಅಜ್ಜಿಗೆ ಹೇಗಾಗಿರಬೇಡ! ಅವರು ನಾಚಿಕೆಯಿಂದ ಮುಖ ಕೆಂಪಗೆ ಮಾಡಿಕೊಂಡು ಅಡಿಗೆ ಮನೆ ಸೇರಿಕೊಂಡರೆ ,ಅಜ್ಜನೂ ಸೇರಿದಂತೆ ಮಿಕ್ಕವರೆಲ್ಲಾ ನಗು ತಡೆದು ಕೊಳ್ಳಲು ಒದ್ದಾಡುತ್ತಿದ್ದರಂತೆ!!! ಒಟ್ಟಿನಲ್ಲಿ "ಗ್ಯಾಸ್ಟ್ರಿಕ್ "ಪ್ರಾಬ್ಲಂನಿಂದ ಒದ್ದಾಡುವವರ ಕಥೆ , ಆಡುವಂತಿಲ್ಲ,ಅನುಭವಿಸುವಂತಿಲ್ಲ!!!

Saturday, June 2, 2012

"ಧ್ಯಾನಸ್ಥ .....ಸ್ವಸ್ಥ !!!"

ನಮ್ಮ ವರಾಂಡದ ಕಿಟಕಿಯ ಸರಳುಗಳ ಆಚೆ, ಬಿಡುಗಡೆಯ ಬಯಲಿನಲ್ಲಿ, ಕಾಣುತ್ತಿದೆ ಒಂದು ಧ್ಯಾನಸ್ಥ ತೆಂಗಿನ ಮರ .ಚಳಿ,ಬಿಸಿಲು,ಮಳೆ,ಗಾಳಿಗಳ ಲೆಕ್ಕಿಸದೆ ದಶಕಗಳಿಂದ ತಪೋ ನಿರತ .ಆಗೊಮ್ಮೆ ಈಗೊಮ್ಮೆ ಗಾಳಿ ಇಡುವ ಕಚಗುಳಿಗೆ ಮೆಲ್ಲನೆಯ ಸ್ಪಂದನ.ಗರಿಗಳು ನುಡಿಸುವ ಸರಿಗಮಕ್ಕೆ ಏರಿ ಇಳಿಯುವ ಹಾರ್ಮೊನಿಯಮ್ಮಿನ ಕೀ ಗಳಂತೆ ,ತನ್ನ ಸಂಗೀತಕ್ಕೆ ಮನಸೋತು ತಾನೇ ತಲೆದೂಗುತ್ತದೆ.ಪಕ್ಕದಲ್ಲೇ ಸಾಥ್ ನೀಡುತ್ತಿದೆ ಇನ್ನೊಂದು ಮರ.ಹಿಮಾಲಯದ ಸಾಧು ಒಬ್ಬನಂತೆ, ತನ್ನೆಲ್ಲಾ ಎಲೆಗಳನ್ನು ಉದುರಿಸಿ ಬೆತ್ತಲಾಗಿ, ಚಳಿಗೆ, ಏನ್ ಮಾಡ್ತೀಯೋ ಮಾಡ್ಕೋ ಹೋಗ್,ಎಂದು ಸವಾಲೆಸೆಯುತ್ತದೆ.ಎಲ್ಲಿಂದಲೋ ಬಂದ ಹಕ್ಕಿಗಳ ಹಿಂಡೊಂದು ತೆಂಗಿನ ಮರದ ತಪಸ್ಸು ಕೆಡಿಸಲು ಗರಿಗಳಲ್ಲಿ ಕೂತು, ಏನೂ ಪ್ರಯೋಜನವಿಲ್ಲೆಂದು ತಮ್ಮಲ್ಲೇ ಮಾತಾಡಿಕೊಂಡು ,ಬುರ್ರ್ ಎಂದು ಒಟ್ಟಿಗೇ ಹಾರಿಹೊಗುತ್ಹವೆ . ಇದ್ಯಾವುದನ್ನೂ ಲೆಕ್ಕಿಸದ ತೆಂಗಿನಮರ ಮೊದಲಿನಂತೆ ಧ್ಯಾನಸ್ಥ ! ಸ್ವಸ್ಥ!! ಕಿಟಕಿ ಬಾಗಿಲುಗಳಿಂದ ನಮ್ಮನು ನಾವೇ ಬಂಧಿಸಿ ಕೊಂಡು, ತಲೆಯಲ್ಲಿ ನಾನಾ ಚಿಂತೆಯ, ಗಿಳಿ,ಗೂಬೆ,ಕಾಗೆಗಳನ್ನು ಬಿಟ್ಟುಕೊಂಡು, ಅವುಗಳ ಕಿರುಚುವಿಕೆಯಿಂದ ತಲೆ ಚಿಟ್ಟು ಹಿಡಿಸಿಕೊಂಡು ಬದುಕುತ್ತಿರುವ ನಮ್ಮ ಬದುಕು --------------ಅಸ್ವಸ್ಥ.

Wednesday, May 30, 2012

"ಧ್ಯಾನದ ನಿಜವಾದ ಪರಿಣಿತಿ!!!"

ಆಧ್ಯಾತ್ಮಿಕ ಆಸಕ್ತಿ ಇರುವ ಜಿಜ್ಞಾಸು ಒಬ್ಬನಿಗೆ ಸರಿಯಾದ "ಧ್ಯಾನ"ಮಾಡುವ ವಿಧಾನವನ್ನು ಕಲಿಯ ಬೇಕೆಂದು ಮನಸ್ಸಾಯಿತು.ಹಲವಾರು ಗುರುಗಳ ಬಳಿ ಹಲವಾರು ಧ್ಯಾನದ ಮಾರ್ಗಗಳನ್ನು ಕಲಿತರೂ,ಅವನಿಗೆ ಸಮಾಧಾನ ವಾಗಲಿಲ್ಲ.ಸೂಕ್ತ ಗುರುವನ್ನು ಹುಡುಕುತ್ತಾ, ಕಡೆಗೆ "ಜೆನ್"ಗುರುವೊಬ್ಬರ ಬಳಿ ಬಂದ.ಗುರು ಅವನಿಗೆ ಧ್ಯಾನದ ಅತೀ ಉತ್ತಮ ವಿಧಾನವನ್ನು ಹೇಳಿಕೊಡುವುದಾಗಿ ಒಪ್ಪಿಕೊಂಡ.ಅಲ್ಲಿಯ ತನಕ ಆಶ್ರಮದ ಕೆಲಸಗಳನ್ನು ಮಾಡುತ್ತಿರಬೇಕೆಂದು ತಿಳಿಸಿದ.ಆದರೆ ಹಲವಾರು ತಿಂಗಳುಗಳೇ ಕಳೆದರೂ ಗುರು ಅವನಿಗೆ ಧ್ಯಾನದ ಬಗ್ಗೆ ಏನನ್ನೂ ತಿಳಿಸಲಿಲ್ಲ.ಕಡೆಗೆ ಶಿಷ್ಯನೇ ತಾನು ಅಲ್ಲಿಗೆ ಬಂದ ವಿಷಯದ ಬಗ್ಗೆ ಪ್ರಸ್ತಾಪಿಸಿದ.ಗುರು"ಹೌದಲ್ಲವೇ!!ಹಾಗಿದ್ದರೆ ನಾಳೆಯಿಂದ 'ಧ್ಯಾನ'ದ ಬಗ್ಗೆ ತಿಳಿಯಲು ತಯಾರಾಗಿರು"ಎಂದ.ಮಾರನೇ ದಿನ ಶಿಷ್ಯ ಏನೋ ಕೆಲಸ ಮಾಡುತ್ತಿದ್ದಾಗ ಗುರು ಹಿಂದಿನಿಂದ ಸದ್ದಾಗದಂತೆ ಬಂದು ಒಂದು ದಪ್ಪ ದೊಣ್ಣೆಯಿಂದ ಜೋರಾಗಿ ಪೆಟ್ಟು ಕೊಟ್ಟ. ಹಟಾತ್ತನೆ ನಡೆದ ಧಾಳಿಯಿಂದ ಶಿಷ್ಯ ಗಾಭರಿಗೊಂಡ.ಅದಕ್ಕೆಗುರು ಹೇಳಿದ "ಇದು ಧ್ಯಾನದ ಮೊದಲ ಹಂತ.ನೀನು ಸದಾ ಎಚ್ಚರದಲ್ಲಿರಬೇಕು.ನಾನು ಯಾವಾಗ ಬೇಕಾದರೂ ಬಂದು ಪೆಟ್ಟು ಕೊಡಬಹುದು.ಸದಾ ಎಚ್ಚರದಲ್ಲಿದ್ದರೆ ನೀನು ಪೆಟ್ಟಿನಿಂದ ತಪ್ಪಿಸಿಕೊಳ್ಳಬಹುದು".ಹಲವಾರು ಸಲ ಪೆಟ್ಟು ತಿಂದ ಮೇಲೆ ಶಿಷ್ಯನಿಗೆ ಗುರುವಿನ ಪೆಟ್ಟಿನಿಂದ ತಪ್ಪಿಸಿಕೊಳ್ಳುವ ಪರಿಣಿತಿ ಬಂತು. ನಂತರ ಗುರು "ನೀನೀಗ ಧ್ಯಾನದ ಎರಡನೇ ಹಂತ ಕಲಿಯಲು ಯೋಗ್ಯನಾಗಿದ್ದೀಯ.ನೀನು ನಿದ್ದೆ ಮಾಡುವಾಗ ಬಂದು ಪೆಟ್ಟು ಕೊಡುತ್ತೇನೆ.ನೀನು ನಿದ್ದೆಯಲ್ಲೂ 'ಧ್ಯಾನಸ್ಥ' ಎಂದರೆ ಎಚ್ಚರದ ಸ್ಥಿತಿ ಯಲ್ಲಿರಬೇಕು"ಎಂದ.ಹಲವಾರು ಸಲ ನಿದ್ದೆಯಲ್ಲಿದ್ದಾಗ ಪೆಟ್ಟು ತಿಂದ ಮೇಲೆ ಶಿಷ್ಯನಿಗೆ ಅದರಲ್ಲೂ ಪರಿಣಿತಿ ಬಂತು.ನಂತರ ಧ್ಯಾನದ ಮೂರನೇ ಹಂತದಲ್ಲಿ ನಿಜವಾದ ಖಡ್ಗ ವನ್ನು ಉಪಯೋಗಿಸುವುದಾಗಿಯೂ ,ಸ್ವಲ್ಪ ಎಚ್ಚರ ತಪ್ಪಿದರೂ ಅದು ಅವನ ಪ್ರಾಣಕ್ಕೇ ಕುತ್ತು ತರಬಹುದೆಂದೂ ಗುರು ಹೇಳಿದ.ಈ ಪರೀಕ್ಷೆಯಲ್ಲಿ ಒಮ್ಮೆಯೂ ಎಚ್ಚರ ತಪ್ಪುವಂತಿರಲಿಲ್ಲ!!!ಶಿಷ್ಯ ಈ ಕೊನೆಯ ಹಂತದ ಕಠಿಣ ಪರೀಕ್ಷೆಯಲ್ಲೂ ಗೆದ್ದ.ಗುರುವಿಗೆ ತುಂಬಾ ಸಂತೋಷವಾಯಿತು.ಶಿಷ್ಯನಿಗೆ"ಈಗ ನೀನು ಧ್ಯಾನದ ಎಲ್ಲಾ ಹಂತಗಳಲ್ಲೂ ನಿಜವಾದ ಪರಿಣಿತಿ ಪಡೆದಿದ್ದೀಯ.ನಾಳೆ ನೀನು ಊರಿಗೆ ಹೊರಡಬಹುದು"ಎಂದ. ಶಿಷ್ಯನಿಗೆ "ಗುರುವು ತನ್ನನ್ನು ಎಂತೆಂತಹ ಕಠಿಣ ಪರೀಕ್ಷಗಳಿಗೆ ಒಡ್ಡಿದನಲ್ಲಾ!!!ತಾನೊಮ್ಮೆ ಇವನಿಗೊಂದು ಪೆಟ್ಟು ಕೊಟ್ಟು ಪರೀಕ್ಷೆ ಮಾಡಬೇಕು"ಎನ್ನುವ ಆಲೋಚನೆ ಮನಸ್ಸಿನಲ್ಲಿ ಬಂತು.ಅವನ ಆಲೋಚನೆ ಯನ್ನು ತಕ್ಷಣವೇ ಗ್ರಹಿಸಿದ ಗುರು "ನೀನೇನೂ ನನಗೆ ಪೆಟ್ಟು ಕೊಟ್ಟು ಪರೀಕ್ಷೆ ಮಾಡುವುದು ಬೇಡ.ನಾನು ಸದಾ ಎಷ್ಟು ಎಚ್ಚರದಲ್ಲಿ ಇರುತ್ತೇನೆ ಎಂದರೆ,ಬೇರೆಯವರ ಆಲೋಚನೆಗಳೂ ನನಗೆ ತಿಳಿಯುತ್ತವೆ"ಎಂದ!!! ಶಿಷ್ಯನಿಗೆ ಮಾತೇ ಹೊರಡಲಿಲ್ಲ !!! ತಾನಿನ್ನೂ ಸಾಧಿಸುವುದು ಬಹಳಷ್ಟಿದೆ ಎಂದುಕೊಂಡು ಗುರುವಿಗೆ ನಮಿಸಿ ತನ್ನೂರಿಗೆ ಹೊರಟ.

Sunday, May 27, 2012

"ಯಾರೋ ಹೇಳಿದರು ಅಂತ ಎಡವಟ್ಟು ಮಾಡಿಕೊಂಡರು !!!"

ಯಾರೋ ಏನೋ ಹೇಳಿದರು ಅಂತ ಎಡವಟ್ಟು ಮಾಡಿಕೊಳ್ಳುವವರು ನಮ್ಮಂತಹ ವೈದ್ಯರಿಗೆ ಆಗಾಗ ಸಿಗುತ್ತಿರುತ್ತಾರೆ.ನನ್ನ ಒಬ್ಬ ಡಯಾಬಿಟಿಸ್ ರೋಗಿಗೆ ಅವನು ತೆಗೆದುಕೊಳ್ಳುತ್ತಿದ್ದ ಮಾತ್ರೆಯಿಂದ ರಕ್ತದಲ್ಲಿಯ ಸಕ್ಕರೆ ಅಂಶ ನಾರ್ಮಲ್ ಆಗಿತ್ತು.ಚೆನ್ನಾಗಿಯೇ ಇದ್ದ.ಬಹಳ ದಿನ ಮಾತ್ರೆ ತೆಗೆದುಕೊಳ್ಳುತ್ತಿದ್ದರೆ ಕಿಡ್ನಿ ತೊಂದರೆ ಬರುತ್ತದೆ ಎಂದು ಅವನ ತಲೆಯಲ್ಲಿ ಯಾರೋ ಹುಳ ಬಿಟ್ಟರು.ಮಾತ್ರೆ ಬಿಟ್ಟ.ನನ್ನ ಹತ್ತಿರ ಬರುವುದನ್ನೂ ಬಿಟ್ಟ.ಯಾರೋ ಹೇಳಿದರು ಅಂತ ಯಾವುದೋ ಪುಡಿ ನುಂಗಿದ.ಇನ್ಯಾರೂ ಡಾಕ್ಟರ್ ಹತ್ತಿರ ಹೋಗಿ ಶುಗರ್ ಚೆಕ್ ಕೂಡ ಮಾಡಿಸಿಕೊಳ್ಳಲಿಲ್ಲ.ಆರು ತಿಂಗಳಿಗೆ ಶುಗರ್ ವಿಪರೀತ ಹೆಚ್ಚಾಗಿ ,ಜೊತೆಗೇ ಹೃದಯಾಘಾತವಾಯಿತು. ನಾರಾಯಣ ಹೃದಯಾಲಯಕ್ಕೆ ಹೋಗಿ 'ಬೈ ಪಾಸ್ ಸರ್ಜರಿ' ಮಾಡಿಸಿ ಕೊಂಡು ಬಂದ.ಕೆಟ್ಟ ಮೇಲೆ ಬುದ್ಧಿ ಬಂತು ಅನ್ನುವ ಹಾಗೆ ಈಗ ಶುಗರ್ ಗೆ ಮಾತ್ರೆ ತಪ್ಪದೆ ತೆಗೆದು ಕೊಳ್ಳುತ್ತಾನೆ.'ಅಲ್ಲಯ್ಯ ಮೊದಲೇಕೆ ಮಾತ್ರೆ ಬಿಟ್ಟೆ ಎಂದರೆ ,'ಅಯ್ಯೋ ....ಬಿಡಿ ಸರ್ ನನ್ನ ಬುದ್ಧಿ ದನ ಮೇಯಿಸಲು ಹೋಗಿತ್ತು'ಎಂದು ಮಾತು ಹಾರಿಸುತ್ತಾನೆ.ಸುಮಾರು ಮೂವತ್ತು ವರ್ಷಗಳ ಹಿಂದೆ ನಡೆದ ಮತ್ತೆರಡು ಘಟನೆಗಳು ನೆನಪಿನಲ್ಲಿ ಉಳಿದುಬಿಟ್ಟಿವೆ.ಒಂದು ದಿನ ಅಜ್ಜಿಯೊಬ್ಬಳು ತನ್ನ ಐದು ವರ್ಷದ ಮೊಮ್ಮಗನೊಂದಿಗೆ ಆಸ್ಪತ್ರೆಗೆ ಬಂದಳು.ಹುಡುಗನಿಗೆ ಎರಡೂ ಕಣ್ಣು ಕಾಣುತ್ತಿರಲಿಲ್ಲ. ಎರಡೂ ಕಣ್ಣು ಗುಡ್ಡೆಗಳು ಸುಟ್ಟ ಹಾಗಿತ್ತು. ಹುಟ್ಟಿನಿಂದಲೂ ಹೀಗಿದೆಯೇ ಎಂದು ಅಜ್ಜಿಯನ್ನು ಕೇಳಿದೆ.ಅವಳ ಉತ್ತರ ಕೇಳಿ ಅವಾಕ್ಕಾದೆ.'ಅಯ್ಯೋ ಮಗ ಚನ್ನಾಗೇ ಇತ್ತು ಸರ್.ಎರಡು ವರ್ಷದವನಿದ್ದಾಗ ಕಣ್ಣು ಕೆಂಪಾಗಿತ್ತು. ಇದಕ್ಕೆಲ್ಲಾ ಆಸ್ಪತ್ರೆ ಯಾಕೇ ?ಮೈಲ್ ತುತ್ತ (copper sulphate) ಹಾಕಿದರೆ ಸರಿಹೋಗುತ್ತೆ ಅಂತ ಯಾರೋ ಹೇಳಿದರು.ಬುದ್ಧಿ ಯಿಲ್ಲದೆ ಅವರು ಹೇಳಿದ ಹಾಗೆ ಮಾಡಿ ಮಗುವಿನ ಕಣ್ಣು ಹಾಳು ಮಾಡಿದೆವು'ಎಂದು ಕಣ್ಣೀರು ಹಾಕಿದಳು. ಬಹಳ ಓದಿ ಕೊಂಡ ದೊಡ್ಡ ಆಫೀಸರ್ ಒಬ್ಬರಿಗೆ ಮರ್ಮಾಂಗದ ಸುತ್ತ ಆಗುವ 'ಹುಳುಕಡ್ಡಿ'(ಫಂಗಲ್ ಇನ್ಫೆಕ್ಷನ್ ) ಆಗಿತ್ತು.ಡಾಕ್ಟರ್ ಗಳಿಗೆ ತೋರಿಸುವುದಕ್ಕೆ ನಾಚಿಕೊಂಡ ಅವರು ಯಾರೋ ಹೇಳಿದರು ಅಂತ ಯಾವುದೋ acid ಹಾಕಿಕೊಂಡು, ಅಲ್ಲೆಲ್ಲಾ ಸುಟ್ಟ ಗಾಯಗಳಾಗಿ,ಮೂರು ತಿಂಗಳು ಪ್ಯಾಂಟ್ ಹಾಕಿಕೊಳ್ಳಲೂ ಆಗದೆ,ಆಫೀಸಿಗೆ ಹೋಗಲೂ ಆಗದೆ,ಬರೀ ಆಸ್ಪತ್ರೆಗೆ ಅಲೆಯುವುದೇ ಆಯಿತು. ಗೊತ್ತಿರಲಿ,ಗೊತ್ತಿಲ್ಲದಿರಲಿ ,ಪುಕ್ಕಟ್ಟೆ ಸಲಹೆ ಕೊಡುವವರು ಎಲ್ಲಾ ಕಡೆ ಸಿಗುತ್ತಾರೆ.ಯಾರದೋ ಸಲಹೆ ಕೇಳುವ ಮುಂಚೆ ಸಂಬಂಧ ಪಟ್ಟವರ ಸಲಹೆ ಕೇಳುವುದು ಉತ್ತಮವಲ್ಲವೇ?ನಿಮ್ಮ ಅಭಿಪ್ರಾಯ ತಿಳಿಸಿ.ನಮಸ್ಕಾರ.

Friday, May 25, 2012

"ಯಾರೇ ಕೂಗಾಡಲೀ,ಊರೇ ಹೋರಾಡಲೀ !!!"

ಬಹಳ ಹಿಂದೆ ಟಿಬೆಟ್ಟಿನ ಬೌದ್ಧ ಆಶ್ರಮ ಒಂದರಲ್ಲಿ ಬಹಳಷ್ಟು ಬೌದ್ಧ ಬಿಕ್ಷುಗಳು ಮೌನವಾಗಿ ಧ್ಯಾನ ಮಾಡುತ್ತಾ ಅಧ್ಯಾತ್ಮಿಕ ಸಾಧನೆಯಲ್ಲಿ ತೊಡಗಿದ್ದರಂತೆ.ಆಗಾಗ ಅಲ್ಲಿಗೆ ಎಲ್ಲೂ ವಾಸಿಯಾಗದಂತಹ ಮಾನಸಿಕ ಅಸ್ವಸ್ಥರನ್ನು ತಂದು ಬಿಡುತ್ತಿದ್ದರಂತೆ.ಅಲ್ಲಿದ್ದ ಸನ್ಯಾಸಿಗಳು ತಮ್ಮ ಪಾಡಿಗೆ ತಾವು ತಮ್ಮ ಕೆಲಸಮಾಡುತ್ತಾ,ಧ್ಯಾನ ಮಾಡುತ್ತಾ ,ಮೌನದಿಂದ ಇರುತ್ತಿದ್ದರಂತೆ.ಮಾನಸಿಕ ಅಸ್ವಸ್ಥರನ್ನು ,ತಮ್ಮ ಸಾಧನೆಯನ್ನೂ,ಮನೋನಿಗ್ರಹವನ್ನೂ, ಪರೀಕ್ಷೆ ಮಾಡಲು ಬಂದಿರುವ ಗುರುಗಳು ಎಂದು ಭಾವಿಸುತ್ತಿದ್ದರಂತೆ.ಅವರು ಎಷ್ಟೇ ಕೂಗಾಡಿದರೂ,ಗಲಾಟೆ ಮಾಡಿದರೂ,ಯಾರೂ ಅವರ ಕಡೆ ಗಮನವನ್ನೇ ಕೊಡದೆ,ಮೌನವಾಗಿ ಧ್ಯಾನ ಮಾಡುತ್ತಾ ಇದ್ದು ಬಿಡುತ್ತಿದ್ದರಂತೆ!ಅವರನ್ನು ಯಾರೂ ವಿಚಾರಿಸಲೂ ಹೋಗುತ್ತಿರಲಿಲ್ಲವಂತೆ.ಯಾವುದೇ ಕಾರಣಕ್ಕೂ ಅವರನ್ನು ಅಲ್ಲಿಂದ ತಪ್ಪಿಸಿಕೊಳ್ಳಲು ಬಿಡುತ್ತಿರಲಿಲ್ಲವಂತೆ.ಮಾನಸಿಕ ಅಸ್ವಸ್ಥರು ಕೂಗಿ ,ಗಲಾಟೆ ಮಾಡಿ,ಸುಸ್ತಾಗಿ ಕೆಲವೇ ದಿನಗಳಲ್ಲಿ ತಣ್ಣಗಾಗಿ,ಅಲ್ಲಿರುವ 'ಬುದ್ಧಿಸ್ಟ್ ಮಾಂಕ್' ಗಳಂತೆ ತಾವೂ ತಮ್ಮ ಪಾಡಿಗೆ ಮೌನವಾಗಿ ಧ್ಯಾನ ಮಾಡುತ್ತಾ ಕುಳಿತು ಬಿಡುತ್ತಿದ್ದರಂತೆ!ಅಲ್ಲಿದ್ದ ಕೆಲವೇ ತಿಂಗಳುಗಳಲ್ಲಿ ಸಂಪೂರ್ಣ ಗುಣಮುಖರಾಗಿ ಹೊರಬರುತ್ತಿದ್ದರಂತೆ.ಮನಸ್ಸು ತಣ್ಣಗಾದಾಗ ಮನಸ್ಸಿನ ಹೊಯ್ದಾಟ,ತಳಮಳ,ಮಾನಸಿಕ ಸಮಸ್ಯೆಗಳು ಇಲ್ಲವಾಗುತ್ತವೆ!
ಈ ಬರಹದಲ್ಲಿ ನಮಗೆಲ್ಲಾ ಒಂದು ಪಾಠವಿದೆ ಅನಿಸುತ್ತದೆ.ನಮ್ಮ ದಿನ ನಿತ್ಯದ ಜೀವನದಲ್ಲಿ ಎಷ್ಟೋ ಜನ ಕೂಗಾಡಿ, ಗಲಾಟೆ ಮಾಡಿ,ನಮ್ಮ ನೆಮ್ಮದಿ ಕೆಡಿಸುವವರು ಸಿಗಬಹುದು.ಅವರನ್ನು ನಾವು ನಮಗೆ ತಾಳ್ಮೆಯನ್ನು ಕಲಿಸಲು ಬಂದಿರುವ ಗುರುಗಳು ಎಂದೇಕೆ ತಿಳಿಯಬಾರದು? ನಮ್ಮೆಲ್ಲರ ಬದುಕಿನಲ್ಲಿ ಇನ್ನೂ ಹೆಚ್ಚಿನ ಶಾಂತಿ,ನೆಮ್ಮದಿ ಸಿಗುವಲ್ಲಿ ಈ ಲೇಖನ ಪ್ರಯೋಜನಕಾರಿಯಾಲಿ ಎಂದು ಹಾರೈಸುತ್ತೇನೆ. ನಮಸ್ಕಾರ.
(ಸಾಧಾರಿತ)

Monday, May 21, 2012

"ನೀ ...ನನ್ನ ನೋಡಿ ಎದಕ್ ನಕ್ಕೀ? "

ಇದು ಸುಮಾರು ನಲವತ್ತು ವರ್ಷಗಳ ಹಿಂದೆ ನಡೆದದ್ದು.ನಮಗಾಗ ಮೊದಲ ಎಮ್.ಬಿ.ಬಿ.ಎಸ್.ಪರೀಕ್ಷೆಯ ದಿನಗಳು.ರಾತ್ರಿಯೆಲ್ಲಾ ಕೂತು ಓದುತ್ತಿದ್ದರಿಂದ ,ರಾತ್ರಿ ಸುಮಾರು ಹನ್ನೆರಡರ ವೇಳೆಗೆ "ಟೀ ಬ್ರೇಕ್ "ಗೆಂದು ನಮ್ಮ ಹಾಸ್ಟೆಲ್ ನ ಎದುರು 'ಹರಟೆ ಕಟ್ಟೆಯ' ಬಳಿ ಸೇರುತ್ತಿದ್ದೆವು .ಹೀಗೇ ಒಂದು ದಿನ ಟೀ ಕುಡಿದು ಅಲ್ಲೇ ಇದ್ದ ಕಲ್ಲು ಬೆಂಚಿನ ಮೇಲೆ ಕುಳಿತು ಹರಟೆ ಹೊಡಿಯುತ್ತಿದ್ದೆವು. ಪಕ್ಕದ ಹಾಸ್ಟೆಲ್ ನಿಂದ ನಮ್ಮ ಸೀನಿಯರ್ ಹಡಪದ್ ಬರುತ್ತಿದ್ದರು.ಅವರನ್ನು ಒಬ್ಬ ವ್ಯಕ್ತಿ ಹಿಂಬಾಲಿಸುತ್ತಿದ್ದ.ಹಿಂಬಾಲಿಸುತ್ತಿದ್ದ ವ್ಯಕ್ತಿಯನ್ನು ಕುರಿತು ಹಡಪದ್ "ಲೇ...!!! ಸುಮ್ನಾ ಹೋಗೋ ಯಪ್ಪಾ...!!!ಯಾಕ್ ಹಿಂಗ ಕಾಡಾಕ ಹತ್ತೀ? ನಿನ್ನ ನೋಡಿ ನಾ ಯಾಕ ನಗಲೋ?ಮತ್ತ ನನ್ನ ಹಿಂದೆ ಬಂದರ ಒದೀತೀನಿ ನೋಡು ಮಗನಾ !!!" ಎಂದು ಜೋರಾಗಿ ಕೂಗುತ್ತಿದ್ದರು. ನಾವು ಹಡಪದ ರನ್ನು ಏನೆಂದು ವಿಚಾರಿಸಿದಾಗ ತಿಳಿದಿದ್ದು ಇಷ್ಟು. ರಾತ್ರಿ ಸುಮಾರು ಎಂಟು ಘಂಟೆಯ ವೇಳೆಗೆ ಹಡಪದ್,ಅವರ ಸ್ನೇಹಿತರೊಬ್ಬರ ಜೊತೆ ಮೆಸ್ಸಿನಲ್ಲಿ ಊಟ ಮಾಡುತ್ತಿದ್ದರು.ಅವರ ಸ್ನೇಹಿತ ಹೇಳಿದ ಯಾವುದೋ ಜೋಕಿಗೆ ಇವರು ಜೋರಾಗಿ ನಕ್ಕರು.ನಗುತ್ತಾ ಅವರಿಗೆ ಅರಿವಿಲ್ಲದಂತೆ ಸಹಜವಾಗಿ ಅವರ ದೃಷ್ಟಿ , ಎದುರು ಕೂತಿದ್ದ ಈ ವ್ಯಕ್ತಿಯ ಮೇಲೆ ಬಿತ್ತು. ಆ ವ್ಯಕ್ತಿ, ಅವರು ತನ್ನನ್ನೇ ನೋಡಿ ನಗುತ್ತಿದ್ದಾರೆ ಎಂದು ಅಪಾರ್ಥ ಮಾಡಿಕೊಂಡ.ಇವರು ಎಷ್ಟು ಹೇಳಿದರೂ ಕೇಳಲು ತಯಾರಿರಲಿಲ್ಲ.ರಾತ್ರಿ ಸುಮಾರು ಎಂಟು ಘಂಟೆಯಿಂದ ಅವರನ್ನು ಹಿಂಬಾಲಿಸುತ್ತಾ "ನನ್ನನ್ನು ನೋಡಿ ಎದಕ್ ನಕ್ಕೀ ?"ಎಂದು ಪ್ರಶ್ನೆ ಕೇಳುತ್ತಾ ಗಂಟು ಬಿದ್ದಿದ್ದ.ಹಡಪದ್"ನಾ ನಿನ್ನ ನೋಡಿ ನಕ್ಕಿಲ್ಲೋ ಯಪ್ಪಾ....!!"ಎಂದು ಒಂದು ಸಾವಿರ ಸಲ ಹೇಳಿದರೂ ,ಅವನು ಅವರನ್ನು ಹಿಂಬಾಲಿಸುವುದನ್ನು ಬಿಟ್ಟಿರಲಿಲ್ಲ.ಅವನದು ಒಂದೇ ಪ್ರಶ್ನೆ "ನನ್ನ ನೋಡಿ ಎದಕ್ ನಕ್ಕೀ?".ಕಾಲೇಜಿನ ಕ್ಯಾಂಪಸ್ಸಿನ ತುಂಬೆಲ್ಲಾ ಹೀಗೇ ರಾತ್ರಿ ಎಂಟರಿಂದ ಹನ್ನೆರಡರವರೆಗೂ,ಅವನು ಅದೇ ಪ್ರಶ್ನೆ ಕೇಳುತ್ತಾ ,ಅವರು ಅದೇ ಉತ್ತರ ಕೊಡುತ್ತಾ ಸುತ್ತುತ್ತಿದ್ದರು.ಹಡಪದ್ ಎಲ್ಲೇ ಹೋದರು ಆ ವ್ಯಕ್ತಿ ಹಿಂಬಾಲಿಸುತ್ತಿದ್ದ.ಟಾಯ್ಲೆಟ್ ಒಳಗೆ ಹೋಗಿ ಅರ್ಧ ಘಂಟೆ ಬಾಗಿಲು ಹಾಕಿಕೊಂಡರೂ ಅವನು ಬಾಗಿಲ ಹೊರಗೇ ಕಾಯುತ್ತಿದ್ದನಂತೆ!!ನಾವೆಲ್ಲಾ ಸೇರಿ ಆ ವ್ಯಕ್ತಿಗೆ ಸಮಾಧಾನ ಹೇಳುತ್ತಿದ್ದೆವು.ಅಷ್ಟರಲ್ಲಿ ಹಡಪದ್ ಅವನ ಕಣ್ಣು ತಪ್ಪಿಸಿ ಕತ್ತಲಲ್ಲಿ ಮರೆಯಾಗಿದ್ದರು. ಅವನು ನಮ್ಮಿಂದ ಬಿಡಿಸಿಕೊಂಡು ಮತ್ತೆ ಅವರನ್ನು ಹುಡುಕುತ್ತಾ ಹೊರಟ !!ನಾವೆಲ್ಲಾ ಹಡಪದ್ ರ ಫಜೀತಿ ಯನ್ನು ನೆನೆಸಿಕೊಂಡು ಹೊಟ್ಟೆ ಹುಣ್ಣಾಗುವಷ್ಟು ನಗುತ್ತಾ ನಮ್ಮನಮ್ಮ ರೂಮುಗಳಿಗೆ ಓದಲು ಹೊರಟೆವು.ಮೊನ್ನೆ ನಾನು ನನ್ನ ಗೆಳೆಯ ಸೇರಿದಾಗ ಈ ಘಟನೆ ನೆನಪಾಗಿ ನಕ್ಕಿದ್ದೂ ನಕ್ಕಿದ್ದೆ.ಅದನ್ನು ನಿಮ್ಮಜೊತೆ ಹಂಚಿಕೊಳ್ಳುತ್ತಿದ್ದೇನೆ .ನೀವೂ ನಕ್ಕು ಹಗುರಾಗಿ.ನಮಸ್ಕಾರ.

Wednesday, May 16, 2012

"ಕೋತಿಗಳು ಮಾತ್ರ ನೆನಪಾಗ ಬಾರದು!!!"

ಕಾಶಿಯಲ್ಲಿ ಒಬ್ಬ ಮಹಾ ವಿಧ್ವಾಂಸನಿದ್ದ .ವೇದ ಶಾಸ್ತ್ರ ಪುರಾಣಗಳೆಲ್ಲಾ ,ಅವನ ನಾಲಿಗೆಯ ತುದಿಯಲ್ಲಿದ್ದವು.ಆದರೂ ಹೆಚ್ಚಿನ ಆಧ್ಯಾತ್ಮ ಸಾಧನೆಗಾಗಿ,ಸತ್ಯದ ಸಾಕ್ಷಾತ್ಕಾರಕ್ಕಾಗಿ ಟಿಬೆಟ್ಟಿನಲ್ಲಿದ್ಧ ಬೌದ್ಧ ಗುರುವನ್ನು ಹುಡುಕಿ ಹೊರಟ.ಗುರುವನ್ನು ಕಂಡು ಹೆಚ್ಚಿನ ಆಧ್ಯಾತ್ಮ ಸಾಧನೆಯ ತನ್ನ ಇಂಗಿತವನ್ನು ತಿಳಿಸಿದ.ಗುರು ಅದಕ್ಕೆ ಒಪ್ಪಿ 'ಬುದ್ಧಂ ಶರಣಂ ಗಚ್ಚಾಮಿ,ಧರ್ಮಂ ಶರಣಂ ಗಚ್ಚಾಮಿ ,ಸಂಗಂ ಶರಣಂ ಗಚ್ಚಾಮಿ' ಎನ್ನುವ ಮಂತ್ರವನ್ನು ಮೂರು ಬಾರಿ ಹೇಳಿದರೆ ಸಾಕೆಂದೂ,ಅದರಿಂದ ಉನ್ನತ ಆಧ್ಯಾತ್ಮ ಸಾಧನೆ ಸಾಧ್ಯವೆಂದು ತಿಳಿಸಿದ.ಪಂಡಿತನಿಗೆ'ಆಧ್ಯಾತ್ಮ ಸಾಧನೆ ಇಷ್ಟು ಸುಲಭವೇ?!! ಅದಕ್ಕೋಸ್ಕರ ತಾನು ಇಷ್ಟೆಲ್ಲಾ ಕಷ್ಟ ಪಟ್ಟು ಗುರುವನ್ನು ಹುಡುಕಿ ಕೊಂಡು ಇಷ್ಟು ದೂರ ಬರಬೇಕಾಯಿತೆ?!!'ಎನಿಸಿ ಧ್ಯಾನಕ್ಕೆ ಕುಳಿತು ಕೊಂಡ.ಗುರು 'ಆದರೆ ಇಲ್ಲೊಂದು ಸಣ್ಣ ತೊಂದರೆ ಇದೆ.ಧ್ಯಾನ ಮಾಡುವಾಗ ಯಾವುದೇ ಕಾರಣಕ್ಕೂ ಕೋತಿಗಳು ಮಾತ್ರ ನೆನಪಾಗ ಬಾರದು.ಕೋತಿಗಳು ನೆನಪಾದರೆ ಮತ್ತೆ ಧ್ಯಾನವನ್ನು ಶುರುಮಾಡಬೇಕು'ಎಂದ.ವಿಧ್ವಾಂಸ 'ತನ್ನಂತಹ ಮಹಾ ಪಂಡಿತನಿಗೆ ಕೋತಿಗಳು ಏಕೆ ನೆನಪಾಗುತ್ತವೆ ?ಗುರುಗಳು ಎಲ್ಲೋ ತಮಾಷೆ ಮಾಡುತ್ತಿರಬೇಕು"ಎಂದುಕೊಂಡು ಧ್ಯಾನಕ್ಕೆ ಕುಳಿತ.ಸ್ವಲ್ಪ ಹೊತ್ತಿನಲ್ಲಿಯೇ ಕೋತಿಗಳು ನೆನಪಾದವು.ಮತ್ತೆ ಮೊದಲಿನಿಂದ ಧ್ಯಾನ ಶುರು ಮಾಡಿದ.ಮತ್ತೆ ಕೋತಿಗಳು ನೆನಪಾದವು.ಬರ ಬರುತ್ತಾ ಮನಸ್ಸಿನ ತುಂಬೆಲ್ಲಾ ಕೋತಿಗಳೇ ತುಂಬಿ ಹೋದವು.ಕುಂತಲ್ಲಿ ನಿಂತಲ್ಲಿ ಕೋತಿಗಳ ಧ್ಯಾನವಾಯಿತು.ಕನಸಿನಲ್ಲೂ ಬರೀ ಕೋತಿಗಳೇ!!! ಪಂಡಿತನಿಗೆ ಮನಸ್ಸಿನ ಶಾಂತಿಯೇ ಇಲ್ಲದಂತಾಗಿ ಅಲ್ಲಿಂದ ಮೊದಲು ಬಿಡಿಸಿಕೊಂಡು ಹೋದರೆ ಸಾಕಾಗಿತ್ತು.ಅಂಜಲೀ ಬದ್ಧನಾಗಿ ಗುರುವಿನಲ್ಲಿ ತನ್ನ ಸಮಸ್ಯೆಯನ್ನು ಹೇಳಿಕೊಂಡ.ಅದಕ್ಕೆ ಗುರು ಆಧ್ಯಾತ್ಮ ಸಾಧನೆಗೆ ಮನಸ್ಸಿನ ಹತೋಟಿ ಮೊದಲ ಮೆಟ್ಟಿಲೆಂದೂ,ಅದನ್ನು ಸಾಧಿಸುವ ರೀತಿಯನ್ನು ಹಂತ ಹಂತವಾಗಿ ಕಲಿಯ ಬೇಕೆಂದೂ,ಅದಕ್ಕೆ ಸಾಕಷ್ಟು ತಾಳ್ಮೆ ,ಶ್ರದ್ಧೆ ಮತ್ತು ಸಾಧನೆ ಬೇಕೆಂದು ತಿಳಿಸಿದ.ವರ್ಷಗಳ ಸಾಧನೆಯ ನಂತರ ಪಂಡಿತನಿಗೆಆಧ್ಯಾತ್ಮದ ಅರಿವಿನಸಾಕ್ಷಾತ್ಕಾರವಾಯಿತು.ಆಧ್ಯಾತ್ಮದ ಮೊದಲ ಹಂತವೇ ಮನಸ್ಸಿನ ನಿಗ್ರಹ!ಅಲ್ಲವೇ?ನಿಮ್ಮ ಅಭಿಪ್ರಾಯ ತಪ್ಪದೇ ತಿಳಿಸಿ. (ಸಾಧಾರಿತ)

Monday, April 30, 2012

"ಉಸಿರಾಟದ ಬಗ್ಗೆ ಸ್ವಲ್ಪಗಮನ ಹರಿಸಿ"

ಸಾಮಾನ್ಯವಾಗಿ ನಾವು ಉಸಿರಾಟದ ಬಗ್ಗೆ ಗಮನ ಹರಿಸುವುದಿಲ್ಲ.ಅದು ನಮ್ಮ ಗಮನಕ್ಕೆ ಬರದೆ ತನ್ನ ಪಾಡಿಗೆ ತಾನು ನಡೆಯುವ ಕ್ರಿಯೆ.ನಾವು ಸಾಮಾನ್ಯವಾಗಿ ಮಾಡುವ ಉಸಿರಾಟ(Thoracic breathing) ನಮ್ಮ ಶ್ವಾಶ ಕೋಶಗಳ ಮೇಲಿನ ಸ್ವಲ್ಪ ಭಾಗವನ್ನು ಮಾತ್ರ ಉಪಯೋಗಿಸಿಕೊಳ್ಳುತ್ತದೆ. ಕೆಳ ಭಾಗದ ಶ್ವಾಸ ಕೋಶದ ಬಹಳಷ್ಟು ಪುಟ್ಟ ಪುಟ್ಟ ಗಾಳಿಯ ಚೀಲಗಳು (alveoli or air sacks) ತೆರೆದುಕೊಳ್ಳುವುದೇ ಇಲ್ಲ ! ನಮ್ಮ ಗಡಿಬಿಡಿಯ ದಿನಚರಿಯಲ್ಲಿ ನಮಗೆ ಸರಿಯಾಗಿ ಉಸಿರಾಡಲೂ ಪುರಸೊತ್ತಿಲ್ಲ!! ಬಹಳಷ್ಟು ರೋಗಗಳನ್ನು ಸರಿಯಾದ ಉಸಿರಾಟದಿಂದ ಗುಣ ಪಡಿಸಬಹುದು ಎನ್ನುವುದು ಬಹಳಷ್ಟು ವೈದ್ಯರ ಅಭಿಮತ.ದೀರ್ಘ ಉಸಿರಾಟದಲ್ಲಿ ಉಸಿರನ್ನು ಒಳಕ್ಕೆ ಎಳೆದು ಕೊಂಡಾಗ (Abdominal breathing) ವಪೆ ಅಥವಾ Diaphragm ಹೊಟ್ಟೆಯ ಭಾಗವನ್ನು ಕೆಳಕ್ಕೆ ತಳ್ಳಿ ಉಬ್ಬುವಂತೆ ಮಾಡುತ್ತದೆ. ಉಸಿರನ್ನು ಹತ್ತು ಎಣಿಕೆಯವರಗೆ ಹಾಗೆಯೇ ಎದೆಯ ಒಳಗೆ ಹಿಡಿದಿಟ್ಟುಕೊಂಡು,ನಂತರ ನಿಧಾನವಾಗಿ ಹೊರಗೆ ಬಿಡಿ(ಹೃದಯದ ತೊಂದರೆ ಇರುವವರು ಉಸಿರನ್ನು ಹಿಡಿದು ಇಟ್ಟು ಕೊಳ್ಳುವುದು ಅಥವಾ 'ಕುಂಭಕ'ದ ಬಗ್ಗೆ ತಮ್ಮ ವೈದ್ಯರ ಸಲಹೆ ಪಡೆಯುವುದು ಒಳ್ಳೆಯದು).ನಮ್ಮ ಸಾಮಾನ್ಯವಾದ ಉಸಿರಾಟ ಹನ್ನೆರಡರಿಂದ ಹದಿನೈದರವರಗೆ ಇರುತ್ತದೆ. ನಿಧಾನವಾಗಿ ಮೇಲೆ ಹೇಳಿದ ರೀತಿಯ ಉಸಿರಾಟದಿಂದ ನಿಮಿಷಕ್ಕೆ ಮೂರರಿಂದ ನಾಲಕ್ಕು ಸಲ ಉಸಿರಾಟವಾಗುತ್ತದೆ. ಈ ರೀತಿಯ ಹತ್ತರಿಂದ ಹದಿನೈದು ನಿಮಿಷ ಉಸಿರಾಟದಿಂದ ಎಷ್ಟೋ ಉಪಯೋಗಗಳಿವೆ! ಕೋಶಗಳಿಗೆ ಸಾಕಷ್ಟು ಆಮ್ಲಜನಕ ಸಿಗುವುದಲ್ಲದೆ ,ಅರಿವಿನಿಂದ ಉಸಿರಾಟ ನಡೆಸುವುದರಿಂದ ನೀವು ಈ ಕ್ಷಣದಲ್ಲಿ ಇರುತ್ತೀರಿ !You are in the present moment! ಆ ಸಮಯದಲ್ಲಿ ನಿಮ್ಮನ್ನು ಬೇಡದ ಚಿಂತೆಗಳು,ಆಲೋಚನೆಗಳು ಕಾಡುವುದಿಲ್ಲ.ಸರಿಯಾದ ಉಸಿರಾಟದಿಂದ ಎಷ್ಟೊಂದು ಉಪಯೋಗಳಿವೆ ಅಲ್ಲವೇ? ನೀವು ಈಗಾಗಲೇ ಪ್ರಾಣಾಯಾಮ ಮಾಡುತ್ತಿದ್ದರೆ ನಿಮಗೆ ಸರಿಯಾದ ಉಸಿರಾಟದ ಉಪಯೋಗ ಗೊತ್ತೇ ಇದೇ. ನಮ್ಮ ಪ್ರಾಣ ದಾಯಕ ಉಸಿರಿನ ಬಗ್ಗೆ ಇನ್ನಾದರೂ ಸ್ವಲ್ಪ ಗಮನ ಹರಿಸೋಣವೇ?

Tuesday, April 24, 2012

"ನನ್ನ ಜೀವನದಲ್ಲಿ ಹೀಗೊಬ್ಬ ಹೀರೋ !!!"

ಇದು ಸುಮಾರು ಹತ್ತು ವರುಷಗಳ ಹಿಂದೆ ನಡೆದ ನನ್ನ ಸ್ನೇಹಿತರೊಬ್ಬರ ಕಥೆ.ಅವರ ಹೆಸರು ಇಲ್ಲಿ ಅಪ್ರಸ್ತುತ.ಆದರೆ ಅವರದು ಎಂತಹ ಅದ್ಭುತ ವ್ಯಕ್ತಿತ್ವವೆಂದರೆ ,ಅದನ್ನು ಬಣ್ಣಿಸಲು ನನ್ನ ಶಬ್ಧ ಭಂಡಾರ ಸಾಲದು !ಸುಮಾರು ನಲವತ್ತೈದು ವರ್ಷಗಳಷ್ಟು ವಯಸ್ಸಾಗಿದ್ದರೂ ಅವರ ಜೀವನೋತ್ಸಾಹ ಎಳ್ಳಷ್ಟೂ ಕುಗ್ಗಿರಲಿಲ್ಲ!ಸದಾ ಚಟುವಟಿಕೆಯಿಂದ,ಲವಲವಿಕೆಯಿಂದ ಪುಟಿಯುತ್ತಿದ್ದ ವ್ಯಕ್ತಿ.ಆಫೀಸಿಗೆ ಹೋಗುವ ಮುಂಚೆ ಮತ್ತು ಆಫೀಸಿನಿಂದ ಬಂದ ನಂತರ ಪಿ.ಯು.ಸಿ.ಹುಡುಗರಿಗೆ ಉಚಿತವಾಗಿ ಪಾಠ ಹೇಳುತ್ತಿದ್ದರು.ಅವರಿದ್ದಲ್ಲಿ ಹಾಸ್ಯ ,ನಗು!ಉತ್ಸಾಹ ಭರಿತ ಜೋರು ದನಿ.ಬೆಳಗಿನ ಜಾವ ವಾಕಿಂಗ್ ಹೋಗುತ್ತಿದ್ದೆ. ನನ್ನ ಹಿಂದೆ ಹೊಚ್ಚ ಹೊಸ ಸ್ಯಾಂಟ್ರೋ ಕಾರೊಂದು ನಿಂತಿತು.'ಬನ್ನಿ ಡಾಕ್ಟ್ರೆ...... ನನ್ನ ಹೊಸಾ ಕಾರು ಹೇಗಿದೆ ,ಡ್ರೈವ್ ಮಾಡಿ ನೋಡಿ' ಎಂದು ಕರೆದರು.'ಅಯ್ಯೋ ಬೇಡ ಬಿಡೀ ಸರ್ ,ಇನ್ನೂ ಅಷ್ಟು ಸರಿಯಾಗಿ ಡ್ರೈವಿಂಗ್ ಬರುವುದಿಲ್ಲಾ.ಹೊಸಾ ಕಾರುಬೇರೆ !',ಎಂದು ಹೇಳಿ ಮುನ್ನಡೆದೆ.'ಹೋ ...ಹೋ ..ಡಾಕ್ಟರ್ ಆಗಿ ಇಷ್ಟೊಂದು ಭಯ ಪಟ್ಟರೆ ಹೇಗೆ ಸರ್?'ಎಂದು ಜೋರಾಗಿ ನಗುತ್ತಾ,ಡ್ರೈವ್ ಮಾಡಿಕೊಂಡು ಮುಂದೆ ಹೋದರು. ಇದಾದ ಎರಡು ತಿಂಗಳಿಗೆ ಯಾರದೋ ಮದುವೆಗೆ ರಾಯಚೂರಿನಿಂದ ಬೆಂಗಳೂರಿಗೆ ತಮ್ಮ ಕಾರಿನಲ್ಲಿ ತಾವೇ ಡ್ರೈವ್ ಮಾಡುತ್ತಾ ತಮ್ಮ ಮನೆಯವರೊಂದಿಗೆ ಹೊರಟರು.ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಿರುವೊಂದರಲ್ಲಿ ಅಕಸ್ಮಾತ್ತಾಗಿ ಎದುರಿಗೆ ಬಂದ ಲಾರಿಯೊಂದನ್ನು ತಪ್ಪಿಸಲು ಹೋಗಿ ಕಾರು ಪಕ್ಕದಲ್ಲಿದ್ದ ಸುಮಾರು ಹತ್ತು ಅಡಿ ಆಳದ ಹಳ್ಳಕ್ಕೆ ಪಲ್ಟಿ ಹೊಡೆಯಿತು.ಇವರು 'ಸೀಟ್ ಬೆಲ್ಟ್ 'ಹಾಕಿರದೆ ಇದ್ದದ್ದರಿಂದ ಕಾರಿನಿಂದಾಚೆ ಎಸೆಯಲ್ಪಟ್ಟರು.ಮಿಕ್ಕವರೆಲ್ಲಾ ಸೀಟ್ ಬೆಲ್ಟ್ ಹಾಕಿದ್ದರಿಂದ ಕಾರಿನಲ್ಲೇ ಇದ್ದರು. ಇವರು ಎದ್ದು ಕಾರಿನಲ್ಲಿದ್ದವರಿಗೆ ಸಹಾಯ ಮಾಡಬೇಕೆಂದು ಏಳಲು ಪ್ರಯತ್ನಿಸಿದರೂ ಏಳಲಾಗಲಿಲ್ಲ.ಕಾರಿನಲ್ಲಿದ್ದ ಇತರರಿಗೆ ಹೆಚ್ಚೇನೂ ಪೆಟ್ಟಾಗಿರಲಿಲ್ಲ.ಇವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.ಸೊಂಟದ ಮೇಲು ಭಾಗದಲ್ಲಿ spinal chord injury ಆಗಿತ್ತು.ಆಪರೇಶನ್ ಮಾಡಿದರೂ ಪ್ರಯೋಜನವಾಗಲಿಲ್ಲ.ಸೊಂಟದ ಕೆಳ ಭಾಗದಲ್ಲಿ ಅವರಿಗೆ ಯಾವುದೇ,ಚಲನೆಯಾಗಲೀ ,ಸ್ಪರ್ಶ ಜ್ಞಾನ ವಾಗಲೀ ಇರಲಿಲ್ಲ.ಮೂತ್ರವನ್ನು ತಾವೇ 'catheter' pass ಮಾಡಿಕೊಂಡು ತೆಗೆದುಕೊಳ್ಳಬೇಕು! ಕೈಗೆ glove ಹಾಕಿಕೊಂಡು ತಮ್ಮ ಮಲವನ್ನೂ ತಾವೇ ಹೊರತೆಗೆಯಬೇಕಾದ ಪರಿಸ್ಥಿತಿ. ಅವರು ಹೋಗದ ಆಸ್ಪತ್ರೆಯಿಲ್ಲ.ಮಾಡದ ವೈದ್ಯವಿಲ್ಲ.ಪಕ್ಕಾ ಆಶಾವಾದಿ.ಮನೆಯಲ್ಲಿಯೇ ಎರಡು ಮೂರು ತಾಸು paralyse ಆದ ಭಾಗಕ್ಕೆ physio therapy exercises ಮಾಡುತ್ತಿದ್ದರು.ಎರಡು ಮೂರು ತಿಂಗಳಲ್ಲಿಯೇ ಮತ್ತೆ ಅವರ ಚೈತನ್ಯ ಪೂರ್ಣ ನಗು ಮುಖದಲ್ಲಿ ಕಾಣಿಸಿಕೊಂಡಿತ್ತು.ಆಫೀಸಿಗೆ ವೀಲ್ ಚೇರಿನಲ್ಲಿ ಹೊಗಿಬರತೊಡಗಿದರು. ಈಗಲೂ ಅವರ physical condition ಹಾಗೆಯೇ ಇದೆ .ಆಗ ಟೆಂತ್ ಓದುತ್ತಿದ್ದ ಮಗ ಈಗ ಸ್ವತಹ ವೈದ್ಯ ನಾಗಿದ್ದಾನೆ. ನಾನು ಆ ಊರಿನಿಂದ ವರ್ಗವಾಗಿ ಬಂದು ಏಳು ವರ್ಷಗಳಾದವು.ಇತ್ತೀಚಿಗೆ ಅವರ ಫೋನ್ ಬಂದಾಗ ಅವರ ಮಾಮೂಲು ಚೈತನ್ಯ ಪೂರ್ಣ ಜೋರು ದನಿಯಲ್ಲಿ ಅವರು "ಇಲ್ಲೇ ಬಂದು ಬಿಡಿ ಡಾಕ್ಟ್ರೆ......... I MISS YOU A LOT ! " ಎಂದಾಗ ನನ್ನ ಕಣ್ಣಂಚಿನಲ್ಲಿ ನೀರಿತ್ತು. ಓದಿ ತಮ್ಮ ಅಭಿಪ್ರಾಯ ತಿಳಿಸಿ.ನಮಸ್ಕಾರ.

Friday, April 20, 2012

"ಸಾಮಾನ್ಯರಲ್ಲೊಬ್ಬ ಅಸಾಮಾನ್ಯ !!!"

ಸುಮಾರು ಎಂಟು  ತಿಂಗಳಿಂದ ಅವನನ್ನು ನೋಡುತ್ತಿದ್ದೆ .ವಯಸ್ಸು ಸುಮಾರು ನಲವತ್ತರ ಆಸುಪಾಸು ಇರಬಹುದು.ಪ್ರತಿದಿನವೂ  ಸಂಜೆ ವಾಕಿಂಗ್ ಹೋಗುವಾಗ  ರಸ್ತೆಯಲ್ಲಿ ಸಿಗುತ್ತಿದ್ದ.ಒಂದು ದಿನವೂ ತಪ್ಪಿಸುತ್ತಿರಲಿಲ್ಲ.ಛಳಿಯಿರಲಿ ,ಮಳೆ ಇರಲಿ ,ಬೇಸಿಗೆ ಇರಲಿ ಅವನು ರಸ್ತೆಯಲ್ಲಿ ಕಾಣಿಸುತ್ತಿದ್ದ.ಕೆಲವೊಮ್ಮೆ ಬೆಳಗಿನ ಜಾವ ನಾನು ಕಾರಿನಲ್ಲಿ ಹೋಗುವಾಗ ಅವನು ನಿಧಾನವಾಗಿ ನಡೆಯುತ್ತಾ ಹೋಗುವುದು ಕಾಣಿಸುತ್ತಿತ್ತು.ಅವನು ತನ್ನ ಎಡ ಕೈಯನ್ನು  ಬಲ ಕೈಯಿಂದ ಹಿಡಿದು ಕೊಂಡು ,ಎಡಗಾಲನ್ನು ಎಳೆಯುತ್ತಾ ನಿಧಾನವಾಗಿ  ಸಾಗುವುದನ್ನು ಕಂಡರೆ ಅವನ ದೇಹದ ಎಡ ಭಾಗ ಪಾರ್ಶ್ವ ವಾಯುವಿನಿಂದ ಪೀಡಿತವಾಗಿರುವುದು ಮೇಲ್ನೋಟಕ್ಕೇ ಕಾಣುತ್ತಿತ್ತು.ಅವನ ದೃಢ ನಿರ್ಧಾರ ,ಛಲ,ದೇಹವನ್ನು ಕಷ್ಟಪಟ್ಟು ಎಳೆದಾಡಿಕೊಂಡು ಸಾಗುವ ರೀತಿ ,ಮನ ಕಲಕುವಂತಿತ್ತು.ವಾಕಿಂಗ್ ಮಾಡಲು ಆಲಸ್ಯವಾದಾಗಲೆಲ್ಲಾ ಅವನನ್ನು ನೆನಸಿಕೊಂಡರೆ,ಆಲಸ್ಯವೆಲ್ಲಾ ಓಡಿ  ಹೋಗುತ್ತಿತ್ತು.ಸ್ಟ್ರೋಕ್ ಆಗಿರುವ ಅವನೇ ಒಂದು ದಿನವೂ ತಪ್ಪಿಸದಿರುವಾಗ ನನಗೇನು ಧಾಡಿ ಎಂದು ಕೊಂಡು ವಾಕಿಂಗ್ ಹೊರಡುತ್ತಿದ್ದೆ.
ಅವನು ಯಾರೋ ,ಏನೋ ,ಪರಿಚಯವಿರಲಿಲ್ಲ.ನೆನ್ನೆ ನಾನೂ ನನ್ನ ಜೊತೆ ವಾಕಿಂಗ್ ಬರುವ ಸ್ನೇಹಿತರೂ ಅವನನ್ನು ಮಾತನಾಡಿಸಿದಾಗ ಅವನ ವಿಷಯ ಕೇಳಿ ಮಾತೇ ಹೊರಡಲಿಲ್ಲ!!ಅವನೊಬ್ಬ ಗಾರೆ ಕೆಲಸ ಮಾಡುವ ಮೇಸನ್ ಆಗಿದ್ದ.ಸುಮಾರು ಒಂದು ವರ್ಷಗಳ ಕೆಳಗೆ ದೇಹದ ಎಡ ಭಾಗಕ್ಕೆ'ಸ್ಟ್ರೋಕ್'(ಪಾರ್ಶ್ವ ವಾಯು)ಆಗಿ ದೇಹದ ಎಡ ಭಾಗ ಸಂಪೂರ್ಣ ನಿಷ್ಕ್ರಿಯವಾಗಿತ್ತು.ಎರಡು ತಿಂಗಳು ಮನೆಯಲ್ಲಿ ಮಲಗಿದ್ದಲ್ಲೇ ಮಲಗಿದ್ದ.ನಂತರ ವೈದ್ಯರ ಸಲಹೆಯಂತೆ ಮನೆಯಲ್ಲಿಯೇ ಕಷ್ಟಪಟ್ಟು ನಡೆಯಲು ಶುರು ಮಾಡಿದ.ಈಗ ದಿನಾ ಬೆಳಿಗ್ಗೆ ನಾಲಕ್ಕು ಗಂಟೆಗೆ ಮನೆ ಬಿಡುತ್ತಾನೆ.ಸುಮಾರು ಆರು ಕಿ.ಮಿ.ನಡೆಯುತ್ತಾನೆ!ಸಂಜೆ ಸುಮಾರು ಎರಡರಿಂದ ಮೂರು ಕಿ.ಮಿ.ನಡೆಯುತ್ತಾನೆ!ಸಾಕಷ್ಟು ಸುಧಾರಿಸಿದ್ದೇನೆ ಎನ್ನುತ್ತಾನೆ.ಇನ್ನಾರು ತಿಂಗಳಿಗೆ ಸಂಪೂರ್ಣ ಗುಣವಾಗಿ ಕೆಲಸಕ್ಕೆ ಹಿಂದಿರುಗುವ ಭರವಸೆ ಅವನಿಗಿದೆ.ಹಠಾತ್ತಾಗಿ ಎರಗಿ ಬಂದ ದೌರ್ಭಾಗ್ಯಕ್ಕೆ ಅಳುತ್ತಾ,ಕೊರಗುತ್ತಾ ಕೂರದೇ,ಛಲದಿಂದ ಹೋರಾಡುವುದಕ್ಕೆ ಇದಕ್ಕಿಂತ ಉದಾಹರಣೆ ಬೇಕೇ?ಇಂತಹ ಸಾಮಾನ್ಯರಿಂದಲೂ ನಾವು ಕಲಿಯ ಬೇಕಾದ ಅಸಾಮಾನ್ಯ ಗುಣಗಳು ಸಾಕಷ್ಟಿವೆ ಎನಿಸುವುದಿಲ್ಲವೇ? ನಿಮ್ಮ ಅನಿಸಿಕೆ ತಿಳಿಸಿ

Tuesday, April 10, 2012

"ಯಾರಾದರೂ ನಮ್ಮತ್ತ ಚಪ್ಪಲಿ ಎಸೆದರೆ?"

ನಾವು ಯಾರನ್ನಾದರೂ ಭೇಟಿ ಯಾದಾಗ ಅವರು ನಮ್ಮತ್ತ ತಮ್ಮ ಚಪ್ಪಲಿ ಎಸೆದಾಗ ನಮಗೆಷ್ಟು ಅವಮಾನವಾಗಬಹುದು ಎನ್ನುವುದನ್ನು ನೆನೆಸಿ ಕೊಳ್ಳಲೂ ಸಾಧ್ಯವಿಲ್ಲ.ಅವಮಾನದಿಂದ,ಕೋಪದಲ್ಲಿ ನಾವೂ ಅಂತಹುದೇ ಯಾವುದೋ ಎಡವಟ್ಟುಕೆಲಸವನ್ನು ಮಾಡುವ ಸಾಧ್ಯತೆಯೇ ಹೆಚ್ಚು.ಆದರೆ ಅಂತಹ ಸಂದರ್ಭದಲ್ಲೂ ತಾಳ್ಮೆಯನ್ನು ಕಳೆದುಕೊಳ್ಳದೆ ಅದನ್ನೂ ಜಾಣ್ಮೆಯಿಂದ ಉಪಯೋಗಿಸಿಕೊಂಡ ಮಹನೀಯರೊಬ್ಬರ ಉಲ್ಲೇಖ ಇಂದಿನ 'ಕನ್ನಡ ಪ್ರಭ'ದಿನಪತ್ರಿಕೆಯಲ್ಲಿದೆ. ಪಂಡಿತ ಮದನ ಮೋಹನ ಮಾಳವೀಯರು ೧೯೧೬ ರಲ್ಲಿ ಬನಾರಸ್ ಹಿಂದೂ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಲು ವಂತಿಗೆ ಹಣ ಕೇಳಲು ಜನರ ಬಳಿ ಹೋಗುತ್ತಿದ್ದರು.ಹೈದರಾಬಾದಿನಲ್ಲಿ ಅಂದಿನ ನಿಜಾಮರ ಬಳಿ ಹೋದಾಗ,ಅವರ ಭಂಡ ಧೈರ್ಯ ಕಂಡು ನಿಜಾಮರು ಸಿಟ್ಟಿನಿಂದ ಅವರತ್ತ ತಮ್ಮ ಚಪ್ಪಲಿ ಬಿಸುಟರು.ಮಾಳವೀಯರು ಸ್ವಲ್ಪವೂ ಸಿಟ್ಟಿಲ್ಲದೆ, ಆ ಒಂಟಿ ಚಪ್ಪಲಿಯನ್ನೇ ತೆಗೆದು ಕೊಂಡು ಹೊರ ಹೋದರು.ಮಾರನೇ ದಿನ ಹೈದರಾಬಾದಿನ ಪ್ರಮುಖ ಬೀದಿಯಲ್ಲಿ, ನಿಜಾಮನ ಒಂಟಿ ಚಪ್ಪಲಿಯನ್ನೇ ಹರಾಜಿಗಿಟ್ಟರು!ಈ ವಿಷಯ ನಿಜಾಮರಿಗೂ ತಿಳಿದು, ಹರಾಜಿನಲ್ಲಿ ತಮ್ಮ ಚಪ್ಪಲಿ ಕಡಿಮೆ ಬೆಲೆಗೆ ಮಾರಾಟವಾದರೆ ತಮಗೇ ಅವಮಾನ ವಾಗುತ್ತದೆ ಎಂದು, ತಮ್ಮವರೊಬ್ಬನನ್ನು ಕಳಿಸಿ ಆ ಒಂಟಿ ಚಪ್ಪಲಿಯನ್ನು ಹೆಚ್ಚಿನ ಬೆಲೆಗೆ ಕೊಂಡು ಕೊಂಡರಂತೆ !ನಮ್ಮ ಹಿರಿಯರ ಜಾಣ್ಮೆ ನಿಜಕ್ಕೂ ಮೆಚ್ಚುವಂತಹುದು !!! ಅಲ್ಲವೇ? (ಆಧಾರ;ಇಂದಿನ 'ಕನ್ನಡ ಪ್ರಭ' ದಿನಪತ್ರಿಕೆ)

Saturday, April 7, 2012

"ಔಷಧಿಯಿಲ್ಲದೆ ಆರೋಗ್ಯ ಸಾಧ್ಯವಿಲ್ಲವೇ?"

ಇಂದು ವಿಶ್ವ ಅರೋಗ್ಯ ದಿನಾಚರಣೆ.ನಿರಾಳವಾಗಿ ಇರುವವರು ಅಪರೂಪವೇನೋ ಎನ್ನುವವಷ್ಟು ಸರ್ವೇ ಸಾಮಾನ್ಯವಾಗಿ ಬಹಳಷ್ಟು ಜನ ಏನೋ ಮಾನಸಿಕ ಒತ್ತಡದಲ್ಲಿರುವಂತೆ ಕಾಣುತ್ತದೆ.ಬಹಳಷ್ಟು ಜನಕ್ಕೆ ಏನೋ ತಳಮಳ,ಏನೋ ಆತಂಕ ! ಔಷಧವಿಲ್ಲದೆ ಆರೋಗ್ಯವಾಗಿರುವುದು ಅಪರೂಪವೆನಿಸಿಬಿಟ್ಟಿದೆ.ಔಷಧಿಗಳನ್ನು ಉಪಯೋಗಿಸದೆ ನಿಯಮಿತ ಆಹಾರ,ಸಾಕಷ್ಟು ವ್ಯಾಯಾಮ,ಧ್ಯಾನ,ಪ್ರಾಣಾಯಾಮ ಮತ್ತು ಯೋಗಾಸನಗಳಿಂದ ಮಾನಸಿಕ ನೆಮ್ಮದಿ ಪಡೆದು ಆರೋಗ್ಯವಾಗಿರಲು ಸಾಧ್ಯ ಎನ್ನುವುದನ್ನು ಮನವರಿಕೆ ಮಾಡಿಕೊಳ್ಳಬೇಕಿದೆ.
ಹೊಸದಾಗಿ ಡಯಾಬಿಟಿಸ್ ಬಂದವರೊಬ್ಬರಿಗೆ ದಿನಕ್ಕೆ ಕನಿಷ್ಠ ಅರ್ಧ ಗಂಟೆ ವಾಕಿಂಗ್ ಮಾಡುವಂತೆ ಹೇಳಿದೆ.'ಅಯ್ಯೋ ಅದಕ್ಕೆಲ್ಲಾ ಟೈಮ್ ಇಲ್ಲಾ ಸರ್' ಎಂದರು !ಅವರ ಗುಡಾಣ ಹೊಟ್ಟೆಯನ್ನೇ ನೋಡುತ್ತಾ 'ತಿನ್ನುವುದನ್ನು ಕಮ್ಮಿ ಮಾಡಿ' ಎಂದೆ.'ಅಯ್ಯೋ ನಾನು ಏನೂ ತಿನ್ನೋದೇ ಇಲ್ಲಾ ಸರ್,ಟೆನ್ಶನ್ ಇಂದ ಏನೂ ಸೇರೋದೇ ಇಲ್ಲಾ 'ಎಂದರು.'ಹೋಗಲಿ ಟೆನ್ಶನ್ ಅನ್ನಾದರೂ ಕಮ್ಮಿ ಮಾಡಿಕೊಳ್ಳಿ'ಎಂದೆ.'ಟೆನ್ಶನ್ ಎಲ್ಲಾರಿಗೂ ಇರೋದೇ ಬಿಡಿ ಸರ್,ನಮ್ಮ ಕೆಲಸಾನೆ ಹಾಗಿದೆ!'ಎಂದರು.ನಾನು ಹೇಳಿದ ಸಲಹೆಗಳನ್ನೆಲ್ಲಾ ಸಾರಾ ಸಗಟಾಗಿ ತಿರಸ್ಕರಿಸಿ 'ಅವೆಲ್ಲಾ ನನ್ನ ಕೈಲಿ ಆಗೋಲ್ಲಾ ಸರ್,ಚೆನ್ನಾಗಿ ಕಂಟ್ರೋಲ್ ಆಗೋ ಹಾಗೆ ಯಾವುದಾದರೂ ಒಳ್ಳೆ ಮಾತ್ರೆ ಬರೆದು ಕೊಡಿ'ಎಂದರು.ಅವರ ಈ ಮಾತುಗಳನ್ನು ಕೇಳಿ 'ನಾವು ಎಂಥಾ ಸ್ಥಿತಿಗೆ ಬಂದು ನಿಂತಿದ್ದೇವೆ!'ಎಂದು ಅಚ್ಚರಿಯಾಯಿತು.ಔಷಧ ವಿಲ್ಲದೆ ಆರೋಗ್ಯವಾಗಿ ಬದುಕೊದಿಕ್ಕೆ ಸಾಧ್ಯವಿಲ್ಲವೇ?'.ಕೈ ಕಾಲುಗಳಿಗೆ ಅವುಗಳ ಕೆಲಸ ಕೊಡದಿದ್ದರೆ ಸಮಗ್ರ ಆರೋಗ್ಯ ಹೇಗೆ ಸಾಧ್ಯ?'what is used less and less ultimately becomes useless 'ಅನ್ನುವ ಮಾತೊಂದಿದೆ.ಮೊದಲಿಂದಲೂ ಕನಿಷ್ಟ ಅರ್ಧದಿಂದ ಒಂದು ಗಂಟೆ ನಡೆದರೆ ಈಗ ದಿನನಿತ್ಯ ಕಾಣುತ್ತಿರುವ ಅರ್ಧಕ್ಕಿಂತ ಹೆಚ್ಚು ಕಾಯಿಲೆಗಳನ್ನು ದೂರವಿಡಬಹುದೆನಿಸುತ್ತದೆ.ಯಾವುದೇ ಕಾರಣಕ್ಕಾದರೂ ಮನೆಯಿಂದ ಹೊರಗೆ ಹೋಗಲು ಆಗದೆ ಇದ್ದ ಪಕ್ಷದಲ್ಲಿ,ಮನೆಯಲ್ಲೇ ಒಂದು ಕಡೆಯಿಂದ ಇನ್ನೊಂದು ಕಡೆಗೆ ಅರ್ಧ ಗಂಟೆ ನಡೆಯಬಹುದು.ಬೋನಿನಲ್ಲಿ ಇರುವ ಹುಲಿ,ಚಿರತೆಯಂತಹ ಪ್ರಾಣಿಗಳೇ ಆ ಸ್ವಲ್ಪ ಜಾಗದಲ್ಲೇ ಒಂದುಕಡೆಯಿಂದ ಇನ್ನೊದು ಕಡೆ ಓಡಾಡುವುದನ್ನು ನೋಡಿದ್ದೇವೆ. Exercising is a necessity ಎನ್ನುವುದನ್ನು ನಾವು ಇದರಿಂದಲಾದರೂ ಕಲಿಯಬಹುದಲ್ಲವೇ?ಅನುಕೂಲವಿದ್ದವರು ಮನೆಯಲ್ಲೇ ಒಂದು ಟ್ರೆಡ್ ಮಿಲ್ ಇಟ್ಟುಕೊಳ್ಳಬಹುದು.ಹೆಚ್ಚಿನ ಓಡಾಟ ,ಚಟುವಟಿಕೆ ಇಲ್ಲದೆ ಒಂದೇ ಕಡೆ ಕುಳಿತು ಕೆಲಸ ಮಾಡುವವರಿಗಂತೂ ಶರೀರ ಆರೋಗ್ಯವಾಗಿ ಇರಬೇಕಾದರೆ ಸ್ವಲ್ಪ ಮಟ್ಟಿಗೆ ವ್ಯಾಯಾಮ ಬೇಕೇ ಬೇಕು.ಮಾನಸಿಕ ಶಾಂತಿ,ನೆಮ್ಮದಿ, ಒಟ್ಟು ಆರೋಗ್ಯಕ್ಕೆ ಮೂಲ ಭೂತ ಅಗತ್ಯ.ಯಾವುದೇ ಕಾರಣಕ್ಕೂ ನಿಮ್ಮ ನೆಮ್ಮದಿ ಹಾಳು ಮಾಡಿ ಕೊಳ್ಳ ಬೇಡಿ.
ಬಿ.ಪಿ,ಶುಗರ್,ಮತ್ತು ಹಾರ್ಟ್ ಪ್ರಾಬ್ಲಂ ಇಲ್ಲದವರು ಮೆಟ್ಟಿಲು ಹತ್ತಿ ಇಳಿಯುವುದನ್ನೇ ಒಂದು ವ್ಯಾಯಾಮ ವಾಗಿ ಅಳವಡಿಸಿಕೊಳ್ಳ ಬಹುದು.ಹತ್ತು ನಿಮಿಷದಿಂದ ಶುರು ಮಾಡಿ, ಬರ ಬರುತ್ತಾ ಮೂವತ್ತು ನಿಮಿಷದವರೆಗೆ ಮೆಟ್ಟಿಲು ಹತ್ತಿ ಇಳಿದರೆ ಅದೇ ಒಂದು ಅದ್ಭುತ ವ್ಯಾಯಾಮವಾಗುತ್ತದೆ.ಇದರ ಜೊತೆ ಮಾನಸಿಕ ಆರೋಗ್ಯಕ್ಕಾಗಿ ಯೋಗ,ಧ್ಯಾನ ಮತ್ತು ಪ್ರಾಣಾಯಾಮವನ್ನೂ ಅಳವಡಿಸಿಕೊಂಡರೆ ಇನ್ನೂ ಒಳಿತು.ಧೂಮಪಾನ ಮತ್ತು ಮದ್ಯಪಾನದಂತಹ ಅಭ್ಯಾಸಗಳು ಆರೋಗ್ಯಕ್ಕೆ ಮಾರಕ.ಸರಿಯಾದ ಆಹಾರ,ಆರೋಗ್ಯಕರ ಹವ್ಯಾಸಗಳು ಮತ್ತು ಸರಿಯಾದ ವ್ಯಾಯಾಮದದಿಂದ ಔಷಧವಿಲ್ಲದೆಯೂ ಆರೋಗ್ಯವಾಗಿರಬಹುದಲ್ಲವೇ ?

Monday, April 2, 2012

"ತಪ್ಪು ರೈಲಿನಲ್ಲಿ "

ನಲವತ್ತು ವರ್ಷಗಳ ಹಿಂದಿನ ಮಾತು.ರಾತ್ರಿ ಸುಮಾರು ಹತ್ತು ಗಂಟೆ ಸಮಯ. ಬೆಂಗಳೂರಿನ ರೈಲ್ವೇ ನಿಲ್ದಾಣದಲ್ಲಿ ಅಕ್ಕಪಕ್ಕದಲ್ಲೇ ಇದ್ದ ಆರನೇ ಮತ್ತು ಏಳನೆ ಪ್ಲಾಟ್ ಫಾರಮ್ಮುಗಳಲ್ಲಿ ವಿಪರೀತ ಜನ ಸಂದಣಿ. ಆರನೇ ಪ್ಲಾಟ್ ಫಾರಮ್ಮಿನ ಗಾಡಿ ಮೈಸೂರಿನ ಕಡೆ ಹೊರಟಿತ್ತು .ಏಳನೇ ಪ್ಲಾಟ್ ಫಾರಮ್ಮಿನ ಗಾಡಿ ಅರಸೀಕೆರೆ ಕಡೆ ಕಡೆ ಹೊರಟಿತ್ತು.ಆ ಗಡಿಬಿಡಿಯಲ್ಲಿ ಹಾಸಿಗೆ ,ಟ್ರಂಕು ,ಕೈಚೀಲ ಹಿಡಿದಿದ್ದ ಮಧ್ಯ ವಯಸ್ಕನೊಬ್ಬ ಆತುರಾತುರವಾಗಿ ಮೈಸೂರಿನ ಕಡೆ ಹೊರಟಿದ್ದ ಗಾಡಿ ಹತ್ತಿ ಧಾರಾಕಾರವಾಗಿ ಸುರಿಯುತ್ತಿದ್ದ ಬೆವರನ್ನು ಒರೆಸಿಕೊಂಡು, ಜನಗಳ ಮಧ್ಯೆ ಜಾಗ ಮಾಡಿಕೊಂಡು ಕುಳಿತ.ಅವನ ತಲೆಯಲ್ಲಿ ಚಿಂತೆಗಳ ಸಂತೆ ನೆರದಿತ್ತು.ಮಗಳ ಮದುವೆ ತಪ್ಪಿಹೊಗುವುದರಲ್ಲಿತ್ತು.ತೀವ್ರವಾದ ಆತಂಕದಿಂದ ತಲೆಗೆ ಮಂಕು ಬಡಿದಂತಾಗಿತ್ತು.ರೈಲು ಹೊರಟಿತು .ಪ್ಲಾಟ್ ಫಾರಂ ಬಿಟ್ಟು ಊರಾಚೆ ಓಡುತ್ತಿತ್ತು.ಅವನ ಎದುರಿಗೆ ಹೊಸದಾಗಿ ಮದುವೆಯಾದ ಜೋಡಿಯೊಂದು ಕುಳಿತಿತ್ತು.ಗಂಡು ತುಂಬಾ ಸಂತೋಷದಲ್ಲಿದ್ದ.ಸ್ನೇಹಿತರೊಡನೆ ಮಾತನಾಡುತ್ತಾ ಜೋರಾಗಿ ನಗುತ್ತಿದ್ದ..ಆದರೆ ಹೆಣ್ಣಿನ ಮುಖದಲ್ಲಿ ಸಂತೋಷವಿರಲಿಲ್ಲ.ಮ್ಲಾನ ವದನಳಾಗಿ ಮುಖ ತಗ್ಗಿಸಿ ಕುಳಿ ತಿದ್ದಳು .ಮಧ್ಯವಸ್ಕನ ಪಕ್ಕದಲ್ಲಿ ಆ ಮದುವೆ ಗಂಡಿನ ತಂದೆ ,ತಾಯಿಗಳೂ ,ಕೆಲ ಬಂಧುಗಳೂ ಕುಳಿತಿದ್ದರು.ಒಂದು ಮೂಲೆಯಲ್ಲಿ ಸುಂದರ ಯುವಕನೊಬ್ಬ ಟ್ರೈನಿನಿಂದ ಮುಖ ಹೊರಹಾಕಿ ಆ ಕತ್ತಲಿನ ಶೂನ್ಯದಲ್ಲಿ ದೃಷ್ಟಿ ನೆಟ್ಟಿದ್ದ.'ಈ ಟ್ರೈನು ಅರಸೀಕರೆಗೆ ಎಷ್ಟು ಹೊತ್ತಿಗೆ ತಲುಪುತ್ತೆ ಸ್ವಾಮಿ ? 'ಎಂದು ಮಧ್ಯ ವಯಸ್ಕ ಎದುರಿಗೆ ಕುಳಿತಿದ್ದ ಮದುವೆ ಗಂಡನ್ನು ಕೇಳಿದ.ಆ ಮಾತಿಗೆ ಅಲ್ಲಿದ್ದವರೆಲ್ಲಾ ಜೋರಾಗಿ ನಗತೊಡಗಿದರು.'ರೀ ಸ್ವಾಮಿ, ಇದು ಮೈಸೂರಿಗೆ ಹೋಗುವ ಟ್ರೈನು.ಅರಸೀಕೆರೆಗೆ ಹೋಗುವ ರೈಲು ಪಕ್ಕದ ಪ್ಲಾಟ್ ಫಾರಮ್ಮಿನಲ್ಲಿ ನಿಂತಿತ್ತು.ಸರಿಯಾಗಿ ಕೇಳಿ ಕೊಂಡು ಹತ್ತೋದು ಬ್ಯಾಡ್ವಾ?'ಎಂದ ಮದುವೆ ಗಂಡು .ಇಷ್ಟು ಹೊತ್ತು ಮೂಲೆಯಲ್ಲಿ ಮೌನವಾಗಿ ಕುಳಿತು ಕಿಟಕಿಯಾಚೆ ನೋಡುತ್ತಿದ್ದ ಸುಂದರ ಯುವಕನ ಮುಖದಲ್ಲಿ ಮಿಂಚು ಹೊಳೆದಂತಾಯಿತು.
ಅವನು ಮದುವೆ ಗಂಡನ್ನು ಉದ್ದೇಶಿಸಿ 'ಯಾರ್ರೀ ಹೇಳಿದ್ದು ಇದು ಮೈಸೂರಿಗೆ ಹೋಗುತ್ತೆ ಅಂತ ?ಇದು ಅರಸೀಕೆರೆಗೇ ಹೋಗೋದು.ನಾನೂ ಅಲ್ಲಿಗೇ ಹೋಗ ಬೇಕು'ಎಂದ.ಇಬ್ಬರಲ್ಲೂ ಮಾತಿಗೆ ಮಾತು ಬೆಳೆಯಿತು.ಮದುವೆ ಗಂಡಿಗೆ ಸಿಟ್ಟು ಜಾಸ್ತಿ.ಹೊಸ ಹೆಂಡತಿಯ ಮುಂದೆ ತನ್ನ ಪ್ರತಾಪ ತೋರಿಸ ಬೇಕಿತ್ತು.'ರೀ ಸ್ವಾಮಿ .....ಮುಂದೆ ಬರುವ ಸ್ಟೇಶನ್ ಯಶವಂತ ಪುರವಾಗಿದ್ದರೆ,ಇದು ಅರಸೀಕೆರೆ ರೈಲು ಅಂತ.ಹಾಗೇನಾದರೂ ಆದರೆ ನನ್ನ ಕತ್ತಿನಲ್ಲಿರುವ ಮೂರು ತೊಲ ಬಂಗಾರದ ಚೈನು ನಿಮಗೆ ಕೊಡುತ್ತೇನೆ ,ಆದರೆ ಮುಂದಿನ ಸ್ಟೇಶನ್ ಕೆಂಗೇರಿ ಬಂದರೆ ನೀವೇನು ಕೊಡುತ್ತೀರಿ ?'ಎಂದು ಸವಾಲು ಹಾಕಿದ.ಆ ಸುಂದರ ಯುವಕ ತನ್ನ ಜೇಬಿನಲ್ಲಿದ್ದ ಮೂರು ತೊಲ ಹೊಸ ಬಂಗಾರದ ಸರವನ್ನು ಕೊಡುವುದಾಗಿ ಒಪ್ಪಿಕೊಂಡ .ಅಲ್ಲಿದ್ದವರೆಲ್ಲಾ ಮಾತು ಹೊರಡದೆ ಅವಾಕ್ಕಾಗಿ ,ಈ ಹೊಸ ನಾಟಕದ ಬೆಳವಣಿಗೆ ಏನಾಗುತ್ತೋ ಎಂದು ಕುತೂಹಲದಿಂದ ನೋಡುತ್ತಾ ಕುಳಿತಿದ್ದರು. ಮುಂದೆ ,ಕೆಂಗೇರಿ ಸ್ಟೇಶನ್ ಬಂತು .ಆ ಸುಂದರ ಯುವಕ ಮರು ಮಾತನಾಡದೆ ತನ್ನಲ್ಲಿದ್ದ ಮೂರು ತೊಲ ಹೊಸದಾಗಿ ಮಾಡಿಸಿದ್ದ ಬಂಗಾರದ ಚೈನನ್ನು ಆ ಮದುವೆ ಗಂಡಿಗೆ ಕೊಟ್ಟು , ರೈಲಿನಿಂದ ಇಳಿದ.ಇಳಿಯುವಾಗ ಒಮ್ಮೆ ಮದುವೆ ಗಂಡಿನ ಕಡೆ ತಿರುಗಿ ನೋಡಿದ.ಮದುವೆ ಗಂಡು ಆ ಚಿನ್ನದ ಸರವನ್ನು ತನ್ನ ಹೊಸ ಹೆಂಡತಿಗೆ ಉಡುಗೊರೆಯಾಗಿ ಕೊಟ್ಟ.ಅದನ್ನವಳು ನಡುಗುವ ಕೈಗಳಿಂದ ತೆಗೆದುಕೊಂಡಳು.ಯುವಕನ ಮುಖದಲ್ಲಿ ಕಂಡೂ ಕಾಣದಂತೆ ವಿಷಾದದ ನಗೆಯೊಂದು ಮಿಂಚಿ ಮಾಯವಾಯಿತು!ಅರಸೀಕೆರೆಗೆ ಹೋಗಬೇಕಾಗಿದ್ದ ಮಧ್ಯವಯಸ್ಕನೂ ವಿಧಿ ಇಲ್ಲದೆ ತನ್ನ ಲಗೇಜಿನೊಂದಿಗೆ ಯುವಕನ ಜೊತೆ ಕೆಂಗೇರಿಯಲ್ಲಿ ಇಳಿದ.ಟ್ರೈನು ಮುಂದೆ ಹೋಯಿತು.ಟ್ರೈನಿನ ಕಿಟಕಿಯಲ್ಲಿ ಮುಖವಿಟ್ಟು,ಕತ್ತಲಲ್ಲಿ ಏನನ್ನೋ ಹುಡುಕುತ್ತಾ ಮದುವೆ ಹೆಣ್ಣು ಕಿಟಕಿಯಿಂದ ಕೈ ಬೀಸಿದಳು.ಕೆಂಗೇರಿಯಲ್ಲಿ ಇಳಿದ ಯುವಕ ಬಿಕ್ಕಿ,ಬಿಕ್ಕಿ, ಅಳುತ್ತಿದ್ದ. ಮಧ್ಯವಸ್ಕನಿಗೆ ಏನೋ ಅನುಮಾನ ಬಂತು.'ಇದು ಮೈಸೂರಿಗೆ ಹೋಗುವ ಗಾಡಿ ಎಂದು ನಿನಗೆ ಮೊದಲೇ ಗೊತ್ತಿತ್ತಾ?'ಎಂದ.ಯುವಕ ಅಳುತ್ತಲೇ ಹೌದೆಂದು ಒಪ್ಪಿಕೊಂಡ.'.ಮತ್ತೆ ಯಾಕೆ ಬೆಟ್ ಕಟ್ಟಿ ಬಂಗಾರದ ಚೈನು ಕಳೆದುಕೊಂಡಿರಿ?' ಎಂದ.'ಸರ್ ಅದೊಂದು ದೊಡ್ಡ ಕಥೆ.ಆ ಹುಡುಗಿಯನ್ನು ನಾನು ತುಂಬಾ ಪ್ರೀತಿಸಿದ್ದೆ .ಅವಳೂ ನನ್ನನ್ನು ಅಷ್ಟೇ ಪ್ರೀತಿಸುತ್ತಿದ್ದಳು.ನಮ್ಮ ಮದುವೆಗೆ ಜಾತಿ ಅಡ್ಡಿ ಬಂತು.ನಾನು ಕೊಟ್ಟ ಚಿನ್ನದ ಸರ ಅವಳಿಗಾಗಿ ಮಾಡಿಸಿದ್ದು .ಅದನ್ನು ಅವಳಿಗೆ ಹೇಗೆ ತಲುಪಿಸಬೇಕೋ ತಿಳಿದಿರಲಿಲ್ಲ.ಏನಾದರೂ ಉಪಾಯ ಹೊಳೆಯಬಹುದೆಂದು ಅವಳ ಬೋಗಿಯಲ್ಲಿ ಬಂದು ಕುಳಿತೆ.ನಿಮ್ಮಿಂದ ಅದು ಸಾಧ್ಯವಾಯಿತು.ತುಂಬಾ ಧನ್ಯವಾದಗಳು ಸರ್.ನಿಮಗೆ ದಾರಿ ತಪ್ಪಿಸಿದ್ದಕ್ಕೆ ಕ್ಷಮೆ ಇರಲಿ'ಎಂದು ಕಣ್ಣೀರು ಒರೆಸಿ ಕೊಳ್ಳುತ್ತಾ, ಕತ್ತಲಲ್ಲಿ ಮರೆಯಾದ.ಮಧವಯಸ್ಕ 'ತಾನು ಎಂತಹ ನಾಟಕ ಒಂದಕ್ಕೆ ಸೂತ್ರಧಾರಿ ಯಾದೆನಲ್ಲಾ !'ಎಂದುಕೊಳ್ಳುತ್ತಾ, ಬೆಂಗಳೂರಿನ ಕಡೆ ಹೋಗುವ ಮುಂದಿನ ರೈಲಿಗಾಗಿ ಕಾಯ ತೊಡಗಿದ.
(ಇದು ಗೊರೂರು ರಾಮಸ್ವಾಮಿ ಅಯ್ಯಂಗಾರ್ ರವರ 'ತಪ್ಪು ರೈಲಿನಲ್ಲಿ' ಕಥೆ.1970 ರಲ್ಲಿ ಪಿ.ಯು.ಸಿ.ಯಲ್ಲಿ ನಾನ್ ಡೀಟೈಲ್ ಪುಸ್ತಕದಲ್ಲಿ ಇದ್ದ ಕಥೆ.ಇನ್ನೂ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ.ನಿಮಗೆಲ್ಲಾ ಈ ಕಥೆ ಇಷ್ಟವಾಯಿತೆ.ತಿಳಿಸಿ.ನಮಸ್ಕಾರ.)

Thursday, March 22, 2012

"ಹಾಸನದಲ್ಲಿ ...ಮಳೆ !!!"

ಮೊನ್ನೆ ಓ.ಪಿ.ಡಿ.ಗೆ ರೋಗಿಯೊಬ್ಬ ಬಂದ.ಸ್ಟೂಲ್ ತೋರಿಸಿ ಕೂತ್ಕೊಳಪ್ಪಾ ಎಂದೆ.'ಪರವಾಗಿಲ್ಲಾ ಬುಡಿ ಸಾ'ಎಂದ.ಎಷ್ಟು ಬಲವಂತ ಮಾಡಿದರೂ ಕುಳಿತುಕೊಳ್ಳಲಿಲ್ಲ.ಕಾರಣ ಕೇಳಿದರೆ "ಹಾಸನದಲ್ಲಿ ಮಳೆ ಆಗೈತೆ ಸಾ....! "ಎಂದ.ನಾನು "ಅರೆ.....!!ಹಾಸನದಲ್ಲಿ ಮಳೆ ಆದರೆ ನೀನು ಇಲ್ಲಿ ಕುಳಿತು ಕೊಳ್ಳೋಕೆ ಏನು ತೊಂದರೆಯಪ್ಪಾ"ಎಂದೆ.ಅದಕ್ಕವನು "ಅಯ್ಯೋ......ನಿಮಗೆ ಎಂಗೆ ಎಳಾದು ಸಾ .....! ಪೈಲ್ಸ್ ...ಆಗೈತೆ "ಎಂದ."ಆಸನದಲ್ಲಿ ಮೊಳೆ "ಅನ್ನೋದು ಅವನ ಬಾಯಲ್ಲಿ "ಹಾಸನದಲ್ಲಿ ಮಳೆ"ಆಗಿತ್ತು!!

Wednesday, March 7, 2012

"ಹೆಂಗಸರು ಔರೆ ಊವಿದ್ದಂಗೆ"

ನಾಳೆ 'ವಿಶ್ವ ಮಹಿಳಾ ದಿನಾಚರಣೆ '.ವಿಶ್ವದ ಎಲ್ಲಾ ಮಹಿಳೆಯರಿಗೂ ನನ್ನ ನಮನಗಳು ಹಾಗೂ ಶುಭಾಶಯಗಳು.ಈ ಸಂದರ್ಭದಲ್ಲಿ ಜಿ ಪಿ ರಾಜರತ್ನಂ ಅವರ ಹೆಂಗಸರು ಔರೆ ಹೂವಿದ್ದಂಗೆ ಅನ್ನುವ ಕವನವನ್ನು ಬ್ಲಾಗಿಸುತ್ತಿದ್ದೇನೆ;

"ಹೆಂಗಸರು ಔರೆ ಊವ್ ಇದ್ದಂಗೆ "



ಹೆಂಗಸರು ಔರೆ ಹೂವಿದ್ದಂಗೆ
ನಲುಗಿಸ ಬಾರದು ಅವರನ್ನ !
ಒಂದು ಚೋಟುದ್ದ ಊವು ಅಂತ ಅದ್ನ
ಒದ್ದೋನು ಇಂದ್ರ ಉದ್ದಾರ ಆದ್ನ
ಹೆಂಗಸರ ಔರೆ ಊವಿದ್ದಂಗೆ
ನಲುಗಿಸ ಬಾರದು ಅವರನ್ನ!

Saturday, February 18, 2012

"ನಿಮ್ಮ ಮನಸ್ಸು ಸುಂದರವಾಗಿದ್ದರೆ, ಈ ಜಗತ್ತೇ ಸುಂದರ!!!"

ನನ್ನ ಬ್ಲಾಗ್  ಸ್ನೇಹಿತ ಬಾಲೂ ಸರ್ ಅವರ ಬ್ಲಾಗ್ 'ನಿಮ್ಮೊಳಗೊಬ್ಬ ಬಾಲು'ಅವರ ಬ್ಲಾಗಿನ ಧ್ಯೇಯ ವಾಕ್ಯ 'ನಿಮ್ಮ ಮನಸ್ಸು ಸುಂದರವಾಗಿದ್ದರೆ ,ಜಗತ್ತೇ ಸುಂದರ!!'ಎನ್ನುವ ಮಾತುಗಳು ನನಗೆ ಸದಾ ನೆನಪಾಗುತ್ತಿರುತ್ತವೆ .ಆ ಮಾತುಗಳಲ್ಲಿ ಎಷ್ಟೊಂದು ಸತ್ಯ ಅಡಗಿದೆಯಲ್ಲವೇ!. The  world is neither good nor bad,our perception makes it so.'The mind in itself can create a hell or a heaven!'ನಾವು ಹೊರಗಿನ ಸಂದರ್ಭಗಳಿಂದ ,ಘಟನೆಗಳಿಂದ ನಮ್ಮ ಮನಸ್ಸಿನ ನೆಮ್ಮದಿ ಕೆಡುತ್ತದೆ ಎನ್ನುತ್ತೇವೆ.ಆದರೆ ಆ ಘಟನೆಗಳಿಗೆ ನಾವು ಪ್ರತಿಕ್ರಿಯಿಸುವ ರೀತಿಯಿಂದ ನಮ್ಮ ನೆಮ್ಮದಿ ಹಾಳಾಗುತ್ತದೆಯೇ ಹೊರತು ಆ ಘಟನೆಗಳಿಂದಲ್ಲ.ಸಾಧ್ಯವಿದ್ದಷ್ಟೂ ಯಾರ ಬಗ್ಗೆಯೂ ಕೆಟ್ಟದ್ದನ್ನು ಯೋಚಿಸಬೇಡಿ.ಯಾರ ಬಗ್ಗೆಯೂ ಕೆಟ್ಟ ಮಾತುಗಳನ್ನಾಡಬೇಡಿ.ಯಾವುದೇ NEGATIVE VIBRATION ಅದರ ಮೂಲವಾದ ನಮ್ಮ ಮನಸ್ಸನ್ನೇ ಹಾಳು ಮಾಡುತ್ತದೆ.ಸದಾ ಕಾಲ ಮನಸ್ಸು ಶಾಂತಿಯಿಂದ,ನೆಮ್ಮದಿಯಿಂದ  ,ಸಂತೋಷದಿಂದ ಇರುವಂತೆ ನೋಡಿಕೊಳ್ಳಿ.THIS SHOULD BE  A ONE POINT PROGRAMME OF YOUR LIFE TIME..ಈ ಒಂದು ವಿಷಯಕ್ಕೆ ಪ್ರಾಮುಖ್ಯತೆ ಕೊಡಿ.ಮತ್ತೆಲ್ಲಾ ವಿಷಯಗಳೂ ತಮ್ಮಷ್ಟಕ್ಕೆ ತಾವೇ ಬದಲಾಗುತ್ತವೆ.If you can make your mind beautiful,the world will definitely be beautiful.'ದೃಷ್ಟಿಯಂತೆ ಶೃಷ್ಟಿ'ಎನ್ನುವ ಮಾತು ನೂರಕ್ಕೆ ನೂರರಷ್ಟು ಸತ್ಯ.ಬಸವಣ್ಣನವರು ನೂರಾರು ವರುಷಗಳ ಹಿಂದೆಯೇ ಹೇಳಿದಂತೆ ಲೋಕದ ಡೊಂಕ ತಿದ್ದುವ ಮೊದಲು ನಮ್ಮ ಮನದ ಡೊಂಕುಗಳನ್ನು ತಿದ್ದಿಕೊಳ್ಳೋಣ.ನಮ್ಮ ನಮ್ಮ ಮನಗಳ ಸಂತೈಸಿಕೊಳ್ಳೋಣ.ನಮ್ಮ ಆಲೋಚನೆಗಳನ್ನು ಮೊದಲು ಸರಿಪಡಿಸಿಕೊಳ್ಳೋಣ.
'ಈ ಕ್ಷಣದಲ್ಲಿ ಇರುವುದನ್ನು 'ರೂಢಿಸಿ ಕೊಳ್ಳುವುದರಿಂದಲೂ, ಧ್ಯಾನದಿಂದಲೂ ,ಸದಾ ಧನಾತ್ಮಕ ಚಿಂತನೆಗಳಿಂದಲೂ (positive thinking), ನಮ್ಮ ಮನಸ್ಸನ್ನು ಸುಂದರವಾಗಿಸಿಕೊಂಡು ,ಈ ಜಗತ್ತನ್ನೂ ಸುಂದರಗೊಳಿಸೋಣ.

Saturday, February 11, 2012

"ಸಂತಸದ ಜೀವನಕ್ಕೆ ಸರಳ ಸೂತ್ರಗಳು"

೧) ಕೀಳರಿಮೆ ಬಿಡಿ. ಡಿ.ವಿ.ಜಿ.ಯವರು ಕಗ್ಗದಲ್ಲಿ ಹೇಳಿದಂತೆ "ತರಚುಗಾಯವ ಕೆರೆದು ಹುಣ್ಣನಾಗಿಪ ಕಪಿಯಂತೆ,ಕೊರತೆಯೊಂದನ್ನು ನೆನೆನೆದು ಕೊರಗಿ,ಮನದಲ್ಲಿ ನರಕ"ಸೃಷ್ಟಿಸಿಕೊಳ್ಳದಿರಿ.ನಮ್ಮ ವ್ಯಕ್ತಿತ್ವದಲ್ಲಿ ಸಕಾರಾತ್ಮ ಗುಣಗಳು ಇದ್ದೇ ಇರುತ್ತವೆ.ಅವನ್ನು ಮೊದಲು ನಾವು ಗುರುತಿಸಿಕೊಳ್ಳಬೇಕಷ್ಟೇ !
೨)ನಿಮ್ಮ ಮನಸ್ಸಿನಿಂದ ನಿಮ್ಮ ಹಳೆಯ ತಪ್ಪುಗಳು,ಸೋಲುಗಳು,ಬೇಸರಗಳು,ಪರರ ನಿಂದನೆಗಳು,ಹೀಗಳಿಕೆಗಳು ಮತ್ತು ಅವಮಾನಗಳನ್ನು ಎತ್ತಿ ಆಚೆಗೆ ಬಿಸಾಡಿ.ಅವನ್ನೆಲ್ಲಾ ಮೊದಲು ಬಿಟ್ಟುಹಾಕಿ.ನೀವು ಯಾರಿಗೂ,ಯಾವುದರಲ್ಲೂ ಕಮ್ಮಿ ಇಲ್ಲಾ ಎನ್ನುವ ಆತ್ಮ ವಿಶ್ವಾಸವನ್ನು ಹುಟ್ಟು ಹಾಕಿ.
೩)ನಿಮ್ಮ ಬಗ್ಗೆ ನೀವೇ ಮರುಕ ಪಡುವುದನ್ನು (self pity) ಮೊದಲು ನಿಲ್ಲಿಸಿ.ನಿಮ್ಮಲ್ಲಿ ಏನಿಲ್ಲ ಎನ್ನುವುದಕ್ಕಿಂತ ಏನೆಲ್ಲಾ ಇದೆ ಎನ್ನುವುದನ್ನು ಮೊದಲು ಗಮನಕ್ಕೆ ತಂದು ಕೊಳ್ಳಿ.ನೀವು ಏನು ಮಾಡಲಾರಿರಿ ಎನ್ನುವುದಕ್ಕಿಂತ ಏನನ್ನು ಮಾಡಬಲ್ಲಿರಿ ಎನ್ನುವುದರ ಕಡೆ ಗಮನಕೊಡಿ.
೪)ಸದಾ ಕಾಲ ನಿಮ್ಮ ಬಗ್ಗೆಯೇ ಚಿಂತಿಸುವುದನ್ನು ನಿಲ್ಲಿಸಿ.ನಿಮ್ಮ ರೋಗಗಳ ಬಗ್ಗೆ ಮತ್ತು ನಿಮ್ಮ ಸಮಸ್ಯೆಗಳ ಬಗ್ಗೆಯೇ ಚಿಂತಿಸುತ್ತಿದ್ದರೆ ಅವು ಭೂತಾಕಾರವಾಗಿ ಬೆಳೆಯುತ್ತವೆ.ನಿಮ್ಮಿಂದ ಯಾರಿಗಾದರೂ ಸಣ್ಣದೊಂದು ಸಹಾಯವಾಗಬಹುದೇ ನೋಡಿ.ಅವರಿಂದ ಏನನ್ನೂ ಬಯಸದೆ ಸಹಾಯ ಮಾಡುವುದು ಉತ್ತಮ.
೫)ಶಾಂತಿ,ಸಮಾಧಾನ,ಮತ್ತು ಆನಂದದ ಬಗ್ಗೆ ಸದಾ ಯೋಚಿಸುವುದನ್ನು ರೂಢಿಸಿಕೊಳ್ಳಿ.ಈ ಉತ್ತಮ ಗುಣಗಳು ನಿಮ್ಮ ಅಭ್ಯಾಸವಾಗಲಿ.
೬)ನಾವು ಅಂದು ಕೊಂಡಿದ್ದಕ್ಕಿಂತ ಹೆಚ್ಚು ದೈವಿಕತೆ ನಮ್ಮೊಳಗಿದೆ.ನಮ್ಮ ಅಹಂಕಾರ ಮಾಯವಾದಾಗ  ನಾವು ದೈವಿಕವಾಗಿರುತ್ತೇವೆ.ನಾವು ದೈವಿಕವಾಗಿದ್ದಾಗ ಪರಿಶುದ್ಧರಾಗಿರುತ್ತೇವೆ.ಆರೋಗ್ಯದಿಂದಿರುತ್ತೇವೆ.ನಾವು ಧ್ಯಾನದಲ್ಲಿ ಮುಳುಗಿದಾಗ ನಮ್ಮ ಅಹಂಕಾರ ಮಾಯವಾಗಿ ನಾವು ದೈವಿಕ ಸಂಪರ್ಕದಲ್ಲಿರುತ್ತೇವೆ.ನಾವು ನಿದ್ದೆ ಹೋದಾಗ ನಮ್ಮ ಅಹಂಕಾರವೂ ನಿದ್ರಿಸಿರುತ್ತದೆ.ನಮ್ಮ ಹುದ್ದೆ ,ಸಂಪತ್ತು,ಸ್ಥಾನ ಮಾನ,ಕಾಡುವುದಿಲ್ಲ.ನಾವು ದೈವಿಕತೆಯೊಂದಿಗೆ ಒಂದಾಗಿರುತ್ತೇವೆ.ನಾವು ಮತ್ತೊಬ್ಬರ ಆರೈಕೆಯನ್ನು ಮನಸ್ಸಿಟ್ಟು ಮಾಡಿದಾಗ ದೈವಿಕತೆಯಲ್ಲಿ ಮುಳುಗಿರುತ್ತೇವೆ.ನಾವು ಎಲ್ಲರನ್ನೂ ಅವರಂತೆಯೇ ಸ್ವೀಕರಿಸಿದಾಗ ದೈವಿಕತೆ ಮೂಡುತ್ತದೆ.ನಮ್ಮ ದೇಹದ ಪ್ರತಿಯೊಂದು ಜೀವ ಕೋಶದಲ್ಲೂ ಪ್ರೀತಿ ತುಂಬಿ ಹರಿಯುತ್ತದೆ.ನಾವು ಈಗಿನ ಕ್ಷಣವನ್ನು ಸಂಪೂರ್ಣವಾಗಿ ಸ್ವೀಕರಿಸಿದಾಗ ಆ ಶ್ರೇಷ್ಠ ಶಕ್ತಿಯೊಂದಿಗೆ ಒಂದಾಗಿರುತ್ತೇವೆ.
೭)ನಾನು ಸಂತಸದಿಂದ ಇದ್ದೇನೆ,ಸಂತೃಪ್ತಿಯಿಂದ ಇದ್ದೇನೆ,ಆ ದೇವರ ಆಶೀರ್ವಾದದಿಂದ ನನಗೆ ಯಾವ ಕೊರತೆಯೂ ಇಲ್ಲ ಎಂದುಕೊಂಡು ಧ್ಯಾನ ಮಾಡಿ.ಎಲ್ಲದರಿಂದ ಮುಕ್ತವಾದ ಶಾಂತಿಯ ನದಿ ನಿಮ್ಮಲ್ಲಿ ಹರಿಯುತ್ತದೆ.ಅದುವೆ ದೈವಿಕತೆ!

(ಸಾಧಾರಿತ.ಭಾಗ(೬)ಮತ್ತು (೭)ಇಂದಿನ ಪ್ರಜಾವಾಣಿಯಲ್ಲಿ ಭರತ್ ಮತ್ತು ಶಾಲನ್ ಸವೂರ್ ಬರೆದ 'ಸ್ವಸ್ಥ ಬದುಕು' ಎಂಬ ಬರಹದಿಂದ ಆಯ್ದುಕೊಂಡಿದ್ದು.)

Thursday, February 9, 2012

"ನನ್ನ ಬ್ಲಾಗಿಗೆ ಎರಡು ವರ್ಷದ ಹರ್ಷ!!"

ಮೊನ್ನೆ ಮೊನ್ನೆ ಬ್ಲಾಗ್ ಶುರು ಮಾಡಿದ ಹಾಗಿದೆ.ಮೊನ್ನೆಗೆ ನನ್ನ ಬ್ಲಾಗಿಗೆ ಎರಡು ವರ್ಷ ತುಂಬಿದೆ.ಸುಮಾರು 184 ಬರಹಗಳು ಪ್ರಕಟವಾಗಿವೆ.ಸುಮಾರು 176 ಜನ  followers ಆಗಿದ್ದಾರೆ.ಬ್ಲಾಗ್ ಎನ್ನುವುದು ಏನು ಎಂದೇ ತಿಳಿಯದವನು ಅವರಿವರ ಸಹಾಯದಿಂದ ಕಷ್ಟ ಪಟ್ಟು ಶುರು ಮಾಡಿದೆ.ಈಗ ಹಿಂದಿರುಗಿ ನೋಡಿದರೆ ಇಷ್ಟೆಲ್ಲಾ ಬರಹಗಳನ್ನು ಹೇಗೆ ಬರೆದೆ ಎನ್ನುವುದು ತಿಳಿಯುತ್ತಿಲ್ಲ.ಇದಕ್ಕೆ ನಿಮ್ಮೆಲ್ಲರ ನಿರಂತರ ಪ್ರತಿಕ್ರಿಯೆ,ಪ್ರೋತ್ಸಾಹಗಳೇ ಮುಖ್ಯ ಕಾರಣ ಎನ್ನುವುದರಲ್ಲಿ ಅನುಮಾನವಿಲ್ಲ.ಎಲ್ಲಾ ಬ್ಲಾಗಿಗರದೂ ಉದಾರ ಮನಸ್ಸು.ಬ್ಲಾಗಿನ ಬಾಂಧವ್ಯ ನನಗೆ ಉತ್ತಮ ಸ್ನೇಹಿತರನ್ನು ಕೊಟ್ಟಿದೆ.ನಿಮ್ಮೆಲ್ಲರ ಪ್ರೀತಿ ,ಸ್ನೇಹಕ್ಕೆ ನಾನು ಚಿರಋಣಿ.ಮುಂದೆಯೂ ನಿಮ್ಮೆಲ್ಲರ ಪ್ರೀತಿ ವಿಶ್ವಾಸಗಳು ನನಗೆ ನಿರಂತರವಾಗಿ ಸಿಗಲಿ ಎಂದು  ಆ ದೇವರಲ್ಲಿ ನನ್ನ ಪ್ರಾರ್ಥನೆ. ತಿಳಿಯದೆ ನನ್ನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಇರಲಿ.ಬ್ಲಾಗಿಗೆ ಬರುವುದನ್ನು ನಿಲ್ಲಿಸಿರುವ ಎಲ್ಲಾ ಬಂಧುಗಳಿಗೂ ನನ್ನ ಬ್ಲಾಗಿಗೆ  ಬರುವಂತೆ ವಿನಂತಿ.ಇಂತಿ ನಮನಗಳು.

Sunday, February 5, 2012

"ಕೊಳಲಿನ ....ಅಳಲು!"

ಕೊಳಲಿನಲಿ ಉಸಿರಿಲ್ಲ!
ಉಸಿರಿಲ್ಲದೆ ಬೇಸರದಿಂದ 
ನಿಡುಸುಯ್ಯಲೂ.....ಉಸಿರಿಲ್ಲ!
ಉಸಿರಿಲ್ಲದ ಬದುಕಿದು
ಎಂಥಾ ......ಬದುಕು?
ಖಾಲಿ ಬಿದಿರಿನ ಬದುಕು!
ಸಾಕಾಗಿದೆ 'ಶ-ಬರಿ'ತನ!
ರಾಗ ಹಾಕಿದೆ ಗಸ್ತು!
ಕೆಲಸವಿಲ್ಲದೇ ......ಸುಸ್ತು!
'ಗೋವುಗಳ'ಕಿವಿಗಳು
ಇಂಪಿಗಾಗಿ ಕಾದು ಸೋತಿವೆ!
ಎಲ್ಲಿ ಹೋದ ಕೃಷ್ಣ?
'ಗೋಪಿಯರ' ಚಿಂತೆಯಲಿ
ಮರೆತನೇ.....ಕೊಳಲ?
ಕೇಳುವನೆ ತನ್ನ ಅಳಲ...?
ಎಲ್ಲಿ ಹೋದ...... ಕೃಷ್ಣ?
ಎಲ್ಲಿ ಹೋದ..... ಕೃಷ್ಣ ?
ಬರೀ ಮೂರ್ತಿಯನೆ ಬಿಟ್ಟು!!
(ಕವಿತೆಯನ್ನು ಬರೆಯಲು ಪ್ರೇರಣೆ ನೀಡಿದ ಮಿತ್ರ ,ಕವಿ ,ಬದರಿನಾಥ್ ಪಲವಳ್ಳಿ ಯವರಿಗೆ ನಮನಗಳು.'ಶಬರಿ'ತನ ಅವರು ಬಳಸುವ ಪದ.ಅವರ ಅನುಮತಿ ಪಡೆಯದೇ ನಾನೂ ಬಳಸಿಕೊಂಡಿದ್ದೇನೆ.ಬದರಿ ಸರ್ ಕ್ಷಮೆ ಇರಲಿ .)

Sunday, January 22, 2012

"ಮುಲ್ಲಾ ನಾಸಿರುದ್ದೀನನ ಚತುರತೆ!"

ಮುಲ್ಲಾ ನಾಸಿರುದ್ದೀನನ ಬುದ್ಧಿವಂತಿಕೆ ಮತ್ತು ಅವನ ಕೀರ್ತಿಯನ್ನು ಕಂಡು ಅವನ ಊರಿನ ಕೆಲವರು ಹೊಟ್ಟೆ ಉರಿದುಕೊಳ್ಳುತ್ತಿದ್ದರು.ಹೇಗಾದರೂ ಮಾಡಿ ಅವನನ್ನು ಅವಮಾನಿಸಬೇಕೆಂದು ಹೊಂಚು ಹಾಕುತ್ತಿದ್ದರು.ಇದು ಮುಲ್ಲಾನಿಗೂ ತಿಳಿದಿತ್ತು.ಅವನೂ ತಕ್ಕ ಪಾಠ ಕಲಿಸಲು ಸಮಯ ಕಾಯುತ್ತಿದ್ದ.ಎಲ್ಲರೂ ಸೇರಿ ಮುಲ್ಲಾನನ್ನು ಒಂದು  ಪ್ರವಚನ ಕೊಡುವಂತೆ ಕೇಳಿಕೊಂಡರು.ಮುಲ್ಲಾ ಒಪ್ಪಿಕೊಂಡು ,ಹೇಳಿದ ಸಮಯಕ್ಕೆ ಹಾಜರಾಗಿ 'ನಾನು ಕೊಡುತ್ತಿರುವ ಪ್ರವಚನದ ವಿಷಯದ ಬಗ್ಗೆ ತಮಗೇನಾದರೂ ಗೊತ್ತಿದೆಯೇ?'ಎಂದು ಸಭೆಯಲ್ಲಿ ನೆರೆದ ಜನರನ್ನು ಕೇಳಿದ.ಸಭೆಯಲ್ಲಿದ್ದವರು ತಮಗೇನೂ ತಿಳಿಯದೆಂದರು.
'ಏನೂ ತಿಳಿಯದವರಿಗೆ ತಾನು ಹೇಳುವುದರಿಂದ ಏನೂ ಪ್ರಯೋಜನವಿಲ್ಲ'ಎಂದು ಮುಲ್ಲಾ ಮನೆಗೆ  ಹೋಗಿಬಿಟ್ಟ. ಅವರೆಲ್ಲಾ ಮತ್ತೆ ಹೋಗಿ ಅವನನ್ನು ಮತ್ತೆ ಪ್ರವಚನ ಕೊಡುವಂತೆ ಒತ್ತಾಯಿಸಿದರು.ಸಭೆಯಲ್ಲಿ ಈ ಬಾರಿ ಮುಲ್ಲಾ ಮತ್ತದೇ ಪ್ರಶ್ನೆ ಕೇಳಿದ,'ನಾನು ಹೇಳುತ್ತಿರುವ ವಿಷಯದ ಬಗ್ಗೆ ನಿಮಗೇನಾದರೂ ತಿಳಿದಿದೆಯೇ ?'ಸಭೆಯಲ್ಲಿದ್ದ ಅರ್ಧ ಜನ ತಿಳಿದಿದೆ ಎಂದರೆ ,ಇನ್ನರ್ಧ ಜನ ತಿಳಿದಿಲ್ಲ'ವೆಂದರು.ಮುಲ್ಲಾ 'ಹಾಗಾದರೆ ತಿಳಿದವರು ತಿಳಿಯದೆ ಇದ್ದವರಿಗೆ ಹೇಳಿ,ನನಗೆ ಬೇರೆ ಕೆಲಸವಿದೆ'ಎಂದು ಹೊರ ನಡೆದ.ಅಂದಿನಿದ ಹೊಟ್ಟೆ ಉರಿ ಪಡುತ್ತಿದ್ದವರು ಅವನ ಸಹವಾಸವೇ ಬೇಡವೆಂದು ದೂರ ಸರಿದರು.
( ಆಧಾರ:ಸೂಫಿ ಕಥಾಲೋಕ -ಪ್ರೊ.ಬಿ.ಗಂಗಾಧರ ಮೂರ್ತಿ)

Saturday, January 14, 2012

"ದೃಷ್ಟಿಯಂತೆ .........ಶೃಷ್ಟಿ!!"

ಇಂದಿನ ಪ್ರಜಾವಾಣಿಯ 'ಭೂಮಿಕಾ'ದಲ್ಲಿ ಭರತ್ ಮತ್ತು ಶಾಲನ್ ಸವೂರ್ ಬರೆದ 'ಸ್ವಸ್ಥ ಬದುಕು'ವಿನಲ್ಲಿ 'ಸುಂದರ ಯೋಚನೆಗಳಿರಲಿ' ಎಂಬ ಬರಹ ಗಮನ ಸೆಳೆಯಿತು.ನಿಮಗೆಲ್ಲಾ ಹಾರ್ದಿಕ ಸಂಕ್ರಮಣದ ಶುಭಾಶಯಗಳನ್ನು ಕೋರುತ್ತಾ ಈ ಸುಂದರ ಬರಹದ ಕೆಲ ಪ್ರಮುಖ ಅಂಶಗಳನ್ನು  ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

'ನಾವೆಲ್ಲಾ ನಮ್ಮ ಯೋಚನೆ,ಚಿಂತನೆಗಳ ಕನ್ನಡಕ ಧರಿಸಿ ಜಗತ್ತನ್ನು ನೋಡುತ್ತೇವೆ.ನಮಗೆ ಜಗತ್ತು ಕೆಟ್ಟದ್ದಾಗಿ ಮತ್ತು ಅಪಾಯಕಾರಿಯಾಗಿ ಕಾಣುತ್ತಿದ್ದರೆ,ಅದಕ್ಕೆ ನಮ್ಮ ಯೋಚನೆ ಕಾರಣ.ನಿಮ್ಮ ಆಲೋಚನೆಗಳನ್ನು ಬದಲಿಸಿಕೊಳ್ಳಿ,ಆಗ ಜಗತ್ತು ಹೇಗೆ ಬದಲಾಗುತ್ತದೆ ನೋಡಿ.ಜಗತ್ತು ಸುಂದರ ಮತ್ತು ಪ್ರೀತಿ ತುಂಬಿದೆ ಅಂದುಕೊಂಡರೆ ಅದನ್ನು ನಾವು ಸೌಂದರ್ಯ ಮತ್ತು ಪ್ರೀತಿ ತುಂಬಿದ ಕಣ್ಣುಗಳಿಂದ ನೋಡುತ್ತಿದ್ದೇವೆ ಎಂದು ಅರ್ಥ.ನಮ್ಮ ಸುತ್ತಲಿನ ಜಗತ್ತನ್ನು ಸುಂದರ ಗೊಳಿಸುವಲ್ಲಿ ನಮ್ಮ ಕೊಡುಗೆ ಕಿಂಚಿತ್ ಆದರೂ ಇರುತ್ತದೆ.ಆಲೋಚನೆಗಳನ್ನು ಬದಲಿಸಿ ಪ್ರೀತಿಯ ಕಂಪನಗಳನ್ನು ಹೆಚ್ಚಿಸಿಕೊಳ್ಳಿ'ಎನ್ನುತ್ತಾರೆ ಲೇಖಕರು.

ಇದಕ್ಕೆ 'ಕ್ವಾಂಟಮ್ ಫಿಸಿಕ್ಸ್' ನಲ್ಲಿ 'observer effect' ಎನ್ನುತ್ತಾರೆ.'If you change the way you look at things ,the things you look at change' ಎನ್ನುವ ಒಂದು ಪ್ರಸಿದ್ಧ ಹೇಳಿಕೆ ಇದೆ.ಆದರೆ'ವರ್ಷಾನುಗಟ್ಟಲೆಯ ಅಭ್ಯಾಸಬಲ ದಿಂದ  ಜಗತ್ತನ್ನು ಸಂಶಯದಿಂದ ,ಎಚ್ಚರಿಕೆಯಿಂದ  ನೋಡುವ ನಮ್ಮ  ದೃಷ್ಟಿಕೋನವನ್ನು  ಸುಲಭದಲ್ಲಿ ಬದಲಾಯಿಸಲು ಸಾಧ್ಯವೇ?'ಎನ್ನುವ ಪ್ರಶ್ನೆ ಸಹಜವಾಗಿ  ಮೂಡುತ್ತದೆ.ನಮಗೆ ಹಿಂದೆ ಮೋಸ ಹೋದ ಅನುಭವ ಯಾರನ್ನೂ ಸುಲಭವಾಗಿ ನಂಬದಂತೆ ಮಾಡುತ್ತದೆ.ದಿನ ನಿತ್ಯದ ಬದುಕಿನಲ್ಲಿ ಕಣ್ಣೆದುರಿಗೇ ಮೋಸ ,ವಂಚನೆ ,ಕ್ರೌರ್ಯ ಕಾಣುತ್ತಿರುವಾಗ ಜಗತ್ತು ಸುಂದರವಾಗಿದೆ ಎಂದುಕೊಳ್ಳುವುದು ಹೇಗೆ ಸಾಧ್ಯ?ಇದು ಸತ್ಯಕ್ಕೆ ದೂರವಲ್ಲವೇ?ಎನ್ನುವ ಪ್ರಶ್ನೆ ಕಾಡುತ್ತದೆ. 
'ಯದ್ಭಾವಂ ತದ್ಭವತಿ'.'ದೃಷ್ಟಿಯಂತೆ ಶೃಷ್ಟಿ' ಎನ್ನುವುದನ್ನು ನಾವು ಮೊದಲು  ನಂಬಬೇಕು.ನನಗೆ ಪರಿಚಯವಿರುವ ಇಬ್ಬರು ಮಹಿಳೆಯರ ಅನುಭವವೇ ಇದಕ್ಕೆ ಸಾಕ್ಷಿ.ಒಬ್ಬ ಮಹಿಳೆ 'ನೂರಕ್ಕೆ ತೊಂಬತ್ತರಷ್ಟು ಆಟೋದವರು ಒಳ್ಳೆಯವರು,ಸಾಮಾನ್ಯವಾಗಿ ಮೋಸ ಮಾಡುವುದಿಲ್ಲ 'ಎಂದು ಬಲವಾಗಿ ನಂಬಿರುವುದರಿಂದ ಅವರಿಗೆ ಎಂದೂ ತೊಂದರೆಯಾಗಿಲ್ಲ.ಒಳ್ಳೆಯ ಆಟೋದವರೇ ಸಿಗುತ್ತಾರೆ.ಆದರೆ ಅದೇ ಇನ್ನೊಬ್ಬರು ಬಹಳಷ್ಟು ಆಟೋದವರು ಮೋಸಮಾಡುತ್ತಾರೆ ಎಂದು ಬಲವಾಗಿ ನಂಬಿರುವುದರಿಂದ ಅವರಿಗೆ ಅದೇ ರೀತಿಯವರು ಸಿಗುತ್ತಾರೆ.ಇದು ಬರೀ ಕಾಕ ತಾಳೀಯವೆಂದು ಹಗುರವಾಗಿ ತಳ್ಳಿ ಹಾಕುವಂತಿಲ್ಲ.ಮೊದಲಿಗೆ ಕಷ್ಟ ಸಾಧ್ಯವೆನಿಸಿದರೂ ನಾವು ನೋಡುವ ದೃಷ್ಟಿಯನ್ನು ಕ್ರಮೇಣ, ಪ್ರಯತ್ನ ಪೂರಕವಾಗಿ,ಬದಲಾಯಿಸಿ ಕೊಳ್ಳೋಣ.ಜಗತ್ತನ್ನು ಸುಂದರವೆಂದು ಕಾಣುವ ದೃಷ್ಟಿಯೂ ನಮಗೆ ಅಭ್ಯಾಸವಾಗಲಿ.ಒಂದು ಸುಂದರ ಜಗತ್ತನ್ನು ಶೃಷ್ಟಿ ಸೋಣ.'ಸರ್ವೇ ಜನಾಹ ಸುಖಿನೋ ಭವಂತು'.ಎಲ್ಲೆಲ್ಲೂ ಸುಖ ಮತ್ತು ಸಂತೋಷದ ಸಾಮ್ರಾಜ್ಯವೇ ರಾರಾಜಿಸಲಿ ಎಂದು ಪ್ರಾರ್ಥಿಸುತ್ತಾ ನಿಮ್ಮೆಲ್ಲರಿಗೂ ಸಂಕ್ರಾಂತಿಯು ಶುಭದಾಯಕವಾಗಲಿ ಎಂದು ಮತ್ತೊಮ್ಮೆ ಹಾರೈಸುತ್ತೇನೆ. 

Thursday, January 5, 2012

"ಜಾಯೆತೋ.....ಜಾಯೇ..ಕಹಾಂ ? "

ಬ್ಲಾಗ್ ಲೋಕದಿಂದ ವಿಮುಖನಾಗುತ್ತಿದ್ದೇನೆಯೇ?ಗೊತ್ತಿಲ್ಲ.ದಿನಕ್ಕೊಂದು ಬರಹವನ್ನು ಶೃಷ್ಟಿ ಮಾಡುತ್ತಿದ್ದ ಮನಸ್ಸು ಏಕೋ ಮಂಕಾಗಿದೆ !ಬ್ಲಾಗಿನ ಬರಹ ಪೋಸ್ಟ್ ಮಾಡಿ ಮೂರು ವಾರವಾಯಿತು.ಅದಕ್ಕೂ ಹಿಂದಿನ ಎರಡು ಬರಹಗಳೂ ಹಳೆಯ ಸರಕೇ!
ಆಧ್ಯಾತ್ಮದಲ್ಲಿ ತೊಡಗಿಸಿಕೊಂಡು ಹೆಚ್ಚು ಹೆಚ್ಚು ನಿರಮ್ಮಳವಾಗಿ ಇರಬೇಕೆಂದುಕೊಂಡಷ್ಟೂ, ದಿನ ನಿತ್ಯದ ಜಂಜಾಟಗಳಿಂದ,ಸ್ವಾರ್ಥಿಗಳ ನಡವಳಿಕೆಯಿಂದ ಮನಸ್ಸು ಮುದುಡಿಹೋಗಿ,ಸೃಜನ ಶೀಲತೆ ಕಮ್ಮಿಯಾಗಿದೆ. 'ಜಾಯೆತೋ ಜಾಯೆ ಕಂಹಾ..... 'ಎನ್ನುವ ಹಳೆಯ ಹಿಂದಿ ಹಾಡೊಂದು ಪದೇ ಪದೇ ನೆನಪಾಗುತ್ತಿದೆ. ಒಂದು ರೀತಿಯ ಅತಂತ್ರ ಸ್ಥಿತಿ ! ಇದು ಪ್ರತಿ ಯೊಬ್ಬರ, ಪ್ರತಿನಿತ್ಯದ ಅನುಭವ!ಅಲ್ಲವೇ?ಈ ಚಕ್ರವ್ಯೂಹದಿಂದ ಹೊರ ಬರುವುದನ್ನು ನಾವೇ ಕಂಡು ಕೊಳ್ಳಬೇಕು.ನಿಮ್ಮೆಲ್ಲರ ಪ್ರೀತಿ ,ಆದರ,ಸ್ನೇಹ ಮತ್ತು ಶುಭ ಹಾರೈಕೆ ಮತ್ತೆ ನನ್ನ ಬರಹಕ್ಕೆ ಹೊಸ ಕಸುವನ್ನೂ,ಚೈತನ್ಯವನ್ನೂ ತುಂಬಲಿ.ನಿಮ್ಮೆಲ್ಲರ ಬ್ಲಾಗುಗಳಿಗೆ ಬರಲಾಗುತ್ತಿಲ್ಲ.ಕ್ಷಮೆ ಇರಲಿ.ನಮಸ್ಕಾರ.